Wednesday, 24 June 2015

ತುಳುನಾಡಿನ ಚಾಮುಂಡಿ ಭೂತಗಳು(c)ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನ ಚಾಮುಂಡಿ ಭೂತಗಳು


copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ದಸರಾ ಬಂತೆಂದರೆ ಮೈಸೂರಿನ ಉತ್ಸವದ್ದೇ ಸುದ್ದಿ ಎಲ್ಲಡೆ. ಮೈಸೂರಿನಲ್ಲಿ ಚಾಮುಂಡೇಶ್ವರಿಯ ಆರಾಧನೆಯನ್ನು ವೈಭವದಿಂದ ಮಾಡುತ್ತಾರೆ. ಮಹಿಷಾಸುರನನ್ನು ಕೊಂದ ಆದಿಶಕ್ತಿಯನ್ನೇ ಇಲ್ಲಿ ಚಾಮುಂಡೇಶ್ವರಿ ಎಂದು ಆರಾಧಿಸುತ್ತಾರೆ. ಉಡುಪಿ, ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳುನಾಡೆಂದೇ ಪ್ರಸಿದ್ಧವಾದ ಪ್ರದೇಶ. ತುಳುನಾಡಿನ ಮಂಗಳೂರಿನಲ್ಲಿ ಕೂಡ ದಸರಾ ಬಹಳ ವೈಭವದಿಂದ ಆಚರಿಸಲ್ಪಡುತ್ತದೆ. ಇಲ್ಲಿ ಶಕ್ತಿ ಸ್ವರೂಪಿಣಿ ಆದಿಶಕ್ತಿಯನ್ನು ಕಾಳಿ, ಸರಸ್ವತಿ ಮೊದಲಾಗಿ ನವರೂಪಗಳಲ್ಲಿ ಆರಾಧಿಸುತ್ತಾರೆ.

ಆದರೆ  ತುಳುನಾಡಿನ ಎಲ್ಲೆಡೆಗಳಲ್ಲಿ `ಚಾಮುಂಡಿ’ ಎಂಬ ಭೂತವು ಆರಾಧನೆಯನ್ನು ಹೊಂದುತ್ತದೆ. ತುಳುನಾಡಿನ ಭೂತಗಳು ಕೆಟ್ಟ ಶಕ್ತಿಗಳಲ್ಲ. copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದಶಿಷ್ಟ ರಕ್ಷಣೆಯನ್ನು ಮಾಡುವ ತುಳುನಾಡಿನ ಸತ್ಯಗಳು ಇವು. ಸಂಸ್ಕೃತದ ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಪೂತೊ ಆಗಿ ಭೂತೋ ಆಗಿರುವ ಸಾಧ್ಯತೆ ಇದೆ. ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ. ಕೇರಳದಲ್ಲಿ ಭೂತವನ್ನು ತೆಯ್ಯಂ ಎಂದು ಕರೆಯುತ್ತಾರೆ. ಇದು ದೈವ ಎಂಬುದಕ್ಕೆ ಸಂವಾದಿಯಾಗಿರುವ ಪದವಾಗಿದೆ.
ತುಳುನಾಡಿನ ದೈವಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ಪೌರಾಣಿಕ ಮೂಲದ ಭೂತಗಳು. ಇದರಲ್ಲಿ ಪುರಾಣೋಕ್ತ ದೈವಗಳು ಭೂತದ ರೂಪದಲ್ಲಿ ಆರಾಧನೆ ಪಡೆಯುವ ಭೂತಗಳು ಸೇರುತ್ತವೆ. ಗುಳಿಗ, ವಿಷ್ಣುಮೂರ್ತಿ, ರಕ್ತೇಶ್ವರಿ, ಚಾಮುಂಡಿ ಮೊದಲಾದುವುಗಳು ಪುರಾಣಮೂಲ ಭೂತಗಳಾಗಿವೆ. ಜನಸಾಮಾನ್ಯರಂತೆ ಜನಿಸಿ ಅಸಾಮಾನ್ಯ ಸಾಹಸವನ್ನು ಮೆರೆದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುವ ಕೊರಗ-ತನಿಯ, ಕಲ್ಕುಡ-ಕಲ್ಲುರ್ಟಿ, ಕೋಟಿ-ಚೆನ್ನಯ ಮೊದಲಾದವರು ಎರಡನೆಯ ವರ್ಗದಲ್ಲಿ ಸೇರುತ್ತಾರೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ. ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕದ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ. ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆ, ಬಲದಲ್ಲಿ ಬಲಮಲೆ, ನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮುರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮುರಾಯ ಭಟ್ಟರು ಸ್ನಾನಕ್ಕೆಂದು ಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿ ಒಂದು ಬಿಳಿಯ ತಾವರೆ ಹೂ ಭೀಮುರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದು ದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣುಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ನಾಗ ಚಾಮುಂಡಿ ,ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.
ಪಿಲಿಚಾಮುಂಡಿ 
ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ “ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆ” ಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿಚಾಮುಂಡೇಶ್ವರಿ ಎಂದು ಕರೆಯುತ್ತಾರೆ. ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನು, ಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆ, ಕೋಲ, ಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ‘ಚಾಮುಂಡಾ’ ಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.copy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಅಗ್ನಿ ಚಾಮುಂಡಿ
ಅಗ್ನಿ ಚಾಮುಂಡಿಯನ್ನು ಅಗ್ನಿ ಚಾಮುಂಡಿಗುಳಿಗ ಎಂದು ಕೂಡ ಕರೆಯುತ್ತಾರೆ. ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವಿದೆ. ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ತಿಳಿದು ಬರುತ್ತದೆ. ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ ವಾಸುಲ್ಲ ಭಟ್ಟರು. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ.
ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ. ಇವರನ್ನು ನೋಡಿದ ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ “ಕೇರಳ ಹೆಣ್ಣು ಮಕ್ಕಳುಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ಎರಡು ಕಲ್ಲಿನ ಗುಂಡಗಳಿವೆ. ಎರಡನೆಯ ಗುಂಡದಲ್ಲಿ ಮುಕಾಂಬಿ ಜೇವು ಇರಲಿ’’ ಎಂದು ಹೇಳಿದಾಗ ಕಡಂಬಾರ ಮಯ್ಯರನ್ನು ನಂಬಿದ ವಾಸುಲ್ಲ ಭಟ್ಟರು ಮೂಕಾಂಬಿ ಜೇವನ್ನು ಕಡಂಬಾರು ಬೀಡಿನಲ್ಲಿ ಬಿಟ್ಟು ಮುಂದೆ ಹೋಗುತ್ತಾರೆ. ಇತ್ತ ಕಡಂಬಾರು ಮಯ್ಯ ಕಲ್ಲಿನ ಗುಂಡದ ಬಾಗಿಲನ್ನು ಒಡೆದು ಬಲಾತ್ಕಾರದಿಂದ ಮೂಕಾಂಬಿ ಜೇವನ್ನು ಅತ್ಯಾಚಾರ ಮಾಡುತ್ತಾನೆ.

ಮುಕಾಂಬಿ ಜೇವು ತನ್ನ ಗಂಡನ ಮನೆ ದೈವ ಗುಳಿಗನನ್ನು ನೆನೆದು ಕಡಂಬಾರ ಕಟ್ಟಕ್ಕೆ ಹಾರಿ ಸಾಯುತ್ತಾಳೆ. ಇದನ್ನು ಕನಸಿನ ಮೂಲಕ ವಾಸುಲ್ಲ ಭಟ್ಟರಿಗೆ ಗುಳಿಗ ದೈವ ತಿಳಿಸುತ್ತದೆ. ವಾಸುಲ್ಲ ಭಟ್ಟರು ಓಡೋಡಿ ಬರುವಾಗ ಮುಕಾಂಬಿಯ ಚಿತೆ ಉರಿಯುತ್ತದೆ. ವಾಸುಲ್ಲ ಭಟ್ಟರು ಚಿತೆಗೆ ಹಾರಿ ಪ್ರಾಣ ಬಿಡುತ್ತಾರೆ. ಗುಳಿಗನನ್ನು ನೆನೆದು ನೀರಿನ ಕಟ್ಟಕ್ಕೆ ಹಾರಿದ ಮುಕಾಂಬಿ ಜೇವು ಗುಳಿಗನ ಸನ್ನಿಧಿಗೆ ಸಂದು ಮುಕಾಂಬಿಗುಳಿಗ ದೈವವಾಗಿ ಆರಾಧನೆ ಪಡೆಯುತ್ತಾಳೆ. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ. 
ಕರಿಚಾಮುಂಡಿcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕರಿಚಾಮುಂಡಿ ದೈವವನ್ನು ಕರಿಚಾಂಡಿ ಎಂದೂ ಕರೆಯುತ್ತಾರೆ. ಕರಿಚಾಮುಂಡಿ ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದರೆ ಮಡಪ್ಪಾಡಿಯಲ್ಲಿ ಕರಿಚಾಮುಂಡಿ ಭೂತಕ್ಕೆ ನೇಮ ಆಗುವಾಗ ಹೇಳಿದ ಪಾಡ್ದನದ ಕೆಲವು ಸಾಲುಗಳಲ್ಲಿ ಕರಿಚಾಮುಂಡಿಯ ತಂದೆ ಕಾನಕಲ್ಲಟೆ ದೇವರೆಂದೂ, ತಾಯಿ ನೆಲವುಲ್ಲ ಸಂಖ್ಯೆಎಂದೂ ಹೇಳಿದೆ. ಕೊರಗ ತನಿಯ ತಾಯಿ ಮೈರೆಯ ತಂದೆ ತಾಯಿಯನ್ನು ಕಾನಕಲ್ಲಟೆ ದೇವರು, ನೆಲವುಲ್ಲ ಸಂಖ್ಯೆ ಎಂದು ಕೊರಗ ತನಿಯ ಪಾಡ್ದನದಲ್ಲಿ ಹೇಳಿದೆ. ಕಾಸರಗೋಡು, ಬಂಟ್ವಾಳ ಪರಿಸರದಲ್ಲಿ ಒಂಜಿ ಕುಂದ ನಲ್ಪ ದೈವೊಳ ನೇಮದಲ್ಲಿ ಪುದ ಎಂಬ ಭೂತಕ್ಕೆ ಆರಾಧನೆ ಇದೆ. ಕೊರಗ ತನಿಯನ ತಾಯಿ ಮೊದಲು ಪಾರಿವಾಳವಾಗಿದ್ದು ನಂತರ ಹೆಣ್ಣಾದವಳು ಎಂದು ಒಂದು ಪಾಡ್ದನದಲ್ಲಿ ಹೇಳಿರುವ ಬಗೆ ಡಾ. ಅಮೃತ ಸೋಮೇಶ್ವರರು ತಿಳಿಸಿದ್ದಾರೆ. ಆದ್ದರಿಂದ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂದೂ, ಕರಿಚಾಮುಂಡಿ ಎಂದೂ ಆರಾಧನೆ ಹೊಂದಿರುವ ಸಾಧ್ಯತೆ ಇದೆ.

ರುದ್ರಚಾಮುಂಡಿ
ಉದ್ರಾಂಡಿ, ರುದ್ರಾಂಡಿ ಎಂದೂ ರುದ್ರಚಾಮುಂಡಿಯನ್ನು ಕರೆಯುತ್ತಾರೆ. ಏಳು ಸಮುದ್ರದ ನಡುವೆ ಎಪ್ಪತೇಳು ನಾಗಬಿಂಬಗಳೊಂದಿಗೆ ರುದ್ರಚಾಮುಂಡಿ ಉದಿಸಿ ಬಂತು ಎಂದು ಪಾಡ್ದನದಲ್ಲಿ ಹೇಳಿದೆಯಾದರೂ ರುದ್ರಚಾಮುಂಡಿಯ ಕುರಿತು ಪ್ರಚಲಿತವಿರುವ ಐತಿಹ್ಯವೊಂದು ರುದ್ರಚಾಮುಂಡಿ ಭೂತದ ಮೂಲವನ್ನು ತಿಳಿಸುತ್ತದೆ. ಶಿರಾಡಿ ದೈವದ ಪ್ರಧಾನ ಪೂಜಾರಿಯಾಗಿ ರುದ್ರಪ್ಪ ಗೌಡ ಎಂಬವರು ಕಾರ್ಯವೆಸಗುತ್ತಿದ್ದರು. ಶಿರಾಡಿ ದೈವದ ಆಗ್ರಹಕ್ಕೆ ತುತ್ತಾಗಿ ರುದ್ರಪ್ಪ ಗೌಡ ಮಾಯವಾಗಿ ದೈವತ್ವವನ್ನು ಪಡೆದು ರುದ್ರಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾನೆ ಎಂದು ಈ ಐತಿಹ್ಯವು ತಿಳಿಸುತ್ತದೆ. 
ಕೋಮಾರುಚಾಮುಂಡಿcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ನಡಿಬೈಲು, ಇಚಲಂಗೋಡು ಮೊದಲಾದೆಡೆಗಳಲ್ಲಿ ಕೋಮಾರು ಚಾಮುಂಡಿ ಎಂಬ ದೈವಕ್ಕೆ ಆರಾಧನೆ ಇದೆ. ಕೋಮಾರು ಎಂಬಾತ ಇಚಲಂಗೋಡು ಪರಿಸರದ ಬಾಕುಡ ಸಮುದಾಯದ ಹಿರಿಯ ವ್ಯಕ್ತಿ. ವ್ಯಾಘ್ರ ಚಾಮುಂಡಿ ಅವರ ಆರಾಧ್ಯ ದೈವ. ಕೋಮಾರು ಆರಾಧಿಸಿದ ದೈವ ಕೋಮಾರು ಚಾಮುಂಡಿ ಎಂದು ಒಂದು ಐತಿಹ್ಯವು ಹೇಳಿದರೆ ಇನ್ನೊಂದು ಐತಿಹ್ಯದ ಪ್ರಕಾರ ತನ್ನನ್ನು ಆರಾಧಿಸಿದ ಕೋಮಾರುವಿನ ಮೇಲೆ ಅನುಗ್ರಹದಿಂದ ಆತನನ್ನು ಮಾಯಮಾಡಿ ತನ್ನ ಸೇರಿಗೆಗೆ ಚಾಮುಂಡಿ ಭೂತ ಸೇರಿಸಿಕೊಳ್ಳುತ್ತದೆ. ಮಾಯವಾದ ಕೋಮಾರುವೇ ಕೋಮಾರು ಚಾಮುಂಡಿ ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಾನೆ ಎಂದು ಹೇಳಲಾಗಿದೆ.
ಒಲಿಚಾಮುಂಡಿcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಒಲಿ ಚಾಮುಂಡಿಗೆ ತೆಂಗಿನ ಒಲಿಯ (ಎಳೆಗರಿಯ) ಅಲಂಕಾರವಿರುತ್ತದೆ. ಆದ್ದರಿಂದ ಒಲಿಚಾಮುಂಡಿ ಎನ್ನುತ್ತಾರೆ. ಒಲಿ ಚಾಮುಂಡಿಯನ್ನು ಒಲಿಪ್ರಾಂಡಿ ಎಂದೂ ಕರೆಯುತ್ತಾರೆ. ಮಡಪ್ಪಾಡಿಯಲ್ಲಿ ನೂರೆಂದು ಮಲೆದೈವಗಳ ನೇಮ ನಡೆಯುವಾಗ ಒಲಿಪ್ರಾಂಡಿ ದೈವಕ್ಕೆ ನೇಮ ನೀಡುತ್ತಾರೆ. ದೇವರು ಸುಬ್ರಹಣ್ಯದಲ್ಲಿ ಬರುವಾಗ ಎದುರು ಸಿಕ್ಕವನು ಮಾಯಾವಾಗಿ ದೈವಸಾದಿಗೆಯೆಂದು ಆರಾಧನೆ ಪಡೆಯುತ್ತಾನೆ. ದೈವವನ್ನು ಮುಟ್ಟಿದವನು ಮಾಯವಾಗಿ ದೈವನ ಮುಟ್ಟುನಾಯೆ ಎಂಬ ಹೆಸರಿನಲ್ಲಿ ಆರಾಧನೆ ಹೊಂದುತ್ತಾನೆ. ಅಂತೆಯೇ ದೈವವು ಒಬ್ಬನನ್ನು ಒಲಿದು ಮಾಯಮಾಡುತ್ತದೆ.  ಒಲಿದು ಬಂದವನೇ ಒಲಿಪ್ರಾಂಡಿ ಎಂದು ಹೇಳಿ ಈತನನ್ನೇ ಒಲಿಪ್ರಾಂಡಿ, ಒಲಿಚಾಮುಂಡಿ ಎಂದು ಆರಾಧಿಸುತ್ತಾರೆ.
ನಾಗಚಾಮುಂಡಿcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ನಾಗಚಾಮುಂಡಿಗೆ ನಾಗನ ಹೆಡೆಯ ಚಿಹ್ನೆಯುಳ್ಳ ಮುಡಿಯನ್ನು ಕಟ್ಟುತ್ತಾರೆ. ಹಣೆಯಲ್ಲಿ ನಾಗನ ಆಕೃತಿಯನ್ನು ಚಿತ್ರಿಸುತ್ತಾರೆ. ಮುವ್ವ/ಮೂವ/ಮೂವಿಗೆ ವಾತೆ ಎಂಬ ವಿಶಿಷ್ಟ ದೈವಕ್ಕೆ ಸಂಬಂಧಿಸಿದ ಕಿರು ಪಾಡ್ದನವೊಂದರಲ್ಲಿ ಪಂಚಪಾಂಡವರು ಅಡಿಗೆ ಸರಿದರು. ಐದು ಭೂತಗಳು ಮೇಲಕ್ಕೆ ನೆಗೆದವು ಎಂದು ಹೇಳಿದೆ. ನಾಗಚಾಮುಂಡಿ, ಮೂವ, ನಾಗ ಬೆರ್ಮೆರ್, ರಕ್ತೇಶ್ವರಿಗಳು ಈ ಪಂಚಭೂತಗಳು ಎಂದು ಈ ಪಾಡ್ದನವು ತಿಳಿಸುತ್ತದೆ.                

ಪಾಪೆಲುಚಾಮುಂಡಿcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಪಾಪೆಲು ಚಾಮುಂಡಿ ಅನ್ಯಾಯ ಮಾಡಿದವನನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ. ಆದ್ದರಿಂದ ಪಾಪೆಲು ಚಾಮುಂಡಿ ದೈವವು ನೆತ್ತರ ಮುಗುಳಿ ಎಂದೇ ಪ್ರಸಿದ್ಧವಾಗಿದೆ. ಪಾಪೆಲು ಚಾಮುಂಡಿ ದೈವದ ಪಾಡ್ದನದ ಪ್ರಕಾರ ಸಾವಿರ ವರ್ಷಗಳ ಹಿಂದೆ ಘಟ್ಟದ ಮೇಲಿನಿಂದ ಚಾರ್ಮಾಡಿ (ಬಂಗಾಡಿ) ಘಾಟಿಯ ಮೂಲಕ ವ್ಯಾಘ್ರವಾಹಿನಿ ರಕ್ತ ಚಾಮುಂಡಿ ದೈವವು ಇಳಿದು ಬರುತ್ತದೆ. ಲಿಂಗಾಯತ ಮತಕ್ಕೆ ಸೇರಿದ್ದ ರಾಮಸೆಟ್ಟಿ ಎಂಬುವರು ರುದ್ರಾಂಶ ಸಂಭೂತರಾಗಿದ್ದರು. ಅವರ ಜೊತೆಗೆ ವ್ಯಾಘ್ರವಾಹಿನಿ ರಕ್ತ ಚಾಮುಂಡಿಯು ಕಾವು ತ್ರಿಮೂರ್ತಿ ದೇವಸ್ಥಾನಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗೆ ನೆಲೆಸಲು ಯಾವ ಸ್ಥಳ ಯೋಗ್ಯವಾದುದು? ಎಂದು ಕೇಳುತ್ತದೆ. ಆ ಕಾಲದಲ್ಲಿ ಅಪ್ಪೆಟ್ಟಿ ಈರೆಟ್ಟಿ ಒಡೆಯರುಗಳು ಧರ್ಮಿಷ್ಠರಾಗಿದ್ದು, ಸತ್ಯ-ಧರ್ಮ-ನ್ಯಾಯ ನೀತಿಗಳ ಸಾಕಾರ ಮೂರ್ತಿಗಳಾಗಿದ್ದರು. ಆದ್ದರಿಂದ ದೇವರು ವ್ಯಾಘ್ರವಾಹಿನಿ ರಕ್ತಚಾಮುಂಡಿಗೆ ಅಪ್ಪೆಟ್ಟಿ ಒಡೆಯರುಗಳಿಂದ ಕಟ್ಟೆ ಗುಡಿಗಳನ್ನು ನಿರ್ಮಿಸಿಕೊಂಡು ಕಾವು ದೇವರುಗಳಿಗೆ ಪ್ರಧಾನ ಬಂಟರಂತೆ ಇದ್ದು ಗ್ರಾಮಕ್ಕೆ ಗ್ರಾಮಾಧಿ ದೇವತೆ ಎನಿಸಿಕೊಂಡಿರಲು ಆದೇಶವೀಯುತ್ತಾರೆ. ವ್ಯಾಘ್ರವಾಹಿನಿ ರಕ್ತಚಾಮುಂಡಿಯ ಜೊತೆಗೆ ಬಂದ ದೈವಾಂಶ ಸಂಭೂತರಾದ ರಾಮಸೆಟ್ಟಿ ತಮ್ಮ ಯೋಗ ಶಕ್ತಿಯಿಂದ ಮನುಷ್ಯ ರೂಪವನ್ನು ಬಿಟ್ಟು ಬೈರವ ದೇವತೆಯಾಗಿ ವ್ಯಾಘ್ರವಾಹಿನಿ ರಕ್ತಚಾಮುಂಡಿ ದೈವದೊಂದಿಗೆ ಸೇರುತ್ತಾರೆ. ರಾಮಶೆಟ್ಟಿ ಭೈರವ ದೇವತೆಯಾಗಿ ರಕ್ತಚಾಮುಂಡಿ ಸೇರಿಗೆಗೆ ಸಂದು ಪಾಪೆಲು ಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ. ಕೊಕ್ಕಡ, ಕಾವು, ಬೆಳ್ತಂಗಡಿ, ಪರಿಸರದಲ್ಲಿ ಪಾಪೆಲು ಚಾಮುಂಡಿ (ನೆತ್ತರು ಮುಗುಳಿ) ದೈವಕ್ಕೆ ಆರಾಧನೆ ಇದೆ. 
ಆಲಿಚಾಮುಂಡಿ
ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವ ಆಲಿಚಾಮುಂಡಿ ಬಹಳ ಪ್ರಸಿದ್ಧವಾದ ದೈವ. ಮುಸ್ಲಿಂ ಮೂಲವನ್ನು ಹೊಂದಿರುವ ದೈವತವಿದು. ಇಬ್ಬರು ಮಹಿಳೆಯರಿಗೆ ಆಲಿ ಎಂಬಾತ ಕಿರುಕುಳ ನೀಡಿದಾಗ ಮುನಿದ ದೈವ ಚಾಮುಂಡಿಯು ಆತನನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಆತನೇ ಮುಂದೆ ಆಲಿಚಾಮುಂಡಿ ಎಂಬ ಹೆಸರಿನಿಂದ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾನೆ
ಮೊರಾಂಡಿ ,ಅಡಿಮರಾಂಡಿ ಇತ್ಯಾದಿ ಅನೇಕ ದೈವಗಳಿಗೆ  ತುಳುನಾಡಿನಲ್ಲಿ ಚಾಮುಂಡಿ ಹೆಸರಿನೊಂದಿಗೆ ಆರಾಧನೆ ಇದೆ ಈ ಮೊದಲು ಒಂದೇ ದೈವಕ್ಕೆ ಸ್ಥಳಿಯವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ ಎಂದು ಭಾವಿಸಲಾಗಿತ್ತು .ಆದರೆ ನನ್ನ ಕ್ಷೇತ್ರ ಕಾರ್ಯ  ಆಧಾರಿತ ಅಧ್ಯಯನದಲ್ಲಿ ಬೇರೆ ಬೇರೆ ದೈವಗಳು /ಶಕ್ತಿಗಳು ಒಂದೇ ದೈವದ ಹೆಸರಿನಲ್ಲಿ ಆರಾಧನೆ ಪಡೆಯುತ್ತಿವೆ ಎಂದು ಕಂಡು ಬಂದು ಬಂದಿದೆ ಆದ್ದರಿಂದ  ಈ ಬಗ್ಗೆ ಸಮಗ್ರ ಅಧ್ಯಯನದ ಅಗತ್ಯವಿದೆ.
ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿಪೂರ್ವ ಕಾಲೇಜ್ ಬೆಳ್ಳಾರೆ ,ಸುಳ್ಯ ತಾಲೂಕು ದಕ್ಷಿಣ ಕನ್ನಡಜಿಲ್ಲೆ

No comments:

Post a Comment