Wednesday, 31 May 2017

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 375-376 ಪುದಿಯ ಭಗವತಿ ಮತ್ತು ಪಾಡಾರ್ ಕುಂಞರ ವೀರನ್ ©ಡಾ ಲಕ್ಷ್ಮೀ ಜಿ ಪ್ರಸಾದ

ರೋಗ ಪರಿಹಾರಕ್ಕಾಗಿ ಅನೇಕ ದೇವತೆಗಳನ್ನು ಪ್ರಾರ್ಥಿಸುವುದು ಎಲ್ಲೆಡೆ ಕಾಣಿಸುತ್ತದೆ .ಮಾರಿಯಮ್ಮ ಪ್ಲೇಗಮ್ಮ ಮೊದಲಾದ ಜನಪದ ದೇವತೆಗಳ ಆರಾಧನೆ ಇದೆ
ಹಾಗೆಯೇ‌ ಮಸೂರಿ ಮಾಲಾ ( ಸಿಡುಬು?) ರೋಗವನ್ನು ನಿವಾರಣೆ ಮಾಡಲು ಉದಿಸಿ ಬಂದ ದೈವ ಪುದಿಯ ಭಗವತಿ.
ಭೂಲೋಕದಲ್ಲಿ ‌ಮನುಷ್ಯರು ಅಹಂಕಾರ ದಿಂದ ದೇವರನ್ನು ಮರೆತು ಮೆರೆಯುತ್ತಿದ್ದಾಗ ಮಹಾ ದೇವನು ಮಸೂರಿ ವಾತ ಪಿತ್ತ ಕಫ ಅಪಸ್ಮಾರ ಮೊದಲಾದ ರೋಗಗಳನ್ನು ಹರಡಿ ಅ ರೋಗಗಳ ಅಧಿ ದೇವತೆಗಳಾಗಿ ಮೂತವರ್ ಚೀರುಂಬಾ,ಇಳೆಯವರ್ ಚೀರುಂಬಾ,ಘಂಟಾಕರ್ಣನ್,ಮಸೂರಿ ದೇವತೆ ಮೊದಲಾದವರನ್ನು ಸೃಷ್ಟಿ ಮಾಡಿ ಭೂಲೋಕಕ್ಕೆ ಕಳುಹಿಸಿದನು.
ಆದರೆ ಮಹಾದೇವನಿಗೆ ಮಸೂರಿ ರೋಗವು ಹಿಡಿಯಿತು ಇಂದ್ರಾದಿ ದೇವತೆಗಳಿಗೂ ಹರಡಿತು ಆಗ ಅದರ ನಿವಾರಣೆ ಗಾಗಿ ಪಟ್ಟೇರಿ ಬ್ರಾಹ್ಮಣರು ಮಹಾ ಹೋಮವೊಂದನ್ನು ಮಾಡಿದರು ನಲುವತ್ತೊಂದನೆಯ ದಿನ ಪ್ರಜ್ವಲಿಸುವ ಹೋಮ ಕುಂಡದಿಂದ ರೌದ್ರಾವತಾರಿಯಾದ ದೇವತೆ ಉದಿಸಿದಳು.ಅವಳ ದಾಹ ಶಮನಕ್ಕಾಗಿ ರಕ್ತಾಹಾರ ನೀಡಲಾಯಿತು.ಅಗ್ನಿಯಲ್ಲಿ ಜನಿಸಿ ಬಂದ ಕಾರಣ ಅವಳು ತೀ ಭಗವತಿ ಪುದಿಯ ಭಗವತಿ ಎಂಬ ಹೆಸರನ್ನು ಪಡೆದಳು
ಅವಳು ಮಹಾದೇವ ಹಾಗೂ ಇಂದ್ರಾದಿ ದೇವತೆಗಳ ರೋಗವನ್ನು ಗುಣಪಡಿಸಿದಳು.
ಅಲ್ಲಿಂದ ಶಿವನ ಆಣತಿಯಂತೆ ಆರು ಜನ ಗಣಗಳೊಂದಿಗೆ ಭೂಲೋಕಕ್ಕೆ ಬಂದು ಜನರ ರೋಗಗಳನ್ನು ಗುಣ ಪಡಿಸಿ ಅವರಿಂದ ಆರಾಧನೆ ಯನ್ನು ಪಡೆದಳು.ಅವಳು ತನ್ನ ಗಣಗಳೊಡನೆ ವಿಲ್ಲಾಪುರಂ ಕೋಟಪ್ಪಡಿಯಲ್ಲಿ ನೆಲೆ ನಿಂತಳು
ಒಂದು ದಿನ ಸಂಚರಿಸುತ್ತಾ ಪಾಡಾರ್ ಕುಳಂಙರ ಎಂಬ ಸ್ಥಳಕ್ಕೆ ಬಂದಳು.ಆಗ ಪರಿಂಜಲ್ಲೂರ್ ಕ್ಷೇತ್ರ ಕ್ಕೆ ದೇವ ದರ್ಶನ ಕ್ಕಾಗಿ ತೆರಳುತ್ತಿದ್ದ ವೆಯಿಚಾತ್ರನ್ ಎಂಬ ಬ್ರಾಹ್ಮಣ ಎದುರಾದನು.ಪುದಿಯ ಭಗವತಿಯು ಅವನನ್ನು ಕೊಂದು ಆತನ ರಕ್ತಪಾನ‌ಮಾಡಿ ಓರ್ವ ತೆಯ್ಯಂ ಮಾಡಿ ತನ್ನೊಡನೆ ಸೇರಿಸಿಕೊಳ್ಳ ಬೇಕೆಂದು ನಿರ್ಧರಿಸಿದಳು.ದೇವ ದರ್ಶನ ಕ್ಕೆ ಮೊದಲು ಸ್ನಾನ ಮಾಡಲು ಕೊಳಕ್ಕೆ ಇಳಿದ ಅವನ ತಲೆಯನ್ನು  ಕತ್ತರಿಸಿದಳು ಆ ಕೊಳ ರಕ್ತವರ್ಣಕ್ಕೆ ತಿರುಗಿತು .ಆ ಬ್ರಾಹ್ಮಣನು ನಂತರ ದೈವತ್ವ ಪಡೆದು ತೆಯ್ಯಂ ಆಗಿ ಪಾಡಾರ್ ಕುಂಞರ ವೀರನ್ ಎಂಬ ಹೆಸರಿನಲ್ಲಿ ಆರಾಧನೆ ಪಡೆದನು
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು‌ಮಾಸ್ತರ್ ಅಗಲ್ಪಾಡಿ

No comments:

Post a Comment