Monday, 5 May 2014

ಸಾವಿರದೊಂದು ಗುರಿಯೆಡೆಗೆ :52 ಕನ್ನಡ ಭೂತ -©ಡಾ.ಲಕ್ಷ್ಮೀ ಜಿ ಪ್ರಸಾದ




                                            
.                                                       ಚಿತ್ರ ಕೃಪೆ :ಪವನ್ ಕೆ ಎಸ್                                
                                                        copy rights reserved


ತುಳುನಾಡಿನಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಮುಖ್ಯವಾಗಿ ಮೂರು ವರ್ಗಗಳಿವೆ. ಪೌರಾಣಿಕ ದೇವರುಗಳ ರೂಪ ಎಂದು ಪರಿಗಣಿಸಲ್ಪಟ್ಟಿರುವ ಭೂತಗಳದು ಒಂದು ವರ್ಗ. ಗುಳಿಗ, ಚಾಮುಂಡಿ, ಧೂಮಾವತಿ, ವಿಷ್ಣುಮೂರ್ತಿ, ಉಳ್ಳಾಕುಲು ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಪ್ರಾಣಿ ಮೂಲದ ದೈವಗಳದು ಎರಡನೆಯ ವರ್ಗ. ಪಂಜುರ್ಲಿ, ಪಿಲಿಭೂತ, ಎರುಬಂಟ, ಪಿಲಿಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಮೂಲತಃ ಮನುಷ್ಯರಾಗಿ ಹುಟ್ಟಿ ಅಸಾಮಾನ್ಯ ಸಾಹಸ ಮೆರೆದು, ದುರಂತವನ್ನಪ್ಪಿದ ನಂತರ ದೈವತ್ವಕ್ಕೇರಿ ಭೂತತ್ವವನ್ನು ಪಡೆದು ಆರಾಧಿಸಲ್ಪಡುವ ಭೂತಗಳದ್ದು ಮೂರನೆಯ ವರ್ಗ. ಕೋಟಿ-ಚೆನ್ನಯ, ಕಲ್ಕುಡ-ಕಲ್ಲುರ್ಟಿ, ಬಿಲ್ಲರಾಯ-ಬಿಲ್ಲಾರ್ತಿ, ಕುಕ್ಕೆತ್ತಿ-ಬಳ್ಳು, ನಾರಳತ್ತಾಯ, ಬೀರ್ನಾಳ್ವ, ಬೀರ್ನಾಚಾರಿ, ಬಿರ್ಮಣ ಬೈದ್ಯ, ಪರವ ಭೂತ, ಪರಿವಾರ ನಾಯಕ, ಮರ್ಲುಮಾಣಿ, ಹಳ್ಳತ್ತಾಯ, ಬಚ್ಚನಾಯಕ ಮೊದಲಾದವರು ಈ ವರ್ಗದಲ್ಲಿ ಸೇರುತ್ತಾರೆ.
ತುಳುನಾಡಿನ ಹೆಚ್ಚಿನ ಭೂತಗಳು ಮಾನವ ಮೂಲವನ್ನು ಹೊಂದಿವೆ. ಇವರ ಮೂಲತಃ ತುಳುನಾಡಿನಲ್ಲಿ ಹುಟ್ಟಿ ಬೆಳೆದು ದುರಂತವನ್ನಪ್ಪಿ ದೈವತ್ವಕ್ಕೇರಿದವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ತುಳುವರೇ ಆಗಿದ್ದಾರೆ. ಆದರೆ ಘಟ್ಟದ ಮೇಲಿನಿಂದ ಕೆಳಗಿಳಿದು ಬಂದು ಇಲ್ಲಿ ಯುದ್ಧ ಮಾಡಿ ಅಥವಾ ಬೇರಾವುದೋ ಕಾರಣದಿಂದ ದುರಂತವನ್ನಪ್ಪಿದ ಕನ್ನಡಿಗರು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾರೆ. ಬಚ್ಚನಾಯಕ, ಕರಿಯಣ್ಣ ನಾಯಕ, ಬೈಸು ನಾಯಕ, ಕನ್ನಡಬೀರ, ಕನ್ನಡ ಭೂತ, ಕನ್ನಡಿಗ ಭೂತಗಳು ದೈವತ್ವಕ್ಕೇರಿದ ಕನ್ನಡಿಗರೇ ಆಗಿದ್ದಾರೆ. ಕನ್ನಡ ಮೂಲದ ಈ ಭೂತಗಳ ಪಾಡ್ದನ ಹಾಗೂ ನುಡಿಗಟ್ಟುಗಳು ಕನ್ನಡದಲ್ಲಿಯೇ ಇರುತ್ತವೆ



: ಘಟ್ಟದ ಮೇಲಿನ ರಾಜ್ಯದಲ್ಲಿ ನೀಲಮ್ಮ ಹೆಂಗಸು ಮತ್ತು ಭೈರವ ಎಂಬ ಕನ್ನಡ ಭಾಷಿಕ ದಂಪತಿಗಳಿದ್ದರು. ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ಅವರಿಗೆ ಮಕ್ಕಳಾಗುವುದಿಲ್ಲ. ಅನಂತರ ಅವರು ಭೈರವದೈವಕ್ಕೆ ಹರಿಕೆ ಹೇಳುತ್ತಾರೆ. ಆಗ ಅವರಿಗೆ ಒಂದು ಮಗು ಸತ್ಯದಲ್ಲಿ ಜನಿಸುತ್ತದೆ. ಮಗು ಹುಟ್ಟಿದ ನಂತರ ಹರಿಕೆ ಸಂದಾಯ ಮಾಡುವುದನ್ನು ನೀಲಮ್ಮ, ಭೈರವ ದಂಪತಿಗಳು ಮರೆತು ಬಿಡುತ್ತಾರೆ. ಅವರಿಗೆ ಹುಟ್ಟಿದ ಸತ್ಯದ ಮಗು ದೊಡ್ಡವನಾಗಿ ಶೂರನಾಗಿ ಸಾಹಸಿಯಾಗಿ ಬೆಳೆಯುತ್ತಾನೆ. ಒಂದು ದಿನ ಅವನಿಗೆ ತುಳುನಾಡನ್ನು ನೋಡಬೇಕು, ತುಳು ವಿದ್ಯೆಯನ್ನು ಕಲಿಯಬೇಕು ಎಂದು ಆಸೆಯಾಗಿ ಘಟ್ಟ ಇಳಿದು ಬರುತ್ತಾನೆ. ತಂದ ಬುತ್ತಿಯಲ್ಲಿರುವ ಆಹಾರವನ
ದಾರಿಯಲ್ಲಿ ಹಸಿದಿರುವ ಪ್ರಾಣಿ ಪಕ್ಷಿಗಳಿಗೆ ಹಾಕುತ್ತಾನೆ. ಘಟ್ಟ ಇಳಿದು ಕುಮಾರಧಾರ ನದಿಗೆ ಬಂದು ಸ್ನಾನ ಮಾಡುವಾಗ ಮಾಯಕವಾಗುತ್ತಾನೆ.
ಕುಮಾರಧಾರಾ ನದಿಯಲ್ಲಿ ಮಾಯಕವಾದ ಆತ ಕನ್ನಡ ಭೂತವಾಗಿ ದೈವತ್ವಕ್ಕೇರುತ್ತಾನೆ. ಮುಂದೊಂದು ದಿನ ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಮೂರ್ತೆದಾರನಬಳಿ ಮಾನವ ರೂಪ ಧರಿಸಿ ಕಳ್ಳುಕೇಳುತ್ತಾನೆ. ಅವನು ಕಳ್ಳು ನೀಡಿದಾಗ ಕಳ್ಳುಮತ್ತು ಮನುಷ್ಯ ರೂಪದ ಕನ್ನಡ ಭೂತ ಮಾಯವಾಗುತ್ತದೆ. ಆ ಮೂರ್ತೆದಾರ ಆಶ್ಚರ್ಯದಿಂದ ಬಲಿಮೆಯಲ್ಲಿ ಕೇಳಿದಾಗ ಕನ್ನಡ ಭೂತಉದ್ಭವವಾದ ವಿಚಾರ ತಿಳಿದು ಬರುತ್ತದೆ. ಮುಂದೆ ಕನ್ನಡ ಭೂತದ ಆರಾಧನೆ ನಡೆಯುತ್ತದೆ. ಸುಳ್ಯ, ಪುತ್ತೂರು ಪರಿಸರದ ಅಂಕತಡ್ಕ ಮೊದಲಾದ ಪ್ರದೇಶಗಳಲ್ಲಿ ಕುಂಟಲ್ದಾಯ ದೈವದ ನೇಮ ಆಗುವಾಗ ಕನ್ನಡ ಭೂತಕ್ಕೆ ನೇಮ ನೀಡಿ ಆರಾಧಿಸುತ್ತಾರೆ. ಕನ್ನಡ ಭೂತಕ್ಕೆ ಒಂದು ವಿಶಿಷ್ಟ ಟೊಪ್ಪಿಗೆ, ಕಚ್ಚೆ ಹಾಗೂ ತೆಂಗಿನ ತಿರಿಯ ಅಲಂಕಾರವಿರುತ್ತದೆ.©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

No comments:

Post a Comment