Tuesday, 30 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 369 ಚೊನ್ನಮ್ಮ ಭಗವತಿ © ಡಾ ಲಕ್ಷ್ಮೀ ಜಿ ಪ್ರಸಾದ

ಭಗವತಿ ಎಂಬುದು ಒಂದು ದೈವವಲ್ಲ. ಅನೇಕ ಶಕ್ತಿಗಳನ್ನು ಭಗವತಿ ಎಂಬ ಒಂದು ಹೆಸರಿನಲ್ಲಿ ಆರಾಧಿಸುತ್ತಾರೆ. ಅಂತೆಯೇ ಚೊನ್ನಮ್ಮ ಭಗವತಿ ಒಂದು ಪ್ರಸಿದ್ಧ ಭಗವತಿ ದೈವ.ಮೂಲತ ಈಕೆ ಮಾನವ ಮೂಲದ ದೈವ.ಮಲೆಯಾಳ ಶೈಲಿಯ ಎಲ್ಲ ತೆಯ್ಯಂ ಗಳಂತೆ ಈಕೆಗೂ ಅಲೌಕಿಕ ನೆಲೆಯ ಪುರಾಣ ಸಂಬಂಧಿಸಿದ ಕಥಾನಕ ಕೂಡ ಇದೆ.
ಈಗಿನ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಎರವಳ್ಳಿ ಕೂಲಂ ಎಂಬಲ್ಲಿ ರಾಜ ಪುರೋಹಿತ ದಂಪತಿಗಳಿದ್ದರು.ದೀರ್ಘ ಕಾಲ ಮಕ್ಕಳಾಗದ ಅವರು ಸಂತತಿಗಾಗಿ ಕಾಡಿಗೆ ತೆರಳಿ ತಪಸ್ವಿಗಳಾದ ಮಹರ್ಷಿಯೊಬ್ಬರ ಸೇವೆ ಮಾಡತೊಡಗಿದರಯ.ಅವರ ಸೇವೆಗೆ ಮೆಚ್ಚಿದ ಮಹರ್ಷಿಗಳು ನಲುವತ್ತೊಂದನೆಯ ದಿನ ಮಂತ್ರ ಪುಷ್ಪಗಳನ್ನು ನೀಡಿದರು.ಆದರೆ ಅವನ್ನು ಕಾಡಿನ ಜಿಂಕೆಯೊಮದು ಬಂದು ತಿಂದಿತು.
ಅದು ಗರ್ಭ ಧರಿಸಿ ಏಳು ತಿಂಗಳಾಗುವಾಗ ಬಯಕೆಗಾಗಿ ಕದಳಿ ತೋಟಕ್ಕೆ ನುಗ್ಗಿ ಬಾಳೆಯನ್ನು ತಿನ್ನುವಾಗ ಮಾಲಿಕ ಬಂದು ಹೊಡೆದು ಕೊಲ್ಲಲು ಹೊರಟಾಗ ಹೊಡೆಯಬೇಡ ನನ್ನ, ಬಯಕೆಗಾಗಿ ತಿಂದಿರುವೆ ಎಂದು ಮಾನವ ಭಾಷೆಯಲ್ಲಿ ಹೇಳಿದಾಗ ಅಚ್ಚರಿಗೊಂಡು ಅದನು ಹೊಡೆಯದೆ ಹಾಗೆ ಹಿಂದೆ ಬಂದನು.
ಒಂಬತ್ತು ತಿಂಗಳ ನಂತರ ಅದು ಮಾನವ ಶಿಶುವನ್ನು ಹಡೆದು ಅದರತ್ತ ಆಸಕ್ತಿ ಇಲ್ಲದೆ ಬೇರೆ ಕಡೆ ಹೊರಟು ಹೋಯಿತು.ಇತ್ತ ಕಾಡಿಗೆ ವಿಹರಿಸಲು ಬಂದ ಶಿವ ಪಾರ್ವತಿಯರು ಈ ಹೆಣ್ಣು ಶಿಶುವನ್ನು ಆ ಸಂತತಿ ಇಲ್ಲದ ರಾಜ ಪುರೋಹಿತ ದಂಪತಿಗಳಿಗೆ ನೀಡಿದರು. ಆ ಮಗುವಿಗೆ ಚೊನ್ನಮ್ಮ ಎಂದು ಹೆಸರಿಟ್ಟು ಅವರು ಸಾಕಿದರು.
ದೊಡ್ಡವಳಾಗುತ್ತಾ ಬಂದಂತೆ ಆಕೆ ಶುಧ್ಧಾಚಾರವನ್ನು ಪಾಲಿಸುತ್ತಾ ಇರಲಿಲ್ಲ. ಇದರಿಂದ ಕೋಪಗೊಂಡ ತಂದೆ ಬಾರುಕೋಲಿನಿಂದ ಬಾರಿಸುತ್ತಾರೆ.ಇದರಿಂದಾಗಿ ಕೋಪಗೊಂಡ ಅವಳು ಮನೆಬಿಟ್ಟು ಹೊಗೆ ಹೋಗುತ್ತಾಳೆ.
ಅಲ್ಲಿಂದ ಓರ್ವ ವಿಶ್ವ ಕರ್ಮನಲ್ಲಿಗೆ ಹೋಗಿ ತನಗೆ ಒಂದು ದೇವ ಕುಟ್ಟಿಲು ( ದೇವರ ಕೋಣೆ) ಕಟ್ಟಿ ಕೊಡಬೇಕು ಎಂದು ಕೇಳುತ್ತಾಳೆ.ಆ ಶಿಲ್ಪಿಯು ಶ್ರೀಗಂಧದ ‌ಮರದಿಂದ ಚಾರುವಾದಿಲ್,ಪೋರುವಾದಿಲ್,ಒಳಿವಾದಿಲ್ ಕಿಳಿವಾದಿಲ್ ಮಣಿ ಚಿತ್ರ ಪೀಠ ಮೊದಲಾದ ಕರ ಕುಶಲತೆಯನ್ನು ಮಾಡಿ ಒಂದು ಕೋಣೆಯನ್ನು ನಿರ್ಮಿಸಿ ಕೊಡುತ್ತಾನೆ.ಚೊನ್ನಮ್ಮ ಅದರಲ್ಲಿ ನೆಲೆಯಾಗುತ್ತಾಳೆ.ಅಲ್ಲಿಯೇ ಮೈ ನೆರೆಯುತ್ತಾಳೆ.ಮಗಳ ದೊಡ್ಡವಳಾದ ವಿಷಯ ತಿಳಿದ ತಂದೆ ತಾಯಿಗಳು ಅವಳಿಗೆ ಹಾಲು ಪಾಯಸ ಮಾಡಿ ತರುತ್ತಾರೆ .ಚೊನ್ನಮ್ಮ ಬಾಗಿಲು ತೆರೆಯುವುದಿಲ್ಲ .ಬೇಸರಗೊಂಡ ಅವರು ಹಾಲು ಪಾಯಸವನ್ನು ಬಾಗಿಲ ಪಡಿಯಲ್ಲಿ ಇಟ್ಟು ಹಿಂತಿರುಗಿದರು.ಚೊನ್ನಮ್ಮ ಬಾಗಿಲು ತೆರೆದು ಪಾತ್ರೆಯೆತ್ತಿ ಬಿಸಾಡಿದಳು ಅದು ಕುಟ್ಟನಾಡ್ ಕುರವಯಲ್ ಎಂಬಲ್ಲಿ ಬಿದ್ದು ಅಲ್ಲಿ ವಿಶೇಷ ವಾದ ಬತ್ತ ಬೆಳೆಯಲು ಆರಂಭಿಸಿತು.
ಚೊನ್ನಮ್ಮ ಪ್ರಸರಣ ಗೊಳ್ಳುತ್ತಾ ಪುತ್ಯಾಡಿ ಗೆ ಬಂದು ಬಿದಿರ ಮೆಳೆಯಲ್ಲಿ ನೆಲೆಯಾದಳು.ಅಲ್ಲಿನ ತುಂಡರಸ ಪಡನಾಯರ್ ಎಂಬಾತ ಬಿದಿರಿನಿಂದ ಬಿಲ್ಲು ಬಾಣ ತಯಾರಿಸಲು ವಿಲ್ ಕೊಲ್ಲನ್ ಎಂಬ ವೀರನನ್ನು ಬಿದಿರ ಮೆಳೆ ಕಡಿಯಲು ಕಳಹಿಸುತ್ತಾನೆ.ಅವನು ಕಡಿಯಲಾರಂಭಿಸಿದಾಗ ಬೇಡ ಕಡಿಯಬೇಡ ಎಂಬ ದ್ವನಿ ಕೇಳಿಸಿ ಭಯದಿಂದ ಕಡಿಯುವುದನ್ನು ನಿಲ್ಲಿಸಿ ಒಡೆಯನಲ್ಲಿ ನಡೆದ ವಿಚಾರ ತಿಳಿಸಿದನು.ಆಗ ಪಡೆ ನಾಯರ್ ಬಂದು ಬಿದಿರು ಕಡಿಯಲು ಆರಂಭಿಸಿದನು.ಹನ್ನೆರಡು ಬಿದಿರು ಕಡಿದು ಹದಿಮೂರನೇ ಬಿದಿರು ಎಷ್ಟು ಯತ್ನಿಸಿದರೂ ತುಂಡಾಗಲಿಲ್ಲ ನೆಲ ಬಿಟ್ಟು ಏಳಲಿಲ್ಲ.ಅಚ್ಚರಿಗೊಂಡ ಅವನು ಜ್ಯೋತಿಷಿಗಳನ್ನು ಕರೆಸಿ ಕೇಳಲು ಚೊನ್ನಮ್ಮ ಭಗವತಿ ಎಂಬ ದೈವ ಅಲ್ಲಿಗೆ ಬಂದಿದೆ ಎಂದು ತಿಳಿದುಬರುತ್ತದೆ .ಅದಕ್ಕೆ ಪರಿಹಾರವಾಗಿ ಈ ಹಿಂದೆ ವಿಶ್ವ ಕರ್ಮ ಮಾಡಿ ಕೊಟ್ಟ ಮಾದರಿಯ ದೇವ ಕುಟಿಲ್ ಕಟ್ಟಿಸಿ ಅವಳನ್ನು ಅರಾಧಿಸಿದನು ವಣ್ಣಾನ್ ಸಮುದಾಯವನ್ನು ಕರೆಸಿ ಚೊನ್ನಮ್ಮ ಭಗವತಿ ತೆಯ್ಯಂ ಕಟ್ಟಿ ಅವಳನ್ನು ತೃಪ್ತಿ ಪಡಿಸಿದನು
ಆಧಾರ ಗ್ರಂಥ _ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment