Saturday, 10 October 2015

ಸಾವಿರದೊಂದು ಗುರಿಯೆಡೆಗೆ :245:ತುಳುನಾಡ ದೈವಗಳು :ಅಮೆತೋಡು ಆನೆ ಬೈದ್ಯ/ಕಿನ್ನಿ ಮರ್ದ ಬೈದ್ಯ (c)ಡಾ.ಲಕ್ಷ್ಮೀ ಜಿ ಪ್ರಸಾದ


ಆಮೆ ತೋಡು ಮನೆತನದ ಪ್ರಸಿದ್ಧ ನಾಟಿ ವೈದ್ಯ ಆನೆ ಬೈದ್ಯ  ದೈವತ್ವ ಪಡೆದು ಅರಾಧಿಸಲ್ಪಡುತ್ತಾನೆ.ಈತನ ಮೂಲ ಹೆಸರು ಬದ್ಧ ಬೈದ್ಯ ಎಂದು .
"ಮಾಯಿಪ್ಪಾಡಿ ಅರಸನ ಅರಮನೆಯ ಪಟ್ಟದ ಆನೆಗೆ ಏನೋ ರೋಗ ಉಂಟಾಗುತ್ತದೆ .ಯಾರಿಂದಲೂ ಆನೆಯ ರೋಗವನ್ನು ಗುಣಪಡಿಸಲು ಆಗುವುದಿಲ್ಲ ,ಆಗ ಒಳ್ಳೆಯ ನಾಟಿ ವೈದ್ಯನಾಗಿ ಪ್ರಸಿದ್ಧಿ ಪಡೆದ ಬದ್ಧ ಬೈದ್ಯನಿಗೆ. ಅರಸ ಕರೆಯೋಲೆ ಕಳುಹಿಸುತ್ತಾನೆ .ಅರಸನ ಕರೆಗೆ ಓಗೊಟ್ಟು ಬಂದ ಬದ್ಧ ಬೈದ್ಯ ತನ್ನ ಮಾತ್ರಿಕ ಶಕ್ತಿ ಹಾಗೂಗಿಡಮೂಲಿಕೆಗಳ  ಔಷಧಗಳನ್ನು ನೀಡಿ ಮರಣ ಶಯ್ಯೆಯಲ್ಲಿ ಮಲಗಿದ್ದ ಆನೆಯನ್ನು ಗುಣ ಪಡಿಸುತ್ತಾನೆ.ಆಗ ಪ್ರಸನ್ನನಾದ ಅರಸ ಬದ್ಧ ಬೈದ್ಯನಿಗೆ ಆನೆ ಬೈದ್ಯ ಎಂಬ ಬಿರುದು ನೀಡಿ ಗೌರವಿಸಿ ಉಡುಗೊರೆ ನೀಡಿ ಕಳುಹಿಸುತ್ತಾನೆ.
ಅಮೆತೋಡು ಮನೆತನ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿದೆ .ಇದು ಮೂಲತಃ ಕುಂಬಳೆ ಸೀಮೆಯ ಮೊಗ್ರಾಲ್ ಕೊಟ್ಯದ ಮನೆಯಾಗಿತ್ತು .ಮುಂದೆ ಕಾಲಾಂತರದಲ್ಲಿ ಮನೆ ವಿಭಾಗವಾಗಿ ಒಂದು ಪಾಲಿನವರು ಆಮೆ ತೋಡಿನಲ್ಲಿ ನೆಲೆಯಾದರು .ಅದು ಮುಂದೆ ಪ್ರಸಿದ್ಧವಾದ ಬಿಲ್ಲವರ ಆಮೆತೋಡು ತರವಾಡು ಮನೆತನವಾಯಿತು"ಎಂಬ ಮಾಹಿತಿಯನ್ನು ರಮಾನಾಥ ಕೋಟೆಕಾರ್ ಅವರು ನೀಡಿದ್ದಾರೆ.

ಆಮೆ ತೋಡು ಆನೆ ಬೈದ್ಯನಿಗೆ ಸಂಬಂಧಿಸಿದಂತೆ ಅನೇಕ ಕಾರಣಿಕಗಳು ಪ್ರಚಲಿತವಿವೆ .ಕುಂಬಳೆ ಕಲ್ಕುರ ಕಡಮಣ್ಣಾಯ ಮನೆಯವರು ಆರಾಧಿಸುತ್ತ ಇದ್ದ ಮಂತ್ರ ಗುಳಿಗನು ಒಲಿದು ಆರಾಧ್ಯ ದೈವವಾಯಿತು .ಮಲೆಯಾಳ ಭಾಷೆಯ ಮಂತ್ರಗಳನ್ನೂ ಪಿಲಾಯ ಜಾತಿಯವರಿಂದ ಪಿಲಾಯ ಮಂತ್ರದ ಸಿದ್ಧಿಯೂ ಆಯಿತು.
ಮೌನಿಯಾಗಿದ್ದ ಒಬ್ಬ ಋಷಿಯನ್ನು ಮಾತನಾಡಿಸಿ ,ತನ್ನ ಆರಾಧ್ಯ ದೈವ ಮಂತ್ರ ಗುಳಿಗನನ್ನು ನೆನೆದು ತನ್ನ ಮಂತ್ರ ಶಕ್ತಿಯಿಂದ ಕಣ್ಣು ಮುಚ್ಚ್ಚಿ ಅಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಿ,ಬಿಳಿಕಾಗೆಯನ್ನು ತೋರಿಸಿ ಮರದ ಹಸಿ ಸೋಗೆಯಿಂದ ತೊಟ್ಟಿ ಹೆಣೆದು ಅದರಿಂದ ಸಮುದ್ರದ ಮರಳನ್ನು ತಂದು ಹಾಕಿದ ಸವಾಲುಗಳನ್ನು ಗೆದ್ದು  ,ಆ ಋಷಿಮುನಿಯ ಶಿಷ್ಯತ್ವ ಪಡೆದು ಮಂತ್ರ ತಂತ್ರಗಳಲ್ಲಿ ಪಾರಂಗತನಾಗುತ್ತಾನೆ.ಜಪಮಾಲೆಯನ್ನು ಪಡೆಯುತ್ತಾನೆ .
ಅದೇ ರೀತಿ ತನ್ನ ಮಾಂತ್ರಿಕ ಶಕ್ತಿಯಿಂದ ಕೆರೆ ತೋಡಿ ಅದರ ನೀರನ್ನು ಬಗ್ಗಿ ನೋಡಿದ ಮಡದಿಯ ಒಂದು ಕಣ್ಣು ಹೋಗುತ್ತದೆ .
ಅದೇ ರೀತಿ ಅಲ್ಲಿನ ಇನ್ನೋರ್ವ ಮಂತ್ರವಾದಿ ಕಡಮಣ್ಣಾಯ ಮತ್ತು ಇವನಿಗೆ ಸ್ಪರ್ಧೆ ಉಂಟಾಗುದು ಇತ್ಯಾದಿ ಅನೇಕ ಐತಿಹ್ಯಗಳು ಪ್ರಚಲಿತವಿರುವ ಬಗ್ಗೆ ರಮಾನಾಥ ಕೋಟೆಕಾರ್ ಬರೆದಿದ್ದಾರೆ.
ಒಟ್ಟಿನಲ್ಲಿ ಪರಂಪರೆಯಿಂದ ಓರ್ವ ಚತುರ  ವೈದ್ಯನಾಗಿದ್ದ  ಬದ್ಧ ವೈದ್ಯ ತನ್ನ ಚಾಣಕ್ಷತೆಯಿಂದ ಮಂತ್ರಕಲಿತು ಪ್ರಸಿದ್ಧ ಮಂತ್ರವಾದಿಯೂ ಆಗಿ ಅರಸನ ಆನೆಯನ್ನು ಗುಣಪಡಿಸಿ ಗೌರವ ಪಡೆದು ವಿಖ್ಯಾತನಾಗಿ ಮರಣಾನಂತರ ದೈವತ್ವ ಪಡೆದು ಅಮೆ ತೋಡು ಆನೆ ಬೈದ್ಯ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ.
ಈತ ಮಾಂತ್ರಿಕ ಶಕ್ತಿಯಿಂದ ತೋಡಿದ ಬಾವಿ ಇಂದಿಗೂ ಪವಿತ್ರವಾಗಿ ಪರಿಗಣಿಸಲ್ಪಟ್ಟು ಅಲ್ಲಿದೆ
ಅಲ್ಲದೆ ಆನೆ ಗುಣವಾಗಿ ಮೊಣಕಾಲೂರಿ ನೀರು ಕುಡಿಯಲು ಬಗ್ಗಿದಾಗ ಜಾರಿದ ಕಲ್ಲು ಈಗ ಕೂಡ ಅರಮನೆಯ ಸಮೀಪ ಇದೆ ಎಂದು ರಮಾನಾಥ ಕೋಟೆಕಾರ್ ಹೇಳಿದ್ದಾರೆ .

 ಮಾಹಿತಿ ಮೂಲ /ಆಕರ ಗ್ರಂಥ :ಬಿಲ್ಲವರು -ಒಂದು ಅಧ್ಯಯನ :(c)ರಮಾನಾಥ ಕೋಟೆಕಾರ್


No comments:

Post a Comment