Monday, 25 July 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 319 ಪುಲಂದಾಯ ©ಡಾ.ಲಕ್ಷ್ಮೀ ಜಿ ಪ್ರಸಾದ


 

ಮೌಖಿಯ ಇತಿಹಾಸ ಕೂಡ ಇತಿಹಾಸ ಅಧ್ಯಯನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ .ತುಳು ಪಾದ್ದನಗಳಲ್ಲಿ ಆಚರಣೆಗಳಲ್ಲಿ ಇತಿಹಾಸದ ಎಳೆಗಳು ಮೌಖಿಕ ಸಂಕಥನ ರೂಪದಲ್ಲಿ ಸಿಗುತ್ತವೆ .ತುಳುವರ ಭೂತಾರಾಧನೆಯಲ್ಲಿ ಇಂಥಹ ಅನೇಕ ಇತಿಹಾಸದ ಎಳೆಗಳು ಅಮೂರ್ತ ರೂಪದಲ್ಲಿ ಅಡಕವಾಗಿವೆ.ಪುಲಂದಾಯ ದೈವದ ಮೂಲ ಕಥಾನಕದಲ್ಲಿ ಕೂಡ ಇಂಥಹ ಒಂದು ಇತಿಹಾಸದ ಎಳೆ ಇದೆ

ಕದ್ರಿಯಲ್ಲಿ ಪುಲಂದಾಯ/ಫುಲಂದಾಯ ಬಂಟ ಎಂಬ ಅಪರೂಪದ ದೈವಕ್ಕೆ ಆರಾಧನೆ ಇದೆ.ಬಂಟ ಎಂದರೆ ವೀರ ಎಂಬ ಅರ್ಥವೂ ಇದೆ.ಫುಲಂದಾಯ ದೈವದ ವೇಷ ಭೂಷಣ ಅಭಿವ್ಯಕ್ತಿ ನೋಡಿದಾಗ ಈತನೊಬ್ಬ ವೀರ ಪುರುಷನೇ ಇದ್ದಿರಬೇಕು ಎಂದು ಸ್ಪಷ್ಟವಾಗುತ್ತದೆ .ಅರಸು ಪುಲಂದಾಯ ಎಂದಿರುವ ಕಾರಣ ಮೂಲತ ಓರ್ವ ವೀರನಾದ ಸ್ಥಳೀಯ ಅರಸು ಆಗಿದ್ದಿರುವ ಸಾಧ್ಯತ ಇದೆ (C).ಡಾ.ಲಕ್ಷ್ಮೀ ಜಿ ಪ್ರಸಾದ
ಮಂಗಳೂರಿನ ಬಿಜೈ ಸಮೀಪ ಈ ದೈವದಒಂದು ಸ್ಥಾನವಿದೆ.ಈ ದೈವದ ಹಿನ್ನೆಲೆ ಈ ತನಕ ಸಿಕ್ಕಿರಲಿಲ್ಲ .ಈ ದೈವದ ಮೂಲದ ಬಗ್ಗೆ ಪ್ರಚಲಿತವಿರುವ ಐತಿಹ್ಯವನ್ನು ಯುವ ಸಂಶೋಧಕ ಅಭಿಲಾಷ್  ಚೌಟ ಅವರು ನೀಡಿದ್ದಾರೆ .
ಅಲ್ಲಿ ಪ್ರಚಲಿತವಿರುವ ಐತಿಹ್ಯ ಹೀಗಿದೆ .ಅಲ್ಲಿ ಹೆಣ್ಣೊಬ್ಬಳನ್ನು ಯಾರೋ ಎಳೆದೊಯ್ಯಲು, ಅತ್ಯಚಾರ ಮಾಡಲು ಯತ್ನಿಸುತ್ತಾರೆ .ಆಗ ಅಲ್ಲಿಗೆ ಕುದುರೆ ಏರಿ ಬಂದ ಓರ್ವ ವೀರ ಅವರನ್ನು ತಡೆದು ಆ ವನಿತೆಯ ಮಾನ ಹಾಗೂ ಪ್ರಾಣವನ್ನು ಕಾಪಾಡುತ್ತಾನೆ .ಈತನಿಗೆ ಒಂದು ಬಂಟ ಕಂಬ ಕೂಡ ಅಲ್ಲಿದೆ ಎಂದು ಅಭಿಲಾಶ್ ಅವರು ತಿಳಿಸಿದ್ದಾರೆ .ಬಂಟ ಕಂಬ ಮತ್ತು  ವೀರ ಕಂಬ ಎರಡೂ ಒಂದೇ .
ಹಿಂದೆ ಅಪರಿಮಿತ ಶೌರ್ಯ ಸಾಹಸ ಮೆರೆದ ವೀರರ ಸ್ಮಾರಕವಾಗಿ ವೀರ ಕಂಬ ನೆಡುತ್ತಿದ್ದರು .
ಯುದ್ಧದಲ್ಲಿ ತುರುಗೋಳು, ಪೆಣ್ಬುಯಲು ಮೊದಲಾದ ಕಾದಾಟದಲ್ಲಿ ಹೋರಾಡಿ ಮರಣ ಹೊಂದಿದ್ದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಬಹುದೊಡ್ಡ ಪರಂಪರೆಯೇ ಕನ್ನಡ ನಾಡಿನಲ್ಲಿರುವುದನ್ನು ನೋಡಬಹುದಾಗಿದೆ.
ಹೆಣ್ಣನ್ನು ಎಳೆದು ಕೊಂಡು ಹೋಗುವವರನ್ನು ತಡೆದು ಯುದ್ಧ ಮಾಡಿ ಹೆಣ್ಣನ್ನು ರಕ್ಷಣೆ ಮಾಡುವುದು ಒಂದು ಹೆಮ್ಮೆಯ ಶೌರ್ಯದ ಮಹತ್ಕಾರ್ಯವಾಗಿತ್ತು.ಅಂತೆಯೇ ಹಸುಗಳನ್ನು ತಡೆಯುಬುದು ಕೂಡ .ಇದಕ್ಕೆ ಪೆಣ್ಬುಯಲು,ತುರುಗೋಳು..ಎಂದು ಕರೆಯುತ್ತಿದ್ದರು .ಅಂತಹ ಸಾಹಸ ಮಾಡಿದ ವೀರರ ಸ್ಮಾರಕವಾಗಿ ವೀರಗಲ್ಲು ಹಾಕುತ್ತಿದ್ದರು .©ಡಾ.ಲಕ್ಷ್ಮೀ ಜಿ ಪ್ರಸಾದ
ಬಹುಶ ಅಂತದೇ ಒಂದು ವೃತ್ತಾಂತ ಪುಲಂದಾಯ ದೈವದ ಮೂಲ ಕಥಾನಕದಲ್ಲಿದೆ.ಹಾಗಾಗಿಯೇ ಅಲ್ಲಿ ಈ ದೈವಕ್ಕೆ ಒಂದು ಬಂಟ ಕಲ್ಲು ಕೂಡ ಇದೆ,ಬಂಟ ಎಂದರೆ ವೀರ ಎಂಬ ಅರ್ಥವಿದೆ ಬಂಟ ಕಲ್ಲು ಎಂದರೆ ವೀರಗಲ್ಲು ಎಂದರ್ಥವಾಗುತ್ತದೆ.ಯುದ್ಧ ವೀರರ ನೆನಪಿನಲ್ಲಿ ವೀರಗಲ್ಲು ನೆಡುವ ಪದ್ಧತಿ ಎಲ್ಲೆಡೆ ಪ್ರಚಲಿತವಿದೆ .

ಅಸಾಮಾನ್ಯ ಸಾಹಸ ಮೆರೆದ, ಅತಿಮಾನುಷ ಶಕ್ತಿ ಇರುವ ಅನ್ಯಾಯವನ್ನು ಪ್ರಶ್ನಿಸಿದ ತುಳುನಾಡಿನ ವೀರರು ದೈವತ್ವ ಪಡೆದು ಆರಾಧನೆ ಹೊಂದಿರುವುದು ಕೋಟಿ ಚೆನ್ನಯ.ಮುಗೆರ್ಲು,ಕೊರಗತನಿಯ,ಕೋಟೆದ ಬಬ್ಬು ಮೊದಲಾದ ದೈವಗಳ ಕಥಾನಕದಲ್ಲಿ ವ್ಯಕ್ತವಾಗಿದೆ 
.ಅಂತೆಯೇ ಹೆಣ್ಣನ್ನು ಸೆಳೆದುಕೊಂಡು ಹೋಗಲು ಯತ್ನಿಸಿದ ದುಷ್ಟರನ್ನು ತಡೆದು ಹೆಣ್ಣಿನ ಮಾನ ಪ್ರಾಣವನ್ನು ರಕ್ಷಣೆ ಮಾಡಿದ ಓರ್ವ ವೀರ ಕಾಲಾಂತರದಲ್ಲಿ ದೈವತ್ವ ಪಡೆದು ಫುಲಂದಾಯ ಎಂಬ ಹೆಸರಿನಲ್ಲಿ ಆರಾಧನೆ ಹೊಂದುತ್ತಾನೆ .ಆ ವೀರ ಹುಣಸೆ ಹುಳಿ (ಪುಳಿತ್ತ ಮರ) ಮರಕ್ಕೆ ತನ್ನ ಕುದುರೆಯನ್ನು ಕಟ್ಟಿ ಹಾಕಿದ ಕಾರಣಕ್ಕೆ ಆತನಿಗೆ ಫುಲಂದಾಯ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ .ಹೆಣ್ಣಿನ ರಕ್ಷಣೆಗೆ ಕುದುರೆ ಏರಿ ಬಂದಾತ ಜಾರಂದಾಯ ದೈವ.ಹಾಗಾಗಿ ಜಾರಂದಾಯ ದೈವವನ್ನೇಪು/ ಫುಲಂದಾಯ ಎಂಬ ಹೆಸರಿನಲ್ಲಿ ಆರಾಧಿಸುತ್ತಾರೆ ಎಂಬ ನಂಬಿಕೆಯೂ ಇದೆ.ಇಂಥ ಅಸಾಮಾನ್ಯ ಸಾಹಸ ಮಾಡಲು ಮಾನವನಿಂದ ಅಸಾಧ್ಯ ಹಾಗಾಗಿ ತನ್ನನ್ನು ನಂಬಿದ ಜನರ ರಕ್ಷಣೆಗಾಗಿ ಜಾರಂದಾಯ ದೈವವೇ ಕುದುರೆ ಈರಿ ಬಂದಿರಬಹುದು ಎಂಬ ಭಾವನೆ ಪುಲಂದಾಯ ಮತ್ತು ಜಾರಂದಾಯ ದೈವಗಳಲ್ಲಿ ತಾದಾತ್ಮ್ಯ ಉಂಟಾಗಲು ಕಾರಣವಾಗಿದೆ .ಒಂದು ಹೋದ ದೈವ ಯಾರೆಂದು ಹಿನ್ನೆಲೆ ತಿಳಿಯದೆ ಹೋದಾಗ ಪ್ರಸಿದ್ಧ ದೈವದೊಂದಿಗೆ ಸಮೀಕರಣಗೊಂಡು ಆರಾಧಿಸಲ್ಪಡುವುದು  ಸಾಮಾನ್ಯ ವಿಚಾರ ©ಡಾ.ಲಕ್ಷ್ಮೀ ಜಿ ಪ್ರಸಾದ
ತುಳುವ ಭೂತಾರಾಧನೆಯಲ್ಲಿ ಇತಿಹಾಸದ ಎಳೆಗಳು ಅಮೂರ್ತ ರೂಪದಲ್ಲಿ ಅಡಕವಾಗಿವೆ ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆಈ ಬಗ್ಗೆ ಹೆಚ್ಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
ಮಾಹಿತಿ ನೀಡಿದ ಅಭಿಲಾಶ್ ಚೌಟ ಹಾಗೂ ಫೋಟೋ ಒದಗಿಸಿ ಕೊಟ್ಟ ಜೀವಿತ್ ಶೆಟ್ಟಿ ಇವರಿಗೆ ಕೃತಜ್ಞತೆಗಳು

No comments:

Post a Comment