Friday, 23 October 2015

ಸಾವಿರದೊಂದು ಗುರಿಯೆಡೆಗೆ:249-250 :ತುಳುನಾಡ ದೈವಗಳು -ಉಮ್ಮಚ್ಚಿ/ಐಸಾಬಿ/ಐಸಮ್ಮ ಮತ್ತು ಯೋಗ್ಯೆರ್ ನಂಬಿಡಿ (c)ಡಾ.ಲಕ್ಷ್ಮೀ ಜಿ ಪ್ರಸಾದ

                    

ಅಂತೂ ಇಂತೂ ಎಲ್ಲರ ಬೆಂಬಲಗಳೊಂದಿಗೆ 250 ದೈವಗಳ ಬಗ್ಗೆ ಬರೆದೆ

  ಸುಮಾರು 200 ದೈವಗಳ ಮಾಹಿತಿ ನನ್ನ ಸ್ವಂತ ಶೋಧನೆಯ  ಫಲಿತ ಎಂಬ    ಹೆಮ್ಮೆ/ಸಂತಸ  ನನಗಿದೆ .

ಒಂದೂ ವರೆ ವರ್ಷ ಮೊದಲು ನಾನು ಈ ಸರಣಿಯನ್ನು ಆರಂಭಿಸಿದೆ ಅದಕ್ಕೆ ಪ್ರೇರಣೆ ಕೊಟ್ಟವರು ನನ್ನ ಶೋಧನೆಯನ್ನೂ ಸಂಶೋಧನೆ ಎಂದು ಪರಿಗಣಿಸಿ ತುಂಬು ಪ್ರೋತ್ಸಾಹ ನೀಡಿದವರು .ತುಳು ಸಾಹಿತಿ ವಿದ್ವಾಂಸರಾದ ಡಾ.ವಾಮನ ನಂದಾವರ ಅವರು .
ನನ್ನ ಆಸಕ್ತಿಯ ಪೊಡಿ ದೈವಗಳ /ಸೇರಿಗೆ /ಉಪ ದೈವಗಳ ಶೋಧನೆಯನ್ನು ಮೆಚ್ಚ್ಚಿ ಬೆಂಬಲಿಸಿದವರು ಡಾ.ಪುರುಷೋತ್ತಮ ಬಿಳಿಮಲೆ .ಹಾಗೂ ಕೇಶವ ಕುಡ್ಲ ಅವರು
ಮಾಹಿತಿ ಸಂಗ್ರಹದಲ್ಲಿ ಕೈಜೋಡಿಸಿದವರು ಸಂಕೇತ ಪೂಜಾರಿ ,ಶಂಕರ್ ಕುಂಜತೂರು ಶರಣ್ ಶೆಟ್ಟಿ ,ನಾಗರಾಜ ಭಟ್ ಬಂಟ್ವಾಳ ,ಶ್ರೀನಿವಾಸ ಪ್ರಭು, ನಾಗರಾಜ ಕೋಟ್ಯಾನ್ ,ವಿಜಯ್ ,ಜೀವಿತ್ ಶೆಟ್ಟಿ ,ಶವಿನ್ ಬಲ್ಯಾಯ ,ಯಶ್ವಿನ್ ,ಶಾಂತಾ ಕುಮಾರಿ ,ಮಹೇಶ್ ,ರೋಹಿತ್ ಕುಮಾರ್ ,ಹರ್ಷ ರಾಜ ಅದ್ಕ ದೀಪಕ್ ಕುಮಾರ್ ಗಣೇಶ್ ಮಂಗಳೂರು ,ಗಣೇಶ ಬೆಳ್ತಂಗಡಿ ,ರಾಘವೇಂದ್ರ ನಾವುಡ ,ಗಣೇಶ ಭಟ್ ,ಪ್ರವೀಣ್ ಸಾಲ್ಯಾನ್ ,ಶೈಲೇಶ್ ,ಲೋಕೇಶ್ ರೈ ಕಡಬ ,ವಿಕೆ ಕಡಬ ,ವೆಂಕಟರಾಜ ಕಬೆಕೋಡುದೀಕ್ಷಿತ್ ರೈ ಎನ್ಮುರು ಶಶಾಂಕ್ ನೆಲ್ಲಿತ್ತಾಯ ,ನವೀನ ಕುಮಾರ ಪಾಲ್ತಾಡಿ ರಾಮಕೃಷ್ಣ ಆಚಾರ್ ,ಪ್ರಸಾದ್ ಐರೋಡಿ ಹೀಗೆಇನ್ನೂ   ಅನೇಕರು
ನಿರಂತರವಾಗಿ ಹಂಚಿಕೊಂಡು ತುಳು ಸಂಸ್ಕೃತಿ ಪ್ರಸರಣದಲ್ಲಿ ಕೈಜೋಡಿಸಿದವರು ಅನೇಕರು

ಎಲ್ಲಕ್ಕಿಂತ ಹೆಚ್ಚು ಇದನ್ನು ಆರಂಭಿಸುವಾಗ ಜನ ಇದನ್ನು ಓದಿಯಾರು ಎಂಬ ನಂಬಿಕೆ ನನಗೆ ಇರಲಿಲ್ಲ ,ಜೊತೆಗೆ ಸಾವಿರದ ಒಂದು ಬಿಡಿ ನೂರು ದೈವಗಳ ಬಗ್ಗೆಯಾದರೂ ಬರೆದೇನು ಎಂಬ ವಿಶ್ವಾಸ ಕೂಡ ನನ್ನಲ್ಲಿರಲಿಲ್ಲ ಆದರೂ ಒಂದು ಹುಚ್ಚು ಧೈರ್ಯದಿಂದ ಆರಂಭಿಸಿದೆ .ಇದಕ್ಕೂ ಹಿಂದೆ ಸುಮಾರು 30 -40 ದೈವಗಳ ಬಗ್ಗೆ ಕೆಂಡ ಸಂಪಿಗೆಗೆ ಅಬ್ದುಲ್ ಬಷೀರ್ ಅವರ ಪ್ರೇರಣೆಯಿಂದ ಬರೆದಿದ್ದೆ ಹಾಗಾಗಿ ಅದನ್ನು ಸೇರಿಸ್ಕೊಂಡು ಮುಂದುವರಿಸಿದೆ .
ಬರೆಯುತ್ತ ಹೋದಂತೆ ಇದು ಅಷ್ಟು ಸುಲಭದ ವಿಚಾರವಲ್ಲ ಎಂದು ಅನೇಕ ಬಾರಿ ಅನಿಸಿ ಕೈ ಬಿಡೋಣ ಸರಣಿ ನಿಲ್ಲಿಸೋಣ ಎಂದು ಕೊಂಡಿದ್ದೆ ಆದರೆ ಅಲ್ಲೆಲ್ಲ ನನ್ನನ್ನು ಮತ್ತೆ ಬರೆಯಲು ಸಂಶೋಧಿಸಲು ಮತ್ತೆ ಮತ್ತೆ ಉತ್ಸಾಹ ತುಂಬಿದ್ದು ಮುಖ ಪುಟ ಬಂಧುಗಳ ನಿರಂತರ ಪ್ರೋತ್ಸಾಹ
ಇಂದು ನನ್ನ ಬ್ಲಾಗ್ ಲಕ್ಷಕ್ಕಿಂತ ಹೆಚ್ಚು  ಓದುಗರನ್ನು ತಲುಪಿ ಮುನ್ನಡೆಯಲು ನಿಮ್ಮೆಲ್ಲರ ಬೆಂಬಲವೇ ಕಾರಣ ವಾಗಿದೆ ಆದರೆ ಇದರ ಯಶಸ್ಸು ಕೇವಲ ನನ್ನದಲ್ಲ ,ನಿರಂತರ ಬೆಂಬಲಿಸಿದ ನಿಮ್ಮೆಲ್ಲರದು
ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು

ಸಾವಿರದೊಂದು ಗುರಿಯೆಡೆಗೆ:-250 : ಉಮ್ಮಚ್ಚಿ

 ನನ್ನ ಸಂಶೋಧನೆಯ ಆರಂಭದ ದಿನಗಳಲ್ಲಿಯೇ ನಾನು ಅನೇಕ ಪ್ರದೇಶಗಳಲ್ಲಿ ಒಂಜಿ ಕುಂದ ನಲ್ಪ ಭೂತೋಳ ಕೊಳವನ್ನು ರೆಕಾರ್ಡ್ ಮಾಡಿದ್ದೆ .ಎಲ್ಲಿಯೂ ಈ ಮೂವತ್ತೊಂಬತ್ತು ದೈವಗಳ ಹೆಸರು ಸಿಗುತ್ತಿರಲಿಲ್ಲ ಇಲ್ಲಿ .ಕೋಮರಾಯ.,ಪಂಜುರ್ಲಿ ,ಗುಳಿಗ ,ಬಬ್ಬರ್ಯ ಮೊದಲಾದ ಏಳು ಎಂಟು ದೈವಗಳಿಗೆ ಭೂತ ಕಟ್ಟಿ ಪಾಡ್ದನ ಹೇಳಿ ನುಡಿಗಟ್ಟು ನೀಡಿ ಆರಾಧನೆ ಮಾಡುತ್ತಾರೆ ಕುಲೇ ಮಾಣಿ ,ಮಾನೆಚ್ಚಿ, ಉಮ್ಮಚ್ಚಿ ,ಕಾಜು ಮದಿಮಾಲ್ ಕುಲೆಮೊದಲಾದ ಕೆಲವು ಹೆಸರುಗಳನ್ನೂ ಹೇಳಿ ಸಾಂಕೇತಿಕವಾಗಿ ಆರಾಧಿಸುತ್ತಾರೆ.ಇನ್ನು ಉಳಿದ ದೈವಗಳ ಹೆಸರು ಕೂಡ ಕಳೆದು ಹೋಗಿವೆ ಎನ್ನುವುದು ನಿಜಕ್ಕೂ ಖೇದಕರ ವಿಚಾರ ಆಗಿದೆ .
ಇರಲಿ ಉಮ್ಮಚ್ಚಿ ಮತ್ತು ಮಾನೆಚ್ಚಿ ಎಂಬ ಎರಡು ದೈವಗಳಿಗೆ ಈ ಒಂಜಿ ಕುಂದ ನಲ್ಪ ದೈವಗಳ ಸಮೂಹ ಆರಾಧನೆಯಲ್ಲಿ ಆರಾಧನೆ ಇರುವ ಬಗ್ಗೆ ಭೂತ ಕಟ್ಟುವ ಕಲಾವಿದ ಅಪ್ಪಣ್ಣು  ಅವರು ತಿಳಿಸಿದ್ದರು.ಮಾನೆಚ್ಚಿಗೆ ಬ್ಯಾರ್ದಿ ಭೂತ ಎಂಬ ಇನ್ನೊಂದು ಹೆಸರಿದ್ದು ಈ ದೈವತದ ಬಗ್ಗೆ ಈ ಹಿಂದೆಯೇ ಬರೆದಿದ್ದೇನೆ .ಉಮ್ಮಚ್ಚಿ ದೈವ ಕೂಡ ಓರ್ವ ಮುಸ್ಲಿಂ ಮಹಿಳೆ ಅವಳನ್ನು ಯಾರೋ ಒಬ್ಬಾತ ಒನಕೆಯಿಂದ ಕುಟ್ಟಿ ಕೊಲ್ಲುತ್ತಾನೆ ನಂತರ ಆಕೆ ದೈವವಾಗಿ ನೆಲೆ ನಿಲ್ಲುತ್ತಾಳೆ ಎಂಬ ಮಾಹಿತಿಯನ್ನು ಅಪ್ಪಣ್ಣು ಅವರು ತಿಳಿಸಿದ್ದರು ,ಆದರೆ ಯಾಕೆ ಯಾರು ಎಲ್ಲಿ ಎಂಬ ಬಗ್ಗೆ ಮಾಹಿತಿ ಅವರಲ್ಲಿ ಇರಲಿಲ್ಲ
 .ಇತ್ತೀಚೆಗೆ  ಕೇಳು ಮಾಸ್ತರ್ ಅಗಲ್ಪಾಡಿ ಅವರು ಬರೆದ ಕೇರಳದ ತೆಯ್ಯಂ ಎಂಬ ಕೃತಿಯಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿತು .
ಈ ಕೃತಿಯಲ್ಲಿ ಮಾನೆಚ್ಚ್ಚಿ ಮತ್ತು ಉಮ್ಮಚ್ಚ್ಚಿ ಯಾರನ್ನು ತೆಯ್ಯ್ಯಂ ಎಂದು ಹೇಳಲಾಗಿದೆ .ಆದರೆ ಇವರುಗಳಿಗೆ ವರ್ಕಾಡಿ ,ಬದಿಯಡ್ಕ ,ಮೊದಲಾದ ತುಳು ಪರಿಸರದಲ್ಲಿ ಕೂಡ ಆರಾಧನೆ ಇದೆ .ಇಲ್ಲೆಲ್ಲಾ ಉಮ್ಮಚ್ಹ್ಸಿಗೆ ಸೇರಿಗೆ ದೈವವಾಗಿ ಉಪದೈವವಾಗಿ ಆರಾಧನೆ ಇದೆ .ಆದರೆ" ನೀಲೇಶ್ವರದ ಮಡಿಕೈ ನಾಡಿನ ಕಣಿ ಕೂಲಂ ಹಾಗೂ  ಕಕ್ಕಾಟ್ ಕೂಲಂ ಎಂಬಲ್ಲಿ ಉಮ್ಮಚ್ಚಿ ತೆಯ್ಯಂ ಎಂಬ ಮುಸ್ಲಿಂ ದೈವವನ್ನು ಪ್ರಧಾನವಾಗಿ ಕಟ್ಟಿ ಆಡಿಸಲಾಗುತ್ತದೆ "ಎಂದು ಕೇಳು ಮಾಸ್ತರ್ ಅಗಲ್ಪಾಡಿ ಅವರು ಹೇಳಿದ್ದಾರೆ .

 ಹಿಂದೆ ಅರಬ ಸಾಹುಕಾರರು  ಕರಾವಳಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದರು .ಇಂಥ ಒಬ್ಬ ಅರಬ್ ಯುವಕನನ್ನು ಪ್ರೇಮಿಸಿದ ಕೋಲತ್ತಿರಿ ಅರಸನ ಹಿರಿಯ ಮಗಳು ಅವನನ್ನು ಮದುವೆಯಾಗುತ್ತಾಳೆ..ಕೋಲತ್ತಿರಿ ಅರಸನು ತನ್ನ ಮಗಳಿಗೆ ಮಾದಾಯಿ ಗ್ರಾಮದಲ್ಲಿ ಒಂದು ಅರಮನೆ ಕಟ್ಟಿಸಿ ಕೊಟ್ಟು ಅವಳ ಸಂತತಿಯವರಿಗೆ ತನ್ನ ಸೇನಾಪತಿ ಸ್ಥಾನ ಕೊಟ್ಟು ಅಂಗ ರಕ್ಷಕ ನನ್ನಾಗಿಸಿ ನೇಮಿಸುತ್ತಾನೆ .

ತನ್ನ ಕಿರಿ ಮಗಳಿಗೆ ಕೋಲತ್ತುನಾಡಿನ ಅರಸ ನೀಲೇಶ್ವರ ವನ್ನು ಬಿಟ್ಟು ಕೊಟ್ಟು ಅಲ್ಲಿ ಒಂದು ಅರಮನೆ ಕಟ್ಟಿಸಿ ಕೊಡುತ್ತಾನೆ.ಆ ಕಾಲದಲ್ಲಿ ಹಿಂದೂ ಮುಸ್ಲಿಂ ರು ಮದುವೆಯಾಗುತ್ತಿದ್ದು ,ಅವರ ಸಂತತಿಗೆ ಅಚ್ಚುಮಾಡತ್ತುಕ್ಕಾರ್ ಎಂದು ಕರೆಯುತ್ತಾರಂತೆ

ನೀಲೇಶ್ವರ ಅರಮನೆಯಲ್ಲಿ ಐಸಬಿ ಎಂಬ ಅಚ್ಚುಮಾಡತ್ತುಕ್ಕಾರ್ ಮುಸ್ಲಿಂ ಹೆಣ್ಣು ಮಗಳು ಕೆಲ್ಸಕ್ಕೆ ಇದ್ದಳು.ಅವಳಿಗೆ ಇಬ್ಬರು ಮಕ್ಕಳಿದ್ದರು .ಅವಳ ಗಂಡ ಅವಳ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊರದೆ ನಿರ್ಲಕ್ಷ್ಯ ಮಾಡಿದ ಕಾರಣ ಅವಳು ಸಂಸಾರ ನಿರ್ವಹಣೆಗಾಗಿ ಅರಮನೆಯಲ್ಲಿ ಆರಾಧನೆ ಪಡೆಯುವ ದೈವಗಳಿಗೆ ಬೇಕಾದ ಅಕ್ಕಿಯನ್ನು ಮಾಡಿಕೊಡುವ ಕೆಲಸ ಮಾಡುತ್ತಾ ಇದ್ದಳು .ಉತಮ ಗುಣ ನಡತೆಯ ಅವಳನ್ನು ಎಲ್ಲರೂ ಐಸಮ್ಮಾ ಎಂದು ಕರಯುತ್ತಿದ್ದರು .
ಅವಳನ್ನು ಅರಮನೆಯ ಕಾರ್ಯಸ್ಥ ಯೋಗ್ಯೆರ್ ನಂಬಿಡಿ ಎಂಬಾತ ಕಾಮಿಸಿ ಅವಳ ಬಳಿಗೆ ಬರುತ್ತಾನೆ.ಅವನ ಬೇಡಿಕೆಯನ್ನು ಒಪ್ಪದ ಅವಳು ಅವನನ್ನು ನಿರಾಕರಿಸುತ್ತಾಳೆ .ಇದರಿಂದ ಆತ ಇವಳಲ್ಲಿ ದ್ವೇಷ ಸಾಧಿಸುತ್ತಾನೆ.ಅವಳಿಗೆ ಸರಿಯಾಗಿ ಆಹಾರ ವೇತನಾದಿಗಳನ್ನು ನೀಡುವುದಿಲ್ಲ .
ಒಂದು ದಿನ  ಭತ್ತ ಕುಟ್ಟಿ ಅಕ್ಕಿ ಬೇರೆ ಮಾಡಿ ಉಳಿದ ತೌಡು ಅನ್ನು ಹಸಿವೆ ತಾಳದೆ ಅವಳು ತಿನ್ನುತ್ತಾಳೆ.ಅದನ್ನು ನೋಡಿದ ಯೋಗ್ಯೆರ್ ನಂಬಿದೆ ಅವಳು ಭತ್ತ ಕುಟ್ಟುತ್ತಿದ್ದ ಒನಕೆಯಿಂದಲೇ ಅವಳ ತಲೆಗೆ ಹೊಡೆಯುತ್ತಾನೆಅವಳು ಸಾಯುತ್ತಾಳೆ.

ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು .ದುರಂತವನ್ನಪ್ಪಿದ ಅನೇಕರು ದೈವತ್ವ ಪಡೆದು ಆರಾಧಿಸಲ್ಪಡುವ ಉದಾಹರಣೆಗಳು ಅನೇಕ ಇವೆ .ಅಂತೆಯೇ ಇಲ್ಲಿ ಐಸಮ್ಮಾ ಕೂಡ ದುರಂತವನ್ನ್ಪ್ಪಿ ತಾನು ಭಕ್ತಿ ನಿಷ್ಠೆಯಿಂದ ಕೈoಕರ್ಯ ಮಾಡುತ್ತಿದ್ದ ದೈವಗಳ ಸೇರಿಗೆ ಸಂದುಉಮ್ಮಚ್ಚಿ ಎಂಬ ಹೆಸರಿನಲ್ಲಿ  ಆರಾಧಿಸಲ್ಪಡುತ್ತಾಳೆ.
ದೈವಗಳ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಧಿಸಲ್ಪದುತ್ತಾರೆ.ಅಂತೆಯೇ ದೈವಗಳ ಕೋಪಕ್ಕೆ ಸಿಲುಕಿದವರೂ ಆರಾಧಿಸಲ್ಪಡುವುದು ಇಲ್ಲಿನ ಸಂಸ್ಕೃತಿಯ ವೈಶಿಷ್ಟ್ಯ .ಅಂತೆಯೇ ಇಲ್ಲಿ ಐಸಮ್ಮನನ್ನು ಕಾಮಿಸಿದ್ದಲ್ಲದೆ ಅವಳ ಮೇಲೆ ದ್ವೇಷ ಸಾಧಿಸಿ ಆಕೆಯನ್ನು ಸಾವಿಗೆ ಕಾರಣನಾದ ಯೋಗ್ಯೆರ್ ನಂಬಿಡಿ ಕೂಡ ಆಕೆಯೊಂದಿಗೆ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ .
ಆಧಾರ ಗ್ರಂಥ :
ಕೇರಳದ ತೆಯ್ಯಂ :ಕೇಳು ಮಾಸ್ತರ್ ಅಗಲ್ಪಾಡಿ
ತುಳುನಾಡಿನ ಅಪೂರ್ವ ಭೂತಗಳು :ಲಕ್ಷ್ಮೀ ಜಿ ಪ್ರಸಾದ


No comments:

Post a Comment