Sunday, 27 April 2014

ಸಾವಿರದೊಂದು ಗುರಿಯೆಡೆಗೆ :ತುಳು ನಾಡ ದೈವಗಳು 48-49 ಒರು ಬಾಣಿಯೆತ್ತಿ -ನೆಲ್ಲುರಾಯ-ಲಕ್ಷ್ಮೀ ಜಿ ಪ್ರಸಾದ

                                                                copy rights reserved

ಸುಳ್ಯದ ಕಲ್ಲೆಂಬಿ ಬೀಡಿನಲ್ಲಿ ಒರು ಬಾಣಂತಿ ಎಂಬ ಬೂತಕ್ಕೆ ಆರಾಧನೆ ಇದೆ ಎಂಬ ವಿಚಾರ ತಿಳಿದು ಸೋಜಿಗ ಆಯಿತು .ಜೊತೆಗೆ ಒರು ಎಂಬ ಮಲೆಯಾಳ ಪದ ಮತ್ತು ಬಾಣಂತಿ ಎಂಬ ಕನ್ನಡ ಪದ ಹೇಗೆ ಒಟ್ಟಾಯಿತು ಎಂದು ಸಂದೇಹ ಕೂಡಾ ಮೂಡಿತು .ಬಾಣಂತಿ ಯಾವುದಾದರು ಕಾರಣಕ್ಕೆ ದುರಂತವನ್ನಪ್ಪಿ ದೈವತ್ವ ಪಡೆದಿರಬಹುದು ಎಂದು ಭಾವಿಸಿದ್ದೆ ಕೂಡಾ !
ಆದರೆ ಸಂಶೋಧನೆಯ ಹಾದಿಯಲ್ಲಿ ಅನೇಕ ಬಾರಿ ಊಹಿಸಿದ್ದು ತಲೆಕೆಳಗಾಗುವುದು ಉಂಟು .ಈ ಅನುಭವ ನನಗೆ ಅನೇಕ ಬಾರಿ ಆಗಿದೆ ಕೂಡಾ .ಹಾಗಾಗಿ ಕುದ್ದಾಗಿ ಹೋಗಿ ರೆಕಾರ್ಡ್ ಮಾಡಬೇಕು ಎಂದು ಕೊಂಡೆ .ಅಲ್ಲಿಗೆ ಹೋಗಲು ಇನ್ನೊಂದು ಕಾರಣವೂ ಇತ್ತು .ಪುರುಷ ಭೂತದ ಪಾದ್ದನದಲ್ಲಿ ಕಲ್ಲೆಂಬಿ ಬೀಡಿನ ಪ್ರಸ್ತಾಪವಿದೆ .ಈ ಬಗ್ಗೆ ತಿಳಿಯುವ ಕುತೂಹಲವೂ ಇತ್ತು .
ಹಾಗಾಗಿ ಎರಡು ವರ್ಷದ ಮೊದಲು ನಡೆದ ಅಲ್ಲಿನ ನೇಮಕ್ಕೆ ಮಗನೊಂದಿಗೆ ಹೋದೆ

ಅಲ್ಲಿ ಕೂಡಾ ಒರು ಬಾಣಂತಿ ಎಂದೇ ಹೇಳಿದರು ಅನೇಕರು .ಅಲ್ಲಿಗೆ ಬಂದಿದ್ದ ಸ್ಥಳೀಯ ನಿವೃತ್ತ ಶಿಕ್ಷಕರಾದ ಹಿರಿಯರಾದ ಜನಾರ್ಧನ ಅವರಿಗೆ ಈ ಬಗ್ಗೆ ಸ್ವಲ್ಪ ಮಾಹಿತಿ ಇತ್ತು ಹಾಗೆ ಅಲ್ಲಿದ್ದ ಕೆಲವು ಹಿರಿಯರ ಸಹಾಯದಿಂದ ಮಾಹಿತಿ ಸಂಗ್ರಹಿಸಿದೆ .
ಒರು ಬಾಣಿಯೆತ್ತಿ ಎಂಬ ಪದ  ಮಲೆಯಾಳ  ಪದ ಅಪಭ್ರಂಶಗೊಂಡು ಒರು ಬಾಣಂತಿ ಆಗಿತ್ತು!!

ಮಲೆಯಾಳದಲ್ಲಿ ಪಾಟಾಳಿ ಜನಾಂಗದ ಹೆಂಗಸರು ಹಾಗೂ ಬ್ರಾಹ್ಮಣ ಹೆಂಗಸರಿಗೆ ಬಾಣಿಯೆತ್ತಿ ಎಂದು ಕರೆಯುತ್ತಾರೆ .ಬಾಣಿಯೆತ್ತಿ ಮೂಲತಃ ಪಾಟಾಳಿ ಜನಾಂಗದ (ಮಲೆಯಾಳ ಗಾಣಿಗ ) ಮಹಿಳೆ  ಈ ಹಿಂದೆ ಇವರಲ್ಲಿ ಹುಡುಗಿ ಮೈ ನೆರೆಯುವ ಮೊದಲೇ ಮಾಡುವೆ ಮಾಡಬೇಕಿತ್ತು .ಒಂದು ವೇಳೆ ಮದುವೆಗೆ ಮೊದಲೇ ಹುಡುಗಿ ದೊಡ್ದವಳಾದರೆ ಅವಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದರು .
ಈ ಹುಡುಗಿ ಮದುವೆಗೆ ಮೊದಲೇ ಮೈ ನೆರೆಯುತ್ತಾಳೆ .ಆದ್ದರಿಂದ ಅವಳ ಕೈಕಾಲು ಕಣ್ಣು ಕಟ್ಟಿ ಕಾಡಿಗೆ ಬಿಡುತ್ತಾರೆ .ಮರು ದಿನ ದರ್ಬೆ ಸಮಿತ್ತುಗಳಿಗಾಗಿಕಾಡಿಗೆ ಬಂದ ಕಲ್ಲೆಂಬಿ ಬೀಡಿನ ಬ್ರಾಹ್ಮಣ ನೆಲ್ಲುರಾಯ ಎಂಬಾತ ಈ ಹುಡುಗಿಯನ್ನು ನೋಡಿ ಅನುಕಂಪದಿಂದ ಮನೆಗೆ ಕರೆ ತಂದು ಸಾಕುತ್ತಾನೆ .ಅವಳನ್ನು ಯಾರೂ ಮದುವೆಯಾಗಲು ಮುಂದೆ ಬರದ ಕಾರಣ ಅವನೇ ಮದುವೆಯಾಗುತ್ತಾನೆ .ಭಗವತಿಯ ಅನನ್ಯ ಭಕ್ತಳಾದ ಆ ಹುಡುಗಿ ನಿತ್ಯವೂ ಭಗವತಿಯನ್ನು ಭಕ್ತಿಯಿಂದ ಆರಾಧಿಸುತ್ತಿದ್ದಳು .ಮುಂದೆ ಅವಳನ್ನು ಭಗವತಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾಳೆ. ಮುಂದೆ ಅವಳು ಒರು ಬಾಣಿಯೆತ್ತಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ .ಅವಳೊಂದಿಗೆ ಅವಳನ್ನು ರಕ್ಷಿಸಿದ ನೆಲ್ಲುರಾಯ ನಿಗೂ ದೈವತ್ವ ಪ್ರಾಪ್ತಿಯಾಗಿ ಆರಾಧನೆ ಸಿಗುತ್ತದೆ .

ಮಲೆಯಾಳ ಗಾಣಿಗರಲ್ಲಿ ಈಗ ಕೂಡಾ ಹುಡುಗಿಯರಿಗೆ ಚಪ್ಪರ ಮದುವೆ ಎಂಬ ಆಚರಣೆಯನ್ನು ಮಾಡುತ್ತಾರೆ .ಇದನ್ನು ಹುಡುಗಿಯರಿಗೆ ಬೇಗನೆ ಮಾಡುತ್ತಾರೆ .ಚಪ್ಪರ ಮದುವೆಗೆ ಮೊದಲು ಹುಡುಗಿ ಮೈ ನೆರೆದರೆ ಅವಳನ್ನು ಕಾಡಿಗೆ ಬಿಡಬೇಕಾಗುತ್ತದೆ ಎಂಬ ಒಂದು ನಂಬಿಕೆ ಈಗಲೂ ಪ್ರಚಲಿತವಿದೆ .ಹಾಗಾಗಿ ಹುಡುಗಿಯರಿಗೆ 6-7 ವರ್ಷದಲ್ಲಿಯೇ ಚಪ್ಪರ ಮದುವೆ ಎಂಬ ಸಂಸ್ಕಾರವನ್ನು ಮಾಡಿ ಬಿಡುತ್ತಾರೆ .

No comments:

Post a Comment