Wednesday 30 July 2014

ಬಾಕುಡರ ಕುಲ ದೈವ ಸರ್ಪಾರಾಧನೆ -ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 31 ಜುಲೈ 2014 )



ಬಾಕುಡರು ನಾಗಾರಾಧಕರು.ನಾಗ ಇವರಿಗೆ ಕುಲ ದೈವ.ಕಾಸರಗೋಡು ಜಿಲ್ಲೆಯ ಇಚಲಂಗೋಡಿನಿಂದ ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ವರೆಗೆ ಇವರ ಹದಿನೆಂಟು ಸ್ಥಾನಗಳಿವೆ.ಈ ಹದಿನೆಂಟು ತಾಣಗಳಲ್ಲಿ ಅವರು ತಮ್ಮ ಕುಲ ದೈವ ನಾಗನನ್ನು ಆರಾಧಿಸುತ್ತಾರೆ.ಕೊಡೆಂಚಿರ್ ನಲ್ಲಿ ನಾಗ ಉದ್ಭವಿಸಿದ್ದಾನೆ .ಹಾಗಾಗಿ ಕೊಡೆಂಚಿರ್ ಅನ್ನು ಮೊದಲ ಸ್ಥಾನ ಎಂದು ಪರಿಗಣಿಸುತ್ತಾರೆ. ಅಡ್ಕ ಕೊನೆಯ ಸ್ಥಾನ.
ನಾಗಾರಾಧನಾ ಪದ್ಧತಿಗಳು :
ತುಳುನಾಡಿನಲ್ಲಿ ಭೂತಾರಾಧನೆ, ನಾಗಾರಾಧನೆ ,ಯಕ್ಷಾರಾಧನೆಗಳು ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿರುವ ಆರಾಧನಾ ಪ್ರಕಾರಗಳಾಗಿವೆ. ಇಲ್ಲಿ ಬಹು ವಿಧ ನಾಗಾರಾಧನೆ ಪದ್ದತಿಗಳು ಪ್ರಚಲಿತವಾಗಿದೆ. ಇಲ್ಲಿ ನಾಗನನ್ನು ಸರ್ಪಸಂಸ್ಕಾರ, ನಾಗ ಪ್ರತಿಷ್ಠಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ ಆರಾಧನೆ, ಬ್ರಹ್ಮಚಾರಿ ಆರಾಧನೆ ಮೊದಲಾಗಿ ವೈದಿಕ ರೂಪದಿಂದ ಆರಾಧಿಸುತ್ತಾರೆ. ಅಂತೆಯೇ ನಾಗಮಂಡಲ, ಡಕ್ಕೆ ಬಲಿ, ಆಶೇಷ ಬಲಿ, ನಾಗದರ್ಶನ, ತಂಬಿಲ, ಹಾಲಿಟ್ಟು ಸೇವೆ ಮೊದಲಾದವುಗಳು ತಾಂತ್ರಿಕ ಮೂಲ ನಾಗರಾಧನಾ ಪದ್ದತಿಗಳಾಗಿವೆ. ತನು ಎರೆಯುವುದು, ಕಂಚಿಲು ಸೇವೆ, ಕಾಡ್ಯನಾಟ, ಪಾಣರಾಟ, ಬೆರ್ಮರೆ ಸೇವೆ, ಮಡೆಸ್ನಾನ, ಬೆರ್ಮರೆ ಕೋಲ, ಮೂರಿಲು  ಆರಾಧನೆ, ಸರ್ಪಕೋಲ/ ನಾಗಕೋಲಗಳು ಜನಪದ ಮೂಲ ಆರಾಧನಾ ಪದ್ದತಿಗಳಾಗಿವೆ
ಭೂತಾರಾಧನೆಯಲ್ಲಿ ದೈವಗಳಿಗೆ ಕೋಲ ಕೊಟ್ಟು ಆರಾಧಿಸುತ್ತಾರೆ.ಪಾಣರಾಟದಲ್ಲಿ ಕೂಡಾ ಸ್ವಾಮಿ ಸೇರಿದಂತೆ ಅನೇಕ ದೈವಗಳಿಗೆ ಕೋಲ ನೀಡಿ ಆರಾಧಿಸುವ ಸಂಪ್ರದಾಯವಿದೆ .ಆದರೆ ನೇರವಾಗಿ ನಾಗನನ್ನೇ ಉದ್ದೇಶಿಸಿ ತುಳುನಾಡಿನ ದೈವದ ನೆಲೆಯಲ್ಲಿ ಕೋಲ ಕೊಟ್ಟು ಆರಾಧಿಸುವ ಸಂಪ್ರದಾಯ ಬಾಕುಡ ಬುಡಕಟ್ಟಿನಲ್ಲಿ ಬೆಳೆದು ಬಂದಿದೆ . ಇದನ್ನು ಸರ್ಪ ಕೋಲ ,ನಾಗನಲಿಕೆ, ಬೆರ್ಮರ್ ನಲಿಕೆ ಎಂದು ಕರೆಯುತ್ತಾರೆ.
 ಪ್ರಾಚೀನ ಕಾಲದಲ್ಲಿ ಸರ್ಪವನ್ನು ಮಾತ್ರ ಆರಾಧಿಸುತ್ತಿದ್ದ ಕ್ರಮೇಣ ಕೋಮರಾಯ ,ಕೋಮಾರು ಚಾಮುಂಡಿ ,ಪಿಲಿಚಾಮುಂಡಿ ,ಧೂಮಾವತಿ ,ಬಬ್ಬರ್ಯ ,ಕಿನ್ನಿಮಾಣಿ, ಗುಳಿಗ ಮೊದಲಾದ ತುಳುವರ ದೈವಗಳನ್ನು ಆರಾಧಿಸತೊಡಗಿದರುಎಂದು ಹಿರಿಯ ತುಳು ಜನಪದ ಸಂಶೋಧಕರಾದ ಡಾ.ವೆಂಕಟರಾಜ ಪುಣಿಂಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಾಕುಡರ ಸರ್ಪ ಕೋಲ :
ನಾಗ ಕೋಲ/ಸರ್ಪ ಕೋಲದದ ದಿನ ಮನೆ ಮಂದಿ ಎಲ್ಲರೂ ಹಸಿ ಮಡಲಿನಲ್ಲಿ /ತೆಂಗಿನ ಹಸಿ ಒಲಿಯಲ್ಲಿ ಮಲಗುವ  ಸಂಪ್ರದಾಯವಿದೆ. ಇದು  ಈ ನಾಗಾರಧನಾ ಪದ್ಧತಿಯ ಪ್ರಾಚೀನತೆಯನ್ನು ಸೂಚಿಸುತ್ತದೆ. ಬಾಕುಡರು ಹಸಿ ಮಡಲಿನಲ್ಲಿ/ತೆಂಗಿನ ಹಸಿ ಒಲಿಯಲ್ಲಿ ಮಲಗುತ್ತಿದ್ದ ಕಾಲದಲ್ಲಿಯೇ ಸರ್ಪಾರಾಧನೆ ಮಾಡುತ್ತಿದ್ದರು ಎಂದು ನಾವಿಲ್ಲಿ ತಿಳಿಯಬಹುದು.
ತುಳುನಾಡಿನಲ್ಲಿ ಪಂಜುರ್ಲಿ,ಧೂಮಾವತಿ ,ಉಲ್ಲಾಕುಳು ಮೊದಲಾದ ದೈವಗಳಿಗೆ ಕೋಲ ಕೊಟ್ಟು ಆರಾಧಿಸುವಂತೆ ಬಾಕುಡರು ಸರ್ಪಗಳನ್ನು ಕೋಲ ಕೊಟ್ಟು ಆರಾಧಿಸುತ್ತಾರೆ .ಇದನ್ನು ಸರ್ಪ ಕೋಲ ,ನಾಗ ನಲಿಕೆ ಬೆರ್ಮೆರ್ ನಲಿಕೆ ಎಂದು ಕರೆಯುತ್ತಾರೆ.ಇದೊಂದು ಧಾರ್ಮಿಕ ಆರಾಧನಾ ರಂಗ ಕಲೆ  ಕೂಡ ಆಗಿದೆ.
ಸರ್ಪ ಕೋಲದಲ್ಲಿ  ಐದು  ಶಕ್ತಿಗಳಿಗೆ ಆರಾಧಾನೆ ಮಾಡುತ್ತಾರೆ.
1 ಎಲ್ಯಕ್ಕೇರ್ (ಸಣ್ಣ ಉಳ್ಳಾಲ್ತಿ/ಸಣ್ಣಕ್ಕ  ): :
2 ನೇಲ್ಯಕ್ಕೇರ್(ದೊಡ್ಡ ಉಳ್ಳಾಲ್ತಿ /ದೊಡ್ಡಕ್ಕ ):
3 ಎಲ್ಯಣ್ಣೆರ್( ಬಿಳಿಯ ಸಂಕಪಾಲ/ಚಿಕ್ಕಣ್ಣ ).
4 ನೇಲ್ಯಣ್ಣೆರ್(ಕರಿಯ ಸಂಕಪಾಲ /ದೊಡ್ಡಣ್ಣ )
ಎಲ್ಯಕ್ಕೇರ್ (ಸಣ್ಣ ಉಳ್ಳಾಲ್ತಿ/ಸಣ್ಣಕ್ಕ  ) ಮತ್ತು  ನೇಲ್ಯಕ್ಕೇರ್(ದೊಡ್ಡ ಉಳ್ಳಾಲ್ತಿ /ದೊಡ್ಡಕ್ಕ ) ರನ್ನು ನಾಗ ಯಕ್ಷಿಯರು ಎಂದು ಡಾ.ವೆಂಕಟರಾಜ ಪುಣಿಂಚಿತ್ತಾಯರು ಹೇಳಿದ್ದಾರೆ .
ಎಲ್ಯಣ್ಣೆರ್( ಬಿಳಿಯ ಸಂಕಪಾಲ/ಚಿಕ್ಕಣ್ಣ )ಮತ್ತು  ನೇಲ್ಯಣ್ಣೆರ್(ಕರಿಯ ಸಂಕಪಾಲ /ದೊಡ್ಡಣ್ಣ ) ನಾಗ ಸ್ವರೂಪಿಳಾಗಿದ್ದು ಇವರಿಗೆ  30-40 ಅಡಿ ಎತ್ತರದ ನಾಗಮುಡಿಯನ್ನು ಹಿಡಿಯುತ್ತಾರೆ.ತ್ರಿಶಂಕು ಆಕಾರವನ್ನು ಹೊಂದಿರುವ ಇದು ತುಂಬಾ ಭಾರವಾಗಿದ್ದು ಇದನ್ನು ಸಾವಿರ ಅಡಿಕೆಯ ಹಾಳೆಗಳನ್ನು ಉಪಯೋಗಿಸಿ ತಯಾರಿಸುತ್ತಾರೆ .ಈ ಮುಡಿಯಲ್ಲಿ ನೂರಾರು ನಾಗನ ಹೆಡೆಗಳನ್ನು ಚಿತ್ರಿಸುತ್ತಾರೆ.ಇದು ತುಂಬಾ ಭಾರ ಮತ್ತು ಎತ್ತರ ಇರುವುದರಿಂದ ಇದನ್ನು ಪಾತ್ರಿಯು ಕಟ್ಟಿಕೊಳ್ಳುವುದಿಲ್ಲ ,ಬದಲಿಗೆ ಅದನ್ನು ಆಕಡೆ ಈ ಕಡೆ ಯಿಂದ ಜನರು ಹಿಡಿದುಕೊಳ್ಳುತ್ತಾರೆ. ಬಿಳಿಯ ಸಂಕಪಾಲನೆಂಬ ನಾಗರಾಜನನ್ನೇ ಎಲ್ಯಣ್ಣೇರ್ ಎಂದು ಕರೆದು ಭೂತದ ನೆಲೆಯಲ್ಲಿ ಆರಾಧಿಸುತ್ತಾರೆ.
 ನೆಲ್ಯಕ್ಕೇರ್ ನಾಗರಾಜರ ತಾಯಿ ,ಎಲ್ಯಕ್ಕೇರ್ ನಾಗರಾಜರ ಸನ್ನಿಧಿಗೆ ಸೇರಿ ದೈವತ್ವ ಪಡೆದ ಪಳ್ಳಿ ತೋಕುರು ಬಾಕುಡೆತಿ .ಈ ನಾಲ್ಕು ಸರ್ಪ ರೂಪಿ ದೈವಗಳಿಗೆ ಕೋಲ ಕೊಡುತ್ತಾರೆ.ಈ ಆಚರಣೆಯಲ್ಲಿ ನಾಲ್ಕು ಮಂದಿ ಕಾರ್ನಪ್ಪಾಡರು (ಮುಖ್ಯಸ್ಥರು ) ಪಾತ್ರವಹಿಸುತ್ತಾರೆ.ಇವರನ್ನು ನಾಲಜ್ಜಿ ಕಾರ್ನೆರ್ ಎಂದು ಕರೆಯುತ್ತಾರೆ.
ಸರ್ಪ ಭೂತಗಳಿಗೆ ನಲಿಕೆ ಜನಾಂಗದವರು  ಅಥವಾ ಕೋಪಾಳರು  ಭೂತ  ಕಟ್ಟುತ್ತಾರೆ.

ಕೃಷ್ಣ ಸರ್ಪ ಕೋಲ :

ಸರ್ಪ ಕೋಲದ ಕೊನೆಯ ಹಂತ ಕೃಷ್ಣ ಸರ್ಪ ಕೋಲ .ಗದ್ದೆಯಲ್ಲಿರುವ ಹುಲ್ಲು ಕಡ್ಡಿಗಳನ್ನು ತೆಗದು ಸ್ವಚ್ಛ ಮಾಡಿ ಕೃಷ್ಣ ಸರ್ಪಕ್ಕೆ ಹೋಗಲು ದಾರಿ ಮಾಡಿ ಕೊಡುತ್ತಾರೆ.ಗದ್ದೆಯ ನಡುವೆ ಆಳೆತ್ತರದ ಹಸಿ ಮಾವು ಮತ್ತು ಹಲಸಿನ ಗೆಲ್ಲುಗಳನ್ನು ಹುಗಿದು ಕೃತಕ ಮರ ನಿರ್ಮಿಸುತ್ತಾರೆ.ಇದನ್ನು ಕುಕ್ಕಂಬಿಲ ಎಂದು ಕರೆಯುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಕರಿಯ ಸಂಕಪಾಲನನ್ನು ಅಣ್ಣ ನಾಗರಾಜನೆಯ ಭಾವಿಸಿದ್ದು, ಆತನನ್ನು ಕೃಷ್ಣಸರ್ಪದ ರೂಪದಲ್ಲಿ ಬಾಕುಡ ಜನಾಂಗದವರು ಆರಾಧಿಸುತ್ತಾರೆ. ಇಲ್ಲಿ ಭೂತ ಮಾಧ್ಯಮರು ಮೂರು ಹೆಡೆಯ ನಾಗನನ್ನು ದ್ಯೋತಿಸುವ ಅಡಿಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಹಾವಿನಂತೆ ತೆವಳುತ್ತಾ ಕುಕ್ಕಂಬಿಲಕ್ಕೆ ಬರುತ್ತಾರೆ. ಇಲ್ಲಿ ಒಬ್ಬರು ಭೂತಮಾಧ್ಯಮರು ಬ್ರಾಹ್ಮಣ ಮಂತ್ರವಾದಿಯ ಪಾತ್ರವನ್ನು ನಿರ್ವಹಿಸುತ್ತಾನೆ. ಕೃಷ್ಣಸರ್ಪ ಪಾತ್ರಧಾರಿಯ ಮೇಲೆ ಅಕ್ಕಿ ಕಾಳನ್ನು ಎರಚಿ ಕೃಷ್ಣಸರ್ಪ ಸಿಡಿದೇಳುವಂತೆ, ಬುಸುಗುಟ್ಟುವಂತೆ ಮಾಡುತ್ತಾನೆ.. ಕೊನೆಯಲ್ಲಿ ಕೃಷ್ಣಸರ್ಪ ಸೋತು ಶರಣಾಗುವ ಅಭಿನಯ ಇರುತ್ತದೆ.
 
 ಮಂತ್ರವಾದಿಯೊಬ್ಬ ಸರ್ಪವನ್ನು ಸ್ವಾದೀನ ಪಡಿಸಿಕೊಂಡು ನಿರ್ದಿಷ್ಟ ಸ್ಥಾನಕ್ಕೆ ಕರೆದೊಯ್ಯುವ ಈ ಪರಿಕಲ್ಪನೆ ಅತ್ಯಂತ ಅದ್ಭುತವೂ ರಮ್ಯವೂ ಆಗಿದೆ .ಇದನ್ನು ಮರಿಕ್ಕಳಗಾವುನೆ ಎಂದು ಕರೆಯುತ್ತಾರೆ. ಇದು ಕೃಷ್ಣಸರ್ಪದ ಕೋಲವಾಗಿದೆ.ಇದು ಬಹಳ ಆಕರ್ಷಕವಾಗಿದೆ .ಅತ್ಯಂತ ರೋಮಾಂಚನಕಾರಿ ಕೂಡಾ !copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

 
ಕುಂಡಂಗೇರ್:
ಈ ನಡುವೆ ಕುಂಡಂಗೇರ್ ಎಂಬ ಯಕ್ಷಗಾನದ ಕೋಡಂಗಿಗಳಂತೆ ಇರುವ ಎರಡು ಹಾಸ್ಯಪಾತ್ರಗಳ ಸಂಭಾಷಣೆ ,ಅಭಿನಯ  ಅಭಿವ್ಯಕ್ತಿ ಇರುತ್ತದೆ .ಇದೊಂದು ಅಪರೂಪದ ಜಾನಪದ ಅಭಿವ್ಯಕ್ತಿ ಕೂಡಾ.ನಲಿಕೆಯ ಹೆಂಗಸರು ಇದನ್ನು ನಿರ್ದೇಶಿಸುತ್ತಾರೆ.
ಇವರ ಮುಖ್ಯಸ್ಥೆ ಹಾಡುತ್ತಾಳೆ ಮತ್ತು ಯಕ್ಷಗಾನದ ಭಾಗವತರಂತೆ ಪಾತ್ರಗಳೊಡನೆ ಸಂಭಾಷಣೆ ನಡೆಸುತ್ತಾಳೆ.ಹಾಸ್ಯದ ಅತಿರೇಕದಲ್ಲಿ ಕೆಲಸ ಮುಂದೆ ಸಾಗದಿದ್ದರೆ ಆಕೆ ಹಾಡನ್ನು ಮುಂದುವರಿಸಿ ಸಹಕರಿಸುತ್ತಾಳೆ.
ನಾಗ ಕೋಲದ ದಿನ ಮನೆ ಮಂದಿ ಎಲ್ಲರೂ ಹಸಿ ಮಡಲಿನಲ್ಲಿ /ತೆಂಗಿನ ಹಸಿ ಒಲಿಯಲ್ಲಿ ಮಲಗುವುದು ಈ ಕೋಲದ ಪ್ರಾಚೀನತೆಯನ್ನು ಸೂಚಿಸುತ್ತದೆ.ಬಾಕುಡರು ಹಸಿ ಮಡಲಿನಲ್ಲಿ ಮಲಗುತ್ತಿದ್ದ ಕಾಲದಲ್ಲಿಯೇ ಸರ್ಪಾರಾಧನೆ ನಡೆಸುತ್ತಿದ್ದರು ಎಂದು ನಾವಿಲ್ಲಿ ತಿಳಿಯಬಹುದು .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ನಾಗ ಪಾಡ್ದನದ ಕಥೆ :
ಪುಂಚೊಡು ಒಂಜಿ ಪೊಣ್ಣು ಬಾಲೆ :
ನಾಗ ಕೋಲದ  ಸಂದರ್ಭದಲ್ಲಿ ಇಬ್ಬರು ನಾಗರಾಜರಾದ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರ  ಹುಟ್ಟು ಮತ್ತು ಬಾಕುಡರಲ್ಲಿ ಸರ್ಪ ಆರಾಧನೆ ಬೆಳೆದು ಬಂದ ಕಥೆಯನ್ನು  ಪಾಡ್ದನದಲ್ಲಿ ಹೇಳುತ್ತಾರೆ
ಕೊಡೆಂಚಿರ್ ಎಂಬ ಪ್ರದೇಶ ಕುಂಬಳೆ -ಮಂಜೇಶ್ವರ ಸಮೀಪ ಇದೆ .ಇಲ್ಲಿ ಬಾಕುಡ  ಸಮುದಾಯದವರು ಇದ್ದಾರೆ . ಹಿಂದೆ ಬೈಲ ಬಾಕುಡ  ಮತ್ತು ಬಾಕುಡೆತಿ ಗದ್ದೆ ಬದಿಯಲ್ಲಿ ಹೋಗುತ್ತಿರುವಾಗ ಒಂದು ಹುತ್ತದಿಂದ ಮಗು ಅಳುವ ಸದ್ದನ್ನು ಕೇಳುತ್ತಾರೆ .ಆ ಅಳುವಿನ ಧ್ವನಿಯನು ಹಿಂಬಾಲಿಸಿಕೊಂಡು ಹೋಗುವಾಗ ಒಂದು ಹೆಣ್ಣು ಮಗು ಅಳುವುದು ಕಾಣಿಸುತ್ತದೆ .
ತುಳು :
ಪುಂಚೊಡುದು ಒಂಜಿ ಪೊಣ್ಣು ಬಾಲೆ ಬುಳುತ್ತೊಂದು ಬರ್ಪುಂಡು
ಬಾಲೆನು ಅಕುಳು ಕಂಡೆನಿ ಬುಡೆದಿ ಕೊಣಂದು ಬತ್ತೆರ್
ಆ ಬಾಲೆಗ್ ಅಕುಳು ಪುದರ್ ಒಲೆತ್ತೆರ್ ದೈಯಾರೆಂದು
ಕನ್ನಡ ಅನುವಾದ :
ಹುತ್ತದಿಂದ ಒಂದು ಹೆಣ್ಣು ಮಗು ಅಳುತ್ತಾ ಬರುತ್ತದೆ
ಮಗುವನ್ನು ಅವರು ಗಂಡ ಹೆಂಡತಿ (ಮನೆಗೆ )ಕರೆ ತಂದರು
ಆ ಮಗುವಿಗೆ ಅವರು ದೈಯಾರ್ ಎಂದು ಹೆಸರು ಕರೆದರು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಆ ಬಾಕುಡ  ದಂಪತಿಗಳಿಗೆ ಮಕ್ಕಳಿರಲಿಲ್ಲ ,ದೇವರು ದಯಪಾಲಿಸಿದ ಮಗು ಎಂದು ಅದನ್ನು ಕರೆ ತಂದು ದೈಯಾರ್ ಎಂದು ಹೆಸರಿತ್ತು ಮುದ್ದಿನಿಂದ ಸಾಕಿದರು .ಆ ಮಗು ಚಿಕ್ಕದು ಹೋಗಿ ದೊಡ್ದವಳಾಗುತ್ತಾಳೆ.ಅವಳು ಯುವತಿ ಆದಾಗ ಅವಳು ನಾನು ನೆತ್ತರಿನಲ್ಲಿ ಹುಟ್ಟಲಿಲ್ಲ .ನನಗೆ ಜನ್ಮ ಕೊಟ್ಟ ತಂದೆ ತಾಯಿಗಳಿಲ್ಲ.ಮರ ಹುಟ್ಟಿ ಮರ ಸಾಯುವ ಕಾಲ ಬಂದರೂ ನನ್ನ ಹೊಟ್ಟೆ ಯಲ್ಲಿ ಸಂತಾನವಾಗಲಿಲ್ಲ ಎಂದು ದುಃಖಿಸುತ್ತಾಳೆ . ನಂತರ ಅವಳು ಅಲೌಕಿಕ ಗರ್ಭವನ್ನು ಧರಿಸುತ್ತ್ತಾಳೆ .
ಅವಳು ಎಪ್ಪತ್ತೇಳು ಸಾವಿರ ಹೆಡೆಯ  ಕರಿಯ ಸಂಕಪಾಲ ಬಿಳಿಯ ಸಂಕಪಾಲ ಎಂಬ ಇಬ್ಬರು  ನಾಗರಾಜರಿಗೆ ಜನ್ಮ ನೀಡಿ ಮರಣವನ್ನಪ್ಪುತ್ತಾಳೆ .
ಬಾಕುಡರಿಗೆ ತುಳು ಮಣ್ಣಿನ ಒಡೆತನ :
ಇದೇ ಸಂದರ್ಭದಲ್ಲಿ ಹೇಳುವ ಇನ್ನೊಂದು ಪಾದ್ದನದಲ್ಲಿ ಬಾಕುಡ ಸಮುದಾಯಕ್ಕೆ ಭೂಮಿಯ ಒಡೆತನ ಸಿಕ್ಕಿದ ಕಥಾನಕವಿದೆ
ಆದಿಯಲ್ಲಿಯೇ ಬೈಲಬಾಕುಡರಿಗೆ ನಾಗಬೆರ್ಮರ್ಕುಲದೈವ, ಆದಿಕಾಲದಲ್ಲಿ ಭೂಮಿಯ ಒಡೆಯರಾದ ಬಾಕುಡರು ಭೂಮಿಯ ಮಣ್ಣು ಹಿಡಿದು ಪ್ರಮಾಣ ಮಾಡಿ ಸರ್ವನಾಶಕ್ಕೆ ಕಾರಣರಾಗುತ್ತಾರೆ. ಹಿಂದಿನ ಕಾಲದಲ್ಲಿ ಹಿರಿಯರ ಕಾಲದಲ್ಲಿ ರೇಣುಕಾದೇವಿಯ ಮಗ ತಾಯಿಯ ತಲೆ ಕಡಿದ ಪಾಪವಿಮೋಚನೆಗಾಗಿ ಸಮುದ್ರವನ್ನು ಭೂಮಿ ಮಾಡಿ ಭೂಮಿದಾನ ಕೊಡುತ್ತಾನೆ. ಹೀಗೆ ಆದಿಯಲ್ಲಿ ಬೈಲಬಾಕುಡರಿಗೆ ಭೂದಾನ ಸಿಕ್ಕ ಭೂಮಿ. ಭೂದಾನ ಸಿಕ್ಕಾಗ ಬಾಕುಡರು ತುಂಡು ಅರಸರಾಗಿದ್ದರು.ಇವರು ಬ್ರಾಹ್ಮಣರಿಗೆ ತುಂಬಾ ತೊಂದರೆ ಕೊಟ್ಟಾಗ ಅವರು ಯಜ್ಞ ಮಾಡಿ ನಾಗರನ್ನು ನಾಶ ಮಾಡಲು ಯತ್ನಿಸಿದರು.ಆಗ ನಾಗರು ಪ್ರತ್ಯಕ್ಷವಾಗಿ ಉಗ್ರ ರೂಪ ತೋರಲು,ನಾಗರಿಗೆ ಶರಣಾಗಿ ತಪ್ಪನ್ನು ಮನ್ನಿಸಿ ಕ್ಷಮೆ ನೀಡುವಂತೆ  ಅವರನ್ನು ಪ್ರಾರ್ಥಿಸಿದಾಗ ಶಾಂತರಾಗಿ ಸಾವಿರದೊಂದು ಗರುಡಾವತಾರ ಆಗುವವರೆಗೆ ಕೋಲ, ತಂಬಿಲ ಕೊಡಬೇಕು, ಬೈಲಬಾಕುಡರ ಕುಲದೈವವನ್ನು ನೆನೆದರೆ ನೆನೆದಲ್ಲಿ ನಾಗಬೆರ್ಮರು ಅವರಿಗೆ ಒಲಿಯುತ್ತಾರೆಎಂದು ಹೇಳಿ ನಾಗಬೆರ್ಮೆರ್ ಕಲ್ಲಿನಲ್ಲಿ ಉದ್ಭವವಾಗುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ನಾಗ ಸೇರಿಗೆಗೆ ಸಂದ ಪಳ್ಳಿ ತೋಕುರು ಬಾಕುಡೆತಿ :
 ನಾರ್ಯದ  ನೇಲ್ಯ ಸಂಕರಮೆ ಮತ್ತು ಎಲ್ಯ ಸಂಕರಮೆ ಎಂಬವರ ತಂಗಿ ಪಳ್ಳಿ ತೋಕುರು ಬಾಕುಡೆತಿಗೆ ಕರಿಯ ಸಂಕಪಾಲ ಕಾಣಿಸಿಕೊಂಡು ಹೆದರಬೇಡ ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡುಎನ್ನುತ್ತಾನೆ. ಹಾಗೆಯೇ ಆಕೆ ಕೊಡೆಂಚಿರ್‍ ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧಿಸುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂತು.
ಮುಂದೊಂದು ದಿನ ಪಳ್ಳಿ ತೋಕುರು ಬಾಕುಡೆದಿ ಚಾಪೆ ಹೆಣೆಯುತ್ತಿದ್ದಾಗ, ಅದಕ್ಕೆ ಸರ್ಪದ ಹೆಡೆಯಾಕಾರ ಬರತೊಡಗುತ್ತದೆ. ಎಷ್ಟೆಷ್ಟು ಸರಿಯಾಗಿ ಹೆಣೆದರೂ ಹೆಡೆಯ ಆಕಾರನ್ನು ಹೋಗಲಾಡಿಸಲು ಆಗುವುದಿಲ್ಲ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ ಆಕೆಗೆ ದುಃಖವಾಯಿತು. ಮಾರಲು ಹೋದರೆ ನಾಗನ ಹೆಡೆ ಆಕಾರವಿರುವ ಚಾಪೆಯನ್ನು ಯಾರು ಕೊಂಡುಕೊಳ್ಳುವುದಿಲ್ಲ. ಕೊನೆಗೆ ಅವಳು ಉರ್ಮಿ ಹೊಳೆಗೆ ಬರುತ್ತಾಳೆ. ದೇವರೇ ನನ್ನನ್ನು ಮಾಯಕ ಮಾಡಿಎಂದು ಪ್ರಾರ್ಥಿಸುತ್ತಾಳೆ. ದೇವರು ಆಕೆಯನ್ನು ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾನೆ.ಪಳ್ಳಿ ತೋಕುರು ಬಾಕುಡೆತಿ ಮುಂದೆ ಎಲ್ಯಕ್ಕೇರ್ ಎಂದು ಆರಾಧಿಸಲ್ಪಡುತ್ತಾಳೆ.
ಡಾ.ಲಕ್ಷ್ಮೀ ಜಿ ಪ್ರಸಾದ ,ಸಂಶೋಧಕರು
ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ
ಸುಳ್ಯ ದ.ಕ ಜಿಲ್ಲೆ
(ಲೇಖಕಿಯ ಕಿರು ಪರಿಚಯ :ಲಕ್ಷ್ಮೀ ಜಿ ಪ್ರಸಾದ ಅವರು ಎಂ .ಎ (ಸಂಸ್ಕೃತ )ಎಂ.ಎ(ಕನ್ನಡ ),ಎಂ.ಎ(ಹಿಂದಿ ) ಪದವಿಗಳನ್ನಿ ಗಳಿಸಿದ್ದು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ maha ಪ್ರಬಂಧವನ್ನು ಸಲ್ಲಿಸಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.ಪ್ರಸ್ತುತ ಎರಡನೆಯ ಡಾಕ್ಟರೇಟ್ ಪದವಿಗಾಗಿ ತುಳು ಸಂಸ್ಕೃತಿ ಕುರಿತು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಂಶೋಧನಾ maha ಪ್ರಬಂಧವನ್ನು ಸಲ್ಲಿಸಿದ್ದು ಇವರು ತುಳುನಾಡಿನ ಅಪೂರ್ವ ಭೂತಗಳು ,ತುಂಡು ಭೂತಗಳು,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮೊದಲಾದ 20 ಕೃತಿಗಳು ಪ್ರಕಟವಾಗಿವೆ )











9 comments:

  1. ತುಂಬಾ ಒಳ್ಳೆಯ ಲೇಖನ. ಧನ್ಯವಾದಗಳು ಲಕ್ಷ್ಮಿ ಪ್ರಸಾದ್ ರವರಿಗೆ.

    ReplyDelete
  2. ತುಂಬಾ ಒಳ್ಳೆಯ ಲೇಖನ. ಧನ್ಯವಾದಗಳು ಲಕ್ಷ್ಮಿ ಪ್ರಸಾದ್ ರವರಿಗೆ.

    ReplyDelete
    Replies
    1. ಓದಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

      Delete
    2. ತುಂಬಾ ಉತ್ತಮ ಲೇಖನ, ನಿಮಗೆ ನಮ್ಮ ಹ್ರದಯಾಂತರಾಳದ ಅಭಿನಂದನೆಗಳು.....ಶ್ರೀ ನಾಗಬ್ರಹಮ್ಮ ನು ನಿಮಗೆ ಹಾಗು ನಿಮ್ಮ ಸಕುಟುಂಬ ಪರಿವಾರಕ್ಕೆ ಸದಾ ಸನ್ಮನ್ಗಳವನ್ನoಟು ಮಾಡಲಿ.......ನವೀನ್ ಕುಮಾರ್, ಮಂಗಲ್ಪಾಡಿ.......

      Delete
    3. ಓದಿ ಬೆಂಬಲಿಸಿದ ನಿಮಗೆ ಧನ್ಯವಾದಗಳು

      Delete
  3. ಒಂದು ಒಳ್ಳೆಯ ಲೇಖನ.ತುಂಬಾ ವಿಷಯವೂ ಅರಿತ ಸಂತೋಷ ನನಗಾಯಿತು.ಮಾಹಿತಿ ನೀಡಿ ಸಹಕರಿಸಿದ ನಿಮಗೆ ದನ್ಯವಾದಗಳು.🙏🙏🙏

    ReplyDelete
    Replies
    1. ಓದಿ ಅಭಿಪ್ರಾಯಿಸಿ ಬೆಂಬಲಿಸಿದ ನಿಮಗೆ ಧನ್ಯವಾದಗಳು

      Delete