Sunday, 29 November 2015

ಸಾವಿರದೊಂದು ಗುರಿಯೆಡೆಗೆ :268-270 ಶ್ರೀ ಕುಲಮಹಾ ಸ್ತ್ರೀ ,ಅಜ್ಜಮ್ಮ ಮತ್ತು ಹಸಲ ದೈವ 

ಬಾರಕೂರು ಸಂಸ್ಥಾನದ ಒಂದು ಮುಖ್ಯ ಪ್ರದೇಶ ಬೆಣ್ಣೆ ಕುದ್ರು .ಇಲ್ಲಿನ ಪ್ರಧಾನ ದೈವ ಶ್ರೀ ಕುಲಮಹಾ ಸ್ತ್ರೀ .ಪ್ರಚಲಿತ ನಂಬಿಕೆಯ  ಪ್ರಕಾರ ಈಕೆ ಓರ್ವ ಮೊಗವೀರ ಕುಟುಂಬದ ತಪಸ್ವಿ ಹೆಣ್ಣು ಮಗಳು .ಮೂಲತ ಇಲ್ಲಿ ಒಂದು ವೀರ ಭದ್ರ ದೇವಾಲಯವಿತ್ತು .ಉತ್ತರ ದಿಕ್ಕಿನಿಂದ ಬಂದ ಈ ದಿವ್ಯ ಶಕ್ತಿಯುಳ್ಳ ಮಹಿಳೆ ಅಲ್ಲಿನ ಸೇನಾಪತಿಗೆ ಒದಗಿದ ಗಂಡಾಂತರವನ್ನು ದೂರ ಮಾಡುತ್ತಾಳೆ .ಜೊತೆಗೆ ಸ್ಥಳಿಯರ ಕಷ್ಟಗಳನ್ನೂ ತನ್ನ ದಿವ್ಯ ಶಕ್ತಿಯಿಂದ ಪರಿಹರಿಸುತ್ತಾಳೆ .
ಇದರಿಂದಾಗಿ ಅವಳು ರಾಜ ಮನ್ನಣೆಯನ್ನು ಪಡೆಯುತ್ತಾಳೆ. 

 “ಈ ತಪಸ್ವಿನಿಯ ಸಹೋದರ ಗುರು ದಂಪತಿಗಳು ತಮ್ಮ ತಪೋಃಶಕ್ತಿಯಿಂದ ಸಿದ್ಧಿಸಿದ ಶ್ರೀದೇವಿಯ ಅನುಗೃಹದೊಂದಿಗೆ ಇಲ್ಲಿಗೆ ಆಗಮಿಸಿದಾಗ ಅವರುಗಳಿಗೂ ರಾಜ ರಾಜಮರ್ಯಾದೆಯ ಸ್ವಾಗತ ಲಭಿಸಿತು. ಈ ಗುರುದಂಪತಿಗಳು ತಪಸ್ವಿನಿಯೊಂದಿಗೆ ನೆಲೆನಿಂತ ಮೂಲ ಮನೆಯೇ ಗುರುಮಠ. ತದನಂತರದಲ್ಲಿ ಸೇನಾಧಿಪತಿ ಹಾಗೂ ಕರಾವಳಿಯ ಮೊಗವೀರರ ಬೇಡಿಕೆಯಂತೆ ಗುರುದಂಪತಿಗಳು ಸ್ವತಃ ಶ್ರೀ ವೀರಭದ್ರ ದೇವರ ಸನಿಹದ ಪೀಠದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಷ್ಠಾಪಿಸಿದ ದೇವಿಯೇ ಪಂಚಾಂಶಗಳ ಸಂಭೂತೆಯಾದ ಶ್ರೀ ಕುಲಮಹಾಸ್ತ್ರೀ ಅಮ್ಮನವರು ಎನ್ನುವುದು ಪ್ರತೀತಿ. ಆ ತಪಸ್ವಿನಿ ಮಹಿಳೆ ಬೇರಾರು ಆಗಿರದೇ ಈಗ ಪೂಜಿಸಲ್ಪಡುತ್ತಿರುವ ಅಜ್ಜಮ್ಮ ದೇವರು”ಎಂದು ರಾಘವ ಕೋಟೇಶ್ವರ ಅವರು ತಿಳಿಸಿದ್ದಾರೆ.
ಇಲ್ಲಿ ಅಜ್ಜಮ್ಮ ದೇವರಿಗೂ ಆರಾಧನೆ ಇದೆ
“ಗುರುಮಠದಲ್ಲಿ ಕುಲಗುರುಗಳ ಪಟ್ಟದ ದೇವರಾದ ನಂದಿ ಅಥವಾ ಹಾಯ್ಗುಳಿ ಪ್ರಧಾನ ದೇವರಾಗಿದ್ದು, ಗುರುಪತ್ನಿಯ ಪಟ್ಟದ ದೇವರಾದ ನವದುರ್ಗೆ ಪ್ರಧಾನವಾಗಿದ್ದು, ಇಲ್ಲಿಯೂ ದೈನಂದಿನ ಪೂಜಾವಿಧಿ ನಡೆಯುತಿತ್ತು. ಗುರುಪತ್ನಿಯನ್ನು ಸರ್ವೇಶ್ರೀ ಎನ್ನುವ ಗೌರವ ಸಂಭೋದನೆಯಿಂದ ಕರೆಯುತ್ತಿದ್ದರು. ನವರಾತ್ರಿಯ ಕಾಲದಲ್ಲಿ ನವದುರ್ಗೆಗೆ ವಿಶಿಷ್ಠವಾದ ಪೂಜೆ ನಡೆಯುತ್ತಿದ್ದು, ನಮ್ಮ ಸಮಾಜದ ಮಹಿಳೆಯರು ಸರ್ವೇಶ್ರೀ ಅಮ್ಮನವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಗಳಲ್ಲಿ ಶೃದ್ಧಾ ಭಕ್ತಿಯಿಂದ ಭಾಗಿಯಾಗುತ್ತಿದ್ದರು. ಶ್ರೀಕುಲಮಹಾಸ್ತ್ರೀಯ ವಾರ್ಷಿಕ ಉತ್ಸವದಲ್ಲಿ ಬಾಳ ಭಂಡಾರ ಗುರುಮಠದಿಂದ ಹೊರಡುವ ಸಂಪ್ರದಾಯ ರೂಢಿಯಲ್ಲಿದ್ದು, ಇಂದಿಗೂ ಅನುಸರಿಸಲಾಗುತ್ತಿದೆ. ವೆಂಕಟರಮಣ ಮೂಲವಿಗ್ರಹ ಬಹಳ ಹಿಂದಿನಿಂದಲೂ ಇದ್ದಿದ್ದು ಗುಡಿ ರಚನೆಯಾಗಿದ್ದು, ಮಾಧವ ಪೂಜಾರ್ಯರ ಹಿಂದಿನ ಗುರುಗಳ ಕಾಲದಲ್ಲಿ ಎನ್ನುವುದು ತಿಳಿದುಬರುತ್ತದೆ. ಮಲಸಾವಿರ ದೈವಗಳ ಸಾನಿಧ್ಯದಲ್ಲಿ ತ್ರಿಶೂಲವಿರುವುದು ಇಲ್ಲಿನ ವಿಶೇಷ. ಹಸಲ ದೈವವು ಪಶ್ಚಿಮ ಕರಾವಳಿಯಿಂದ ಬಂದು ಅಜ್ಜಮ್ಮನವರ ರಕ್ಷಣೆಗೆ ಬೆಂಗಾವಲಾಗಿದ್ದಿದ್ದು ಎನ್ನುವುದು ಪ್ರತೀತಿ. ಎಲ್ಲಾ ವಿಷಯಗಳು ಅಷ್ಠಮಂಗಲ ಪ್ರಶ್ನೆಯಲ್ಲೂ ತಿಳಿದುಬಂದಿರುವುದು ನಮ್ಮ ಪೂರ್ವಜರ ಮಾಹಿತಿಗೆ ಪುಷ್ಠಿ ದೊರಕಿದಂತಾಗಿದೆ. ಬಾರಕೂರು ಸಂಸ್ಥಾನದ ಹೆಚ್ಚಿನೆಲ್ಲಾ ದೇವಸ್ಥಾನಗಳು ಅನ್ಯರ ಆಕ್ರಮಣಗಳಿಗೆ ತುತ್ತಾಗಿ ಮೂಲ ಸ್ವರೂಪ ಕಳೆದು ಕೊಂಡರೂ ಈ ದೇವಸ್ಥಾನವು ಯಾರ ದಾಳಿಗೂ ತುತ್ತಾಗದಿರುವುದು ಒಂದು ವಿಶೇಷವೇ ಸರಿ” ಎಂದು ರಾಘವ ಕೋಟೇಶ್ವರ ಅವರು ತಿಳಿಸಿದ್ದಾರೆ
ಆಧಾರ
ನಮ್ಮ ನಾಡು ಬ್ಲಾಗ್ _ರಾಘವ ಕೋಟೇಶ್ವರ
ಅಂತರ್ಜಾಲ -ಕಣಜ

No comments:

Post a Comment