Thursday, 7 January 2016

ಸಾವಿರದೊಂದು ಗುರಿಯೆಡೆಗೆ :287ತುಳುನಾಡ ದೈವಗಳು :ಕಾಂತೇರಿ ಜುಮಾದಿ ಬಂಟ - ©ಡಾ.ಲಕ್ಷ್ಮೀ ಜಿ ಪ್ರಸಾದ

   
ಪೆರಿಂಜಗುತ್ತಿನ ದೇವುಪೂಂಜ ಇನ್ನೂ ಬಾಲಕನಾಗಿದ್ದ ಕಾಲದಲ್ಲಿ ವೇಣೂರಿನಲ್ಲಿ ಅಜಿಲ ಅರಸು ಆಳಿಕೊಂಡಿರುತ್ತಾರೆ. ಆಗ ನಂದಾವರದ ಬಂಗರ ದಂಡು ಬರುವ ಸುದ್ಧಿ ಬರುತ್ತದೆ. ವೇಣೂರಿನ ಚಂಡಲಮಾರಿನಲ್ಲಿ ಸಭೆ ಸೇರುತ್ತದೆ. ಪೆರಿಂಜಗುತ್ತಿನ ಬಂಟ ದೇಲಮುಕೊಟ್ಟಾರಿ ಕಳಕ್ಕೆ ಬರುತ್ತಾನೆ. ಆಗ ಬಂಗರ ದಂಡಿಗೆ ದಳವಾಯಿಯಾಗಿ ನಿಲ್ಲಲು ಹೇಳಿದಾಗ ‘ನನ್ನಿಂದ ಸಾಧ್ಯವಿಲ್ಲ’ ಎಂದು ಗದ್ದಿಗೆಯಲ್ಲಿ ಗಡಿ ಇಟ್ಟು ದೇಲಮು ಪೆರಿಂಜಗುತ್ತಿಗೆ ಬರುತ್ತಾನೆ. ಈ ಸುದ್ಧಿ ಕೇಳಿ ದೇವುಪೂಂಜನ ತಾಯಿ ಚಿಂತೆಗೀಡಾಗುತ್ತಾರೆ. ಬಾಲಕ ದೇವುಪೂಂಜ ಶಾಲೆಗೆ ಹೋದವನು ಹಿಂದಿರುಗಿ ಬರುವಾಗ ಮುದ್ದು ಕರುವಿಗೆ ಚಿಗುರು ಹುಲ್ಲ ಕಿತ್ತುಕೊಂಡು ಬರುತ್ತಾನೆ. ‘ಅಮ್ಮ’ ಎಂದು ಕರೆದು ತಾಯಿಯನ್ನು ಹುಡುಕಿ ‘ಏನಮ್ಮ ನಿಮಗೆ ಈ ತರದ ಕಷ್ಟವೇಕೆ ಬಂತು? ಬಂಟನ ಮಗ ಬಾರಗ ಅಲ್ಲದ್ದನ್ನು ಆಡಿದರೆ ಆತನ ಬಾರಗತನ ಕಳೆಯುತ್ತೇನೆ. ಸೆಟ್ಟಿಯ ಮಗ ಸೇನವನೆಂದರೆ ಅವನ ಸೇನವತನವನ್ನು ಕಳೆಯುತ್ತೇನೆ. ಕಾರ್ಯವೇನು ಹೇಳಿ?’ ಎಂದು ಕೇಳಲು, ‘ವೇಣೂರಿನಲ್ಲಿ ದೇಲಮು ಕಟ್ಟಾರಿಹೋಗಿ ನಂದಾವರದ ಬಂಗರ ದಂಡಿಗೆ ದಳವಾಯಿಯಾಗಿ ನಿಲ್ಲಲು ಸಾಧ್ಯವಿಲ್ಲವೆಂದು ಗದ್ದಿಗೆಯಲ್ಲಿ ಗಡಿಯಿಟ್ಟು ಬಂದ ವಿಚಾರವನ್ನು ತಾಯಿ ಹೇಳುತ್ತಾರೆ.copy rights reserved ©ಡಾ.ಲಕ್ಷ್ಮೀ ಜಿ ಪ್ರಸಾದ
ಆಗ ದೇವುಪೂಂಜ “ನೀವು ಚಿಂತೆ ಮಾಡಬೇಡಿ ನಾನಿದ್ದೇನೆ. ನೀವು ಇಟ್ಟ ಗಂಜಿ ಉಣ್ಣಿರಿ” ಎಂದು ಹೇಳಿ ಕಡೆ ಕಾರ್ಲದಲ್ಲಿರುವ ಮಾವ ಕಾಂತಣ ಕರುವಾಳರ ಬಳಿಗೆ ಹೋಗಿ ಕಾಳಗದ ವಿದ್ಯೆ ಕಲಿಯುತ್ತಾನೆ. ದಂಡಿಗೆ ಸಹಾಯ ಕೇಳುವಾಗ ‘ನಾನು ಮುದುಕ ಏನು ಸಹಾಯ ಮಾಡಲು ನನ್ನಿಂದ ಸಾಧ್ಯ? ನಿನ್ನ ಸಹಾಯಕ್ಕೆ ಕಾಂತಣ ಅತಿಕಾರಿ ಜುಮಾದಿಯನ್ನು ಕೊಡುವೆ. ಅದು ತೆಕ್ಕೆಯಲ್ಲಿಟ್ಟು ಕಾಯುವ ತಾಯಿಯಂಥ ದೈವ’ ಎಂದು ಹೇಳುವರು ಕಾಂತಣ ಕರುವಾಳರು. ಅವರ ಮಾತಿಗೆ ಒಪ್ಪುತ್ತಾನೆ ದೇವುಪೂಂಜ. ಪೆರಿಂಜಗುತ್ತಿಗೆ ಭೂತ ಬಂದ ವಿಚಾರವನ್ನು ತಾಯಿಗೆ ತಿಳಿಸುತ್ತಾನೆ. ನಂತರ ಗಟ್ಟದ ಮೇಲೆ ಗರುಡರಾಜ್ಯದಲ್ಲಿ ಜಿಂಗ್ರೋಡಿ ಬಣರಾಚಾರಿ ಬಳಿಗೆ ಹೋಗಿ ಪಾಂಡಿ ಬಾಳನ್ನು ಮಾಡಿಸಿಕೊಂಡು ತರುತ್ತಾನೆ ದೇವುಪೂಂಜ.copy rights reserved ©ಡಾ.ಲಕ್ಷ್ಮೀ ಜಿ ಪ್ರಸಾದ
ಪೆರಿಂಜಗುತ್ತಿನಿಂದ ಸನ್ನೆಯ ಕೊಂಬು ಶಬ್ದದ ಬೆಡಿಯೊಡನೆ ದಂಡು ತೆಗೆದುಕೊಂಡು ದೇವುಪೂಂಜ ಬಂದಾಗ ಕಳದಲ್ಲಿ ಜಾಗ ಕೊಟ್ಟರು. ಗುತ್ತು ಬಾರಗರು ‘ಏನು ದೇವುಪೂಂಜ ನೀನು ದಂಡಿಗೆ ದಳವಾಯಿಯಾಗಿ ನಿಲ್ಲುವೆಯಾ? ಜಾರಿ ಹೋಗುವೆಯಾ?’ ಎಂದು ಕೇಳಲು ‘ನಾನು ಜಾರಿಹೋಗಲು ಬಂದವನಲ್ಲ ಎದುರಿಸಲು ಬಂದವ’ನೆಂದು ಹೇಳುತ್ತಾನೆ.
ಕಾಳಗಕ್ಕೆ ದಿನವಿಟ್ಟರು. ಮರುದಿನ ದಂಡಿನ ದಿರಿಸು ತೊಟ್ಟುಕೊಂಡು ದಂಡು ತೆಕ್ಕೊಂಡು ಹೋಗುವಾಗ ಜುಮಾದಿ ದೈವದೊಡನೆ ‘ನೀನು ನನಗೆ ಬೆಂಗಾವಲಾಗಿ ನಿಂತು ಗೆಲುವು ತಂದುಕೊಟ್ಟರೆ, ಪೆರಿಂಜಗುತ್ತಿನಲ್ಲಿ ನೇಮನಿರಿ ಕೊಡುವೆ’ ಎಂದು ಪ್ರಾರ್ಥಿಸಿ ಹರಿಕೆ ಹೇಳಿಕೊಳ್ಳುತ್ತಾನೆ ದೇವುಪೂಂಜ. ದಂಡು ಸಾಧಿಸಲು ಹೋಗುವಾಗ ಎದುರಾದ ದುಗ್ಗಣಕೊಂಡೆ ‘ನಿನ್ನಂಥ ಹುಡುಗರು ನನ್ನ ಮನೆಯಲ್ಲಿ ಸೆಗಣಿ ಹೆಕ್ಕುತ್ತಾರೆ’ ಎಂದು ಹೇಳಲು ದೇವುಪೂಂಜ ‘ನಿನ್ನಂತ ಮುದುಕರು ನನ್ನ ಮನೆಯಲ್ಲಿ ತೆಂಗಿನಸಿಪ್ಪೆ ಗುದ್ದುತ್ತಾ ಹಗ್ಗ ಹುರಿ ಮಾಡುತ್ತಾರೆ’ ಎಂದು ವ್ಯಂಗ್ಯವಾಡುತ್ತಾನೆ. ಆಗ ದುಗ್ಗಣಕೊಂಡೆ ಗಿಡುಗನಂತೆ ಹಾರಿ ದೇವುಪೂಂಜನ ತಲೆಯನ್ನು ತನ್ನ ತೋಳಡಿಯಲ್ಲಿ ಅಮುಕಿದ. ಬಿಡಿಸಿಕೊಳ್ಳಲು ಆಗದ ಕಾಲದಲ್ಲಿ ದೇವುಪೂಂಜ ಮಾವ ಸಹಾಯಕ್ಕೆ ಕೊಟ್ಟ ಜುಮಾದಿಯನ್ನು ನೆನೆದ. ದೈವ ಸಹಾಯದಿಂದ ಹಲಸಿನ ಬೀಜ ಹಾರಿದಂತೆ ಹಾರಿ, ಆನೆಯನ್ನು ಒತ್ತಿ, ಕುದುರೆಯ ನೆಗೆತ ನೆಗೆದು ಮುನ್ನುಗ್ಗಿದ. ಬಂಗರ ಬಲುದಂಡನ್ನು ನಾಶ ಮಾಡಿದ ದೇವುಪೂಂಜ ದಂಡು ಸಾಧಿಸಿ ಬಂದ.
ಸೋತ ಬಂಗರು ಚಿಂತೆ ಮಾಡಿದರು. ಮರುದಿನ ಬಂಟವಾಳ ಪೇಟೆಯಲ್ಲಿರುವ ಸೂಳೆ ಸಿದ್ದುವಿನ ಬಳಿಗೆ ಹೋಗಿ ‘ನನ್ನನ್ನು ಸೋಲಿಸಿದ ಅವನನ್ನು ಹೇಗಾದರೂ ಮಾಡಿ ಸೋಲಿಸಬೇಕು’ ಎಂದು ಹೇಳುತ್ತಾರೆ. ಸೂಳೆ ಸಿದ್ದು ಒಪ್ಪಿಕೊಳ್ಳುತ್ತಾಳೆ.
ಇತ್ತ ಪೆರಿಂಜಗುತ್ತಿನಲ್ಲಿ ಹೇಳಿಕೊಂಡ ಹರಿಕೆಯಂತೆ ಜುಮಾದಿ ನೇಮಕ್ಕೆ ಸಿದ್ಧತೆನಡೆಸುತ್ತಾರೆ.
ನೇಮದ ಸಿದ್ಧತೆಗೆ ಬಂಟವಾಳ ಪೇಟೆಗೆ ದೇವುಪೂಂಜ ಬರುತ್ತಾನೆ. ಅವನನ್ನು ನೋಡಿದ ಸೂಳೆ ಸಿದ್ದು ಅವನನ್ನು ಮೋಡಿ ಮಾಡಲು ಯತ್ನಿಸುತ್ತಾಳೆ. ಅವಳ ಮೋಹಕ್ಕೆ ಮರಳಾಗುವುದಿಲ್ಲ ಅವನು. copy rights reserved ©ಡಾ.ಲಕ್ಷ್ಮೀ ಜಿ ಪ್ರಸಾದಆಗ ಅವಳು ನನ್ನಂಥ ಹೆಣ್ಣನ್ನು ನೋಡಿದರೆ ಹಿಡಮಾಡಿದ ಎತ್ತು ಕೂಡ ಎದ್ದು ಬಂದೀತೆಂದೂ ಚುಚ್ಚುತ್ತಾಳೆ. ಆಗ ಇಷ್ಟು ಸೊಕ್ಕಿನ ಹೆಣ್ಣನ್ನು ನೋಡಬೇಕೆಂದು ದೇವಪೂಂಜ ಮೇಲೆ ಬರುತ್ತಾನೆ. ಅವಳು ಆಸರಿಗೆ ಸೀಯಾಳ ಕೊಡುತ್ತಾಳೆ. ಚೆನ್ನೆಯಾಟಕ್ಕೆ ಪ್ರೇರೇಪಿಸುತ್ತಾಳೆ. ನೇಮಕ್ಕೆ ಹೋಗಲು ಬಿಡುವುದಿಲ್ಲ.
ಪೆರಿಂಜಗುತ್ತಿನಲ್ಲಿ ಜುಮಾದಿಗೆ ನೇಮವಾಗುತ್ತದೆ. ‘ನೀವು ಬರಬೇಕೆಂತೆ’ ಎಂದು ಜನ ಬಂದು ಕರೆದಾಗ ‘ದೈವ ಒಸಯ ಆಗಲಿ ನಾನು ಬರುತ್ತೇನೆ’ ಎಂದು ದೇವುಪೂಂಜ ಹೇಳಿಕಳುಹಿಸುತ್ತಾನೆ. ಒಸಯದ ನಂತರ ಪುನಃ ಜನ ಬರುತ್ತಾರೆ. ಕೊನೆಗೆ ಮೂರು ತುಂಡು ಬೈರಾಸು ಕಟ್ಟಿಕೊಂಡು ಎಲೆಮರೆಯಲ್ಲಿ ದೇವುಪೂಂಜ ಬರುತ್ತಾನೆ. ಆಗ ನೇಮದಲ್ಲಿದ್ದ ಜುಮಾದಿ ದೈವ ‘ಅಂದಿನ ಕಾಲದಲ್ಲಿ ನಂದಾವರ ಬಂಗರ ಬಲದಂಡಿಗೆ ದಳವಾಯಿಯಾಗಿ ನಿಲ್ಲಲು ನಾನು ಬೇಕಾಯಿತು. ಈಗ ಸೂಳೆ ಸಿದ್ದುವಿನ ಸಹವಾಸದಲ್ಲಿ ನಾನು ಬೇಡವಾಯಿತು. ಅಂದು ಸಹಾಯದ ವೀಳೆಯ ಕೊಟ್ಟೆ. ಇಂದು ಸ್ವರ್ಗದ ವೀಳೆಯ ಹಿಡಿಯಿರಿ’ ಎಂದು ದೇವುಪೂಂಜನನ್ನು ತನ್ನ ವಶ ಮಾಡಿಕೊಂಡಿತು.copy rights reserved ©ಡಾ.ಲಕ್ಷ್ಮೀ ಜಿ ಪ್ರಸಾದ
ಪಾಡ್ದನದ ಇನ್ನೊಂದು ಪಾಠ ದಲ್ಲಿ ಈ ಕಥೆ ಮುಂದುವರಿದು ಮುಂದೆ ನಡೆದ ಇನ್ಯಾವುದೋ ಒಂದು  ಯುದ್ಧದಲ್ಲಿ ದೇವು   ಪೂಂಜ ಮರಣವನ್ನಪ್ಪುತ್ತಾನೆ ,ಕೋಟೆಕಾರಿನಲ್ಲಿ ಮಲಗಿದ್ದ ಅವನ ತಲೆಯನ್ನು ಕಡಿಯುತ್ತಾರೆ ಎಂಬ ಐತಿಹ್ಯವೂ ಇದೆ.
ಮುಂದೆ ಆತ ಬಿಳಿ ಹುಂಜವಾಗಿ ಕೆಲೆಯುತ್ತಾನೆ .ಇಲ್ಲಿ ಆತನಿಗೆ ದೈವತ್ವ ಪ್ರಾಪ್ತಿಯಾದ ಸೂಚನೆ ಇದೆ
ದುರಂತ ಮತ್ತು ದೈವತ್ವ ಸಾಮಾನ್ಯವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ .ಅಂತೆಯೇ ವೀರನಾದ ದೇವು ಪೂಂಜ ಕಾಂತೇರಿ ಜುಮಾದಿಯ  ಬಂಟ ದೈವವಾಗಿ ನೆಲೆನಿಂತು ಆರಾಧಿಸಲ್ಪಡುತ್ತಾನೆ .

         ಆಧಾರ ಗ್ರಂಥ
1ಪಾಡ್ದನ ಸಂಪುಟ -ಡಾ.ಅಮೃತ ಸೋಮೇಶ್ವರ
2 ತುಳು ಜನಪದ ಸಾಹಿತ್ಯ -ಡಾ.ಬಿ ಎ ವಿವೇಕ ರೈ
3 ಪಾದ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ (ಪಿಎಚ್ ಡಿ ಮಹಾ ಪ್ರಬಂಧ )ಡಾ.ಲಕ್ಷ್ಮೀ ಜಿ ಪ್ರಸಾದ     

1 comment:

  1. Naanu odida kateyalli halavaru badalavanegalive.nanna devupoonja barahavannu omme oodi dayavittu abhipraya tilisi..danyavadagalu

    ReplyDelete