Wednesday, 7 October 2015

ಸಾವಿರದೊಂದು ಗುರಿಯೆಡೆಗೆ :241 :ತುಳುನಾಡ ದೈವಗಳು -ಬೊಲ್ಲ ಬೈದ್ಯ
 ಹಳದಂಗಡಿ ಅರುವ ಅರಸರಿಗೂ ಬಂಗಾಡಿ ಅರಸರಿಗೂ ಯಾವುದೋ ಕಾರಣಕ್ಕೆಜಗಳವಾಗಿ ಯುದ್ಧ ಸಾರಲಾಯಿತು .ಆಗ ನಾಲ್ಕೂರಿನ ದೇವಣ್ಣ ಅತಿ/ಧಿಕಾರಿ ಯ ನೇತೃತ್ವದಲ್ಲಿ ಅರುವ ಅರಸರು ಸೈನ್ಯ ಕಳುಹಿಸಿದರು ,ಮಣೆಮಜಲು ಬಾಕಿಮಾರಿನಲ್ಲಿ ಯುದ್ಧವಾಗಿ ದೇವಣ್ಣ ಸೋಲುತ್ತಾನೆ.ಯುದ್ಧದಲ್ಲಿ ಬಂಗಾಡಿ ಅರಸರ ದಳವಾಯಿ ದೇವಣ್ಣ ಅತಿಕಾರಿ ಯನ್ನು  ಕೊಲ್ಲುತ್ತಾನೆ .
ದೇವಣ್ಣ ಅತಿಕಾರಿಗೆ ಇಬ್ಬರು ಮಡದಿಯರು ಮತ್ತು ಒಂದು ಸಣ್ಣ ಮಗು ಇರುತ್ತದೆ.

ದೇವಣ್ಣ ನ ಮರಣದ ನಂತರ ಬೊಲ್ಲ ಬೈದ್ಯನಿಗೆ ಸೇನಾನಾಯಕ ಸ್ಥಾನವನ್ನು ಅರಸನು ಕೊಡುತ್ತಾನೆ
""ಬೊಲ್ಲ ಬೈದ್ಯನು ವಂಶ ಪಾರಂಪರ್ಯವಾಗಿ ನಾಯಕನಾಗಿದ್ದನು.. ಅರುವ ಆಳದಂಗಡಿ ಅರಸರು ಬೊಲ್ಲ ಬೈದ್ಯನನ್ನು ಕರೆಸಿ ಯುದ್ಧದ ವಿಚಾರ ವಿನಿಮಯ ಮಾಡುತ್ತಾರೆ. ಸೇನಾ ನಾಯಕ ಪಟ್ಟವನ್ನು ಬೊಲ್ಲ ಬೈದ್ಯನಿಗೆ ಕೊಟ್ಟು ಯುದ್ಧಕ್ಕೆ ಅಪ್ಪಣೆ ನೀಡುತ್ತಾರೆ  . ಯುದ್ಧಕ್ಕೆ ಹೊರಡುವಾಗ ಸೇನಾಧಿಪತಿ ಬೊಲ್ಲ ಬೈದ್ಯನಿಗೆ ಸಹಾಯಕ್ಕಾಗಿ ತಮ್ಮ ಆರಾಧ್ಯ ದೈವ ಲೆಕ್ಕೇಸಿರಿಯ ಕಂಚಿನ ಮೂರ್ತಿಯನ್ನು ಅರಮನೆಯ ಉತ್ತರ ದಿಕ್ಕಿನ ಪಟ್ಟ ಓಲಗ ಶಾಲೆಯಲ್ಲಿ ನೀಡುವರು .ಆಗ ಅವನಿಗೆ ನಿಲ್ಲಲಾಗದಷ್ಟು ಆವೇಶ ಬರುತ್ತದೆ"ಎಂದು ಸಂಕೇತ ಪೂಜಾರಿ  ಅವರುಬರೆದಿದ್ದಾರೆ .
ಬೊಲ್ಲ ಬೈದ್ಯ ಕಾರ್ಕಳ ಭೈರರಸನ ಸೇನಾಧಿಪತಿಯಾಗಿದ್ದನು ಎಂದು ರಮನಾಥ ಕೋಟೆಕಾರ್ ಬರೆದಿದ್ದಾರೆ .

ಮರು ದಿನ ಯುದ್ಧಕ್ಕೆ ಹೊರಡುತ್ತಾನೆ ಬೊಲ್ಲ ಬೈದ್ಯ ,ಅವನನ್ನು ಬೀಳ್ಕೊಡಲು ಅನೇಕರು ಬಂದಿರುತ್ತಾರೆ.ಅವರಲ್ಲಿ

ದೇವಣ್ಣ ಅಧಿಕಾರಿಯ ಹೆಂಡತಿಯರು ಮತ್ತು ಸಹೋದರಿಯರು ಬಂದಿದ್ದರು .

ಬಂಗಾಡಿಯ ಅರಸರ ದಳವಾಯಿಯ ತಲೆಕಡಿದು ತಂದರೆ ತಮ್ಮ ವಶದಲ್ಲಿರುವ ಏಳಾಡಿಯ ನಾಲ್ಕೂರು ಗುತ್ತು, ಕುಲ್ಲಂಗಾಯಿ, ಕೊಡಿಬಾಲೆ, ಹಿಂಗಾಣಿ, ತಿಂತ್ಯ, ಏಳ್ಕಾಜೆ ಹೀಗೆ ಏಳು ಗುತ್ತುಗಳ ಭೂಮಿಯನ್ನು ಕೊಡುವುದಾಗಿ ಮಾತು ನೀಡುತ್ತಾರೆ .

ರಕ್ತೇಶ್ವರಿ ದೈವದ ಅನುಗ್ರಹದಿಂದ ಅವನು ಯುದ್ಧದಲ್ಲಿ ಗೆಲುವು ಸಾಧಿಸುತ್ತಾನೆ .ಬಂಗಾಡಿ ಅರಸರ ತಲೆ ಕಡಿಯುತ್ತಾನೆ. ದಳವಾಯಿಯ ತಲೆ ಕತ್ತರಿಸುತ್ತಾನೆ.

"ಜಯಗಳಿಸಿದ ಬೊಲ್ಲ ಬೈದ್ಯನು ದಳವಾಯಿಯ ರುಂಡವನ್ನು ಹಿಡಿದುಕೊಂಡು ಬಂದು ನಾಲ್ಕೂರು ಬೀಡಿನ ಮುಖ್ಯ ಪಡಿಪಿರೆಯಲ್ಲಿ ಇಡುತ್ತಾನೆ. ಅಷ್ಟು ಹೊತ್ತಿಗೆ ಮನೆಯ ಎಲ್ಲಾ ದ್ವಾರಗಳನ್ನು ಮುಚ್ಚಲಾಗಿತ್ತು . ಆತ ಎಷ್ಟು ಕರೆದರೂ ಯಾರು ಹೊರ ಬರುವುದಿಲ್ಲ. ಹೇಮವತಿ ಹೇಳುತ್ತಾಳೆ "ತಾನು ಒಲೆಯಲ್ಲಿ ಹಾಲು ಬಿಸಿ ಮಾಡುತ್ತಿದ್ದೇನೆ. ಮಡಿಲಲ್ಲಿ ಮಗು ಇದೆ, ನನಗೆ ಹೊರಬರಲು ಆಗುವುದಿಲ್ಲವೆಂದು" ಎಂದು . ಆಹ ಬೊಲ್ಲ ಬೈದ್ಯ ಸಾಕಿದ ಅಂಕದ ಕೋಳಿಯ ತಲೆಯನ್ನು ಕತ್ತಿಯಿಂದ ಕಡಿದು ಮನೆಯ ಅಂಗಳಕ್ಕೆ ಬಿಸಾಡುತ್ತಾನೆ. ಇದರಿಂದ ಹೆದರಿದ ಹೆಗ್ಗಡತಿಯರು, ಬೊಲ್ಲ ಬೈದ್ಯ ಸ್ವಲ್ಪ ತಾಳು ಒಲೆಯಲ್ಲಿರುವ ಹಾಲನ್ನು ಕೆಳಗೆ ಇಳಿಸುತ್ತೇನೆ, ಮಡಿಲಲ್ಲಿ ಇರುವ ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳಿತ್ತೇನೆ ಎನ್ನುತ್ತಾರೆ. ದೈವದ ಆವೇಶದಿಂದ ಬೊಲ್ಲ ಬೈದ್ಯ ಮನೆ ಪ್ರವೇಶಿಸಿದಾಗ ಕಿರು ಬಾಗಿಲಿನ ಮೂಲಕ ಹೆಗ್ಗಡತಿಯರು ಓಡಿಹೋಗುತ್ತಾರೆ, ಹಾಗೆ ಹೋಗುವ ಸಂದರ್ಭದಲ್ಲಿ ಮಣ್ಣು ಮುಟ್ಟಿ ಶಾಪ ನೀಡುತ್ತಾರೆ."ಒಂಜೆನ್ ಇಪ್ಪಡ್ ರಡ್ಡ್ ತಪ್ಪಡ್ ,ಕಟ್ಟಿನಲ್ಲ್ ಕರೆವಡ, ಬಿತ್ತನಲ್ಲ್ ಕೊಡಿಪಡ, ಅಂಡೆ ಪತ್ತ್ ಬೊರಿಯಡ, ಗಿಂಡೆ ಪತ್ತ್ ಪರಡ, (ಸಂತಾನ ಒಂದೆ ಇರಲಿ, ಎರಡಾದರೆ ತಪ್ಪಲಿ, ಕಟ್ಟಿದ ಕರು ಕರೆಯದಿರಲಿ, ಬಿತ್ತಿದ ಬೀಜ ಮೊಳಕೆ ಬಾರದಿರಲಿ, ದನದ ಹಾಲು ಕರೆಯದಂತಾಗಲಿ, ಕರೆದ ಹಾಲು ಕುಡಿಯದಂತಾಗಲಿ) ಎಂದು ಮಣ್ಣು ಮುಟ್ಟಿ ಶಾಪ ನೀಡಿ ಏಳ್ಕಾಜೆಗೆ ಹೋಗುತ್ತಾರೆ. ಎಳ್ಕಾಜೆ ಗುತ್ತಿನ ಯಜಮಾನ ಬೊಲ್ಲ ಬೈದ್ಯನ ಸಹೋದರ ದೇರೆ ಬೈದ್ಯ, ಲೆಕ್ಕೇಸಿರಿ ದೈವವು ದೇರೆ ಬೈದ್ಯನ ಕನಸಲ್ಲಿ ಬಂದು ಮಾತಿಗೆ ತಪ್ಪಿ ನಡೆದ ಹೆಗ್ಗಡತಿಯರು ಎಳ್ಕಾಜೆಗೆ ಬರುವ ವಿಷಯ ಮೊದಲೇ ತಿಳಿಸುತ್ತದೆ.ಆದುದರಿಂದ ಎಳ್ಕಾಜೆಯಲ್ಲಿ ಇವರಿಗೆ ಬಾಗಿಲು ತೆರೆಯುವುದಿಲ್ಲ. ಅಲ್ಲಿ ಅವರಿಗೆ ಪ್ರವೇಶ ಸಿಗದ ಕಾರಣ ಅವರು ದೇಶಾಂತರ ಹೋಗುತ್ತಾರೆ.ನಂತರ ಬೊಲ್ಲ ಬೈದ್ಯ ಮತ್ತು ದೇರೆ ಬೈದ್ಯ ಒಟ್ಟು ಸೇರಿ ನಾಲ್ಕೂರು ಗುತ್ತಿಗೆ ಸಂಬಂಧಪಟ್ಟ ಹೆಗ್ಗಡತಿಯರು ವಾಗ್ದಾನ ಮಾಡಿದ ಜಮೀನುಗಳನ್ನು ಅರಸರ ಸಹಾಯದಿಂದ ಪಡೆಯುತ್ತಾರೆ. ನಂತರ ಗುತ್ತಿನಲ್ಲಿ ಲೆಕ್ಕೇಸಿರಿ, ನಾಗಬೆಮ್ಮೆರ್, ಕಂಚಿನಡ್ಕ ಲೆಕ್ಕೇಸಿರಿ, ಮೂಜುಲ್ನಾಯ ಮುಂತಾದ ದೈವಗಳನ್ನು ಗುಡಿ ಕಟ್ಟಿ ಆರಾಧಿಸುತ್ತಾರೆ."ಎಂದು ಸಂಕೇತ ಪೂಜಾರಿ ಯವರು ಹೇಳಿದ್ದಾರೆ.


ನಂತರ ಬೊಲ್ಲ ಬೈದ್ಯನ ದತ್ತು ಮಗಳಿಗೆ ಸಂತನವಾಗುದಿಲ್ಲ ಆಗ ಅವನು ರಕ್ತೇಶ್ವರಿ ದೈವಕ್ಕೆ ಹರಿಕೆ ಹೇಳುತ್ತಾನೆ .ಹರಿಕೆ ಹೇಳಿದ ನಂತರ ಹುಟ್ಟಿದ ಮಗುವೆ ಕೊಡಿ ಬಾಲೆ ಎಂದು ಸಂಕೇತ ಅವರು ತಿಳಿಸಿದ್ದಾರೆ.
ಹರಿಕೆ ತೀರಿಸುವ ಮೊದಲೇ ಬೊಲ್ಲ ಬೈದ್ಯ ಸಾಯುತ್ತಾನೆ ಮುಂದೆ ಅವನ ಮನೆ ಮಂದಿ ಹರಿಕೆಯನ್ನು ಸಲ್ಲಿಸುತ್ತಾರೆ 
ಹೀಗೆ ಅಸಮಾನ್ಯ ಸಾಹಸ ಮೆರೆದ ಬೊಲ್ಲ ಬೈದ್ಯ ದೈವತ್ವ ಪಡೆದು ಅಲ್ಲಿ ಆರಾಧನೆ ಪಡೆಯುತ್ತಾನೆ .

ಇಲ್ಲಿ ಪ್ರತೀ ವರ್ಷ ಕೋಲ ನಡೆಯುತ್ತಿತ್ತು. ಪ್ರಸ್ತುತ ಕೋಲ ನಡೆಯದೆ 27 ವರ್ಷಗಳೇ ಆಗಿವೆ. ಇಲ್ಲವೇ ಸಮೀಪದ ಗಡಿಪಾಡಿ ಸ್ಥಳದಲ್ಲಿ ಭಂಡಾರ ಹೋಗಿ ಫೆಬ್ರವರಿ 7-8-9 ರಂದು ನೇಮ ನಡೆಯುತ್ತದೆ. ಮೊದಲನೇ ದಿನ ದೊಂಪದ ಬಲಿ ನೇಮ, ಎರಡನೇ ದಿನ ನಡು ನೇಮ, ಮೂರನೇ ದಿನ ಮಾರಿ ಪೂಜೆ ನಡೆಯುತ್ತದೆಎಂದು ಸಂಕೇತ ಪೂಜಾರಿ ಅವರು ಹೇಳಿದ್ದಾರೆ 

ಮಾಹಿತಿ ಕೃಪೆ :ಸಂಕೇತ ಪೂಜಾರಿ

 ಬಿಲ್ಲವರ ಗುತ್ತು ಮನೆತನಗಳು(c) ಸಂಕೇತ್ ಪೂಜಾರಿ.

No comments:

Post a Comment