Tuesday, 18 February 2014

ಜನಪ್ರಿಯದೈವ ಕೊರಗ ತನಿಯ- © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )

(ಫೋಟೋಗಳು:ಲೇಖಕಿಯವು)
ವೃದ್ಧರಿಂದ ಹಿಡಿದು ಎಳೆಯ ಮಕ್ಕಳವರೆಗೆ ಎಲ್ಲರು ನೋಡಿರುವ ಇಷ್ಟ ಪಡುವ ದೈವ ಕೊರಗ ತನಿಯ .ಎಲ್ಲ ಭೂತಗಳು ತನ್ನ ಉಗ್ರ ಅಟ್ಟಹಾಸ ಕುಣಿತಗಳಿಂದ ಜನರ ಮನದಲ್ಲಿ ಭಯ ಬಿತ್ತಿ ನಡುಕ ಉಂಟು ಮಾಡಿದರೆ ಕೊರಗ ತನಿಯ ಹಾಸ್ಯದ ಅಭಿವ್ಯಕ್ತಿಯಿಂದ ಜನರಿಗೆ ಹತ್ತಿರವಾಗಿದ್ದಾನೆ.ಈತ ಬಹಳ ಸಾತ್ವಿಕ ಗುಣದ ದೈವತ.ಮಕ್ಕಳಿಗೆ ಈತ ಬಹಳ ಪ್ರಿಯನಾದವನು .ಮನೆಯಲ್ಲಿ ಯಾವುದಾದರೊಂದು ವಸ್ತು ಕಾಣೆಯಾದರೆ ,ಕಳ್ಳತನವಾದರೆ ಕೊರಗ ತನಿಯನನ್ನು ನೆನೆದು ಆತನಿಗೆ ಹರಿಕೆಯಾಗಿ ಒಂದು ಕುಪ್ಪಿ ಕಳ್ಳು ಅಥವಾ ಸಾರಾಯಿ ಕೊಡುತ್ತೇನೆ ಎಂದು ಹರಿಕೆ ಹೇಳಿದರೆ ಸಾಕು ಕಳ್ಳತನ ವಾದ ವಸ್ತುಗಳು, ಕಾಣೆಯಾದ ವಸ್ತುಗಳು ಪತ್ತೆಯಾಗಿ ಬಿಡುತ್ತವೆ .ದನ ಕರುಗಳಿಗೆ ಏನಾದರು ತೊಂದರೆ ಆದರು ಕೊರಗ ತನಿಯನಿಗೆ ಮೊರೆ ಹೋಗುತ್ತಾರೆ ತುಳುವರು.ಎಲ್ಲರ ದನ ಕರು ಬೆಳೆಗಳ ರಕ್ಷಣೆಯ ಕಾರ್ಯವನ್ನು ಕೊರಗತನಿಯ ಭೂತ ಮಾಡುತ್ತದೆcopy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )
ತುಳುನಾಡಿನ ಎಲ್ಲೆಡೆಗಳಲ್ಲಿ ಆರಾಧಿಸಲ್ಪಡುವ ಕೊರಗತನಿಯ ದೈವವನ್ನು ಅಗೇಲು ಹಾಗೂ ಕೋಲ ನೀಡಿ ಆರಾಧಿಸುತ್ತಾರೆ. ಕೊರಗತನಿಯ ಕೊರಗ ಜನಾಂಗದಲ್ಲಿ ಹುಟ್ಟಿ ಅಸಹಜ ಮರಣವನ್ನಪ್ಪಿದ ಅಸಾಮಾನ್ಯ ವೀರ. ಹಾಳೆಯ ಮುಟ್ಟಾಳೆ ಧರಿಸುವ ಈ ದೈವದ ವೇಷ ವಿಶಿಷ್ಟವಾದುದು.ಇತರ ಭೂತಗಳಂತೆ ಈತನಿಗೆ ದೊಡ್ಡದಾದ ಅಣಿ ಜಕ್ಕೆಳಣಿಗಳು ಇರುವುದಿಲ್ಲ.ಈತನ ಕುಣಿತದಲ್ಲಿ ಉಗ್ರತೆ ಇರುವುದಿಲ್ಲ .ಈತನ ಹುಟ್ಟು ಕೊರಗರ ಕೊಪ್ಪದಲ್ಲಿ ಆಗುತ್ತದೆ.
 ಕೊರಗೆರ್ ಪುಟ್ಯೇರ್‌ಯಾ ಓಲು ಪನ್ನಗ
ಕಾಂತಣ ಕದ್ರಡು, ಬೆಂದ್ರಣ ಬೆದ್ರಡು
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಕನ್ನಡ ಅನುವಾದ:                                                           ಚಿತ್ರ ಕೃಪೆ :ತುಳುನಾಡ ಪೊರ್ಲು
ಕೊರಗರು ಹುಟ್ಟಿದರು, ಎಲ್ಲಿ ಎಂದು ಹೇಳುವಾಗ
ಕಾಂತಣ ಕದಿರೆಯಲ್ಲಿ, ಬೆಂದಣ ಬಿದರೆಯಲ್ಲಿ
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಎಂದು ಪ್ರಾರಂಭವಾಗುವ ಕೊರಗ ತನಿಯ ಪಾಡ್ದನವು ಕೊರಗ ಜನಾಂಗ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶವನ್ನು ಅಂದರೆ ಕದ್ರಿ, ಮೂಡಬಿದ್ರೆ, ಜಪ್ಪು, ಮೂಲ್ಕಿ ಮುಂತಾದ ಪ್ರದೇಶಗಳನ್ನು ನಿರ್ದೇಶಿಸುತ್ತದೆ. ಇಂತಹ ಒಂದು ಕೊಪ್ಪದಲ್ಲಿ ಕೊರಗ ಮತ್ತು ಕೊರಪ್ಪೊಳುಗೆ ವುರವನ ಓಡಿ ಎಂಬ ಮಗ ಹುಟ್ಟುತ್ತಾನೆ. ಈತ ಹುಡುಗಾಟ ಬಿಟ್ಟು ದೊಡ್ಡವನಾದಾಗ ಈತನಿಗೊಂದು ಒಪ್ಪುವ ಹೆಣ್ಣನ್ನು ಹುಡುಕುತ್ತಾರೆ. ಅವನ ಸೋದರಮಾವ ತಿರ್ತಮಲೆ ಕೊಪ್ಪದಲ್ಲಿ ಹುಡುಗಿ ಇದ್ದಾಳೆ ಎನ್ನುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )
 ಅಲ್ಲಿ ಕಡ್‌ಮಮಲೆಕೊಪ್ಪದಲ್ಲಿ ಇದ್ದಾಳೆ ಎಂದು ಹೇಳುತ್ತಾರೆ. ಏಳುಮಲೆಯ ಕೊರಗರೆಲ್ಲ ಸೇರಿ ಅಲ್ಲಿಗೆ ಹೋದಾಗ ಕೊರಪಳು ಮೈರೆ ತಂದೆಯ ತಲೆಯ ಹೇನು ಹೆಕ್ಕಿ ಆಯಾಸಗೊಂಡು ಮೇಲೆ ನೋಡುತ್ತಾಳೆ. ಆಗ ಮನೆಗೆ ನೆಂಟರು ಬರುವುದನ್ನು ಕಂಡು ನಮ್ಮ ಮನೆಗೆ ನೆಂಟರು ಬರುವ ಚಂದ ನೋಡು ಎನ್ನುತ್ತಾಳೆ. ಆಗ ತಂದೆ ನೀನು ಇಷ್ಟು ಚಿಕ್ಕವಳು, ನಿನಗೆ ಗಂಡಿನ ನೆನಪಾಯಿತೆ? ನಿನ್ನ ಅಂಗೈಯ ಗೆರೆ ಮಾಸಿಲ್ಲ, ಕಂಕುಳಡಿಯ ಹುಟ್ಟುಕಂಪು ಅಡಗಲಿಲ್ಲ ಎಂದು ಹೇಳುತ್ತಾನೆ. ಆಗ ಅವಳು ಆಯಾಸವಾಗಿ ತಲೆ ಎತ್ತಿ ನೋಡಿದಾಗ ಕಂಡಿತೆಂದು ಹೇಳುತ್ತಾಳೆ.

ಒಳಗೆ ಹೋಗು, ಬಾಜಿರ ಉಜ್ಜಿ ಕಸ ಗುಡಿಸಿ, ಅತ್ತರು ಹಾಕು, ನೀರು ತಾ ಮಾಡಿನಡಿಯಲ್ಲಿ ಇಡು ಎಂದು ಆದೇಶಿಸಿದ ತಂದೆ, ಮನೆಗೆ ಬಂದವರನ್ನು ಸ್ವಾಗತಿಸಿ, ಮುಟ್ಟಾಳೆಯಲ್ಲಿ ಚಿಗುರು ವೀಳ್ಯ, ಎಲೆ ಅಡಿಕೆ ಹೋಳು, ಗಡಿಗೆಯ ಕಳ್ಳು ಕೊಟ್ಟು ಸತ್ಕರಿಸುತ್ತಾನೆ. ಬಂದ ನೆಂಟರು ಕೊಡುವ ಕೊರಪಳು ಉಂಟೋ ಮಾರುವ ಡೋಲು ಉಂಟೋ? ಎಂದು ಕೇಳುತ್ತಾರೆ.

ಕೊಡುವ ಹೆಣ್ಣನ್ನು ಕೊಟ್ಟು ಆಗಿದೆ, ಮಾರುವ ಡೋಲನ್ನು ಮಾರಿ ಆಗಿದೆ ಎಂದು ಮೈರೆ ತಂದೆ ಹೇಳುತ್ತಾನೆ. ಆಗ ಕೊಟ್ಟ ಹೆಣ್ಣಿನ ಬಗ್ಗೆ ಕೇಳುವುದಕ್ಕೆ ನಾವು ಬಂದಿಲ್ಲ. ಮಾರಿದ ಡೋಲಿನ ಕ್ರಯ ಕೇಳಲಾರೆವು. ಇರುವ ಹುಡುಗಿಯನ್ನು ಕೊಡುತ್ತೀರೊ? ಎಂದು ನೆಂಟರು ಕೇಳುತ್ತಾರೆ. ಆಗ ಇರುವ ಒಬ್ಬಳೆ ಹುಡುಗಿ ತೀರ ಚಿಕ್ಕವಳು, ಏನೊಂದೂ ಕೆಲಸ ಮಾಡಿ ಅಭ್ಯಾಸವಿಲ್ಲದವಳು, ನಾಲ್ಕು ಮೂಲೆಯ ಕಸವನ್ನು ಒಂದು ಕಡೆ ಮಾಡಲರಿಯದವಳು ಎನ್ನುತ್ತಾನೆ ತಂದೆ.

ಆಗ ನಮ್ಮ ಕೊಪ್ಪದಲ್ಲಿ ಮೊದಲು ಬಂದ ಕೊರಪ್ಪೊಳು ಇದ್ದಾರೆ. ಹೇಳಿ ಕಲಿಸುತ್ತಾರೆ. ನಮಗೆ ಕಾಲ ತಡವಾಗುತ್ತದೆ ಎಂದಾಗ ಒಪ್ಪಿದ ತಂದೆ ಮದುವೆಗೆ ದಿನ ನಿಶ್ಚಯ ಮಾಡಿ ಅಡಿಕೆ ವೀಳ್ಯ ಬದಲಿಸಿಕೊಳ್ಳುತ್ತಾರೆ. ಮದುವೆಯ ಸಿದ್ಧತೆ ಆರಂಭವಾಯಿತು. ಹೆಣ್ಣಿನ ಕಡೆಯಲ್ಲಿ ಬಾಳೆ ಕಡಿದು ಅಲಂಕಾರ ಮಾಡಿ ಚಪ್ಪರ ಹೊದಿಸಿದರು. ಎರಡೂ ಕಡೆಯ ನೆಂಟರು ಬಂದು ಸೇರಿದರು. ನಾನಾವಿಧದ ಅಡಿಗೆ ಮಾಡಿಸಿದರು. ಊಟ ಉಪಚಾರ ನಡೆಯಿತು. ಕ್ರೀಡೆ, ಹಾಸ್ಯಗಳು ನಡೆದವು. ಊಟದ ನಂತರ ವುರವನ ಓಡಿಯನ್ನು ಕೊರಪಳು ಮೈರೆಯನ್ನು ಅಲಂಕರಿಸಿ ಸೇಸೆಗೆ ಪ್ರದಕ್ಷಿಣೆ ಮಾಡಿಸಿ, ಧಾರೆಮಣೆಯಲ್ಲಿ ಕುಳ್ಳಿರಿಸಿ ಕೈಧಾರೆ ಪೂರೈಸಿದರು.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ ) ಮದುವೆಯಾಗಿ ಕೆಲದಿನಗಳ ನಂತರ ಮೈರೆ ಋತುಸ್ನಾನ ಮಾಡಿದಳು. ತನ್ನ ಕೊಪ್ಪಕ್ಕೆ ಬಂದು ಇದೊಂದು ನೀರು ನಿಂತರೆ (ಗರ್ಭ ಧರಿಸಿದರೆ) ಕಾಂತಾವರ ದೇವರನ್ನು ನೋಡುವೆ, ಹಿಡಿ ಹಣ ಹರಕೆ ಹಾಕುವೆ, ಉಳ್ಳಾಯನನ್ನು ನೋಡಿ ಮೂಲಕ್ಕೆ ನೀರು ಹೊಯ್ಯುವೆ ಎಂದಳು. ಮೈರೆ ಚೊಚ್ಚಲ ಗರ್ಭ ಧರಿಸಿದಳು. ಏಳು ತಿಂಗಳಾದಾಗ ಬಯಕೆ ಸಮ್ಮಾನ ಮಾಡಿದರು.

 ಹತ್ತನೇ ತಿಂಗಳಿನಲ್ಲಿ ಬೆನ್ನಿನಲ್ಲಿ ಬ್ರಹ್ಮದೇವರ ಬೇನೆ, ಹೊಟ್ಟೆಯಲ್ಲಿ ಮಗುವಿನ ಬೇನೆ ಬರುತ್ತದೆ. ಕಂಡ ಬೇನೆಯಲ್ಲಿ ನಮ್ಮ ಕೊರಪಳು ಮೈರೆ ಮಗುವನ್ನು ಪಡೆದರೆ ನಾವು ನಂಬಿದ ಕುಲದೈವಗಳಿಗೆ ಕೋಳಿ ಅಟ್ಟು ಔತಣ ಕೊಡುತ್ತೇವೆ ಎಂದು ಹರಿಕೆ ಹೇಳಿದರು. ಗಂಡುಮಗುವಿಗೆ ಜನ್ಮವಿತ್ತಳು ಮೈರೆ. ಹನ್ನೊಂದನೆಯ ದಿನ ಅಮೆ ಮಾಡಿದರು.

 ಶನಿವಾರ ಹುಟ್ಟಿದ ಮಗುವಿಗೆ ತನಿಯ ಎಂದು ಹೆಸರಿಟ್ಟರು. ಮಗುವನ್ನು ನೋಡುವಾಗ ಈಶ್ವರ ದೇವರ ಶಾಪ ನೆನಪಾಗುತ್ತದೆ ಮೈರೆಗೆ. ಅವಳ ಮದುವೆಯಾದ ಹೊಸತರಲ್ಲಿ ಕಾಡಿಗೆ ಹೋಗಿ ಬಳ್ಳಿ ಹೆರೆಯುತ್ತಿರುವಾಗ ಲೋಕಬಾರಿ ಈಶ್ವರದೇವರು ಬಂದು, ಮೈರೆಯ ಮುಡಿ ನೋಡಿ ಪಾರ್ವತಿಯಂತೆ ಭಾಸವಾಗಿ ಅವಳಲ್ಲಿ ಮೋಹಗೊಳ್ಳುತ್ತಾರೆ. ಅವಳನ್ನು ಮೋಹಿಸಿ ಸೇರಲು ಬಂದ ಈಶ್ವರನನ್ನು ದೇವರೆಂದು ಉಪಚರಿಸಿ, ತಂದೆಯೆಂದು ಗೌರವ ತೋರಿ ದೂರ ಇರಿಸುತ್ತಾಳೆ. ಆ

ಗ ಈಶ್ವರ ದೇವರು ನಿನ್ನ ಹೊಟ್ಟೆಯಲ್ಲಿ ಗಂಡು ಹುಳ ಹುಟ್ಟಲಿ. ಅದು ಹುಟ್ಟಿದ ನಂತರ ನಿನ್ನ ಸಂತಾನ ನಾಶವಾಗಲಿ ಎಂದು ಶಾಪ ಕೊಟ್ಟಿರುತ್ತಾನೆ. ಈಶ್ವರದೇವರ ಶಾಪವೊ ಎಂಬಂತೆ ಕೊರಗ ತನಿಯ ಮೊಲೆ ಹಾಲು ಕುಡಿಯವ ಸಮಯದಲ್ಲಿ ತಾಯಿಗೆ ಅಳಿವಾಗುತ್ತದೆ. ಅಪ್ಪನ ಹಿಡಿಯೂಟ (ಗಂಜಿಯೂಟ) ತಿನ್ನುವ ಸಮಯದಲ್ಲಿ ತಂದೆ ಸಾಯುತ್ತಾನೆ. ಅತ್ತೆ ಅಕ್ಕರೆಯಿಂದ ಸಾಕಲು ಅತ್ತೆಯೂ ಅಳಿಯುತ್ತಾಳೆ. ಏಳು ಕೊಪ್ಪದ ಕೊರಗರಿಗೆ ನಾಲ್ಕು ದಿಕ್ಕಿನ ಮಾರಿ ತಂದು ಕೊರಗರೆಲ್ಲ ಅಳಿದು ಹೋಗುತ್ತಾರೆ.

ಕೊರಗ ತನಿಯನಿಗೆ ದಿಕ್ಕು ದೆಸೆ ತಪ್ಪಿತು. ಕೊರಗ ತನಿಯ ಒಂಟಿಯಾಗುತ್ತಾನೆ. ಇರಲು ಕೊಪ್ಪವಿಲ್ಲ.
ಊರು ಬಿಟ್ಟು ಹೊರಟ. ಬಡಗುದೇಶಕ್ಕೆ ಬಂದು ಕಲ್ಲಾಪು ಮುಟ್ಟಿದ. ನೂರಾರು ಜನರು ಹೋಗುವ ದಾರಿಯಲ್ಲಿ ಕುಳಿತ. ಬಿಳಿಯ ಮರಳನ್ನು ಅಕ್ಕಿಯಂತೆ ಪಸರಿಸಿದ. ದಡ್ಡಾಲದ ಕಾಯನ್ನು ತೆಂಗಿನಕಾಯಿಯೆಂದು ಇರಿಸಿದ. ಕಾಸರಕನ ಸೊಪ್ಪನ್ನು ವೀಳ್ಯದೆಲೆಯನ್ನು ಇಟ್ಟು ಬಾಲ್ಯಸಹಜ ಹುಡುಗಾಟದಿಂದ ನಗಾಡುತ್ತಿದ್ದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )
ಒಂಟಿತನ ಆವರಿಸಿದಾಗ ಅಳುತ್ತಿದ್ದ. ಆ ಸಮಯದಲ್ಲಿ ಕದಿರೆಯ ಮಂಜದಿಂದ ಬಿದಿರೆಯಲ್ಲಿ ಕಳ್ಳನ್ನು ಹೇರಿಕೊಂಡು ಹೋಗುತ್ತಿದ್ದ ತಾಯಿ ಬೈರಕ್ಕೆ, ಮಗಳು ಮಂಜಕ್ಕೆ, ತಮ್ಮ ಚೆನ್ನಯರು ಇವನನ್ನು ನೋಡುತ್ತಾರೆ. ಒಮ್ಮೆ ನಗುವ ಒಮ್ಮೆ ಅಳುವ ಇವನ ಚಂದವನ್ನು ನೋಡಿ, ತಾಯಿ ಬೈರಕ್ಕೆಯು ಹತ್ತಿರ ಬಂದು ಹೇಳುತ್ತಾಳೆ. ಆಗ ಕೊರಗ ತನಿಯ ಓಡಿ ಹೋಗಿ ತಡಮೆಯಲ್ಲಿ ನಿಲ್ಲುತ್ತಾನೆ. ಬೈರಕ್ಕೆ ಬೈದ್ಯೆದಿ ಇವನನ್ನು ನೋಡಿ ಯಾರೋ ಮಗು ತಡಮೆ ಬಿಡು, ದಾರಿ ಬಿಡು ಎನ್ನುತ್ತಾರೆ. ತಡಮೆ ಬಿಡಲು, ಹಾದಿ ತೆರವು ಮಾಡಲು ನನಗೆ ಸೊಂಟಕ್ಕೆ ಬಟ್ಟೆ ಇಲ್ಲ ಎನ್ನುತ್ತಾನೆ ಕೊರಗ ತನಿಯ.

ಆಗ ಬೈರಕ್ಕೆ, ಕಳ್ಳಿನ ಗಡಿಗೆ ಇಳಿಸಿ ಸಿಂಬಿಯ ಬಟ್ಟೆ ತೆಗೆದು ಸೊಂಟಕ್ಕೆ ಬಟ್ಟೆ ನೀಡಿದಳು. ಸೊಂಟಕ್ಕೆ ಅರಿವೆ ಕಟ್ಟಿಕೊಂಡ ಕೊರಗ ಜೋರಾಗಿ ಅತ್ತ. ಆಗ ಮರುಕಗೊಂಡ ಬೈರಕ್ಕೆ ಆತನ ಬಗ್ಗೆ ವಿಚಾರಿಸಿದಾಗ ತನಗೆ ತಾಯಿ ಇಲ್ಲ. ತಂದೆ ಅಳಿದಿದ್ದಾನೆ. ಏಳು ಕೊಪ್ಪದ ಕೊರಗರೆಲ್ಲ ಅಳಿದು ಹೋದರು. ಕುಳ್ಳಿರುವೆನೆಂದರೆ ಕೊಪ್ಪವಿಲ್ಲ. ದಿಕ್ಕು ಬಿಟ್ಟು ದೇಶಾಂತರ ಹೋಗುವೆ, ದುಡಿಯಲು ಬೇಕಾದಷ್ಟು ಇರುವ ರಾಜ್ಯಕ್ಕೆ, ಉಣ್ಣಲು ಬೇಕಾದಷ್ಟು ಇರುವ ಸೀಮೆಗೆ ಹೋಗುವೆ ಎಂದು ಹೇಳುತ್ತಾನೆ.

ಅವನ ಮೇಲಿನ ಮರುಕ ಅಕ್ಕರೆಗೆ ತಿರುಗಿ ಹಾಗೆ ಹೋಗುವ ಮಗನಾದರೆ ನನ್ನೊಡನೆ ಬಾ, ನನಗೆ ಇಬ್ಬರು ಮಕ್ಕಳಿದ್ದಾರೆ. ನೀನು ಸೇರಿ ಮೂವರು ಆದಿರಿ ಎಂದು ಹೇಳುತ್ತಾಳೆ ಬೈರಕ್ಕೆ ಬೈದ್ಯೆದಿ. ಅನಂತರ ಅವನ ಬಳಿಯನ್ನು ಯಾವ ಮೂಲದವನು? ಯಾವ ಸಾಲದವನು? ಎಂದು ಕೇಳುತ್ತಾರೆ. ಆಗ ಆತ ನನಗೆ ಸಾಲವೆಂದರೆ ತಾಯಿ ಕದ್ರ ಕಾಂತಣದೇವರದು. ಮೂಲವೆಂದರೆ ಎಣ್‌ಸೂರ ಮೂಲ. ಬಳಿಯೆಂದರೆ ಸೋಮನತ್ತ ಬಳಿ ಎಂದು ಹೇಳುತ್ತಾಳೆ. ಹಾಗಾದರೆ ನೀನು ನಮ್ಮ ಬಳಿಯವನು ಬಾ ಹೋಗೋಣ ಎಂದು ಕರೆದುಕೊಂಡು ಹೋದಳು ಬೈರಕ್ಕೆ. ಅವನನ್ನು ಹೊರಗಿನ ಮಗನಂತೆ ಪ್ರೀತಿಯಿಂದ ಸಾಕಿದರು.
ಕೊರಗ ತನಿಯ ಬಂದ ಲಕ್ಷಣದಲ್ಲಿ ಸಿರಿ ಸಂಪತ್ತು ತುಂಬಿತು ಆ ಮನೆಯಲ್ಲಿ. ಕೊರಗ ತನಿಯ ತನ್ನ ಕುಲ ಕಸುಬನ್ನು ಕಲಿಯುತ್ತಾನೆ.
ಬಿದಿರಿನಿಂದ ಬುಟ್ಟಿ, ಕಣಜ, ಕೈಕುಡುಪು ಮಾಡಿ ಊರು ಕೇರಿಯಲ್ಲಿ ಮಾರಲು ತೊಡಗಿದ. ಹೀಗೆ ಹಲವು ದಿನ ಕಳೆಯಲು, ಅವರ ಮೂಲಸ್ಥಾನದಲ್ಲಿ ಮರ‍್ಲುಜುಮಾದಿ, ಮಾಡಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿಗಳಿಗೆ ಅಂಕ, ಅಯನ ಕೋಳಿಕಟ್ಟ, ಕಂಬಳ ನೇಮ ಸಿರಿ ಎಂದು ನಿರ್ಧಾರವಾಯಿತು. ಎಣಸೂರು ಬಾರಿಗೆಯಿಂದ ಏಳು ಜನ ಹೊರುವಷ್ಟು ತೆಂಗಿನ ಎಳೆಯ ಗರಿ, ಬಾಳೆ ಸೀಯಾಳ ಹೋಗಬೇಕು. ಎಳೆಯ ಗರಿ ಬಾಳೆ ಹೊರಲು ಬೈಲಬಾಕುಡ, ಓಣಿಯ ಮುಗ್ಗೇರ, ಹುಣೆಮಟ್ಟು ಮುಂಡಾಲದವರು ಯಾರೂ ಸಿಗಲಿಲ್ಲ.

ಆಗ ಚೆನ್ನಯ ಬೈದ್ಯರು ಹೊರಗಿನ ಆಳು ಬೇಡ ನಮಗೆ, ನಾವು ಸಾಕಿದ ಮಗ ಕೊರಗ ತನಿಯ ಇದ್ದಾನೆ. ಅವನಲ್ಲಿ ಎಳೆ ಗರಿ ಸೀಯಾಳ ಹೊರಿಸುವ ಎಂದು ಹೇಳುತ್ತಾರೆ. ಎಳೆ ಗರಿ ಸೀಯಾಳ ಹೊರುವೆಯಾ? ಎಂದು ತಾಯಿ ಕೇಳಿದಾಗ ಏಳು ಜನರ ಹೊರೆ ಒಬ್ಬನೇ ಹೊರುತ್ತೇನೆ. ಆದರೆ ಏಳು ಮಡಿಕೆ ಕಳ್ಳು ಕೊಡಬೇಕು. ಏಳು ಜನರ ಉಣಿಸು ಕೊಡಬೇಕು. ಮೂವತ್ತು ಬಂಗುಡೆಯ ಪಲ್ಯ ಬೇಕು. ಏಳು ಜನರ ಅಡಿಕೆ ವೀಳ್ಯ ಕೊಡಬೇಕು. ಏಳು ಜನರ ಭತ್ತ ಕೊಡಬೇಕು ಎಂದು ಹೇಳುತ್ತಾನೆ. ಹಾಗೆಯೇ ಆಗಲೆಂದು ತಾಯಿ ಒಪ್ಪುತ್ತಾರೆ. ಅಲ್ಲಿಂದ ಎದ್ದ ಕೊರಗ ತನಿಯ ತೆಂಗಿನಮರಕ್ಕೆ ಹತ್ತಿ ಎಪ್ಪತ್ತು ತೆಂಗಿನ ಎಳೆಯ ಗರಿ, ಸೀಯಾಳ ಎಪ್ಪತ್ತು ಸಿಂಗಾರ ಹೂವು ತೆಗೆದು, ಏಳು ಜನರ ಹೊರೆಯನ್ನು ಒಂದು ಹೊರೆಯಾಗಿ ಕಟ್ಟಿ ಎತ್ತಿ ಹೆಗಲಿಗೇರಿಸಿ ಎಣ್ಸೂರ ಅಂಗಳಕ್ಕೆ ತಂದು ಹಾಕಿದ. ತಾಯಿ ಕೊಟ್ಟ ಏಳು ಕುಡಿಕೆ ಕಳ್ಳು ಕುಡಿದು. ಏಳು ಜನರ ಉಣಿಸು ಉಂಡ. ಮೂವತ್ತು ಕಿರು ಬಂಗುಡೆ ಮೀನಿನ ಪಲ್ಯ ತಿಂದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ ) ಏಳು ಜನರ ವೀಳ್ಯ ಅಡಿಕೆ ತಿಂದ. ಏಳು ಜನರು ಹೊರುವ ಹೊರೆಯನ್ನು ಅಂಗಳದಿಂದ ಎತ್ತಿದ. ಪಾದದಿಂದ ಮೊಣಕಾಲಿಗಿಟ್ಟ. ಅಲ್ಲಿಂದ ಹೆಗಲಿಗೆ, ಹೆಗಲಿನಿಂದ ತಲೆಗೆ ಇಟ್ಟ.
ಅಂಗಳದಿಂದ ಕೆಳಗೆ ಇಳಿದು ತಿರುಗಿ ನೋಡಿ, ಬಿಕ್ಕಿ ಬಿಕ್ಕಿ ಅತ್ತ. ಈವರೆಗೆ ನನ್ನನ್ನು ಸೋಗದಲ್ಲಿ ಸಾಕಿಕೊಂಡು ಇದ್ದಿರಿ ತಾಯಿ, ಇವತ್ತು ಬೆನ್ನು ಹಾಕಿ ಹೋದವನು ಹೊಟ್ಟೆ ತೋರಿಸಿಕೊಂಡು ಬರುವೆನೆಂದು ನಂಬಬೇಡಿ ಎಂದು ಹೇಳುತ್ತಾನೆ. ಅಯ್ಯೋ ಮಗ, ನೀನು ಬಂದಾಗ ನಮಗೆ ದನಕರು ಹೆಚ್ಚಿ ಎಲ್ಲ ಸೌಭಾಗ್ಯ ಉಂಟಾಯಿತು. ಇವತ್ತು ಇಂಥಾ ಮಾತು ಹೇಳಿ ಹೋಗುತ್ತಿರುವೆಯಲ್ಲ! ನಿನಗೆ ಅವಮಾನ ಎನಿಸುವುದಾದರೆ, ಕುಟುಂಬಕ್ಕೆ ಅಪವಾದ ಬರುವುದಿದ್ದರೆ ನೀನು ಹೊರಬೇಡ ಎಂದಳು ತಾಯಿ ಬೈರಕ್ಕೆ ಬೈದ್ಯೆದಿ.

ತಲೆಗಿಟ್ಟ ಹೊರೆಯನ್ನು ಮತ್ತೆ ಕೆಳಗೆ ಇರಿಸಲಾರೆ ಎಂದು ಹೊರೆ ಹೊತ್ತುಕೊಂಡು ಕಿನ್ನಿಕೊಡಂಗೆದಾಯ, ಇಷ್ಟದೇವತೆ ಲೆಕ್ಕೇಸಿರಿಯ ಮಾಡದ ಹತ್ತಿರ ಮುಟ್ಟಿದ. ದೂರದಿಂದ ಇವನನ್ನು ನೋಡಿ ನೇಮದ ಮಂದಿ, ಕಾಡ ಕೊರಗರ ಹೈದ ಎಳೆಯ ಗರಿ ಬಾಳೆ ತರುವುದಿದ್ದರೆ ಮಾಡಕ್ಕೆ ಮುಟ್ಟಿಸಬಾರದು, ಮಾಡಕ್ಕೆ ದೂರದಲ್ಲಿ ಇಳಿಸಬೇಕು. ದೂರ ಕುಳಿತಿರಬೇಕು ಎಂದು ಹೇಳಿದರು. ನಾನು ತಂದ ತೆಂಗಿನ ಗರಿ ಬಾಳೆ ಆದೀತು. ಮಾಡಕ್ಕೆ ಮುಟ್ಟಿಸಲು ಯಾಕೆ ಆಗದು? ಎಂದು ಕೇಳಿದ. ಮಾಡಕ್ಕೆ ಸಮೀಪದಲ್ಲಿಯೇ ಕುಳಿತ. ಮಾಡದ ಮೇಲೆ ನೋಡುವಾಗ ಕೈಪುರದ ಹುಳಿ ಕಂಡಿತು. ಮನೆಯಲ್ಲಿ ಮಾವಿನ ಉಪ್ಪಿನಕಾಯಿ ಮುಗಿದಿದೆ ಎಂದು ಅಮ್ಮ ಹೇಳಿದ್ದು ನೆನಪಾಗಿ, ಅಮ್ಮನಿಗೆ ಇಷ್ಟವಾದ ಕೈಪುರದ ಹುಳಿಯನ್ನು ಕೊಯ್ಯಲು ಒಂದು ಕಾಲನ್ನು ಮಾಡದ ಕಲಶಕ್ಕೆ ಇಟ್ಟ. ಗೆಲ್ಲು ಬಗ್ಗಿಸಿ ಹುಳಿ ಕೊಯ್ಯುವಾಗ ಒಳಗೆ ತೂಗುಯ್ಯಾಲೆಯಲ್ಲಿ ಇದ್ದ ಮಾಡ ಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿ ಭೂತಗಳು ತುದಿಗಣ್ಣಿನಲ್ಲಿ ನೋಡಿ ಮಾಯಾಸ್ವರೂಪ ಮಾಡಿದರು. ಮುಂದೆ ಕೊರಗತನಿಯ ದೈವಗಳ ಸೇರಿಗೆಯಲ್ಲಿ ಸಂದು ಹೋಗಿ ಆರಾಧನೆ ಪಡೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )
ಕೊರಗ ತನಿಯ ಕಥಾನಕದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ದುರಂತಗಳ ಸರಮಾಲೆಯನ್ನು ಕಾಣುತ್ತೇವೆ. ಕೊರಗ ತನಿಯನ ತಂದೆ-ತಾಯಿ ವುರವನ ಓಡಿ ಹಾಗೂ ಮೈರೆಯರು ವಿವಾಹವಾದ ಹೊಸತರಲ್ಲಿಯೇ ಈಶ್ವರ ದೇವರ ಆಗ್ರಹಕ್ಕೆ ತುತ್ತಾಗಬೇಕಾಗುತ್ತದೆ. ಕಾಡಿನಲ್ಲಿ ಬಳ್ಳಿಯನ್ನು ಹೆರೆಯಲು ಹೋದಾಗ ಬೇಟೆಗೆ ಬಂದ ಈಶ್ವರಬಾರಿದೇವರು ಮೈರೆಯ ಮುಡಿಯನ್ನು ನೋಡಿ, ಅವಳು ಪಾರ್ವತಿಯಂತೆ ಭಾಸವಾಗಿ ಅವಳನ್ನು ಮೋಹಿಸುತ್ತಾರೆ.

 ಅವಳು ನಿರಾಕರಿಸಿದಾಗ ಅವಳಿಗೆ ಗಂಡುಮಗು ಹುಟ್ಟಿದ ನಂತರ ಅವಳ ವಂಶ ನಿರ್ವಂಶವಾಗುವಂತೆ ಶಾಪ ಕೊಡುತ್ತಾರೆ. ಶಾಪ ಕೊಡಲು ಇಲ್ಲಿ ಮೈರೆಯ ತಪ್ಪಾದರೂ ಏನಿತ್ತು? ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡದ್ದು ಅವಳ ತಪ್ಪೇ? ತಾನೊಲಿದವಳು ತನಗೊಲಿಯಲಿಲ್ಲ ಎಂಬ ಕಾರಣಕ್ಕೆ ಮಗು ಹುಟ್ಟಿದ ನಂತರ ವಂಶ ಅಳಿಯುವಂತೆ ಶಾಪ ಕೊಟ್ಟರೆ, ಇದರಿಂದ ಈಶ್ವರದೇವರು ಸಾಧಿಸಿದ್ದಾದರೂ ಏನನ್ನು? ಎಂಬ ಪ್ರಶ್ನೆ ಉಂಟಾಗುತ್ತದೆ.

ಹುಟ್ಟಿದ ಮಗು ತಂದೆ-ತಾಯಿಯರನ್ನು, ಬಂಧು ಬಳಗವನ್ನು ಕಳೆದುಕೊಂಡು, ಅನಾಥನಾಗಿ ದಿಕ್ಕಿಲ್ಲದವನಾಗಿ ಬೆಳೆದರೆ, ಮೈರೆಯ ಮೇಲೆ ದ್ವೇಷ ಸಾಧಿಸಿದಂತೆ ಆಗುತ್ತದೆಯೇ? ಇಷ್ಟಕ್ಕೂ ಬಂದಾತ ಈಶ್ವರ ದೇವರೆಯೆ? ಹಿಂದೆ ನಮ್ಮಲ್ಲಿ ಆಳುವ ರಾಜರನ್ನು, ಅವರ ಪರಿವಾರದವರನ್ನು ದೇವರಿಗೆ ಸಮೀಕರಿಸುವ ಪರಿಪಾಠವಿತ್ತು. ಆದ್ದರಿಂದ ಬೇಟೆಗೆ ಬಂದವರು ಆಳುವ ವರ್ಗದವರು ಯಾರೋ ಇದ್ದಿರಬೇಕು. ಮೈರೆ ಆತನನ್ನು ತಿರಸ್ಕರಿಸಿದಾಗ ಅವಮಾನಗೊಂಡು ಹಿಂತಿರುಗಿದವರು ಸ್ವಲ್ಪ ಸಮಯದ ನಂತರ ಸೇನೆಯೊಂದಿಗೆ ಬಂದು ಆಕ್ರಮಣ ಮಾಡಿರಬಹುದು.

ಈ ಗಲಭೆಯಲ್ಲಿ ಕೊರಗರೆಲ್ಲ ಎಲ್ಲೆಲ್ಲೋ ಚದುರಿ ಹೋಗಿರಬಹುದು. ಕಷ್ಟಕ್ಕೀಡಾಗಿ ಅಜ್ಞಾತವಾಗಿ ಬದುಕಬೇಕಾಗಿ ಬಂದ ಮೈರೆ ಮತ್ತು ವುರವನ ಓಡಿಗಳಿಗೆ ಸರಿಯಾದ ಆಹಾರ, ಔಷಧಗಳು ಸಿಕ್ಕದೆ ಮರಣವನ್ನಪ್ಪಿರಬಹುದು. ಅಥವಾ ನೇರವಾಗಿ ಆಳುವ ವರ್ಗದ ಅಥವಾ ಮೇಲು ವರ್ಗದವರ ಆಕ್ರಮಣಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು. ಎಳೆಯ ಮಗು ಕೊರಗತನಿಯ ಹೇಗೋ ಬದುಕಿ ಉಳಿದು, ಬೈರಕ್ಕೆಯ ಮಾತೃವಾತ್ಸಲ್ಯದಿಂದ ಬೆಳೆದು ದೊಡ್ಡವನಾಗಿ, ಅಪ್ರತಿಮ ಬಲಶಾಲಿಯೂ ವೀರನೂ ಸಾಹಸಿಯೂ ಆಗಿ ಬೆಳೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )  ಕಾಡ ಕೊರಗರ ಹೈದ ಮಾಡವನ್ನು ಮುಟ್ಟಬಾರದು ಎಂದು ನೇಮದ ಮಂದಿ ಹೇಳಿದ್ದು, ಅವನ ಆತ್ಮಾಭಿಮಾನವನ್ನು ಕೆಣಕುತ್ತದೆ. ತಾನು ತಂದ ಗರಿ, ಬಾಳೆ, ಸೀಯಾಳ ಆಗುತ್ತದೆ ತಾನು ಆಗುವುದಿಲ್ಲವೇ ದೈವಕ್ಕೆ? ಎಂದು ಪ್ರಶ್ನಿಸಿ ದೂರದಿಂದಲೇ ಮಾಡದೊಳಕ್ಕೆ ಹೊರೆಯನ್ನು ಹಾಕುತ್ತಾನೆ. ಮಾಡದ ಸಮೀಪ ಬಂದು ಕುಳಿತುಕೊಳ್ಳುತ್ತಾನೆ. ಇವನ ಉದ್ಧಟತನ ಅಲ್ಲಿಯವರಿಗೆ ಹಿತವಾಗುವುದಿಲ್ಲ. ಬಹುಶಃ ಆತನ ದುರಂತ ಸಾವು ಈ ಸಂದರ್ಭದಲ್ಲಿಯೇ ಆಗಿರಬಹುದು. ಮೇಲ್ವರ್ಗದ ಆಗ್ರಹಕ್ಕೆ ತುತ್ತಾಗಿ ಆತ ದುರಂತ ಕ್ಕೀಡಾಗಿರಬೇಕು. ಅನಂತರ ಆತನ ಮರಣಕ್ಕೊಂದು ಸರಿಯಾದ ಕಾರಣದ ಕತೆಯ ಸೃಷ್ಟಿಯಾಗಿರಬಹುದು. ಮಾಡದ ಕಲಶವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಾಗ, ದೈವದ ಆಗ್ರಹಕ್ಕೊಳಗಾಗಿ ಮಾಯಾಸ್ವರೂಪ ಆದನು ಎಂಬ ಕತೆ ರೂಪಗೊಂಡಿರಬಹುದು.

 ಕೊರಗ ತನಿಯ ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿದ್ದರೂ ಕೂಡ ಆತ ಉದ್ಧಟನಲ್ಲ. ಬೀರಕ್ಕೆ ಬೈದಿತಿ ಹಾಗೂ ಬೆಳೆದ ಮನೆ ಊರಿನ ಮೇಲೆ ಅವನಿರಿಸಿದ ಪ್ರೀತಿ ಅಭಿಮಾನವೇ ಇದಕ್ಕೆ ಸಾಕ್ಷಿ. ಅಂತಹವನು ಮಾಡ ಭೂತ ಸ್ಥಾನ /ದೇವಾಲಯ ಕಳಸವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಿದ್ದಾನೆ ಎಂದು ನಂಬುವುದಕ್ಕಾಗುವುದಿಲ್ಲ. ಸಾಮಾನ್ಯವಾಗಿ ಯಾರೂ ದೈವ-ದೇವಸ್ಥಾನಗಳ ಕಳಸವನ್ನು ಮುಟ್ಟುವುದಿಲ್ಲ. ಹಾಗಿರುವಾಗ ಈತ ಮೆಟ್ಟಿದ್ದಾನೆ ಎನ್ನುವ ವಿಚಾರ ಸರಿ ಎನಿಸುವುದಿಲ್ಲ. ಇನ್ನು ಮಾಡಕ್ಕೆ ಮುಟ್ಟಿಕೊಂಡಿರುವ ಕೈಪುರದ ಹುಳಿಯನ್ನು ಕೊಯ್ದಿರುವ ಸಾಧ್ಯತೆ ಇದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )
 ಆಗ ಮಾಡ ಅಶುದ್ಧವಾಯಿತೆಂದು ಮೇಲ್ವರ್ಗದವರು ಗಲಭೆ ಮಾಡಿ ಆಳುವ ಒಡೆಯನಿಗೆ ದೂರು ಹೋಗಿ, ಆ ಒಡೆಯ ಮೈರೆಯನ್ನು ಮೋಹಿಸಿದಾತನೇ ಆಗಿದ್ದು, ಈ ಕೊರಗ ತನಿಯನ ಮೇಲೆ ಸೇಡು ತೀರಿಸಿಕೊಂಡಿರುವ ಸಾಧ್ಯತೆ ಇದೆ. ಅಥವಾ ಮಾಡದ ಎದುರಿನಲ್ಲಿಯೇ ವರ್ಣವೈಷಮ್ಯದ ಗಲಭೆಯಾಗಿ ಕೊರಗ ತನಿಯ ದುರಂತವನ್ನಪ್ಪಿರುವ ಸಾಧ್ಯತೆ ಇದೆ. ಮರದಿಂದ ಅಥವಾ ಮಾಡದಿಂದ ಕಾಲುಜಾರಿ ಬಿದ್ದು ಸತ್ತಿರುವ ಸಾಧ್ಯತೆಯೂ ಇದೆ.

ತುಳುನಾಡಿನ ಸಂಪ್ರದಾಯದಂತೆ ಅಸಹಜ ಸಾವನ್ನಪ್ಪಿದ ಅಸಾಮಾನ್ಯ ಅಸಹಾಯ ಶೂರರು ದೈವತ್ವಕ್ಕೇರಿ ಆರಾಧಿಸಲ್ಪಡುವಂತೆ ಕೊರಗ ತನಿಯ ಕೂಡ ಆರಾಧಿಸಲ್ಪಡುತ್ತಿದ್ದಾನೆ. ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸುವ ಪ್ರಸ್ತಾಪ ಪಾಡ್ದನದಲ್ಲಿ ಎಲ್ಲಿಯೂ ಬರುವುದಿಲ್ಲ. ತಾನು ಮಾಯಾ ಸ್ವರೂಪ ಹೊಂದಿದ ನಂತರವೂ ಉಂಡ ಮನೆಗೂ ಊರಿಗೂ ಹಿತವನ್ನೇ ಮಾಡುತ್ತೇನೆ ಎಂಬ ಆತನ ಮಾತು ದೀರ್ಘಕಾಲ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗ )                                       ( ನನ್ನ ಭೂತಗಳ ಜಗತ್ತು ಕೃತಿಯ ಆಯ್ದ ಭಾಗ)8 comments: