Tuesday, 15 April 2014

ಸಾವಿರದೊಂದು ಗುರಿಯೆಡೆಗೆ :37-38 ಕಂಬಳದ ಉರವ ಮತ್ತು ಎರು ಬಂಟ ಭೂತಗಳು (c)ಡಾ.ಲಕ್ಷ್ಮೀ ಜಿ ಪ್ರಸಾದ

                           ಕೋಣ ಮತ್ತು ಮೂಲದ ಮಾಣಿಗಳೂ ಭೂತಗಳಾದರು !


                           ಕೋಣ ಮತ್ತು ಮೂಲದ ಮಾಣಿಗಳೂ ಭೂತಗಳಾದರು !

                                                                      ಉರವ ಭೂತ
                                                       ಬಳ್ಳು ಗಿರ್ಪುನೆ
                                                                  ಎರು ಬಂಟ
                                                    ಕೋಣ ಮಾಯವಾದ ಕಲ್ಲು 
ಹೌದು! ಹಬ್ಬದ ಅಮವಾಸ್ಯೆ ಬಂತೆಂದರೆ ತುಳುನಾಡು ರಂಗೇರುತ್ತದೆ. ಮನೆ-ಮನಗಳಲ್ಲಿ ಭಕ್ತಿ-ಸಂಭ್ರಮಗಳು ತೊನೆದಾಡುತ್ತವೆ. ಪತ್ತನಾಜೆಯಂದು ತಮ್ಮ ತಮ್ಮ ಆವಾಸ ಸ್ಥಾನಕ್ಕೆ ಹೋಗುವ ಭೂತಗಳು ತಮ್ಮ ಗಗ್ಗರವನ್ನು ಬಿಚ್ಚಿ ವಿಶ್ರಮಿಸುತ್ತವೆ. ಮತ್ತೆ ಪುನಃ ಹಬ್ಬದಮವಾಸ್ಯೆಯಂದು ಗಗ್ಗರವನ್ನು ಕಟ್ಟಿ ನರ್ತಿಸುತ್ತವೆ. ಅಬ್ಬರದಿಂದ ಘರ್ಜಿಸಿ ತಪ್ಪು ಮಾಡಿದವನ ಎದೆಯಲ್ಲಿ ಭಯದ ಕಂಪನವನ್ನು ಉಂಟು ಮಾಡಿ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ. ನೊಂದವನಿಗೆ ನಿನ್ನ ಜೊತೆ ನಾನಿದ್ದೇನೆ. ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಭೂತಗಳು ಅಭಯವನ್ನು ಕೊಡುತ್ತವೆ.
ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಇದೊಂದು ಧಾರ್ಮಿಕ ರಂಗಭೂಮಿ ಕೂಡ. ತುಳುನಾಡಿನ ಭೂತ ಕನ್ನಡದ ಭೂತವಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಶಕ್ತಿಗಳು. ತುಳುನಾಡಿನ ಜನರ ಆರಾಧ್ಯ ದೇವರುಗಳು ಇವರು. ಸಂಸ್ಕೃತದ `ಪೂತಂ' ಎಂದರೆ ಪವಿತ್ರವಾದದ್ದು ಎಂಬ ಪದವೇ ಮುಂದೆ ಬೂತೊ' ಆಗಿ ಭೂತ ಆಗಿರುವ ಸಾಧ್ಯತೆ ಇದೆ ಅಥವಾ ತುಳುನಾಡಿನ ಭೂತಗಳಲ್ಲಿ ಹೆಚ್ಚಿನವುಗಳು ಮೊದಲು ಮನುಷ್ಯರಾಗಿದ್ದು ನಂತರ ದೈವತ್ವಕ್ಕೇರಿ ಆರಾಧಿಸಲ್ಪಟ್ಟವರೇ ಆಗಿರುವುದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿ ಕೂಡ ಭೂತ ಪದ ಬಳಕೆಗೆ ಬಂದಿರಬಹುದು. ಉಡುಪಿ, ಕಾಸರಗೋಡು ಸೇರಿದಂತೆ ತುಳು ಮಾತನಾಡುವ ಜನರಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ತುಳುನಾಡೆಂದೇ ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ವಿಶಿಷ್ಟ ಆರಾಧನ ಪ್ರಕಾರವಾದ ಭೂತಾರಾಧನೆಯಿಂದಾಗಿ ತುಳುನಾಡು ವಿಶೇಷ ಗಮನ ಸೆಳೆಯುತ್ತದೆ.copy rights reserved (c)ಡಾ.ಲಕ್ಷ್ಮೀಜಿಪ್ರಸಾದ 
ಹಬ್ಬದ ಅಮಾವಾಸ್ಯೆ ಕಳೆಯುತ್ತಲೇ ನನ್ನ ತಂದೆ ಮನೆಯ ಗದ್ದೆಯಲ್ಲಿ ಪೂಕರೆ ಕಂಬಳ ನೇಮ ಪ್ರತಿವರ್ಷ ನಡೆಯುತ್ತದೆ . ಆಗ ಅಲ್ಲಿ ಎರಡು ದೈವ(ಭೂತ )ಗಳಿಗೆ ಆರಾಧನೆ ನಡೆಯುತ್ತದೆ . ಇದನ್ನು ಚಿಕ್ಕಂದಿನಿಂದಲೇ ಪ್ರತಿ ವರ್ಷ ನಾನು ನೋಡುತ್ತಿದ್ದರೂ ಆ ದೈವಗಳ ಕುರಿತು ನನಗೇನೂ ಮಾಹಿತಿ ತಿಳಿದಿರಲಿಲ್ಲ .ನಮ್ಮಜ್ಜಿ ಅದರಲ್ಲಿ ಪ್ರಧಾನವಾದ ಭೂತ ನಾಗ ಬ್ರಹ್ಮ ಎಂದು ಹೇಳುತ್ತಿದ್ದರು . ಆ ಧೈರ್ಯದ ಮೇಲೆ ನಾನು ನನ್ನ ಅಧ್ಯಯನಕ್ಕೆ ನಾಗಬ್ರಹ್ಮ ಭೂತವನ್ನು ಆಯ್ಕೆ ಮಾಡಿದ್ದೆ .! ಆ ವರ್ಷದ ನೇಮವನ್ನು ರೆಕಾರ್ಡ್ ಮಾಡುವುದಕ್ಕಾಗಿ ನಾನು ತಂದೆ ಮನೆಗೆ ಬಂದು ಎಲ್ಲ ಸಿದ್ಧತೆ ಮಾಡಿಕೊಂಡೆ .ನಮ್ಮ ಮನೆಯಲ್ಲಿ ನಾಗ ಬ್ರಹ್ಮ ದೈವದೊಂದಿಗೆ ಉರವ ಎಂಬ ದೈವಕ್ಕೂ ಆರಾಧನೆ ಇದೆ .ಈ ಭೂತದ ಹೆಸರು ಕೂಡ ಆ ತನಕ ವಿದ್ವಾಂಸರ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ!ಇಲ್ಲಿ ಮೂಲದ ಮಾಣಿ ಮತ್ತು ಕೋಣಗಳು  ಮಾಯವಾಗಿ ಭೂತಗಳಾಗಿದ್ದಾರೆ!
ಗದ್ದೆಯನ್ನು ಉತ್ತು ಬಿತ್ತನೆಗೆ ಸಿದ್ಧ ಮಾಡುವುದನ್ನು ಕಂಡದ ಕೋರಿ (ಗದ್ದೆಯ ಕೋರಿ) ಎನ್ನುತ್ತಾರೆ. ಗದ್ದೆಯಲ್ಲಿ ಬಿತ್ತನೆ ಮಾಡುವ ಮೊದಲು ಪೂಕರೆ ಕಂಬ ನೆಡುವ ಸಂಪ್ರದಾಯ ಕಂಬಳ ಗದ್ದೆಗಳಲ್ಲಿ ಇರುತ್ತವೆ. ಈ ಸಂದರ್ಭದಲ್ಲಿ ಉರವ, ಎರುಬಂಟ, ನಾಗಭೂತ ಹಾಗೂ ಬೆರ್ಮರ್ ಭೂತಗಳಿಗೆ ಕೋಲ ಕಟ್ಟಿ ನೇಮ ನಡೆಸುತ್ತಾರೆ. ಕಂಬಳ ಗದ್ದೆಗಳ ಅಧಿದೈವ ಬೆರ್ಮೆರ್. ಈತನ ನಾಗನೊಂದಿಗೆ ಸಮೀಕರಣಗೊಂಡು ನಾಗಬೆರ್ಮೆರ್ ಆಗಿದ್ದಾನೆ. ನಾಗಬೆರ್ಮೆರ್ ಎಂಬುದು ಸಂಸ್ಕೃತೀಕರಣಕ್ಕೆ ಒಳಗಾಗಿ ನಾಗಬ್ರಹ್ಮ ಭೂತವಾಗಿದೆ. ಉರವ ಮತ್ತು ಎರುಬಂಟರು ನಾಗಬೆರ್ಮೆರಿನ ಪರಿವಾರ ಭೂತಗಳಾಗಿವೆ.ಭೂತಕ್ಕೆ ನೇಮ ಕಟ್ಟುವ ಸಂದರ್ಭದಲ್ಲಿ ಭೂತನರ್ತಕರು ಮುಖಕ್ಕೆ ಬಣ್ಣ ಹಾಕಿಕೊಳ್ಳುವಾಗ ಆಯಾಯ ಭೂತಕ್ಕೆ ಸಂಬಂಧಿಸಿದ ಕಥಾನಕವನ್ನು ತೆಂಬರೆಯನ್ನು ಬಡಿಯುತ್ತಾ ಪಾಡ್ದನ ರೂಪದಲ್ಲಿ ಹಾಡುತ್ತಾರೆ. ಎಲ್ಲ ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳು ಈಗ ಲಭ್ಯವಿಲ್ಲ. ಹೆಚ್ಚಿನ ಪ್ರಧಾನ ಭೂತಗಳಿಗೆ ಪಾಡ್ದನಗಳನ್ನು ಹೇಳಿಯೇ ಭೂತ ಕಟ್ಟುತ್ತಾರೆ. ತುಂಡು ಭೂತಗಳು / ಪರಿವಾರ ದೈವಗಳು / ಅಧೀನ ಭೂತಗಳಿಗೆ ಪ್ರಧಾನ ಭೂತದ ವೇಷ ಭೂಷಣಗಳಲ್ಲಿ ತುಸು ವ್ಯತ್ಯಾಸ ಮಾಡಿ, ಹೆಸರು ಮಾತ್ರ ಹೇಳಿ ನೇಮ ಕೊಡುತ್ತಾರೆ. ಇಂದಿನ ವೇಗದ ಯುಗದಲ್ಲಿ ಅಪ್ರಧಾನ ದೈವಗಳ ಕುರಿತು ಮಾಹಿತಿ ಸಂಗ್ರಹಿಸುವುದು ಕಷ್ಟ ಸಾಧ್ಯವಾದ ವಿಚಾರವಾಗಿದೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ
ಉರವ ಮತ್ತು ಎರುಬಂಟ ಭೂತಗಳ ನೇಮದಲ್ಲಿ ಈ ಭೂತಗಳಿಗೆ ಸಂಬಂಧಿಸಿದ ಪಾಡ್ದನವನ್ನು ಹೇಳುವುದಿಲ್ಲ. ಆದರೆ ಕಂಬಳ ಗದ್ದೆಗೆ ಸಂಬಂಧಿಸಿದ ಈಜೋ ಮಂಜೊಟ್ಟಿಗೋಣ ಎಂಬ ಹೆಸರಿನ ಪಾಡ್ದನವು ಪ್ರಚಲಿತವಿದೆ. ಈ ಪಾಡ್ದನವು ಡಾ| ಅಮೃತ ಸೋಮೇಶ್ವರರ ತುಳು ಪಾಡ್ದನ ಸಂಪುಟ, ಡಾ| ವಿವೇಕ ರೈ ಸಂಪಾದಿಸಿರುವ ಪುಟ್ಟು ಬಳಕೆಯ ಪಾಡ್ದನಗಳು, ಶ್ರೀಮತಿ ರೂಪಕಲಾ ಸಂಪಾದಿಸಿದ ನಾಟಿ ಹಾಗೂ ಡಾ| ಲಕ್ಷ್ಮೀ ಜಿ ಪ್ರಸಾದ್ (ಈ ಕೃತಿಯ) ಸಂಪಾದಿಸಿದ ಪಾಡ್ದನ ಸಂಪುಟದಲ್ಲಿದೆ.
ಈಜೋ ಮಂಜೊಟ್ಟಿಗೋಣ ಪಾಡ್ದನದ ಪ್ರಕಾರ ರೆಂಜಲಡಿ ಬರಿಕೆಯ ಮಂಜನಾಳ್ವರು ಕೋಣಗಳನ್ನು ಖರೀದಿಸಿ ತರಲು ಸುಬ್ರಹ್ಮಣ್ಯದ ಸಂತೆಗೆ ಹೋಗುತ್ತಾರೆ. ಜೊತೆಗೆ ಮೂಲದ ಕೆಲಸದ ಬಬ್ಬುವನ್ನು ಕರೆದೊಯ್ಯುತ್ತಾರೆ. ಹೋಗುವ ಮೊದಲು ತನ್ನ ಕುಲದೈವ ಬರಿದೈಯ ಧೂಮಾವತಿಯ ಮಂಡ್ಯಕ್ಕೆ ಹೋಗಿ ಒಳ್ಳೆಯ ಕೋಣಗಳು ಸಿಕ್ಕಿದರೆ ಒಂದು ತುತ್ತು ತಿಂದು ಎರಡನೆಯ ತುತ್ತು ತಿನ್ನುವುದರೊಳಗೆ ನೇಮಕ್ಕೆ ಗೊನೆ ಕಡಿದು ಇಡುತ್ತೇನೆ ಎಂದು ಹರಕೆ ಹೇಳುತ್ತಾರೆ. ಧೂಮಾವತಿ ದೈವದ ಅನುಗ್ರಹದಿಂದ ಮಂಜನಾಳ್ವರಿಗೆ ಒಳ್ಳೆಯ ಕೋಣಗಳು ಸಿಗುತ್ತವೆ. ಕೋಣಗಳೊಂದಿಗೆ ಹಿಂತಿರುಗಿ ಬರುವಾಗ ಧೂಮಾವತಿ ಭೂತದ ಮುಂಡ್ಯೆಯ ಬಳಿಗೆ ಬರುತ್ತಾರೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ

 ಮುಂಡ್ಯೆಯ ಬಳಿಯಿದ್ದ ಹಲಸಿನ ಮರದ ಕಾಯಿಗಳನ್ನು ಕೀಳಲು ಮೂಲದ ಕೆಲಸದ ಬಬ್ಬುವಿಗೆ ಬಬ್ಬುವಿಗೆ ಮಂಜನಾಳ್ವರು ಹೇಳುತ್ತಾರೆ. ಹಲಸಿನ ಕಾಯಿ ಕೀಳುವಾಗ ಭೂತ ತನ್ನ ಕಾರಣಿಕವನ್ನು ತೊರಿಸುತ್ತದೆ ಎಂದು ಬಬ್ಬು ಹೇಳಿದಾಗ ಹಲಸಿನ ಹಣ್ಣನ್ನು ಕೀಳಲು ಹೇಳುತ್ತಾರೆ ಮಂಜನಾಳ್ವರು. ಅವರ ಅಣತಿಯಂತೆ ಮುಂಡ್ಯದ ಹಲಸಿನ ಮರದ ಹಣ್ಣನ್ನು ಕೀಳುತ್ತಾನೆ. ಬಬ್ಬು, ನಂತರ ಅಲ್ಲಿಯೇ ಹಣ್ಣನ್ನು ಕೊರೆದು ತಿಂದು ರೆಚ್ಚೆ(ಸಿಪ್ಪೆಯನ್ನು)ಯನ್ನು ಕೋಣಗಳಿಗೆ ಹಾಕುತ್ತಾರೆ. ತನಗೆ ಹೇಳಿದ ಹರಕೆಯನ್ನು ತೀರಿಸದೆ ಇರುವ ಮಂಜನಾಳ್ವರ ಮೇಲೆ ಧೂಮಾವತಿ ದೈವ ಮುನಿಯುತ್ತದೆ. ಇದರ ಪರಿಣಾಮವಾಗಿ ಕೋಣಗಳನ್ನು ಹಟ್ಟಿಯಲ್ಲಿ ಕಟ್ಟುವಷ್ಟರಲ್ಲಿ ಕಂಬಳಕ್ಕೆ ಬರಲು ಆಹ್ವಾನ ಬರುತ್ತದೆ ಮಂಜನಾಳ್ವರಿಗೆ. ಕಂಬಳಕ್ಕೆ ಹೋದ ಮಂಜನಾಳ್ವರ ಹಿಡಿತಕ್ಕೆ ಕೋಣಗಳು ಸಿಗುವುದಿಲ್ಲ. ಆಗ ಬಬ್ಬು ಹಠ ಮಾಡಿ ಮೂಲದವರು ಇಳಿಯಬಾರದ ಗದ್ದೆಗೆ ಇಳಿಯುತ್ತಾನೆ. ಆಗ ಮೂಲದ ಬಬ್ಬು ಮತ್ತು ಕೋಣಗಳು ಮಾಯಕವಾಗುತ್ತಾರೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ
ತುಳುನಾಡಿನಲ್ಲಿ ದುರಂತವನ್ನಪ್ಪಿದವರು, ಮಾಯಕವಾದವರು ದೈವತ್ವಕ್ಕೇರಿ ಭೂತವಾಗಿ ಆರಾಧಿಸಲ್ಪಡುವುದು ಸಾಮಾನ್ಯವಾದ ವಿಚಾರವೇ ಆಗಿದೆ. ಅಂತೆಯೇ ಸತ್ಯದ ಕಂಬಳಗದ್ದೆಯಲ್ಲಿ ಮಾಯಕವಾದ ಮೂಲದ ಮಾಣಿ ಬಬ್ಬು ಮತ್ತು ಕೋಣ ದೈವಗಳಾಗಿದ್ದಾರೆಯೇ ? ಭೂತಗಳಾಗಿದ್ದರೆ ಯಾವ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಪೂಕರೆ ಕಂಬಳ ನೇಮದ ಆಚರಣೆಯನ್ನು ವಿಮರ್ಶಿಸಿದಾಗ ಉತ್ತರ ಸಿಗುತ್ತದೆ. ಪೂಕರೆ ಕಂಬಳ ನೇಮದಲ್ಲಿ ಉರವ ಎಂಬ ದೈವವಿರುತ್ತದೆ. ಉರವನ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಅಣಿ, ಮುಡಿಗಳು ಇರುವುದಿಲ್ಲ. ಸೊಂಟಕ್ಕೆ ತೆಂಗಿನ ತಿರಿಯ ಅಲಂಕಾರ ಇರುತ್ತದೆ. ಮುಖಕ್ಕೆ ಕಪ್ಪು ಬಣ್ಣದಲ್ಲಿ ಬಿಳಿ ಚುಕ್ಕೆಗಳನ್ನು ಇಡುತ್ತಾರೆ. ಉರವ ದೈವವು ಯಜಮಾನನ ಕೋಣಗಳ ನೇಗಿಲಿನ ಹಗ್ಗವನ್ನು ಬಿಡಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಬಳ್ಳು ಗಿರುಪ್ಪುನೆ ಎನ್ನುತ್ತಾರೆ. ಇದು ಮೂಲದ ಮಾಣಿಯ ಕೆಲಸವನ್ನು ಸೂಚಿಸುತ್ತದೆ. ಇದರಿಂದ ಮೂಲದ ಕೆಲಸಗಾರ ಬಬ್ಬು ದೈವತ್ವಕ್ಕೇರಿ ಉರವ ಎಂಬ ಹೆಸರಿನಿಂದ ಆರಾಧನೆ ಪಡೆಯುತ್ತಾನೆ ಎಂದು ತಿಳಿದು ಬರುತ್ತದೆ. ಕಂಬಳ ಕೋರಿಯ ದಿನದಂದು ಉರವ ಭೂತದೊಂದಿಗೆ ಎರು ಬಂಟ ಎಂಬ ಭೂತಕ್ಕೆ ಆರಾಧನೆ ಇರುತ್ತದೆ. ಎರು ಎಂದರೆ ಕೋಣ ಎಂದರ್ಥ. ಎರು ಬಂಟ ಭೂತಕ್ಕೆ ಎರಡು ಕೊಂಬುಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಉಳಿದಂತೆ ಉರವ ದೈವದಂತೆ ಈ ಭೂತದ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಕಂಬಳ ಗದ್ದೆಯಲ್ಲಿ ಮಾಯವಾದ ಕೋಣ ಬೊಳ್ಳನೇ ಎರುಬಂಟ ದೈವವಾಗಿ ಆರಾಧನೆ ಪಡೆಯುತ್ತದೆ. ಈಜೋ ಮಂಜೊಟ್ಟಿಗೋಣ ಪಾಡ್ದನದಲ್ಲಿ ಬರುವ ಒಂಜಾಳ ಆತೇನೇ ಬಬ್ಬು, {ಒಂದಾಳು (ದೈವ) ಆದನೇ ಬಬ್ಬು}, ಎರುತ್ತ ಒಸಯೆ ಪಂಡೆನೇ {ಕೋಣನ ಒಸಯ (ಭೂತಾರಾಧನೆಯ ಆರಂಭದಲ್ಲಿ ಹೇಳುವ ಸಂಧಿ) ಹೇಳಿದನು} ಎಂಬ ಸಾಲುಗಳಲ್ಲಿ ಮೂಲದ ಮಾಣಿ ಹಾಗೂ ಕೋಣ ದೈವಗಳಾದ ಬಗ್ಗೆ ಸೂಚನೆ ಸಿಗುತ್ತದೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ
ಕಾಸರಗೋಡು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯದ ಸುತ್ತಮುತ್ತಲಿನ ಪರಿಸರದಲ್ಲಿ ಉರವ ಹಾಗೂ ಎರುಬಂಟ ದೈವಗಳಿಗೆ ಗದ್ದೆಯಲ್ಲಿ ಕೋರಿಯಂದು ಆರಾಧನೆ ನಡೆಯುತ್ತದೆ. ಕಾಸರಗೋಡು ಜಿಲ್ಲೆಯ ಕೋಳ್ಯೂರು ಹಾಗೂ ಬಂಟ್ವಾಳದ ಬೀರೂರು ಕಂಬಳ ಗದ್ದೆಗಳಲ್ಲಿ ಮಾಯವಾದ ಕೋಣ ಹಾಗೂ ಮೂಲದ ಮಾಣಿಗಳ ಪ್ರತೀಕವಾಗಿ ಎರಡು ಕಲ್ಲುಗಳಿವೆ. ಕೋಳ್ಯೂರು ಕಂಬಳ ಗದ್ದೆಯಲ್ಲಿ ಎರಡು ಕೋಣಗಳು ಮಲಗಿರುವಂತೆ ಕಾಣಿಸುವ ಕಲ್ಲುಗಳಿದ್ದು ಇದನ್ನು ಎರು ಮಾಜಿನ ಕಲ್ಲು (ಕೋಣ ಮಾಯವಾದ ಕಲ್ಲು) ಎಂದು ಕರೆಯುತ್ತಾರೆ. ತುಸು ದೂರದಲ್ಲಿ ಒಂದು ಎತ್ತರ ದಿಣ್ಣೆಯ ಮೇಲೆ ಸಣ್ಣ ಕಲ್ಲೊಂದಿದ್ದು ಇದನ್ನು ಮುಟ್ಟಾಳೆ ಕಲ್ಲು ಎನ್ನುತ್ತಾರೆ. ಇದು ಮೂಲದ ಮಾಣಿಯ ಮುಟ್ಟಾಳೆ ಬಿದ್ದ ಕಲ್ಲು ಎನ್ನುತ್ತಾರೆ. ಅಲ್ಲಿಯೇ ಸಮೀಪದ ತೋಡಿನಲ್ಲಿ ಮೂಲದ ಮಾಣಿ ಹಾರಿ ಮಾಯವಾದ ಎಂದು ಭಾವಿಸಲಾದ ನೀರಿನ ಗುಂಡಿ ಇದೆ. ಇದನ್ನು ರೆಂಜೆ ಗುಂಡಿ ಎನ್ನುತ್ತಾರೆ. ರೆಂಜಲಾಡಿ ಬರಿಕೆಯವನು ಹಾರಿ ಮಾಯವಾದ ಗುಂಡಿ ಎಂಬುದೇ ಕಾಲಾಂತರದಲ್ಲಿ ರೆಂಜೆಗುಂಡಿ ಎಂದಾಗಿದೆ ಎಂದು ಅಲ್ಲಿನ ಹಿರಿಯರಾದ ವಾರಣಾಸಿ ನಾರಾಯಣ ಭಟ್ಟರು ಹೇಳುತ್ತಾರೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ
ಹೀಗೆ ಈಜೋ ಮಂಜೊಟ್ಟಿಗೋಣ ಪಾಡ್ದನ ಕಂಬಳದಲ್ಲಿ ನಡೆಯುವ ಉರವ ಎರು ಬಂಟರ ನೇಮ ಹಾಗೂ ಕಂಬಳಗಳ ಕುರಿತು ಪ್ರಚಲಿತವಿರುವ ಐತಿಹ್ಯಗಳನ್ನುಒಟ್ಟಿಗೆ ಕಲೆ ಹಾಕಿ ವಿಮರ್ಶಿಸಿದಾಗ ಕಂಬಳದಲ್ಲಿ ಮಾಯವಾದ ಮೂಲದ ಮಾಣಿ ಹಾಗೂ ಕೋಣವೇ ಮುಂದೆ ದೈವತ್ವಕ್ಕೇರಿ ಉರವ ಮತ್ತು ಎರುಬಂಟರಾಗಿ ಆರಾಧಿಸಲ್ಪಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ.
ಕೃಷಿ ಪ್ರಧಾನ ತುಳುನಾಡಿನಲ್ಲಿ ಭೂತಾರಾಧನೆಯು ಹಬ್ಬದಮವಾಸ್ಯೆಯಂದು ಕಂಬಳ ಕೋರಿ ನೇಮದ ಮೂಲಕ ಆರಂಭಗೊಳ್ಳುತ್ತದೆ. ಮೊದಲಿಗೆ ಕಂಬಳ ಗದ್ದೆಯ ಅಧಿದೈವಗಳಾದ ಉರವ, ಎರುಬಂಟ ಹಾಗೂ ಭೂಮಿಯ ಒಡೆಯನೆಂದೇ ಭಾವಿಸಲ್ಪಟ್ಟಿರುವ ನಾಗಬೆರ್ಮೆರ್ ಭೂತಗಳ ಆರಾಧನೆಯನ್ನು ಮಾಡುತ್ತಾರೆ. ಈ ಭೂತಗಳ ಆರಾಧನೆಯ ನಂತರ ಕುಟುಂಬದ ಭೂತಗಳಿಗೆ ಗ್ರಾಮದ ಭೂತಗಳಿಗೆ ಆರಾಧನೆ ಸಲ್ಲಿಸುತ್ತಾರೆ..copy rights reserved (c)ಡಾ.ಲಕ್ಷ್ಮೀಜಿಪ್ರಸಾದ

No comments:

Post a Comment