Sunday, 6 December 2015

ಸಾವಿರದ ಇನ್ನೂರ ಐದು ಭೂತ/ದೈವಗಳ ಹೆಸರುಗಳು –© ಡಾ.ಲಕ್ಷ್ಮೀ ಜಿ ಪ್ರಸಾದ

ಧನ್ಯತೆಯ ನಿರಾಳ ಕ್ಷಣ ..
ಅಂತೂ ಇಂತೂ ಹಿಡಿದ ಒಂದು ಕೆಲಸವನ್ನು ಒಂದು ಹಂತಕ್ಕೆ ಮುಟ್ಟಿಸಿದೆ ,
ಕಳೆದ ಹತ್ತು ಹನ್ನೆರಡು ವರ್ಷಗಳ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ಮಾಹಿತಿಗಳು ಮುಖ ಪುಟ ಸ್ನೇಹಿತರು ಹಾಗೂ ಇತರ ಆತ್ಮೀಯರು ನೀಡಿದ ಮಾಹಿತಿ ,ಇತರೆ ಸಂಶೋಧಕರ ಕೃತಿಗಳಲ್ಲಿನ ಮಾಹಿತಿ ಎಲ್ಲವನ್ನೂ ಒಟ್ಟು ಹಾಕಿದಾಗ ಒಟ್ಟು ಸಾವಿರದ ಇನ್ನೂರ ಐದು ದೈವಗಳ ಹೆಸರು ಸಿಕ್ಕವು .ವಾರದಿಂದ ಪಟ್ಟು ಹಿಡಿದು ಕುಳಿತು ಇವನ್ನು ವರ್ಣಮಾಲಿಕೆಗೆ ಅನುಕ್ರಮವಾಗಿ ಜೋಡಿಸಿ ಸಂಖ್ಯೆ ಕೊಟ್ಟಾಗ ನಿಖರ ಸಂಖ್ಯೆ ದೊರೆಯುತು ,ಎರಡು  ವರ್ಷಹಿಂದೆ  ಪ್ರಕಟವಾದ  ಭೂತಗಳ ಅದ್ಭುತ ಜಗತ್ತು ಕೃತಿಯ ಎಲ್ಲ ಪ್ರತಿಗಳು ಮುಗಿದಿದ್ದು ಅನೇಕರು ಮತ್ತೆ ಪ್ರಕಟಿಸುವಂತೆ ಕೇಳಿದ್ದರು .ಹಾಗಾಗಿ ಆ ಕೃತಿಯನ್ನು ಪರಿಷ್ಕರಿಸಿದ್ದು  ಮತ್ತೆ ಪ್ರಕಟಿಸುತ್ತಿದ್ದು   ಅದರಲ್ಲಿ ನಾನು ಸಂಗ್ರಹಿಸಿದ ಸಾವಿರದ ಇನ್ನೂರ ಐದು ದೈವಗಳ ಹೆಸರುಗಳು  ಲಭ್ಯವಿರುತ್ತದೆ


ತುಳುವರ ಭೂತ ಕನ್ನಡದ ಭೂತವಲ್ಲ. ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕ್ಕೆ  ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಶಕ್ತಿಗಳು ಎಂಬ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ . ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿದೆ .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ
ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.ಆದ್ದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
.ತುಳುನಾಡಿನಲ್ಲಿ ದೈವತ್ವ ಪಡೆದು ಭೂತವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ,ಇಲ್ಲಿ ಭೂತ ದೈವ ದೇವರು ಎಲ್ಲವೂ ಸಮಾನರ್ಥಕ ಪದಗಳಾಗಿವೆ.
ನನ್ನ ಆಸಕ್ತಿಯ ಕ್ಷೇತ್ರವಿದು ,ಹಾಗಾಗಿಯೇ ತುಳುನಾಡಿನ ಎಲ್ಲ ದೈವ/ಭೂತಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿ ಬರೆಯುವ ಯತ್ನ ಮಾಡುತ್ತಿದ್ದೇನೆ .


ಎರಡು ವರ್ಷ ಹಿಂದೆ    ನವೆಂಬರ್ ತಿಂಗಳಿನಲ್ಲಿ ನನ್ನ ಪಿಎಚ್ ಡಿ ಸಂಶೋಧನಾ ಮಹಾ ಪ್ರಬಂಧ “ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ “ ಪ್ರಕಟಣೆಯ ಸಂದರ್ಭದಲ್ಲಿ ವಿದ್ವತ್ ಪೂರ್ಣವಾದ ಮುನ್ನುಡಿ ಬರೆದು ಕೊಟ್ಟ ಡಾ.ವಾಮನ ನಂದಾವರ ಅವರು ರೆವರಂಡ್ ಮೇನ್ನರ್ ತೋರಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ   ಎಂಬ ಶೀರ್ಷಿಕೆಯಡಿಯಲ್ಲಿ ನನ್ನ ಸಂಗ್ರಹದ ಸುಮಾರು 180 ದೈವಗಳು ಅವರ ಸಂಗ್ರಹ ಹಾಗೂ ಈ ಹಿಂದೆ ಸಂಗ್ರಹವಾದ ದೈವಗಳ ಪಟ್ಟಿಯನ್ನು ಉಲ್ಲೇಖಿಸಿ ಇದು 552 ಆಗಿದೆ ಮುಂದಕ್ಕೆ ಇದರ ಲೆಕ್ಕಹೆಚ್ಚಾಗಬೇಕೆ ಹೊರತು ಇದಕ್ಕಿಂತ ಕಡಿಮೆ ಆಗಬಾರದು ಎಂದು ತಿಳಿಸಿ ನನಗೊಂದು ಗುರಿಯನ್ನು ತೋರಿಸಿ ಕೊಟ್ಟರು.
ಅದರಂತೆ ನಾನು ಸಾವಿರದೊಂದು ಗುರಿಯೆಡೆಗೆ ಶೀರ್ಷಿಕೆಯಲ್ಲಿ ಅಕಾರಾದಿಯಲ್ಲಿ ದೈವಗಳ ಕುರಿತಾದ ಮಾಹಿತಿ ಸಂಗ್ರಹಿಸಿ ಬರೆಯತೊಡಗಿದೆ .ಈಗ ಸುಮಾರು ಮುನ್ನೂರು  ದೈವಗಳ  ಬಗ್ಗೆ ಬರೆದಿದ್ದೇನೆ
ಜೊತೆಗೆ ಎಲ್ಲ ದೈವಗಳ ಹೆಸರನ್ನು ಒಂದೆಡೆ ಕಲೆ ಹಾಕುವ ಯತ್ನ ಮಾಡಿದೆ .. ನನಗೆ ಆರಂಭದಲ್ಲಿ 460 ಹೆಸರುಗಳು ಸಿಕ್ಕಿವೆ ಅದನು ಬ್ಲಾಗ್ ಗೆ ಹಾಕಿದೆ ಅದನ್ನು ಅನೇಕ ಕೃತಿ ಚೋರರು  ಕಾಪಿಮಾಡಿ ಅವರವರ ಹೆಸರಿನಲ್ಲಿ ವಾಟ್ಸಪ್ ಫೇಸ್ ಬುಕ್ ಗಳಲ್ಲಿ ಈಗಲೂ ಶೇರ್ ಮಾಡುತ್ತಿದ್ದಾರೆ !
ಅನಂತರ ನನಗೆ ಫೇಸ್ ಬುಕ್ ಗೆಳಯ/ಗೆಳತಿಯರಿಂದ ರಿಂದ ಅಪಾರ ಬೆಂಬಲ ದೊರೆತು ನಾನು ಹುಡುಕಾಟ ಮುಂದುವರಿಸಿದೆ ಆಗ ಓಪೆತ್ತಿ ಮದಿಮಾಲ್ ,ಅಜ್ಜೆರ್ ಭಟ್ರ್ ,ಮುಂಡೆ ಬ್ರಾಂದಿ ,ವಾಟೆಜರಾಯ ಮಾಡ್ಲಾಯ ಮೊದಲಾದ ಅಪರೂಪದ ದೈವಗ ಹೆಸರು ಮತ್ತು ಮಾಹಿತಿಯನ್ನು ಆತ್ಮೀಯರಾದ ಯುವ ಸಂಶೋಧಕ ಸಂಕೇತ ಪೂಜಾರಿ ಅವರು ಒದಗಿಸಿ ಕೊಟ್ಟರು ಅದೇ ರೀತಿ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರು ಅವರು  ದೇಯಿ ,ಕಡನ್ಗಲಾಯ ಸೀರಮ್ಬಲತ್ತಾಯ ಮೊದಲಾದ ದೈವಗಳ ಮಾಹಿತಿ ಕೊಟ್ಟರು.ಭೂತಗಳ ಅದ್ಭುತ ಜಗತ್ತು .ಬ್ಲಾಗ್ ಅನ್ನು ಓದಿದ ಸುಶ್ರುತ್ ಅಡ್ಡೂರು ಅವರು ಮಲೆ ಸಾವಿರ ಬೂತ ,ಮಾನೆಯಪ್ಪು ದೈವಗಳ ಹೆಸರು ನೀಡಿದರು. ಗೀತ ಅವರು ಹರಿ ಹರ ಭೂತ ದ ಹೆಸರನ್ನು ನೀಡಿದರು ಬಾಲಕೃಷ್ಣ ಶಿಬರಾಯ ಅವರು ಕುರುವಾಯಿ ದೈವದ ಬಗ್ಗೆ ಮಾಹಿತಿ ನೀಡಿದರು
ನನ್ನ ಬರವಣಿಗೆಗೆ ಸೂಕ್ತ ಫೋಟೋಗಳನ್ನು ಒದಗಿಸಿ ಕೊಟ್ಟು ತುಂಬು ಪ್ರೋತ್ಸಾಹ ಇತ್ತಿರುವ ನಾಗರಾಜ ಭಟ್ ಬಂಟ್ವಾಳ ಅವರು ಬಂನಡ್ಕತ್ತಾಯ ದೈವದ ಹೆಸರನ್ನು ನೀಡಿದರು ಅದೇ ರೀತಿ ನನ್ನ ಬರವಣಿಗೆಗೆ ಸೂಕ್ತ ಫೋಟೋಗಳನ್ನು ಒದಗಿಸಿ ಕೊಟ್ಟು ತುಂಬು ಪ್ರೋತ್ಸಾಹ ಇತ್ತಿರುವ ಜೀವಿತ್ ಶೆಟ್ಟಿ ಅವರು ನರಯ ದೈವ ,ಬಂಗಾಡಿದ ಅರಸು ಹಾಗೂ ಮಹೇಶ್ ಬೋಳಾರ್ ಅವರು ಗಂಧರ್ವ ದೈವ ಗುದ್ದೊಲಿ ಮೀರಾ ಹೆಸರು ಹಾಗೂ ಇತರ ಮಾಹಿತಿಗಳನ್ನು ನೀಡಿದರು. ಯುವ ಸಂಶೋಧಕ  ಪ್ರಕಾಶ ಮಾರ್ಪಾಡಿಯವರು ಕಾಪು ವಿನಲ್ಲಿರುವ ಪೋಲಿಸ್ ಭೂತ ,ತಿಗ ಮಾರೆರ್ ದೈವಗಳ ಹಾಗೂ ಪಡ್ಕಂತಾಯ,ದಮಯಂತ ದೈವಗಳ ಹೆಸರನ್ನು ನೀಡಿದರು ,ಪೋಲಿಸ್ ಭೂತ, ಸೇನವ ,ಪಟ್ಲರ್, ಕಳ್ಳ ,ಬಲಾಯಿ ಮಾರೆರ್ ಬಗ್ಗೆ ಕುಂದಾಪುರ ತಾಲೂಕು ತಹಶೀಲ್ದಾರಾಗಿರುವ ಕಾಪು  ಮಾರ ಗುರಿಕ್ಕಾರ ಸುಂದರ ಅವರು ಮಾಹಿತಿ ನೀಡಿದರು .ಚಣಿಲ್ ಗೆ ಆರಾಧನೆ ಇರುವ ಬಗ್ಗೆ ಪವನ್ ಕುಮಾರ್, ಸಂತೋಷ ಕುಮಾರ್,ಅಭಿಷೇಕ್ ಶೆಟ್ಟಿ ಅವರು ಅಜ್ಜಿ ಪೆರಂತಲೆ ಎಂಬ ದೈವ ಇರುವ ಬಗ್ಗೆ ತಿಳಿಸಿದರು. ಸಂತೋಷ ಕುಮಾರ್ ಅವರು ಕತ್ತಲೆ ಕಾನದ ಗುಳಿಗನ ಬಗ್ಗೆ ತಿಳಿಸಿದರು ಗಣೇಶ  ಮಂಗಳೂರು ಅವರು  ಕುಂಞಲ್ವ ಬಂಟ ದೈವದ ಬಗ್ಗೆ ಮಾಹಿತಿ ಒದಗಿಸಿದರು ಕರ್ಪುದ ಪಂಜುರ್ಲಿ ದೈವದ ಹೆಸರು ಹಾಗೂ ಹಳ್ಳತ್ತಾಯಿ ದೈವದ ಅಪರೂಪದ ಫೋಟೋ ಅನ್ನು ರಾಜಗೋಪಾಲ ಹೆಬಾರ್ ನೆರಿಯ ಅವರು ನೀಡಿದರು ಮಡಿಕತ್ತಾಯ ದೈವದ ಬಗ್ಗೆ ದಿನೇಶ್ ವರ್ಕಾಡಿ ಅವರು ಮಾಹಿತಿ ನೀಡಿದ್ದಾರೆ . ಮಂತ್ರ ಗಣ ಬಗ್ಗೆ ರವೀಶ್ ಶರ್ಮ ಅವರು  ತಿಳಿಸಿದ್ದಾರೆ.  ರಾಘವ ಕೋಟೇಶ್ವರ ಅವರ ಬ್ಲಾಗ್ ನಲ್ಲಿ ಮೋಟ ,ಮೋಳೆ ತಿರುಮ, ಹಸಲ ದೈವ  ಅಜ್ಜಮ್ಮ .ಗಾಮ ಮೊದಲಾದ ಅಪರೂಪದ ಕನ್ನಡ ಪರಿಸರದ ದೈವತಗಳ ಮಾಹಿತಿ ಸಿಕ್ಕಿತು ಬೋವ ದೈವದ ಹುಡುಕಾಟಕ್ಕೆ ಶ್ರೀನಿವಾಸ ಪ್ರಭು ಅವರು ನೀಡಿದ ಮಾಹಿತಿಯೇ ಪ್ರೇರಣೆಯಾಯಿತು
ಇಗ್ಗುತಪ್ಪ, ಕಲ್ಯಾಟೆ ಅಜ್ಜಪ್ಪ ,ಪರ್ಕೋಟು ಶಾಸ್ತವು ಪಾಲೂರಪ್ಪ  ಪೊನ್ನಾಲತಮ್ಮೆ ಮೊದಲಾದ ಕೊಡಗಿನಲ್ಲಿ ಆರಾಧಿಸಲ್ಪಡುವ ದೈವಗಳ ಹೆಸರನ್ನು ಪೋಡೆಯಂಡ ಕೌಶಿಕ್ ಸುಬ್ಬಯ್ಯ  ಅವರು ನೀಡಿದ್ದಾರೆ
ಜಲ ಕುಮಾರ ದೈವದ ಹೆಸರನ್ನು ವಿಜಯ ಶೆಟ್ಟಿ ಅವರು ನೀಡಿದ್ದಾರೆ.ಅಸುರಾಳನ್ ದೈವದ ಬಗ್ಗೆ ಹರ್ಷ ರಾಜ್ ಅಡ್ಕ ಅವರು ಮಾಹಿತಿ ನೀಡಿದ್ದಾರೆ  ಕಾನಲ್ತಾಯ ಹಾಗೂ ಜಟ್ಟಿಂಗ ದೈವದ ಮಾಹಿತಿಯನ್ನು ಶಶಾಂಕ್ ನೆಲ್ಲಿತ್ತಾಯ ನೀಡಿದ್ದಾರೆ ,ಕುದುರೆತ್ತಾಯ ದೈವದ ಬಗ್ಗೆ ನವೀನ ಕುಮಾರ ಅವರು ತಿಳಿಸಿದ್ದಾರೆ. ಯುವ ಸಂಶೋಧಕ ಯಶ್ವಿನ್ ಅವರ ಪೇಜ್ ಮೂಲಕ ಇಂದ್ರಾಣಿ ,ಗ್ರೀಷ್ಮಂತಾಯ ಮೊದಲಾದ ಅಪರೂಪದ ದೈವಗಳ ಹೆಸರು ಮತ್ತು ಫೋಟೋಗಳು ಸಿಕ್ಕವು ಇನ್ನು ಅನೇಕರು ಮಾಹಿತಿ ನೀಡಿದ್ದಾರೆ.ಎಲ್ಲರ ಹೆಸರು ನೆನಪಿಟ್ಟುಕೊಳ್ಳಲಾಗದ್ದಕ್ಕೆ ಕ್ಷಮೆಯಿರಲಿ  

ಡಾ.  ಚಿನ್ನಪ್ಪ ಗೌಡ ಅವರ ಭೂತಾರಾಧನೆ ಕೃತಿಯಲ್ಲಿರುವ ಭೂತಗಳ ಹೆಸರಿನ ಪಟ್ಟಿಯಲ್ಲಿನ 360 ದೈವಗಳ ಹೆಸರಿವೆ .  ರಘುನಾಥ ವರ್ಕಾಡಿ ಅವರ ಕೃತಿಯಲ್ಲಿನ ಹೆಸರುಗಳು ,ಡಾ.ಬಿ ಎ ವಿವೇಕ ರೈಗಳ ಕೃತಿಯಲ್ಲಿರುವ ಹೆಸರುಗಳು ,ಕೇಳು ಮಾಸ್ಟರ್ ಅಗಲ್ಪಾಡಿ ಅವರ ಕೃತಿಯಲ್ಲಿನ ಹೆಸರುಗಳು ಡಾ.ವಾಮನ ನಂದಾವರ ಅವರ ಕೃತಿಯಲ್ಲಿರುವ ಹೆಸರುಗಳು ಮತ್ತು ಅವರು ನೀಡಿರುವ ನಡ್ದೊಡಿತ್ತಾಯ ಮೊದಲಾದ ಅಪರೂಪದ ದೈವಗಳ ಹೆಸರುಗಳನ್ನೂ ,ನನ್ನ ಸಂಶೋಧನೆಯ ಕ್ಷೇತ್ರಕಾರ್ಯದಲ್ಲಿ ಸಿಕ್ಕ ಸುಮಾರು 500 ಹೆಸರುಗಳನ್ನೂ ಒಟ್ಟಿಗೆ ಹಾಕಿ ಸಾವಿರದ ಇನ್ನೂರ ಐದು ಭೂತ/ದೈವಗಳ  ಹೆಸರುಗಳನ್ನು ಪಟ್ಟಿ ಮಾಡಿದ್ದೇನೆ
ಇಲ್ಲಿ ಒಂದೇ ದೈವದ ಹೆಸರುಗಳು ಯಾವುವು?” ಎಂದು ನಿರ್ಧರಿಸುವುದು ಸುಲಭದ ವಿಚಾರವಲ್ಲ .ಉದಾಹರಣೆಗೆ ಕೆರೆ ಚಾಮುಂಡಿ ರುದ್ರ ಚಾಮುಂಡಿ ಕರಿ ಚಾಮುಂಡಿ ಪಾಪೆಲು ಚಾಮುಂಡಿ ದೈವಗಳ ಹೆಸರು ಚಾಮುಂಡಿ ಎಂದು ಇರುವುದಾದರೂ ಇವುಗಳಿಗೆ ಬೇರೆ ಬೇರೆ ಮಾನವ ಮೂಲದ ಕಥಾಕನಗಳು ಆಚರಣೆಗಳು ಇದ್ದು ಇವು ಬೇರೆ ಬೇರೆ ಶಕ್ತಿಗಳಾಗಿವೆ ,ಅದೇ ರೀತಿ ಮಂಡ ಕರ ಕಲ್ಲುರ್ಟಿ  ಮೂಲತಃ ಒಬ್ಬ ಬ್ರಾಹ್ಮಣ ಮಂತ್ರವಾದಿ,ಆದರಿಂದ ಯಾವುದು ಒಂದೇ ದೈವದ ಬೇರೆ ಬೇರೆ ಹೆಸರು ಎಂದು ತೀರ್ಮಾನಿಸಲು ಪ್ರತಿಯೊಂದು ಕಡೆಗೆ ಹೋಗಿ ಅಧ್ಯಯನ ಮಾಡಿಯೇ ಆಗಬೇಕು .ಹೆಸರಿನ ಮೇಲೆ ಇದು ಈ ದೈವದ ಇನೊಂದು ಹೆಸರು ಎಂದು ತೀರ್ಮಾನಿಸಲು ಅಸಾಧ್ಯ .
ಈ ಹಿಂದೆ ಒಂದೇ ದೈವಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ಇದೆ ಎಂಬ ಭಾವನೆ ಇತ್ತು ,ಆದರೆ ನನ್ನ ಕ್ಷೇತ್ರ ಕಾರ್ಯದಲ್ಲಿ ಒಂದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ .
ಹಾಗಾಗಿ ಸಿಕ್ಕಿರುವ ಎಲ್ಲ ಹೆಸರುಗಳನ್ನೂ ಇಲ್ಲಿ ಹಾಕಿದ್ದೇನೆ .
ಇನ್ನುಕೆಲವು ಮೂಲತ ತುಳು ದೈವಗಳೇ ಆಗಿದ್ದು ಮಲೆಯಾಳ ಭಾಷೆ ಸಂಸ್ಕೃತಿಯ ಕಥಕ್ಕಳಿ ಪ್ರಭಾವದಿಂದ ತುಸು ಭಿನ್ನವಾಗಿ  ಕೊಡಗು ಕಾಸರಗೋಡು ಪರಿಸರದಲ್ಲಿ ಆರಾಧಿಸಲ್ಪಡುವ ದೈವಗಳ ಹೆಸರನ್ನೂ ಇಲ್ಲಿ ಸೇರಿಸಿದ್ದೇನೆ
ಅದೇ ರೀತಿ ಉಡುಪಿ ಬಾರಕೂರು ಕುಂದಾಪುರದ ಕನ್ನಡ  ಪರಿಸರದಲ್ಲಿ ತುಸು ಭಿನ್ನವಾಗಿ ಆರಾಧಿಸಲ್ಪಡುವ ಹಳೆಯಮ್ಮ ಮಾಸ್ತಿಯಮ್ಮ  ಹೈಗುಳಿ ಮೊದಲಾದ ದೈವತಗಳನ್ನೂ ಇಲ್ಲಿ ಸೇರಿಸಿದ್ದೇನೆ.  ಬೈನಾಟಿ, ಕುಡಂದರೆ ,ಚಿಕ್ಕು, ಚಿಕ್ಕಮ್ಮ ಮೊದಲಾದ  ಕೆಲವು  ಮಲೆಯಾಳದ ಹಾಗೂ ಕನ್ನಡ ಪರಿಸರದ ದೈವತಗಳ ಹೆಸರನ್ನು  ಡಾ.ಚಿನ್ನಪ್ಪ ಗೌಡ ಹಾಗೂ ಡಾ ,ಬಿ.ಎ ವಿವೇಕ ರೈಗಳು ಅವರ ಕೃತಿಗಳಲ್ಲಿ ಭೂತಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ .ಅಂತೆಯೇ ನಾನು ಕೂಡ ಅನೇಕ ಮಲಯಾಳ ಹಾಗೂ ಕನ್ನಡ ಪರಿಸರದ ದೈವತಗಳ ಹೆಸರನ್ನು ಹುಡುಕಿ ಇಲ್ಲಿ ಸೇರಿಸಿದ್ದೇನೆ
ಎಲ್ಲವನ್ನೂ ಒಟ್ಟು ಮಾಡಿದ್ದಾಗ ನನಗೆ ಸಿಕ್ಕ ಸಂಖ್ಯೆ 1205
 ಈ ಪಟ್ಟಿ ಅಂತಿಮವಲ್ಲ ಇದು ಆರಂಭ ಮಾತ್ರ.ಇನ್ನೂ ಅನೇಕ ದೈವಗಳಿಗೆ ತುಳುನಾಡಿನಲ್ಲಿ ಆರಾಧನೆ ಇರುವ ಸಾಧ್ಯತೆ ಇದೆ .ಅನೇಕ ಹೆಸರುಗಳು ಇದರಲ್ಲಿ ಬಿಟ್ಟು ಹೋಗಿರಬಹುದು
ಇನ್ನು ಅಧ್ಯಯನವಾಗ ಬೇಕಾದ ವಿಚಾರ ಭೂತಾರಾಧನಾ ಕ್ಷೇತ್ರದ ಲ್ಲಿ ತುಂಬಾ ಇದೆ
ಮಾಹಿತಿ ನೀಡಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು
ಸಾವಿರದ ಇನ್ನೂರ ಐದು ಭೂತ/ದೈವಗಳ ಹೆಸರುಗಳು  © ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ ಬೆಂಗಳೂರು ಗ್ರಾಮಾಂತರ  ಜಿಲ್ಲೆ
samagramahithi@gmail.com

No comments:

Post a Comment