Sunday 21 September 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಹಿರಿಯ ಸಂಶೋಧಕರು

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ
                                                                    ಸಾವಿರದೊಂದು ಗುರಿಯೆಡೆಗೆ
ಡಾ. ಲಕ್ಷ್ಮೀ ವಿ. ಅವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ವು ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು.
ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ‘ದೈವಕ್ಕೆ ತಪ್ಪಿದವರು’ ಎಂದಿರುವ ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ, ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ, ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ, ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು, ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ. ಇಲ್ಲಿ ಡಾ. ಲಕ್ಷ್ಮೀ ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್, ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ‘ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ.
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ ಒಂಬತ್ತನೆಯ ಅಧ್ಯಾಯದಲ್ಲಿ ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ ವಿವರಗಳನ್ನು ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿ, ಬಲೀಂದ್ರ, ಮಹಿಷಾಸುರ, ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್, ಕಾಳಭೈರವ, ಕುಂಡೋದರ ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ‘ಈಜೊ ಮಂಜೊಟ್ಟಿ ಗೋಣ’ಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು, ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ). ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ? ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ ಗುಣ.ಅವಸರಿಸದಿರುವುದು ಚರ್ಚೆಗಳಿಗೆ ಆಹ್ವಾನ ನೀಡಿದಂತೆ. 



ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ), ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ಪಾಡ್ದನಸಂಪುಟ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು.
 

ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ) ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು ಹದಿನಾಲ್ಕು ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ) ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 

ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ. ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ.
 

ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
 

ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ. ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್, ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ. ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ.


 ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ‘ಅರಿವಿನಂಗಳದ ಸುತ್ತ’ ಮತ್ತು ‘ಮನೆಯಂಗಳದಿ ಹೂ’ ಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
 

ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ(ಈoಟಞ Iಣems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ. 
‘ಜಾತೆ’್ರಯಂತಹ ಸಂದರ್ಭದಲ್ಲಿ ‘ಪಲ್ಲಕಿ’ ಒಂದು ಜನಪದ ಅಂಶವಾದರೆ ‘ಅಡ್ಡಪಲ್ಲಕಿ’ ಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ‘ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯ’ ಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ‘ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿ’ ಮೊದಲಾದ 82ರಷ್ಟು ತುಂಡು ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್ಮೊಕದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe ಆeviಟ ತಿoಡಿshiಠಿ oಜಿ ಣhe ಖಿuಟuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ274(ಪು.35-38) ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ‘ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. 


ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ. ಲಕ್ಷ್ಮೀ ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು. ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
 

                                                                    ಡಾ. ವಾಮನ ನಂದಾವರ, ಮಂಗಳೂರು,

No comments:

Post a Comment