Friday 10 May 2013

ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ

                     

                   .  ಡಾಕ್ಟರೇಟ್ ಪದವಿಯ ಹಂಬಲ



     ಕೆಟ್ಟು ಪಟ್ಟಣ ಸೇರು ಎಂಬ ಹಾಗೆ ಸರಿಯಾದ ಉದ್ಯೋಗ ದೊರೆಯದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ  ನಾವು ಕೂಡಾ ಉದ್ಯೋಗವನ್ನು ಹುಡುಕಿಗೊಂಡು  ಬಂದು ಬೆಂಗಳೂರಿಗೆ ಬಂದವರು . ೨೦೦೫  ರ ಆರಂಭದಲ್ಲಿ ನನ್ನ ಅಣ್ಣ ನ ಸಹಾಯದಿಂದ  ನನ್ನ ಪತಿ  ಗೋವಿಂದ ಪ್ರಸಾದರಿಗೆ ಬೆಂಗಳೂರಿನ  ಸಾಫ್ಟ್ ವೇರ್ ಕಂಪನಿ ಒಂದರಲ್ಲಿ ಉದ್ಯೋಗ ದೊರೆತ ಕಾರಣ ನಾವು ಮಂಗಳೂರಿನಿಂದ ಬೆಂಗಳೂರಿಗೆ ಬಂದೆವು.ಆಗ ನಾನು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜ್ ನಲ್ಲಿ ಅರೆಕಾಲಿಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ .ಅದಕ್ಕೆ ರಾಜಿನಾಮೆ ಕೊಡುವಾಗ ಮುಂದೆ ಬೆಂಗಳೂರಿನಲ್ಲಿ ನನಗೆ ಕೆಲಸ ಸಿಕ್ಕುತ್ತದೋ ಇಲ್ಲವೋ ಎಂಬ ಭಯ ನಂಗೆ ಕಾಡಿತ್ತು
ನಾವು ಬೆಂಗಳೂರಿಗೆ ಶಿಫ್ಟ್ ಆದ ಮಾರನೆ ದಿನ ಪತ್ರಿಕೆಯೊಂದರಲ್ಲಿ ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಗೆ ಆಹ್ವಾನಿಸಿ ದ್ದುದನ್ನು ನೋಡಿದೆ . ಗೋವಿಂದ ಪ್ರಸಾದ್ ಬೆಳಗ್ಗೆಯೇ ಎದ್ದು ತುಂಬಾ ಕೆಲಸ ಇದೆ ಅಂತ ಆಫೀಸ್ ಗೆ ಹೋಗಿದ್ದರು .ಆ ಕಾಲೇಜ್  ನಾವು ಇದ್ದ ವಿವೇಕಾನಂದ ನಗರದ ಹತ್ತಿರವೇ ಇದೆ ಎಂದು ನಮ್ಮ ನೆರೆಕರೆಯವರು ತಿಳಿಸಿದರು . ಇರಲಿ ನೋಡಿಯೇ ಬಿಡುವ ಎಂದು ಬೆಂಗಳೂರಿನ ಪರಿಚಯವೇ ಇಲ್ಲದ ನಾನು  ಮಗನೊಂದಿಗೆ ನನ್ನ ಸ್ಕೂಟರ್( ಸ್ಪಿರಿಟ್)  ಹತ್ತಿ  ಗಾಡಿ ಸ್ಟಾರ್ಟ್ ಮಾಡಿ ಅಲ್ಲಿಂದ ಮುಖ್ಯ ರಸ್ತೆಗೆ ತಂದು ಅಲ್ಲಿಂದ  ಅಲ್ಲಲ್ಲಿ ದಾರಿಹೋಕರಲ್ಲಿ ,ಅಂಗಡಿಯವರಲ್ಲಿ ಕೇಳಿಕೊಂಡು ಬಂದು ಆ ಕಾಲೇಜ್ ಗೆ ಹೇಗೋ ಬಂದೆ . ಆ ಹೊತ್ತಿಗಾಗುವಾಗ ಸಂದರ್ಶನ ಮುಗಿಯುವ ಹಂತಕ್ಕೆ ಬಂದಿತ್ತು . ಕೊನೆಯವಳಾಗಿ ಸಂದರ್ಶನ ಕೊಠಡಿಗೆ ಪ್ರವೇಶಿಸಿದೆ .ಆಗ ಅಲ್ಲಿದ್ದವರು ಯಾರನ್ನು ನನಗೆ ಪರಿಚಯ ಇರಲಿಲ್ಲಿಲ್ಲ .ಅನಂತರ ಅವರು ಯಾರೆಂದು ತಿಳಿಯಿತು . ಆಗ ಅಲ್ಲಿನ ಪ್ರಾಂಶುಪಾಲರಾಗಿದ್ದ ಡಾ||.ಕೆ . ಗೋಕುಲನಾಥರು  ಕನ್ನಡ ಉಪನ್ಯಾಸಕರು ಕೂಡ ಆಗಿದ್ದರು . ಛಂದಸ್ಸು  ಕಾವ್ಯ ಮೀಮಾಂಸೆ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿ  ಕೊನೆಯಲ್ಲಿ ನೀವು ಮೂರು ಎಂ ಎ ಪದವಿಗಳನ್ನು ಯಾಕೆ ಮಾಡಿದಿರಿ ?ಎಂದು ಕೇಳಿದರು .ಯಾಕೇಂತ ಹೇಳುವುದು ?! ನನ್ನ ಓದಿನ ಹುಚ್ಚನ್ನು !!
ನಾನು ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೆ .ಆ ಒಂದೇ ಕಾರಣದಿಂದ ಎಲ್ಲರು ವಿಜ್ಞಾನ ತಗೊಳ್ತಾರೆ ಅಂತ ನಾನು ಕೂಡ ಅದನ್ನೇ ಆಯ್ಕೆ ಮಾಡಿಕೊಂಡೆ . ಪಿ ಯು ಸಿ  ಸೈನ್ಸ್ ತಗೊಂಡ ಕಾರಣಕ್ಕೆ ಬಿ ಎಸ್ ಸಿ  ಮಾಡಬೇಕಾಯ್ತು (ಎಂಜಿನೀರಿಂಗ್   ಮೆಡಿಕಲ್  ಓದುವಷ್ಟು ಒಳ್ಳೆ ಅಂಕಗಳನ್ನು ನಾನು ತೆಗೆದಿರಲಿಲ್ಲ !)ಬಿ ಎಸ್ ಸಿ ಓದುವಾಗ ಪ್ರಾಕ್ಟಿಕಲ್ ಮಾಡಿ ಒದ್ದಾಡುವಾಗ ನಂಗೆ ತಿಳಿಯಿತು ನಾನು ನಾನು ವಿಜ್ಞಾನಕ್ಕೆ ಸೂಕ್ತವಾದವಳಲ್ಲ . ಆರ್ಟ್ಸ್ ನನಗೆ ಸೂಕ್ತವಾದುದೆಂದು ಜ್ಞಾನೋದಯವಾಯಿತು .ನಾಟಕ ರಚನೆ ಅಭಿನಯ ಭಾಷಣ ಪ್ರಬಂಧ ಏಕಪಾತ್ರಾಭಿನಯ ಮೊದಲಾದವುಗಲ್ಲಿ ಅತೀವ ಆಸಕ್ತಿ ಹೊಂದಿದ್ದ ನನಗೆ ಸೈನ್ಸ್ ಸರಿಹೊಂದಲಾರದು ಅದಕ್ಕೆ ಆರ್ಟ್ಸ್ ಸರಿ ಎಂದು ನಿರ್ಧರಿಸಿದೆ .ವಿಜ್ಞಾನ ಪದವಿ ಪಡೆದಿದ್ದ ನಾನು ದ್ವಿತೀಯ ಭಾಷೆಯಾಗಿ ಸಂಸ್ಕೃತ ಓದಿದ್ದ ಕಾರಣ ನಾನು ಸಂಸ್ಕೃತದಲ್ಲಿ ಎಂ ಎ ಮಾಡಬೇಕಾಯಿತು . ಸಂಸ್ಕೃತ ಭಾಷೆ ಮೇಲೆ ವಿಶೇಷ ಆಸಕ್ತಿ ಕೂಡ ಇದ್ದ ಕಾರಣ  ಎಂ ಎ ಯಲ್ಲಿ ಮೊದಲ ರಾಂಕ್ ಅನ್ನು ಪಡೆದೆ . ಆದರೆ ತುಂಬಾ ಓದಬೇಕು ಎಂಬ ಆಸೆಯಿದ್ದ ನನಗೆ ಇದರಿಂದ ತೃಪ್ತಿಯಾಗಲಿಲ್ಲ  ಜೊತೆಗೆ  ಸಂಸ್ಕೃತಕ್ಕೆ  ಎಲ್ಲೂ ಕೂಡ ಸರಿಯಾದ ಉದ್ಯೋಗ ಅವಕಾಶ ಇರಲಿಲ್ಲ .ನಂಗೆ ಉಪನ್ಯಾಸಕಿಯಾಗಿ ಕೆಲಸ ಮಾಡಬೇಕೆಂಬ ಹಂಬಲ ತುಂಬಾ ಇತ್ತು .ಜೊತೆಗೆ ನಮ್ಮ ಆರ್ಥಿಕ ಪರಿಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ ನಾನು ಕೂಡ ದುಡಿಯುವುದು ಅನಿವಾರ್ಯವಾಗಿತ್ತು . ಹಾಗಾಗಿ  ಅರೆಕಾಲಿಕ ಉಪನ್ಯಾಸಕಿ ಆಗಿದ್ದುಕೊಂಡೇ ಟ್ಯುಶನ್ ನೀಡಿಕೊಂಡು ಒಂದು ವೆರ್ಷದ ಮಗನನ್ನು ಸಂಭಾಳಿಸಿಕೊಂಡು ಹೇಗೋ  ಹಿಂದಿ ಎಂ ಎ ಮಾಡಿದೆ . ನಾನು ಸಂಸ್ಕೃತ ಎಂ ಎ ಓದುತ್ತಿರುವಾಗಲೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಹಿಂದಿ ಪರೀಕ್ಷೆಗಳಿಗೆ ಕಟ್ಟಿ ರಾಷ್ಟ್ರ ಭಾಷ ಪ್ರವೀಣ ಪಾಸು ಮಾಡಿದ್ದೆ.  ಹಾಗಾಗಿ ಹಿಂದಿ ಎಂ ಎ ಮಾಡುವುದು ಅಷ್ಟೇನೂ ನಂಗೆ ಕಷ್ಟವಾಗಲಿಲ್ಲ.  ಆದರೆ ಯಾಕೋ ಏನೋ ಹಿಂದಿ ಸಾಹಿತ್ಯದಲ್ಲಿ ಆಸಕ್ತಿ ಬರಲೇ ಇಲ್ಲ
ಆಸಕ್ತಿಯೇ ಇಲ್ಲದ ವಿಷಯವನ್ನು ವಿದ್ಯಾರ್ಥಿಗಳಿಗೆ ಪಾಠ  ಮಾಡುವುದು ಹೇಗೆ ? ಅವರಲ್ಲಿ  ಆಸಕ್ತಿ ಬೆಳೆಸುವದು ಹೇಗೆ?(ಈಗ ನನಗೆ ಹಿಂದಿ ಸಾಹಿತ್ಯದಲ್ಲಿ ಅಭಿರುಚಿ ಇದೆ  ಆಗ ಇರಲಿಲ್ಲ !) ಏನು ಮಾಡುವುದು  ಅಂತ ತಲೆ ಕೆಡಿಸುತ್ತಾ ಇರುವಾಗ ಕನ್ನಡ ಎಂ ಎ ಮಾಡಿದ್ರೆ ಹೇಗೆ ? ಅಂತ ಯೋಚನೆ ಹುಟ್ಟಿಕೊಂಡಿತು . ಹೇಗೂ ನನಗೆ  ಚಿಕ್ಕಂದಿನಿದಲೇ  ತುಂಬಾ  ಓದಬೇಕು ಎಂಬ ಹಂಬಲ  ಇತ್ತು ತಾನೇ. ಹಾಗಾಗಿ ಕನ್ನಡ ಎಂ  ಎ  ಓದುವುದು ನನಗೆ ಪ್ರಿಯವಾದ ವಿಚಾರವೇ ಆಗಿತ್ತು  ಆದರೆ.ಇವಳಿಗೆ ಸರಿ ಇಲ್ಲ ಅಂತ ಜನ ನಗಾಡಿದ್ರೆ ಅಂತ ಭಯ ."ನಗಾಡುದು ಯಾಕೆ? ನಗಾಡಿದ್ರೆ ನಗಾಡಲಿ ಈವತ್ತು ನಗಾಡಿದ ಜನರೇ ಗೆದ್ರೆ ಬೆನ್ನು ತಟ್ಟುತಾರೆ" ಎಂಬ ಅಮ್ಮನ ಧೈರ್ಯದ ನುಡಿ , ಪತಿ ಗೋವಿಂದ ಪ್ರಸಾದರ  ಬೆಂಬಲದೊಂದಿಗೆ  ಕನ್ನಡ ಎಂ ಎ ಗೆ ಕಟ್ಟಿದೆ . ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದೆ ಕೂಡ .ಜೊತೆಗೆ ಎಂ ಎ ಯಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿದ್ದು  ನನಗೆ ಜಾನಪದದೆಡೆಗೆ ತೀವ್ರವಾದ ಆಸಕ್ತಿ  ಬೆಳೆಯಲು ಕಾರಣವಾಯಿತು  ಜೊತೆಗೆ ಮೊದಲೇ ಕಥೆ ಕಾದಂಬರಿಗಳನ್ನು ತುಂಬಾ ಓದುತ್ತಿದ್ದ ನನಗೆ  ಕನ್ನಡ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಗಳು ತುಂಬಾ ಪ್ರಿಯವಾದವು .ಅವುಗಳ ಕುರಿತಾದ ಶಾಸ್ತ್ರೀಯ ಜ್ಞಾನ ಕೂಡ ದೊರೆಯಿತು . ಕನ್ನಡಕ್ಕೆ ವಿಪುಲ ಅವಕಾಶಗಳು ಕೂಡ ಇದ್ದವು ಈಗ ಕೂಡ ಇವೆ ! ಸರಿ! ಮುಂದೆ ಕನ್ನಡ ಉಪನ್ಯಾಸಕಿ ಆಗುವುದೆಂದು ನಿರ್ಧರಿಸಿದ್ದೆ .ಇದೆ ಸಮಯಕ್ಕೆ ಸರಿಯಾಗಿ ಆವು ಬೆಂಗಳೂರಿಗೆ ನಮ್ಮ ವಾಸ್ತವ್ಯ ಬದಲಾಯಿಸಿದ್ದೆವು .
ಈ ನನ್ನ ಕಥೆಯನ್ನು ಸಂಕ್ಷಿಪ್ತವಾಗಿ ಡಾ. ಕೆ . ಗೋಕುಲನಾಥರಿಗೆ ಹೇಳಿದೆ . ಆಗ ಅವರು ನೀವ್ಯಾಕೆ ಡಾಕ್ಟರೇಟ್ ಮಾಡಲಿಲ್ಲ? ಎಂದು ಕೇಳಿದರು . ಆಗ ನಾನು ಏನು ಉತ್ತರಿಸುವುದು ಅಂತ ಗೊತ್ತಾಗದೆ ಸುಮ್ಮನಾಗಿ ತಲೆತಗ್ಗಿಸಿದೆ . ಮುಂದೆ ಡಾಕ್ಟರೇಟ್ ಮಾಡುತ್ತೇನೆ ಎಂದು ಹೇಳುವ ಧೈರ್ಯ ಕೂಡ ನನಗಿರಲಿಲ್ಲ  ಆದರೂ ಎಂದಾದರು ನಾನು ಕೂಡಾ ಡಾಕ್ಟರೇಟ್ ಮಾಡಿ ಅವರಂತೆ ನನ್ನ ಹೆಸರಿನ ಮುಂದೆ ಡಾ ಎಂದು ಹಾಕಿಕೊಳ್ಳ ಬೇಕು  ಎಂಬ ಹಂಬಲ  ನಂಗೆ ಹುಟ್ಟಿಕೊಂಡಿತು
ಡಾಕ್ಟರೇಟ್ ಇಲ್ಲದ ಕಾರಣ ನನ್ನನ್ನು ಆಯ್ಕೆ ಮಾಡಿರಲಿಕ್ಕಿಲ್ಲ ಎಂದು ನಾನು ಭಾವಿಸಿದ್ದೆ .ಮತ್ತೆ ಒಂದೆರಡು ದಿವಸಗಳಲ್ಲಿ ಬೆಂಗಳೂರಿನ ಪ್ರತಿಷ್ಟಿತ  ಜೈನ್ ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನ ಎದುರಿಸಿ ಆಯ್ಕೆಯಾದೆ .ಅಲ್ಲಿ ಉತ್ತಮ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳು ಇದ್ದವು  ಆ ಕನ್ನಡ ಎಂ ಎ ಓದುತ್ತಿರುವಾಗ ಕನ್ನಡ ಸಾಹಿತ್ಯ , ಕಾವ್ಯಮೀಮಾಂಸೆ ,ಜಾನಪದದಲ್ಲಿ  ನನಗೆ ಅತಿಯಾದ ಆಸಕ್ತಿ ಮೂಡಿತ್ತು . ಹಾಗಾಗಿ ಮುಂದೆ ಕನ್ನಡದಲ್ಲಿ ಮುಂದುವರಿಯುವುದು ಎಂದು ನಿರ್ಧರಿಸಿದ್ದೆ . ಆದ್ದರಿಂದ  ನನಗೆ  ಸಂಸ್ಕೃತಕ್ಕೆ ಆಯ್ಕೆ ಆದದ್ದು ಏನು ಕುಶಿ ತಂದಿರಲಿಲ್ಲ .ಒಂದುವಾರದ ಒಳಗೆ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಬೇಕಿತ್ತು .ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ  ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿದ್ದರೆ  ಚೆನ್ನಾಗಿರ್ತಿತ್ತು ಅಂದುಕೊಂಡೇ ಜೈನ್ ಕಾಲೇಜ್ ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗುವುದನ್ನು ಕೊನೆ ದಿನಕ್ಕೆ  ಮುಂದೂಡಿದೆ .ಇನ್ನೇನು ಮರು ದಿನ ಜೈನ್ ಕಾಲೇಜ್ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಹಾಜರಾಗಿ ವರದಿ ಮಾಡಿಕೊಳ್ಳುವುದು ಎನ್ನುವಷ್ಟರಲ್ಲಿ ಡಾ. ಕೆ  ಗೋಕುಲ ನಾಥರು ಫೋನ್ ಮಾಡಿ ನಾನು ಅವರ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಬಗ್ಗೆ ತಿಳಿಸಿದರು .ಅಲ್ಲಿ ಜೈನ್ ಕಾಲೇಜ್ ನಷ್ಟು ವೇತನ ಹಾಗೂ ಇತರ ಸೌಲಭ್ಯಗಳು  ಇರಲಿಲ್ಲ  .ಆದರು ಕನ್ನಡವೇ ಬೇಕು ಎಂದು ನಾನು ಅಲ್ಲಿ ಮರು ದಿನವೇ ಕರ್ತವ್ಯಕ್ಕೆ  ಹಾಜರಾಗಿ ವರದಿ ಮಾಡಿಕೊಂಡೆ .  ಆ ಕ್ಷಣ  ಅಮೃತ ಘಳಿಗೆಯೇ  ಇರಬೇಕು ! ನನ್ನ ಜೀವನದ ದಿಕ್ಕು ಬದಲಾಯಿಸಿದ ಕ್ಷಣ ಅದು .ಆ ಕಾಲೇಜ್ ನಲ್ಲಿ ಅನೇಕ ಉಪನ್ಯಾಸಕರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು .ಆದ್ದರಿಂದ  ಡಾಕ್ಟರೇಟ್ ಪದವಿ ಪಡೆಯಬೇಕೆಂಬ ನನ್ನ ಹಂಬಲ ಗಟ್ಟಿಯಾಯಿತು

 
               ಗರಿಗೆದರಿದ ಡಾಕ್ಟರೇಟ್  ಕನಸು 

 ನಾನು ಎ ಪಿ ಎಸ್ ಕಾಲೇಜ್ ಗೆ ಸೇರಿದ ಒಂದು ವಾರ ಆಗಿತ್ತು ಆ ದಿನದ  ಕೆಲಸ ಮುಗಿದು ಗ್ರಂಥಾಲಯದಲ್ಲಿ ಏನೋ ಪತ್ರಿಕೆ ಹಿಡಿದು ಓದುತ್ತಾ ಇರುವಾಗ ಅಟೆಂಡರ್  ಬಂದು ಪ್ರಿನ್ಸಿಪಾಲ್  ಕರೆಯುತ್ತಿದ್ದಾರೆ  ಎಂದು ಹೇಳಿದಾಗ ತಕ್ಷಣವೇ ಎದ್ದು ಗಾಬರಿಯಿಂದ ಪ್ರಿನ್ಸಿಪಾಲ ರ ಚೇಂಬರ್ ಗೆ ಹೋದೆ . ಅವರಿಗೆ ವಿಶ್ ಮಾಡಿ ನಿಂತೆ . ಪ್ರತಿಯಾಗಿ ವಿಶ್ ಮಾಡಿದ ಪ್ರಿನ್ಸಿಪಾಲ್ ನನ್ನನ್ನು ಕುಳಿತುಕೊಳ್ಳಲು ಹೇಳಿದರು . ಡಾ. ಕೆ ಗೋಕುಲನಾಥರು ಬಹಳ ಸಹೃದಯಿ  . ಸಹೋದ್ಯೋಗಿಗಳನ್ನು ಎಂದೂ ನಿಲ್ಲಿಸಿ ಮಾತನಾಡುತ್ತಿರಲಿಲ್ಲ . ಕಾಲೇಜ್  ಹೇಗೆ ಅನಿಸ್ತದೆ ?ವಿದ್ಯಾರ್ಥಿಗಳು  ಎಲ್ಲ ಹೊಂದಿಕೊಂಡಿದ್ದಾರೆಯೇ ? ಎಂದು ವಿಚಾರಿಸಿದರು . ನಂತರ ನೀವೇಕೆ ಡಾಕ್ಟರೇಟ್ ಮಾಡಲಿಲ್ಲ ? ನಾನು ಇಂಟರ್ವ್ಯೂ ನಲ್ಲಿ ಈ ಬಗ್ಗೆ ಕೇಳಿದಾಗ ನೀವೇನು ಹೇಳಲಿಲ್ಲ ಎಂದು ಕೇಳಿದರು . ಈಗ ಬಾಯ್ ಬಿಡುವುದು ಅನಿವಾರ್ಯವಾಯಿತು ನನಗೆ . " ಪಿ ಎಚ್ ಡಿ ಮಾಡಲು ನನ್ನಿಂದ ಸಾಧ್ಯವಿಲ್ಲ  ಸಂಶೋಧನಾ ಪ್ರಬಂಧ  ಬರೆಯುವಷ್ಟು ಜ್ಞಾನ ನನಗಿಲ್ಲ ಅದಕ್ಕೆ ತುಂಬಾ ಓದಿರಬೇಕು ತುಂಬಾ  ತಿಳಿದು ಕೊಂಡಿರ ಬೇಕು  ತುಂಬಾ  ಜ್ಞಾನ ಬೇಕಲ್ವಾ  ಸರ್ .? "ಎಂದು ಹಿಂಜರಿಯುತ್ತಾ ಹೇಳಿದೆ .
ನನ್ನಿಂದ ಡಾಕ್ಟರೇಟ್  ಪದವಿ ಪಡೆಯಲು ಬೇಕಾದ ಸಂಶೋಧನಾ ಪ್ರಬಂಧ ರಚನೆ ಅಸಾಧ್ಯ ಎಂದೇ ನಾನು ಭಾವಿಸಿದ್ದೆ  . ನನ್ನ ಈ ಭಯಕ್ಕೆ ಕಾರಣ ಕೂಡಾ ಇತ್ತು . ನಾನು ಉಜಿರೆಯಲ್ಲಿ ಬಿ ಎಸ್ ಸಿ ಓದುತ್ತಿರುವಾಗ ನಮ್ಮ ಕಾಲೇಜ್ ಗೆ ಪಿ ಎಚ್  ಡಿ ಪದವಿ ಪಡೆದಿದ್ದ ಮೇಡಂ ಒಬ್ಬರು ಸಂಸ್ಕೃತ ಉಪನ್ಯಾಸಕಿ ಆಗಿ ಬಂದಿದ್ದರು . ಹೊಸ ಮೇಡಂ ಹತ್ರ ಮಾತನಾಡಿ ಬರೋಣ ಅಂತ ನಾನು ನನ್ನ ಗೆಳತಿ ಗಾಯತ್ರಿ ಹಾಗೂ ಇನ್ನಿತರರು ಅವರ ಬಳಿಗೆ ಹೋದೆವು . ಬಹಳ ಒಳ್ಳೆಯ ಮೇಡಂ ಅವರು ಪಿಎಚ್  ಡಿ ಆಗಿದೆ ಅಂತ ಒಂಚೂರು ಗರ್ವ ಅವರಲ್ಲಿರಲಿಲ್ಲ . ನಮ್ಮ ಹತ್ತಿರ ಚೆನ್ನಾಗಿ ಮಾತಾಡಿದರು . ಆಗ ನಾವು "ಡಾಕ್ಟರೇಟ್  ಹೇಗೆ ಪಡೆಯೋದು ಅದಕ್ಕೆ ಏನು ಮಾಡ್ಬೇಕು ? ad ತುಂಬಾ ಕಷ್ಟ ಅಲ್ವಾ ? ನೀವು ಹೇಗೆ ಪಿ ಎಚ್ ಡಿ ಮಾಡಿದ್ರಿ ಇತ್ಯಾದಿಯಾಗಿ ನಾನಾ ಪ್ರಶ್ನೆಗಳನ್ನು  ಕೇಳಿದೆವು . ಆಗ ಅವರು "ಹೌದು ಪಿ ಎಚ್ ಡಿ ಮಾಡುವುದು ತುಂಬಾ ಕಷ್ಟದ  ವಿಚಾರ . ತುಂಬಾ ಪರಿಶ್ರಮ ಪಡಬೇಕು "ಎಂದು ಹೇಳಿದರು  . ಆಗ ನಾವು ಹಾಗಾದ್ರೆ ನೀವು ಅಷ್ಟು ಕಷ್ಟದ್ದನ್ನು ಹೇಗೆ ಮಾಡಿದ್ರಿ ?ಎಂದು ಪ್ರಶ್ನಿಸಿದೆವು . ಆಗ ಅವರು ನಾನು ದಿನಾ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಯೋಗ ಮಾಡ್ತೇನೆ ಧ್ಯಾನ ಮಾಡ್ತೇನೆ . ಆದ್ದರಿಂದ ನನಗೆ ಡಾಕ್ಟರೇಟ್  ಪದವಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು
. ಅಷ್ಟೆ ನನ್ನ ಎದೆ ಧಸಕ್ಕೆಂದಿತು!! ನನ್ನ ಜನ್ಮದಲ್ಲಿ ನನ್ನಿಂದ ಬೆಳಗ್ಗೆ ನಾಲ್ಕು ಗಂಟೆಗೆ ಏಳಲು ಸಾಧ್ಯವೇ ಇಲ್ಲ  .ಪರೀಕ್ಷೆಯ ಸಮಯದಲ್ಲಿ ಕೂಡ ನಾನು ಒಂದು ದಿನ ಕೂಡ ಬೆಳಿಗ್ಗೆ ಏಳು ಗಂಟೆ ಗಿಂತ ಮೊದಲು ಎದ್ದವಳಲ್ಲ  ! ನಾನು ರಾತ್ರಿ ೧-೨ ಗಂಟೆಯವರೆಗೆ ಕೂತು ಓದಿ ಬರೆದು ಮಾಡಬಲ್ಲೆ ಆದರೆ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವುದನ್ನು ನೆನೆಯಲು ಕೂಡ ಭಯಪಡುವ ಸ್ವಭಾವ ನನ್ನದು ! ಹಾಗಿರುವಾಗ ದಿನಾ  ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದಾದರೆ !ಓ ದೇವರೇ  ನನ್ನಿಂದ ಡಾಕ್ಟರೇಟ್  ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ  ಅಂದೇ ನಾನು ಬಂದಿದ್ದೆ .
   ಆದರಿಂದಲೇ  ಡಾಕ್ಟರೇಟ್ ಮಾಡಲು ನನ್ನಿಂದ ಸಾಧ್ಯವಾಗಲಾರದು ಎಂದು  ಗೋಕುಲನಾಥರಲ್ಲಿ ಹೇಳಿದ್ದೆ . ನನ್ನ ಮೂರ್ಖತನ ನೋಡಿ ಅವರಿಗೆ ಸಿಟ್ಟು ಬಂದಿರಬೇಕು . ಬಾಯಲ್ಲಿ ಏನು ಹೇಳಲಿಲ್ಲ . ಆದರೆ ಅವರ ಮುಖ ಕೆಂಪಾದದ್ದು ನೋಡಿ ಅವರಿಗೆ ಕೋಪ ಬಂದಿದೆ ಅಂತ ನನಗೆ ಗೊತ್ತಾಯಿತು . ಮರು ದಿನ ನನ್ನನ್ನು ಕರೆದು ಏಳೆಂಟು ಪುಸ್ತಕಗಳನ್ನು ನೀಡಿ ಓದಿ ನೋಡಿ ಎಂದು ಹೇಳಿದರು . ಸರಿ ಎಂದು ಮನೆಗೆ ತಂದು ಓದಲು ಆರಂಭಿಸಿದೆ . ಆ ಎಲ್ಲ ಪುಸ್ತಕಗಳು ಪ್ರಕಟವಾದ ಪಿ ಎಚ್ ಡಿ ಸಂಶೋಧನಾ ಪ್ರಬಂಧ ಗಳಾಗಿದ್ದವು . ಒಂದರಿಂದೊಂದು ಚೆನ್ನಾಗಿದ್ದವು ಎರಡೇ ದಿವಸಗಳಲ್ಲಿ ಓದಿ ಪುಸ್ತಕಗಳನ್ನು ಹಿಂದೆ ಕೊಡಲು ಹೋದೆ ಅವರು ". ಈ ಪುಸ್ತಕಗಳನ್ನು ಓದಿ ಏನನ್ನಿಸಿತು . ಇಂತಹ ಒಂದು ಸಂಶೋಧನಾ ಪ್ರಬಂಧ ರಚನೆ ನಿಮ್ಮಿಂದ ಸಾಧ್ಯವಿಲ್ಲವೇ ?"ಎಂದು ಕೇಳಿದರು . ಆ ಪುಸ್ತಕಗಳನ್ನು ಓದಿದಾಗ ನನಗೂ ಸಂಶೋಧನಾ ನಿಬಂಧ ರಚಿಸಬಹುದು ಎಂಬ ಧೈರ್ಯ ಬಂದಿತ್ತು . ಹಾಗಾಗಿ  ನನ್ನಿಂದ ಸಾಧ್ಯ  ನಾನು ಡಾಕ್ಟರೇಟ್ ಮಾಡುತ್ತೇನೆ ಎಂದು ಆತ್ಮ ವಿಶ್ವಾಸದಿಂದ ನುಡಿದೆ .
ಮತ್ತೆ ಒಂದೆರಡು ತಿಂಗಳು ಕಳೆಯುವುದರೊಳಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ  ಸಂಶೋಧನಾ ಕೇಂದ್ರವಾಗಿರುವ ಬಿ ಎಂ ಶ್ರೀ ಪ್ರತಿಷ್ಟಾನ ಪಿ ಎಚ್ ಡಿ ಪದವಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತು . ನಾನು ಅರ್ಜಿ ಸಲ್ಲಿಸಿದೆ . ನಿಗದಿತ ದಿನದಂದು ಲಿಖಿತ ಪರೀಕ್ಷೆ ನಡೆಯಿತು . ಅದೇ ದಿನ ಸಂಜೆ  ಮೌಖಿಕ ಪರೀಕ್ಷೆ ಇತ್ತು  ಲಿಖಿತ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೆ . ಬೆಂಗಳೂರಿಗೆ ಹೊಸಾಬಳಾ ದ ನನಗೆ ಬಿ ಎಂ ಶ್ರೀ ಅಧ್ಯಯನ ಕೇಂದ್ರದ ಮುಖ್ಯಸ್ತರನ್ನಾಗಲಿ  ಅಧ್ಯಯನ ಕೇಂದ್ರದ ನಿರ್ದೇಶಕರಾದ ಮಲ್ಲೇಪುರಂ ವೆಂಕಟೇಶ್ (ಈಗ ಸಂಸ್ಕೃತ ವಿಶ್ವ  ವಿದ್ಯಾಲಯದ ಉಪ ಕುಲಪತಿಗಳಾಗಿದ್ದಾರೆ ) ಅವರನ್ನಾಗಲಿ ಪರಿಚಯ ಇರಲಿಲ್ಲ . ಹಾಗಾಗಿ ಮೌಖಿಕ ಪರೀಕ್ಷೆ ಏನಾಗುತ್ತೋ ಅನ್ನುವ ಭಯ ಕಾಡಿತು . ಆದರು ಇರಲಿ ನೋಡಿಯೇ ಬಿಡುವ ಏನಾಗುತ್ತೋ ಆಗಲಿ ಎಂದು  ಧವಗುಡುತ್ತಿರುವ  ಎದೆಯನ್ನು  ಸಮಸ್ತಿತಿಗೆ ತರಲು ಯತ್ನಿಸುತ್ತಾ  ಪರೀಕ್ಷಾ ಮಂಡಳಿಯ ಎದುರು ಹೋಗಿ ಕುಳಿತೆ . ಅಲ್ಲಿದ್ದ ಹಿರಿಯ ವಿದ್ವಾಂಸರು (ಅವರು  ಪ್ರೊ . ಡಿ ಲಿಂಗಯ್ಯ , ಪ್ರೊ ಬಸವಾರಾಧ್ಯ , ಡಾ|। ವೆಂಕಟಾಚಲ ಶಾಸ್ತ್ರೀ ,ಪ್ರೊ ಗೀತಾಚಾರ್ಯ , ಡಾ ॥ ಮಲ್ಲೇಪುರಂ ವೆಂಕಟೇಶ್  ಎಂದು ಆಮೇಲೆ ತಿಳಿಯಿತು ) ನನ್ನ ಗಾಬರಿ ನೋಡಿ "ಭಯ ಬೇಡ ನಿಮಗೆ ತಿಳಿದಿರುವುದನ್ನು ಹೇಳಿ ನಾವ್ಯಾರು ಸರ್ವಜ್ಞರಲ್ಲ  ಎಂದು ಹೇಳಿ ಧೈರ್ಯ ತುಂಬಿ ಅನೇಕ ಪ್ರಶ್ನೆಗಳನ್ನು ಕೇಳಿದರು ನಾನು ಸಮರ್ಪಕವಾಗಿ ಉತ್ತರಿಸಿದೆ . ನೀವು ಆಯ್ಕೆಯಾದರೆ ಯಾವ ವಿಷಯದಲ್ಲಿ ಪಿ ಎಚ್ ಡಿ ಮಾಡಲು ನಿರ್ಧರಿಸಿದ್ದೀರಿ ? ಎಂದು ಕೇಳಿದರು . ಈ ಪ್ರಶ್ನೆ ಯನ್ನು ನಾನು ಮೊದಲೇ ನಿರೀಕ್ಷಿಸಿದ್ದೆ .ಜಾನಪದ ಕುರಿತು ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ನಾನು ಅದಾಗಲೇ  ತುಳುನಾಡಿನ ದೈವಗಳ ಅಧಿದೈವವಾದ ನಾಗ ಬ್ರಹ್ಮ ದೈವದ ಮೇಲೆ ಅಧ್ಯಯನ ಮಾಡುವುದೆಂದು ನಿರ್ಧರಿಸಿದ್ದೆ . ಆದ್ದರಿಂದ ಅದನ್ನೇ ಅಲ್ಲಿ ಹೇಳಿದೆ ಆಗ ಭೂತಾರಾಧನೆ ಬಗ್ಗೆ ಈಗಗಾಗಲೇ ಚಿನ್ನಪ್ಪ ಗೌಡ ಮೊದಲಾದವರು ಅಧ್ಯಯನ ಮಾಡಿದ್ದಾರೆ ನೀವೇನು ಮಾಡುತ್ತೀರಿ ಅದರಲ್ಲಿ? ಎಂದು ಕೇಳಿದರು . ಆಗ ನಾನು ಡಾ॥ ಬಿ ಎ ವಿವೇಕ ರೈ  ಡಾ । ಅಮೃತ ಸೋಮೇಶ್ವರ ಮೊದಲಾದವರು ತುಳುವ ಬ್ರಹ್ಮ (ಬೆರ್ಮೆರ್) ದೈವದ ಕುರಿತು ಅಧ್ಯಯನವಾಗಬೇಕು ಎಂದು ಹೇಳಿರುವ ಬಗ್ಗೆ ಮತ್ತು  ನಾಗ ಬ್ರಹ್ಮ ನ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯತೆಯ ಬಗ್ಗೆ ಆಧಾರ ಸಹಿತ ವಾಗಿ ವಿವರಿಸಿದೆ . ನನ್ನ ವಿವರಣೆಯನ್ನು ಕೇಳಿದ ಆ ವಿದ್ವಾಂಸರ ಮುಖಗಳಲ್ಲಿ ಮೆಚ್ಚುಗೆಯ ನಗು ಮೂಡಿದ್ದು ಕಂಡು ನನಗೆ ತುಸು ನಿರಾಳ ಆಯಿತು . ಅಲ್ಲಿ ಮೂವರಿಗೆ ಡಾಕ್ಟರೇಟ್ ಮಾಡಲು ಅವಕಾಶ ಇತ್ತು  ಆ ಮೂವರಲ್ಲಿ ಒಬ್ಬಳಾಗಿ ನಾನು ಆಯ್ಕೆಯಾದೆ.   ಅಲ್ಲಿಂದ ನನ್ನ ಡಾಕ್ಟರೇಟ್  ಕನಸು ಗರಿಗೆದರಿ     ಆಕಾಶದೆತ್ತರಕೆ ಹಾರಿತು !
  ಆಕಾಶಕ್ಕೆ ಏರಿದ್ದು ಭೂಮಿಯ ವಾಸ್ತವಕ್ಕೆ ಇಳಿಯಲು ಹೆಚ್ಚು ದಿನ ಬೇಕಾಗಲಿಲ್ಲ . ಯಾಕೆಂದರೆ ನಾನು ಆಯ್ಕೆ ಮಾಡಿದ್ದು ಕ್ಷೇತ್ರ ಕಾರ್ಯ ಆಧಾರಿತ ಸಂಶೋಧನಾ ವಿಷಯವನ್ನು . ತುಳುನಾಡಿನ ಭೂತಗಳ ಆರಾಧನೆ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ . ಅನೇಕೆ ವಿಧಿ ನಿಷೇಧಗಳು ಇಲ್ಲಿವೆ.  ಆದ್ದರಿಂದ ಈ ಭೂತಗಳ ಬಗೆಗೆ ಅಧ್ಯಯನ ಮಾಡುವುದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೆ ಕೂಡಾ ಕಷ್ಟ ಸಾಧ್ಯವಾದ ವಿಚಾರ . ಆದ್ದರಿಂದ ಇಂದಿಗೂ ತುಳುನಾಡಿನಲ್ಲಿ ಕ್ಷೇತ್ರ ಕಾರ್ಯ ಆಧಾರಿತ         ಭೂತಾರಾಧನ ಕ್ಷೇತ್ರದಲ್ಲಿ ಅಧ್ಯಯನ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ
ಅಂತು ಇಂತೂ ನಾನು ಅನಿರೀಕ್ಷಿತವಾಗಿ ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ ಪಡೆದಿದ್ದೆ

6 comments:

  1. ಓದಿ ತುಂಬಾ ಸಂತೋಷ ಆಯಿತು, ಸಾಧನೆಗೆ ಇತಿಮಿತಿಗಳಿಲ್ಲ. ಭೂತಕಾಲದ ಸಾಧನೆ ವರ್ತಮಾನದಲ್ಲಿ ಪ್ರವರ್ಧಮಾನವಾಗಲಿ ! ನಿಮ್ಮಪರಿಚಯವಾದ ಬಗ್ಗೆ ಉಡುಪಿಯ ಗೋವಿಂದ ಪೈ ತುಳು ಸಂಶೋಧನಾ ಕೇಂದ್ರದಲ್ಲಿ ಕೃಷ್ಣ ಭಟ್ಟರ ಜೊತೆ ಮೊನ್ನೆ ಹಂಚಿ ಕೊಂಡೆ. ಶ್ರೀಯುತ ಕೃಷ್ಣ ಭಟ್ರು ನನ್ನ ಸಂಸ್ಕೃತ ಅಧ್ಯಾಪಕರಾಗಿದ್ದರು

    ReplyDelete
    Replies
    1. ಧನ್ಯವಾದಗಳು ಸರ್ .ಹೆರಂಜೆ ಕೃಷ್ಣ ಭಟ್ ನನ್ನ ಲೇಖನಗಳನ್ನು ತುಳುವದಲ್ಲಿ ಪ್ರಕಟಿಸಿ ನನಗೆ ತುಂಬಾ ಬೆಂಬಲ ನೀಡಿದ್ದಾರೆ

      Delete
    2. ನಿಮ್ಮನ್ನ ನೋಡಿ ನನಗು ಎಮ್ ಎ ಮಾಡಬೇಕ ಅನಿಸುತ್ತದೆ, ನಿಮ್ಮ ಸಾದನೆ ಇತರರಿ ಗೆ ಮಾದರಿ ಯಾಗಿದೆ, ಯಾಗಲಿ.

      Delete
    3. ನನ್ನ ಬರಹ ನಿಮಗೆ ಓದಲು ಸ್ಪೂರ್ತಿ ನೀಡಿದ್ದರೆ ನಾನು ಧನ್ಯೆ !ನೀವು ಎಂ ಎ ,ಎಂ ಫಿಲ್ ,ಪಿಎಚ್.ಡಿ ಗಳನ್ನು ಮಾಡಬಹುದು ಖಂಡಿತ!ಈ ವರ್ಷವೇ ಆರಂಭಿಸಿ ನನ್ನಿನ್ದೇನಾದರು ಸಹಾಯ ಬೇಕಿದ್ದಲ್ಲಿ ತಿಳಿಸಿ ನನಗೆ ಸಾಧ್ಯವಾದ ಸಹಾಯ ಈ ನಿಟ್ಟಿನಲ್ಲಿ ಮಾಡಬಲ್ಲೆ ,ಓದಿ ಪ್ರತಿಕ್ರಿಯಿಸಿ ಬೆಂಬಲಿಸಿದ್ದಕ್ಕೆ ಧನ್ಯವಾದಗಳು

      ನಿಮಗೆ ಶುಭವಾಗಲಿ prithviraj shetty

      Delete
  2. ಡಾಕ್ಟರೇಟ್ ಕನಸಿನ ಅನಿರೀಕ್ಷಿತ ಆಕಾಶಕ್ಕೆ ಏರಿಸಿ , ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ ಪಡೆದು ಭೂಮಿಯ ವಾಸ್ತವ ತಿಳಿಸಿದ ನಿಮ್ಮ ಬ್ಲಾಗಂಗಳದ ಬರಹ ಚೆನ್ನಾಗಿದೆ.

    - ಪ.ರಾಮಚಂದ್ರ
    ದುಬೈ - ಸಂಯುಕ್ತ ಅರಬ್ ಸಂಸ್ಥಾನ

    ReplyDelete
  3. ಓದಿ ಬೆಂಬಲಿಸಿ ಪ್ರತಿಕ್ರಿಯಿಸಿದ ನಿಮಗೆ ಮನಃ ಪೂರ್ವಕ ಕೃತಜ್ಞತೆಗಳು

    ReplyDelete