Sunday, 25 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು :91-92 ಕುಂದಯ ಮತ್ತು ದಾರು (Kundaya and Daaru Bhuta)- © Dr.LAKSHMI G PRASAD                                        © copy rights reserved
ತುಳುನಾಡಿನ ಭೂತಾರಾಧನೆ ಬಹಳ ಅನನ್ಯವಾದುದು .ಇಲ್ಲಿ ಯಾರು ಯಾವಾಗ ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ.ಅಸಮಾನ್ಯ ವೀರರು ಸಾಂಸ್ಕೃತಿಕ ನಾಯಕರು ದೈವಗಳ ಅನನ್ಯ ಭಕ್ತರು,ದೇವಾಲಯ ನಿರ್ಮಿಸಿದವರು ಹೀಗೆ ನಾನಾ ಜನರು ದೈವತ್ವ ಪಡೆದು ಭೂತಗಳಾಗಿ ಆರಾಧಿಸಲ್ಪಡುತ್ತಾರೆ .ಕೆಲವರು ಯಾವುದೇ ವಿಶಿಷ್ಟ ಕಾರಣಗಳು ಇಲ್ಲದೆಯೂ ದೈವತ್ವ ಪಡೆದು ಕಾರಣಿಕದ ಶಕ್ತಿಗಳಾಗಿ ದೈವಗಳಾಗಿ ಆರಾಧನೆ ಹೊಂದುತ್ತಾರೆ .ಕುಂದಯ ಮತ್ತು ದಾರು ಇಂಥಹ ಅಪರೂಪದ ಭೂತಗಳು  .                                             
ಕುಂದಯ ದೈವ ರೆಂಜಿಲಾಡಿ ಸುತ್ತ ಮುತ್ತ ಬಹಳ ಕಾರಣಿಕದ ದೈವವೆಂದು ಪ್ರಸಿದ್ಧಿ ಇದೆ 
ದಾರು ಸ್ತ್ರೀ ರೂಪಿ ದೈವ. ದಾರು ಬಿರ್ಮಕ್ಕ ಎಂಬುದು ದಾರು ದೈವದ ಪೂರ್ಣ ಹೆಸರು. ಕುಂದಯ ಪುರುಷರೂಪಿ ದೈವ. ದಾರು ಬಿರ್ಮಕ್ಕ ಮತ್ತು ಕುಂದಯ ಅಕ್ಕ-ತಮ್ಮ ದೈವಗಳು. ಮೂಲತಃ ಇವರು ಮೂರ್ತೆದಾರರು.
 ತಮ್ಮ ಕುಂದಯ ದಿನಾಲೂ ಬೆಳಗ್ಗಿನ ಜಾವದಲ್ಲಿ ಎದ್ದು ಮೂರ್ತೆ ತೆಗೆಯಲು ಹೋಗುತ್ತಿರುತ್ತಾನೆ. ಮಧ್ಯಾಹ್ನ ತಂದ ಕಳ್ಳನ್ನು ದಾರು ಬಿರ್ಮಕ್ಕ ಮಾರಾಟ ಮಾಡಿ ಬರುತ್ತಿರುತ್ತಾಳೆ.
 ಒಂದು ದಿನ ಬೆಳಗ್ಗಿನ ಜಾವ ಮೂರ್ತೆಗಾಗಿ ತಮ್ಮ ಕುಂದಯ ಕಾಡಿಗೆ ಹೋಗುತ್ತಾನೆ. ದಾರು ಬಿರ್ಮಕ್ಕ ನಾನಾ ವಿಧವಾದ ಅಡುಗೆ ಮಾಡಿ ತಮ್ಮನಿಗೆ ಕಾಯುತ್ತಾಳೆ. ಎಂದಿಗಿಂತ ತಡವಾಗಿ ಕುಂದಯ ಬರುತ್ತಾನೆ. ನಂತರ ಅವನು ತಂದ ಕಳ್ಳನ್ನು ಮಾರಲು ಅಕ್ಕ ದಾರು ಬಿರ್ಮಕ್ಕ ಹೋಗುತ್ತಾಳೆ. 
ಅಂದು ಅವರು ತಂದ ಕಳ್ಳು ಮಾರಾಟವಾಗುವುದೇ ಇಲ್ಲ. ಬೇರೆಲ್ಲರೂ ಮಾರಾಟಕ್ಕೆ ತಂದ ಕಳ್ಳು ಮಾರಾಟವಾಗಿ ಖಾಲಿಯಾದರೂ ಇವರು ತಂದ ಕಳ್ಳು ಮಾರಾಟವಾಗುವುದಿಲ್ಲ. ಆಗ ದಾರು ಬಿರ್ಮಕ್ಕಕದ್ರಿ ಮಂಜುನಾಥ ದೇವರಿಗೆ ಹರಿಕೆ ಹೇಳುತ್ತಾಳೆ. ಆಗ ಅವರು ತಂದ ಕಳ್ಳು ಕ್ಷಣ ಮಾತ್ರದಲ್ಲಿ ಎಲ್ಲ ಮಾರಾಟವಾಗುತ್ತದೆ.
ಹೇಳಿಕೊಂಡ ಹರಿಕೆಯನ್ನು ಸಲ್ಲಿಸುವುದಕ್ಕಾಗಿ ದಾರು ಬಿರ್ಮಕ್ಕ ಕದ್ರಿಗೆ ಹೋಗುತ್ತಾಳೆ. ಅವಳು ಅಲ್ಲಿಗೆ ಮುಟ್ಟುವ ಹೊತ್ತಿನಲ್ಲಿ ದೇವರ ಬಲಿ ಆಗುತ್ತಾ ಇರುತ್ತದೆ. ಜೋಗಿ ಅರಸರ ಬಲಿಯೂ ಇರುತ್ತದೆ. ದಾರು ಬಿರ್ಮಕ್ಕ ಅಲ್ಲಿಗೆ ಹೋಗಿ ನಮಸ್ಕರಿಸುತ್ತಾಳೆ.
 ಆಗ ಅಲ್ಲಿ ಇದ್ದ ವರ್ಣಾರ ಮರ್ಲೆ ದೈವ ಸುಂದರಿಯಾದ ದಾರು ಬಿರ್ಮಕ್ಕನ ಮೇಲೆ ದೃಷ್ಟಿ ಬೀರುತ್ತದೆ. ಕದ್ರಿ ದೇವಸ್ಥಾನದಲ್ಲಿ ಹರಿಕೆ ಸಲ್ಲಿಸಿ ಹಿಂತಿರುವಾಗ ದಾರು ಬಿರ್ಮಕ್ಕನನ್ನು ಮೆಚ್ಚಿದ ದೈವ ವರ್ಣರ ಪಂಜುರ್ಲಿ ಅವರನ್ನು ಹಿಂಬಾಲಿಸುತ್ತದೆ. 
ದಾರು ಬಿರ್ಮಕ್ಕ ಕದ್ರಿಯಿಂದ ಸೆರಂಗೋಡಿಗೆ ಬಂದು ರೆಂಜಾಳ ಬೀಡಿಗೆ ಬರುತ್ತಾಳೆ. ಅಲ್ಲಿ ದೈವ ವರ್ಣಾರ ಪಂಜುರ್ಲಿ ದಾರು ಬಿರ್ಮಕ್ಕನನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಮುಂದೆ ದಾರು ಬಿರ್ಮಕ್ಕ ಹಾಗೂ ಕುಂದಯರು ದೈವಗಳಾಗಿ ರೆಂಜಿಲಾಡಿ ಹಾಗೂ ಇತರ ಬೀಡುಗಳಲ್ಲಿ ಆರಾಧನೆ ಪಡೆಯುತ್ತಾರೆ.
ಕುಂದಯ ಮತ್ತು ದಾರು ಎಂಬವರು ಮೂರ್ತೆದಾರ ದಂಪತಿಗಳು ಎಂದು ಕೂಡಾ ಒಂದು ಪಾದ್ದನದಲ್ಲಿದೆ .ಕಬಕ ಬೈಪ್ಪದವಿನಲ್ಲಿ ಈ ದೈವಗಳಿಗೆ ಆರಾಧನೆ ಇದ್ದು ಅಲ್ಲಿ  ಭೂತ ಕಟ್ಟುವ ಶ್ರೀಯುತ ಸುರೇಶ  ಅವರು ಇವರನ್ನು ಗಂಡ ಹೆಂಡತಿ ಎಂದು ಹೇಳಿದ್ದಾರೆ .
ಇಲ್ಲಿ ಈ ದೈವಗಳಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ .ಇವರಿಗೆ ಇಲ್ಲಿ ಹಾಸ್ಯದ ಅಭಿವ್ಯಕ್ತಿ ಇದೆ

No comments:

Post a Comment