Monday, 7 October 2013

ನಮ್ಮೂರಿನ ನವರಾತ್ರಿ ವೇಷಗಳ ಇತಿಹಾಸ

            

ಮೊನ್ನೆ ನವರಾತ್ರಿಯ ಆರಂಭದ ದಿನ ಎಣ್ಮೂರು ಶಾಲೆಗೆ ಬಂದ ಹುಲಿ ವೇಷದ ಕುಣಿತ ನೋಡಿ ಭಾರಿ ಕುಶಿ ಆಯಿತು ನನಗೆ ನಾವು ಚಿಕ್ಕವರಿದ್ದಾಗ ನಮ್ಮ ಊರು ಕೊಳ್ಯೂರಿಗೆ ಹುಲಿ ,ಹನುಮಂತ ,ಕೃಷ್ಣ ,ಕೊರಗ ,ಮುರ್ಕುಂಡೆ,ಮೊದಲಾದ ಅನೇಕ ವೇಷಗಳು ಬರುತ್ತಿದ್ದವು .ಕೃಷ್ಣ  ವೇಷ ನಮಗೆಲ್ಲ ಅಚ್ಹುಮೆಚ್ಚು ಯಾಕೆಂದರೆ ಕೃಷ್ಣ ನಮ್ಮನ್ನು ಬೆದರಿಸುತ್ತಿರಲಿಲ್ಲ.ಉಳಿದ ವೇಷಗಳು ನಮ್ಮನ್ನು ಹೆದರಿಸುತ್ತಿದ್ದವು !

ಆದ್ರೆ ಹುಲಿ ವೇಷಕ್ಕೆ ನಾವು ಹೆದರುತ್ತಿರಲಿಲ್ಲ ಯಾಕೆಂದರೆ ಹುಲಿ ವೇಷ ಒಂದೇ ಯಾಗಿ ಬರುವುದಿಲ್ಲ .ನಾಲ್ಕಾರು ಜನರ ತಂಡ ಇರುತ್ತದೆ ಜೊತೆಗೆ ಅವ್ರ ಹಿಂದೆ ನಮ್ಮದೇ ವಯಸ್ಸಿನ ಮಕ್ಕಳ ಗುಂಪು ಕೂಡಾ ಇರುತ್ತಿತ್ತು .ಹುಲಿ ವೇಷದವರು ಬೇರೆ ಬೇರೆ ಮನೆಗೆ ಹೋಗಿ ಕುಣಿವಾಗ ಹಿಂದಿನಿಂದ ಹಿಂಬಾಲಿಸಿಕೊಂಡು ಹೋಗಿ ಕುಣಿತವನ್ನು ನೋಡುತ್ತಿತ್ತು ಈ ಗುಂಪು .ನಮ್ಮ ಮನೆ ದಾಟಿ ಮುಂದೆ ಹೋಗುವಾಗ ನಾವು ಕೂಡ ಆ ಗುಂಪಿನೊಂದಿಗೆ ಸೇರಿಕೊಳ್ಳುತ್ತಿದ್ದೆವು.ನಾಲ್ಕಾರು ಮನೆ ಹೋಗಿ ಹಿಂದೆ ಬರುತ್ತಿದ್ದೆವು !

ನಮ್ಮೂರಿನಲ್ಲಿ ಸುಮಾರು 50 ವರ್ಷ ಮೊದಲು ಅಂದರೆ ನನ್ನ ಅಮ್ಮ ಚಿಕ್ಕವರಾಗಿದ್ದಾಗ   ಕರಡಿ ವೇಷ ಮತ್ತು ಕೊರಗ ವೇಷ ಮಾತ್ರ ಇತ್ತಂತೆ .ನಮ್ಮ ಊರಿನ  ಕೃಷ್ಣಪ್ಪ ಸೇರಿಗಾರರ ತಂಡದ ಕರಡಿ ವೇಷ ಕುಣಿತಕ್ಕೆ ತುಂಬಾ ಪ್ರಸಿದ್ದಿ ಇತ್ತು .ಬಹಳ ಚೆನ್ನಾಗಿ ಕುಣಿಯುತ್ತ್ತಿದ್ದರು. ಆನಂದ ಸೇರಿಗಾರರ ದೊರೆ ವೇಷದ ಕುಣಿತ ಅಭಿನಯ ನಿಜವಾಗಿಯೂ ಅದ್ಭುತ !ಬ್ರಿಟಿಷ್  ದೊ ರೆಯಂತೆ  ಮಖಕ್ಕೆ  ಕೆಂಪು ಬಣ್ಣ ಹಚ್ಚಿ ಕೋವಿ ಹಿಡಿದು ನಿಂತರೆ ನಿಜವಾಗಿಯೂ ಬೇಟೆಗೆ ಹೊರಟಂತೆ ಭಾಸವಾಗುತ್ತಿತ್ತು .ಬಹುಷ ಇದು ಬ್ರಿಟಿಷ್ ದೊರೆಗಳ ಬೇಟೆಯ ಅಣಕವೇ ಇರಬೇಕು ನಮ್ಮ ತುಳುನಾಡಿನಲ್ಲಿ ಮಾಲ ಕಾರ್ಯದಂದು ಬೇಟೆ ಇತ್ತಾದರೂ ಅವರಲ್ಲಿ ಕೋವಿ ಹಿಡಿದು ಬೇಟೆ ಆಡುವ ಪದ್ಧತಿ ಇರಲಿಲ್ಲ ಕೋವಿ ತಾನೇ ಎಲ್ಲಿತ್ತು ಇವರಲ್ಲಿ ?ಅಲ್ಲದೆ ನವರಾತ್ರಿಯ ಹುಲಿ ಕುಣಿತದಲ್ಲಿ ಪ್ರಧಾನ ಪಾತ್ರವಹಿಸುವ ಕೋವಿಧಾರಿಗೆ ದೊರೆ ಎನ್ನುತ್ತಾರೆ ಆತನಿಗೆ ತಲೆಗೆ ಒಂದು ಬ್ರಿಟಿಷರ ಟೊಪ್ಪಿ ಮುಖಕ್ಕೆ ಕೆಂಪು ಬಣ್ಣ ಇರುತ್ತದೆ. ಆದ್ದರಿಂದ ಇದು ಬ್ರಿಟಿಷ್ ದೊರೆ /ಅಧಿಕಾರಿಯ ಬೇಟೆಯನ್ನು ಸೂಚಿಸುತ್ತದೆ  .

45-50 ವರ್ಷಗಳ ಮೊದಲು ಕೋಳ್ಯೂರಿನ ತಂಡದವರು  ಕೋಳ್ಯೂರು ಮೀಯಪದವು ವರ್ಕಾಡಿ ಮಂಜೇಶ್ವರ ಸುತ್ತಮುತ್ತ ಲಿನ
ಪ್ರದೇಶಗಳಲ್ಲಿ ಕರಡಿ ವೇಷ ಹಾಕಿ ಕುಣಿಯುತ್ತಿದ್ದರಂತೆ .ಆ ಕಾಲದಲ್ಲಿ ಮಂಗಳೂರಿನಲ್ಲಿ ಹುಲಿ ವೇಷ ಇತ್ತಂತೆ .

ನಂತರ ಕೋಳ್ಯೂರಿನ ಕರಡಿ ವೇಷ ಹುಲಿ ವೇಷ ಆಗಿ ಬದಲಾವಣೆ ಆಯಿತು .ಜೊತೆಗೆ ತಂಡದಲ್ಲಿ ಹಣ ಹಂಚುವಾಗಲೋ ಅಥವಾ ಇನ್ನು ಯಾವುದೋ ವಿಚಾರಕ್ಕೆ ಒಡಕು ಕಾಣಿಸಿಕೊಂಡಿತು.ಸುಮಾರು ೪೦ ವರ್ಷ ಮೊದಲು ಇವರ ತಂಡದಲ್ಲಿದ್ದ ರಾಮ ಎಂಬವರುನಮ್ಮ ಊರಿನಲ್ಲಿ ಸುರುವಿಗೆ  ನಾರದ ವೇಷ ಹಾಕಿದರು .ಅವರ ವೇಷ ಬಹಳ ಯಶಸ್ವಿಯಾಯಿತು .ಅವರಿಗೆ ಸಾಕಷ್ಟು ದುಡ್ಡೂ ಸಂಗ್ರಹ ಆಯಿತು .ಅದನ್ನು ನೋಡಿಯೋ ಏನೋ, ನಮ್ಮೂರಿನ ಮೆಟ್ಟು ಕುಂಡೆಯ ಒಬ್ಬರು ಮುರ್ಕುಂಡೆ ವೇಷವನ್ನು ಹಾಕಲು ಶುರುಮಾಡಿದರು.ಸುಮಾರು ೩೫ ವರ್ಷ ಮೊದಲು ಮುರ್ಕುಂಡೆ ವೇಷ ಸುರು ಆಯಿತು .ಕೈಯಲ್ಲಿ ಒಂದು ಮನುಷ್ಯನ ಗೊಂಬೆ ಹಿಡಿದು ಕೊಂಡು
"ಉರ್ನಿಟ್ಟು ಮುರ್ಕುಂಡೆ ಲಡ್ಡು ಮಿಠಾಯಿ ,
ಕಳಿ ಕಳಿ ಚೋಮ ಜಕ್ಕು ಮದೀನ  "
ಎಂದು ಹಾಡುತ್ತಾ ಬರುವ ಮುರ್ಕುಂಡೆ  ವೇಷ ಮನೆ ಮನೆಗೆ ಬಂದು ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಅಣಕು ಮಾಡುತ್ತದೆ.ಮಲಯಾಳ ಭಾಷೆಯಲ್ಲಿರುವ ಈ ಹಾಡಿನ ಅರ್ಥ ಹೀಗಿದೆ
 "ಉದ್ದಿನ ಹಿಟ್ಟಿನ ಮುರುಕು ಉಂಡೆ (ತಿಂಡಿ   )
ಲಡ್ಡು ಮಿಠಾಯಿ ,ಆಟವಾಡು ಆಟವಾಡು ಚೋಮ ಜಕ್ಕು ಮದೀನ "
ಇವರಿಗೆಲ್ಲ ಸಾಕಷ್ಟು ದುಡ್ಡು ಸಂಗ್ರಹವಾಗ ತೊಡಗಿದಾಗ ಬೇರೆಯವರು ರಾಮ ಕೃಷ್ಣ ಹನುಮಂತ ಮೊದಲಾದ ವೇಷ ಹಾಕಲು ಆರಂಭಿಸಿದರು .ಇವರಂತೆ ನಿತ್ಯ ಭಿಕ್ಷೆ ಬೇಡುತ್ತಿದ್ದ ಹಲವರೂ ರಾಮ ಕೃಷ್ಣ ಮೊದಲಾದವರ ವೇಷ ಹಾಕ ತೊಡಗಿದರು .ನವರಾತ್ರಿ ವೇಷಗಳನ್ನು ಹಾಕಿದವರು ಅದರ ಪಾವಿತ್ರ್ಯ ವನ್ನು ಮೂಲೆಗೆ ತಳ್ಳಿ ಸಂಜೆ ಹೊತ್ತು ಕುಡಿದು ತೂರಾಡ ತೊಡಗಿದಾಗ ಯಾವುದೇ  ದೇವರ ವೇಷಗಳನು ಹಾಕದಂತೆ ನಿರ್ಬಂಧಬಂತು ,ಹಾಗಾಗಿಮೊದಲು ಹನುಮಂತ ವೇಷ ಹಾಕುತ್ತಿದ್ದ ಸಂಜೀವ ಈಗ ಶೂರ್ಪನಖಿ ಹಾಕುತ್ತಿದ್ದಾರೆ .ಹಾಗೆ ಇತರರು ಬೇರೆ ವೇಷ ಹಾಕುತ್ತಾರೆ .

ಇನ್ನು ಕೊರಗ ವೇಷ ದುಡ್ಡು ಸಂಗ್ರಹದ ಉದ್ದೇಶದಿಂದ ಪ್ರಾರಂಭವಾದದ್ದಲ್ಲ.ಭೀಕರವಾದ ಕಷ್ಟ ರೋಗ ರುಜಿನಗಳು ಬಂದಾಗ ಕೊರಗ ವೇಷ ಹಾಕಿ ಬೇಡುತ್ತೇನೆ ಎಂಬ ಹರಿಕೆ ಹೇಳಿ ಕೊಳ್ಳುತ್ತಿದ್ದರು.ಅದನ್ನು ನೆರವೇರಿಸುವುದಕ್ಕಾಗಿ ಕೊರಗ ವೇಷ ಹಾಕುತ್ತಿದ್ದರು .ಹರಿಕೆಯಾಗಿ ಕೊರಗ ವೇಷವನ್ನು ಬ್ರಾಹ್ಮಣರು ಕೂಡಾ ಹಾಕುತ್ತಿದ್ದರು .ನಾನು ಚಿಕ್ಕವಳಿದ್ದಾಗ (ಸುಮಾರು ಹೈ ಸ್ಕೂಲ್ ಓದುವ ಸಮಯ )ನಮ್ಮ ಮನೆಗೆ ಕಾಸರಗೋಡಿನ ಹವ್ಯಕ ಬ್ರಾಹ್ಮಣರೊಬ್ಬರು ಹೇಳಿ ಕೊಂಡ  ಹರಿಕೆ ತೀರಿಸುವುದಕ್ಕಾಗಿ ಕೊರಗ ವೇಷ ಹಾಕಿ ಬಂದಿದ್ದರು !ಈಗ ಕೊರಗ ಜನಾಂಗಕ್ಕೆ ಅವಮಾನ ಆಗುತ್ತದೆ ಹೇಳುವ ಕಾರಣಕ್ಕೆ ಆ ಸಮುದಾಯದವರು ಬಿಟ್ಟು ಬೇರೆಯವರು ಕೊರಗ ವೇಷ ಹಾಕದಂತೆ ನಿರ್ಬಂಧ ಇದೆ ,ಆದರೂ ಹರಿಕೆ ಹೇಳಿ ಕೊಂಡವರು ಗುಟ್ಟಾಗಿ ಕೊರಗ ವೇಷ ಹಾಕಿ ದೇವಸ್ಥಾನಕ್ಕೆ ಮಾತ್ರ ಬಂದು ಅಲ್ಲಿ ಕುಣಿದು ಭಿಕ್ಷೆ ಕೇಳಿ ಹರಿಕೆ ತೀರಿಸುತ್ತಾರೆ ಎಂದು ಹೇಳುತ್ತಾರೆಈಗ ವರ್ಷದಿಂದ ವರ್ಷಕ್ಕೆ ನವರಾತ್ರಿ ವೇಷ ಹಾಕುವವರ ಸಂಖ್ಯೆ ಇಳಿಮುಖವಾಗುತ್ತಿದೆ.ಮೊದಲು ನಮ್ಮಲ್ಲಿ ಮನೆ ಮನೆಗೆ ಆಟಿ  ಕಳಂಜ ,ಸೋಣೆಯ ಜೋಗಿ ,ಕಾವೇರಿ ಪುರುಷ ಮೊದಲಾದವರು ಬರುತ್ತಿದ್ದರು .ಅವರನ್ನು ನಾವು ಅಪೂರ್ವ ಜನಪದ ನರ್ತಕರೆನ್ದೂ ನಮ್ಮ ಸಂಸ್ಕೃತಿಯ ಪ್ರವಾಹಕರೆಂದು ಗೌರವದಿಂದ ಕಾಣದೆ ಭಿಕ್ಷುಕರಂತೆ ಕಂಡ ಕಾರಣ ಈಗ ಇವನ್ನು ನಾವು ಕಾಣುವುದಿಲ್ಲ .ನಮ್ಮಿಂದ ಈ ಕಲಾ ಪ್ರಕಾರಗಳು ದೂರವಾಗಿವೆ .ಹಾಗೆಯೆ ನವರಾತ್ರಿಯ ಹುಲಿ ಕುಣಿತ ಹಾಗು ಇತರ ವೇಷಗಳು ಮರೆಯಾಗದಂತೆ ನಾವು ಎಚ್ಚರ ವಹಿಸಬೇಕಾಗಿದೆ,ಜೊತೆಗೆ ಆ ನವರಾತ್ರಿ ವೇಷಗಳ ಮಹತ್ವ ಮತ್ತು  ಪಾವಿತ್ರ್ಯತೆಯನ್ನೂ ಕಾಯ್ದಿತ್ತುಕೊಳ್ಳ ಬೇಕಾಗಿದೆ


                


No comments:

Post a Comment