Wednesday, 31 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 373-374 ಭದ್ರ ಕಾಳಿ ಭಗವತಿ ಮತ್ತು ವಣ್ಣಾತಿ ತೆಯ್ಯಂ © ಡಾ ಲಕ್ಷ್ಮೀ ಜಿ ಪ್ರಸಾದ

ಅನ್ಯಾಯವನ್ನು ವಿರೋಧಿಸಿ ಅಸಾಮಾನ್ಯ ಸಾಹಸ ಮೆರೆದ ದಲಿತ ಸಮುದಾಯದ ಅನೇಕರು ದೈವತ್ವ ಪಡೆದು ಆರಾಧನೆ ಪಡೆಯುವುದು ತುಳು ನಾಡಿನ ಎಲ್ಲೆಡೆ ಕಾಣಿಸುತ್ತದೆ ಕೊರಗ ತನಿಯ ಕೋಟೆದ ಬಬ್ಬು ಕಾನದ ಕಟದ ಮುಗೇರ್ಲು ,ಪಟ್ಟದ ಮುಗೇರ,ಮಿತ್ತ ಮೊಗರಾರ ಮೊದಲಾದವರು ಇಂತಹ ದೈವಗಳು.
ಭದ್ರ ಕಾಳಿ ಭಗವತಿ ಕೂಡ ಮೂಲತ ಮಾನವ ಮೂಲದ ದೈವವಾಗಿದ್ದು ಆಕೆ ದಲಿತ ಸಮುದಾಯಕ್ಕೆ ಸೇರಿದ ಓರ್ವ ಮಮಹಿಳೆಯಾಗಿದ್ದಾಳೆ.ಆದರೆ ಈ ದೈವದ ಕಥಾನಕ ದೊಂದಿಗೆ ಪುರಾಣ ಮೂಲದ ಕಥಾನಕ ವೂ ಸೇರಿ ಕೊಂಡಿದೆ.
ದಾರುಕಾಸುರನನ್ನು ವಧಿಸಿ ಅವನ ರಕ್ತ ಪಾನ ಮಾಡಿದುದರಿಂದ ಅದರ ಕಶ್ಮಲದಿಂದಾಗಿ ಚಂಡಿಕಾ ದೇವಿಯ ದೇಹ ವಿರೂಪಗೊಂಡಿತು ಅ ಕೇಡು ರಕ್ತವನ್ನು ಹೊರಹಾಕಲು ಕಾಳಿಯು ಕೈಲಾಸ ಬಿಟ್ಟು ಎಡಲೋಕದ ಮಲೆನಾಡಿನಲ್ಲಿ ಇಳಿದು ದಲಿತ ಕುಟುಂಬ ಒಂದರಲ್ಲಿ ಓರ್ವ ಕನ್ಯಯಾಗಿ ಹುಟ್ಟಿದಳು.ಇವಳು ಮೈ ನೆರೆಯುವ ಮೊದಲೇ ಅವಳಿಗೆ ವಿವಾಹವಾಯಿತು.ಅವಳ ಗಂಡನು ದುರಹಂಕಾರಿಯಾಗಿದ್ದು ಅವಳಿಗೆ ಹಿಂಸೆ ಕೊಡುತ್ತಿದ್ದನು.
ಒಂದು ದಿನ ಅವಳು ಮೈ ನೆರೆಯುತ್ತಾಳೆ.ಆಗ ಅವಳು ದೇಃ ಶುದ್ಧಿಗಾಗಿ ಸ್ನಾನ ಮಾಡಲು ಮಾತ್ ( ಅಶೌಚ ಕಳೆಯಲು ಸ್ನಾನ ಮಾಡಿ ವಣ್ಣಾತ್ ಸಮುದಾಯದವರು ತೊಡುವ ಮಡಿ ಬಟ್ಟೆ) ಕೊಡಲು ಪೆರುವಣ್ಣಾತಿಯಲ್ಲಿ ಹೋಗಿ ಕೇಳುತ್ತಾಳೆ.ಆದರೆ ಆಕೆ  ಅವಳಿಗೆ ಮಡಿಬಟ್ಟೆಯನ್ನು ನೀಡುವುದಿಲ್ಲ
ನಂತರ ಅವಳು ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಳಾಗಲು ತೊರೆಗೆ ಇಳಿಯುತ್ತಾಳೆ.ಆಗ ಪೆರುವಣ್ಣಾತಿಯು ಮೇಲ್ಭಾಗದಲ್ಲಿ ಬಟ್ಟೆ ಒಗೆಯುತ್ತಾ ಇದ್ದಳು.ಅ ಕನ್ನಿಕೆಯು ಸ್ನಾನ‌ಮಾಡಲು ಇಳಿದಿರುವುದನ್ನು ನೋಡಿ ಮಡಿ ಮಾಡಲು ತಂದ ಗಂಜಿತೆಳಿ,ಅರಸಿನ ಹುಡಿ ಕಸ ಕಡ್ಡಿಗಳನ್ನು ನೀರಿಗೆ ಹಾಕಿ ನೀರನ್ನು ಕಳಷಿತಗೊಳಿಸಿದಳು.ಆಗಲೂ ಕೋಪ ತಡೆದುಕೊಂಡ ಕಾಳಿಯು ಮತ್ತೊಮ್ಮೆ ಮಾತ್/ ಶುದ್ಧ ಬಟ್ಟೆ ಕೊಡುವಂತೆ ಯಾಚಿಸಿದಳು.ಈಗಲೂ ಬಟ್ಟೆ ನೀಡದೆ ಪೆರುವಣ್ಣಾತಿಯು ಅವಳನ್ನು ಹೀಯಾಳಿಸಿದಳು ಅವಮಾನ ಸಹಿಸಲಾಗದೆ ಆಕೆಯು ತನ್ನ ನಿಜ ರೂಪ ತಾಳಿ ವಣ್ಣಾತಿಯ ತಲೆ ಕೂದಲನ್ನು ಹಿಡಿದು ವಸ್ತ್ರ ಒಗೆಯುವ ಕಲ್ಲಿಗೆ ಅವಳ ತಲೆಯನ್ನು ಒತ್ತಿ ಹಿಡಿದು ಖಡ್ಗದಿಂದ ಅವಳ ತಲೆಯನ್ನು ಕಡಿದಳು .ಪ್ರಧಾನ ದೈವಗಳ ಅನುಗ್ರಹ ಮತ್ತು ಆಗ್ರಹಕ್ಕೆ ತುತ್ತಾದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿದ್ಯಮಾನ ಅನೆಕೆಡೆಗಳಲ್ಲಿ‌ನಡೆದಿದೆ.ಅಂತೆಯೇ ಇಲ್ಲಿ ಕೂಡ ಪೆರುವಣ್ಣಾತಿಯು ದೈವತ್ವ ಪಡೆದು ತೆಯ್ಯಂ  ರೂಪದಲ್ಲಿ ಆರಾಧನೆ ಪಡೆಯುತ್ತಾಳೆ.
ಅಲ್ಲಿಂದ ಅವಳು ಏಲಕ್ಕಿ ಮಲೆಯನ್ನು ಏರಿದಳು.ಅಲ್ಲಿ ಏಳು ಹೆಡೆಗಳ ಸರ್ಪ ಅವಳನ್ನು ಕಚ್ಚಲಯ ಬಂದಾಗ ಅದನ್ನು ಕೊಂದು ಅದರ ಚರ್ಮದಿಂದ ಉಯ್ಯಾಲೆ ಮಾಡಿ ಆಡಿದಳು.ಅವಳ ವೇಗಕ್ಕೆ ಉಯ್ಯಾಲೆ ತುಂಡಾಗಿ ಅವಳು ಪಶ್ಚಿಮ ಕಡಲಿಗೆ ಬಿದ್ದಳು.ಕಡಲು ಕೆಂಪಾಯಿತು.ಅಲ್ಲಿದ್ದ ದೈತ್ಯಾಕಾರದ ಮೊಸಳೆಯ ಬೆನ್ನೇರಿ ದಡಕ್ಕಡ ಬಂದಳು.
ಅಲ್ಲಿಂದ ಕಾಡಿಗೆ ಬಂದಾಗ ಅಲ್ಲಿ ಏಲಕ್ಕಿ ಹಾಗೂ ಶ್ರೀ ಗಂಧ ಸಾಗಿಸುವವರಿಂದ ಹೆಚ್ಚಿನ ಸುಂಕ ವಸುಲಿ‌ಮಾಡುವ ಹನ್ನೆರಡು ಜನ ದಾಂಡಿಗರಲ್ಲಿ ಅನ್ಯಾಯ ವಾಗಿ ಪಡೆದ ದುಡ್ಡಿನಲ್ಲಿ ತನಗೆ ಅರ್ಧ ಪಾಲು ಬೇಕೆಂದು ಕೇಳುತ್ತಾಳೆ.ಅದಕ್ಕೆ ಒಪ್ಪದ ಅವರೆಲ್ಲರ ತಲೆಗಳನ್ನು ಕಡಿದು ಮಾಲೆಯಾಗಿ ಕೊರಳಿಗೆ ಹಾಕಿಕೊಳ್ಳುತ್ತಾಳೆ.ಅಲ್ಲಿಂದ ತನ್ನ ಗಂಡನ ಬಳಿಗೆ ಹೋಗಿ‌ಮಾನ ಮುಚ್ಚಲು ಬಟ್ಟೆ ಕೇಳುತ್ತಾಳೆ. ಆದರೆ ಅವಳ ಗಂಡ ಬಟ್ಟೆ ನೀಡುವುದಿಲ್ಲ ಆಗ ಅವಳು ಅವನ ತಲೆಯನ್ನು ಕಡಿದು ಚೆಂಡಾಡಿದಳು.
ನಂತರ ಶಿವನ ಆಜ್ಞೆಯಂತೆಕಡಲ ತೀರಕ್ಕೆ ಬಂದು ಬೆಸ್ತರಿಂದ ಒಂದು ನೌಕೆಯನ್ನು ಕೇಳಿ ಪಡೆದು ಬಡಗು ದಿಕ್ಕಿನಲ್ಲಿ ಸಮುದ್ರ ಯಾನ‌ ಮಾಡುತ್ತಾಳೆ.ಆಗ ಬಿರುಗಾಳಿ ಬಂದು ಕಾಳಿಯು ಸಮುದ್ರಕ್ಕೆ ಹಾರುತ್ತಾಳೆ.ಅಲ್ಲಿಂದ ಒಂದು ‌ಮೊಸಳೆಯ ಬೆನ್ನೇರಿ ಬಂದು ದಡ ಸೇರಿದಳು ಇದರಿಂದಾಗಿ ವೀರಕಪ್ಪಲಿ ಎಂಬ ಹೆಸರು ಪಡೆದಳು.ಅಲ್ಲಿಂದ ಶಾಂತಳಾಗುಕಾಳಿಕಾ ದೇವಿಯು ಅಲ್ಲಲ್ಲಿ ನೆಲೆಯಾಗಿ ಭಕ್ತರನ್ನು ಉದ್ಧರಿಸುತ್ತಾಳೆ .
ಈ ದೈವದ ಬಗ್ಗೆ " ಓರ್ವ ನಾರಿಯು ಈ ರೀತಿಯ ಸಾಹಸ ಕಾರ್ಯಗಳನ್ನು ಮಾಡಿ ತೆಯ್ಯಂ ಆದಂತಹ ಮಲೆಯಾಳದ ದೈವಾರಾಧನೆ ಯಲ್ಲಿ ಬೇರೆಲ್ಲೂ ಕಂಡು ಬರುವುದಿಲ್ಲ ಭದ್ರಕಾಳಿಯನ್ನು ಕೋಲ ನೀಡಿ ತೃಪ್ತಿ ಪಡಿಸಲಾಗುತ್ತದೆ ಮಂತ್ರವಾದಿಗಳು ಈ ಶಕ್ತಿಯನ್ನು ಆರಾಧನೆ ಮಾಡುತ್ತಾರೆ ವನ ಭದ್ರೆ,ಜಲಭದ್ರೆ,ಸ್ಶಾನ ಭದ್ರೆ ಮೊದಲಾದ ನಾಮಾಂಕಿತಗಳಿವೆ" ಎಂದು ಕೇಳು ಮಾಸ್ತರ್ ಅಗಲ್ಪಾಡಿ ಹೇಳಿದ್ದಾರೆ.
ವಿಷಬಾಧೆಗೆ,ಸಮುದ್ರ ಯಾನ ಹಾಗೂ ಬೆಸ್ತರ ಮೀನುಗಾರಿಕೆಗೆ ರಕ್ಷಣೆಯನ್ನು ನೀಡುವ ಈ ದೈವ ಅನ್ಯಾಯ ಮಾಡಿದವನ್ನು ಶಿಕ್ಷಿಸುತ್ತದೆ.
ಆಧಾರ ಗ್ರಂಥ - ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment