Saturday, 5 April 2014

ಕೆಮ್ಮಲೆಯ ನಾಗಬೆರ್ಮೆರ್

              
                           ಉಲ್ಲಾಕುಳು ಮತ್ತು ಬೆರ್ಮೆರ್ ಮಾಡ
ಎಡಮಂಗಲದ ಸಮೀಪದ ಗುದ್ದವೊಂದರಲ್ಲಿ ಹೇಮಲ ಬೆರ್ಮೆರ್ ಸ್ಥಾನವಿದೆ .ಇದನ್ನು ಕೆಮ್ಮಳಜೆ ,ಕೆಮ್ಮಲೆ ಎಂದು ಹೇಳುತ್ತಾರೆ .ತುಳುವ ಸಾಂಸ್ಕೃತಿಕ ವೀರರಾದ ಕೋಟಿ ಚೆನ್ನಯರಿಂದ ಆರಾಧಿಸಲ್ಪಟ್ಟ ಬೆರ್ಮೆರ್ .

`ಬೆರ್ಮೆರ್ ಪುಟ್ಟಿನಾ ನಾಡುವುಂಡ್ ಏಳ್ ಗಂಗೆದ ನಡುಟು...’
(ಬೆರ್ಮೆರ್ ಹುಟ್ಟಿದ ನಾಡು ಇದೆ ಏಳು ಗಂಗೆಯ ನಡುವಿನಲ್ಲಿ)
ಎಂಬಲ್ಲಿ ನೀರು ಆವೃತವಾಗಿರುವ ಭೂಭಾಗದಲ್ಲಿ ಬೆರ್ಮರ್ ಹುಟ್ಟಿದ ನಾಡು ಇದೆ ಎಂದು ಹೇಳಿದೆ. ಏಳು ಗಂಗೆಯ ನಡುವೆ ಎಮಲಗುಂಡ ಇದೆ. ಏಳು ಅಂತಸ್ತಿನ ಎಮಲಗುಂಡ ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನ ಸತ್ತೆಗೆ ಇದೆ. ಬಲಭಾಗದಲ್ಲಿ ಬಂಗಾರದ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಕೆ, ಕುತ್ತಿಗೆಯಲ್ಲಿ ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತಕಲಶ, ಹೊಟ್ಟೆಯಲ್ಲಿ ಬಾಸಿಂಗ, ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿರುವ ಬೆರ್ಮೆರ್‍ಗೆ ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರ ಪರ್ವತ ಆಸನವಾಗಿದೆ. ಇಂಥ ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ನೀರು ಗಂಗೆ, ಬೆಳ್ಳಿ ಗಂಗೆ, ಕಂಚಿ ಗಂಗೆ, ಮಿಂಚಿ ಗಂಗೆ, ಪಾಮಾಜಿ ಗಂಗೆ ಎಂಬ ಏಳು ಗಂಗೆಗಳನ್ನು, ನಾಲ್ಕು ಸಮುದ್ರವನ್ನು ನಿರ್ಮಿಸುತ್ತಾರೆ. ಬೆರ್ಮೆರ್ ಏಳು ಅಂಕಣದ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು, ಹನ್ನೆರಡು ಕನ್ಯೆಯರು ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು.
ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿ ಎಲ್ಲ ಕೊಚ್ಚಿ ಹೋಗುತ್ತವೆ. ಆಗ ಸೂರ್ಯನಾರಾಯಣ ಪುನಃ ಸೃಷಿಗೆ ತೊಡಗುತ್ತಾರೆ.
ದೇವರು ಎಡಭಾಗದಲ್ಲಿ ಎರಡು ಕೇಂಜವ ಪಕ್ಷಿಗಳನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಾದ ಕೇಂಜವ ಪಕ್ಷಿಗಳು ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಅಣತಿಯಂತೆ ಗಂಡು ಕೇಂಜವ ಬಡಗು ದಿಕ್ಕಿನ ಸಾಗರದ ನಡುವಿನಲ್ಲಿರುವ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರವ ಅತ್ತಿಯ ಹೂವಿನ ಮಕರಂದ ಹೀರಲು ಕೊಕ್ಕು ಹಾಕಿದಾಗ ಸೂರ್ಯ ಮುಳುಗಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿಹಾಕಿಕೊಂಡಿತು. ಇತ್ತ ಹೆಣ್ಣು ಕೇಂಜವ ಪಕ್ಷಿ ತನ್ನ ಪತಿ ಕ್ಷೇಮವಾಗಿ ಬಂದರೆ ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣ ದೇವರಿಗೆ ನೀಡುತ್ತೇನೆ ಎಂದು ಹರಿಕೆ ಹೇಳಿಕೊಳ್ಳುತ್ತದೆ.
ತಕ್ಷಣ ಸೂರ್ಯೋದಯವಾಗಿ ಹೂ ಅರಳಿ ಕೇಂಜವ ಹಕ್ಕಿ ಹಿಂತಿರುಗಿ ಬರುತ್ತದೆ. ಅದು ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವೆದಿ ಗರ್ಭಧರಿಸಿ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಅದನ್ನು ದೇವರಿಗೆ ಅರ್ಪಿಸಿದಾಗ ದೇವರು ಅದು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ, ಮೊಟ್ಟೆ ಸಿಡಿದು ಆಕಾಶಕ್ಕೆ, ಪಾತಾಳಕ್ಕೆ ಹಾರಿ ಉತ್ತರ ದಿಕ್ಕಿನಲ್ಲಿರುವ ಜರ್ದೂರಿಯ ಮಗ ಜಂಬೂರಿ ಕುಮಾರನ ಮಡಿಲಿಗೆ ಬಿದ್ದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿ ಧರಿಸಲು, ಅದು ಸಿಡಿದು ಮಣ್ಣ ಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತ, ದ್ವೀಪ, ಹೊಳೆ, ಘಟ್ಟ ನಿರ್ಮಾಣವಾಗಿ ಮಾನವ, ಸಸ್ಯ, ಪ್ರಾಣಿಗಳು ಹುಟ್ಟಿದವು. ಕಂಚಿಕಡಗಿನರಮನೆ ಹಾಗೂ ಮಣ್ಣ ಪಕಲೋರಿ ಅರಮನೆ ಸೃಷ್ಟಿಯಾಗಿ ಕಂಚಿಕಡಗಿನರಮನೆಯಲ್ಲಿ ಲೋಕಬಾರಿ ಅರಸುವಿನ ಮಗ ಏಕಸಾಲೆರು ಹಾಗೂ ಮಣ್ಣ ಪಕಲೋರಿ ಅರಮನೆಯಲ್ಲಿ ಗಿಂಡೆ ಗಿಳಿರಾಮು ದೆಯ್ಯಾರು ಹುಟ್ಟುತ್ತಾರೆ. ಇವರಿಗೆ ವಿವಾಹವಾಗುತ್ತದೆ. ಅವರಿಗೆ ಒಂದು ಗಂಡು ಮಗು ಜನಿಸುತ್ತದೆ. ಹುಟ್ಟಿದ ಮಗುವಿಗೆ ಬೆರ್ಮೆರಿನ ಲಕ್ಷಣಗಳಿರುತ್ತದೆ. ಮಗುವಿಗೆ ಬಾಮುಲ್ಲ, ಕುಮಾರ, ಬಿತ್ತಿನ ಬೀರ ಎಂಬ ಮೂರು ಹೆಸರುಗಳನ್ನು ಇಡುತ್ತಾರೆ. ಮಗು ಹುಟ್ಟಿದ ತುಸು ಸಮಯದಲ್ಲಿ ಏಕ ಸಾಲೆರಿಗೆ ದಂಡೊಂದು ಒದಗಿ ಬಂದಾಗ ದೈಯಾರು ಕೂಡ ಹಠ ಮಾಡಿ ಹೋಗುತ್ತಾಳೆ. ಮಗುವನ್ನು ತನ್ನ ಚಿಕ್ಕತಾಯಿ ಗುಂಡೊದಪ್ಪೆಗೆ ನೋಡಿಕೊಳ್ಳಲು ಹೇಳುತ್ತಾಳೆ. ಏಕಸಾಲೆರು ಕೂಟಕ್ಕೆ ಹೋದಾಗ ಕೆಂಪು ಕೆಮ್ಮಲಜೆ ಗುಡ್ಡದಿಂದ ನಾಲ್ವರು ಬಂದು ಕುಮಾರನನ್ನು ಚೆಂಡಿನ ಆಟಕ್ಕೆ ಕರೆಯುತ್ತಾರೆ. ಅವನ ಜೊತೆಗಾರರು ಸಂಚು ಮಾಡಿ ಚೆಂಡು ಬಾವಿಗೆ ಬೀಳುವಂತೆ ಮಾಡಿ, ಕುಮಾರನನ್ನು ಬಾವಿಗೆ ಇಳಿಸುತ್ತಾರೆ. ಅವನು ಬಾವಿಗೆ ಇಳಿದಾಗ ಕಲ್ಲು ಚಪ್ಪಡಿ ಎಳೆದು ಬಾವಿಗೆ ಹಾಕಿ ಮುಚ್ಚಿ, ತಳಬಾನ ಮಾಡಿ, ಮೇಲೆ ಮುಳ್ಳಿನ ರಾಶಿ ಹಾಕಿ ರಣಗೋಳಿ ನೆಡುತ್ತಾರೆ.
    ಇತ್ತ ಕೂಟಕ್ಕೆ ಹೋದ ಏಕಸಾಲೆರು, ದೈಯಾರು ಹಿಂತಿರುಗಿ ಬಂದಾಗ ಕುಮಾರನು ಕೆಮ್ಮಲ ಕರಿಯ ಗುಡ್ಡಕ್ಕೆ ಹೋಗಿದ್ದು ತಿಳಿಯುತ್ತದೆ. ಅಲ್ಲಿ ಅವನನ್ನು ತಳಬಾನೆ ಮಾಡಿ ಸಮಯ ಸಂದು ಹೋಗಿದೆ ಎಂದು ತಾಯಿ ಗಿಳಿರಾಮು ದೈಯಾರಿಗೆ ತಿಳಿದು ಮೇಲಿನಿಂದಲೇ ಮಗನ ಬಾಯಿಗೆ ಮೊಲೆ ಹಾಲು ಹಿಂಡಲು ಕುಮಾರ ಕಲ್ಲನ್ನು ಹುಡಿ ಮಾಡಿ ಮೇಲೆ ಬರುತ್ತಾನೆ. ಅಲ್ಲಿಂದ ಬಿಲ್ಲು ಬಾಣ ಹಿಡಿದು ಮಾಕಲಬ್ಬೆಯ ಉತ್ಸವಕ್ಕೆ ಹೋಗಿ ಅಲ್ಲಿ ದೇವರ ಸಹಸ್ರ ಶರ್ಮಿಜ ಹಕ್ಕಿಗಳ ಮೇಲೆ ಬಾಣ ಬಿಡುತ್ತಾನೆ. ಒಂದು ಹಕ್ಕಿಯ ರೆಕ್ಕೆ ಮುರಿದು ಬಿದ್ದಾಗ ಇಂಥಹ ವೀರನನ್ನು ಇಲ್ಲಿ ಬದುಕಲು ಬಿಡೆನೆಂದು ಘಟ್ಟ ಪ್ರದೇಶದಿಂದ ದೇವರು ಗಡಿಪಾರು ಮಾಡಿದರು. ಕುಮಾರ ಕುಕ್ಕೆಯ ದಾರಿಯಲ್ಲಿ ಇಳಿದು ಬರುವಾಗ ಸುಬ್ರಹ್ಮಣ್ಯ ದೇವರು ಅವನ ದಾರಿಗೆ ಮನುಷ್ಯರು ಹಾಗೂ ಭೂತಗಳ ಕೋಟೆಯನ್ನು ನಿರ್ಮಿಸಿದರು. ಅವರನ್ನೆಲ್ಲ ಸೋಲಿಸಿ ಕುಮಾರ ಬರುತ್ತಾನೆ. ಇಷ್ಟು ಪರಾಕ್ರಮವನ್ನು ಪ್ರದರ್ಶಿಸಿದ ಈತನಲ್ಲಿ ಸುಬ್ರಾಯ ದೇವರು ``ನನ್ನಎಡಬದಿಯಲ್ಲಿ ಹರಿಯುತ್ತಿರುವ ಪದ್ಮ ಎಂಬ ನದಿಯನ್ನು ಬಲಬದಿಗೆ ತಿರುಗಿಸಿಕೊಡು. ಹೀಗೆ ಮಾಡಿದರೆ ಕುಮಾರ ನೀನು ಬ್ರಹ್ಮ ನಾನು ನಾಗನಾಗಿರುತ್ತೇನೆ’’ ಎಂದು ಸವಾಲು ಹಾಕುತ್ತಾರೆ. ಆಗ ಕುಮಾರನು ಪದ್ಮಾನದಿಯನ್ನು ಬಲಬದಿಗೆ ತಿರುಗಿಸಿದನು. ಆ ನದಿಗೆ ಕುಮಾರಧಾರಾ ಎಂದು ಕರೆದನು. ಇಲ್ಲಿಯೇ ಕುಮಾರನು ಬ್ರಹ್ಮನಾಗಿಯೂ ದೇವರು ನಾಗನಾಗಿಯೂ ಆವಿರ್ಭವಿಸಿದರು.
    ಒಂದು ದಿನ ಕೆಮ್ಮಲೆಯಿಂದ ಬಂದ ನಾಲ್ಕು ಜನರು ಕುಮಾರಧಾರೆಯಲ್ಲಿ ತೀರ್ಥಸ್ನಾನಕ್ಕೆ ಬಂದು ಮುಳುಗು ಹಾಕಿ ಏಳುವಷ್ಟರಲ್ಲಿ ದಡದಲ್ಲಿರಿಸಿದ್ದ ಬಂಗಾರದ ಕಲಶ, ಬೆಳ್ಳಿ ಬಟ್ಟಲು ಮಾಯವಾಗುತ್ತದೆ. ಆಗ ಅವರು ಒಂದೊಮ್ಮೆ ನಮ್ಮ ವಸ್ತುಗಳು ನಮಗೆ ದೊರೆತರೆ, ಇಲ್ಲಿ ಆವಿರ್ಭವಿಸಿರುವ ನಾಗಬ್ರಹ್ಮರನ್ನು ಕೆಮ್ಮಲೆಯಲ್ಲಿ ನಂಬುತ್ತೇವೆ ಎಂದು ಹೇಳಿ ಪುನಃ ಮುಳುಗು ಹಾಕಿ ಏಳುವಾಗ ಬೆಳ್ಳಿಯ ಹರಿವಾಣ, ಬಂಗಾರದ ಕಲಶ ಸಿಕ್ಕಿತು. ಹೀಗೆ ಆ ನಾಲ್ವರು ಕುಮಾರಧಾರೆಯಲ್ಲಿ ಆವಿರ್ಭವಿಸಿದ ನಾಗಬ್ರಹ್ಮರನ್ನು ಕೆಮ್ಮಲಜೆಯ ಹೊನ್ನೆಮರದ ಬುಡದಲ್ಲಿ ಅಡಿ ಪಂಚಾಂಗ ಮೇಲ್ಛಾವಣಿ ಹಾಕಿ ಆರಾಧಿಸಿದರು ಎಂಬ ಕಥಾನಕವು ದಾಮೋದರ ಕಲ್ಮಾಡಿ ಸಂಗ್ರಹಿಸಿದ ಕೋಟಿ-ಚೆನ್ನಯ ಪಾಡ್ದನ ಸಂಪುಟದಲ್ಲಿದೆ.
    ಕೇಂಜವ ಹಕ್ಕಿಗಳ ಎರಡನೆಯ ಮೊಟ್ಟೆ ಸಮುದ್ರಕ್ಕೆ ಬಿದ್ದು ಹೆಣ್ಣಾಗಿ ಓಪೆತ್ತಿ ಪೆಜನಾರ್ ದಂಪತಿಗಳಿಗೆ ಸಿಕ್ಕಿ ಕೇದಗೆ ಎಂಬ ಹೆಸರನ್ನು ಪಡೆದು ಬೆಳೆಯುತ್ತಾಳೆ. ವಿವಾಹ ಪೂರ್ವದಲ್ಲಿ ಋತುಮತಿಯಾದ ಅವಳನ್ನು ಬ್ರಾಹ್ಮಣರಲ್ಲಿ ಪ್ರಚಲಿತವಿದ್ದ ಸಂಪ್ರದಾಯದಂತೆ ಅವಳನ್ನು ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಟ್ಟಾಗ ಅಲ್ಲಿಗೆ ಬಂದ ಸಾಯನ ಬೈದ ಅವಳನ್ನು ತನ್ನ ತಂಗಿಯಂತೆ ಕಂಡು ಮನೆಗೆ ಕರೆದೊಯ್ದು `ದೇಯಿ’ ಎಂದು ಹೆಸರಿಟ್ಟು ಕಾಂತಣ ಬೈದ್ಯನಿಗೆ ಮದುವೆ ಮಾಡಿಕೊಡುತ್ತಾನೆ. ದೇಯಿ ಬೈದಿತಿಯ ಮಕ್ಕಳೇ ಕೋಟಿ-ಚೆನ್ನಯರು. ಇವರು ಕೆಮ್ಮಲೆಗೆ ಬಂದು ತಾಯಿ ಹೇಳಿದ ಹರಿಕೆಯನ್ನು ತೀರಿಸುವ ವಿಚಾರ ಪಾಡ್ದನದಲ್ಲಿದೆ.
    ಪಾಡ್ದನದ ಇನ್ನೊಂದು ಪಾಠದಲ್ಲಿ ಸೂರ್ಯನಾರಾಯಣ ದೇವರ ಕೈ ಜಾರಿ ಬಿದ್ದ ಮೊಟ್ಟೆ ಕೆಂಪು ಕೇಮಳ ಗುಡ್ಡಕ್ಕೆ ಬಿದ್ದು ಒಡೆದು ಕರಿಯ ನಾಗ ಶಿಲೆಯಾಯಿತು ಎಂದು ಹೇಳಲಾಗಿದೆ. ಕೆಮ್ಮಲೆಯಲ್ಲಿ (ಹೇಮಳದಲ್ಲಿ) ಬಹಳ ಪ್ರಸಿದ್ಧವಾದ ನಾಗಬ್ರಹ್ಮರ ಗುಡಿ ಇದೆ. ಈಗ ಇರುವ ಗುಡಿ ಇತ್ತೀಚೆಗೆ ನಿರ್ಮಿಸಲ್ಪಟ್ಟಿದೆ. ಈ ಗುಡಿಗೆ ಹೋಗುವ ದಾರಿಯ ಎಡಬದಿಯಲ್ಲಿ ಬೆರ್ಮರ ಮಾಡ ಹಾಗೂ ಉಳ್ಳಾಕುಲು ಮಾಡಗಳ ಪ್ರಾಚೀನ ಅವಶೇಷಗಳು ಇಂದಿಗೂ ಇವೆ. ಇಲ್ಲಿ ಒಂದು ಪ್ರಾಚೀನ ಮಣ್ಣಿನ ಹಂದಿಯ ವಿಗ್ರ ಹಾಗೂ ಬೆರ್ಮೆರ ಮಾಡದ್ದೆಂದು ಹೇಳಲಾಗುವ ಮಣ್ಣಿನ ಮುಗುಡು (ಕಲಶ) ಇದೆ.
(ಸುಳ್ಯ ಸುದ್ದಿ ಬಿಡುಗಡೆ, ಜುಲಾೈ 25, 2011ಯಲ್ಲಿ ನನ್ನ ಪ್ರಕಟಿತ ಲೇಖನ )                                                               ಮಣ್ಣಿನ ಹಂದಿ
                                                          ಮಣ್ಣಿನ ಮುಗುಡು
                                               ಹಿರಿಯ ಜನ ಪದ ವಿದ್ವಾಂಸರಾದ ಡಿ ಜಿ ನಡ್ಕ
                                            ಕೆಮ್ಮಲೆಯ ನಾಗ ಬ್ರಹ್ಮ ಗುಡಿ (ನವೀಕೃತ )

ಸಮೀಪದ ಹೇಮಳದ ನಾಗಬ್ರಹ್ಮನನ್ನು ಪಾಡ್ದನಗಳಲ್ಲಿ ಕೆಮ್ಮಲೆತ ಬೆರ್ಮೆರ್ ಎಂದು ಹೇಳಲಾಗಿದೆ. ಕೆಮ್ಮಲಜೆ ಎಂಬ ಪದವೂ ಬಳಕೆಯಾಗಿದೆ. ಕೆಮ್ಮಲೆಯ ನಾಗಬ್ರಹ್ಮ ತುಳುನಾಡಿನ ಸಾಂಸ್ಕ್ರತಿಕ ವೀರರಾದ ಕೋಟಿ-ಚೆನ್ನಯರಿಂದ ಆರಾಧಿಸಲ್ಪಟ್ಟ ತುಳುನಾಡಿನ ಆರಾಧ್ಯದೈವ. ಕೋಟಿ-ಚೆನ್ನಯ ಪಾಡ್ಡನದ ಬೆರ್ಮರೆ ಸಂಧಿಗಳು ನಾಗಬ್ರಹ್ಮರ ಹುಟ್ಟಿನ ಬಗ್ಗೆ ವಿವರಣೆ ಇದೆ.

No comments:

Post a Comment