Wednesday 3 September 2014

see and say ಸರಣಿ -14 ತುಳು ನಾಡನ್ನು ಬೆಳಗಿದ ಅವಳಿ ವೀರರು :ಕೋಟಿ ಚೆನ್ನಯರು -ಡಾ.ಲಕ್ಷ್ಮೀ ಜಿ ಪ್ರಸಾದ




                                             chitra krupe :Jeevit shetty k
ತುಳುನಾಡನ್ನು ಬೆಳಗಿದ  ಅವಳಿ ವೀರರು :©ಡಾ.ಲಕ್ಷ್ಮೀ ಜಿ ಪ್ರಸಾದ( copy rights reserved)

 ಜೋಡು ನಂದಾ ದೀಪ ಬೆಳಗುನು ತುಳುವ ನಾಡುದ ಗುಂಡೊಡು ..ಹೌದು !ಡಾ .ಅಮೃತ ಸೋಮೆಶ್ವರರು ರಚಿಸಿದ ಹಾಡು ಇದು .ಇದು ಕೇವಲ ಹಾಡಲ್ಲ .ತುಳುವರ ಹೃದಯದ ಮಿಡಿತವಿದು !ಕೋಟಿ ಚೆನ್ನಯರೆಂಬ ಜೋಡು  ನಂದಾ ದೀಪಗಳು ತುಳುವರ ಮನೆ ಮನಗಳಲ್ಲಿ ಸದಾ ಬೆಳಗುತ್ತಿದೆ .ತುಳುನಾಡಿನ ಈ ಅಪ್ರತಿಮ ವೀರರ ಕುರಿತು ಸಮಗ್ರವಾಗಿ ಬರೆಯ ಹೊರಟರೆ ಅದು ದೊಡ್ಡ ಗ್ರಂಥವಾಗಿ ಬಿಡಬಹುದು !ಕೋಟಿ ಚೆನ್ನಯರ ಜೀವನ ಗಾಥೆ ಒಂದು ಮಹಾ ಕಾವ್ಯ. ಅದೊಂದು ಲಾವಣಿ ಚಕ್ರ. ಅದನ್ನು ಸಂಕ್ಷಿಪ್ತ ವಾಗಿ ಬರೆಯುವುದೂ ಒಂದು ಸವಾಲು! .ಕೋಟಿ ಚೆನ್ನಯರದು ಕೇವಲ ಕಟ್ಟು ಕಥೆಯಲ್ಲ ಅದು ತುಳುನಾಡಿನಲ್ಲಿ ನಡೆದ ವೀರರ ಕಥೆ. ಅವರ ಸ್ವಾಭಿಮಾನ, ಸ್ವಂತ ವ್ಯವಸಾಯ ಮಾಡುವ ಹಂಬಲ, ಶೌರ್ಯ ಸಾಹಸವನ್ನು ನೆನೆದಾಗ ಮನದುಂಬಿ ಬರುತ್ತದೆ.ಒಟ್ಟಿಗೆ  ಹುಟ್ಟಿ ಬೆಳೆದು ಅಸಾಮಾನ್ಯ ಸಾಹಸ ಮೆರೆದು ,ಎರಡು ಗುತ್ತು ಗಳ ಒಡೆತನ ಪಡೆದು ,ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ವಿಜಯವನ್ನು ತಂದು ಕೊಟ್ಟು   ಒಟ್ಟಿಗೆ  ಇಹಲೋಕವನ್ನು ತ್ಯಜಿಸಿ ತುಳುವರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲಸಿದ ಪರಿ ಅನನ್ಯವಾದುದು !
.ನಾನು ನನ್ನ ಪಿ ಎಚ್ ಡಿ ಸಂಶೋಧನಾ ಕ್ಷೆತ್ರ ಕಾರ್ಯಕ್ಕಾಗಿ ಪಂಜ ,ಪಡುಮಲೆ, ಎಣ್ಮೂರು, ಎಡಮಂಗಲ ಮೊದಲಾದ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ ನಂಗೆ ಕೋಟಿ ಚೆನ್ನಯರದೆ ಗುನುಗು! .ಅರಸೊತ್ತಿಗೆಯ ಆ  ಕಾಲದಲ್ಲಿ ಅವರು ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆ ,ಸ್ವಾಭಿಮಾನ ಸಾಹಸ ನೆನಪಾಗುತ್ತಿತ್ತು .”ತುಳುನಾಡ ಅವಳಿ ವೀರರು ಓಡಾಡಿದ ನೆಲ ಇದು” ಎಂದು ರೋಮಾಂಚನಗೊಂಡಿದ್ದೇನೆ . ಕೋಟಿ ಚೆನ್ನಯರ ಗರೋಡಿಗಳ ಫೋಟೋ ತೆಗೆಯುತ್ತಿದ್ದಾಗ ಉಂಟಾಗುತ್ತಿದ್ದ ಸಂತಸ ಅವರ ಸಮಾಧಿಯ ಫೋಟೋ  ತೆಗೆಯುವಾಗ ಇರಲಿಲ್ಲ . ಸಮಾಧಿಯ ಫೋಟೋ ತೆಗೆಯುವಾಗ ಏನೋ ದುಗುಡ ಕಾಡುತ್ತಿದ್ದುದು ಮಾತ್ರ ಸತ್ಯ. 
 ಕೋಟಿ ಚೆನ್ನಯರ ಮೂಲವನ್ನು ಅಲೌಕಿಕ ಜಗತ್ತಿಗೆ ಜೋಡಿಸುವ  ಕೋಟಿಚೆನ್ನಯ ಪಾಡ್ದನವು ಡೆನ್ನ-ಡೆನ್ನಾನ ಎಂಬ ಸೊಲ್ಲಿನ ನಂತರ ಬೆರ್ಮೆರ್ ಪುಟ್ಟಿನಾ ನಾಡ್, ಬೆರ್ಮರೆಬೆರಿಯೇ ...’ ‘ಬೆರ್ಮೆರ್ ಹುಟ್ಟಿದ ನಾಡು ಬೆರ್ಮೆರ ಶಕ್ತಿಯನ್ನು ಹೊಂದಿದ ನಾಡು, ಇದು ಬೈದ್ಯ ವೀರರು ಹುಟ್ಟಿದ ನಾಡುಎಂದು ತುಳುನಾಡಿನ ಬಗ್ಗೆ ಹೇಳುತ್ತದೆ. ಅನಂತರ ಬೆರ್ಮೆರ್ಉದಿಸಿದ ವಿಚಾರವನ್ನು ಈ ಪಾಡ್ದನ ವರ್ಣಿಸುತ್ತದೆ. ಬೆರ್ಮೆರ್ ಪುಟ್ಟಿನಾ ನಾಡ್‍ವುಂದ್ ಏಳ್ ಗಂಗೆದ ನಡುಟು ...”, “ಬೆರ್ಮೆರ್ ಹುಟ್ಟಿದ ನಾಡು ಇದು ಏಳು ಗಂಗೆಯ ನಡುವಿನಲ್ಲಿಎಂಬಲ್ಲಿ ನೀರು ಸುತ್ತಮುತ್ತ ಆವೃತವಾಗಿರುವ ಭೂಭಾಗದಲ್ಲಿ ಬೆರ್ಮೆರ್ಹುಟ್ಟಿದ ನಾಡು ಇದೆ ಎಂಬ ಸೂಚನೆ ಸಿಗುತ್ತದೆ. ಏಳು ಗಂಗೆಯ ನಡುವೆ ಎಮಲಗುಂಡ 10 ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆರ್‍ಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನಸತ್ತಿಗೆ ಇದೆ. ಬಲಭಾಗದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಬೆಳ್ಳಿಯ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಗೆ, ಕುತ್ತಿಗೆಯಷ್ಟು ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತ ಕಲಶವಿದೆ. ಹೊಟ್ಟೆಯಲ್ಲಿ ಬಾಸಿಂಗವಿದೆ. ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿದ್ದಾರೆ. ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರಪರ್ವತ ಬೆರ್ಮೆರ್ಗೆ ಆಸನವಾಗಿದೆ. ಸೊಂಟದ ಸುತ್ತ ಸರ್ಪಾಭರಣ ಪಾದದಲ್ಲಿ ಪದ್ಮರೇಖೆಇದೆ. ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ಪೇರುಗಂಗೆ, ಮಿಂಚಿಗಂಗೆ, ನೀರುಗಂಗೆ, ಬೆಳ್ಳಿಗಂಗೆ, ಕಂಚುಗಂಗೆ ಎಂಬ ಏಳು ಗಂಗೆಯನ್ನು, ನಾಲ್ಕು ಸಮುದ್ರವನ್ನು ನಿರ್ಮಿಸಿದರು.
ಬೆರ್ಮೆರ್‍ನ ಏಳು ಅಂಕಣ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು ಹನ್ನೆರಡು ಕನ್ಯೆಯರು ಚಾಮರಾದಿ ಸೇವೆಗಳನ್ನು ಮಾಡುತ್ತಿದ್ದರು. ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು. ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿಗಳು ಎಲ್ಲರು ಕೊಚ್ಚಿಕೊಂಡು ಹೋದರು. ಆಗ ಸೂರ್ಯನಾರಾಯಣದೇವರು ಪುನಃ ಸೃಷ್ಟಿಗೆ ತೊಡಗುತ್ತಾರೆ.
ದಿಕ್ಪಾಲಕರನ್ನು ನೆನೆದು ಸೃಷ್ಟಿ ಜಪ ಮಾಡಲು ಆರಂಭಿಸುತ್ತಾರೆ. ದೇವರ ಎಡಭಾಗದಲ್ಲಿ ಎರಡು ಕೇಂಜವ ಹಕ್ಕಿಗಳನ್ನು ನಿರ್ಮಿಸಿದರು. ಕಲ್ಲು, ಹುಲ್ಲು, ಬೈಹುಲ್ಲಿನ ಗೂಡು, ಬಿದಿರು, ಮುಳ್ಳು ಎಲ್ಲವನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಂತಿದ್ದ ಕೇಂಜವ ಪಕ್ಷಿಗಳು ಸಂತಾನದ ವರವನ್ನು ಸೂರ್ಯನಾರಾಯಣ ದೇವರಲ್ಲಿ ಕೇಳುತ್ತವೆ. ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಆಣತಿಯಂತೆ ಬಡಗು ದಿಕ್ಕಿನಲ್ಲಿರುವ ಸಾಗರದಲ್ಲಿ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರುವ ಅತ್ತಿಯಮರದ ಹೂವಿನ ಮಕರಂದವನ್ನು ತರಲು ಹೋಯಿತು. ಸೂರ್ಯ ಮುಳುಗುವ ಹೊತ್ತಿಗೆ ಮಕರಂದವನ್ನು ಹೀರಲು ಕೊಕ್ಕು ಹಾಕಿತು. ಸೂರ್ಯ ಮುಳುಗಿದ ಕ್ಷಣದಲ್ಲಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಇತ್ತ ಹೆಣ್ಣು ಕೇಂಜವ ಹಕ್ಕಿ ಕೇಂಜವ ಬಾರದಿರಲು ಚಿಂತೆಯಾಗಿ ತನ್ನ ಪತಿ ಕ್ಷೇಮವಾಗಿ ಬಂದರೆ, ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣದೇವರಿಗೆ ನೀಡುತ್ತೇವೆಎಂದು ಹರಕೆ ಹೇಳಿಕೊಳ್ಳುತ್ತಾಳೆ. ಕೇಂಜವ ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವದಿ ಗರ್ಭ ಧರಿಸುತ್ತದೆ. ಗರ್ಭಧಾರಣೆಯ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ, ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಆ ಮೊಟ್ಟೆಯನ್ನು ಹೇಳಿಕೊಂಡ ಹರಕೆಯಂತೆ ದೇವರಿಗೆ ಅರ್ಪಿಸುತ್ತಾರೆ. ದೇವರು ಅದನ್ನು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ ಮೊಟ್ಟೆ ಒಡೆಯುತ್ತದೆ. ಸಿಡಿದ ತುಂಡುಗಳು ಮೇಲೆ ಆಕಾಶಕ್ಕೆ, ಕೆಳಗೆ ಪಾತಾಳಕ್ಕೆ ಉತ್ತರ ದಿಕ್ಕಿನಲ್ಲಿ ಜರ್ದೊರಿಯ ಮಗ ಜಂಬೂರಿಕುಮಾರನ ಮಡಿಲಿಗೆ ಬೀಳುತ್ತದೆ. ಅದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿಧರಿಸುತ್ತಾನೆ. ಸವಾರಿಗೆ ಹೋದ ದೇವರು ಹಿಂದಿರುಗಿ ಬಂದಾಗ, ಮೊಟ್ಟೆ ಒಡೆದ ವಿಚಾರ ತಿಳಿದು ಅದೆಲ್ಲಿದೆ ಎಂದು ಹುಡುಕುತ್ತಾರೆ. ಆಗ ಜಂಬೂರಿಕುಮಾರನ ಕಿವಿಯಲ್ಲಿದ್ದ ಮಾಣಿಕ್ಯ ಪುನಃ ಸಿಡಿದು ಮಣ್ಣಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತಕ್ಕಿಂತ ಹೆಚ್ಚು ಚಂದವಾಯಿತು. ತೆಂಕುದಿಕ್ಕಿನಲ್ಲಿ ಶೋಭಿಸುವ ಹೊಳೆಯಾಯಿತು. ಮಧ್ಯದಲ್ಲಿ ದ್ವೀಪ ಆಯಿತು. ಮೂಡುದಿಕ್ಕಿನಲ್ಲಿ ಘಟ್ಟ, ಪಡುವಣದಲ್ಲಿ ಸಮುದ್ರದ ನಡುವಿನ ಈ ಭಾಗವೇ ತುಳುನಾಡು.ಇದೇ ತುಳುನಾಡಿನಲ್ಲಿ ಕೋಟಿ ಚೆನ್ನಯರು ಮೆರೆದಾಡಿದ್ದಾರೆ
ಕೇಂಜವ ಪಕ್ಷಿಗಳು  ಇಟ್ಟ ಎರಡನೆಯ ಮೊಟ್ಟೆ ಸಮುದ್ರಕ್ಕೆ ಜಾರಿ ಬೀಳುತ್ತದೆ .ಅದು ನಿಂಬೆ ಹಣ್ಣಾಗಿ  ತೇಲಿಕೊಂಡು ಬರುವಾಗ ಸಂಕಮಲೆಯ ಪೆಜನಾರ ಎಂಬ ಬ್ರಾಹ್ಮಣನ ಕೈಗೆ ಸಿಗುತ್ತದೆ .ಅದನ್ನು ಮನೆಗೆ ಕೊಂಡು ಹೋಗಿ ಇಡುವಾಗ ಒಂದು ಹೆಣ್ಣು ಮಗುವಾಗಿ ಅಳುತ್ತದೆ .ಮಕ್ಕಳಿಲ್ಲದ ಓಪೆತ್ತಿ- ಪೆಜನಾರ ದಂಪತಿಗಳು ಈ ಹೆಣ್ಣು ಮಗುವನ್ನು ಕೇದಗೆ ಎಂಬ ಹೆಅಸರಿತ್ತು ಮುದ್ದಿನಿಂದ ಸಾಕುತ್ತಾರೆ .ಇವಳು ೮-೧೦ ವರ್ಷವಾಗುತ್ತಾ ಬರಲು ಅವಳು ಋತುಮತಿಯಾಗುತ್ತಾಳೆ. ಆಗ ಬ್ರಾಹ್ಮಣರಲ್ಲಿ ವಿವಾಹಕ್ಕೆ ಮೊದಲು ಹುಡುಗಿ ಋತು ಮತಿಯರಾದರೆ ಅವರನ್ನು ಕಣ್ಣು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಸಂಪ್ರದಾಯವಿತ್ತು .ಆದ್ದರಿಂದ ಪೆಜನಾರ್ ಕದಾ ತಾವು ಮುದ್ದಿನಿಂದ ಸಾಕಿದ ಮಗಳನ್ನು ಬೇರೆ ದಾರಿ ತೋಚದೆ ಸಂಬಂಧಿ ಕರ ಮದುವೆಗೆ ಹೋಗೋಣ ಎಂದು ನಂಬಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ.
ಸಂಕ ಮಲೆತ್ ತೊಟಕ ಬೆರನ್ದೀನ್ ಮದಿಮಾಲ್ ಆಯಿನೆಕ್ಕ್
ಕಣ್ಣುಗ್ ಕುಂಟು ಕಟ್ದು ಕಾದ್ಗು ಬುಡ್ತೆರ್
ಅಪಗ ಸಾಯಿನ ಬೈದ್ಯೆ ಇನ್ಪಿನಾಯೆ ಈನ್ದುದ ಬೇಲೆಗ್  ಪೋತೆ
ಆ ಹೊತ್ತಿನಲ್ಲಿ ಸಾಯನ ಬೈದ್ಯ ಮುರ್ತೆಯ ಕೆಲಸಕ್ಕಾಗಿ ಕಾಡಿಗೆ ಬರುತ್ತಾನೆ .ಇನ್ನು ಬೆಳಕು ಸರಿಯಾಗಿ ಮೂಡಿರಲಿಲ್ಲ . ಅವನು ಮರ ಹತ್ತಿ ಕೊಯ್ಯುವಾಗ ಅದರ ಕಸ ಈ ಹುಡುಗಿಯ ತಲೆ ಮೇಲೆ ಬೀಳುತ್ತದೆ .ಆಗ ಅವಳು ನೀನು ಗಂಡಸಾದರೆ ನನ್ನ ಅಣ್ಣ ಹೆಂಗಸಾದರೆ ನನ್ನ ಅಕ್ಕ ಎಂದು ಹೇಳುತ್ತಾಳೆ . ಈ ಎಳೆಯ ಹುಡುಗಿಯನ್ನು ನೋಡುವಾಗ ಸಾಯನ ಬೈದ್ಯನಿಗೆ ತನ್ನ ಮುದ್ದಿನ ತಂಗಿ ದೇಯಿ ಬೈದ್ಯೆತಿಯ ನೆನಪಾಗುತ್ತದೆ . ದೇಯಿ ಬೈದ್ಯೆತಿಯನ್ನು ಸಂನದರಲ್ಲಿಯೇ ಕಾಂತ ಬೈದ್ಯನಿಗೆ ಮಾಡುವೆ ಮಾಡಿ ಕೊಟ್ಟಿರುತ್ತಾನೆ ಅಣ್ಣ ಸಾಯನ ಬೈದ್ಯ .ಆದರೆ ಅವಳು ಚಿಕ್ಕ ವಯಸ್ಸಿನಲ್ಲಿಯೇ ಹೆರಿಗೆ ಸಮಯದಲ್ಲಿ ಮರನವನ್ನಪ್ಪಿರುತ್ತಾಳೆ .ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಈ ಹುಡುಗಿ ಕೇದಗೆಯ ಮೇಲೆ ಅನುಕಂಪ ಪ್ರೀತಿ ಹುಟ್ಟಿ ಸಾಯನ ಬೈದ್ಯ ಅವಳ ಕೈಕಾಲು ಕಣ್ಣು ಬಿಚ್ಚಿ ತನ್ನ ಮುಂಡಾಸಿನ ಬಟ್ಟೆಯನ್ನು ಅವಳಿಗೆ ಹೊದೆಸಿ  ತನ್ನ ಮನೆಗೆ ಕರೆದೊಯ್ಯುತ್ತಾನೆ .ತನ್ನ ತಂಗಿಯ ಹೆಸರಿತ್ತು ಅವಳನ್ನು ಸಾಕಿ ಸಲಹುತ್ತಾನೆ .ಕಾಡಿನಿಂದ ತಂದ ಅನಾಥ ಹುದುಗಿಯನ್ನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲವೋ ಏನೋ !ವಯಸ್ಸಾಗಿರುವ ತನ್ನ ತಂಗಿಯ ಗಂಡ ಕಾಂತು ಬೈದ್ಯನಿಗೆ ಇವಳನ್ನು ಮಾಡುವೆ ಮಾಡಿ ಕೊಡುತ್ತಾನೆ .ಅವನು ಮದುವೆಯಾಗುವಾಗಲೇ ತನಗೆ ವಯಸ್ಸಾಯಿತು ಮುಂದೆ ಹುಟ್ಟುವ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ?ಎಂದು ಕೇಳಿದಾಗ ಆ ಜವಾಬ್ದಾರಿ ನನಗಿರಲಿ ಎಂದು ಹೇಳಿ ಆತನನ್ನು ಒಪ್ಪಿಸುತ್ತಾನೆ ಸಾಯನ ಬೈದ್ಯ !ಆದ್ದರಿಂದಲೇ ಇಡೀ ತುಳುಜನಪದ  ಸಾಹಿತ್ಯದಲ್ಲಿ ಸಾಯನ ಬೈದ್ಯನ ಪಾತ್ರ ಸದಾ ದೇದೀಪ್ಯಮಾನವಾಗಿದೆ .
ಮುಂದೆ ದೇವಿ ಬೈದ್ಯೆತಿ ಗರ್ಭಿಣಿಯಾಗುತ್ತಾಳೆ
ಇತ್ತ ಪಡುಮಲೆ ಬಲ್ಲಾಳರಿಗೆ ಬೇಟೆಗೆ ಹೋಗುವ ಕನಸು ಬೀಳುತ್ತದೆ .ಅದರಂತೆ ಅವರು ನಾಗ ಬ್ರಹ್ಮರನ್ನು ನೆನೆದು ಕಾಣಿಕೆ ತೆಗೆದು ಇಟ್ಟು ಬೇಟೆಗೆ ಹೋಗುತ್ತಾರೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಸಲ್ಲ ಬೇಕಾದವರಿಗೆ ಅವರವರ ಸ್ಥಾನ ಮರ್ಯಾದೆಗನುಗುಣವಾಗಿ ಹಂಚುತ್ತಾರೆ.ಬೇಟೆಯಾಡಿ ಹಿಂದೆ ಬರುವಾಗ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ತಾಗುತ್ತದೆ
ಕಾವೆರುದ ಮುಳ್ಳು ಕಂತುಂಡು ನಚ್ಚೋ ಬೆನ್ನಗ
ರಾಮ ರಾಮ ಕಾಲನೆ ...ಯೇ ..
ಏರ್ ಯಾ ಮಂದೆ ಯಾನ್ ಬಾಲೂಜಿ ಬದುಕುಜಿ
ಅಂದ ಮಂದೆ ಕೆನ್ದೆರೋ ....ಯೇ
ಯಾತನೆಯಿಂದ ಬಲ್ಲಾಳರು ನಾನು ಸತ್ತು ಹೋಗುವೆ ಬದುಕಲಾರೆ ಎಂದು ನೋವಿನಿಂದ ಕೂಗಿ ನರಳುತ್ತಾರೆ . ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೊಂಡು ಸೇವಕರು ಅರಮನೆಗೆ ಕರೆತರುತ್ತಾರೆ .ಅರಮನೆಯ ವೈದ್ಯರು ಊರ ಪರ ಊರ ವೈದ್ಯರು ಔಷಧ ಉಪಚಾರ ಮಾಡುತಾರೆ .ಆದರೆ ಬಲ್ಲಾಳರ ಕಾಲಿಗಾದ ಗಾಯ ನಂಜು ಏರಿ ಇಡಿ ಶರೀರ ವ್ಯಾಪಿಸಿ ಅವರು ಬದುಕುಳಿಯುವುದು  ಕಷ್ಟ ಎಂಬ ಹಂತಕ್ಕೆ ತಲಪುತ್ತಾರೆ . ಆಗ ಅಲ್ಲಿ ಯಾರೋ ದೇಯಿ ಬೈದ್ಯೆತಿ ಒಳ್ಳೆಯ ಮದ್ದು ಕೊಡುತ್ತಾಳೆ ಎಂದು ಅರಸ ಬಲ್ಲಾಳನಿಗೆ ಹೇಳುತ್ತಾರೆ .ಬಲ್ಲಾಳ ಕೂಡಲೇ ದೇಯಿ ಬೈದ್ಯೆತಿಯನ್ನು ಬರಹೇಳುತ್ತಾನೆ.ಆಗ ಅವಳು ಏಳು ತಿಂಗಳು ತುಂಬಿದ ಗರ್ಭಿಣಿ .ಮೊದಲು ಬರಲು ಒಪ್ಪ ದಿದ್ದರು ನಂತರ ಅರಸನ ನೋವನ್ನು ದೀನ ಅವಸ್ಥೆಯನ್ನೂ ನೋಡಿ ಔಷಧ ಕೊಡಲು ಒಪ್ಪುತ್ತಾಳೆ .
ಏಲ್ ಪೊರ್ತುಗು  ಕಾಡದಾಲ್ ಏಲ್ ಕೊಡಿ ಮರ್ದು
ದೇಯಿ ತರ್ಪದೋಲು ..ಯೇ ..
ಕಲ್ಲುದಾ ಗುರಿಟ್ಟು ಪಾದಿಯೋಲೆ ಮರ್ದು ಕುತ್ತುದು ಪೊಡಿ ಮಲ್ದೋಲೆ
ಬೋಲ್ಲಿದಾ ಕರಡಿಗೆಡ್ ...ಯೇ ..
ಬೆಳಗ್ಗಿನ ಜಾವ ಏಳು ಮಲೆಗೆ ಜನರನ್ನು ಕಳುಹಿಸಿ ದೇಯಿ ಬೈದ್ಯೆತಿ ಏಳು ಮುಷ್ಟಿಯಷ್ಟು ಔಷಧದ ಗಿಡದ ಚಿಗುರನ್ನು ತರಿಸಿ ಕುಟ್ಟಿ ಪುಡಿ ಮಾಡಿ ಬೆಳ್ಳಿ ಕರಡಿಗೆಗೆ ತುಂಬಿ ದಂಡಿಗೆ ಏರಿ ಅರಮನೆಗೆ ಬರುತ್ತಾಳೆ .ಒಳ ಬರಲು ಅಳುಕಿದ ಅವಳಲ್ಲಿ “ನೀನು ಕೊಟ್ಟ ಮದ್ದಿನಿಂದ ನಾನು ಬದುಕಿದರೆ ಇನ್ನು ಹತ್ತು ಹದಿನಾರು ಕಾಲ ಪಟ್ಟವನ್ನು ಆಳುವೆ ,ಸಲ್ಲುವ ಕಾಣಿಕೆಯನ್ನು ನಿನಗೆ ಕೊಡುವೆ ಎಂದು ಹೇಳುವರು . ದೇಯಿ ಬೈದ್ಯೆತಿ ಅನೇಕ ದಿನಗಳ ತನಕ ಅಲ್ಲಿದ್ದುಕೊಂಡು ಬಲ್ಲಾಳನ ಕಾಲಿನ ಗಾಯಕ್ಕೆ ಔಷಧಿ ಹಾಕಿ ಉಪಚಾರ ಮಾಡುತ್ತಾಳೆ .ನಿಧಾನವಾಗಿ ಗಾಯ ಮಾಗಿ ಅರಸ ಗುಣ ಮುಖನಾಗುತ್ತಾನೆ .ಆಗ ದೇಯಿ ಬೈದ್ಯೆತಿ ತನ್ನ ಮನೆಗೆ ಹೊರಡುತ್ತಾಳೆ .ತನಗೆ ಬರಬೇಕಾದ ಕಾಣಿಕೆಯನ್ನು ನೆನಪಿಸುತ್ತಾಳೆ .ಆಗ ಅರಸ ನೋವಿನ ಭರದಲ್ಲಿ ನಾನು ಏನೋ ಹೇಳಿರಬಹುದು .ಈಗ ಏನಾದರು ಕೊಡಬೇಕಾದರೆ ಮಂತ್ರಿ ಬುದ್ಯಂತ ಬರಬೇಕು ಎಂದು ಹೇಳಿದನು ಆಗ ಕೋಪಗೊಂಡ ದೇಯಿ ಬೈದ್ಯೆತಿ ಏನು ಬೇಡ ಎಂದು ಹೇಳಿ ಹೊರಡುತ್ತಾಳೆ ಆಗ ರಾಜನ ಕಾಲಿನ ಗಾಯ ಮತ್ತೆ ಉಲ್ಬಣಿಸುತ್ತದೆ .ಆಗ ರಾಣಿ ಬಂದು ಪ್ರಾರ್ಥಿಸಲು ದೇಯಿ ಬೈದ್ಯೆತಿ ಮತ್ತೆ ಅವನನ್ನು ಗುಣಪಡಿಸುತ್ತಾಳೆ .ಆಗ ಬಲ್ಲಾಳರು ದೇಯಿ ಬೈದ್ಯೆತಿಗೆ ಆಭರಣಗಳನ್ನು ಪಟ್ಟೆ ಸೀರೆ ರವಕೆ ,ಸೊಂಟದ ಪಟ್ಟಿ ಮೊದಲಾದವುಗಳನ್ನು ನೀಡಿ “ಇನ್ನು ಉಳಿದದ್ದನ್ನು ನಿನ್ನ ಗರ್ಭದಲ್ಲಿರುವ ಮಗುವಿಗೆ ಕೊಡುವೆನು ಹೆಣ್ಣು ಹುಟ್ಟಿದರೆ ಅವಳಿಗೆ ಚಿನ್ನ ಬೆಳ್ಳಿ ಬೇಕಾದ್ದನ್ನು ಕೊಡುವೆನು ಗಂಡು ಮಗು ಹುಟ್ಟಿದರೆ ಅವರು ವಿದ್ಯೆ ಕಲ್ತು ದುಡಿದು ತಿನ್ನಲು ನನ್ನ ಬೀಡಿಗೆ ಬಂದರೆ ವ್ಯವಸಾಯ ಮಾಡಲು ಕಂಬಳ ಗದ್ದೆ ನೀಡುವೆನು “ಎಂದು ಮಾತು ಕೊಡುತ್ತಾರೆ .
ಪೊನ್ನ ಬಾಲೆ ಈ ಪೆದಿಯಾಂದ ಈ
ನಿಕ್ಕು ಕಾರಿನ ನಡವಳಿಕೆ ಕೊರ್ಪೆಯಾನ್
ಆಣ್ ಬಾಲೆನ್ ಪೆದ್ದಿಯಾಂದ ಈ
ಬೆನ್ದುನ್ಪಿ ಯಿದ್ದೋ ಬುದ್ದಿಲ ತೆರಿನ್ದಾದೆ ...ಯೇ
ಎನ ಬೂಡುಗು ಬತ್ತೆರಾದ್ ಡಾದೇ
ಬೆನೆರೆ ಕಂಬುಲ ಯಾನ್ ಕೊರ್ಪೆನ್ದೆರ್ ..ಯೇ..
ಮು0ದೆ ಒಂದೆರಡು ದಿನಗಳಲ್ಲಿಯೇ ದೇಯಿ ಬೈದ್ಯೆ ತಿ ಎರಡು ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ . ಈ ಅವಳಿ ಮಕ್ಕಳೇ ಮುಂದೆ ತುಳುನಾಡಿನ ವೀರರಾಗಿ ನಾಡನ್ನು ಬೆಳಗುವರು ಬಲ್ಲಾಳರು ಹುಟ್ಟಿದ ಮಕ್ಕಳಿಗೆ ಕೋಟೇಶ್ವರ ದೇವರನ್ನು ನೆನೆದು ಕೋಟಿ ಎಂದು ಚೆನ್ನ ಕೇಶವನನ್ನು ನೆನೆದು ಚೆನ್ನಯ ಎಂದು ಹೆಸರಿಡುವರು .ಮಕ್ಕಳು ತಾಯಿಯ ಹಾಲು ಕುಡಿವ ಕಾಲದಲ್ಲಿಯೇ ತಾಯಿ ದೇಯಿ ಬೈದ್ಯೆತಿ ಸಾಯುತ್ತಾಳೆ .ಮಕ್ಕಳು ಬಟ್ಟಲಿನಲ್ಲಿ ಅಣ್ಣ ತಿನ್ನುವ ವಯಸ್ಸಿನಲ್ಲಿ ತಂದೆ ಕಾಂತನ ಬೈದ್ಯ ಸಾಯುತ್ತಾನೆ . ಈ ಮಕ್ಕಳನ್ನು ಸೋದರ ಮಾವ ಸಾಯನ ಬೈದ್ಯ ಸಾಕಿ ಸಲಹುತ್ತಾರೆ . ಪರಾಕ್ರಮಿಗಳಾಗಿ ಬೆಳೆವ ಇವರು ಅಂಗ ಸಾಧನೆಗಾಗಿ ಗುರುಗಳನ್ನು ಹುಡುಕಿಕೊಂಡು ನಾನಯರ ಗರೋಡಿಗೆ ಹೋಗಿ ನಾನ ವಿಧದ ವಿದ್ಯೆಯನ್ನು ಕಲಿಯುತ್ತಾರೆ .ಆತ ಆಡುವಾಗ ಮಂತ್ರಿ ಬುದ್ಯಂತನ ಮಕ್ಕಳನ್ನು ಸೋಲಿಸುತ್ತಾರೆ .
ದೊಡ್ದವರಾಗಲು ಬಲ್ಲಾಳನಲ್ಲಿಗೆ ಹೋಗಿ ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಕಂಬಳ ಗದ್ದೆಯನ್ನು ಕೊಡುವಂತೆ ಕೇಳುತ್ತಾರೆ .ಆಗ ರಾಜ ಮ0ತ್ರಿ ಬುದ್ಯಂತನಲ್ಲಿ ಕೇಳಿ ಎಂದು ಹೇಳುತ್ತಾನೆ . ಇವರು ಬರುವುದನ್ನು ದೂರದಿಂದ ನೋಡಿದ ಬುದ್ಯಂತ ಕಾರಣವನ್ನು ಊಹಿಸಿ ಅಡಗಿ ಕುಳಿತು ತಾನು ಇಲ್ಲ ಎಂದು ಹೇಳಲು ಮಡದಿಗೆ ತಿಳಿಸಿದನು .ಮಡದಿ ಹಾಗೇ ಹೇಳುತ್ತಾಳೆ ಆಗ ಕೋಟಿ ಚೆನ್ನಯರು ”ಬುದ್ಯಂತರು ಬಂದಾಗ “ಕೋಟಿ ಚೆನ್ನಯರು ಕಂಬಳಕ್ಕೆ ಪ್ರಥಮ ಕಾಣಿಕೆ ಇಟ್ಟಿದ್ದಾರೆ” ಎಂದು ಹೇಳಲು ಹೇಳಿ ಕಾಣಿಕೆ ಇಟ್ಟು ಬರುತ್ತಾರೆ .ಆ ತನಕ ತಾನು ಅನುಭವಿಸುತ್ತಿದ್ದ ಕಂಬಳ ಗದ್ದೆ ಇನ್ನು ಕೋಟಿ ಚೆನ್ನಯರ ಪಾಲಾಗುತ್ತದೆ ಎಂದು ಹೊಟ್ಟೆ ಕಿಚ್ಚಿನಿಂದ ಅವರು ಇಟ್ಟ ಕಾಣಿಕೆಯನ್ನು ಎಸೆದು ಕೆಟ್ಟ ಮಾತು ಆಡುತ್ತಾನೆ .ನಂತರ ಪೆರ್ಮಲೆ ಬಲ್ಲಾಳ ಇವರಿಗೆ ಕೆಳಗಿನ ಕಂಬಳಗದ್ದೆಯನ್ನು ಕೊಡುತ್ತಾನೆ . ಇವರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಲಕರಣೆಗಳ ಸಿದ್ಧ ಮಾಡುತ್ತಾರೆ .ಇವರ ಗದ್ದೆ ಉಳುಮೆ ಆಗದಂತೆ ,ಕಂಬಳ ಕೋರಿ ಆಗದಂತೆ ತಡೆಯಲು ಬುದ್ಯಂತ ನಾನ ಷದ್ಯಂತ್ರಗಳನ್ನು ಮಾಡುತ್ತಾನೆ .ಬುದ್ಯಂತರು ಕಂಬಳ ಕೋರಿ ಮಾಡುವಂದೆ ಇವರು ಕೂಡಾ ಮಾಡಲು ನಿರ್ಧರಿಸುತ್ತಾರೆ .ಆಗ ಆ ದಿನ ಕಂಬಳ ಮಾಡಿದರೆ ಜಾಗ್ರತೆ ಎಂದು ಇವರನ್ನು ಬುದ್ಯಂತ ಹೆದರಿಸುತ್ತಾನೆ . ಅವನ ಬೆದರಿಕೆಗೆ ಸೊಪ್ಪು ಕಾಕದ ಕೋಟಿ ಚೆನ್ನಯರು ಅದೇ ದಿನ ಕಂಬಳ ಕೋರಿಗೆ ಸಿದ್ಧತೆ ನಡೆಸುತ್ತಾರೆ . ಆ ದಿನ ಕೋಟಿ ಚೆನ್ನಯರ ಗದ್ದೆಗೆ ಕೋಣಗಳನ್ನು ಇಳಿಸಿದಾಗ ಬುದ್ಯಂತರು ಅವರ ಕಂಬಳ ಗದ್ದೆಗೆ ಹಾರಿ ಗದ್ದೆಯಲ್ಲಿ ಹೂತಿದ್ದ ದರಿಗುಂಟ ವನ್ನು ಕಿತ್ತು ಕೋಣದ ನೆತ್ತಿಗೆ ಹೊಡೆಯಲು ಹೋಗುವರು. ಕೋಟಿಚೆನ್ನಯರು “ಒಡೆಯ ಬುದ್ದಿವಂತರೆ ಕೋಣಗಳಿಗೆ ಹೊಡೆಯಬೇಡಿ ಪಡುಮಲೆ ರಾಜ್ಯದಲ್ಲಿ ಕಾಡಿ ಬೇಡಿ ತಂದಿದ್ದೇವೆ ,ನಿಮಗೆ ಕೋಪ ಇದ್ದಾರೆ ನಮ್ಮ ಮೇಲೆ ತೀರಿಸಿ “ಎಂದು ಹೇಳಿ ತಡೆಯುತ್ತಾರೆ .ನಂತರ ಬುದ್ಯಂತ ಮತ್ತು ಕೋಟಿ ಚೆನ್ನಯರ ಎರಡೂ ಕಂಬಳ ಗದ್ದೆಗಳಿಗೆ ಬಿತ್ತನೆ ಕಾರ್ಯ ನಡೆಯುತ್ತದೆ .ಬುದ್ಯಂತರು ಬಿತ್ತನೆ ಮಾಡಿ ಮೂರನೇ ದಿನ ನೀರು ಬಿಡಿಸಲೆಂದು ಬೆಳಗ್ಗಿನ ಜಾವ ಕಂಬಳ ಗದ್ದೆಗೆ ಬರುತ್ತಾರೆ , ಆಗ ಅವ್ರಿಗೆ ಕೋಟಿ ಚೆನ್ನಯರ ಗದ್ದೆಯಲ್ಲಿ ಬೀಜ ಚೆನ್ನಾಗಿ ಮೊಳೆತದ್ದು ಕಾಣಿಸುತ್ತದೆ .ಅವರ ಮೇಲೆ ಅಸೂಯೆಯಿಂದ ಆ ಗದ್ದೆಯ ಬೆಳೆಯನ್ನು ನಾಶ ಮಾಡಲೆಂದು ಕಾಡಿನಿಂದ ಬದಿಯಲ್ಲಿ ಹರಿದು ಹೋಗುವ ನೀರಿಗೆ ಒಡ್ಡು ಕಟ್ಟಿ ಕೋಟಿ ಚೆನ್ನಯರ ಗದ್ದೆಗೆ ರಭಸದಿಂದ ಹರಿಯುವ ಹಾಗೆ ಮಾಡಿ ಆಗ ತಾನೇ ಮೊಳಕೆ ಯೋಡೆದಿದ್ದ ಬತ್ತಿದ ಬೀಜ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿದನು.
ಕಾಡ್ ದ ಬೊಲ್ಲೊಗು ಅಡ್ಡ ಕಟ್ ದೇರ್ ,ನೀರ್ ಪೋಪಿ ಸರದ್ ನ್
ಬುಡ್ತೆರ್ ನಡುಪುನಿ ಆನೆ ಬರಕೆದ ಕಣಿ ಕಡ್ತೆರ್ ಕಂಬಳಗ್ ಒಡ ದೇರ್ –ಅಯ್ಯಲ
ಬಿತ್ತು ಬುರುನಾಡೆಗ್ ಮುವಳ ಬಿತ್ತು ಬೂರುನಾಡೆ ಪಾರು ಪೊಯ್ಯ  ಗುರಿ ಗುಂಪು
ಮುಟ್ಟದೆರ್ ಬುಲೆ ಸೇಟ್ಟ ದೆರ್ ಗಾಸಿ ಮಲ್ತೆರ್ 
ಪದ್ಮ ಕಟ್ಟೆಡು ಕುಲ್ಲುದೆರ್ ಗೆಂದಾರೆಗ್ ಒರಗ್ ದೇರ್ (ಸಂ :ದಾಮೋದರ ಕಲ್ಮಾಡಿ )
ಅಲ್ಲಿಗೆ ಕೋಟಿ   ಬಂದು ಬುದ್ಯಂತ  ಬೆಳೆ  ನಾಶಮಾಡಿದ್ದನ್ನೂ ನೋಡಿ ಕೋಪದಿಂದ”ನಮ್ಮ ಬೆಳೆಯನ್ನು ಹಾಳು ಮಾಡಿದ್ದೀರಿ ,ಮಳೆಗಾಲದಲ್ಲಿ ಉಣ್ಣಬೇಕಾದ ಅನ್ನವನ್ನು ಹಾಳು ಮಾಡಿದ್ದೀರಿ ,ನಾನಾಗಿದ್ದಕ್ಕೆ ಇಷ್ಟು ಸಹಿಸಿಕೊಂಡೆ ನನ್ನ ತಮ್ಮ ಬಂದಿದ್ದರೆ ಅನಾಹುತವಾಗುತ್ತಿತ್ತು “ಎಂದು ಹೇಳುತ್ತಾನೆ . ಆಗ ಬುದ್ಯಂತ ಅವರನ್ನು ಹೀನಾಯಮಾನವಾಗಿ ನಿಂದಿಸುತ್ತಾನೆ .ಆಗ ಅಲ್ಲಿಗೆ ಬಂದ ಚೆನ್ನಯ ವಂದಿಸಿ ಗೌರವ  ಸೂಚಿಸಿದಾಗಲೂ ಅವನಿಗೆ ಅವಮಾನ ಮಾಡುತ್ತಾನೆ ಬುದ್ಯಂತ .ಅವನ ಮೇಲೆ ಆವೇಶದಿಂದ ಹಾರಿ ಹೊಡೆಯಲು ಹೋಗುವಾಗ ಬುದ್ಯಂತ ಓಡಿ ಹೋಗುತ್ತಾನೆ .ಅವನನ್ನು ಅಡ್ಡ ಕಟ್ಟಿದ ಕೋಟಿ  ಹಿಡಿದು ನಿಲ್ಲಿಸುತ್ತಾನೆ .ಅವರೊಳಗೆ ಹೋರಾಟ ಆಗಿ ಬುದ್ಯ೦ತ ಕಂಬಳದ ನೀರಿಗೆ ಮಗುಚಿ ಬೀಳುತ್ತಾನೆ .ಅವನನ್ನು ಬಡಿದು ಸಾಯಿಸಿ ಅವನೇ ಮಾಡಿದ ನೀರ ದಾರಿಗೆ ಅಡ್ಡ ಮಲಗಿಸಿ ಬುದ್ಯಂತರ ಮನೆಗೆ ಹೋಗಿ ಅವನ ಹೆಂಡತಿಯಲ್ಲಿ ಗದ್ದೆಗೆ ಹೋಗಿ ನೋಡುವಂತೆ ತಿಳಿಸುತ್ತಾರೆ
ಮನೆಗೆ ಬಂದಾಗ ಮಾವ ಸಾಯನ ಬೈದ್ಯನಿಗೆ ಎಲ್ಲವು ಅರ್ಥವಾಗುತ್ತದೆ .ಇನ್ನು ಆ ಉರಿನಲ್ಲಿ ಅವರಿರುವುದು ಅಪಾಯ ಎಂದರಿತ ಮಾವ ಸಾಯ ಬೈದ್ಯ “ನೀವು ಬಲ್ಲಾಳನಿಗೆ ಕೊಡಲು ಸಾಧ್ಯವಾಗದಂತಹ ವಸ್ತು ಗಳನ್ನು ಕೇಳಿ.ಕೊಡದಿದ್ದಾಗ ಅದೇ ನೆಪ ಮಾಡಿ ದೂರ ಹೊರತು ಹೋಗಿ “ಎಂದು  ಸೂಚಿಸುತ್ತಾರೆ .ಅಂತೆಯೇ ಕೋಟಿ ಚೆನ್ನಯರು ಬಲ್ಲಾಳನಲ್ಲಿಗೆ ಹೋಗಿ “ನೀವು ಕಂಬಳ ಗದ್ದೆ ಕೊಟ್ಟಿದ್ದೀರಿ ಆದರೆ ಬೇಕಾದ ಸಲಕರಣೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು ಆಗ ಬಲ್ಲಾಳ್ ನಿಮಗೆ ಏನು ಬೇಕು ಎಂದು ಕೇಳುತ್ತಾನೆ ಆಗ “ಬೀಡಿನ ಮು೦ಬಾಗದಲ್ಲಿರುವ ಸಣ್ಣ ಗೆಂದ ದೊಡ್ಡ ಗೆಂದ ತೆಂಗಿನ ಮರಗಳಲ್ಲಿ ಒಂದನ್ನು ಕೊಡಿ ಎಂದು ಕೇಳುವರು ಅದನ್ನು ಬಿಟ್ಟು ಬೇರೆ ಕೇಳಿ ಎಂದು ಬಲ್ಲಾಳ ಹೇಳಿದಾಗ ಸಣ್ಣ ತುಂಬಾ ದೊಡ್ಡ ತುಂಬಾ ಮಜಲು ಗದ್ದೆಗಳಲ್ಲಿ ಒಂದನ್ನು ಕೇಳುತ್ತಾರೆ .ಅದನ್ನು ಬಲ್ಲಾಳ ಕೊಡುವುದಿಲ್ಲ .ಆಗ “ಬೀಡಿನ ಹಟ್ಟಿಯಲ್ಲಿರುವ ಕಿನ್ನಿ ಕಾಳಿ ದೊಡ್ಡ ಕಾಳಿ ಹಸುಗಳಲ್ಲಿ ಒಂದನ್ನು ಕೊಡಿ” ಎಂದು ಕೋಟಿ ಚೆನ್ನಯರು ಕೇಳಿದರು   ಆಗ ಬಲ್ಲಾಳ “ನೀವು ನನ್ನ ಸ್ವಾರ್ಥಕ್ಕಾಗಿ ಆಶ್ರಯದಲ್ಲಿದ್ದೀರಿ ಪ್ರೀತಿಯಿಂದ ಸಾಕಿದೆ .ಆದರೆ ಅದಕ್ಕಾಗಿ ನನ್ನ ಹನ್ನೆರಡು ರಾಣಿಯರಲ್ಲಿ ಇಬ್ಬರನ್ನು ಕೊಡಬೇಕೆಂದರೆ ಕೊಡಲು ಸಾಧ್ಯವೇ ?ಎಂದು ಬಲ್ಲಾಳರು ಹೇಳಿದಾಗ ಕೋಟಿ ಚೆನ್ನಯರು “ತಾಯಿಯನ್ತಿರುವ ರಾಣಿಯರನ್ನು ನಮಗೆ ಕಟ್ಟುತ್ತೀರಲ್ಲ್ಲ .ಇಂದಿಗೆ ನಾವು ನೀವು ಎರಡಾಯಿತು ಸಂಬಂಧ ಕಡಿಯಿತು “ಎಂದು ಹೇಳಿ 5 ವೀಳ್ಯದೆಲೆ ಇಟ್ಟು  ಬಂದರು   . ಆ ಹೊತ್ತಿಗೆ ಬುದ್ಯಂತ ಸಾವಿನ ಸಮಾಚಾರವು ಬಲ್ಲಾಳನಿಗೆ ತಿಳಿಯಿತು .ಬುದ್ಯಂತ ಸತ್ತರೆ ಸಾಯಲಿ ನೀವು ಹೋಗ ಬೇಡಿ ಎಂದು ಬಲ್ಲಾಳ ಕೋಟಿ ಚೆನ್ನಯರಲ್ಲಿ ಕೇಳಿಕೊಳ್ಳುತ್ತಾನೆ .ಆದರೆ ಕೋಟಿ ಚೆನ್ನಯರು ಹಿಂದೆ ತಿರುಗಿ ನೋಡದೆ ಚಾವಡಿ ಇಳಿದು ಹೋಗುತ್ತಾರೆ .
ಅಲ್ಲಿಂದ ಅವರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡುತ್ತಾರೆ .ಮುಂದೆ ಚಂದುಗಿಡಿಯ ಕುತಂತ್ರದಿಂದಾಗಿ ಪಂಜದ ಕೇಮರ ಬಲ್ಲಾಳ ಅವರನ್ನು ಬಂಧಿಸುತ್ತಾನೆ .ಅಲ್ಲಿಂದ ಅವರು ಬೆರ್ಮೆರ್ ಸಹಾಯದಿಂದ ತಪ್ಪಿಸಿಕೊಂಡು ಎನ್ಮೂರಿಗೆ ಬಂದು ಅಲ್ಲಿನ ಬಲ್ಲಾಳನ ಆಶ್ರಯದಲ್ಲಿ ಎರಡು ಗುತ್ತುಗಳು ಅಂದರೆ  ಕರ್ಮಿಲಜೆ ಮತ್ತು ನೆಕ್ಕಿಲಜೆಗುತ್ತುಗಳನ್ನು ಪಡೆದು ವ್ಯವಸಾಯ ಮಾಡಿಕೊಂಡು ಇರುತ್ತಾರೆ  .ಅವರು ಕೇಮಲಕ್ಕೆ ಹೋಗಿ ತಾಯಿ ಬೆರ್ಮೆರ್ ಗೆ ಹೇಳಿದ ಹರಿಕೆಯನ್ನು ತೀರಿಸುತ್ತಾರೆ.
ಒಂದು ದಿನ ಅವರು ಬೇಟೆಗೆ ಹೋಗುತ್ತಾರೆ ಕೋಟಿ  ಒಂದು ಹಂದಿಗೆ ಬಾಣ ಬಿಟ್ಟ ಆ ಹಂದಿ  ಪಂಜ-ಎನ್ಮೂರುಗಳ ಗಡಿಯಲ್ಲಿ ಸತ್ತು ಬೀಳುತ್ತದೆ .ಇದರಿಂದ ವಿವಾದ ಉಂಟಾಗಿ ಪಂಜದ ಬಲ್ಲಾಳರು ಯುದ್ಧಕ್ಕೆ ಬರುತ್ತಾರೆ .ಘೋರ ಯುದ್ಧ ನಡೆಯುತ್ತದೆ ಚಂದುಗಿಡಿ ಬಿಟ್ಟ ಬಾಣ ಒಂದು ಚೆನ್ನಯನ  ಕಾಲಿಗೆ ತಾಗುತ್ತದೆ.ಅವನು ಅಣ್ಣನಲ್ಲಿ “ಪಂಜದ ಪಡೆ ನಾಯಿ ಒಂದು ಕಾಲಿಗೆ ಕಚ್ಚಿತು ಎಂದು ಹೇಳುತ್ತಾನೆ .ಆಗ ಕೋಟಿಯು “ಕಣ್ಣಿಂದ ನೋಡ ಬೇಡ ಕೈಯಿಂದ ಹಿಡಿಯಬೇಡ ಒಳಗಿನಿಂದ ತೆಗೆದು ಹೊರಗೆ ಕೊಡಹು ಎಂದು ಹೇಳುತ್ತಾನೆ .ಅದರಂತೆ ಚೆನ್ನಯ ಕಾಲನ್ನು ಕೊಡಹಿದಾಗ ಒಂದು ಗದ್ದೆಯ ಜನ ಪೂರ್ತಿ ನಾಶವಾದರು .
ಯುದ್ಧದಲ್ಲಿ ಕೋಟಿ ಚೆನ್ನಯರು ಚಂದು ಗಿಡಿಯನ್ನು ಕೊಲ್ಲುತ್ತಾರೆ .ಆಗ ಪಂಜದ ಸೈನ್ಯ ಸೋತು ಶರಣಾಗುತ್ತದೆ . ಈ ಸಂದರ್ಭದಲ್ಲ್ಲಿ ಪಂಜದ ಕೆಮರ ಬಲ್ಲಾಳನ ಜುಟ್ಟು ಹಿಡಿದು ಕೋಟಿ ಬಗ್ಗಿಸುತ್ತಾನೆ ಆಗ ಕೋಟಿಯ ಬಲ ಮರ್ಮಾಂಗಕ್ಕೆ ಬಾಣ ಒಂದು ಬಂದು ನಾಟಿತು .ಅದನ್ನು ಪಡುಮಲೆ ಬಲ್ಲಾಳನೆ ಬಿಟ್ಟಿರುತ್ತಾನೆ
ಮರ್ಮಾಂಗಕ್ಕೆ ಬಾಣ ನಾಟಿರುವುದರಿಂದ ತನ್ನ ಅಂತ್ಯ ಸಮೀಪಿಸಿದೆ ಎಂದು ಕೋಟಿಗೆ ತಿಳಿಯಿತು .ಅಣ್ಣನನ್ನು ಅಪ್ಪಿಕೊಂಡ ಚೆನ್ನಯ “ಹುಟ್ಟಿನ ಅಮೇ ಒಂದಾಗಿರುವಾಗ ನಮಗೆ ಸಾವಿನ ಸೂತಕ ಎರಡಾಗುವುದೇ ?! ಎಂದು ಉದ್ಗರಿಸಿದನು ಕೋಟಿ ಯು   ತಮ್ಮನ್ನು ಸಾಕಿದ ಬಲ್ಲಾ ಳನೆಡೆಗೆ ನೋಡಿ “ತಮಗೆ ಜಾತಿ ಭೇದ ನೋಡದೆ ಗರೋಡಿ ಕಟ್ಟಿ ಆರಾಧಿಸುತ್ತಾ ಬನ್ನಿ ನಿಮಗೆ ರಕ್ಷಣೆ ಕೊಡುತ್ತೇವೆ,ನೆನೆಸಿದಲ್ಲಿ ನೆಲೆಯಾಗುತ್ತೇವೆ ,ನ್ಯಾಯಕ್ಕೆ ಇಂಬು ಕೊಡುತ್ತೇವೆ ,ಬೆಳೆಗೆ ರಕ್ಷಣೆ ಕೊಡುತ್ತೇವೆ “ಎಂದು ಹೇಳಿ ವೀರ ಮರಣವನ್ನಪ್ಪುತ್ತಾನೆ .ಆಗ ಚೆನ್ನಯ “ನಮಗೆ ಹೆತ್ತ ಸೂತಕ ಒಂದೇ ಆಗಿತ್ತು ಈಗ ಸತ್ತ ಸೂತಕ ಎರಡಾಗ ಬೇಕೇ ನಾನು ಕೂಡ ನಿನ್ನ ಜೊತೆ ಬರುತ್ತೇನೆ “ಎಂದು ಹೇಳಿ ದಂಬೆ ಕಲ್ಲಿಗೆ ತಲೆಯನ್ನು ಅಪ್ಪಳಿಸಿ ಅಣ್ಣನನ್ನು ಅನುಸರಿಸುತ್ತಾನೆ .ಹೀಗೆ ವೀರ ಮರಣ ವನ್ನಪ್ಪುವ ಸ್ವಾಭಿಮಾನಿಗಳೂ ಅತುಲ ಪರಾಕ್ರಮಿಗಳೂ ಆದ ಅವಳಿ ಸಹೋದರರಾದ ಕೋಟಿ ಚೆನ್ನಯರು ಆರಾಧ್ಯ    ಶಕ್ತಿಗಳಾಗಿ ತುಳುನಾಡನ್ನು ಬೆಳಗುತ್ತಿದ್ದಾರೆ .
 ಇತಿಹಾಸದ ದೃಷ್ಟಿಯಿಂದ   ಪಂಜದ ಕೆಮರ ಬಲ್ಲಾಳ .ಪಡುಮಲೆ ಬಲ್ಲಾಳರ ಉಲ್ಲೇಖ  ಇಲ್ಲಿ ಬಹಳ ಮುಖ್ಯವಾದುದು .ಈ ಆಧಾರಗಳಿಂದ ಕೋಟಿ ಚೆನ್ನಯರ ಕಾಲವನ್ನು ಸುಮಾರು ೧೬ ನೆ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ
ಪಂಜದ ಕೂತ್ಕುಂಜದಲ್ಲಿರುವ ಗೆಳತಿ ಮಂಗಳ ಗೌರಿಯ ಅಣ್ಣ ನಮ್ಮನ್ನು ಕೋಟಿ ಚೆನ್ನಯರ ಆದಿ ಗರೋಡಿ ಹಾಗು ಸಮಾಧಿ ಇರುವೆಡೆಗೆ ಕರೆದುಕೊಂಡು ಹೋಗಿದ್ದರು .ಎತ್ತರದ ಗುಡ್ಡದ ತುದಿಯಲ್ಲಿ ಆದಿ ಗರೋಡಿ ಇದೆ ತುಸು ದೂರದಲ್ಲಿ ಕೋಟಿ ಚೆನ್ನಯರ ಸಮಾಧಿ ಇದೆ .ಕೋಟಿ ಚೆನ್ನಯರ ಸುರಿಯವನ್ನು ಹಾಕಿರುವ ಒಂದು ಮುಚ್ಚಿದ ಬಾವಿ ಅಲ್ಲಿದೆ.ಸುತ್ತ ಮುತ್ತ ಕಾಡು ಇರುವ ನಿರ್ಜನ ತಾಣ  ಇದು.  ಹೋಗುವಾಗ ನಾವೆಲ್ಲಾ ಬಹಳ ಸಂಭ್ರಮದಲ್ಲಿ ಹೋಗಿದ್ದೆವು .ಹೋಗುತ್ತಾ ಕೋಟಿ ಚೆನ್ನಯರ ವೀರ ಗಾಥೆಯನ್ನು ನಾನು ಹೇಳಿದೆ .ಕೋಟಿ ಚೆನ್ನಯರ ಸಮಾಧಿ ನೋಡಿ ಹಿಂದೆ ಬರುವಾಗ ಏಕೋ ಏನೋ ನಮ್ಮೆ ಕಣ್ಣಂಚು ತೇವಗೊಂಡಿತ್ತು .ಮನಸ್ಸು ಭಾರವಾಗಿತ್ತು. ಕೋಟಿಚೆನ್ನಯರು  ಬೆಳೆದ ಅವರ ಮಾವ  ಸಾಯನ ಮನೆ ಗೆಜ್ಜೆ ಗಿರಿ ನಂದನ ಹಿತ್ತಿಲು ,ಪಡುಮಲೆ ಬಲ್ಲಾಳನ ಅರಮನೆಯ ಅವಶೇಷ ,ದೇಯಿ ಬೈದ್ಯೆತಿ ಹುಟ್ಟಿದ ಕೂವೆ ತೋಟ ಮನೆ ಮತ್ತು ಅದರ ವಾರಸು ದಾರರು ಮತ್ತು ಅಕ್ಕ ಕಿನ್ನಿದಾರುವಿನ ದೋಲದ ಮನೆ ,ಕೋಟಿಚೆನ್ನಯರು ನೀರು ಕುಡಿದ ಬಾವಿ ,ಅವರ ಪ್ರತೀಕ ವಾಗಿರುವ ಎರಡು ತಾಳೆ ಮರಗಳು ಈಗ ಕೂಡ ಇವೆ © ಡಾ.ಲಕ್ಷ್ಮೀಜಿ ಪ್ರಸಾದ(ಸೂಕ್ತ ಚಿತ್ರ ಒದಗಿಸಿದ ಜೀವಿತ್ ಶೆಟ್ಟಿ ಮಂಗಳೂರು ಇವರಿಗೆ ಧನ್ಯವಾದಗಳು ) copy rights reserved
ಆಧಾರ : ಕೋಟಿ ಚೆನ್ನಯ ಪಾಡ್ದನ ಸಂ ಮೋಹನ್ ಕುಮಾರ್
ಗರೊಡಿಗಳ ಸಾಂಸ್ಕೃತಿಕ ಅದ್ಯಯನ: ಡಾ.ಬನ್ನಂಜೆ ಬಾಬು ಅಮೀನ್ 
ಭೂತಾರಾಧನೆಗ- ಒಂದು ಜಾನಪದೀಯ ಅಧ್ಯಯನ ( ಪಿಎಚ್ ಡಿ ಮಹಾ ಪ್ರಬಂಧ) ಡಾ.ಚಿನ್ನಪ್ಪ ಗೌಡ 

No comments:

Post a Comment