Saturday, 25 October 2014

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-141:ಡಾ.ಲಕ್ಷ್ಮೀ ಜಿ ಪ್ರಸಾದ





copy rights reservedಎರಡು ದೈವಗಳನ್ನು ಒಟ್ಟಿಗೆ ಜತೆ ಕುಲೆ ಎಂದು ಕರೆದು ಕೋಲ ನೀಡಿ, ತಂಬಿಲ ನೀಡಿ ಆರಾಧಿಸುವ ಪದ್ಧತಿ ಗುತ್ತಿಗಾರಿನ ಮೊಗ್ರಾಲ್ ಹಾಗೂ ಮಡಪ್ಪಾಡಿಗಳಲ್ಲಿ ಪ್ರಚಲಿತವಿದೆ. ಜತೆ ಕುಲೆಗಳಿಗೆ ವಿಶೇಷವಾದ ವೇಷಭೂಷಣ ಏನೂ ಇರುವುದಿಲ್ಲ. ಇಬ್ಬರು ವ್ಯಕ್ತಿಗಳು ತಲೆಗೆ ಅಂಗವಸ್ತ್ರವನ್ನು ಹೊದೆದುಕೊಂಡು ಕುಲೆಗಳಾಗಿ ಅಭಿನಯಿಸುತ್ತಾರೆ. ಕರಿಯಣ್ಣ ನಾಯಕ ಅಥವಾ ಬಚ್ಚನಾಯಕರೊಂದಿಗೆ ಜತೆಕುಲೆಗಳಿಗೆ ಇಲ್ಲಿ ಆರಾಧನೆ ಸಲ್ಲಿಸುತ್ತಾರೆ. ಕುಲೆಗಳಿಗೆ ತಂಬಿಲವನ್ನು ಕುಚ್ಚಿಲಕ್ಕಿಯ ಸಪ್ಪೆ ಕಡುಬನ್ನು ನೀಡಿ ಸಲ್ಲಿಸುತ್ತಾರೆ. ಆರಾಧನೆಯ ಸಂದರ್ಭದಲ್ಲಿ ಕುಲೆಗಳನ್ನು ಉಳ್ಳಾಕುಲುಗಳ ಜೊತೆ ಸೇರಿಕೊಳ್ಳಿ ಎನ್ನುತ್ತಾರೆ.
"ಬಾರೆಲೆ ಕುಲೆಕುಲೆ ಬಾರೆಲೆ ಕುಲೆಕುಲೆ
ಪದ್ರಾಡೊಕ್ಕೆಲು ಸ್ಥಾನೊಗು ಬಾರೆಲೆ
ಕೂಡೊನುಲೆ ಕುಲೆಕುಲೆ
ಉಳ್ಳಾಕುಲೆ ಬಲತ್ತೊಟ್ಟುಗು ಕೂಡೊನುಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲೆ ಸ್ಥಾನೊಗು ಬಾರೆಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲು ಸ್ಥಾನೊಡು ಬಾರೊನುಲೆ"
"ಬಾಳಿರಿ ಕುಲೆಗಳೆ ಬಾಳಿರಿ ಕುಲೆಗಳೆ
ಹನ್ನೆರಡೊಕ್ಕೆಲು ಸ್ಥಾನಕ್ಕೆ ಬನ್ನಿರಿ
ಸೇರಿಕೊಳ್ಳಿರಿ ಕುಲೆಗಳೆ
ಉಳ್ಳಾಕುಲುಗಳ ಬಲದೆಡೆಯಲ್ಲಿ ಸೇರಿಕೊಳ್ಳಿರಿ
ಬಾಳಿರಿ ಕುಲೆಗಳೆ ಉಳ್ಳಾಕುಲು ಸ್ಥಾನಕ್ಕೆ ಬನ್ನಿರಿ:
ಆ ನಂತರ ಬಂದ ಕುಲೆಗಳು ಪೂಜಾರಿಯಲ್ಲಿ ಆಹಾರ ಕೇಳುತ್ತವೆ.
"ಸ್ಥಾನತ ಪೂಜಾರಿಯೇ
ಪೂಜಾರಿ ಬಂಜಿ ಗುಡುಗುಡು ಪಣ್ಪುಂಡು"
"ಸ್ಥಾನದ ಪೂಜಾರಿಯೇ
ಪೂಜಾರಿ ಹೊಟ್ಟೆ ಹಸಿವಿನಿಂದ ಗುಡುಗುಡು ಎನ್ನುತ್ತಿದೆ"
ಎಂದು ಕುಲೆಗಳು ಕೇಳಿದಾಗ
"ಚಪ್ಪೆ ಅರಿತ ಪುಂಡಿ ಪರ್ಪುದ ಪರಂದ್
ತಿನ್ನೊಂದು ಪೋಲೆ
ಕಂಡದ ಗಡಿ ಕಡಪ್ಪುನಗ
ಡುರ್ರೊಂದು ಪೋವಡು ಕುಲೆಕುಲೆ"
"ಸಪ್ಪೆ ಅಕ್ಕಿಯ ಕಡುಬು ಪರ್ಪು (?) ಹಣ್ಣು
ತಿಂದುಕೊಂಡು ಹೋಗಿರಿ
ಗದ್ದೆಯ ಗಡಿ ದಾಟುವಾಗ
ಡುರ್ರೆಂದು ಹೋಗಿ ಕುಲೆಗಳೆ"
ಹೊಟ್ಟೆ ತುಂಬ ತಿಂದುಕೊಂಡು ತೃಪ್ತಿಯಿಂದ ಡುರ್ರೆಂದು ತೇಗಿಕೊಂಡು ಹೋಗಬೇಕೆಂದು ಕುಲೆಗಳಲ್ಲಿ ವಿನಂತಿ ಮಾಡುತ್ತಾರೆ. ಉಳ್ಳಾಕುಲುಗಳ ಇಬ್ಬರು ಭಕ್ತರು ಆರಾಧನೆಯ ಸಂದರ್ಭದಲ್ಲಿ ಮರಣವನ್ನುಪ್ಪುತ್ತಾರೆ. ಅವರೇ ಕುಲೆಗಳು. ಅವರು ಮುಂದೆ ಉಳ್ಳಾಕುಲುಗಳ ಸೇರಿಗೆಯಲ್ಲಿ ಸಂದು ಹೋಗಿ ಜತೆಕುಲೆಗಳೆಂಬ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ ಎಂದು ಐತಿಹ್ಯ ಮಡಪ್ಪಾಡಿ ಪರಿಸರದಲ್ಲಿ ಪ್ರಚಲಿತವಿದೆ.

No comments:

Post a Comment