Tuesday, 18 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 27 ಮಂಗಳೂರಿನ ಅರಬ್ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

                                   
                          ವಿಜಯ ಕರ್ನಾಟಕದಲ್ಲಿ ಇಂದು (18-03 -201 4 ) ರಂದು ಪ್ರಕಟವಾದ ನನ್ನ  ಲೇಖನ
ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ  ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ  ದೇಶ ,ಜಾತಿ ಧರ್ಮದ ಮಿತಿ ಇಲ್ಲ.
 ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ .ಮಲರಾಯಿ ದೈವದ ಕೋಪಕ್ಕೆ ತುತ್ತಾಗಿ ದೈವತ್ವ ಹೊಂದಿದ ಭೂತ ಅರಬ್ಬಿ ಭೂತ .

 ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಪ್ರಧಾನ ದೈವ ಮಲರಾಯಿಯ ಸೇರಿಗೆಯ ದೈವವಾಗಿ ಅರಬ್ಬಿ ಭೂತ ಆರಾಧನೆ ಪಡೆಯುತ್ತಿದೆ . ಹೆಸರೇ ಸೂಚಿಸುವಂತೆ ಈ ದೈವತದ ಮೂಲ ಒಬ್ಬ ಅರಬ್ ವ್ಯಕ್ತಿ. ಈತನೊಬ್ಬ ಖರ್ಜೂರ ವ್ಯಾಪಾರಿ. ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ. ಅಲ್ಲಿ ಒಂದು ನೀರಿನ ಕಟ್ಟ ಇರುತ್ತದೆ. ಅಳಕೆ ಮೇಲ್ಮನೆಗೆ ಸೇರಿದ ಅವಿವಾಹಿತ ಹೆಣ್ಣು ಮಗಳು ತಿಂಗಳ ಸೂತಕ ಸ್ನಾನಕ್ಕೆ ಬಂದವಳು ಕಟ್ಟದ ನೀರಿಗಿಳಿದು ಸ್ನಾನ ಮಾಡುತ್ತಿರುತ್ತಾಳೆ. ಅವಳನ್ನು ನೋಡಿದ ಆ ಅರಬ್ ದೇಶದ ಖರ್ಜೂರ ವ್ಯಾಪಾರಿಯು ಅವಳಲ್ಲಿ ವ್ಯಾಮೋಹಗೊಂಡು ಅವಳ ಮೇಲೆ ಅತ್ಯಾಚಾರಕ್ಕೆ ಮಾಡಲು ಹೋಗುತ್ತಾನೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಅವಳು ತನ್ನ ಕುಲದೈವ ಮಲರಾಯಿ ಧೂಮಾವತಿಯಲ್ಲಿ ಮಾನರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಮಲಾರಾಯಿ ಧೂಮಾವತಿ ದೈವ ಅವಳನ್ನು ಮಾಯ ಮಾಡಿ ಅವಳ ಮಾನರಕ್ಷಣೆ ಮಾಡಿದ್ದಲ್ಲದೆ ತನ್ನ ಸೇರಿಗೆ ದೈವವಾಗಿಸಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅವಳು ಬ್ರಾಂದಿ (ಬ್ರಾಹ್ಮಣತಿ)ಭೂತವಾಗಿ ಅಲ್ಲಿ ಆರಾಧನೆ ಪಡೆಯುತ್ತಾಳೆ 
  .ಆ ಆರಬ್ ವ್ಯಾಪಾರಿಯನ್ನು ಶಿಕ್ಷಿಸುವ ಸಲುವಾಗಿ ಆತನನ್ನು ಮಾಯ ಮಾಡುತ್ತದೆ ಮಲರಾಯಿ ದೈವ . ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾದರೂ ದೈವದ ಸೇರಿಗೆಗೆ ಸೇರಿ ದೈವತ್ತ್ವ ಪಡೆಯುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವಾಗಿದೆ. ಅಂತೆಯೇ ಈ ಅರಬ್ ವ್ಯಾಪಾರಿ ಕೂಡ ದೈವತ್ತ್ವವನ್ನು ಪಡೆದು ಅರಬ್ಬಿ ಭೂತ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ಭೂತದ ಕಲ್ಲು ಇದೆ. ಆ ಬ್ರಾಹ್ಮಣ ಹುಡುಗಿ ಸ್ನಾನ ಮಾಡಿದ ನೀರಿನ ಕಟ್ಟ ಈಗ ಕೂಡ ಅಲ್ಲ್ಲಿದೆ ಅವಳ ನೇವಳಡ ಗುರುತು ಎಂಬ ಒಂದು ಗೆರೆ ಅಲ್ಲಿನ ಪಾದೆಕಲ್ಲಿನ ಮೇಲೆ ಇದೆ .ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಮ್ದಲಾಗುವ ಸಣ್ಣ ಸಣ್ಣ ಗುರುತುಗಳನ್ನ್ನು ಅಲ್ಲಿನ ಸ್ಥಳಿಯರು ತೋರುತ್ತಾರೆ
.              ಬ್ರಾಹ್ಮಣತಿ ಬೂತೋ ಚಿತ್ರ ಕೃಪೆ :ನಮ್ಮ ಸತ್ಯೊಲು
ಅರಬ್ಬಿ ಭೂತಕ್ಕೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ .ಬ್ರಾಹ್ಮಣತಿ (ಬ್ರಾಂದಿ )ಭೂತಕ್ಕೆ ಒಂದು ಕಟ್ಟೆ  ಇದೆ.ಆ ಕಟ್ಟೆ ಯ ಹತ್ತಿರ  ಈ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ .ಮಲರಾಯಿ ಧೂಮಾವತಿ ದೈವದ ನೇಮಕ್ಕೆ ಮೊದಲು ಬ್ರಾಹ್ಮಣ ಕನ್ಯೆ(ಬ್ರಾಂದಿ ಭೂತ) ಮತ್ತು ಅರಬ್ಬಿ ಭೂತಕ್ಕೆ ನೇಮ ನೀಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಅರಬ್ಬಿ ಭೂತವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚಕವಾಗಿ ಆತನಿಗೊಂದು ಬೆಳ್ಳಿಯ ಸರಿಗೆಯಬಂಧನ ಇರುತ್ತದೆ. ಅರಬ್ಬಿ ಭೂತಕ್ಕೆ ಒಂದು ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆಯ(ಮುಂಡಾಸು ) ಅಲಂಕಾರ ಇರುತ್ತದೆ
.ವಾಸ್ತವಿಕ ನೆಲೆಯಿಂದ ಆಲೋಚಿಸುವುದಾದರೆ ಆ ಅರಬ್ ವ್ಯಾಪಾರಿಯಿಂದ ತಪ್ಪಿಸಿ ಕೊಳ್ಳುವುದಕ್ಕಾಗಿ ನೀರಿನಲ್ಲಿ ಮುಂದೆ ಮುಂದೆ ಸಾಗಿದ ಆ ಕನ್ಯೆ ದುರಂತವನ್ನಪ್ಪಿರಬಹುದು .ಅವಳನ್ನು ಹಿಂಬಾಲಿಸಿದ ಆ ಅರಬ್ ಖರ್ಜೂರ ವ್ಯಾಪಾರಿ ಕೂಡ ದುರಂತವನ್ನಪ್ಪ್ಪಿರಬಹುದು ಅಥವಾ ಆ ಹುಡುಗಿಯ ದುರಂತಕ್ಕೆ ಕಾರಣನಾದ ಅರಬ್ ವ್ಯಾಪಾರಿಯನ್ನು ಊರ ಜನರು ಸೇರಿ ಶಿಕ್ಷಿಸಿರಬಹುದು  .ಆಗ ಆತ ದುರಂತವನ್ನಪ್ಪಿರಬಹುದು .ಕಾಲಾಂತರದಲ್ಲಿ ಅವರಿಬ್ಬರೂ ದೈವತ್ವವನ್ನು ಪಡೆದು ಆರಾಧಿಸಲ್ಪಟ್ಟಿರಬೇಕು copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ

                                                   ಅರಬ್ಬಿ ಭೂತ (ಹಳೆಯ ಫೋಟೋ )

Wednesday, 12 March 2014

ಸಾವಿರದೊಂದು ಗುರಿಯೆಡೆಗೆ : 20 ಹಿಂದೂ ಮುಸ್ಲಿಂ ಸಾಮರಸ್ಯ ಬೆಸೆದ ಆಲಿ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

                                        © copy rights reserved
 ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವಆಲಿ/ ಆಲಿ ಚಾಮುಂಡಿ ಬಹಳ ಪ್ರಸಿದ್ಧವಾದ ದೈವತ 
. .ಕುಂಬಳೆ ಸಮೀಪದ ಒಂದು ಗುಡ್ಡದಲ್ಲಿ ಪಾರೆ  ಸ್ಥಾನ /ಪಾದೆ ಸ್ಥಾನ ಎಂಬ ಕ್ಷೆತ್ರ ಇದೆ.  ಇದು  ಆಲಿ ಭೂತದ  ಮೂಲ ಸ್ಥಾನ .ಆರಿಕ್ಕಾಡಿ ಸಮೀಪದ ಪಾದೆ ಸ್ಥಾನದ  ಪ್ರಧಾನ ದೈವ  ಪಾಡಾಂಗರೆ  ಪೋದಿ(ಪಾಟಾರ್ ಕುಳಂಗದ ಭಗವತಿ ).ಆದರೆ ಈ ಭೂತ ಸ್ಥಾನ ದಲ್ಲಿ  ಆಲಿ ಚಾಮುಂಡಿ ಪ್ರಧಾನ ಭೂತಕ್ಕಿಂತ  ಹೆಚ್ಚು ಪ್ರಸಿದ್ಧಿ ಪಡೆದಿದೆ.ಅಜ್ಜಿ ಭೂತ ,  ಶಿರಾಡಿಭೂತ,ರುದ್ರ ಚಾಮುಂಡಿ ಮೊದಲಾದ ಅನೇಕ ದೈವಗಳು ಇತರ ಪ್ರಧಾನ ದೈವಗಳ ಸೇರಿಗೆ ದೈವಗಳಾಗಿದ್ದರೂ,ಪ್ರಧಾನ ದೈವಗಳಲಿಗಿಂತ ಹೆಚ್ಚು ಮಹತ್ವವನ್ನು ಪಡೆದಿದ್ದಾರೆ .ಇದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಡು ಬರುವ ವಿಶಿಷ್ಟ ವಿದ್ಯಮಾನ .   © copy rights reserved(c)Dr.Laxmi g Prasadಇದು ದುರ್ಬಲರು ಸಬಲರಾಗುತ್ತಿರುವುದರ ಸಂಕೇತವೂ ಇರಬಹುದು .ಏನೇ ಇರಲಿ ಇಲ್ಲಿ ಆಲಿ ಭೂತ ಕೂಡಾ ಪ್ರಧಾನ ದೈವಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವುದು ಗಮನಾರ್ಹ ಅಂಶವಾಗಿದೆ   ಎಲ್ಲ  ಜಾತಿ ಧರ್ಮದ ಜನರು ಆಲಿ ಚಾಮುಂಡಿಯನ್ನು ಭಕ್ತಿಯಿಂದ ನಂಬಿ ಆರಾಧಿಸುತ್ತಾರೆ


      © copy rights reserved(c)Dr.Laxmi g Prasad
 ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. 

ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.   © copy rights reserved(c)Dr.Laxmi g Prasad

ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು    


ಆರಾಧಿಸಲ್ಪಡುವ ಭೂತ.ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ.
   © copy rights reserved(c)Dr.Laxmi g Prasad


 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ  ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .   © copy rights reserved(c)Dr.Laxmi g Prasad
                                             

 ಆಲಿ ಭೂತ ಕೂಡಾ  ಮೂಲತಃ ಮುಸ್ಲಿಂ ಮಂತ್ರವಾದಿ . .ಬೇರೆ ಊರಿನಿಂದ ಆಶ್ರಯಕ್ಕಾಗಿ ಅಲೆದಾಡುತ್ತಾ ಬಂದು ಆರಿಕ್ಕಾಡಿ ಯ  ಪಾದೆ ಸ್ಥಾನದ ಬಿಲ್ಲವರಲ್ಲಿ ಆಶ್ರಯ ಬೇಡುತ್ತಾನೆ .ದಯಾಳುಗಳಾದ ಅವರು ಈತನ ದುಷ್ಟತನದ ಹೆಣ್ಣು ಹುಚ್ಚಿನ ಅರಿವಿಲ್ಲದೆ ಆತನಿಗೆ ಆಶ್ರಯ ಕೊಡುತ್ತಾರೆ ಆಲಿಬ್ಯಾರಿ ನೋಡಲು ಕಟ್ಟು ಮಸ್ತಾಗಿ ಸುಂದದರನಾಗಿದ್ದನು .ಇವನಿಗೆ ತುಂಬಾ ,ಹೆಣ್ಣಿನ ಚಪಲ ಇತ್ತು .ಈತ   ಮಂತ್ರವಾದಿಯಾಗಿ  ಪ್ರಸಿದ್ಧಿ ಪಡೆದಿದ್ದನು. ತನ್ನ ಮಂತ್ರ ಶಕ್ತಿಯಿಂದ ಜನರಿಗೆ,ಊರ ಹೆಣ್ಣು ಮಕ್ಕಳಿಗೆ ನಾನ ರೀತಿಯ  ಕಿರುಕುಳ ಕೊಡುತ್ತಿದ್ದನು . ತನ್ನ್ನ ಮಂತ್ರ ಶಕ್ತಿಯಿಂದ ಹೆಣ್ಣು ಮಕ್ಕಳನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಿದ್ದನು . ಆತನ ಮಂತ್ರ ಶಕ್ತಿಯ ಕಾರಣದಿಂದಾಗಿ ಹೆಣ್ಣು ಮರುಳನಾದ ಆತನನ್ನು ವಿರೋಧಿಸಲು , ಜನರಿಗೆ ಸಾಧ್ಯವಾಗುತ್ತಿರಲಿಲ್ಲ .   © copy rights reserved(c)Dr.Laxmi g Prasadತನ್ನ ಮಂತ್ರ ಶಕ್ತಿಯಿಂದಾಗಿ ಆತ ಅಷ್ಟು ಬಲವಂತನಾಗಿದ್ದನು..ಅವನು ಮಂತ್ರ ಶಕ್ತಿಯಿರುವ ಒಂದು ತಾಯಿತವನ್ನು ಕೊರಳಿಗೆ ಕಟ್ಟಿಕೊಂಡಿದ್ದನು .ಅದು ಅವನ ಮೈ ಮೇಲೆ ಇರುವ ತನಕ ಅವನನ್ನು ಸೋಲಿಸಲು ಯಾರಿಂದಲೂ ಅಸಾಧ್ಯವಾಗಿತ್ತು .ಅವನು ತನಗೆ ಆಶ್ರಯ ಕೊಟ್ಟ ಬಿಲ್ಲವರ ಮನೆಯ ದೇಯಿ ಎಂಬ ಹೆಣ್ಣು ಮಗಳನ್ನು ತನ್ನೆಡೆಗೆ ಸೆಳೆಯಲು ಯತ್ನಿಸಿದನು .ಅವಳು ಇವನೆಡೆಗೆ ಬಾರದೆ ಇದ್ದಾಗ ತನ್ನ ಮಂತ್ರ ಶಕ್ತಿಯಿಂದ ಅವಳನ್ನು ಸೆಳೆದು ಅವಳ ಮೇಲೆ ಅತ್ಯಾಚಾರ ಎಸಗಿ ಅವಳ ಸಾವಿಗೆ ಕಾರಣನಾದನು

 ಆಗ ಆ ಕುಟುಂಬದವರು ಮಂತ್ರ ದೇವತೆಗೆ ಕೈ ಮುಗಿದು “ಆಲಿ ಬ್ಯಾರಿಯಿಂದ ನಮಗೆ ರಕ್ಷಣೆ ಕೊಡು ನಮ್ಮನ್ನು  ಕಾಪಾಡು”ಎಂದು  ಬೇಡಿ ಕೊಂಡರು .ತನ್ನ ಭಕ್ತರ ಕಷ್ಟವನ್ನು ಅರಿತ ಮಂತ್ರ ದೇವತೆ ಒಂದು ಸುಂದರ ಹೆಣ್ಣಾಗಿ ಆವಿರ್ಭವಿಸಿ ,ತನ್ನ ಒಡನಾಡಿ ಹೆಣ್ಣು ಮಕ್ಕಳೊಂದಿಗೆ ಒಂದು ಕೆರೆಯಲ್ಲಿ/ಹೊಳೆಯಲ್ಲಿ  ಜಲ ಕ್ರೀಡೆಯಾಡುತ್ತದೆ. ಆ ಹೆಣ್ಣಿನ ರೂಪು ಬೆಡಗು ಬಿನ್ನಾಣ ನೋಡಿ ಮರುಳಾದ ಆಲಿ ಬ್ಯಾರಿ ಅವಳಲ್ಲಿ ಮೋಹಗೊಂಡು ಕೆರೆಯ ಬಳಿಗೆ ಬರುತ್ತಾನೆ . ಆಗ ಆ ಹೆಣ್ಣಿನ ಮಾಯಾ ರಪು ಅವನಲ್ಲಿ ನೀನು ಬಟ್ಟೆಯನ್ನು ಕಳಚಿ ಕೆರೆಗೆ ಬರಬೇಕು ಎಂದು ಹೇಳುತ್ತದೆ .ಅಂತೆಯೇ ಅವನು ತನ್ನ ಬಟ್ಟೆಯನ್ನು ಬಿಚ್ಚಿ ಕೆರೆಗೆ ಇಳಿಯುತ್ತಾನೆ .ಆಗ ಆ ಹೆಣ್ಣು ರೂಪದ ಮಂತ್ರ ದೇವತೆ ಅದು ನಿನ್ನ ಕೊರಳಲ್ಲಿ ಇರುವುದು ಏನು ?ಅದನ್ನು ಅಲ್ಲಿಟ್ಟು ಬಾ “ಎಂದು ಹೇಳಿ ಅವನ ಮಂತ್ರ ಶಕ್ತಿಯಿರುವ ತಾಯಿತವನ್ನು ತೆಗೆಯುವಂತೆ ಹೇಳುತ್ತದೆ . ಹೆಣ್ಣಿ ಮೋಹಕ್ಕೆ ಒಳಗಾದ ಆತ ಹಿಂದೆ ಮುಂದೆ ವಿವೇಚಿಸದೆ ತನ್ನ ಮಂತ್ರ ಶಕ್ತಿಯ ತಾಯಿತವನ್ನು ತೆಗೆದಿಟ್ಟು ಕೆರೆಗೆ ಇಳಿಯುತ್ತಾನೆ .ಮಂತ್ರ ಶಕ್ತಿಯುಳ್ಳ ತಾಯಿತದ ಬಲವಿಲ್ಲದ ಆತನನ್ನು ಸ್ತ್ರೀ ರೂಪಿನ ಮಂತ್ರ ದೇವತೆ ಸಂಹರಿಸುತ್ತದೆ ಎಂಬ ಐತಿಹ್ಯವು ಪ್ರಚಲಿತವಿದೆ .    © copy rights reserved(c)Dr.Laxmi g Prasadಆತನನ್ನು ಮಂತ್ರ ದೇವತೆ ತನ್ನ ಸೇರಿಗೆ ದೈವವನ್ನಾಗಿ ಮಾಡುತ್ತದೆ .ಆತ ಮುಂದೆ ಆಲಿ ಭೂತ ,ಆಲಿ ಚಾಮುಂಡಿ ಭೂತವಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
 ಇಬ್ಬರು ಹೆಂಗಸರು ನೀರಿನಲ್ಲಿ ಆಟವಾಡುತ್ತ ಆತನನ್ನು ನೀರಿಗಿಳಿಯಲು ಆಹ್ವಾನಿಸಿದರು ಎಂಬ ಐತಿಹ್ಯ ಕೂಡಾ ಪ್ರಚಲಿತ ಇದೆ   © copy rights reserved(c)Dr.Laxmi g Prasad

ವಾಸ್ತವಿಕ ನೆಲೆಯಲ್ಲಿ ಆಲೋಚಿಸುವುದಾದರೆ ಅಕಸ್ಮಾತ್ ಆಗಿ ಕೆರೆಯಲ್ಲಿ ಮುಳಗಿ ದುರಂತವನ್ನಪ್ಪಿರುವ ಆಲಿ ಬ್ಯಾರಿಯ ಜೊತೆಗೆ ದೈವ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .ಅಥವಾ ಹೆಣ್ಣಿನ ಮರುಳನಾದ ಆತ ಕೆರೆ /ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ಸ್ತ್ರೀ ಸಮೀಪಕ್ಕೆ ಹೋಗಲೆತ್ನಿಸಿ ದುರಂತವನ್ನಪ್ಪಿರಬಹುದು ,ಈ ಬಗ್ಗೆ “ಅತಿರೇಕದ ವರ್ತನೆಯ ಮಂತ್ರವಾದಿಯೋಬ್ಬನನ್ನು ಜನರೇ ಸಿಟ್ಟಿಗೆದ್ದು ಗುಪ್ತವಾಗಿ ಮುಗಿಸಿದ ವೃತ್ತಾನ್ತಕ್ಕೆ ಬೇರೊಂದು ಬಣ್ಣ ಬಂದಿರಲೂ ಬಹುದು .ಭೂತ ಮಹಿಮೆಗಳನ್ನು ಪ್ರಚುರ ಗೊಳಿಸಲು ಇಂತ ಕಥೆಗಳು ಅನುಕೂಲ “ಎಂದು ಡಾ. ಅಮೃತ ಸೋಮೆಶ್ವರರು ಅಬಿಪ್ರಾಯ ಪಟ್ಟಿದ್ದಾರೆ .ಇತರ ಭೂತಗಳಂತೆ ಆಲಿ ಭೂತಕ್ಕೆ ಅಣಿ ಜಕ್ಕೆಳಣಿ ಗಳು ಇರುವುದಿಲ್ಲ ಈತನಿಗೆ ಬಣ್ಣ ಬಣ್ಣದ ಲುಂಗಿ ,ಸೊಂಟದ ಪಟ್ಟಿ ,ತಲೆಗೆ ಬಂಗಾರದ /ಬೆಳ್ಳಿಯ ಟೊಪ್ಪಿ ಇರುತ್ತದೆ.ಮೈಗೆ ಗಂಧ ಪೂಸಿ ಮುಖಕ್ಕೆ ಕಪ್ಪು ಬಣ್ಣ ಹಾಕಿದ ಸರಳ  ಅಲಂಕಾರ ಇರುತ್ತದೆ.
   © copy rights reserved(c)Dr.Laxmi g Prasad
ಈ ಭೂತಕ್ಕೆ ತುಂಬಾ ಜನರು ಹರಿಕೆ ಹಾಕುತ್ತಾರೆ.ಅನೇಕ ಮುಸ್ಲಿಂ ಸ್ತ್ರೀ ,ಪುರುಷರೂ ಆಲಿ ಭೂತಕ್ಕೆ ಹರಿಕೆ ಒಪ್ಪಿಸಿತ್ತಾರೆ .”ವೇಶ್ಯಾ ವೃತ್ತಿಯ ಹೆಂಗಳೆಯರೂ ಈತನಿಗೆ ನಡೆದುಕೊಳ್ಳುತ್ತಾರೆ,ಈ ವರ್ಷದ ಬೆಳೆ ಹೇಗಿದೆ ? ಎಂಬ ಸರಸ ಪ್ರಶ್ನೆಯನ್ನು ಈ ರಸಿಕ ದೈವ ಕೇಳುವುದುಂಟು “ಎಂದು ಅಮೃತ ಸೋಮೆಶ್ವರರು ಹೇಳಿದ್ದಾರೆ ,”ಮುಸ್ಲಿಂ ಮೂಲದ ವ್ಯಕ್ತಿಯೊಬ್ಬ ದೈವೀಕರಣಗೊಂಡು ಸಾವಿರಾರು ಜನರ ಆರಾಧ್ಯ ಶಕ್ತಿಯಾಗಿರುವುದು ವಿಶೇಷ  ಮಾತ್ರವಲ್ಲ,ಈ ಆರಾಧನಾ ವಿದ್ಯಮಾನವು ಆರಾಧನಾ ಮಟ್ಟದ ಕೋಮು ಸೌಹಾರ್ದಕ್ಕೆ ಒಂದು ಕೊಡುಗೆಯೂ ಆಗಿದೆ “ಎಂದು ಅಮೃತ ಸೋಮೆಶ್ವರರು ಅಭಿಪ್ರಾಯ ಪಟ್ಟಿದ್ದಾರೆ .  -ಡಾ.ಲಕ್ಷ್ಮೀ ಜಿ ಪ್ರಸಾದ         © copy rights reserved(c)Dr.Laxmi g Prasad
(ಈ ಭಾವಚಿತ್ರಗಳು ಯಾರದೆಂದು ತಿಳಿದಿಲ್ಲ ಆದ್ರೆ ಅಂತರ್ಜಾಲದಿಂದ ತೆಗೆದು ಈ ಅದ್ಭುತ ವರ್ಣ ಚಿತ್ರಗಳನ್ನು ಒದಗಿಸಿ ಕೊಟ್ಟ  ಕೊಟ್ಟಶ್ರೀ  ಮಧುಸೂದನ ಶೆಟ್ಟಿ ಅವರಿಗೆ ಕೃತಜ್ಞ ತೆಗೆಳು)
ಅಧಾರ
ಡಾ.ಅಮೃತ ಸೋಮೇಶ್ವರ .ತುಳು ಜನಪದ ಕೆಲವು ನೋಟ
ಡಾ.ಚಿನ್ನಪ್ಪ ಗೌಡ :ಭೂತಾರಾಧನೆ -ಜನಪದೀಯ ಅಧ್ಯಯನ
ಡಾ.ವಿವೇಕ ರೈ :ತುಳು ಜನಪದ ಸಾಹಿತ್ಯ
ಡಾ.ಲಕ್ಷ್ಮೀ ಜಿ ಪ್ರಸಾದ :ಭೂತಗಳ ಅದ್ಭುತ ಜಗತ್ತು

Friday, 7 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -13 ಬೆಳ್ಳಾರೆ ಬೀಡಿನ ಪಟ್ಟಂತ ದೈವ ಅಡ್ಯಂತಾಯ © ಡಾ.ಲಕ್ಷ್ಮೀ ಜಿ ಪ್ರಸಾದ


                  

ಬೆಳ್ಳಾರೆ ,ಅಂಗಡಿ ಪದವು, ದೇವರಕಾನ ,ಐವರನಾಡು ಮೊದಲಾದೆಡೆಗಳಲ್ಲಿ ಆರಾಧನೆ ಪಡೆಯುವ ದೈವ ಅಡ್ಯಂತಾಯ .ಬೆಳ್ಳಾರೆಯಲ್ಲಿ ಅಡ್ಯಂತಾಯ ದೈವದ ಪಟ್ಟದ ಚಾವಡಿ ಇದೆ .ಪ್ರಸ್ತುತ ಬೆಳ್ಳಾರೆಯಲ್ಲಿ ಹಲವರು ವರ್ಷಗಳಿಂದ ಆರಾಧನೆ ನಿಂತು ಹೋಗಿದೆ .
ಬೆಳ್ಳಾರೆಯ ಪನ್ನೆ ಬೀಡಿನಲ್ಲಿ ದಾಲ್ಸೂರಾಯ /ಜಾಲ್ಸೂರಾಯ ಎಂಬ ದೈವಕೆ ಆರಾಧನೆ ಇದೆ .ಈ ದಾಲ್ಸೂ ರಾಯ ಅಡ್ಯಂತಾಯನ ಸಹೋದರ ಎಂಬ ಅಭಿಪ್ರಾಯ ವಿದೆ .ಅಂಗಡಿ ಪದವಿನಲ್ಲಿ ನೇಮ ಆಗುವಾಗ ಅಡ್ಯಂತಾಯ ದೈವ ವು ನನ್ನ ಮೂಲ ನೆಲೆಯಲ್ಲಿ ನನಗೆ ಆರಾಧನೆ ಇಲ್ಲ ,ನನ್ನ ತಮ್ಮನಿಗೆ ಆರಾಧನೆ ಇದೆ ನನಗೇಕಿಲ್ಲ?ಎಂದು ಪ್ರಶ್ನಿಸುತ್ತದೆ .

ಹಿಂದೆ ಬೆಳ್ಳಾರೆ ಸೀಮೆ ಆಗಿತ್ತು .ಆಗ ಸೀಮೆಯ ಅರಸರಿಗೆ ಪಟ್ಟವಾಗುತ್ತಿದ್ದ ಸ್ಥಳ ಪಟ್ಟದ ಚಾವಡಿ.ಇದನ್ನು   ಬೆಳ್ಳಾರೆಯ ಅಡ್ಯಂತಾಯ ಪಟ್ಟಂತ ಚಾವಡಿ ಎಂದು  ಹೇಳುತ್ತಾರೆ  ಇಲ್ಲಿ .ಅಡ್ಯಂತಾಯನನ್ನು ಪಟ್ಟಂತ ದೈವ ಎಂದು ಕರೆಯುತ್ತಾರೆ.

ಅಡ್ಯಂತಾಯ ಎನ್ನುವುದು ಒಂದು ಪಟ್ಟವೇರುವ ಅರಸರ ಪಟ್ಟದ ಹೆಸರು
"ಕಾರ್ಕಳದಲ್ಲಿಯ ನಿಟ್ಟೆ ಗುತ್ತಿನ ಅಲಯದ ಪುದರ್ ಅಡ್ಯಂತಾಯ .ಇಲ್ಲಿ ಮೂರು ಪರ್ಯಾಯ ನಾಮಗಳಿವೆ.1 ನೆಯ ಬೆರ್ಮು ಅಡ್ಯಂತಾಯ 2 ನೆಯ ಬೆರ್ಮು ಅಡ್ಯಂತಾಯ ೩ ನೆಯ ಅಡ್ಯಂತಾಯ "ಎಂದು ಡಾ.ಇಂದಿರಾ ಹೆಗಡೆಯವರು ಹೇಳಿದ್ದಾರೆ (ಬಂಟರು -ಒಂದು ಸಮಜೋ ಸಾಂಸ್ಕೃತಿಕ ಅಧ್ಯಯನ ,ಪುಟ ೩೧೮ )

ಬೆಳ್ಳಾರೆ ಬೀಡಿನ ಅರಸರು ಯಾರಾಗಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ .ಆದರೆ ಅಲ್ಲಿ ಅಡ್ಯಂತಾಯ ಪಟ್ಟದ ಚಾವಡಿ ಇರುವ ಕಾರಣ ಅಡ್ಯಂತಾಯ ಎಂಬ ಪಟ್ಟದ ಹೆಸರನ್ನು ಪಡೆದವರ ಆಳ್ವಿಕೆ ಅಲ್ಲಿದ್ದಿರಬೇಕು.ಅಡ್ಯಂತಾಯ ದೈವ ಕೂಡಾ ಆ ಬೀಡಿನ ಮೂಲ ಪುರುಷ ಇರ ಬಹುದು .ಅಡ್ಯಂತಾಯ ದೈವವನ್ನು ಪಟ್ಟಂತ ದೈವ ಎಂದೇ ಹೇಳುತ್ತಾರೆ .ಈಗ ಅಲ್ಲಿ ಪಟ್ಟದ ಚಾವಡಿಯಲ್ಲಿ ಅಡ್ಯಂತಾಯ ದೈವದ ಸಣ್ಣ ಗುಡಿ/ಭಂಡಾರ  ಇದೆ . ಗುಡಿಯ ಒಳಗೆ ಅಡ್ಯಂತಾಯ ದೈವದ ಮುಗ ,ಆಯುಧ ,ಎರಡು ಮಾಸ್ತಿವಿಗ್ರಹಗಳು ,ಒಂದು ಹಂದಿ ,ಒಂದುಅಪರೂಪದ ಹಸುವಿನ ವಿಗ್ರಹಗಳು ಇವೆ .ಹಸುವಿನ ಮೇಲೆ ನಂದಿ ಕುಳಿತಿದ್ದು ಹಸುವಿನ ಕರು ಹಾಲು ಕುಡಿಯುತ್ತಿರುವ  ಸುಂದರ ವಿಗ್ರಹವಿದು .ಅಲ್ಲಿಂದ ತುಸು ದೂರದಲ್ಲಿ ಬೀಡಿನ ಕಾವಲು ಗಾರನ ಮನೆ ಈಗಲೂ ಇದೆ .ಅಲ್ಲಿಂದ ಸ್ವಲ್ಪ ದೂರದಲ್ಲಿ ಬೀಡಿನ ಆನೆಯನ್ನು ಕಟ್ಟುತ್ತಿದ್ದ ಕಲ್ಲು ಇದೆ
ಬೆಳ್ಳಾರೆಯ ಕೋಟೆ  ಕಾರ್ಕಳದ ಭೈರರಸರ ವಶದಲ್ಲಿತ್ತು. ಆ ಕಾಲದಲ್ಲಿ ಕಾರ್ಕಳ ಅರಸರ ಪ್ರತಿನಿಧಿಯಾಗಿ ತುಂಡರಸರಾಗಿ ಅಡ್ಯಂತಾಯ ವಂಶಜರು ಬೆಳ್ಳಾರೆ ಬೀಡನ್ನು ಆಳುತ್ತಾ ಇದ್ದಿರಬಹುದು.
 ಈ ದೈವದ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಒಂದು ಸ್ಪಷ್ಟ ಚಿತ್ರಣ ದೊರೆಯಬಹುದು.ಈ ಬಗ್ಗೆ ಮಾಹಿತಿ ಗೊತ್ತಿದ್ದವರು ತಿಳಿಸಬೇಕಾಗಿ ವಿನಂತಿ                                                     ಬೆಳ್ಳಾರೆಯ ಕೋಟೆ
                                                           ಆನೆ ಕಟ್ಟುವ ಕಲ್ಲು
                                                   ಅಡ್ಯಂತಾಯ ಚಾವಡಿಯ ವಿಗ್ರಹಗಳು
                                                                       ಮಹಾಸತಿ
                                                                   ಪಟ್ಟದ ಚಾವಡಿ
                                                           ಕಾವಲು ಗಾರನ ಮನೆ

Sunday, 2 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 7-112 -ಅಬ್ಬಗೆ ,ದಾರಗೆ ,ಸೊನ್ನೆ ,ಗಿಂಡೆ ,ಸಿರಿ ,ಸಾಮು .©ಡಾ.ಲಕ್ಷ್ಮೀ ಜಿ ಪ್ರಸಾದ

 
ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.©ಡಾ.ಲಕ್ಷ್ಮೀ ಜಿ ಪ್ರಸಾದ

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ .©ಡಾ.ಲಕ್ಷ್ಮೀ ಜಿ ಪ್ರಸಾದ ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ..©ಡಾ.ಲಕ್ಷ್ಮೀ ಜಿ ಪ್ರಸಾದ

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ. ಅಬ್ಬನಡ್ಕದ ಬೋಳದ ಪದವಿನ ಸಮೀಪದ ಗೋಳಿಮರದ ಸಮೀಪಕ್ಕೆ ಬಂದಾಗ ಮಗುವಿನ ತೊಟ್ಟಿಲನ್ನು ಗೋಳಿಮರದ ಬಿಳಲಿಗೆ ಕಟ್ಟಿ ತೂಗಿ ದಾರು ಮತ್ತು ಸಿರಿ ವಿಶ್ರಮಿಸುತ್ತಾರೆ..©ಡಾ.ಲಕ್ಷ್ಮೀ ಜಿ ಪ್ರಸಾದ

ಸಿರಿ ಹಾಡಿದ ನಾರಾಯಣ ಪದದ ಧ್ವನಿ ಬೋಳ ಮಲ್ಲಿಗೆಯ ಕರಿಯ ಕಾಸಿಂಗರಾಯ ಹಾಗೂ ಬಿಳಿಯ ದೇಸಿಂಗರಾಯರಿಗೆ ಕೇಳಿಸಿ ಅಲ್ಲಿಗೆ ಬರುತ್ತಾರೆ. ಬಂದು ಸಿರಿಯ ಕಥೆ ಕೇಳಿ ತಮ್ಮೊಂದಿಗೆ ಅರಮನೆಗೆ ಬರುವಂತೆ ಹೇಳಿ ‘ತಂಗಿಯಂತೆ ನೋಡಿಕೊಳ್ಳುತ್ತೇವೆ’ ಎಂದು ಹೇಳುತ್ತಾರೆ. ಆಗ ಸಿರಿಯ ಮಗ ಕಾಂತಪೂಂಜನ ಕುಮಾರ ಮುಂದೆ ನಾನು ಬರುವುದಿಲ್ಲ ಎಂದು ಹೇಳುತ್ತಾನೆ. ಆಗ ಸಿರಿ ‘ನೀನು ಈ ಅಬ್ಬನಡ್ಕದ ಸಿರಿಗೋಳಿಯ ಮರದಡಿಯಲ್ಲಿ ಮಾಯವಾಗು, ಮೇಲಿನ ಲೋಕಕ್ಕೆ ಹೋಗಿ ಬೆರ್ಮರ ಬಲಭಾಗದಲ್ಲಿ ನೆಲೆಯಾಗು’ ಎಂದು ವರ ಕೊಡುತ್ತಾಳೆ. ದಾರು ಕೂಡ ಜಾಲ ಬೈಕಾಡ್ತಿ ಎಂಬ ದೈವವಾಗುತ್ತಾಳೆ.

ಮುಂದೆ ಸಿರಿಯನ್ನು ಕೊಡ್ಸರಾಳ್ವ ಮದುವೆ ಆಗುತ್ತಾನೆ. ಆರಂಭದಲ್ಲಿ ಕೊಡ್ಸರಾಳ್ವದ ಮೊದಲ ಪತ್ನಿ ಸಾಮು ಮತ್ತು ಸಿರಿಯ ನಡುವೆ ಹೊಂದಾಣಿಕೆಯಾಗದಿದ್ದರೂ ನಂತರ ಅವರಿಬ್ಬರೂ ಅನೋನ್ಯವಾಗಿರುತ್ತಾರೆ ಸಾಮು ಕೂಡ ಅಲೌಕಿನ ಜನನ ಹೊಂದಿಗೆ ಸ್ತ್ರೀ ಅವಳು ಕೂಡ ಏಳು ಸಿರಿಗಳಲ್ಲಿ ಒಬ್ಬಳಾಗಿ ಮುಂದೆ ಸಿರಿಯೊಂದಿಗೆ ಆರಾಧನೆ ಪಡೆಯುತ್ತಾಳೆ.
ಸಿರಿಯು ಒಂದು ಹೆಣ್ಣು ಮಗುವನ್ನು ಹೆತ್ತು ಸಿರಿ ಮಾಯವಾಗುತ್ತಾಳೆ. ಆ ಮಗು ಸಾನೆಬೆಟ್ಟು ಅಜ್ಜರ ಮನೆಯಲ್ಲಿ ಬೆಳೆಯುತ್ತದೆ. ಅಲ್ಲಿ ಇನ್ನೊಂದು ಸತ್ಯದ ಮಗು ಗಿಂಡೆಯೂ ಸಿರಿಯ ಮಗಳುಸೊನ್ನೆಯೂ ಒಟ್ಟಿಗೆ ಬೆಳೆಯುತ್ತಾರೆ. ಸೊನ್ನೆಯನ್ನು ಉರ್ಕಿತೋಟದ ಗುರುಮಾರ್ಲರಿಗೆ ಮದುವೆ ಮಾಡಿಕೊಡುತ್ತಾರೆ. ಪ್ರಾಪ್ತ ವಯಸ್ಕಳಾದರೂ ಸೊನ್ನೆ ಮೈನೆರೆಯುವುದಿಲ್ಲ. ಗಿಂಡೆ ಮೈನೆರೆದಾಗ ಸೊನ್ನೆಗೆ ಹೇಳಿಕೆ ಇರುವುದಿಲ್ಲ. ಆದರೂ ಅವಳು ಗುರುಮಾರ್ಲನೊಡನೆ ಹಠ ಮಾಡಿ ತಂಗಿಯ ನೀರಹಬ್ಬಕ್ಕೆ ಹೋಗುತ್ತಾಳೆ. ಅಲ್ಲಿ ಅವಮಾನವಾಗಿ ಅಳುತ್ತಾ ಬರುತ್ತಾಳೆ. ಆಗ ಕೋಪಗೊಂಡ ಗುರುಮಾರ್ಲ ಅವಳನ್ನು ಕೆಲಸದವಳಿಗಿಂತ ಕಡೆಯಾಗಿ ತಿರಸ್ಕಾರದಿಂದ ನೋಡುತ್ತಾನೆ..©ಡಾ.ಲಕ್ಷ್ಮೀ ಜಿ ಪ್ರಸಾದ

ಸೊನ್ನೆ ಕೆಲಸದಾಳಿನಂತೆ ದುಡಿಯುತ್ತಾ ದುಃಖಿಸುವಾಗ ಲಂಕೆ ಲೋಕನಾಡಿನ ಬೆರ್ಮರು ಬ್ರಾಹ್ಮಣನ ವೇಷಧರಿಸಿ ಬಂದು ಲಂಕೆಲೋಕನಾಡಿನ ಬೆರ್ಮರಿಗೆ ಗುಂಡ ಹಾಗೂ ಭಂಡಾರ ಕಟ್ಟಿಸುವ, ಬಂಗಾರದ ತೊಟ್ಟಿಲು ಅರ್ಪಿಸುವ ಹರಿಕೆ ಹೇಳಲು ಸೂಚಿಸುತ್ತಾನೆ. ಅವಳು ಬೆರ್ಮರಿಗೆ ಗುಂಡ ಕಟ್ಟಿಸುವ, ಭಂಡಾರ ಬಂಗಾರ ತೊಟ್ಟಿಲು, ಮಕ್ಕಳು ಹಾಗೂ ಪುಂಡಿಪಣವಿನ ಹರಿಕೆ ಹೇಳುತ್ತಾಳೆ. ಅವಳು ಮೈನೆರೆಯುತ್ತಾಳೆ. ಸ್ನಾನದ ನಂತರ ಬೆರ್ಮರ ಅನುಗ್ರಹದಿಂದ ಗರ್ಭಿಣಿಯಾಗಿ ಜೋಡುಮಕ್ಕಳನ್ನು ಹೆರುತ್ತಾಳೆ..©ಡಾ.ಲಕ್ಷ್ಮೀ ಜಿ ಪ್ರಸಾದ
ಮಕ್ಕಳು ಹುಟ್ಟಿದ ಸಂಭ್ರಮದಲ್ಲಿ ಬೆರ್ಮರಿಗೆ ಹರಿಕೆ ಸಂದಾಯ ಮಾಡುವುದನ್ನು ಮರೆಯುತ್ತಾಳೆ. ಮಕ್ಕಳಾದ ಅಬ್ಬಗೆ-ದಾರಗರು ದೊಡ್ಡವರಾಗಲು ಅವರಿಗೆ ಗಂಡು ನೋಡಿ ವಿವಾಹ ನಿಶ್ಚಯಿಸಲು ಹೋಗುತ್ತಾರೆ ಸೊನ್ನೆ-ಗುರುಮಾರ್ಲ ದಂಪತಿಗಳು. ದಾರಿಯಲ್ಲಿ ಅಬ್ಬನಡ್ಕದ ಸಿರಿಗೋಳಿಯ ಮರದ ಅಡಿಗೆ ತಲುಪಿದಾಗ ಬೆರ್ಮೆರು ಬ್ರಾಹ್ಮಣನ ವೇಷ ಧರಿಸಿ ಬಂದು ಸೊನ್ನೆಗೆ ಹರಿಕೆಯ ವಿಚಾರವನ್ನು ನೆನಪಿಸುತ್ತಾನೆ.
 ಆಗ ಅವಳೂ ದಾಷ್ಟ್ರ್ಯದಿಂದ ವರ್ತಿಸುತ್ತಾಳೆ. ಆಗ ಬ್ರಾಹ್ಮಣರೂಪದ ಬೆರ್ಮರು ಉರ್ಕಿತೋಟಕ್ಕೆ ಬಂದು ಅಬ್ಬಗೆ-ದಾರಗೆಯರನ್ನು ಚೆನ್ನಯಾಟವಾಡಲು ಪ್ರೋತ್ಸಾಹಿಸುತ್ತಾನೆ. ಆಟದಲ್ಲಿ ಸೋತ ಅಕ್ಕ ಅಬ್ಬಗೆ ದಾರಗೆಯನ್ನು ಚೆನ್ನೆಮಣೆಯಲ್ಲಿ ಹೊಡೆದು ಸಾಯಿಸುವಂತೆ ಮಾಡುತ್ತಾನೆ. ಅಬ್ಬಗೆ ಕೂಡ ಬಾವಿಗೆ ಹಾರಿ ಸಾಯುವಂತೆ ಮಾಡುತ್ತಾನೆ ಬೆರ್ಮೆರ್. ಗಂಡು ನಿಶ್ಚಯಿಸಿ ಹಿಂದೆ ಬರುವಾಗ ಸೊನ್ನೆ-ಗುರುಮಾರ್ಲರಿಗೆ ಅದೇ ಸಿರಿಗೋಳಿಯ ಹತ್ತಿರ ಬ್ರಾಹ್ಮಣರೂಪದಲ್ಲಿ ಎದುರಾಗಿ ಬೇಗ ಅರಮನೆಗೆ ಹಿಂತಿರುಗಲು ಹೇಳಿ ಮಾಯವಾಗುತ್ತಾನೆ. ತಾನೇ ಸಾಯಿಸಿದ ಅಬ್ಬಗೆ-ದಾರಗೆಯರನ್ನು ತನ್ನ ಸೇರಿಗೆಯಲ್ಲಿ ಸೇರಿಸಿಕೊಳ್ಳುತ್ತಾನೆ ಬೆರ್ಮೆರ್.
ಮುಂದೆ ಸಿರಿ ,ಸೊನ್ನೆ ,ಗಿಂಡೆ,ಅಬ್ಬಗೆ ,ದಾರಗೆ ಯರು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಇವರು ಸಿರಿಗಳು ಎಂದು ಆರಾಧಿಸಲ್ಪಡುತ್ತಾರೆ.ತುಳುನಾಡಿನ ನಾಡಿನ ಆರಾಧ್ಯ ದೈವಿಕ ಹಶಕ್ತಿಗಳು ಎಂಬ ನೆಲೆ ಯಲ್ಲಿ ಇವರನ್ನೂ ದೈವಗಳು ಎಂದೇ ಪರಿಗಣಿಸಿದ್ದಾರೆ ..©ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ:
ಭೂತಾರಾಧನೆ :ಡಾ.ಚಿನ್ನಪ್ಪ ಗೌಡ
ತುಳು ಪಾಡ್ದನ ಸಂಪುಟ :ಡಾ.ಅಮೃತ ಸೋಮೇಶ್ವರ
ತುಳು ಪಾಡ್ದನ ಗಳಲ್ಲಿ ಸ್ತ್ರೀ :ಡಾ.ಲಕ್ಷ್ಮೀ ಜಿ ಪ್ರಸಾದ