Monday, 24 March 2014

ಸಾವಿರದೊಂದು ಗುರಿಯೆಡೆಗೆ -30 ಸುಳ್ಯದ ಅಜ್ಜಿ ಭೂತ (c)ಡಾ.ಲಕ್ಷ್ಮೀ ಜಿ ಪ್ರಸಾದ

  copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

 ಸುಳ್ಯದ  ಸುತ್ತ ಮುತ್ತಲಿನ  ಪರಿಸರದಲ್ಲಿ ವಿದ್ವಾಂಸರ ಗಮನಕ್ಕೆ ಬಾರದೆ ಇರುವ ಅನೇಕ ಭೂತಗಳಿಗೆ ಆರಾಧನೆ ಇರುವುದನ್ನು ನಾನು ನನ್ನ ಸಂಶೋಧನಾ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಗಮನಿಸಿದ್ದೆ. ಬೆಳ್ಳಾರೆಗೆ ಹೋದ ಕೂಡಲೇ ಇಂತ ದೈವಗಳ ಕುರಿತು ಮಾಹಿತಿ ಸಂಗ್ರಹಿಸ ತೊಡಗಿದೆ. ಸಮಾಜದಲ್ಲಿ ಪ್ರಚಲಿತವಿರುವ ವಿಧಿ- ನಿಷೇಧಗಳನ್ನು ಮೀರಿದ ಅನೇಕರು ದೈವದ ಆಗ್ರಹಕ್ಕೊಳಪಟ್ಟು ಮಾಯವಾಗಿ ದೈವತ್ವಕ್ಕೇರಿ ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.  ಭಟ್ಟಿ, ಮರ್ಲು ಮಾಣಿ, ಬವನೊ, ನುರ್ಗಿ ಮದಿಮ್ಮಾಳ್, ಬ್ಯಾರ್ದಿ ಭೂತ, ಮಾಪುಳೆ-ಮಾಪುಳ್ತಿ ಭೂತಗಳು, ಅಜ್ಜಿ ಭೂತ ಮೊದಲಾದವುಗಳು, ಸಾಮಾನ್ಯ ಜನರಂತೆ ಹುಟ್ಟಿ ಸಮಾಜದ ಕಟ್ಟು ಕಟ್ಟಳೆಯನ್ನು ಮೀರಿ ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುವ ಶಕ್ತಿಗಳಾಗಿವೆ. ಇಂತಹ ದೈವಗಳನ್ನು ಮುಖ್ಯ ಭೂತದ ಆರಾಧನೆಯ ಆರಂಭದಲ್ಲಿ ಅಥವಾ ಕೊನೆಯಲ್ಲಿ ಆರಾಧಿಸುತ್ತಾರೆ.  ಹೀಗೆ ಪ್ರಧಾನ ದೈವದೊಂದಿಗೆ ಆರಾಧನೆ ಪಡೆಯುವ ದೈವಗಳನ್ನು ತುಂಡು ಭೂತೊಲು, ಪೊಡಿ ಭೂತೊಲು, ಸೇರಿಗೆ ದೈವೊಳು, ಉಪದೈವಗಳು ಎಂದು ಕರೆಯುತ್ತಾರೆ.
ಕೆಲವೆಡೆ ಪ್ರಧಾನ ದೈವಗಳ ಮಹತ್ವವನ್ನು ಹಿಂದಿಕ್ಕಿ ಸೇರಿಗೆ ದೈವಗಳು ಕಾರಣಿಕದ ದೈವಗಳಾಗಿ ಮೆರೆಯುವ ಅಪರೂಪದ ಸಂದರ್ಭಗಳು ಕಾಣ ಸಿಗುತ್ತವೆ.  ಅಜ್ಜಿ ಭೂತ, ರುದ್ರ ಚಾಮುಂಡಿ ಅಬ್ಜೆಜಲಯ, ಶಿರಾಡಿ ಭೂತ ಮೊದಲಾದ ದೈವಗಳು ಮೊದಲಿಗೆ ಉಳ್ಳಾಕುಲು ಮೊದಲಾದ ಪ್ರಧಾನ ದೈವಗಳ ಸೇರಿಗೆ ದೈವಗಳಾಗಿದ್ದು, ಕಾಲಾಂತರದಲ್ಲಿ ಪ್ರಧಾನ ದೈವಕ್ಕಿಂತ ಹೆಚ್ಚು ಪ್ರಾಧಾನ್ಯತೆಯನ್ನು ಪಡೆದ ದೈವಗಳಾಗಿವೆ.ಇಂತಹ ಈ ತನಕ ಹೆಸರು ಕೂಡ ದಾಖಲಾಗದ ಅನೇಕ ಭೂತಗಳ ಕೋಲ ವನ್ನು ರೆಕಾರ್ಡ್ ಮಾಡಿ ಮಾಹಿತಿ ಸಂಗ್ರಹಿಸಿದ್ದೆ .ಇಂತಹ ಸೇರಿಗೆ ದೈವಗಳ ಕುರಿತು ಎಲ್ಲೆಡೆ ವಿಚಾರಿಸುತ್ತಾ ಇದ್ದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಒಂದು ದಿನ ನನ್ನ ವಿದ್ಯಾರ್ಥಿನಿಯರಾದ ಪೂರ್ಣಿಮಾ ಹಾಗು ರಜತ ಅಲ್ಲಿ ಕೆಲವೆಡೆ  ಅಜ್ಜಿ ಭೂತ ಅಂತ ಒಂದು ಭೂತ  ಇದೆ ಎಂದು ನಂಗೆ  ತಿಳಿಸಿದರು  .ಆದರೆ ಇದಾವುದು ಅಜ್ಜಿ ಭೂತ ?ನನಗೆ ಅಚ್ಚರಿಯಾಯಿತು ಮಲರಾಯಿ ,ಉಳ್ಳಾಲ್ತಿ ,ಜುಮಾದಿ ,ಕೊರತಿ, ಚಾಮುಂಡಿ ಮೊದಲಾದ  ಸ್ತ್ರೀ ಭೂತಗಳ ಕುರಿತು ಓದಿ ಕೇಳಿ ತಿಳಿದಿದ್ದೆ. ಆದರೆ .ಅಜ್ಜಿ ಭೂತದ ಹೆಸರನ್ನು ನಾನು ಆ ತನಕ ಕೇಳಿಯೇ ಇರಲಿಲ್ಲ. ಆ ದೈವದ ಹೆಸರು ಕೂಡ ವಿದ್ವಾಂಸರ ಭೂತಗಳ ಪಟ್ಟಿಯಲ್ಲಿ ಇರಲಿಲ್ಲ. ಕೊರಗತನಿಯ ಭೂತಕ್ಕೆ ಕೊರಗಜ್ಜ ಎಂದು ಹೇಳುವುದು ನನಗೆ ಗೊತ್ತಿತ್ತು.ಹಾಗೆಯೇ ಕೊರತಿ ಭೂತಕ್ಕೆ ಅಜ್ಜಿ ಭೂತ ಎಂದು ಹೇಳುತ್ತಿರಬಹುದೇ ?ಎಂಬ ಸಂಶಯ ಒಂದು ಕ್ಷಣ ಉಂಟಾಯಿತು.ಆದರೆ ಭೂತದ ನೇಮವನ್ನು ನೋಡದೆ ,ಪಾಡ್ದನ ರೆಕಾರ್ಡ್ ಮಾಡದೆ ಯಾವ ನಿರ್ಣಯಕ್ಕೂ ಬರುವುದು ಸರಿಯಲ್ಲ !ನಮ್ಮ ಊಹೆ ಅನೇಕ ಬಾರಿ ತಲೆಕೆಳಗಾಗುತ್ತದೆ ಎಂಬುದು ನನ್ನ ಅನುಭವದ ಮಾತು .ನಾನು ಭೂತಗಳ ಕುರಿತು ಊಹಿಸಿದ್ದೆಲ್ಲ ತಲೆಕೆಳಗಾದ ಅನುಭವ ಅನೇಕ ಬಾರಿ ನಂಗೆ ಆಗಿದೆ .ಆದ್ದರಿಂದ ಬೇರೆಯವರು ಹೇಳಿದ್ದರ ಮೇಲೆ ಭೂತಗಳ ಕುರಿತು ಯಾವುದೇ ನಿರ್ಧಾರಕ್ಕೆ ಬಾರದೆ ಸ್ವತಃ ರೆಕಾರ್ಡ್ ಮಾಡಿ ಅಧ್ಯಯನ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

.
ಆದ್ದರಿಂದ ಅಜ್ಜಿ ಭೂತದ  ಕೋಲವನ್ನು ರೆಕಾರ್ಡ್ ಮಾಡಲು ನಿರ್ಧರಿಸಿದೆ .ಗುತ್ತಿಗಾರು ಹಾಗೂ ಮಡಪ್ಪಾಡಿಗಳಲ್ಲಿ ನೂರೊಂದು ಮಲೆ ಭೂತಗಳ ನೇಮ ಎಂಬ ಸಮೂಹ ಭೂತಾರಾಧನೆಯಲ್ಲಿ ಅಜ್ಜಿ ಭೂತಕ್ಕೆ ಆರಾಧನೆ ಇರುವುದು ತಿಳಿದು ಬಂತು . ೩ ದಿವಸಗಳ ಕಾಲ ನಿರಂತರವಾಗಿ ಹಗಲು ರಾತ್ರಿ ನಡೆಯುವ ಈ ಭೂತಾರಾಧನೆಯಲ್ಲಿ ಕೊನೆಯ ದಿವಸ ರಾತ್ರಿ ೨ ಗಂಟೆ ಹೊತ್ತಿಗೆ ಪ್ರಾರಂಭವಾಗುವ ಅಜ್ಜಿ ಭೂತ ಮತ್ತು ಕೂಜಿಲು ನೇಮ ಬೆಳಗ್ಗೆ ೮-೯ ಗಂಟೆ ಹೊತ್ತಿಗೆ ಮುಕ್ತಾಯಗೊಳ್ಳುತ್ತದೆ.ಅಜ್ಜಿ ಭೂತಕ್ಕೆ ಹರಿಕೆಯಾಗಿ ವೀಳ್ಯದೆಲೆ ಅಡಿಕೆ ,ಪೊರಕೆ ,ಹಾಗೂ ಸಪ್ಪಿನ ಕಟ್ಟಗಳು ರಾಶಿ ರಾಶಿಯಾಗಿ ಬಂದಿರುತ್ತದೆ ಇವೆಲ್ಲ ಅಜ್ಜಿ ಉಪಯೋಗಿಸುವ ವಸ್ತುಗಳೇ ಆಗಿವೆ.
ನಾನು ನೋಡಿದ ಭೂತದ ಕೋಲಗಳಲ್ಲಿ ಅತ್ಯಂತ ವಿಶಿಷ್ಟವಾದದ್ದು ಅಜ್ಜಿ ಭೂತದ ಕೋಲ .ಅಜ್ಜಿ ಭೂತದ ಆರಾಧನೆ ಇರುವ ಮಡಪ್ಪಾಡಿ ಗುತ್ತಿಗಾರು ಮೊದಲಾದೆಡೆಗಳಲ್ಲಿ ಉಲ್ಲಾಕುಳು ಪ್ರಧಾನ ದೈವ ಆದರೆ ಜನಪ್ರಿಯತೆ ಹಾಗೂ ಕಾರನಿಕದಲ್ಲಿ ಅಜ್ಜಿ ಭೂತ ಪ್ರಧಾನ ದೈವವನ್ನು ಹಿಂದಿಕ್ಕಿ ಮೆರೆಯುತ್ತಿದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಅಜ್ಜಿ ಭೂತದ  ನೇಮದ ಸೊಗಸನ್ನು ನೋಡಿಯೇ ಅನುಭವಿಸಬೇಕು. ಯಕ್ಷಗಾನದಲ್ಲಿ ಸ್ತ್ರೀವೇಷವನ್ನು ಪುರುಷ ಕಲಾವಿದರೇ ಹಾಕುವ ಹಾಗೆ ಭೂತಾರಾಧನೆಯಲ್ಲಿ ಕೂಡ ಸ್ತ್ರೀ ಭೂತಗಳನ್ನು ಪುರುಷ ಭೂತ ಕಟ್ಟುವ ಕಲಾವಿದರೇ ಕಟ್ಟುತ್ತಾರೆ.ಯಕ್ಷಗಾನದ ಸ್ತ್ರೀ ವೇಷಧಾರಿಗಳು ಆಯಾಯ ಸ್ತ್ರೀಯರ ವ್ಯಕ್ತಿತ್ವಕ್ಕನುಗುನವಾಗಿ ತಮ್ಮ ನಡೆ ನುಡಿಯನ್ನು ಬದಲಾಯಿಸಿ ಅಭಿನಯಿಸಿವಂತೆ ಭೂತ ಕಟ್ಟು ವ ಕಲಾ ವಿಧರು ಕೂಡ ಸ್ತ್ರೀ ಭೂತವನ್ನು ಕಟ್ಟಿದಾಗ ಆಯಾಯ ಭೂತದ ನಡೆನುಡಿಯನ್ನು ಅನುಸರಿಸುತ್ತಾರೆ  .ಅಜ್ಜಿ ಭೂತ ಹೆಸರಿಗನುಗುಣವಾಗಿ ಭೂತ ಮಾಧ್ಯಮರು ಅಜ್ಜಿ ವೇಷ ಹಾವ ಭಾವ ನಡೆ ನುಡಿಗಳನ್ನು ಅಭಿವ್ಯಕ್ತ ಪಡಿಸುತ್ತಾರೆ. ಜೊತೆಗೆ ಭೂತಗಳ ವಿಶಿಷ್ಟ ಕುಣಿತವನ್ನು ತೋರುತ್ತಾರೆ .ಅಜ್ಜಿ ಭೂತದ ನರ್ತನ ಬಹಳ ಕಲಾತ್ಮಕವಾಗಿದೆ ! ಜುಮಾದಿ ಉಳ್ಳಾಲ್ತಿ  ಕಲ್ಲುರ್ಟಿ ಮೊದಲಾದ ದೈವಗಳು ಸ್ತ್ರೀ ದೈವಗಳೇ ಆಗಿದ್ದರು ಕೂಡ ಅವುಗಳ ಹಾವ ಭಾವ ನರ್ತನಗಳು ಪುರುಷ ದೈವಗಳಂತೆ ತುಸು ಭೀಕರವಾಗಿಯೇ ಇರುತ್ತವೆ. ಆದರೆ ಅಜ್ಜಿ ಭೂತ ನರ್ತನ ಬಹಳ ಶಾಂತವಾಗಿ ಇರುತ್ತದೆ ಇದರಲ್ಲಿ ಕೋಪ ತಾಪದ ಉಗ್ರತೆಯ ಅಭಿವ್ಯಕ್ತಿ ಇರುವುದಿಲ್ಲ .
ಸುಳ್ಯ ತಾಲೂಕಿನ ಗುತ್ತಿಗಾರು, ಕಂದ್ರಪ್ಪಾಡೀ, ವಾಲ್ತಾಜೆ ಮೊದಲಾದೆಡೆಗಳಲ್ಲಿ ಉಳ್ಳಾಕುಲು ದೈವಗಳ ಪರಿವಾರ ದೈವವಾಗಿ ಅಜ್ಜಿ ಭೂತವು ಆರಾಧಿಸಲ್ಪಡುತ್ತದೆ.  ಇಲ್ಲಿ ಅಜ್ಜಿ ಭೂತ ಸೇರಿಗೆ ದೈವವಾಗಿದ್ದರೂ ಕೂಡಾ ಉಳ್ಳಾಕುಲುಗಳಿಗಿಂತ ಹೆಚ್ಚು ಮಹಿಮೆಯನ್ನು, ಮಹತ್ವವನ್ನು ಹೊಂದಿದೆ.  ಅಜ್ಜಿ ಭೂತಕ್ಕೆ ವೀಳ್ಯದೆಲೆ, ಅಡಿಕೆ ಹಾಗೂ ಹಿಡಿಸೂಡಿಗಳನ್ನು ಹರಕೆಯಾಗಿ ನೀಡುತ್ತಾರೆ.  ಅಜ್ಜಿ ಭೂತಕ್ಕೆ ಹರಕೆಯ ರೂಪದಲ್ಲಿ ಈ ವಸ್ತುಗಳ ರಾಶಿಯೇ ಹರಿದು ಬರುತ್ತದೆ.  ಕೆಲವೆಡೆ ಸಪ್ಪಿನ ಕಟ್ಟವನ್ನು ಕೂಡಾ ಹರಿಕೆಯಾಗಿ ಒಪ್ಪಿಸುವ ಪದ್ಧತಿ ಇದೆ.
ಮೂರು ರೀತಿಯಲ್ಲಿ ಅಜ್ಜಿ ಭೂತವನ್ನು ಕಟ್ಟುತ್ತಾರೆ.
೧. ಮಲೆ ಅಜ್ಜಿ:   ಮಲೆ ಅಜ್ಜಿಯ ವೇಷ ಭೂಷಣಗಳು ಮಲೆಕುಡಿಯ ಹೆಂಗಸರ ಅಲಂಕಾರವನ್ನು ಹೋಲುತ್ತದೆ.  ಮಲೆ ಅಜ್ಜಿ ತುಳು ಭಾಷೆಯಲ್ಲಿ ನುಡಿ ಕೊಡುತ್ತದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

೨. ಭೈರಜ್ಜಿ:  ಭೈರಜ್ಜಿಯ ವೇಷ  ಭೂಷಣಗಳು ಭೈರ ಜನಾಂಗದ ಹೆಂಗಸರ ಅಲಂಕಾರವನ್ನು ಹೋಲುತ್ತದೆ.  ಭೈರರ ಮಾತೃ ಭಾಷೆ ಕನ್ನಡ. ಅಂತೆಯೇ ಭೈರಜ್ಜಿ ಕೂಡಾ ಕನ್ನಡ ಭಾಷೆಯಲ್ಲಿ ನುಡಿ ಕೊಡುತ್ತದೆ.
೩. ಕೊರಗಜ್ಜಿ:  ಕೊರಗ ಜನಾಂಗದವರ ವೇಷ ಭೂಷಣ, ನಡೆ ನುಡಿಯನ್ನು ಹೊಂದಿರುತ್ತದೆ.
ಭತ್ತವನ್ನು ಮೆರಿಯುವ ಕೇರುವ ಅಭಿನಯವನ್ನು ಮಾಡುವ ಅಜ್ಜಿ ಭೂತಕ್ಕೆ ಸಂಬಂಧಿಸಿದಂತೆ ಚಿಕ್ಕದೊಂದು ಪಾಡ್ದಾನವನ್ನು ಹೇಳುತ್ತಾರೆ.  ಆದರೆ ಈ ಪಾಡ್ದನದಲ್ಲಿ ಈ ದೈವದ ಹುಟ್ಟಿನ ಕುರಿತು ಮಾಹಿತಿ ಇಲ್ಲ.  ಕಂಚಿ ಘಟ್ಟದಿಂದ ಉಳ್ಳಾಕುಲು ಒಟ್ಟಿಗೆ ಸ್ಥಾನತ ಅಜ್ಜಿ ದೈವ ಇಳಿದು ಬಂದಿದೆ ಎನ್ನುತ್ತಾರೆ.
ಓ ಬಂಟನಾಡು ಪಿರಿಕಿ  ಮಲೆಟ್ ಬರುವಳು ಸ್ಥಾನತಜ್ಜ
ಓ ಇಂಚಿನ ಸತ್ಯಂತ ಸ್ಥಾನದಜ್ಜಿ ಪಂಡಂಡ
ಓ ನರ್ತು ಬಜ್ಜೆಯಿ ಕಾಮಾಂದು ಕೊಡಿತ್ತುಂಡು
ಓ ಪರತ್ತು ಬಚ್ಚಿರೆ ಬಳ್ಳಾದು ಕೊಡಿತ್ತುಂಡು
ಆಳು ಬರುವಳು ಜೋಕ್ಲೆನು ಲೆತ್ತೊಂಡು ಬರುವಳು
ಸಾರತ್ತೊಂಜಿ ಗಣಕುಳು ನೂತೊಂಜಿ ಕೂಜಿಲು
ಡೆಂಜಿ ಪತ್ತೊಂದು ಬರುವಳು ಸ್ಥಾನದಜ್ಜಿ
ಉರಿಕುಡ್ತೊಂದು ಡೆಂಜಿ ಪತ್ತೊಂದು
ಸಾರತ್ತೊಂಜಿ ಗಂಡಗಣಕುಲೆನು ನೂತೊಂಜಿ ಕೂಜಿಲೆನು/ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಲೆತ್ತೊಂದು ಬರುವಳು ಸ್ಥಾನದಜ್ಜಿ.
ಕನ್ನಡ ಅನುವಾದ :
ಓ ಬಂಟ ನಾಡು ಪಿರಿಕಿ ಮಲೆಗೆ   ಬರುವಳು ಸ್ಥಾನದಜ್ಜಿ
ಓ ಇಂಥಹ ಸತ್ಯದಜ್ಜಿ ಎಂದು ಹೇಳುವಾಗ
ಓ ತುಂಡು ಮಾಡಿದ ಅಡಿಕೆ ಮೊಳಕೆ ಬರುತ್ತದೆ
ಓ ಹಳೆಯ ವೀಳ್ಯದೆಲೆ ಬಳ್ಳಿಯಾಗಿ ಚಿಗುರುತ್ತದೆ
ಅವಳು ಬರುತ್ತಾಳೆ ಮಕ್ಕಳನ್ನು ಕರೆದು ಕೊಂಡು
ಸಾವಿರದೊಂದು ಗಣಗಳು ನೂರೊಂದು ಕೂಜಿಲು
ಏಡಿ ಹಿಡಿದುಕೊಂಡು ಬರುವಳು ಸ್ಥಾನದಜ್ಜಿ
ಕೆಂಪಿರುವೆ ಕೊಡವಿಕೊಂಡು ಏಡಿ ಹಿಡಿದು ಕೊಂಡು
ಸಾವಿರದೊಂದು ಗಂಡ ಗಣಗಳನ್ನು ನೂರೊಂದು ಕುಜಿಗಳನ್ನು
ಕರೆದು ಕೊಂಡು ಬರುತಾಳೆ ಸ್ಥಾನದಜ್ಜಿ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

“ ಬಂಟ ನಾಡಿಗೆ ಪಿರಿಕಿಮತಿಗೆ ಸತ್ಯದ ಸ್ಥಾನದಜ್ಜಿ ಬರುವಾಗ ನೀರಿನಲ್ಲಿ ಹಾಕಿದ ಅಡಿಕೆ ಮೊಳಕೆ ಬರುತ್ತದೆ.  ಹಳೆಯ ವೀಳ್ಯದೆಲೆ ಚಿಗುರಿ ಬಳ್ಳಿಯಾಗಿ ಹರಡುತ್ತದೆ.  ಅಜ್ಜಿಯು ಸಾವಿರದೊಂದು ಗಣಗಳನ್ನು ನೂರೊಂದು  ಕೂಜಿಲುಗಳನ್ನು ಕರೆದುಕೊಂಡು ಏಡಿ ಹಿಡಿದುಕೊಂಡು ಬರುತ್ತಾಳೆ ” ಎಂದುಪಾಡ್ದನದಲ್ಲಿ ಹೇಳಿದೆ.
ಅಜ್ಜಿ ಭೂತವನ್ನು ‘ಸುಬ್ಬಜ್ಜಿ’ ಎಂದೂ ಕರೆಯುತ್ತಾರೆ.  ಸುಬ್ಬಕ್ಕ/ಸುಬ್ಬಜ್ಜಿಯನ್ನು ಮಹಾಲಕ್ಷ್ಮಿಯೆಂದು ವನ ಗೂಡು ಮತ್ತು ಇತರ ಕೆಲವೆಡೆಗಳಲ್ಲಿ ಆರಾಧಿಸುತ್ತಾರೆ.  ಭೂತಗಳು ಪುರಾಣಗಳ ದೇವರುಗಳೊಂದಿಗೆ ತಾದ್ಯಾತ್ಮತೆಯನ್ನು ಹೊಂದಿ ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಸರ್ವೇ ಸಾಮಾನ್ಯವಾದ ವಿಚಾರವಾಗಿದೆ.  ಸುಬ್ಬಜ್ಜಿಗೆ ಸಂಬಂಧಿಸಿದಂತೆ ಒಂದು ಐತಿಹ್ಯವು ಪ್ರಚಲಿತವಿದೆ.  ಸುಳ್ಯ ತಾಲೂಕಿನ ಬಳ್ಪದಲ್ಲಿ ಶೂಲಿನೀ ದೇವಾಲಯವಿದೆ.  ಉಳ್ಳಾಕುಲು ದೈವಗಳಿಗೆ ಶೂಲಿನೀ ದೇವಾಲಯದ ಬಳಿ ಬೆಳಕು ಕಾಣಿಸುತ್ತದೆ.  ಅವರು ಅಲ್ಲಿಗೆ ಹೋದಾಗ ಅಲ್ಲಿ ಒಂದು ಸ್ತ್ರೀ ರೂಪಿ ಶಕ್ತಿ ಇರುತ್ತದೆ.  ಉಳ್ಳಕುಲು ಆ ಸ್ತ್ರೀಯನ್ನು ತಮ್ಮ ಕುದುರೆಯಲ್ಲಿ ಕುಳಿತುಕೊಳ್ಳಿಸಿಕೊಂಡು ಬರುವಾಗ ನೋಡಿದ ಜನ ನಗಾಡುತ್ತಾರೆ.   ಆಗ ನಾಚಿಕೊಂಡ ಉಳ್ಳಾಕುಲು ಕುದುರೆಯೊಂದಿಗೆ ಹುಲಿ ಪಾಂಜಾರ ಎಂಬ ಗುಹೆಯ ಒಳಗೆ ನುಗ್ಗಿದರು ಎಂದು ಐತಿಹ್ಯವು ತಿಳಿಸುತ್ತದೆ.  ಆ ಸ್ತ್ರೀಯೇ ‘ ಅಜ್ಜಿ ಭೂತ’ ಎಂದು ಹೇಳುತ್ತಾರೆ. ಆದರೆ ಅಜ್ಜಿ ಭೂತದ ಹಿನ್ನೆಲೆ ತಿಳಿಯಲಿಲ್ಲ ಅಜ್ಜಿ ಮೂಲತಃ ಯಾರು ?ದೈವತ್ವ ಹೇಗೆ ಬಂತು ?ಎಂಬ ಪ್ರಶ್ನೆಗಳು ಹಾಗೆಯೇ ಉಳಿದವು. ಆದ್ದರಿಂದ ಮತ್ತೆ ಕೂಡಾ ಅಜ್ಜಿ ಭೂತದ ಬಗ್ಗೆ ಎಲ್ಲರರಲ್ಲಿ ವಿಚಾರಿಸುತ್ತಾ ಇದ್ದೆ
ವನಗೂಡಿನಲ್ಲಿ  ಸಬ್ಬಮ್ಮ ಬಹಳ  ಕಾರಣಿಕದ ದೈವವೆಂದೆ ಪ್ರಸಿದ್ಧಿ ಪಡೆದ ದೈವತ. ಸಬ್ಬಮ್ಮ ನನ್ನೇ ಅಜ್ಜಿ ಭೂತ ಎನ್ನುತ್ತಾರೆ ಎಂದು ಕ್ಷೇತ್ರ ಕಾರ್ಯದ ಸಂದರ್ಭ ದಲ್ಲಿ ನನಗೆ ತಿಳಿಯಿತು .ಅಜ್ಜಿ ಭೂತದ ಬೆನ್ನು ಹಿಡಿದು ಸಬ್ಬಮ್ಮ ನ ಕುರಿತು ಅಧ್ಯಯನ ಮಾಡುವುದು ನನಗೆ ಅನಿವಾರ್ಯವಾಯಿತು . ಸಬ್ಬಮ್ಮನ ಕುರಿತು ಅಧ್ಯಯನ ಮಾಡಿದಾಗ ಅಜ್ಜಿ ಭೂತದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂತು.
ಸಬ್ಬೆಡ್ತೆರ್ /ಸಬ್ಬಮ್ಮ ದೈವದ ರೆಕಾರ್ಡ್ ಮಾಡಲು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯ ಎದುರಾದ ಕೃಷ್ಣ ಸರ್ಪದ ಚಿತ್ರ ಈಗ ಕೂಡಾ ಕಣ್ಣ ಮುಂದೆ ಕಟ್ಟುತ್ತಿದೆ ! copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ವನ ಗೂಡು ಸಬ್ಬಮ್ಮ ದೈವಕ್ಕೆ ಸುಳ್ಯದ ಕಾಯರ್ತೋಡಿಯಲ್ಲಿ ಆರಾಧನೆ ಇದೆ ಎಂದು ತಿಳಿದು ಆ ಬಗ್ಗೆ ವಿಚಾರಿಸಿದೆ . ಆಗ ನನ್ನ ವಿದ್ಯಾರ್ಥಿ ನಿತಿನ್  ಗೌಡ  ಸುಳ್ಯದ ಕಾಯರ್ತೋಡಿಯಲ್ಲಿ ೧೦೧ ಮಲೆ ದೈವಗಳಿಗೆ ಪ್ರತಿ ವರ್ಷ ಕೋಲ ನಡೆಸಿ ಆರಾಧಿಸುತ್ತಾರೆ ಎಂದು ತಿಳಿಸಿದರು. ಅದನ್ನು ಜಾಲಾಟ ಎಂದು ಕರೆಯುತ್ತಾರೆ.
ಆ ನೇಮ ಬೆಳಗ್ಗಿನ ಜಾವ ೪  ಗಂಟೆಗೆ ಆರಂಭವಾಗುತ್ತದೆ .ಆದ್ದರಿಂದ ಹಿಂದಿನ ದಿನವೇ ಪರಿಚಿತರಾದ ಅಟೋ ಚಾಲಕರಿಗೆ ಬೆಳಗ್ಗಿನ ಜಾವ ೩ ಗಂಟೆಗೆ ಬರ ಹೇಳಿದ್ದೆ .ಕತ್ತಲಿನಲ್ಲಿಯೇ ಬೆಂಗ ಮಲೆಯ ನಡುವಿನ ಮಾರ್ಗದಲ್ಲಿ ಸುಳ್ಯಕ್ಕೆ ಹೋಗ ಬೇಕು .ಬೆಂಗ ಮಲೆ ಸುಳ್ಯ ಮತ್ತು ಬೆಳ್ಳಾರೆ ನಡುವೆ ಇರುವ  ರಕ್ಷಿತಾರಣ್ಯ . ಇಲ್ಲಿ ಇದ್ದಕ್ಕಿದ್ದ ಹಾಗೆ  ಆನೆಯೋ ಕಾಡು ಹಂದಿಯೋ  ದಾಳಿ ಮಾಡುತ್ತಿದ್ದ ಬಗ್ಗೆ ಕೇಳಿದ್ದೆ !.ಆದ್ದರಿಂದ  ಎಲ್ಲಾದರೂ ಆನೆಯೋ ಕಾಡು ಹಂದಿಯೋ ಎದುರಾದರೆ ಏನು ಗತಿ !ಎಂದು ಮನಸಿನ ಮೂಲೆಯಲ್ಲಿ ಭಯ ಇತ್ತು ! ಅದೃಷ್ಟವಶಾತ್ ಆನೆ ಹಂದಿಗಳು ಎದುರಾಗಲಿಲ್ಲ . ಬದಲಿಗೆ ಸುಮಾರು ೭-೮ ಅಡಿ ಉದ್ದದ ಸುಂದರವಾದ ಕೃಷ್ಣ ಸರ್ಪವೊಂದು ಮಾರ್ಗದಲ್ಲ್ಲಿ ಅಡ್ಡಲಾಗಿ ನಿಧಾನವಾಗಿ ಸಾಗುತ್ತಿತ್ತು . ಅಟೋ ಬಂದಾಗ ಅದಕ್ಕೆ ಏನೋ ಗೊಂದಲ ಗಾಭರಿ  ಆಯಿತೆಂದು ಕಾಣುತ್ತದೆ ,ಬುಸ್ಸೆಂದು ಅಗಲವಾಗಿ ಹೆಡೆ ತೆಗೆದು ನಿಂತಿತು . ಅಟೋ ಚಾಲಕ ನಿಲ್ಲಿಸಿದರು. ನನಗೆ ಭಯದಲ್ಲಿ ಕೈಕಾಲು ಆಡಲಿಲ್ಲ !. ಸ್ವಲ್ಪ ಹೊತ್ತು ಹೆಡೆ ಬಿಚ್ಚಿಯೇ ಇದ್ದ ಆ ಹಾವು ನಿಧಾನವಾಗಿ ಸರಿದು ಬೆಂಗ ಮಲೆಯ ಕಾಡಿನಲ್ಲಿ ಮರೆಯಾಯಿತು ಅಬ್ಬ ಎಂದು ಉಸಿರು ಬಿಟ್ಟೆ !ಅಂತು ನಾವು ಯಾವುದೇ ತೊಂದರೆ ಇಲ್ಲದೆ ಸಕಾಲದಲ್ಲಿ  ತಲುಪಿದೆವು .
ಅಟೋ ಇಳಿಯುವಷ್ಟರಲ್ಲಿ ಅಲ್ಲಿಗೆ ಬಂದು ನನ್ನ ವಿದ್ಯಾರ್ಥಿ ನಿತಿನ್  ಬಂದು ಜಾಲಾಟ ನಡೆಯುವ ಜಾಗಕ್ಕೆ ಕರೆದುಕೊಂಡು ಹೋದರು . ಅಡಿಕೆ ತೆಂಗಿನ ತೋಟದ ನಡುವೆ ತುಸು ಜಾಗ ನೇರ್ಪು ಮಾಡಿ ಭೂತದ ಕೋಲಕ್ಕೆ ಸಿದ್ಧತೆ ಮಾಡಿದ್ದರು . ಅಲ್ಲಿ ರೆಕಾರ್ಡಿಂಗ್ ಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಿದರು.
ಸುಳ್ಯದ ಕಾಯರ್ತೋಡಿಯಲ್ಲಿ ನೂರೊಂದು ಮಲೆ ದೈವಗಳ  ಜಾಲಾಟ ವರ್ಷಕ್ಕೊಮ್ಮೆ ನಡೆಯುತ್ತದೆ.  ಇಲ್ಲಿನ ಜಾಲಾಟದಲ್ಲಿ ಉಳ್ಳಾಕುಲು ಪ್ರಧಾನ ದೈವಗಳು.  ಉಳ್ಳಾಕುಲುಗಳ ಸೇರಿಗೆ ದೈವಗಳಾಗಿ ಪುರುಷ ಭೂತ, ಸಬ್ಬೆಡ್ತೆರ್, ಅಜ್ಜ ಬೊಳಯ, ಜಂಗಭಂಟ, ಬೈಸುನಾಯಕ , ಬಚ್ಚ ನಾಯಕ , ಕೂಜಿಲು ಮೊದಲಾದವರು ಆರಾಧನೆ ಪಡೆಯುತ್ತಾರೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಸಬ್ಬೆಡ್ತೆರ್ ಒಂದು ಸ್ತ್ರೀ ದೈವ.  ಉಳ್ಳಾಕುಲು ಹಾಗೂ ಇತರ ದೈವಗಳ ನೇಮದ ನಂತರ ಕೊನೆಯಲ್ಲಿ ಸಬ್ಬೆಡ್ತೆರ‍್ಗೆ ಕೊಲ ನೀಡಿ ಆರಾಧನೆ ಮಾಡುತ್ತಾರೆ.  ಗೌಡ ಜನಾಂಗದವರನ್ನು ‘ಎಡ್ತೆರ್’ ಎಂದು ಕರೆಯುತ್ತಾರೆ. ಸಬ್ಬಮ್ಮ/ಸಬ್ಬಕ್ಕ  ಎಡ್ತೆರ್ ಎಂಬುದೇ ಕಾಲಾಂತರದಲ್ಲಿ ಸಬ್ಬೆಡ್ತೆರ್ ಆಗಿರಬೇಕು. ಸಬ್ಬಕ್ಕ ದೇಂಗೊಡಿ ಮನೆಗೆ ಮದುವೆಯಾಗಿ ಬಂದ ಹೆಣ್ಣು ಮಗಳು.  ಸಬ್ಬೆಡ್ತೆರ್ ಕುರಿತಾದ ಚಿಕ್ಕ ಪಾಡ್ದನವನ್ನು ನೇಮದ ಸಂದರ್ಭದಲ್ಲಿ ಹೇಳುತ್ತಿದ್ದು, ಅದರಲ್ಲಿ ಸಬ್ಬಕ್ಕನ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಸಿಗುತ್ತದೆ.
ಓ ದೇಂಗೋಡಿದ ಇಲ್ಲುಡವೋ                    
ಓ ದೇಂಗೋಂಡಿದ ತರುವಾಡೊ                  
ಓ ಪುಳಿತ್ತಡಿ ಇಲ್ಲುಗೋ                           
ಓ ದೈವ ದೇವೆರೆಗು ಬೊಳ್ಪುದೀಯೆರೆಂದು          
ಓ ಅವುಳು ಸಬ್ಬಕ್ಕ ಪಣ್ಪಿನ ಪೊಣ್ಣುನು ಪಾತೆರಿಯರೇ
ಓ ಪಾಪುಲ ಕಟ್ಟೆರುಗೆನ ಅಂಗಯಿ  ಗೌಡರು
ಕನ್ನಡ ಅನುವಾದ :                       
ಓ ದೇಂಗೋಡಿನ ಮನೆಗೆ
ಓ ದೇಂಗೋಡಿನ ತರವಾಡು
 ಓ ಹುಳಿಯಡಿ  ಮನೆಗೆ
ಓ ದೈವ ದೇವರಿಗೆ ದೀಪ ಇಡಲೆಂದು
ಓ ಸಬ್ಬಕ್ಕ ಎಂಬ ಹೆಣ್ಣನ್ನು ಮಾತಾಡಿದ
ಓ ಸೇತುವೆ ಕಟ್ಟಿದರು ಅಂಗಯಿ ಗೌಡರು
ದೇಂಗೋಡಿ ತರವಾಡಿನ ಪುಳಿತ್ತಡಿ ಮನೆಗೆ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಮದುವೆಯಾಗಿ ಸಬ್ಬಕ್ಕ ಎಂಬ ಹೆಣ್ಣು ಬರುವುದನ್ನು ಇಲ್ಲಿ ಹೇಳಲಾಗಿದೆ.  ಒಂದು ದಿನ ದೇಂಗೋಡಿ ಮನೆಯಿಂದ ಸಬ್ಬಕ್ಕ ಹಾಗೂ ಅವಳ ಅತ್ತಿಗೆಯಂದಿರು ಸಪ್ಪು ತರಲು ಪೂ ಮಲೆ ಕಾಡಿಗೆ ಹೋಗುತ್ತಾರೆ.
ಓ ದೇಂಗೋಡಿ ಇಲ್ಲುಡ್ದು ಅತ್ತಿಗೆ ಮೈತ್ತಿದಿಲ  
ಓ ಗುಡ್ಡೆಗೆ ಪೋಯೇರೆ                           
ಓ ಸಪ್ಪು ಕೊಂಡರ್ಯರ ಪೋನಾಗ ಅವುಳು
ಓ ಸಪ್ಪು ಕೊಂಡರ್ಪುನಗ ಬಾಕಿ ಆಯೆರು
ಓ ಬಾಕಿ ಆಯೆರು ಸಬ್ಬಕ್ಕ ಅವುಳು. 
ಕನ್ನಡ ಅನುವಾದ :    
ಓ ದೇಂಗೋಡಿ ಮನೆಯಿಂದ ಅತ್ತಿಗೆ ನಾದಿನಿಯರು
ಓ ಗುಡ್ಡೆಗೆ ಹೋದರು       
ಓ ಸಪ್ಪು ತರಲು ಹೋದಾಗ ಅಲ್ಲಿ
ಓ ಸಪ್ಪು ತರಲು ಹೋದಾಗ ಅಲ್ಲಿ
ಓ ಸಪ್ಪು ತರುವಾಗ ಹಿಂದೆ  ಉಳಿದರು
ಓ ಹಿಂದೆ  ಉಳಿದರು ಸಬ್ಬಕ್ಕ ಅಲ್ಲಿ
ಸಪ್ಪು ಕಡಿದು ಕಟ್ಟು ಕಟ್ಟಿ ಒಬ್ಬರ ತಲೆಗೆ ಇನ್ನೊಬ್ಬರು ಇಡುತ್ತಾ ಅಲ್ಲಿಂದ ಹೊರಡುತ್ತಾರೆ.  ಕೊನೆಯಲ್ಲಿ ಸಬ್ಬಕ್ಕನ ತಲೆಗೆ ಸಪ್ಪಿನ ಕಟ್ಟ ಹಿಡಿಯಲು ಯಾರೂ ಇರುವುದಿಲ್ಲ.  ಹೊಸ ಮದುಮಗಳು ಸಬ್ಬಕ್ಕ ಹಿಂದೆ ಉಳಿಯುತ್ತಾಳೆ.
ಓ ಅತನಾಗ ಅವುಳು ಸಪ್ಪುನು ಪತ್ತುದು
ಓ ಸಪ್ಪುನು ಪತ್ತುದು ಬೊಟ್ಯಗು ಬಡತ್ತುದು/
ಬಲಾಂದ್ ಪಣ್ಣುಂಡುಯೇ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಆ........ನಾ........ಯೇ
ಓ ಸಪ್ಪುನು ಪತ್ತುದು ಮಾಯಕ ಮಣ್ಪುನಗ
ಓ ಕಾಯ ಬುಡಿಯೆರ್ ಮಾಯ ಸ್ವರೂಪವಾಯೆರ್
ಓ ಇರ್ವೆರು ಉಳ್ಳಕುಲೆನ ಬಲತ್ತ ಭಾಗೊಡು ಉಂತ್ಯೆರುಯೇ
ಕನ್ನಡ ಅನುವಾದ :
ಓ ಅಷ್ಟಾಗುವಾಗ ಅಲ್ಲಿ ಸೊಪ್ಪು ಹಿಡಿದು
ಓ ಸೊಪ್ಪು ಹಿಡಿದು ಬೆಟ್ಟಕ್ಕೆ ಹತ್ತಿ
ಬಾ ಎಂದು ಹೇಳುತ್ತದೆ
ಆ ....ನಾ ...ಯೇ ..
ಓ ಸೊಪ್ಪು ಹಿಡಿದು ಮಾಯಕ ಮಾಡುವಾಗ
ಓ ದೇಹ ಬಿಟ್ಟರು ಮಾಯಾ ಸ್ವರೂಪವಾದರು
ಓ ಇಬ್ಬರು ಉಲ್ಲಾಕುಳುಗಳ ಬಲ ಭಾಗದಲ್ಲಿ ನಿಂತರು .
ಆಗ ಯಾರೋ ಒಬ್ಬರು ಬಂದು ಸಪ್ಪಿನ ಕಟ್ಟನ್ನು ಅವಳ ತಲೆಗೆ ಹಿಡಿದು ಬೆಟ್ಟದ ಮೇಲೆ ಬರಲು ಹೇಳುತ್ತಾರೆ.  ಹೊಸ ಮದುಮಗಳು ಸಬ್ಬಕ್ಕನನ್ನು ಮಾಯ ಮಾಡಿದರು.  ಸಬ್ಬಕ್ಕ ಇಬ್ಬರು ಉಳ್ಳಾಕುಲುಗಳ ಬಲಭಾಗದಲ್ಲಿ ನಿಂತಳು ಎಂದು ಪಾಡ್ದನದಲ್ಲಿ ಹೇಳಿದೆ.  copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಹೀಗೆ ಉಳ್ಳಾಕುಲುಗಳ ಸೇರಿಗೆ ಸೇರಿದ ಸಬ್ಬಕ್ಕನಿಗೆ ಕಾಯರ್ತೋಡಿಯಲ್ಲಿ ಉಳ್ಳಾಕುಲುಗಳ ಸೇರಿಗೆ ದೈವವಾಗಿ ಆರಾಧನೆ ಇದೆ.  ಕಾಯರ್ತೋಡಿಯ ಜಾಲಾಟವನ್ನು ದೇಂಗೋಡಿ ಮನೆಯವರು ನಡೆಸಿಕೊಡುತ್ತಾರೆ.
ಮಾಯವಾಗಿ  ದೈವತ್ವಕ್ಕೇರಿದ ದೇಂಗೋಡಿ ತರವಾಡಿನ ಮನೆಯ ಹೊಸ ಮದುಮಗಳು ಸಬ್ಬಕ್ಕ/ ಸುಬ್ಬಕ್ಕನೇ ಅಜ್ಜಿ ಭೂತ ಎಂದು ಆರಾಧಿಸಲ್ಪಡುತ್ತಾಳೆ.  ಕಾರ್ಯತೋಡಿಯಲ್ಲಿ   ಭೂತದ ನೇಮಕ್ಕೆ ಕುದಿ ಇಟ್ಟ ನಂತರ ನೇಮ ಮುಗಿಯುವ ತನಕ ಪೂಮಲೆ ಕಾಡಿನಲ್ಲಿ ಸಪ್ಪು ಕಡಿಯಬಾರದೆಂಬ ನಿಯಮವಿದೆ.  ಈ ನಿಯಮವನ್ನು ಮೀರಿದರಿಂದ ಸಬ್ಬಕ್ಕನನ್ನು ದೈವ ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡಿತು.  ಸೇರಿಗೆ ದೈವ ಸಬ್ಬಕ್ಕ ಕಾಲಾಂತರದಲ್ಲಿ ಅತ್ಯಂತ ಕಾರಣಿಕವಿರುವ ಅಜ್ಜಿ ದೈವವಾಗಿ ಆರಾಧಿಸಲ್ಪಡುತ್ತಾಳೆ.
ಅಜ್ಜಿ ಭೂತದೊಂದಿಗೆ ಆರಾಧಿಸಲ್ಪಡುವ ಎರಡು ತುಂಡು ಭೂತಗಳು ಕೂಜಿಲುಗಳು.  ಕೂಜಿಲು ಭೂತಗಳಿಗೆ ಪ್ರತ್ಯೇಕ ಪಾಡ್ದನವಿರುವುದಿಲ್ಲ.  ಸ್ಥಾನದಜ್ಜಿಯ ಮಕ್ಕಳು ಇವರೆಂದೂ, ಇವರನ್ನು ಕರೆದುಕೊಂಡು ಏಡಿ ಹಿಡಿಯಲು ಸ್ಥಾನದಜ್ಜಿ ಬರುತ್ತಾಳೆಂದು ಅಜ್ಜಿ ಭೂತದ ಪಾಡ್ದನದಲ್ಲಿ ಹೇಳಿದೆ.  ಕಲ್ಲಡ್ಕದಲ್ಲಿ  ಸಾವಿರದೊಂದು ಭೂತಗಳಿಗೆ ಕೋಲ ನೀಡುತ್ತಿದ್ದು, ಅದರಲ್ಲಿ ‘ಡೆಂಜಿ ಪುಕ್ಕೆ’ ಎಂಬ ಒಂದು ಭೂತಕ್ಕೆ ಆರಾಧನೆ ಇದೆ.  ಪೆರ್ಲಂಪಾಡಿ ಪರಿಸರದ ಬಂಟ ಸಮುದಾಯದವರು ಏಣೆಲು ಬೇಸಾಯದ ಸಂದರ್ಭದಲ್ಲಿ ಗಣಗಳಿಗೆ ಏಡಿ(ಡೆಂಜಿ) ಮತ್ತು ಹುರುಳಿಯನ್ನು ಬೇಯಿಸಿ ಮಾಡಿದ ಪದಾರ್ಥವನ್ನು ಬಡಿಸಿ ಆರಾಧಿಸುತ್ತಾರೆ.  ಇದನ್ನು ‘ ಗಣಕುಲೆಗು ಬಳಸುವೆ’ ಎನ್ನುತ್ತಾರೆ.  ಕೂಜಿಲುಗಳನ್ನು ಗಂಡಗಣಗಳು ಎಂದು ಕರೆಯುತ್ತಾರೆ.  ಕೂಜಿಲುಗಳು ಸುತ್ತ ಮುತ್ತಲಿನ ತೋಟಗಳಿಗೆ ನುಗ್ಗಿ ಬಾಳೆಗೊನೆ, ತೆಂಗಿನಕಾಯಿ ಮೊದಲಾದವುಗಳನ್ನು ಕಿತ್ತು ತರುತ್ತಾರೆ.  ಇವು ಹಿಂದೆ ಬಂದಾಗ ತಪ್ಪಿಸಿಕೊಂಡು ಹೋಗದಂತೆ ಕೋಟೆ ಕಟ್ಟಿ  ಜನರು ನಿಲ್ಲುತ್ತಾರೆ.  ಇದು ದಾಳಿಗೆ ಬಂದ ಅಥವಾ ಕೊಳ್ಳೆ ಹೊಡೆಯಲು ಬಂದ ಸೈನಿಕರನ್ನು ಸೆರೆ ಹಿಡಿಯುವುದನ್ನು ಸಂಕೇತಿಸುತ್ತದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಉಳ್ಳಾಕುಲು ಮೂಲತ: ಅರಸರಾಗಿದ್ದರು.  ಅಂತೆಯೇ ಕೂಜಿಲುಗಳು ಅವರ ಸೈನಿಕರಾಗಿದ್ದಿರಬೇಕು. ಏಡಿ    ಹಿಡಿಯಲು ಬಂದಾಗ ನೀರಿಗೆ ಬಿದ್ದು ಇಲ್ಲವೇ ಕೊಳ್ಳೆ ಹೊಡೆಯಲು ಬಂದಾಗ ಸಿಕ್ಕಿ ಬಿದ್ದು ದುರಂತವನ್ನಪ್ಪಿದ ಸೈನಿಕರೇ ಕೂಜಿಲುಗಳೆಂದು ದೈವತ್ವಕೇರಿ ಆರಾಧನೆ ಪಡೆಯುತ್ತಾರೆ.
ಸಮಾಜೋ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಅಜ್ಜಿ ಭೂತದ ಆರಾಧನೆ ಬಹಳ ಮುಖ್ಯವಾದುದು . ಗುಡ್ಡೆಯಲ್ಲಿ ಅವಳನ್ನು ಮೇಲಕ್ಕೆ ಬಾ ಎಂದವರಾರು ?ಉಳಿದವರೇಕೆ ಹೊಸತಾಗಿ ಮದುವೆಯಾಗಿ ಬಂದ ಅತ್ತಿಗೆಯನ್ನು ಕಾಡಿನಲ್ಲಿ ಬಿಟ್ಟು ಬಂದರು? ಬೇಟೆಗೆ ಬಂದ ರಾಜನೇ ಅವಳನ್ನು ಮೋಹಿಸಿ ಮೇಲಿನ ತನ್ನರಮನೆಗೆ ಬಾ ಎಂದು ಕರೆದು ಕೊಂಡು ಹೋದನೇ ?ಅವನ ಕೃತ್ಯವನ್ನು ಉಲ್ಲಾಕುಳು ದೈವಕ್ಕೆ ಆರೋಪಿಸಲಾಯಿತೇ?ಆತನ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಆಕೆ ದುರಂತವನ್ನಪ್ಪಿದಳೆ? ಬಲ್ಪ ಶೂಲಿನಿ ದೇವಳದ  ಐತಿಹ್ಯವನ್ನು ಗಮನಿಸಿದಾಗ ಅವಳನ್ನು ಯಾರೋ ಒಬ್ಬಾತ ತನ್ನೊಡನೆ ಒಯ್ದಿರಬೇಕೆನ್ದೆನಿಸುತ್ತದೆ .ಅಜ್ಜಿ ಭೂತದ ಕಥಾನಕ ಪುರುಷ ದೌರ್ಜನ್ಯವನ್ನು ಸೂಚಿಸುತ್ತಿದೆಯೇ ?ಎಳೆಯ ತರುಣಿ ಸಬ್ಬಕ್ಕ ಅಜ್ಜಿ ಭೂತವಾದ ಪರಿ ಏನು?ಸಬ್ಬಕ್ಕ  ಸುಬ್ಬಜ್ಜಿಯಾಗಿ  ಅಜ್ಜಿ ಭೂತವಾಗಿ ಕಾರನಿಕದ ದೈವವಾಗಿ ನೆಲೆ  ಗೊಂಡಿರುವುದು ಗಮನಾರ್ಹ ವಿಚಾರವಾಗಿದೆ .ಸ್ತ್ರೀಯೊಬ್ಬಳು ಪುರುಷ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಯತ್ನವನ್ನು  ಅಜ್ಜಿ ಭೂತದ ಆರಾಧನೆ  ಅಭಿವ್ಯಕ್ತ ಗೊಳಿಸಿರುವ ಸಾಧ್ಯತೆ ಇದೆ .ಅಜ್ಜಿ ಭೂತದ ಕೋಲದಲ್ಲಿ ಬಹಳ ಶಾಂತವಾದ ಕುಣಿತ ಅಭಿನಯ ಇರುತ್ತದೆ .ಇಲ್ಲಿ ಅಜ್ಜಿ ಭೂತ .ಕೊರತಿ ಭೂತದಂತೆ   ಭತ್ತ  ಕೇರುವ, ಭತ್ತ ವನ್ನು ಒನಕೆ ಹಿಡಿದು ಮೆರಿಯುವ ,ಪೊರಕೆ ಹಿಡಿದು ಗುಡಿಸುವ ಕೆಲಸವನ್ನು ಮಾಡುತ್ತದೆ .ಭೂತವಾಗಿ  ಮೆರೆದರೂ ಸ್ತ್ರೀಯರಿಗೆ ದಿನ ನಿತ್ಯದ ಭತ್ತ ಕೇರುವುದು  ಕುಟ್ಟುವುದು ಮುಂತಾದ ಕಾರ್ಯಗಳಿಂದ ಮುಕ್ತಿ ಇಲ್ಲವೇ ? ಎಂಬ ಪ್ರಶ್ನೆ ಇಲ್ಲಿ ತಲೆದೋರುತ್ತದೆ.ಅಜ್ಜಿ ಭೂತ ಪ್ರಧಾನ ಭೂತ ಉಲ್ಲಾಕುಳುವಿನ ಸೇರಿಗೆ /ಅಧೀನ ದೈವವಾಗಿದ್ದರೂ  ಕೂಡ ಕಾಲಾಂತರದಲ್ಲಿ ಪ್ರಧಾನ ಧೈವಕ್ಕಿಂತ ಹೆಚ್ಚು ಪ್ರಸಿದ್ದಿಯನ್ನು, ಜನಮನ್ನಣೆ ಯನ್ನು ಪಡೆದಿರುವುದು ಸ್ತ್ರೀವಾದಿ ನೆಲೆಯಲ್ಲಿ ಅಧ್ಯಯನವಾಗಬೇಕಾದ ವಿಚಾರವಾಗಿದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಸುಬ್ಬಜ್ಜಿ ಈಗ ಮಹಾಲಕ್ಷ್ಮಿಯ ಪ್ರತಿರೂಪ ಎಂದು ಆರಾಧಿಸಲ್ಪಡುತ್ತಿದೆ. ತುಳುವರ ಭೂತಾರಾಧನೆಯ ಮೇಲೆ ವೈದಿಕ ಸಂಸ್ಕೃತಿ ಬೀರುತ್ತಿರುವ ಪ್ರಭಾವದಿಂದ ಇತ್ತೀಚೆಗಿನ ದಿವಸಗಳಲ್ಲಿ ತುಳು ಭೂತಗಳೆಲ್ಲ ವೈದಿಕ/ಪುರಾಣ ಮೂಲದ ದೇವತೆಗಳಾಗಿ ಪರಿವರ್ತನೆಗೆ ಒಳಗಾಗುತ್ತಿದ್ದಾರೆ .ಪಂಜುರ್ಲಿ ವಾರಾಹಿ ಆಗಿದೆ ಜುಮಾದಿ ಧೂಮಾವತಿ ಲೆಕ್ಕೆಸಿರಿ ರಕ್ತೇಶ್ವರಿ ಆಗಿದೆ. ಅಂತೆಯೇ ಅಜ್ಜಿ ಭೂತ ಮಹಾಲಕ್ಷ್ಮಿಯ ಪ್ರತಿರೂಪ ಎಂದು ಈಗ ಆರಾಧಿಸಲ್ಪಡುತ್ತಿದೆ .ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಅಜ್ಜಿ ಭೂತದ  ಮೂಲ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ . ಆದ್ದರಿಂದ  ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರೆ ಇನ್ನು ಹೆಚ್ಚು ವಿಚಾರಗಳನ್ನು ಅರಿಯಬಹುದು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ನನ್ನ ಭೂತಗಳ ಅದ್ಭುತ ಜಗತ್ತು ಕೃತಿಯ ಆಯ್ದ ಭಾಗವಿದು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

.

No comments:

Post a Comment