Tuesday, 27 May 2014

ಸಾವಿರದೊಂದು ಗುರಿಯೆಡೆಗೆ:ತುಳುನಾಡ ಭೂತಗಳು:97 ಕುದುರೆತ್ತಾಯ/ಕುದುರೆ ಮುಖ ದೈವ -© Dr.LAKSHMI G PRASAD

 
                                      copy rights reserved
ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದ ಶಿಶಿಲೇಶ್ವರ ದೇವಾಲಯದಲ್ಲಿ ಅನೇಕ ಭೂತಗಳಿಗೆ. ಆರಾಧನೆ ಇದೆ .ಕುದುರೆತ್ತಾಯ,ಕಿಲ ಮರಿತ್ತಾಯ .ಬಸದಿ ನಾಯಕ ಮೊದಲಾದ ಅಪರೂಪದ ದೈವಗಳಿಗೂ ಇಲ್ಲಿ ಆರಾಧನೆ ಇದೆ .

ಇಲ್ಲಿನ ಕುದುರೆತ್ತಾಯ ಒಂದು ಅಪರೂಪದ ದೈವ.ಈ ದೈವದ ಹೆಸರನ್ನು ಎಲ್ಲೋ ಯಾವಾಗಲೋ ಕೇಳಿದ್ದೆ .ಆದರೆ ತುಳುನಾಡ ದೈವಗಳ ಹೆಸರಿನ ಒಂದು ಪಟ್ಟಿಯನ್ನು ಮಾಡುವಾಗ ಕೂಡ ನನಗೆ ಇದು ನೆನಪಿಗೆ ಬಂದಿರಲಿಲ್ಲ .ಇತ್ತೀಚಿಗೆ ಶ್ರೀಯುತ  ವೆಂಕಟೇಶ್  (YEN KEY)ಅವರು ಕುದುರೆತ್ತಾಯ ದೈವದ ಫೋಟೋ ಅನ್ನು ಫೇಸ್ ಬುಕ್ನಲ್ಲಿ ಹಾಕಿದ್ದನ್ನು ನೋಡಿದಾಗ ಕೂಡಲೇ ನೆನಪಿಗೆ ಬಂತು !
ಕುದುರೆತ್ತಾಯ ದೈವವನ್ನು ಕುದುರೆ ಮುಖ ದೈವ ಎಂದೂ ಕರೆಯುತ್ತಾರೆ ,ಮೂಲತಃ ಈತ ಶಿಶಿಲೇಶ್ವರ ದೇವಾಲಯದ ಜಾತ್ರೆಗೆ  ಉಗ್ರಾಣಕ್ಕೆ ಸಾಮಾನುಗಳನ್ನು ತರುತ್ತಿದ್ದ ವ್ಯಕ್ತಿ .ಈತ ಕುದುರೆ ಮುಖದಿಂದ ಕುದರೆ ಗಾಡಿಯಲ್ಲಿ ಸಾಮಾನುಗಳನ್ನು ತುಂಬಿ ಪ್ರತಿ ವರ್ಷ ಜಾತ್ರೆ ಹೊತ್ತಿಗೆ ಶಿಶಿಲೇಶ್ವರ ದೇವಾಲಯಕ್ಕೆ ಬಂದು ಉಗ್ರಾಣವನ್ನು ತುಂಬುತ್ತಿದ್ದನಂತೆ.ಈತನ ಧರ್ಮ ನಿಷ್ಠೆಗೆ ಮೆಚ್ಚಿದ ದೇವರು ಈತನನ್ನು ಮಾಯ ಮಾಡಿ ತನ್ನ ಒಂದಿಗೆ ಭೂತವಾಗಿ ಇರು ಎಂದು ಹೇಳಿದರಂತೆ ,ಹಾಗೆ ಆತ ದೈವತ್ವ ಪಡೆದು ಕುದುರೆತ್ತಾಯ /ಕುದುರೆ ಮುಖ ದೈವ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆಎಂದು ಶಿಶಿಲ ಮೂಲದ ಹಿರಿಯ ಕಿಟ್ಟಣ್ಣ ರೈ ತಿಳಿಸಿದ್ದಾರೆ .
ಇಲ್ಲಿ ಪ್ರಚಲಿತವಾಗಿರುವ ಇನ್ನೊಂದು ಐತಿಹ್ಯದ ಪ್ರಕಾರ ಈತ ಉಗ್ರಾಣಕ್ಕೆ ಸಾಮಾನನ್ನು ತರಲು ನಿಯೋಜಿತನಾದ ಸಿಬ್ಬಂದಿ .ಸಾಮಾನು ತರುವಾಗ ಮೋಸ ಮಾಡುತ್ತಾನೆ .ಅದಕ್ಕೆ ಕೋಪಗೊಂಡ ದೇವರು ಆತನನ್ನು ಮಾಯಾ ಮಾಡುತ್ತಾರೆ .ಮುಂದೆ ಪಶ್ಚಾತ್ತಾಪ ಪಟ್ಟು ಆತ ಕ್ಷಮೆ ಯಾಚಿಸುತ್ತಾನೆ .ಆಗ ಆತನ ಮೇಲೆ ದಯೆ ತೋರಿದ ದೇವರು ಆತನಿಗೆ ದೈವತ್ವ ನೀಡಿ ಕುಡು ಮುಖ ದೈವವಾಗಿ ಆರಾಧನೆ ಪಡೆ ಎಂದು ಅನುಗ್ರಹ ಮಾಡಿದರು .
ದೈವ ದೇವರುಗಳ ಆಗ್ರಹ ಅಥವಾ ಅನುಗ್ರಹ ಎರಡಕ್ಕೆ ಪಾತ್ರರದವರೂ ದೈವತ್ವ ಪಡೆದು ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ,ಅಂತೆಯೇ ಇಲ್ಲಿ ಕುದುರೆ ಮುಖದಿಂದ ಕುದರೆ ಗಾಡಿ ಮೇಲೆ ಸಾಮಾನುಗಳನ್ನು ತಂದು ಉಗ್ರಾಣ ತುಂಬುತ್ತಿದ್ದ ವ್ಯಕ್ತಿ ದೈವತ್ವ ಪಡೆದು ಆರಾಧಿಸಲ್ಪತ್ತಿರ ಬಹುದು .ಈತ ಕುದುರೆ ಮೇಲೆ ಬರುತ್ತಿದುದಕ್ಕೆ ಪ್ರತೀಕವಾಗಿ ಈ ದೈವ ಕೈಯಲ್ಲಿ ಒಂದು ಕುದುರೆಯ ಮುಖದ ಆಕೃತಿಯನ್ನು ಹಿಡಿಯುತ್ತದೆ .ಖಡ್ಗ ಈತನ ಆಯುಧ .
( ಸೂಕ್ತ ಫೋಟೋ ಮತ್ತು ಮಾಹಿತಿಗಾಗಿ ಶ್ರೀಯುತ  YEN KEY ಅವರಿಗೆ ಮನಃ ಪೂರ್ವಕ ಧನ್ಯವಾದಗಳು )


No comments:

Post a Comment