Tuesday, 30 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು:359: ವಯನಾಟ್ ಕುಲವನ್ ©ಡಾ ಲಕ್ಷ್ಮೀ ಜಿ ಪ್ರಸಾದ

ಸುಳ್ಯ ಕಾಸರಗೋಡು ಕಣ್ಣೂರು ಪರಿಸರಗಳಲ್ಲಿ ಈ ದೈವ ಗಳಿಗೆ ಆರಾಧನೆ ಇದೆ.ಇವರನ್ನು ಮಲೆಯಾಳಿ ಶೈಲಿಯಲ್ಲಿ ತೆಯ್ಯಂ ಕಟ್ಟಿ ಆರಾಧನೆ ಮಾಡುತ್ತಾರೆ.
ಈ ಎರಡೂ ದೈವಗಳು ಮೂಲತ ಮಾನವ ಮೂಲದ ಶಕ್ತಿಗಳು.ಆದರೂ ಇವರ ಹುಟ್ಟು ಬೆಳವಣಿಗೆ ಪ್ರಕರಣದಲ್ಲಿ ಪುರಾಣ ಮೂಲದ ಕಥಾನಕ ಗಳು ಸೇರಿಕೊಂಡಿವೆ .ಇವರ ಸ್ತೋತ್ರಂಪಾಟ್ಟು(ಪಾಡ್ದನಕ್ಕೆ ಸಂವಾದಿಯಾಗಿರುವ ಮಲೆಯಾಳ ಜಾನಪದ ಕಾವ್ಯ) ವಿನಲ್ಲಿ ಪುರಾಣ ಮತ್ತು ಮಾನವ ಮೂಲತ ಕಥಾನಕ ಗಳನ್ನು ಸಮೀಕರಿಸಿದ್ದಾರೆ.
ವಯನಾಟ್ ಕುಲವನ್ ದೈವದ ಕಥಾನಕ ವನ್ನು ಕೇಳು ಮಾಸ್ತರ್ ಅಗಲ್ಪಾಡಿ ಸಂಗ್ರಹ ಮಾಡಿ ನೀಡಿದ್ದಾರೆ.
ಒಂದು ದಿನ ಪಾರ್ವತಿ ದೇವಿ ಹಾಗೂ ಈಶ್ವರ ದೇವರು ಕಾಡಿನಲ್ಲಿ ಬೇಡ ಬೇಡತಿಯರ ರೂಪದಲ್ಲಿ ವಿಹರಿಸುತ್ತಾ ಇದ್ದರು.ಶಿವನಿಗೆ ಪಾರ್ವತಿ ದೇವಿಯಲ್ಲಿ ವಾಂಛೆ ಉಂಟಾದಾಗ ಪಾರ್ವತಿ ದೇವಿ ನಿರಾಕರಿಸುತ್ತಾಳೆ .ಆಗ ಶಿವನ ಶಕ್ತಿ ಯಿಂದ ಕರಿಮಕಲ್,ತಿರುಮಕಲ್,ತೇನ್ ಮಕಲ್ ಮೂರು ಮರಗಳು ಹುಟ್ಟುತ್ತವೆ .ಇವುಗಳಲ್ಲಿ ತೇನ್ ಮಕಲ್/ ತೆಂಗಿನ ಮರದ ಬುಡದಿಂದ ಕತ್ತಿಯಲ್ಲಿ ಕಡಿದಾಗ ಧಾರಾಳವಾಗಿ ಅಮೃತ ಸಮಾನವಾದ ಮಧು/ ಕಳ್ಳು ಸಿಗುತ್ತಾ ಇತ್ತು.ಶಿವನು ಇದನ್ನು ಸದಾ ಕುಡಿದು ಪಾನಮತ್ತನಾಗಿ ಇರಲು ಗಾಭರಿಯಾದ ಪಾರ್ವತಿ ದೇವಿ ಕಳ್ಳು ಎಲ್ಲವೂ ತೆಂಗಿನ ಕೋಡು/ ತೆನೆಯಲ್ಲಿ ಹೋಗಿ ಸೇರುವಂತೆ ಮಾಡುತ್ತಾಳೆ. ಮತ್ತು ಅವಳ ಶಕ್ತಿಯಿಂದ ಮರ ಎತ್ತರಕ್ಕೆ ಬೆಳೆಯಿತು. ಮರು ದಿನ ಶಿವ ಬಂದು ಮೆದ ಬುಡಕ್ಕೆ ಗೀರಿದಾಗ ಕಳ್ಳು ಬರಲಿಲ್ಲ. ಆಗ ಅವನು ತನ್ನ ತೊಡೆಯನ್ನು ತಟ್ಟಿ ದಿವ್ಯನ್ ಎಂಬ ಶಕ್ತಿ ಯನ್ನು ಸೃಷ್ಟಿಮಾಡಿದನು.ಅವನಿಗೆ ದಿನಾಲು ಕಳ್ಳನ್ನು ತೆಗೆದಯ ತರುವ ಕೆಲಸವನ್ನು ನೀಡಿದನು. ಅದರಿಂದಾಗಿ ದಿವ್ಯನ್ ಗೆ ಅಮೃತ ಪುತ್ರನ್ ಎಂಬ ಹೆಸರು ಬಂರು.
ಇದರಿಂದಾಗಿ ಶಿವ ಮತ್ತೆ ಪಾನಮತ್ತನಾಗಿಯೇ ಉಳಿದನು ಆಗ ಪಾರ್ವತಿ ವಿಷ್ಣು ದೇವರಲ್ಲಿ ಮೊರೆಹೋದಳು.ಆಗ ವಿಷ್ಷಣು ದೇವರು ಗರ್ಭಿಣಿ ಸ್ತ್ರೀಯ ರೂಪು ಧರಿಸಿ ದಿವ್ಯನ್ ನಲ್ಲಿ ಕಳ್ಳು ಕೇಳುತ್ತಾರೆ. ಮೊದಲು ಕೊಡಲು ನಿರಾಕರಿಸಿದರೂ ನಂತರ ಕಡಿಮೆಯಾದ ಕಳ್ಳಿಗೆ ನೀರು ಸೇರಿಸಿ ಕೊಡು ಎಂಬ ಸಲಹೆಗೆ ಒಪ್ಪಿ ಕಳ್ಳು ನೀಡುತ್ತಾನೆ.
ಆ ದಿನ ನೀರು ಸೇರಿಸಿದ ಕಳ್ಳನ್ನು ಕುಡಿದ ಶಿವನಿಗೆ ರುಚಿಯಲ್ಲಿ ವ್ಯತ್ಯಾಸ ತಿಳಿದು ಕೋಪಗೊಂಡನು.ಆಗ ಅವನು ಸತ್ಯವನ್ನು ತಿಳಿಸಿದನು ಆದರೂ ಕೋಪಗೊಂಡ ಶಿವನು ನೀನು ಭೂಲೋಕದಲ್ಲಿ ಮನುಷ್ಯ ನಾಗಿ ಜನಿಸು ಎಂದು ಶಾಪ ನೀಡುತ್ತಾನೆ
ಇತ್ತ ಭೂಲೋಕದಲ್ಲಿ ವಯನಾಡು ಪರಿಸರದಲ್ಲಿ ನೀಲಿಮಾಡಂತ್ತಿಕುಲ ಎಂಬ ಊರಿನಲ್ಲಿ ತಮರಶ್ಶೇರಿಯಮ್ಮ  ಎಂಬ ಶಿವ ಭಕ್ತೆ ಇದ್ದಳು .ಸಂತಾನವಿಲ್ಲದ ಈಕೆ ಶಿವನ ಪೂಜೆಯನ್ನು ಭಕ್ತಿಯಿಂದ ಮಾಡುತ್ತಾ ಇದ್ದಳು.ಶಿವನಿಂದ ಶಾಪಕ್ಕೊಳಗಾಗಿ ಭೂಲೋಕದಲ್ಲಿ ಹುಟ್ಟು ಪಡೆಯುವ ದಿವ್ಯನ್ ಈಕೆಯ ಮಗನಾಗಿ ಜನಿಸಿದನು .ತೀಯ ಕುಲದಲ್ಲಿ ಮೊದಲು ಹುಟ್ಟಿದ ಕಾರಣ ವಯನಾಡಿನ ಮೇನೋಕ್ ಪೊನ್ ಮಾಡದಲ್ಲಿ ಹುಟ್ಟಿದ ಕಾರಣ ಈತನನ್ನು ವಯನಾಟ್ ಕುಲವನ್ ಎಂದು ಕರೆದರು.ಶಿವ ಪುತ್ರ ನಾದ ಕಾರಣ ಅವನಂತೆಯೇ ಪಾನ ಪ್ರಿಯನಾಗಿ ತಮೋಗುಣನಾಗಿ ಮಧು ಮಾಂಸ ಸ್ವೀಕರಿಸುತ್ತಾ ಇದ್ದನು.
ಪಾನಮತ್ತನಾಗಿ ಸಂಚರಿಸುತ್ತಾ ಕದಳಿವನ( ಮಧುವನ)ವನ್ನು ಪ್ರವೇಶ ಮಾಡುತ್ತಾನೆ. ಆಗ ಇಲ್ಲಿ ಯಾರೂ ಪ್ರವೇಶ ಮಾಡಬಾರದು ಎಂದು ಅಶರೀರವಾಣಿ ಕೇಳಿಸಿದರೂ ಅದನ್ನು ನಿರ್ಲಕ್ಷಿಸಿ ಒಳಗೆ ಪ್ರವೇಶ ಮಾಡುತ್ತಾನೆ ಅಲ್ಲಿ ಮಹಾದೇವನಿಗಾಗಿ ಇರಿಸಿದ್ದ ಮಧುವಿನ ಪಾತ್ರೆಯನ್ನು ತೆರೆದು ನೋಡುತ್ತಾನೆ.ತಕ್ಷಣವೇ ಕೋಪಗೊಂಡ ಶಿವ ಆತನ ದೃಷ್ಟಿ ಯನ್ನು ಕಿತ್ತುಕೊಳ್ಳುತ್ತಾನೆ .ನಂತರ ಶಿವನು ಪ್ರತ್ಯಕ್ಷ ನಾಗಿ ತನ್ನ ತ್ರಿಶೂಲ ದಿಂದ ವಯನಾಟ್ ಕುಲವನ್ ಹಣೆಗೆ ಹನ್ನೊಂದು ಬಾರಿ ಚುಚ್ಚಿದನು.
ಆಗ ಪಶ್ಚಾತ್ತಾಪದಿಂದ ಶಿವನ ಕ್ಷಮೆ ಕೇಳಲು ಶಿವನು ಕಂಚಿನ ಕಣ್ಣು ಕಟ್ಟಿಕೋ ಬಿದಿರಿನ ಸೂಟೆಯನ್ನು ಹಿಡಿದುಕೋ ಎಂದು ಹೇಳುತ್ತಾನೆ .ಬೇರೆ ದಾರಿಯಿಲ್ಲದೆ ದಿವ್ಯನ್ ಹಾಗೆಯೇ ಮಾಡಿದನು. ಇದರಿಂದಾಗಿ ಅವನಿಗೆ ಪೊಯ್ ಕಣ್ಣ ಎಂಬ ಹೆಸರು ಬಂತು
ಇವನಿಗೆ ಕಣ್ಣು ಹೋದದ್ದರ ಅಭಿನಯವನ್ನು ದೈವ ಕಟ್ಟಿದಾಗ ಪಾತ್ರಿಯು ಮಾಡುತ್ತಾ ಕಣ್ಣನ್ನು ಹುಡುಕುವ ಕೆಲಸವನ್ನು ಸಾಂಕೇತಿಕವಾಗಿ ಮಾಡಿ ತೋರಿಸುತ್ತಾರ.ಶಿವ ಹಣೆಗೆ ಚುಚ್ಚಿರುವುದರಿಂದ ಗಾಯವಾಗಿ ರಕ್ತ ಒಸರುವುದನ್ನು ಮುಖವರ್ಣಿಕೆಯಲ್ಲು ತೋರಿಸುತ್ತಾರೆ
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಈತ ಮೂಲತಃ ವಯನಾಡು ಪರಿಸರದಲ್ಲಿ ಹುಟ್ಟಿದ ಮಾನವ .ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳು ಆಗಿದ್ದವು. ಈತ ಪ್ರವೇಶ ಮಾಡಬಾರದು ಎಂದು ನಿಷೇಧ ವಿರುವ ಮಧುವನವನ್ನು ಪ್ರವೇಶ ಮಾಡಿ ದೇವರಿಗಿಟ್ಟ ಮಧು ವನ್ನು ಮುಟ್ಟಿ ಅಶುದ್ಧಗೊಳಿಸಿದ್ದಕ್ಕಾಗಿ ಆತ ಶಿಕ್ಷೆಗೆ ಒಳಗಾಗಿ ಕಣ್ಣನ್ನು ಕಳೆದುಕೊಂಡಿರಬಹುದು.ದುರಂತ ಮತ್ತು ದೈವತ್ವ ತುಳು ಸಂಸ್ಕೃತಿ ಯ ಒಂದು ನಾಣ್ಯದ ಎರಡು ಮುಖಗಳ.ಅಂತೆಯೇ ದುರಂತವನ್ನಪ್ಪಿದ ವಯನಾಟ್ ಕುಲವನ್ ದೈವಿಕತೆ ಪಡೆದು ಆರಾಧನೆ ಹೊಂದುತ್ತಾನೆ.
ಈತನನ್ನು ಆದಿ ಪರಂಬಿಲ್ ಕಣ್ಣನ್ ಎಂಬವನು ಮದುಕಲಶ,ಪೊಯ್ ಕಣ್ಣು,ಬಿದಿರು ಸೂಟೆ ಬಿಲ್ಲು ಬಾಣ ಇಟ್ಟು ನಿತ್ಯವೂ ಪೂಜಿಸಿದನು ಹೀಗೆ ವಯನಾಟ್ ಕುಲವನ್ ಮೂರ್ತೆದಾರರ ಕುಲದೈವವಾಸನು
ಆಧಾರ ಗ್ರಂಥ: ಕೇರಳದ ತೆಯ್ಯಂ - ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment