Friday, 28 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡಿನ ಭೂತಗಳು -32 ಉಳ್ಳಾಲ್ತಿ : © ಡಾ.ಲಕ್ಷ್ಮೀ ಜಿ ಪ್ರಸಾದ

                                                   ಚಿತ್ರ ಕೃಪೆ :ಧರ್ಮ ದೈವ
                       
                                                       copy rights reserved  

                      ತುಳುನಾಡಿನ ಪ್ರಸಿದ್ಧ ದೈವ ಉಳ್ಳಾಲ್ತಿ ಆರಾಧನೆ ತುಳುವರ ವಿಶಿಷ್ಟ ಅಭಿವ್ಯಕ್ತಿ ಕೂಡ .ಆದ್ರೆ ಉಳ್ಳಾಲ್ತಿ ಎಂಬುದು ಒಂದೇ ದೈವವಲ್ಲ !
ಒಂದೇ ದೈವಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುವ ವಿಚಾರ ಎಲ್ಲರಿಗೂ ಗೊತ್ತಿದೆ.ಉದಾ ಹರಣೆಗೆ ಹೇಳುವುದಾದರೆ ಕಲ್ಲುರ್ಟಿಯು  ,ಒರ್ತೆ,ಸತ್ಯದೇವತೆ ,ಪಾಷಾಣ ಮೂರ್ತಿ ಮೊದಲಾದ ಹೆಸರಿನಿಂದ ಆರಾಧಿಸಲ್ಪಡುವ ದೈವ .
ಹಾಗೆಯೇ ಬೇರೆ ಬೇರೆ ಶಕ್ತಿಗಳು /ದೈವಗಳು ಒಂದೇ ಹೆಸರಿನಿಂದ ಕೂಡಾ ಆರಾಧಿಸಲ್ಪದುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದ ಒಂದು ಇಲ್ಲಿನ ಕುತೂಹಲಕಾರಿ ವಿಚಾರ .ಉದಾಹರಣೆಗೆ  ಕೆರೆ ಚಾಮುಂಡಿ.ಪಾಪೆಲು ಚಾಮುಂಡಿ ,ಅಗ್ನಿ ಚಾಮುಂಡಿ ,ಒಲಿ ಚಾಮುಂಡಿ ,ಕರಿ ಚಾಮುಂಡಿ ,ರುದ್ರ ಚಾಮುಂಡಿ ಮೊದಲಾದ ಬೇರೆ ಬೇರೆ ದೈವಗಳುಶಕ್ತಿಗಳು  ಚಾಮುಂಡಿ ಎಂಬಒಂದು  ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ..

ಅಂತೆಯೇ .ತುಳುನಾಡಿನಲ್ಲಿ ಆರಾಧಿಸಲ್ಪಡುವ ಉಳ್ಳಾಲ್ತಿ ಕೂಡಾ ಒಂದು ದೈವವಲ್ಲ  ಅನೇಕ ದೈವಗಳನ್ನು/ಶಕ್ತಿಗಳನ್ನು ಉಳ್ಳಾಲ್ತಿ ಎಂಬ ಒಂದೇ ಹೆಸರಿನಲ್ಲಿ ಆರಾಧಿಸುತ್ತಾರೆ.

 .ಬೇರೆ ಬೇರೆ ರೀತಿಯ ಹುಟ್ಟು ಕಥಾನಕ ಐತಿಹ್ಯಗಳನ್ನು ಹೊಂದಿರುವ ,ರಾಜ ಮನೆತನಕ್ಕೆ ಸೇರಿದಸ್ತ್ರೀಯರು ಕಾರಣಾಂತರಗಳಿಂದ ದೈವಿಕತೆ ಪಡೆದು ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಆರಾಧಿಸಲ್ಪುವುದು ಕಂಡು ಬರುತ್ತದೆ.ರಾಜ ಮನೆತನಕ್ಕೆ ಸೇರಿದ ಸ್ತ್ರೀಯರನ್ನು ಉಳ್ಳಾಲ್ತಿ ಎಂದು ಕರೆಯುತ್ತಿದ್ದರು.ಆದ್ದರಿಂದ ದೈವಿಕತೆ ಪಡೆದ ಅರಸು ಮನೆತನದ ಬೇರೆ ಬೇರೆ ಸ್ತ್ರೀಯರು   ಉಳ್ಳಾಲ್ತಿ ಎಂಬ ಒಂದೇ ಹೆಸರಿನಲ್ಲಿ ಆರಾಧನೆ ಪಡೆಯುತ್ತಿದ್ದಾರೆ.
ಕೇಪು ,ಕೆಲಿಂಜ ,ಅನಂತಾಡಿ ,ಮಾಣಿ ಮತ್ತು ಬಲ್ನಾಡುಗಳಲ್ಲಿ ಬೇರೆ ಬೇರೆ ಉಳ್ಳಾಲ್ತಿಗಳ ನೆಲೆ  ನೆಲೆ ಕಾಣಿಸುತ್ತದೆ.ಅದೇ ರೀತಿ ಕೂಟಜೆಯಲ್ಲಿ ಒಂದು ಉಲ್ಲಾಲ್ತಿಯ ಆರಾಧನೆ ಇದೆ .


ಕೇಪು, ಕೆಲಿಂಜ, ಅನಂತಾಡಿ, ಮಾಣಿ ಹಾಗೂ ಬಲ್ನಾಡಿನ ಉಳ್ಳಾಲ್ತಿಯರ ಹುಟ್ಟಿಗೆ ಸಂಬಂಧಿಸಿದ ಒಂದು ಪಾಡ್ದನದ ಕಥೆ ಹೀಗಿದೆ .

"ವಿಟ್ಲ ಸೀಮೆಯನ್ನು ದೊಂಬಪೆರ್ಗಡೆಆಳುತ್ತಿದ್ದಕಾಲದಲ್ಲಿಅರಸು ಮನೆತನದ ಮದುವೆಯಾಗದ ಹೆಣ್ಣು ಮಗಳೊಬ್ಬಳುವಿಟ್ಲದ ಪಂಚ ಲಿಂಗೇಶ್ವರ ದೇವರ ಅನನ್ಯ ಭಕ್ತೆಯಗಿದ್ದಳು .ದಿನಾಲೂ ಕಾಡಿಗೆ ಹೋಗಿ ಪಾಪಾತಿ ,ಮಾಲೆಯನ್ನು ಕೊಯ್ದು ತಂದು ದೇವರಿಗೆ ಅರ್ಪಿಸುತ್ತಿದ್ದಳು .
ಒಂದು ದಿನ ಕಾಡಿನ ಹುತ್ತದ ಬದಿಯಲ್ಲಿ ಇದ್ದ ಮರದಲ್ಲಿ ಅರಳಿದ್ದ ಪಾಪಾತಿ ಮಾಲೆ ಹೂವನ್ನು ಕೊಯ್ಯಲು ಹೋದಾಗ ಹಾವೊಂದು ಅಲ್ಲಿ ಅವಳಿಗೆ ಕಚ್ಚಲಿ ಹೆಡೆ ಎತ್ತುತ್ತದೆ.ಆಗ ಅಲ್ಲಿಯೇ ಇದ್ದ ಕಳಿಂಜ /ಕಲೆಂಜಿ ಎಂಬ ದಲಿತ ವ್ಯಕ್ತಿಯೊಬ್ಬ ಹಾವನ್ನು ಕೊಂದು ಅವಳ ರಕ್ಷಣೆ ಮಾಡುತ್ತಾನೆ.

ಹೀಗೆ ಪರಿಚವಾದ ಅವರಲ್ಲಿ ಸ್ನೇಹ ಉಂಟಾಗಿ ಅದು ಪ್ರೇಮವಾಗಿ ಬದಲಾಗಿ ಆ ಹುಡುಗಿ ಗರ್ಭಿಣಿಯಾದಳು.ಆಗ ಮನೆತನದ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಅವಳು ಸಾಯಲು ತೀರ್ಮಾನಿಸುತ್ತಾಳೆ.ಆಗ ದೇವಾಲಯದ ಗರ್ಭ ಗುಡಿಯ ಒಳಗಿನಿಂದ "ಹೆದರ ಬೇಡ ,ನಿನ್ನ ಪ್ರಾಣ ಮಾನವನ್ನು ನಾನು ಉಳಿಸುತ್ತೇನೆ ನಿನ್ನ ಹೊಟ್ಟೆಯೊಳಗಿನ ಗರ್ಭ ಐದು ಶಕ್ತಿಗಳಾಗಿ ಐದು ಉರಿನಲ್ಲಿ ಉಳ್ಳಾಲ್ತಿಗಳಾಗಿ ಹುಟ್ಟುತ್ತಾರೆ "ಎಂದು ಅಶರೀರವಾಣಿ ಕೇಳಿಸಿ ಅವಳು ಸಾಯುವ ಆಲೋಚನೆ ಬಿಟ್ಟು ಮನೆಗೆ ಹೋಗುತ್ತಾಳೆ .ಹೀಗೆ ಕೇಪು ಕೆಲಿಂಜ ಅನಂತಾಡಿ ಮಾಣಿ ಮತ್ತು ಬಲ್ನಾದುಗಳಲ್ಲಿ ಐವರು ಉಳ್ಳಾಲ್ತಿಯರು ಜನಿಸಿದರು .ಕಳೆಂಜ ಐತ್ತನ ಕಾಡು ಕಳೆಂಜ ಮಲೆ ಆಯಿತು ಎಂಬ ಐತಿಹ್ಯವನ್ನು ಡಾ.ಕಿಶೋರ್ ಕುಮಾರ್ ರೈ ನೀಡಿದ್ದಾರೆ.

ಆದರೂ ಈ ಐದು ಪ್ರದೇಶಗಳಲ್ಲಿ ಉಳ್ಳಾಲ್ತಿಯರ ಹುಟ್ಟಿನ ಕುರಿತಾಗಿ ಬೇರೆ ಬೇರೆ ರೀತಿಯ ಕಥಾನಕಗಳಿವೆ.

 ಅನಂತಾಡಿ ಉಳ್ಳಾಲ್ತಿ :

ಕೆಲಿಂಜದಿಂದ ಸ್ವಲ್ಪ ದೂರದಲ್ಲಿ ಸುಲ್ಯಮಲೆ ಬೆಟ್ಟ ಇದೆ ,ಅಲ್ಲಿ ಒಂದು ತೀರ್ಥ ಇದೆ ಅಲ್ಲಿ ಇಬ್ಬರು ಉಳ್ಳಾಲ್ತಿ ಯರು ಹುಟ್ಟಿದರು.
ಆ ಎರಡು ಶಕ್ತಿಗಳಿಗೆ ಸಂಘರ್ಷ ಉಂಟಾಗಿ ಒಬ್ಬ ಉಳ್ಳಾಲ್ತಿ ಅನಂತಾಡಿಯಲ್ಲಿ ನೆಲೆಯಾಗುತ್ತಾಳೆ 

ಕೆಲಿಂಜ ಉಳ್ಳಾಲ್ತಿ :


"ಮತ್ತೊಂದು ಶಕ್ತಿ ಅನಂತಕೋಡಿ ಸುಬ್ರಾಯ ದೇವರ ಕ್ಷೇತ್ರದಲ್ಲಿ ಉದ್ಭವವಾಯಿತು. ಅಲ್ಲಿ ಗುವೆಲಣ್ಣ ಸಂತಾನದ ಬಂಟರ ಮನೆತನ ಇತ್ತು. ಇವರಿಗೆ ಈ ಶಕ್ತಿ ಏನೆಂದು ತಿಳಿಯಲಿಲ್ಲ. ಈ ಶಕ್ತಿಯೇ ಒಂದು ಹೆಣ್ಣಿನ ರೂಪದಲ್ಲಿ ಗುವೆಲಣ್ಣ ಸಂತಾನದ ಬಂಟರ ಮನೆಗೆ ಹೋಗಿ ನನಗೆ ಹಸಿವಾಗುತ್ತಿದೆ ಗಂಜಿ ಕೊಡಿ ಎಂದಾಗ, ಗಂಜಿ ಆಗಲಿಲ್ಲ ನಿನ್ನೆಯ ತಂಗಳನ್ನ ಇದೆ ಎಂದು ಮನೆಯ ಯಜಮಾನ್ತಿ ಹೇಳಿದಳು. ನನಗೆ ಆದೀತು ಕೊಡಿ ಎಂದಾಗ ಮನೆಯ ಒಡತಿ ತಂಗಳನ್ನಕ್ಕೆ ಮೊಸರು ಹಾಕಿ ಎಲೆಯಲ್ಲಿ ಬಡಿಸಿದಳು. ಈ ಹೆಣ್ಣು ಊಟ ಮಾಡಿದ ನಂತರ ಸಂತೋಷದಲ್ಲಿ ಈ ಮನೆತನಕ್ಕೆ ಬೆಂಜನಮಾರ್ ಎಂಬ ಹೆಸರಾಗಲಿ, ನಾನು ಅನಂತಕೋಡಿಯ ಸುಬ್ರಾಯ ದೇವರ ಬಲಭಾಗದಲ್ಲಿ ನೆಲೆಯಾಗುತ್ತೇನೆ. ನಿಮ್ಮ ಮನೆತನ ಒಂದನೆಯ ಗುತ್ತಿನ ಮನೆಯಾಗಿ ನನ್ನನ್ನು ನಂಬಿಕೊಂಡು ಬನ್ನಿ ಎಂದು ಹೇಳಿ ಆ ಹೆಣ್ಣು ಮಾಯವಾದಳು.
ಅಲ್ಲಿಂದ ಉತ್ತರ ಭಾಗ ತಿರುಗಿ ಪುನಃ ಬರುವಾಗ ಮಲರಾಯ, ಮೊಯ್ಯೆತ್ತಾಯಿ, ಪಿಲಿಚಾಮುಂಡಿ ಎನ್ನುವ ದೈವಗಳು, ಸಾವಿರದ ಒಂದು ಗಂಡಗಣಗಳು ಕೂಡ ಉಳ್ಳಾಲ್ತಿಯ ಹಿಂದೆ ಬಂದವು. ಕೆಲಿಂಜದ ಕೆಳಗಿನಬೈಲು ದಾಟಿ ಸುಳ್ಯೊ ಎನ್ನುವ ಜಾಗದಲ್ಲಿ ಹೆಣ್ಣು ಕುಳಿತಳು. ಆ ದಾರಿಯಾಗಿ ಒಬ್ಬಳು ಬಿಲ್ಲವ ಹೆಂಗಸು ಕೊಡಪಾನದಲ್ಲಿ ಕಳ್ಳು ಹೊತ್ತುಕೊಂಡು ಹೋಗುವಾಗ ಅವಳಲ್ಲಿ ಕಳ್ಳು ಕೊಡೆಂದು ಕೇಳಿದಳು. ಅದಕ್ಕೆ ಅವಳು ಕೊಡುವುದಿಲ್ಲ ಎಂದು ಹೇಳಿದಳು. ಅಷ್ಟು ಹೇಳಿದಾಗ ಜೊತೆಯಲ್ಲಿದ್ದ ಪೊಯ್ಯೆತ್ತಾಯಿ ದೈವವು ಅವಳನ್ನು ಕೊಂಡು ಅವಳ ಹೆಣವನ್ನು ಹೆಗಲಿನಲ್ಲಿ ಹಾಕಿಕೊಂಡನು. ಅಲ್ಲಿಂದ ಸ್ವಲ್ಪ ಮುಂದೆ ಬಂದು ಒಂದು ಗದ್ದೆಯಲ್ಲಿ ಆ ಹೆಣದ ಮಾಂಸವನ್ನು, ಎಲುಬನ್ನು ಬೇರೆ ಬೇರೆ ಮಾಡಿ ಎಲುಬನ್ನು ಮತ್ತೊಂದು ಗದ್ದೆಗೆ ಎಸೆದರು. ಹೀಗೆ ಪಾಲು ಮಾಡಿದ ಗದ್ದೆ ಪಾಲ್ತಿಮಾರು ಎಂದು ಹೆಸರಾಯಿತು. ಎಲುಬನ್ನು ಎಸೆದ ಗದ್ದೆಗೆ ಚಾಕೊಟ್ಟೆ ಎಂಬ ಹೆಸರಾಯಿತು. ಮಾಂಸವನ್ನು ಇಟ್ಟೆವಿನ ಎಲೆಯಲ್ಲಿ ಕಟ್ಟಿಕೊಂಡು ಅನಂತಕೋಡಿಗೆ ಮುಟ್ಟಿದರು. ದೇವರ ಜಾಗಕ್ಕೆ ಮಾಂಸವನ್ನು ಕೊಂಡೊಯ್ಯಬಾರದೆಂದು ಮುಂಭಾಗದಲ್ಲಿದ್ದ ಬಾಕ್ಯಾರೆಗೆ ಎಸೆದರು. ಆ ಮಾಂಸ ಅಲ್ಲಿಯೇ ಕಲ್ಲಾಗಿ ಗದ್ದೆಯ ನಡುಭಾಗದಲ್ಲಿದೆ. ಕೆಲಿಂಜದ ಪರಿಸರದಲ್ಲಿ ಇಟ್ಟೆವಿನ ಎಲೆಯಲ್ಲಿ ಮಾಂಸವನ್ನು ಕಟ್ಟಿಕೊಂಡು ಹೋಗಬಾರದೆಂಬ ನಿಷೇಧ ಈಗಲೂ ಜಾರಿಯಲ್ಲಿದೆ.
ಅನಂತಕೋಡಿಯ ಬಂಟರ ಮನೆತನಕ್ಕೆ ಕೆಲಿಂಜದ ಮನೆತನವೆಂದು ಹೆಸರಾಯಿತು. ಅವರಿಗೆ ಉಳ್ಳಾಲ್ತಿ ಕಣ್ಣಿಗೆ ಕಾಣದೆ ಜಾನುವಾರುಗಳಿಗೆ, ಜನರಿಗೆ ಬೇರೆ ಬೇರೆ ವಿಧದ ತೊಂದರೆಗಳು ಕಾಣಿಸಿದವು. ಆಗ ಜ್ಯೋತಿಷ್ಯರಲ್ಲಿ ಪ್ರಶ್ನೆಯನ್ನು ಕೇಳಿದರು. ಇಲ್ಲಿ ಉಳ್ಳಾಲ್ತಿ ನೆಲೆಯಾಗಿದ್ದಾರೆ. ಸ್ನಾನವನ್ನು ಕಟ್ಟಿ ಊರಿನವರು ಎಲ್ಲರೂ ನಂಬುವ ವ್ಯವಸ್ಥೆಯನ್ನು ಮಾಡಬೇಕೆಂದು ಕಂಡಾಗ, ಏನು ತಿಳಿಯದ ಬಂಡರ ಮನೆತನದವರು ಮಾಳಿಗೆ ತೋಟದ ಬ್ರಾಹ್ಮಣರ ಮನೆತನದವರಲ್ಲಿ ಕೇಳಿ ಉಳ್ಳಾಲ್ತಿಗೆ ಒಂದು ಸಣ್ಣ ಸ್ಥಾನವನ್ನು ಕಟ್ಟಿಸುವುದೆಂದು ತೀರ್ಮಾನಿಸಿದರು. ನೀಲೇಶ್ವರ ತಂತ್ರಿಗಳಲ್ಲಿ ಪ್ರಶ್ನೆ ಕೇಳಿ ಬಂದಾಗ ಹುಲಿ ಮತ್ತು ದನ ಒಟ್ಟಾಗಿ ಇರುವುದು ಕಾಣಿಸಿತು. ಆ ಜಾಗವನ್ನೇ ದೈವಸ್ಥಾನಕ್ಕೆ ಯೋಗ್ಯವಾದ ಜಾಗವೆಂದು ಅವರು ತೀರ್ಮಾನಿಸಿದರು. ಅಲ್ಲಿಯೇ ಒಂದು ಸಣ್ಣ ಮುಳಿ ಹುಲ್ಲಿನ ಮಾಡವನ್ನು ಕಟ್ಟಿದರು. ಮಾಳಿಗೆ ತೋಟದ ಬ್ರಾಹ್ಮಣರು ಮೊಕ್ತೇಸರರಗಿ, ಬೆಂಜನಮಾರಿನ ಮನೆತನದವರು ಒಂದನೆಯ ಮನೆತನದವರಾಗಿ, ತಿಂಬ್ಲಾಜೆ ನಡುವಳಚ್ಚಿಲ್, ಕಂಪದಬೈಲ್ ಸೀನಾಜೆಯ ಬಂಡರ ಮನೆತನಗಳು ಎರಡನೆಯ, ಮೂರನೆಯ ಗುರಿಕಾರರುಗಳಾಗಿ ಮಾಡಿಕೊಂಡು ಸುಳ್ಯದ ಗೌಡರು, ಪಡೀಲನ ಬಿಲ್ಲವರು ಗುರಿಕಾರ ಸ್ಥಾನದವರಾದರು. ಕೆಲಿಂಜದವರು ಮಾನಿಯ ಸ್ಥಾನಕ್ಕೆ ಎಂದು ತೀರ್ಮಾನಿಸಿದರು. ಊರಿನ ಕೆಲೆಸಿಗ, ಮಡಿವಾಳ, ಸಪಲ್ಯ ಜಾತಿಯವರು ದೈವದ ಕೆಲಸಗಾರರಾಗಿ ನೇಮಕ ಹೊಂದಿದರು. ದೈವದ ಬೆಳ್ಳಿ, ಬಂಗಾರದ ಮೊಗಮೂರ್ತಿಗಳನ್ನು ಕೆಲಿಂಜದಲ್ಲಿ ಇಟ್ಟು ಅಲ್ಲಿಂದ ಭಂಡಾರ ಬರುವುದೆಂದು ನಿಶ್ಚಯಿಸಿದರು.
ಮಾಳಿಗೆ ತೋಟದ ಬ್ರಾಹ್ಮಣರು ಮೊಕ್ತೇಸರಿಕೆಯನ್ನು ಪುಂಡಿಕಾಐ..ಯ ಬ್ರಾಹ್ಮಣರಿಗೆ ಬಿಟ್ಟು ಕೊಟ್ಟರು, ಅವರು ಕುಟುಂಬದವರು ಈಗ ಯಾರು ಇಲ್ಲಿ ಇಲ್ಲ. ಕೆಲಿಂಜದ ಬಂಟರು ಆಸ್ತಿ ಮನೆಗಳೆಲ್ಲ ಕಳಕೊಂಡು ಕೆಲಿಂಜದ ಊರನ್ನು ಬಿಟ್ಟಿದ್ದಾರೆ. ಆದರೆ ದೈವದ ಮಾನಿಯಾಗಿ ಅವರ ಕುಟುಂಬದವರೊಬ್ಬರಿದ್ದಾರೆ. ಈಗ ದೈವದ ಭಂಡಾರ ಬೆಂಜನಮಾರಿನಿಂದ ಬರುವುದು ಆಸ್ತಿ ಈಗ ಬ್ರಾಹ್ಮಣರ ಕೈಯಲ್ಲಿದೆ.
ಪ್ರತಿ ವರುಷ ಮಾಯಿ ಸಂಕ್ರಮಣದಂದು ರಾತ್ರಿ ಭಂಡಾರ ಬಂದು ಬೆಳಗ್ಗಿನ ಜಾವಕ್ಕೆ ಕೊಡಿ ಏರಿ, ಮರುದಿನ ರಾತ್ರಿ ಉಳ್ಳಾಲ್ತಿಯ ಮೆಚ್ಚಿ ಜರುಗುತ್ತದೆ. ಮಲರಾಯ, ಪಿಲಿಚಾಮುಂಡಿ, ಪೊಯ್ಯೆತ್ತಾಯಿ ದೈವಗಳ ನೇಮಗಳು ಜರುಗುತ್ತವೆ. ಸಂಕ್ರಮಣದ ದಿನಗಳಲ್ಲಿ ದೈವಸ್ಥಾನದಲ್ಲಿ ತಂಬಿಲ ನಡೆಯುತ್ತದೆ. ದೈವಕ್ಕೆ ಪ್ರಾರ್ಥನೆಯನ್ನು ಬೆಂಜನಮಾರಿನ ಮನೆತನದವರೇ ಮಾಡಬೇಕು.(ಮಾಹಿತಿ ಡಾ..ಕಿಶೋರ್ ಕುಮಾರ್ ರೈ)"
 ವಾಸ್ತವದಲ್ಲಿ ಇವರು ಅರಸು ಮನೆತನಕ್ಕೆ ಸೇರಿದ ಅಕ್ಕ ತಂಗಿಯರು ಇರಬಹುದು..
ಬಲ್ನಾಡು ಉಳ್ಳಾಲ್ತಿ :


ಪುತ್ತೂರಿನಲ್ಲಿ ಬಂಗ ರಾಜನು  ಕ್ರೂರಿಯೂಅಹಂಕಾರಿಯೂ ಆಗಿದ್ದನು.ಇವನ ಕ್ರೌರ್ಯ ತಡೆಯಲಾರದ ಜನರು ದೇವರಿಗೆ ಮೊರೆ ಇಡುತ್ತಾರೆ.ಆಗ ಇಲ್ಲಿನ ಜನರನ್ನು ಬಂಗರಾಜನಿಂದ ಕಾಪಾಡುವುದಕ್ಕಾಗಿ ದಂಡ ನಾಯಕನೂ ,ಉಳ್ಳಾಲ್ತಿಯೂ ಅಹಿ ಕ್ಷೇತ್ರದಿಂದ ಘಟ್ಟ ಇಳಿದು ಬಂದು ಸುಖ ಲೋಲುಪನಾದ ಬಂಗರಾಯನನ್ನು ಮುತ್ತಿಗೆ ಹಾಕುತ್ತಾರೆ.ಬಂಗರಾಜನು ಅವರಿಗೆ ಶರಣಾಗಿ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅವರೊಡನೆ ಕಾದಾಡಿ ಸಾಯುತ್ತಾನೆ.ಇವರು ಮುತ್ತಿಗೆ ಹಾಕುವ ಸಮಯಕ್ಕೆ ಬಂಗರಾಜ ಕಂಬಳವನ್ನು ಕಾಯರ್ಕಟ್ಟೆಯಲ್ಲಿ ಏರ್ಪಡಿಸಿ ಕಂಬಳವನ್ನು ನೋಡುತ್ತಿದ್ದನು.ಆದ್ದರಿಂದ ಅವನ ಸಮಾಧಿಯನ್ನು ಅಲ್ಲಿಯೇ ಕಟ್ಟಿಸುತ್ತಾರೆ.ಆದ್ದರಿಂದ ಅದಕ್ಕೆ ಬಂಗರ ಕಾಯೆರ್ಕಟ್ಟೆ ಎಂಬ ಹೆಸರು ಬಂತು .

ಅವಿವಹಿತೆಯಾಗಿ ಉಳಿದ ಉಳ್ಳಾಲ್ತಿ ಮುಂದೆ ಸತಿಯಾಗಿ ಶಕ್ತಿ ದೇವತೆಯಾಗಿ ಆರಾಧಿಸಲ್ಪಡುತ್ತಾಳೆ .ಪುತ್ತೂರು ದೇವಳದ ಆಗ್ನೇಯ ಭಾಗದಲ್ಲಿ ಒಂದು ಸತಿ ವಿಗ್ರಹ ಇದೆ.ಪಾದ್ದನದಲ್ಲಿ ಹೀಗೆ ಹೇಳಿದ್ದರೂ ಅವಿವಾಹಿತೆಯಾದವಳು ಸತಿಯಾಗುವ ಸಾಧ್ಯತೆ ಕಡಿಮೆ .ಬಹುಶ ಅವಳ ಪತಿ ಇದೇ ಯುದ್ಧದಲ್ಲಿ ಮರಣಿಸಿದ್ದು ಅವಳು ಸತಿಯಾಗಿರ ಬಹುದು .ಮುಂದೆ ಉಳ್ಳಾಲ್ತಿ ಎಂಬ ಹೆಸರಿನಲ್ಲಿ ಆರಾಧನೆ ಹೊಂದಿರ ಬಹುದು .

"ದುರಂತದಲ್ಲಿ ಮರಣ ಹೊಂದಿದ ಹೆಣ್ಣು, ಮರಣದ ಬಳಿಕ ಮತ್ತೆ ತಾಯಿಯಾಗಿ, ಜನರನ್ನು ಕಾಪಾಡುವ ಶಕ್ತಿದೇವತೆಯಾಗಿ / ದೈವವಾಗಿ ಪ್ರದರ್ಶನದ ವೇಳೆಯಲ್ಲಿ ಪ್ರಕಟಗೊಳ್ಳುವುದೇ ಉಳ್ಳಾಲ್ತಿ ಆರಾಧನೆಯ ಮಹತ್ವ. ಮೌಖಿಕ ಪರಂಪರೆಯಲ್ಲಿರುವ ಹೆಣ್ಣು ಮಕ್ಕಳ ದುರಂತದ ಕಥಾನಕಗಳಲ್ಲಿ ಬರುವ ಯಾವುದೇ ದುರಂತವನ್ನು ಪ್ರದರ್ಶನದ ವೇಳೆಯಲ್ಲಿ ಉತ್ಪ್ರೇಕ್ಷೆ ಮಾಡದೆ ದೈವಿ ಶಕ್ತಿ ಪ್ರಕಗೊಳ್ಳುವುದನ್ನು ಆರಾಧನೆಯ ಸಂದರ್ಭದಲ್ಲಿ ಕಾಣುವುದಕ್ಕೆ ಸಾಧ್ಯವಿದೆ."ಎಂದುಉಳ್ಳಾಲ್ತಿ ಬಗ್ಗೆ ವಿಶೇಷ ಸಂಶೋಧನಾ ಅಧ್ಯಯನ ನಡೆಸಿ ಡಾಕ್ಟರೇಟ್ (ಪಿಎಚ್.ಡಿ )ಪದವಿಯನ್ನು ಗಳಿಸಿರುವ  ಡಾ.ಕಿಶೋರ್ ಕುಮಾರ್ ರೈ ಶೇಣಿ ಹೇಳಿದ್ದಾರೆ  ಕೇಪು ಮತ್ತು ಕೂಟತ್ತಜೆ ಉಳ್ಳಾಲ್ತಿಯರು :

ಕೇಪಿನಲ್ಲಿ ವಿಟ್ಲ ಅರಮನೆಗೆ ಸೇರಿದ ಇಬ್ಬರು ಅಕ್ಕತಂಗಿಯರು  ಮಾಯವಾಗಿ ಉಳ್ಳಾಲ್ತಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ (ಎಲ್ಯಕ್ಕ ಮತ್ತು ಮಲ್ಲಕ್ಕ ಬಗ್ಗೆ ಬರೆಯುವಾಗ ಹೆಚ್ಚಿನ ಮಾಹಿತಿ ನೀಡಲಾಗುವುದು )
ಕೂಟಜೆಯಲ್ಲಿ ಪಟ್ಟಮ್ಮ ದೆಯ್ಯಾರ್ ಉಳ್ಳಾಲ್ತಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ (ಈ ಬಗ್ಗೆ ಮುಂದೆ ದೆಯ್ಯಾರ್  ದೈವದ ಬಗ್ಗೆ ಬರೆಯುವಾಗ ಮಾಹಿತಿ ಕೊಡುತ್ತೇನೆ )©ಡಾ.ಲಕ್ಷ್ಮೀ ಜಿ ಪ್ರಸಾದ

ಒಂದು ಸೋಜಿಗದ ವಿಚಾರ ಏನೆಂದರೆ ಪೋರ್ಚುಗೀಸರೊಡನೆ ಹೋರಾಡಿ ಪ್ರಾಣವನ್ನರ್ಪಿಸಿದ ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಸಂಬಂಧಿಸಿದ ಪಾಡ್ದನ ಎಲ್ಲೂ ಸಿಗುವುದಿಲ್ಲ .ಇಂಥ ಅಸಾಮಾನ್ಯ ಸಾಹಸಿ ಮಹಿಳೆ ಕುರಿತು ತುಳು ಜನಪದರೇಕೆ ಮೌನವಾಗಿದ್ದರು ಎಂದು ತಿಳಿಯುವುದಿಲ್ಲ.ಉಳ್ಳಾಲದ ರಾಣಿ ದೈವತ್ವನ್ನೇಕೆ ಪಡೆದು ಆರಾಧಿಸಲ್ಪಡಲಿಲ್ಲ ?ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತದೆ.ಅನೇಕ ಉಳ್ಳಾಲ್ತಿ ಯರಲ್ಲಿ  ಉಲ್ಲಾಳ ದ ರಾಣಿ ಅಬ್ಬಕ್ಕ ಕೂಡ ಸೇರಿರ ಬಹುದೇ ?ಕಾಲಾಂತರದಲ್ಲಿ ಮೂಲ ಕಥಾನಕ ಬದಲಾಗಿರ ಬಹುದೇ ?
ಬಲ್ನಾಡಿನ ಉಳ್ಳಾಲ್ತಿ ಬಂಗರಸನ ಮೇಲೆ ದಾಳಿ ಮಾಡಿದ ಅರಸಿ ಇರಬೇಕು .ಅವಳು ರಾಣಿ ಅಬ್ಬಕ್ಕನೇ ಆಗಿರುವ  ಸಾಧ್ಯತೆ ಇದೆ .ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ©ಡಾ.ಲಕ್ಷ್ಮೀ ಜಿ ಪ್ರಸಾದ 
                         


                              ಚಿತ್ರ ಕೃಪೆ :ಕೃಷ್ಣ ಮೋಹನ್ ಪೆರ್ಲ 

ಆಧಾರ ಗ್ರಂಥಗಳು
1 ಸಂಸ್ಕೃತಿ ಮಹಿಳಾ ಮಾಲಿಕೆ -1ಲೇಖಕರು:ಡಾ. ಕಿಶೋರ್ಕುಮಾರ್ ರೈ.2 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಲೇಖಕರು ಡಾ..ಲಕ್ಷ್ಮೀ ಜಿ ಪ್ರಸಾದ 
3 ಕಂಬಳ ಕೋರಿ ನೇಮ : ಲೇಖಕರು ಡಾ..ಲಕ್ಷ್ಮೀ ಜಿ ಪ್ರಸಾದ

2 comments:

  1. neevu katta kadege needida ullaalthiya chitravu kootathaje athava kepuviddalla.nimage aa 2 ullalthiyara chitravannu thuluoripuga groupnalli needuthene .nodikolli.

    ReplyDelete