Saturday, 26 January 2013

Arab bhuta

                                                            ಅರಬ್ಬಿ ಭೂತ 
ತುಳು ನಾಡಿನ ದೈವಗಳಲ್ಲಿ ಹೆಚ್ಚಿನ ದೈವಗಳು ಮನುಷ್ಯ ಮೂಲವನ್ನು ಹೊಂದಿವೆ .ತುಳು ನಾಡಿನಲ್ಲಿ ದೈವತ್ವ ಪಡೆದವರೆಲ್ಲ ತುಳುನಾಡಿನವರೆ ಆಗಬೇಕಿಲ್ಲ .ಹಿಂದೂಗಳು ಮಾತ್ರ ಭೂತತ್ವವನ್ನು ಪಡೆದದ್ದಲ್ಲ .ಅನೇಕ ಕನ್ನಡಿಗರು ದೈವತ್ವ ಪಡೆದು ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಿದ್ದಾರೆ .ಕನ್ನಡ ಭೂತ, ಕನ್ನಡ ಬೀರೆ, ಕಚ್ಹೆಭಟ್ಟ, ಪುರುಷ ಭೂತ ,ಬೈಸುನಾಯಕ, ಬಚ್ಚ ನಾಯಕ, ಕರಿಯಣ್ಣ ನಾಯಕ ಮೊದಲಾದ ದೈವಗಳು ಕನ್ನಡ ಮೂಲದ ದೈವಗಳಾಗಿವೆ .ಹಿಂದೂಗಳು ಮಾತ್ರ ದೈವಗಳಾ ಗಿ ಆರಾಧನೆ ಹೊಂದಿದ್ದಾರೆ ಎನ್ನುವಂತಿಲ್ಲ .ಅನೇಕ ಮುಸ್ಲಿಂ ಮೂಲದ ದೈವಗಳಿಗೆ ತುಳುನಾಡಿನಲ್ಲಿ ಆರಾಧನೆ ಇದೆ.ಬಬ್ಬರ್ಯ ,ಆಲಿ ಭೂತ, ಬ್ಯಾರಿ ಭೂತ ,.ಬ್ಯಾರ್ದಿ ಭೂತ ,ಮಾಪುಳೆ ಮಾಪುಳ್ತಿ ಭೂತಗಳು,ಮಾಪುಲ್ತಿಧೂಮಾವತಿ  ಮೊದಲಾದ ದೈವಗಳು ಮುಸ್ಲಿಂ ಮೂಲದ ದೈವಗಳಾಗಿವೆ ,ಕಿರಸ್ತಾನಿ ತೆಯ್ಯಂ ಕ್ರಿಶ್ಚಿಯನ್ ಮೂಲದ ದೈವವಾಗಿದೆ .ಇದೇ ರೀತಿ ಕೆಲವು ವಿದೇಶೀ ಮೂಲದ ದೈವಗಳಿಗೂ ತುಳುನಾಡಿನಲ್ಲಿ ಆರಾಧನೆ ಇದೆ .ಅರಬ್ಬಿ  ಭೂತ ಮತ್ತು ಚೀನೀ ಭೂತಗಳು ವಿದೇಶೀ ಮೂಲದ ದೈವಗಳಗಿವೆ
     ಅರಬ್ಬೀ ಭೂತಕ್ಕೆ  ಮಂಗಳೂರಿನ ಚಿಲಿಂಬಿ ಮಲರಾಯಿ ಭೂತಸ್ಥಾನದಲ್ಲಿ  ಆರಾಧನೆ ಇದೆ .ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಲರಾಯಿ ದೈವ ನೇಮದಂದು ಅರಬ್ಬೀ ಭೂತಕ್ಕೆ ನೇಮ ನೀಡಿ ಆರಾಧಿಸುತ್ತಾರೆ.ಅರಬ್ ಭೂತ ಮೂಲತಃ ಅರಬ್ ದೇಶ ದ ಖರ್ಜೂರ ವ್ಯಾಪಾರಿ .ಅರಬ್ ದೇಶದ ಅನೇಕರು ತುಳುನಾಡಿಗೆ ಬಂದು ವ್ಯಾಪಾರ ಮಾಡುತ್ತಿದ್ದರು. ಹಾಗೆ ಈ ಅರಬ್ ವ್ಯಕ್ತಿ ಕೂಡಾ  ತುಳುನಾಡಿಗೆ ಬಂದು ಮಂಗಳೂರಿನ ಸುತ್ತ ತಿರುಗಾಡಿ ಖರ್ಜೂರ ಮಾರಾಟ ಮಾಡುತ್ತಿದ್ದ.ಒಂದು ದಿನ ಬೆಳಗ್ಗಿನ ಹೊತ್ತಿನಲ್ಲಿ ಚಿಲಿಂಬಿ  ಮಲರಾಯಿ ದೈವಸ್ಥಾನದ ಸಮೀಪದ ನೀರಿನ ಕಟ್ಟದಲ್ಲಿ ತಿಂಗಳ ಸೂತಕ ನಿವೃತ್ತಿಗಾಗಾಗಿ ಅಳಕೆ ಮೇಲ್ಮನೆಗೆ ಸೇರಿದ ಎಳೆಯ ತರುಣಿಯೊಬ್ಬಳು ಸ್ನಾನ ಮಾಡುತ್ತಿದ್ದಳು.ಅದನ್ನು ಈ ಅರಬ್ಬೀ ಖರ್ಜೂರ ವ್ಯಾಪಾರಿ ನೋಡುತ್ತಾನೆ.ಅವನ ಮನಸ್ಸು ಚಂಚಲವಾಗಿ ಅವಳನ್ನು ಹಿಡಿಯಲು ಹೋಗುತ್ತಾನೆ .ಆಗ ಆ ಬ್ರಾಹ್ಮಣ  ಕನ್ಯೆ   ಮಾನ ರಕ್ಷಣೆ ಮಾಡುವಂತೆ ಮಲರಾಯಿ  ದೈವವನ್ನು ಪ್ರಾರ್ಥಿಸುತ್ತಾಳೆ .ಆಗ ದೈವವು ಅವಳನ್ನು ಮಾಯ ಮಾಡಿ  ತನ್ನ ಸೇರಿಗೆಗೆ ಸಂದಾಯ ಮಾಡಿಕೊಂಡು ಅವಳ ಮಾನ ರಕ್ಷಣೆ ಮಾಡುತ್ತದೆ ಜೊತೆಗೆ ಆ ಅರಬ್ ವ್ಯಾಪಾರಿಯನ್ನು  ಕೋಪದಿಂದ  ಶಿಕ್ಷಿಸಿ ಮಾಯ ಮಾಡುತ್ತದೆ .ಕೊನೆಗೆ ಅವನು  ಕ್ಷಮೆ ಕೇಳಿ    ಪ್ರಾ ರ್ಥಿಸಿದಾಗ ಅವನನ್ನು ಕೂಡಾ ತನ್ನ ಸೇರಿಗೆ ದೈವವನ್ನಾಗಿ ಮಾಡುತ್ತದೆ
                 
   ವಾಸ್ತವಿಕ ನೆಲೆಯಲ್ಲಿ ಗ್ರಹಿಸುವುದಾದರೆ ಅವರಿಬ್ಬರು ಕಟ್ಟದ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು .ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಹೊಂದುವುದು ಸಾಮಾನ್ಯವಾದ ವಿಚಾರವೇ ಆಗಿದೆ,  ಇಲ್ಲಿ  ದೈವದ ಅನುಗ್ರಹಕ್ಕೆ ಪಾತ್ರಳಾದ ಆ ಬ್ರಾಹ್ಮಣ ಕನ್ಯೆ ಬ್ರಾಹ್ಮಣತಿ(ಬ್ರಾಂದಿ ) ಭೂತವಾಗಿ ಆರಾಧನೆ ಹೊಂದುತ್ತಾಳೆ, ಅಂತೆಯೇ ದೈವದ ಆಗ್ರಹಕ್ಕೆ ತುತ್ತಾದ ಆ ಅರಬ್ ವ್ಯಾಪಾರಿ  ಕೂಡಾ ದೈವತ್ವ ಪಡೆದು ಅರಬ್ಬೀ ಭೂತವಾಗಿ ಆರಾಧನೆ ಪಡೆಯುತ್ತಾನೆ .ಅರಬ್ಬೀ ಭೂತದ  ವೇಷ ಭೂಷ ಣಗಳು ಅರಬ್ ವ್ಯಕ್ತಿಗಳಂತೆ ಇರುತ್ತದೆ. ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆ ಮತ್ತು ಆತನನನ್ನು ಶಿಕ್ಷಿಸಿದ್ದುದರ ಪ್ರತೀಕವಾಗಿ ಅರಬ್ ಭೂತಕ್ಕೆ ಒಂದು ಬೆಳ್ಳಿಯ ಸಾರಿಗೆಯ ಬಂಧನ ಇರುತ್ತದೆ.  
                                                                                                                   
               ಆಧಾರ ಗ್ರಂಥ :ತುಳು ನಾಡಿನ ಅಪೂರ್ವ ಭೂತಗಳು -ಡಾ।। ಲಕ್ಷ್ಮಿ ಜಿ ಪ್ರಸಾದ್                                  
                                    ,ಮಾತೃ ಶ್ರೀ ಪ್ರಕಾಶನ ಬೆಂಗಳೂರು



                                      

No comments:

Post a Comment