Friday, 12 September 2014

ಜೈನ ಮುಸ್ಲಿಂ ಬಾಂಧವ್ಯ ಬೆಸೆದ ಬಬ್ಬರ್ಯ ಭೂತ-ಡಾ.ಲಕ್ಷ್ಮೀ ಜಿ ಪ್ರಸಾದತುಳು ನಾಡಿನ ಪ್ರಸಿದ್ಧ ಭೂತ ಬಬ್ಬರ್ಯ ಮೂಲತ ಮುಸ್ಲಿಂ ಮೂಲದ ದೈವತ .ಈತನ ತಂದೆ  ಮಾದವ ಸುಲಿಕಲ್ಲ ಬ್ಯಾರಿ ಸಮುದ್ರ ತೀರದಲ್ಲಿ ಉಪ್ಪು ಮೆಣಸಿನ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದ ಈತನ ತಾಯಿ ಜೈನರ ಹುಡುಗಿ
 ಮುಹಮ್ಮದ್ >ಮೊಮ್ಮದ್ >ಮಾದವ ಆಗಿರಬೇಕೆಂದು ಡಾ.ಅಮೃತ ಸೋಮೇಶ್ವರರು ಅಭಿಪ್ರಾಯ ಪಟ್ಟಿದ್ದಾರೆ 

  .ಒಂದು ದಿನ ಕಡಲು ಉಕ್ಕ್ಕಿ ಮಾದವ ಸುಲಿಕಾಲ ಬ್ಯಾರಿಯ   ಅಂಗಡಿ ಮುಗ್ಗಟ್ಟು ಎಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತದೆ .ಆಗ ಅವನು ತಲೆಯಲ್ಲಿ ಮೆಣಸು ಬೆಲ್ಲ ಕಟ್ಟು ಹೊತ್ತುಕೊಂಡು ಊರೂರು ತಿರುಗುತ್ತ ವ್ಯಾಪಾರ ಮಾಡುತ್ತಾ ಇದ್ದ .
ಹೀಗೆ ವ್ಯಾಪಾರ ಮಾಡುತ್ತಾ ಮಲಯ ದೇಶಕ್ಕೆ ಬರುತ್ತ್ತಾನೆ ಅಲ್ಲಿ ಮುತ್ತು ಸೆಟ್ಟಿ ,ರತನ್ ಸೆಟ್ಟಿ ಮೊದಲಾದ ಏಳು ಜನ ಜೈನ ಸಹೋದರರು ಇದ್ದರು .ಆ  ಜೈನ ಮಡಸ್ತಾನದ ಏಳು ಜನ ಅಣ್ಣಂದಿರಿಗೆ ಒಬ್ಬಳು ತಂಗಿ. ಅವಳನ್ನು ಮದುವೆಯಾದವರೆಲ್ಲ ಅದೇ ರಾತ್ರಿ ಸಾಯುತ್ತಾರೆ. ಇರುವ ಒಬ್ಬ ತಂಗಿಯ ಬದುಕು ಹೀಗಾಯ್ತಲ್ಲ? ಎಂಬ ಚಿಂತೆಯಲ್ಲಿರುವಾಗ ವ್ಯಾಪಾರಕ್ಕೆಂದು ಬಂದ  ಈ ಮುಸ್ಲಿಂ ಹುಡುಗ ಸುಲಿಕಲ್ಲ ಮಾಧವ ಬ್ಯಾರಿ ಇವರ ದುಃಖದ ಕಾರಣವನ್ನು ಕೇಳುತ್ತಾನೆ. ನಮ್ಮ ತಂಗಿಯನ್ನು ಮದುವೆಯಾದವರಿಗೆ ಅರ್ಧರಾಜ್ಯ ಕೊಡುತ್ತೇವೆಎಂದು ಅಣ್ಣಂದಿರು ಹೇಳುತ್ತಾರೆ. 

ಮಾಧವ ಬ್ಯಾರಿ ನಾನು ಪ್ರಯತ್ನ ಮಾಡುತ್ತೇನೆ ಎಂದ. ಒಂದು ದೊಡ್ಡ ಮನುಷ್ಯರೂಪವನ್ನು ಅಕ್ಕಿಯಲ್ಲಿ ಕಡೆದು ಮಾಡುತ್ತಾರೆ. ಆ ಅಕ್ಕಿಯ ಮನುಷ್ಯ ರೂಪವನ್ನು ರಾತ್ರಿ ಮಲಗುವಾಗ ಅವಳ ಜೊತೆಯಲ್ಲಿ ಮಲಗಿಸಿದರು. ಮಧ್ಯರಾತ್ರಿಯ ಹೊತ್ತು ಅವಳ ಮೂಗಿನಿಂದ ಎರಡು ಸರ್ಪಗಳು ಹೊರಬಂದು ಮಲಗಿದ್ದ ಬೊಂಬೆಯನ್ನು ಕಚ್ಚುತ್ತವೆ. ಆಗ ಬದಿಯಲ್ಲೇ ಅಡಗಿ ನಿಂತಿದ್ದ ಬ್ಯಾರಿ ತನ್ನ ಕತ್ತಿಯಿಂದ ಸರ್ಪಗಳನ್ನು ತುಂಡರಿಸುತ್ತಾನೆ. ಮೊದಲು ಕೊಟ್ಟ ಮಾತಿನಂತೆ ಅವನಿಗೆ ಅರ್ಧ ರಾಜ್ಯ ಹಾಗೂ ತಂಗಿಯನ್ನು ಕೊಡುತ್ತಾರೆ. (C).ಡಾ.ಲಕ್ಷ್ಮೀ ಜಿ ಪ್ರಸಾದ

ಆದರೆ ಆತ ಮದುವೆಗೆ ಒಪ್ಪುವುದಿಲ್ಲ. ಅವಳು ಚಂದ್ರನಾಥ ದೇವರ ಕೆರೆಗೆ ಸ್ನಾನಕ್ಕೆ ಹೋಗುತ್ತಾಳೆ. ಕೆರೆಯಿಂದ ಮೇಲೆ ಬರುವಾಗ ಮಾಯದ ಬಸಿರನ್ನು ಪಡೆಯುತ್ತಾಳೆ. ಬಬ್ಬರ್ಯನನ್ನು ಹೆರುತ್ತಾಳೆ. ಅವನಿಗೆ ಮಸೀದಿಯಲ್ಲಿ ಬಪ್ಪ ಎಂದು ಹೆಸರಿಡುತ್ತಾರೆ  ಆಗ ಜೈನರಿಗೂ ಮುಸ್ಲಿಮರಿಗೂ ವಿವಾದ ಉಂಟಾಗಿ ಅವರು ಊರು ಬಿಟ್ಟು ಹೋಗುವ ಕಾಲ ಬರುತ್ತದೆ. ಅಮಾವಾಸ್ಯೆಯ ದಿನ ಚಂದ್ರನನ್ನು ಕಂಡರೆ ಊರು ಬಿಟ್ಟು ಹೋಗುತ್ತೇವೆ ಎಂದು ಜೈನರು ಹೇಳುತ್ತಾರೆ. ನಾವು ಚಂದ್ರನನ್ನು ಕಂಡರೆ ಚಂದ್ರನನ್ನು ನಂಬುತ್ತೇವೆ ಎನ್ನುತ್ತಾರೆ ಮುಸ್ಲಿಮರು. ಚಂದ್ರ ಕಾಣಿಸಿದ್ದರಿಂದ ಜೈನರು ಚಂದ್ರನನ್ನು ತುಳಿದು ಊರುಬಿಟ್ಟು ಹೋಗುತ್ತಾರೆ. ಮುಸ್ಲಿಮರು ಚಂದ್ರನನ್ನು ನಂಬಿದರು. 

 ಬಬ್ಬರ್ಯ ನೀನು ಏನು ಮಾಡುತ್ತಿ? ಎಂದು ಕೇಳಿದಾಗ ಬಬ್ಬರ್ಯ ನೀವು ಮುಂದಿನಿಂದ ಹೋಗಿ, ನಾನು ಹಿಂದಿನಿಂದ ಬರುತ್ತೇನೆ ಎಂದು ಹೇಳುತ್ತಾನೆ. ದೇವರ ವರ ಪಡೆದು ಬರುತ್ತೇನೆ ಎಂದು ಹೇಳುತ್ತಾನೆ. ಮುಂದೆ ಹಡಗು ಕಟ್ಟಿಸಿ ಸಮುದ್ರಕ್ಕೆ ಇಳಿಸಿ ದುರಂತವನ್ನಪ್ಪುತ್ತಾನೆ
 ಬಬ್ಬರ್ಯ ಭೂತದ ಪಾಡ್ದನದ ಇನ್ನೊಂದು ಪಾಠದ ಪ್ರಕಾರ ಆ ಹುಡುಗಿಯನ್ನು ಮದುವೆಯಾಗಿ ಮಸೀದಿಗೆ ಕರೆ ತಂದು ಬೊಲ್ಯ ಬೀಬಿ ಫಾತಿಮಾ ಎಂದು ಹೆಸರಿಸುತ್ತಾನೆ .ನಂತರ ಅವಳು ಗರ್ಭ ಧರಿಸುತ್ತಾಳೆ .ಒಂಬತ್ತು ತಿಂಗಳಾಗುವಾಗ  ಆ ಮಗು ಬಂಗಾರದ ದುಂಬಿಯಾಗಿ ತಾಯಿಯ ಬಲದ ಮೊಲೆಯನ್ನು ಒಡೆದು ಹೊರ ಬರುತ್ತಾನೆ . 

ಅಂತು ಅವಳು ಹೇಗೋ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ  ಮುಂದೆ.ಸಾಹಸಿಯಾದ ಆ ಹುಡುಗ ಬಪ್ಪ ತನ್ನ ಓರಗೆ ಹುಡುಗರನ್ನು ಆಟದಲ್ಲಿ ಸೋಲಿಸುತ್ತಾನೆ .ಆಗ ಸೋತ ಹುಡುಗರು ಹಾದರಕ್ಕೆ “ಹುಟ್ಟಿದ ಮಗು ಒಳ್ಳೆಯದು ತುಳುವ ಹಲಸಿನ ಹಣ್ಣಿನ ಬೀಜ ಒಳ್ಳೆಯದು “ಎಂದು ಇವನನ್ನು ಗೇಲಿ ಮಾಡಿ ನಗುತ್ತಾರೆ 
ಆಗ ಅಲ್ಲಿಂದ ಬಂದು ಅವನು ಒಂದು ಕೋಟೆ ಕಟ್ಟಿ ಅದನ್ನು ಮಾಯ ಮಾಡುತ್ತಾನೆ. . ಬಬ್ಬರ್ಯ  ವ್ಯಾಪಾರ ಮಾಡುವ ಮತ್ತು ಹಡಗು ಕಟ್ಟಿಸುವ ವಿಚಾರ ಪಾಡ್ದನದಲ್ಲಿದೆ.
                ನನ ಇಂಚ ಕುಲ್ಲುಂಡ ಜೈತ್ ಬರಾಂದ್
                ಅಂಗಾಡಿ ದಿಡೋಡು ಯಾಪಾರ ಮಲ್ಪೊಡುಂದೆ
                ಕಡಲ ಬರಿಟ್ ಮಡಲ್‍ದ ಅಂಗಾಡಿ ಕಟ್ಯೆ
                ಯಾಪಾರ ಮಲ್ತೊಂಡೆ
                ಪಣವು ಎಚ್ಚೊಂಡು ಬತ್ತ್‍ಂಡ್‍ಯೆ
                ಅಪಗಾಂಡ ಪಣ್ಪೆ ಬಬ್ಬರಿಯೆ
                ಎಂಕ್ ಪಡಾವುದ ಬೇಲೆ ಪತ್ತೊಡು
                ಪಡಾವುದ ಯಾಪಾರ ಮಲ್ಪೊಡು
ಕನ್ನಡ ರೂಪ :
                ಇನ್ನು ಹೀಗೆ ಕುಳಿತರ ಏನೂ ಬರದು
                ಅಂಗಡಿ ಇಡಬೇಕು ವ್ಯಾಪಾರ ಮಾಡಬೇಕೆಂದ
                ಕಡಲಿನ ಬದಿಯಲ್ಲಿ ತೆಂಗಿನ ಗರಿಯಿಂದ ಅಂಗಡಿ ಕಟ್ಟಿದ
         ವ್ಯಾಪಾರ ಮಾಡಿದ
       ದುಡ್ಡು ತುಂಬಿಕೊಂಡು ಬಂದಿತು
       ನನಗೆ ಹಡಗಿನ ಕೆಲಸ ಹಿಡಿಯಬೇಕು
        ಹಡಗಿನ ವ್ಯಾಪಾರ ಮಾಡಬೇಕು


ಅಲ್ಲಿಂದ ಮಲಯ ದೇಶಕ್ಕೆ ಬರುತ್ತಾನೆ ಅಲ್ಲಿ ಒಂದು ಬಿಳಿಯ ಬಣ್ಣದ ಶಾಂತಿ ಮರ ಕಾಣಿಸುತ್ತದೆ ಅದನ್ನು ನೋಡಿ ಇದರಿಂದ ಹಡಗು ಕಟ್ಟಿಸಬೇಕೆಂದು ಕೊಳ್ಳು ತ್ತಾನೆ  ಅದಕಾಗಿ ಆಚಾರಿಗಳನ್ನು ಕರೆಸುತ್ತಾನೆ
     ಆ ವೊಂಜಿ ಮರನು ಕಡ್ಪೊಡಾಂಡೆ
                ಮರೊನು ಕಡ್ಪೆರೆ ಮಲೆನಾಡ್ ತಚ್ಚವೆ
                ತುಳುನಾಡ ಆಚಾರ್ಲೆನು ಲೆಪ್ಪುಡಾಯೆರ್
                ಮರತ್ತಡೆ ಪೋದು ತೂಪೆರ್ ಆಚಾರಿಳ್ 
                ನೆಲಪೂಜಿಯೆರ್ ದೇಬೆರೆಗ್ ದಿಡ್ಯೆರ್
                ಆನೆ ಬಾರಸದ ಗಡಿ ಪಾಡ್ಯೆರ್”79
                ಆ ಒಂದು ಮರವನ್ನು ಕಡಿಯಬೇಕೆಂದ
                ಮರವನ್ನು ಕಡಿಯಲು ಮಲೆನಾಡ ತಚ್ಚವೆ
                ತುಳುನಾಡ ಆಚಾರಿಗಳನ್ನು ಕರೆಸಿದರು
                ಮರದ ಹತ್ತಿರಕ್ಕೆ ಹೋಗಿ ನೋಡುತ್ತಾರೆ ಬಡಗಿಗಳು
                ಆನೆ ಗಾತ್ರದ ಗಾಯ ಮಾಡುತ್ತಾರೆ
ನಂತರ ಬಡಗಿಗಳು ಹಡಗನ್ನು ನಿರ್ಮಿಸಿದರು ಎಂದು ಪಾಡ್ದನದಲ್ಲಿ ಹೇಳಿದೆ. ಕೆಲವೆಡೆ ಹಡಗು ತಯಾರಿಯ ಮರ ಕಡಿಯಲು ಮರಕಾಲರನ್ನು ಬರಹೇಳಿದರೆಂದು ಹೇಳಿದೆ. ಮುಗೇರರು, ಮರಕಾಲರು ಹಾಗೂ ಮೊಗವೀರರು ಒಂದೇ ವರ್ಗದವರು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ

     ಇನ್ನೊಂದು ಪಾದ್ದನದಲ್ಲಿ      ತ್ರೇತಾಯುಗದ ರಾಮದೇವರ ಕಿರೀಟ, ಕೃಷ್ಣನ ಚಕ್ರ, ಜಗದೀಶ್ವರನ ತ್ರಿಶೂಲ, ದೇವೇಂದ್ರನ ವಜ್ರಾಯುಧ ಹಿಡಿದುಕೊಂಡು ಮಾಯಕದ ಹಡಗನ್ನು ಬ್ರಹ್ಮರು ನಿರ್ಮಾಣ ಮಾಡಿದರು ಎಂದು ಹೇಳಿದೆ
  ಆ ಹಡಗು ನೀರಿಗಿಳಿಯುವ ಮುನ್ನ  ಬಪ್ಪ ತನ್ನ ತಂದೆತಾಯಿರನ್ನು ಕಂಡು “ಇಂದಿನ ತನಕ ನಾನು ಜೋಗದಲ್ಲಿ ನಿಮ್ಮ ಮಗನಾಗಿದ್ದೆ .ಇಂದು ಜೋಗ ಬಿಟ್ಟು ಮಾಯಕಕ್ಕೆ ಸಂದು  ಬಿಡುತ್ತೇನೆ ಎಂದು ಹೇಳುತ್ತಾನೆ. ಆ ಹಡಗಿನಲ್ಲಿ ಕುಳಿತು ಮೂಳೂರ ಕರಿಯಕ್ಕೆ ಬರುವಾಗ ಬಿರುಗಾಳಿ ಏಳುತ್ತದೆ. ಹಡಗಿನಲ್ಲಿದ್ದ ಹಾಯಿ ಹರಿಯುತ್ತದೆ. ಕೊಂಬು ತುಂಡಾಗುತ್ತದೆ. ಹಡಗು ಬದಿಗೆ ಬರುವಾಗ ಮುಳೂರಿನ ಮುನ್ನೂರು ಜನ, ಕಾಪುವಿನ ಸಾವಿರ ಜನ ಕೂಡಿ ಹತ್ತಿರ ಹೋಗುವಾಗ, ಕಣ್ಣಿಗೆ ಕಂಡರೂ ಕೈಗೆ ಸಿಗುವುದಿಲ್ಲ. ಬಬ್ಬರ್ಯ ಹಡಗನ್ನು ಪಡುಗಂಗೆಗೆ ಕಳುಹಿಸುತ್ತಾನೆ. ಮಾಯದಲ್ಲಿ ಬಂದು ಮೂಳೂರು ಉಳ್ಳಂಗಾಯ ಕಟ್ಟೆಯಲ್ಲಿ ಜೋಗದಲ್ಲಿ ಆಗುತ್ತಾನೆ. ಸೊಲ್ಮೆ ಸಂದಾಯ ಮಾಡುತ್ತಾನೆ. ನೀನು ಯಾರಿಗೆ ಸೊಲ್ಮೆ ಸಂದಾಯ ಮಾಡುವುದು ಎಂದು ಕೇಳಲು ನನ್ನನ್ನು ಬಿಟ್ಟು ಉಳ್ಳಾಯ ರಾಯಭಾರಿ ಇದ್ದಾನೆ. ಅವನಿಗೆ ನಾನು ರಾಜ್ಯಭಾರಿ ನಾನು ನಿಮ್ಮನ್ನು ಅನುಗ್ರಹ ಮಾಡಲು ಬಂದ ಶಕ್ತಿ ಎನ್ನುತ್ತಾನೆ. ಪೊಂಗ ಬೈದ್ಯನಿಗೆ ಅಭಯ ಕೊಟ್ಟು ಒಂದು ತೊಟ್ಟು ಕಳ್ಳು ಬೀಳುವಲ್ಲಿ ಸಾವಿರ ತೊಟ್ಟು ಬೀಳುವ ಹಾಗೆ ಮಾಡುತ್ತಾನೆ.

 ಈ ಗುಟ್ಟನ್ನು ಅವನು ಅವನ ಹೆಂಡತಿಗೆ ಹೇಳಿದ ನಂತರ ಒಂದು ತೊಟ್ಟು ಕೂಡ ಬೀಳುವುದಿಲ್ಲ. ಕೊನೆಗೆ ಪೊಂಗ ಬೈದ್ಯನನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಅವನ ಹೆಂಡತಿ ಮೂಳೂರಿನ ಮುನ್ನೂರು ಒಕ್ಕಲು, ಕಾಪುವಿನ ಸಾವಿರ ಒಕ್ಕಲು ಕೂಡಿಸಿ ದೇವರಾದರೆ ದೇವಸ್ಥಾನ, ಬ್ರಹ್ಮರಾದರೆ ಬ್ರಹ್ಮಸ್ಥಾನ, ಭೂತಗಳಾದರೆ, ಭೂತಸ್ಥಾನ ಕಟ್ಟಿಸುತ್ತೇನೆ. ನನ್ನ ಗಂಡನನ್ನು ಉಳಿಸಿಕೊಡಬೇಕು ಎಂದು ಪ್ರಾರ್ಥನೆ ಮಾಡುತ್ತಾಳೆ. ಆಗ ಪೊಂಗ ಬೈದ್ಯ ನೀರಿನಿಂದ ಎದ್ದು ಬರುತ್ತಾನೆ. ಪ್ರಾರ್ಥನೆ ಪ್ರಕಾರ ಬ್ರಹ್ಮಗುಂಡ ಮತ್ತು ಕೊಂಬಿನ ಮರ ಸ್ಥಾಪನೆ ಮಾಡುತ್ತಾರೆ. 

ಊರಿನ ಜನ ಸೇರಿ ಧ್ವಜಸ್ತಂಭ ಮಾಡಿಸುತ್ತಾರೆ. ಆಗ ಬಬ್ಬರ್ಯ ಜೋಗ ಬರುತ್ತಾನೆ. ನಾನು ದೇವರಾಗಿ ನಿಮಗೆ ಅನುಗ್ರಹ ಮಾಡುತ್ತೇನೆ ಎನ್ನುತ್ತಾನೆ. ನಾಗಬ್ರಹ್ಮ ಉಳ್ಳಾಯ ಬಬ್ಬರ್ಯ ನಾನು. ಅಂಕೋಲಕ್ಕೆ ಹೋಗಿ ಲಿಂಗರೂಪದಿಂದ ಮೂಡಿ ಬರುತ್ತೇನೆ. ಅಲ್ಲಿ ಆದಿನಾಥ ಎಂದು ಕರೆಸಿಕೊಂಡು ನೀಲೇಶ್ವರಕ್ಕೆ ಹೋಗಿ ನೀಲಕಂಠನೆಂದು ಕರೆಸಿಕೊಂಡಿದ್ದೇನೆಎಂದು ಹೇಳುತ್ತಾನೆ.
ಜೈನರಿಗೆ ಬಬ್ಬರ್ಯ ಮನೆದೈವ. ಕರಾವಳಿಯಲ್ಲಿ ಬಬ್ಬರ್ಯ ಕುಲದೈವ. ಬಬ್ಬರ್ಯ ಬೆರ್ಮರಂತೆ ಸಸ್ಯಾಹಾರಿ. ಮಾಂಸಾಹಾರ ಇಲ್ಲ. ಹಾಲು ಮತ್ತು ಸೀಯಾಳ ಆತನ ಆಹಾರ. ದೇವಸ್ಥಾನದಲ್ಲಿ ಬಬ್ಬರ್ಯ ಕ್ಷೇತ್ರಪಾಲನೆಂದು ಪಾಡ್ದನ ತಿಳಿಸುತ್ತದೆ. ಇಲ್ಲಿ ಬಬ್ಬರ್ಯ ಮತ್ತು ಬೆರ್ಮರ್ ಒಬ್ಬನೇ ಎಂಬಂತೆ ವರ್ಣಿಸಲಾಗಿದೆ.
ವಾಸ್ತವದಲ್ಲಿ ಆತ  ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಹಡಗು ಮುರಿದು ದುರಂತಕ್ಕೀದಾಗಿರ ಬಹುದು ಅಥವಾ ಕಡಲು ಗಳ್ಳರ ದಾಳಿಗೆ ಸಿಲುಕಿ ದುರಂತವನ್ನಪ್ಪಿರಬಹುದು .ದುರನತವನ್ನಪ್ಪಿದ ಅಸಾಮಾನ್ಯ ಶೂರರು ಭೂತಗಳಾಗಿ ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾದ ವಿಚಾರವಾಗಿದೆ .ಅಂತೆಯೇ ಬಪ್ಪ ಬ್ಯಾರಿ  ಬಬ್ಬರಿ ಭೂತ ವಾಗಿ ಆರಾಧಿಸಲ್ಪಟ್ಟಿರ ಬಹುದು (C).ಡಾ.ಲಕ್ಷ್ಮೀ ಜಿ ಪ್ರಸಾದ


ಈತನನ್ನು ಎಲ್ಯ ಬಬ್ಬರ್ಯ, ಮಲ್ಲ ಬಬ್ಬರ್ಯ ,ಬಾಕಿಲು ಬಬ್ಬರ್ಯ ಇತ್ಯಾದಿ ಹೆಸರಿನಿಂದ ಕೋಲ ನೀಡಿ ಆರಾಧಿಸುತ್ತಾರೆ ಬಬ್ಬರ್ಯ ಮುಸ್ಲಿಂ ಮೂಲವನ್ನು ಹೊಂದಿದ್ದರೂ ಆತನ ಆರಾಧನೆಯಲ್ಲಿ ಮಾಂಸಾಹಾರ ನಿಷಿದ್ಧ . ಬಬ್ಬರ್ಯನಿಗೆ ಸಪ್ಪೆ ಹಾಗು ಬೆಲ್ಲದ ಕಡುಬನ್ನು ಆಹಾರವಾಗಿ ನೀಡುತ್ತಾರೆ .ಬಹುಶ ಆತನ ತಾಯಿ ಜೈನ ಸ್ತ್ರೀಯಾಗಿದ್ದರಿಂದ ಬಪ್ಪ ಕೂಡ ಜೈನರಂತೆ ಸಸ್ಯಾಹಾರಿಯಾಗಿದ್ದಿರ ಬಹುದು. ಅಥವಾ ಈತನ ಆರಾಧನೆಯನ್ನು ಆತನ ತಾಯಿಯ ಕಡೆಯವರು ಆರಂಭಿಸಿರಬಹುದು .ತುಳುನಾಡಿನಲ್ಲಿ ಭೂತಾರಾಧನೆಯ ಬೆಳವಣಿಗೆಯಲ್ಲಿ ಜೈನರ ಪ್ರೋತ್ಸಾಹ ಗಣನೀಯವಾದದ್ದು ಎಂಬುದನ್ನು ಗಮನಿಸಿದರೆ ಈ ಊಹೆಗೆ ಬಲ ಸಿಗುತ್ತದೆ . ಏನೇ ಆದರು ಬಬ್ಬರ್ಯನ ಆರಾಧನೆ  ಜೈನರನ್ನು ಮತ್ತು ಮುಸ್ಲಿಮರನ್ನು ಬೆಸೆದು ಸಾಮರಸ್ಯಕ್ಕೆ ಭದ್ರ ಬುನಾದಿ ಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ
ಆಧಾರ ಗ್ರಂಥಗಳು
1 ಡಾ.ಅಮೃತ ಸೋಮೇಶ್ವರ –ತುಳು ಪಾಡ್ದನ ಸಂಪುಟ   
2 ಡಾ.ಚಿನ್ನಪ್ಪ ಗೌಡ –ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
3 ಡಾ.ಬಿ ಎ ವಿವೇಕ ರೈ-ತುಳು ಜನಪದ ಸಾಹಿತ್ಯ
4 ಡಾ.ಲಕ್ಷ್ಮೀ ಜಿ ಪ್ರಸಾದ –ಭೂತಗಳ ಅದ್ಭುತ ಜಗತ್ತು ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು

No comments:

Post a Comment