Monday, 26 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ಭೂತಗಳು -95 ಕನ್ನಡ ಬೀರ -Dr.LAKSHMI G PRASAD                               
                                              copy rights reserved
ತುಳುನಾಡಿನಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಮುಖ್ಯವಾಗಿ ಮೂರು ವರ್ಗಗಳಿವೆ. ಪೌರಾಣಿಕ ದೇವರುಗಳ ರೂಪ ಎಂದು ಪರಿಗಣಿಸಲ್ಪಟ್ಟಿರುವ ಭೂತಗಳದು ಒಂದು ವರ್ಗ. ಗುಳಿಗ, ಚಾಮುಂಡಿ, ಧೂಮಾವತಿ, ವಿಷ್ಣುಮೂರ್ತಿ, ಉಳ್ಳಾಕುಲು ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಪ್ರಾಣಿ ಮೂಲದ ದೈವಗಳದು ಎರಡನೆಯ ವರ್ಗ. ಪಂಜುರ್ಲಿ, ಪಿಲಿಭೂತ, ಎರುಬಂಟ, ಪಿಲಿಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ. ಮೂಲತಃ ಮನುಷ್ಯರಾಗಿ ಹುಟ್ಟಿ ಅಸಾಮಾನ್ಯ ಸಾಹಸ ಮೆರೆದು, ದುರಂತವನ್ನಪ್ಪಿದ ನಂತರ ದೈವತ್ವಕ್ಕೇರಿ ಭೂತತ್ವವನ್ನು ಪಡೆದು ಆರಾಧಿಸಲ್ಪಡುವ ಭೂತಗಳದ್ದು ಮೂರನೆಯ ವರ್ಗ. ಕೋಟಿ-ಚೆನ್ನಯ, ಕಲ್ಕುಡ-ಕಲ್ಲುರ್ಟಿ, ಬಿಲ್ಲರಾಯ-ಬಿಲ್ಲಾರ್ತಿ, ಕುಕ್ಕೆತ್ತಿ-ಬಳ್ಳು, ನಾರಳತ್ತಾಯ, ಬೀರ್ನಾಳ್ವ, ಬೀರ್ನಾಚಾರಿ, ಬಿರ್ಮಣ ಬೈದ್ಯ, ಪರವ ಭೂತ, ಪರಿವಾರ ನಾಯಕ, ಮರ್ಲುಮಾಣಿ, ಹಳ್ಳತ್ತಾಯ, ಬಚ್ಚನಾಯಕ ಮೊದಲಾದವರು ಈ ವರ್ಗದಲ್ಲಿ ಸೇರುತ್ತಾರೆ.
ತುಳುನಾಡಿನ ಹೆಚ್ಚಿನ ಭೂತಗಳು ಮಾನವ ಮೂಲವನ್ನು ಹೊಂದಿವೆ. ಇವರ ಮೂಲತಃ ತುಳುನಾಡಿನಲ್ಲಿ ಹುಟ್ಟಿ ಬೆಳೆದು ದುರಂತವನ್ನಪ್ಪಿ ದೈವತ್ವಕ್ಕೇರಿದವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ತುಳುವರೇ ಆಗಿದ್ದಾರೆ. ಆದರೆ ಘಟ್ಟದ ಮೇಲಿನಿಂದ ಕೆಳಗಿಳಿದು ಬಂದು ಇಲ್ಲಿ ಯುದ್ಧ ಮಾಡಿ ಅಥವಾ ಬೇರಾವುದೋ ಕಾರಣದಿಂದ ದುರಂತವನ್ನಪ್ಪಿದ ಕನ್ನಡಿಗರು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಾರೆ. ಬಚ್ಚನಾಯಕ, ಕರಿಯಣ್ಣ ನಾಯಕ, ಬೈಸು ನಾಯಕ, ಕನ್ನಡಬೀರ, ಕನ್ನಡ ಭೂತ, ಕನ್ನಡಿಗ ಭೂತಗಳು ದೈವತ್ವಕ್ಕೇರಿದ ಕನ್ನಡಿಗರೇ ಆಗಿದ್ದಾರೆ. ಕನ್ನಡ ಮೂಲದ ಈ ಭೂತಗಳ ಪಾಡ್ದನ ಹಾಗೂ ನುಡಿಗಟ್ಟುಗಳು ಕನ್ನಡದಲ್ಲಿಯೇ ಇರುತ್ತವೆ
 ತುಳುನಾಡಿನ ಮಾನವ ಮೂಲದ ಭೂತಗಳೆಲ್ಲ ಇಲ್ಲಿನ ಮೂಲ ನಿವಾಸಿಗಳಾದ ತುಳುವರೇ ಇರಬಹುದು ಎಂದು ನಾನು ಭಾವಿಸಿದ್ದೆ .ಆಗಿನ್ನೂ ತುಳು ಸಂಶೋಧನಾ ಕ್ಷೇತ್ರಕ್ಕೆ ನಾನು ಕಾಲಿಟ್ಟಿದ್ದೆ ಅಷ್ಟೆ !ಎಲ್ಲವು ನನಗೆ ಹೊಸ ಅನುಭವ !ಮದಂಗಲ್ಲಿನಲ್ಲಿರುವ ನಮ್ಮ ನೆಂಟರ ಮನೆಯಲ್ಲಿ ಒಂದು ದಿನ ಏನೋ ಕಾರ್ಯಕ್ರಮ ಇತ್ತು .ನಾನು ತಾಯಿಯೊಂದಿಗೆ ಅವರ ಮನೆಗೆ ಮಧ್ಯಾಹ್ನ ಹೋಗಿದ್ದೆ .ಅಲ್ಲಿ ಹೋದಾಗ ನನಗೆ ಅದೇ ದಿವಸ ರಾತ್ರಿ ಅಲ್ಲಿ ಧೂಮಾವತಿ ಭೂತದ ನೇಮ ಇರುವುದು ತಿಳಿಯಿತು 
ನನ್ನ ಪಿಎಚ್. ಡಿ ಸಂಶೋಧನಾ ವಿಷಯ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ .ಆದ್ದರಿಂದ ಧೂಮಾವತಿ ಭೂತದ ಕುರಿತು  ಮಾಹಿತಿ ಅಷ್ಟೇನೂ ಅಗತ್ಯ ಇರಲಿಲ್ಲ . ಆದರೂ  ಧೂಮಾವತಿ ಭೂತದ ನೇಮವನ್ನು ನೋಡುವ ಕುತೂಹಲದಿಂದ ರಾತ್ರಿ ಅಲ್ಲಿ ಉಳಿದು ಕೊಂಡೆ !ನನ್ನ ಅದೃಷ್ಟ   ಒಳ್ಳೇದಿತ್ತು ಎಂದೆನಿಸುತ್ತದೆ .ಇಲ್ಲವಾದರೆ  ಅಲ್ಲಿ ಮಾತ್ರ ಆರಾಧನೆ ಇರುವ ಮಹತ್ವದ ಭೂತವೊಂದರ ಕುರಿತು  ಅಧ್ಯಯನ ಮಾಡುವ ಅವಕಾಶ ತಪ್ಪಿ ಹೋಗುತ್ತಿತ್ತು !
ರಾತ್ರಿ ಹಬ್ಬದ ಅಡಿಗೆ ಇತ್ತು .ಪಾಯಸ ಹೋಳಿಗೆ ಉಂಡು ನೆಂಟರೆಲ್ಲ ಅವರವರ ಮನೆಗೆ ಹೋದರು .ಕೆಲವು ಜನ ಗಂಡಸರು ಮಾತ್ರ ರಾತ್ರಿ ಭೂತದ ನೇಮಕ್ಕೆ ನಿಂತರು .ಭೂತ ಕಟ್ಟುವ ಕಲಾವಿದ ರಾಜೇಶ ಪಂಬದರ ತಂಡ ಭೂತಾರಾಧನೆಗೆ ಬೇಕಾದ ಪರಿಕರಗಳನ್ನು ಸಿದ್ಧ ಪಡಿಸುತ್ತಿದ್ದರು .
ನನ್ನ ಸಣ್ಣಜ್ಜ ಚಂಡಿತೋಟ ರಾಮ ಭಟ್ ಅಲ್ಲಿ ಏನೋ ನಿರ್ದೇಶನ ನೀಡುತ್ತಾ ಇದ್ದರು ಆಗ ಅವರಲ್ಲಿ ನಾನು ಭೂತ ಕೋಲ ಎಷ್ಟೊತ್ತಿಗೆ ಆರಂಭವಾಗುತ್ತ್ತದೆ ? ಎಂದು ಕೇಳಿದೆ .ಆಗ ಅವರು ಸುಮಾರ್ ೧೦ -೧೧ ಗಂಟೆಗೆ ಧೂಮಾವತಿ ನೇಮ ಆರಂಭವಾಗುತ್ತದೆ ,ಅದಕ್ಕೆ ಮೊದಲು ಎರಡು ಪೊಡಿ (ಚಿಕ್ಕ )ಭೂತಗಳಿಗೆ ಕೋಲ ಉಂಟು .ಅದಾಗಿ ಧೂಮಾವತಿ ನೇಮ ಎಂದು ಹೇಳಿದರು .
ಆಗ ನಾನು ಆ ಪೊಡಿ ಭೂತಗಳು ಯಾವುವು ? ಅವುಗಳ ಹೆಸರೇನು ? ಎಂದು ಅಜ್ಜನಲ್ಲಿ ಕೇಳಿದೆ .ಆಗ ಅದು ಪೊಳ್ಳ ಕಜೆ ಗೋವಿಂದಜ್ಜನ(ನನ್ನ ಅಜ್ಜನ ವರಸೆಯ ಸಂಬಂಧಿಕರು ) ಮನೆಗೆ ಸಂಬಧಿಸಿದ್ದು .ಈ ಬಗ್ಗೆ ಸರಿಯಾಗಿ ಹೇಳಬೇಕಾದರೆ ಭೂತ ಕಟ್ಟುವವರಲ್ಲೇ ಕೇಳಬೇಕು ಎಂದು ನನ್ನನ್ನು ರಾಜೇಶ ಪಂಬದರ ಹತ್ತಿರ ಕರೆದುಕೊಂಡು ಹೋಗಿ ಇಮ್ಬಾಳು ಎನ್ನ ಪುಳ್ಳಿ .ದಾನ್ನೋ ಭೂತೋ ಬಗ್ಗೆ ಕಲ್ತೊಂದುಲ್ಲಾಳು .ಆಳೆಗ್ ನಮ್ಮ ಕನ್ನಡ ಬೀರೆ ಬುಕ್ಕ ಕುರೆ ಪೆರ್ಗುಡೆನ ಕಥೆ ಪನ್ಲ (ಇವಳು ನನ್ನ ಮೊಮ್ಮಗಳು .ಏನೋ ಭೂತಗಳ ಕುರಿತು ಕಲಿಯುತ್ತಿದ್ದಾಳೆ .ನಮ್ಮ ಕನ್ನಡ ಬೀರ ಮತ್ತು ಕುರೆ ಪೆರ್ಗುಡೆಯ ಕಥೆ ಹೇಳು )ಎಂದು ಹೇಳಿದರು .ಅಲ್ಲಿನ ಭೂತ ಕಟ್ಟುವ ಕಲಾವಿದ ರಾಜೇಶ ಪಂಬದ ಅವರು ಕನ್ನಡ ಬೀರ ಭೂತದ ಹಿನ್ನೆಲೆಯನ್ನು ತಿಳಿಸಿದರು !ಅದನ್ನು ಕೇಳಿ ನನಗೆ ಆಶ್ಚರ್ಯ ಆಯಿತು .ಕನ್ನಡ ಬೀರ ಮೂಲತಃ ಕನ್ನಡಿಗ .ಮಾಯವಾಗಿ  ಭೂತ ವಾದ ಕನ್ನಡ ಸುಭೇದಾರ !ತುಳುನಾಡಿನಲ್ಲಿ ಕನ್ನಡಿಗರೂ ಕೂಡ ದೈವಗಳಾಗಿದ್ದಾರೆ ಎಂದು ತಿಳಿಯಿತು.ಅದಕ್ಕೆ ಮೊದಲೇ ನಾನು ಹೆಚ್ಚಿನ ತುಳು ಸಂಶೋಧನಾ ಗ್ರಂಥಗಳನ್ನು ಓದಿಕೊಂಡಿದ್ದೆ . 
 ತುಳು ಸಂಶೋಧನಾ  ಗ್ರಂಥಗಳಲ್ಲಿ ಕನ್ನಡ  ಬೀರ ಮತ್ತು ಕುರೆ ಪೆರ್ಗುಡೆ  ಭೂತಗಳ ಹೆಸರು ಇರಲಿಲ್ಲ!ನನ್ನ ತಂದೆ ಮನೆಯಲ್ಲಿ  ಪೂ ಕರೆ ಕಂಬಳ ಕೋಲ ರೆಕಾರ್ಡ್ ಮಾಡಿದಾಗ ಅಲ್ಲಿನ ಉರವ ,ಎರು ಬಂಟ ಭೂತ ಗಳ ಹೆಸರು ತುಳು ವಿದ್ವಾಂಸರ ಕೃತಿಗಳಲ್ಲಿ ಇರಲಿಲ್ಲ ! ಈಗ ನೋಡಿದರೆ ಈ ಎರಡು ಭೂತಗಳು ಕೂಡ ಅನಾಮಿಕವಾಗಿಯೇ ಉಳಿದಿದ್ದವು !ಭೂತಾರಾಧನೆ ಕುರಿತು ಅಧ್ಯಯನ ಮಾಡಲಿಕ್ಕೆ ಇನ್ನೂ ತುಂಬಾ ವಿಚಾರಗಳು ಉಳಿದಿವೆ .ಅನೇಕ ಭೂತಗಳ ಹೆಸರು ಕೂಡ ದಾಖಲಾಗಿಲ್ಲ ಎಂಬ ವಿಚಾರ ನನಗೆ ಅಲ್ಲಿ ಮನವರಿಕೆಯಾಯಿತು !ನನ್ನ ಡಾಕ್ಟರೇಟ್  ಪದವಿಯ ಅಧ್ಯಯನದ ನಂತರ ನಾನು ಇಂತಹ  ಹೆಸರು ದಾಖಲಾಗದ ,ಹೆಸರು ದಾಖಲಾಗಿಯೂ ಮಾಹಿತಿ ಸಿಗದಿರುವ ಭೂತಗಳ ಕುರಿತು ಸಂಶೋಧನೆ ಮಾಡಬೇಕೆಂದು ನಾನು ಅಂದು ನಿರ್ಧರಿಸಿದೆ .ಕನ್ನಡ ಬೀರನ  ಹಾಗೆ ಬೇರೆ ಕೂಡ ಕನ್ನಡ ಮೂಲದ ದೈವಗಳು ಇರಬಹುದು ಎಂದು ಅಂದೇ ಊ ಹಿಸಿದ್ದೆ. ಹೌದು !ನನ್ನ ಊಹೆ ಸರಿಯಾಗಿಯೇ ಇತ್ತು .ಕನ್ನಡ ಯಾನೆ ಪುರುಷ ಭೂತ ,ಕನ್ನಡ ಭೂತ ,ಬಚ್ಚ ನಾಯಕ ಬೈಸು ನಾಯಕ ,ಕರಿಯಣ್ಣ ನಾಯಕ ,ಎರು ಶೆಟ್ಟಿ ,ಕನ್ನಡಿಗ ಭೂತ ಮೊದಲಾದ ಅನೇಕ ಕನ್ನಡ ಮೂಲದ ಭೂತಗಳಿಗೆ ಆರಾಧನೆ ಇದೆ
 ಕಾಸರಗೋಡಿನ ಹೊಸಂಗಡಿ ಪರಿಸರದ ತಲೇಕಳ, ಬೆಜ್ಜ, ಮದಂಗಲ್ಲು ಮೊದಲಾದೆಡೆಗಳಲ್ಲಿ ಧೂಮಾವತಿ ದೈವದೊಂದಿಗೆ ಈ ದೈವಕ್ಕೆ ಆರಾಧನೆ ಇದೆ. ಬಿಳಿ ಬಟ್ಟೆಯ ಕಚ್ಚೆಯನ್ನು ಧರಿಸುವ ಈತನಿಗೆ ತುಳುನಾಡಿನ ಇತರ ದೈವಗಳಂತೆ ತೆಂಗಿನ ತಿರಿಯ ಅಲಂಕಾರ, ಅರದಳ, ಮುಖವರ್ಣಿಕೆ, ಪುಳ್ಳೆಗಳು ಇರುವುದಿಲ್ಲ. ಮನುಷ್ಯರ ಸಹಜ ಅಲಂಕಾರವಿರುತ್ತದೆ. ಇಲ್ಲಿ ಲಭ್ಯವಿರುವ ಐತಿಹ್ಯದ ಪ್ರಕಾರ ಈತ ಕನ್ನಡ ಪ್ರದೇಶದ ಸುಬೇದಾರ. ಮೀಯಪದವು ಸಮೀಪದಲ್ಲಿ ಪೊಳ್ಳಕಜೆ ಎಂಬುದು ಮಂತ್ರವಾದಿಗಳ ಮನೆತನವಾಗಿದ್ದು, ಅಲ್ಲಿ ದುರ್ಗಾರಾಧನೆ ಮಾಡುತ್ತಾರೆ.
 ಈಗ ಅಲ್ಲಿನ ದೇವಸ್ಥಾನದ ಮುಖ್ಯಸ್ಥರಾದ ಗೋವಿಂದ ಭಟ್ಟರ ಅಜ್ಜ ನಾರಾಯಣ ಭಟ್ಟರ  ಕಾಲದಲ್ಲಿ ನಡೆದ ಘಟನೆ ಇದು. ಯಾವುದೋ ಕಾರಣಕ್ಕೆ ಇವರ ಮನೆಯನ್ನು ಜಪ್ತಿ ಮಾಡಲು ಬ್ರಿಟಿಷ್ ಅಧಿಕಾರಿಗಳು ಇಬ್ಬರು ಸುಬೇದಾರರನ್ನು ಕಳುಹಿಸುತ್ತಾರೆ.copy rights reserved @Dr.LAKSHMI G PRASAD
ಭಟ್ಟರು ಒಳಗೆ ಪೂಜೆ ಮಾಡುತ್ತಿರುತ್ತಾರೆ .ಸುಬೇದಾರರು ಬಂದಿರುವ ವಿಚಾರವನ್ನು ಅವರಿಗೆ ಭಟ್ಟರ ಹೆಂಡತಿ ತಿಳಿಸುತ್ತಾರೆ .ನಮ್ಮ ತುಳು ನಾಡಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆ ಬಾಗಿಲಿಗೆ ಬಂದ ಎಲ್ಲರಿಗೂ ಊಟ ಬಡಿಸುವುದು ಸಂಪ್ರದಾಯ . ಭಟ್ಟರು ಸರಿ ಮೊದಲು ಅವರಿಗೆ ಊಟ  ಬಡಿಸುಎಂದು ಹೇಳಿದರು. ಅವರು ಹೇಳಿದಂತೆ ಆ ಸುಬೇದಾರರಿಗೆ  ಬಾಳೆ ಎಲೆ ನೀರು ಕೊಟ್ಟು ಊಟ ಬಡಿಸಿದರು
 ದೇವಾಲಯದ ಭಟ್ಟರ ಹೆಂಡತಿ ಅವರಿಗೆ ಊಟ ಬಡಿಸಿ ಒಳಗೆ ಹೋಗಿ ಹೊರಬರುವಷ್ಟರಲ್ಲಿ ಇಬ್ಬರು ಸುಬೇದಾರರಲ್ಲಿ ಒಬ್ಬ ಮಾಯವಾಗಿರುತ್ತಾನೆ!. ಮಾಯವಾದ ಕುರುಹಾಗಿ ಆತನ ತಲೆಕೂದಲು, ಉಗುರು ಉಳಿದಿರುತ್ತದೆ. ಇದನ್ನು ನೋಡಿದ ಇನ್ನೊಬ್ಬ ಸುಬೇದಾರ ಓಡಿ ಹೋಗುತ್ತಾನೆ. ಇಲ್ಲಿ ಮಾಯವಾದ ಸುಬೇದಾರ ಕನ್ನಡಿಗನಾಗಿದ್ದು, ಆತನು ಧೂಮಾವತಿ ದೈವದ ಸೇರಿಗೆಗೆ ಸಂದು ಹೋಗಿ, ದೈವತ್ವಕ್ಕೇರಿ ಕನ್ನಡ ಬೀರಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ.ಇದು ಇತ್ತೀಚಿಗೆ ಅಂದರೆ ಸುಮಾರು 100 -110  ವರ್ಷಗಳ ಹಿಂದೆ ನಡೆದ ಸತ್ಯ ಘಟನೆಯಾಗಿದೆ  ಈತನಿಗೊಂದು ಬನ ಕೂಡ ಬೆಣ್ಣೆಮನೆ ಗೋಪಾಲ ಭಟ್ಟರ ತೋಟದಲ್ಲಿದೆ.ಈ ಭೂತ ಉದ್ಭವವಾದ ಸ್ಥಳ ಎಂದು ಭಾವಿಸಲಾದ ನೀರಿನ ಗುಂಡಿಯೊಂದು ಸಮೀಪದಲ್ಲಿದೆ.
ವಾಸ್ತವದಲ್ಲಿ ಜಪ್ತಿಗೆ ಬಂದವರಿಗೂ ಊಟ ಬಡಿಸುವ ನಾರಾಯಣ ಭಟ್ಟರ ಮನೆ ಜಪ್ತಿ ಮಾಡಲು ಮನಸ್ಸು ಒಪ್ಪದೇ ಆ ಸುಭೆದಾರರು ಹಾಗೆಯೇ ಹಿಂದೆ ಹೋಗಿರಬಹುದು .ಹಿಂದೆ ಹೋಗುವ ದಾರಿಯಲ್ಲಿ ಅಲ್ಲೇ ಸಮೀಪದ ತೋಡು ನ ಗುಂಡಿಗೆ ಬಿದ್ದು ಒಬ್ಬಾತ ದುರಂತವನ್ನಪ್ಪಿರ ಬಹುದು .ಮುಂದೆ ಆಟ ದೈವತ್ವ ಪಡೆದು ಆರಾಧಿಸಲ್ಪಟ್ಟಿರ ಬಹುದು .
ಆತ ಮೂಲತಃ ಕನ್ನಡಿಗೆ ಆದ ಕಾರಣ ಆತನನ್ನು ಕನ್ನಡ ಬೀರ ಎಂದು ಕರೆದಿರ ಬಹುದು copy rights reserved @Dr.LAKSHMI G PRASADNo comments:

Post a Comment