Friday, 24 June 2016

ಸರ್ಪಂತುಳ್ಳಲ್ ಮತ್ತು ಸರ್ಪಂಕಳಿ (c)ಡಾ.ಲಕ್ಷ್ಮೀ ಜಿ ಪ್ರಸಾದ


ಸರ್ಪಂತುಳ್ಳಲ್ ಪ್ರಾಚೀನ ತುಳುನಾಡು ಬಾರಕೂರಿನಿಂದ ರಾಮೇಶ್ವರ ತನಕ ಹರಡಿತ್ತು ಎಂದು ಪಾಡ್ದನಗಳಲ್ಲಿ ಹೇಳಿದೆ. 60-70 ವರ್ಷಗಳ ಮೊದಲು ಕೇರಳಕ್ಕೆ ಹೊಂದಿಕೊಂಡಿರುವ ತುಳುನಾಡಿನ ಪ್ರದೇಶಗಳಲ್ಲಿ ಸರ್ಪಂತುಳ್ಳಲ್ ಮತ್ತು ಸರ್ಪಂಕಳಿ ನಡೆಯುತ್ತಿತ್ತು. ಈಗ ಇದರ ಆರಾಧನೆ ಕೇರಳದಲ್ಲಿ ಇದೆ. ಸರ್ಪಂತುಳ್ಳಲ್ ಒಂದು ನಾಗ ನೃತ್ಯವಾಗಿದೆ. ಇದು ಕನ್ನಡ ಪ್ರದೇಶದ ನಾಗಮಂಡಲವನ್ನು ಹೋಲುತ್ತದೆ. ಇದನ್ನು ಪುಳ್ಳವರ್ ಜನಾಂಗದವರು ನಡೆಸುತ್ತಾರೆ. ಐದು ಬಣ್ಣದ ಹುಡಿಯಿಂದ ಒಂದು ಮರವನ್ನು ಬರೆದು, ಅದರಲ್ಲಿ ಹೆಡೆ ಬಿಚ್ಚಿದ ಸರ್ಪಾಕಾರವನ್ನು ಬರೆಯುತ್ತಾರೆ. ನಂತರ ಮಂಡಲವನ್ನು ಹಾಲು ದೀಪ ಇಟ್ಟು ಪೂಜಿಸುತ್ತಾರೆ. ನಾಗಪಾತ್ರಿ ಹಾಗೂ ನಾಗಿಣಿಗಳಾಗಿ ಪುಳ್ಳವರ ಮುಖ್ಯಸ್ಥ ಹಾಗೂ ಪುಳ್ಳವರ್ ಜನಾಂಗದ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ. ಆರಂಭದಲ್ಲಿ ‘ಸರ್ಪಪ್ಪಾಟ್ಟು’ ಹಾಡುತ್ತಾರೆ. ಪಾಂಡವರಿಂದ ಖಾಂಡವ ದಹನವಾದಾಗ ಆ ಕಾಡುಗಳಲ್ಲಿದ್ದ ಹಲವಾರು ನಾಗಗಳ ನಾಶವಾಗುತ್ತದೆ. ಆದರೆ ವಾಸುಕಿ ಮಾತ್ರ ಆಗ್ನಿಯಿಂದ ಹಾರಿ ‘ಕುಟ್ಟನಾಡು’ ಎಂಬಲ್ಲಿ ಬಿತ್ತು ಪುಳ್ಳವ ಹೆಂಗಸರು ಬಾವಿಯಿಂದ ನೀರು ತಂದು ನೀಡಿ ವಾಸುಕಿಯನ್ನು ರಕ್ಷಿಸಿದರು. ಅದು ಅವರ ನೀರಗಡಿಗೆಯನ್ನು ಸೇರಿಕೊಂಡು ಮನೆಗೆ ಬಂತು. ಗಡಿಗೆಯನ್ನು ಕೋಣೆಯೊಳಗೆ ಇಟ್ಟಾಗ ಅಲ್ಲಿ ಪುಂಚ ಮಾಡಿಕೊಂಡು ವಾಸವಾಗುತ್ತದೆ. ಪುಳ್ಳವರ್ ಜನಾಂಗಕ್ಕೆ ವಿಷಶಮನದ ಶಕ್ತಿಯನ್ನು ವರವಾಗಿ ವಾಸುಕಿ ನೀಡುತ್ತಾನೆ. ಸರ್ಪದ ಪುರಾಣ ಹೇಳಿ ಕುಣಿಯುವ, ಕುಣಿಸುವ, ಸರ್ಪದೋಷ ಪರಿಹಾರ ಮಾಡುವ ಅಧಿಕಾರ ಕೊಟ್ಟನು ಎಂದು ಹೇಳುತ್ತಾರೆ. ಮಂಡಲದ ಮಧ್ಯಭಾಗದಲ್ಲಿ ಮುಖ್ಯ ನಾಗಪಾತ್ರಿ ಹಿಂಗಾರ ಹಿಡಿದು ನಿಂತು ನಾಗನಂತೆ ಓಲಾಡುತ್ತಾನೆ. ಅವನಲ್ಲಿ ನಾಗಸಾನ್ನಿಧ್ಯ ನೆಲೆಯಾಗುವ ಸೂಚನೆಯಾಗುತ್ತದೆ. ನಂತರ ಪೂರ್ಣ ಆವೇಶಕ್ಕೆ ಒಳಗಾಗಿ ಮೈ-ಕೈ ತೀವ್ರವಾಗಿ ನಡುಗುತ್ತದೆ. ಆಗ ಅವನ ಮೇಲೆ ಹಾಲು, ಮೊಸರು ಹಾಗು ಎಳೆನೀರಿನ ಅಭಿಷೇಕ ಮಾಡುತ್ತಾರೆ. ನಾಗನ ಹೆಡೆಯ ಆಕಾರವನ್ನು ತುಳಿಯದೆ, ಅದರ ಸುತ್ತ ನರ್ತಿಸುತ್ತಾರೆ. ನಾಗಪಾತ್ರಿ ಆವೇಶಗೊಂಡ ಬಳಿಕ ತಲವಾರನ್ನು ಹಿಡಿದು, ಮಂಡಲದ ಮೇಲ್ಭಾಗದಲ್ಲಿ ಹುಗಿದ ಬಾಳೆ ಗಿಡದ ಬುಡವನ್ನು ಕಡಿಯುತ್ತಾನೆ. ಕಡಿದ ಬಾಳೆಕಂಬವನ್ನು ಹೆಗಲಲ್ಲಿ ಇಟ್ಟುಕೊಂಡು ನಾಗನಿಗೆ ಅರ್ಪಿಸುತ್ತಾನೆ. ನಂತರ ನಾಗಪಾತ್ರಿ ಹಾವಿನಂತೆ ತೆವಳುತ್ತಾ ಹಾಲು, ಮೊಟ್ಟೆಯ ಮಿಶ್ರಣವನ್ನು, ನಾಲಿಗೆ ಹೊರಚಾಚಿ ತಿನ್ನುತ್ತಾನೆ. ನಂತರ ಹಿಂದೆ ತೆವಳುತ್ತಾ ಹೋಗಿ ನಾಗಕಲ್ಲಿನ ಸಮೀಪ ಹೋಗಿ ಎಚ್ಚರ ತಪ್ಪಿ ಬೀಳುತ್ತಾನೆ. ಉಳಿದ ಪಾತ್ರಧಾರಿಗಳೂ ಕೂಡ ಮಂಡಲದ ಮೇಲೆ ಎಚ್ಚರ ತಪ್ಪಿ ಮಲಗಿತ್ತಾರೆ. ನಂತರ ತೀರ್ಥ ಹಾಕಿ ಅವರನ್ನು ಎಚ್ಚರಿಸುತ್ತಾರೆ. ಇದೊಂದು ಫಲವಂತಿಕೆಯ ಆಚರಣೆಯಾಗಿದೆ. ಇದರಲ್ಲಿ ನಾಗರಾಜ, ನಾಗಯಕ್ಷ, ಕರಿನಾಗ, ಪಿನಿಯಾಳ್ ನಾಗ ಮುಂತಾದ ನಾಗಗಳಿಗೆ ಆರಾಧನೆ ಇರುತ್ತದೆ. ಸರ್ಪಪಾಟ್ಟು ಪಾಡ್ದನವನ್ನು ಹೋಲುವ ಹಾಡುಗಳಾಗಿದ್ದು, ಇದರಲ್ಲಿ ಕದ್ರುಸಂತತಿ, ಗರುಡರ ಹಾಗೂ ಇತರ ನಾಗದೇವತೆಗಳ ಕಥೆಯನ್ನು ಹೇಳಿ ಸ್ತುತಿಸುತ್ತಾರೆ.•(c)ಡಾ.ಲಕ್ಷ್ಮೀ ಜಿ ಪ್ರಸಾದ .


 ಸರ್ಪಂಕಳಿ ‘ಕಳಿ’ ಎಂದರೆ ಆಟ ಎಂದರ್ಥ. ಸರ್ಪಂಕಳಿ ಎಂದರೆ ನಾಗ/ನಾಗಿಣಿಯ ಆಟ ಎಂದರ್ಥ. ಇದೊಂದು ಬಯಲು ಕುಣಿತ, ಸರ್ಪಂಕಳಿಯಲ್ಲಿ ಮೊದಲು ಒಂದು ಸಣ್ಣ ಮಂಡಲ ರಚಿಸಿ, ಮಂಟಪದೊಳಗೆ ದೀಪ ಹಚ್ಚಿ ಇಡುತ್ತಾರೆ. ಈ ಮಂಡಲದಲ್ಲಿ ಕಲಶಗಳ ಸ್ಥಾಪನೆ ಮಾಡುತ್ತಾರೆ. ಇದರಲ್ಲಿ ಸ್ವಸ್ತಿಕ ಹಾಗೂ ನಾಗಚಿಹ್ನೆಗಳಿರುತ್ತವೆ. ಸರ್ಪಂಕಳಿಯ ಪಾತ್ರಧಾರಿಯು ತನ್ನ ಎಡ-ಬಲ ಮತ್ತು ಹಣೆಯ ಮೇಲ್ಭಾಗಕ್ಕೆ ಅಡಿಕೆ ಹಾಳೆಯಿಂದ ತಯಾರಿಸಿದ ನಾಗನ ಹೆಡೆಯನ್ನು ಕಟ್ಟಿಕೊಂಡಿರುತ್ತಾನೆ. ಹಿಂಗಾರವನ್ನು ಅಕ್ಷತೆ ಕಾಳನ್ನು ಸುತ್ತ ಚೆಲ್ಲುತ್ತಾ ಹಾವಿನಂತೆ ಬುಸುಗುಡುತ್ತಾ, ನಾಲಿಗೆ ಹೊರಗೆ ಹಾಕುತ್ತಾ ಕುಣಿಯುತ್ತಾನೆ. ಹಿಮ್ಮೇಳದ ನಾದಕ್ಕೆ ಅನುಗುಣವಾಗಿ ಆತ ಕುಣಿಯುತ್ತಾನೆ. ಆರಂಭದಲ್ಲಿ ನಾಗಿಣಿ ಪಾತ್ರಧಾರಿ ಹಸಿಮೊಟ್ಟೆಗಳೊಂದಿಗೆ ರಂಗಮಂಡಲದ ಸುತ್ತ ಬರುತ್ತಾನೆ. ನಂತರ ಹಸಿ ಮೊಟ್ಟೆಯ ಸ್ಥಾನದಲ್ಲಿ ಬೇಯಿಸಿದ ಮೊಟ್ಟೆ ಇಡುತ್ತಾರೆ. ಹೀಗೆ ಇಟ್ಟ ಆರು ಮೊಟ್ಟೆಗಳನ್ನು ಮುಖ್ಯ ನಾಗ ಪಾತ್ರಧಾರಿ ತೆವಳಿಕೊಂಡು ಬಂದು ನಾಗನಂತೆಯೇ ಬಾಯಿಂದ ಕಚ್ಚಿ ತಿನ್ನುತ್ತಾನೆ. ಎರಡನೇ ಹಂತದಲ್ಲಿ ನಾಗಿಣಿ ಪಾತ್ರಧಾರಿ ಅಡಿಕೆ ಹಾಳೆಯಿಂದ ತಯಾರಿಸಿದ ಹತ್ತಡಿ ಎತ್ತರದ ದೊಡ್ಡ ಅಣಿಯನ್ನು ಕಟ್ಟಿಕೊಂಡು ನೃತ್ಯ ಮಾಡುತ್ತಾನೆ. ಕೋಪದಿಂದ ಕಟ್ಟಿರುವ ಹೆಡೆಯನ್ನು ಕೆಳಕ್ಕೆ ಬಾಗಿಸಿ ನೆಲಕ್ಕೆ ಅಪ್ಪಳಿಸುವ ದೃಶ್ಯವಿರುತ್ತದೆ. “ಸರ್ಪಂಕಳಿ, ಸರ್ಪಂತುಳ್ಳಲ್ ಇತ್ಯಾದಿ ನಾಗಾರಾಧನೆಯಲ್ಲಿನ ಆಚರಣೆಯ ಮುಖ್ಯ ಉದ್ದೇಶ ಫಲವಂತಿಕೆಯನ್ನು ಶ್ರೀಮಂತಗೊಳಿಸುವುದು. ನಾಗನ ಪ್ರೀತ್ಯರ್ಥವಾಗಿ ಕರಾವಳಿಯಲ್ಲಿ ಜರುಗುವ ಢಕ್ಕೆಬಲಿ, ಬ್ರಹ್ಮಮಂಡಲ ನಾಗಮಂಡಲ ಈ ಎಲ್ಲಾ ಆಚರಣೆಗಳಿಗೆ ಸರಿಸಮಾನವಾದ ಮತ್ತು ಅತೀ ಪ್ರಾಚೀನವಾದ ಆಚರಣೆ ಸರ್ಪಂತುಳ್ಳಲ್ ಮತ್ತು ಸರ್ಪಂಕಳಿಯಲ್ಲಿ ಗಮನಿಸಬಹುದು” ಎಂದು ಎಸ್.ಎ. ಕೃಷ್ಣಯ್ಯ ಹೇಳಿದ್ದಾರೆ. .•(c)ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥ "ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ -ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment