Saturday, 3 June 2017

ಸಾವಿರದೊಂದು ಗುರಿಯೆಡೆಗೆ 385-386 ಮೂಲಂಪೆತ್ತಮ್ಮ © ಡಾ ಲಕ್ಷ್ಮೀ ಜಿ ಪ್ರಸಾದ

ಮೂಲಂ ಪೆತ್ತಮ್ಮ ಮೂಲತಃ  ಮೂಲ ನಕ್ಷತ್ರದಲ್ಲಿ ಹುಟ್ಟಿದ ಓರ್ವ ಬ್ರಾಹ್ಮಣ ಮಹಿಳೆ.ಅವಳ ನಿಜವಾದ ಹೆಸರು ಪಾರ್ವತಿ ಕುಟ್ಟಿ ಎಂದು.ಅದನ್ನು ಹ್ರಸ್ವ ಮಾಡಿ ಪಾರು ಕುಟ್ಟಿ ಪಾಡು ಕುಟ್ಟಿ ಎಂದು ಕರೆಯುತ್ತಿದ್ದರು.ಅವಳು ಮೂಲಾ ನಕ್ಷತ್ರದಲ್ಲಿ ಜನಿಸಿದ ಕಾರಣ ಅವಳಿಗೆ ಮೂಲಂ ಪೆತ್ತಮ್ಮ ಎಂದು ಕೂಡ ಕರೆಯುತ್ತಿದ್ದರು.
ಕಣ್ಣೂರಿನಲ್ಲಿ ಹರಿಯುವ ವಳ ಪಟ್ಟಣಂ ಎಂಬ ನದಿಯ ದಡದಲ್ಲಿ ಆಯಿಪ್ಪುಯಿ ಎಂಬ ಗ್ರಾಮವಿದೆ. ಅಲ್ಲಿ ಒಂದು ಮಂತ್ರ ತಂತ್ರಗಳನ್ನು ತಿಳಿದಿರುವ ಅಯ್ಯಂಕರಮನ ನಂಬೂದಿರಿ ಎಂಬ ಸಿರಿವಂತ ಬ್ರಾಹ್ಮಣ ಕುಟುಂಬವಿತ್ತು.ಕಾಲಾಂತರದಲ್ಲಿ ಈ ಕುಟುಂಬ ಸಂತಾನವಿಲ್ಲದೆ ನಶಿಸುತ್ತಾ ಕೊನೆಗೆ ಒಂದು  ವಯಸ್ಸಾದ ಬ್ರಾಹ್ಮಣ ದಂಪತಿಗಳು ಮಾತ
 ಅಲ್ಲಿ ಉಳಿಯುತ್ತಾರೆ. ಆ ಅಯ್ಯಂಕರಿ ನಂಬೂದಿರಿ ಬ್ರಾಹ್ಮಣ ನ ಮಡದಿ ಪಾರು ಕುಟ್ಟಿ ಅಮ್ಮ.ಅವಳು ಒಳ್ಳೆಯ ಗುಣದವಳಾಗಿದ್ದು ಶಿವ ಭಕ್ತೆಯಾಗಿದ್ದಳು.ಸಂತಾನಕ್ಕಾಗಿ ಅನವರತ ಶಿವನನ್ನು ಬೇಡಿಕೊಳ್ಳುತ್ತಾ ಇದ್ದಳು.
ಒಂದು ದಿನ ರಾತ್ರ ಒಂದು ಕನಸನ್ನು ಕಾಣುತ್ತಾಳೆ.
ಕೈಲಾಸದಲ್ಲಿ ಶಿವ ಪಾರ್ವತಿಯವರು ಲಾಸ್ಯವಾಡುತ್ತಾ ಇರುತ್ತಾರೆ. ಎಲ್ಲಾ ದೇವತೆಗಳು ಅಲ್ಲಿ ಕುಳಿತಿದ್ದರು.ಪಾರು ಕುಟ್ಟಿ/ ಮೂಲಂಪೆತ್ತಮ್ಮ ಕೂಡ ಅಲ್ಲಿ ಕುಳಿತಿದ್ದಳು.ಆಗ ಅವಳ ಮಡಿಲಲ್ಲಿ ಒಂದು ಮಗು ಬಂದು ಕುಳಿತಿತು.ಆ ಮಗುವನ್ನು ಹಿಡಿದೆತ್ತಿ ಅಪ್ಪಿ  ಕೊಳ್ಳುವಾಗ ನಿದ್ರೆಯಿಂದ ಎಚ್ಚರವಾಗುತ್ತದೆ.
ಆ ದಿನ ನದೀ ತೀರಕ್ಕೆ ಹೋದಾಗ ಪಾರು ಕುಟ್ಟಿಗೆ ನೀರಿನಲ್ಲಿ ತೇಲಿ ಬಂದ ಒಂದು ಮಗು ಸಿಗುತ್ತದೆ. ತಮಗೆ ದೇವರು ಕರುಣಿಸಿದ ಮಗು ಎಂದು ತಿಳಿದು ಮನೆಗೆ ಕರೆ ತರುತ್ತಾಳೆ.
ಆ ಬ್ರಾಹ್ಮಣ ದಂಪತಿಗಳು ಮಗುವಿಗೆ ಅಯ್ಯಂಕರ ಉಣ್ಣಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಾರೆ .ಆ ಮಗು ದಷ್ಷಟ ಪುಷ್ಷ್ಟವಾಗಿ ಬೆಳೆದು ಹೊಳೆಯತ್ತಾ ಇದ್ದ ಕಾರಣ ಅದನ್ನು ಎಲ್ಲರೂ ಮುತ್ತಪ್ಪನ್ ( ಮುತ್ತಿನ ಹಾಗೆ ಹೊಳೆಯುಔನು) ಎಂದು ಕರೆಯುತ್ತಾರೆ.
ತಂದೆ ತಾಯಿಯರು ಸಾತ್ವಿಕ ಬ್ರಾಹ್ಮಣರು ಆಗಿದ್ದರೂ ಈ ಬಾಲಕ ಹಾಗಿರಲಿಲ್ಲ.
ಚಿಕ್ಕಂದಿನಿಂದಲೇ ಬ್ರಾಹ್ಮಣೇತರ ಕೆಳವರ್ಗದ ಜನರ ಸಹವಾಸ ಮಾಡಿ ಅವರಂತೆಯೇ ಕಳ್ಳು ಮಾಂಸಾಹಾರ ಅಭ್ಯಾಸ ಮಾಡಿಕೊಂಡಿದ್ದನು .ಜನರು ಇದನ್ನು ಆಡಿ ಕೊಂಡಾಗ ಅಯ್ಯಂಕರ ಬ್ರಾಹ್ಮಣ ಕೋಪಗೊಂಡು ತನ್ನ ಮಡದಿಯನ್ನು ಬೈಯುತ್ತಿದ್ದಳು.
ಅವನು ಮಾಂಸ ಸೇವನೆ ಮಾಡುವ ಕಾರಣ ಬ್ರಾಹ್ಮಣರು ಎಲ್ಲಾ ಅಯ್ಯಂಕರ್ ಮನೆಗೆ ಬಂದು ಅವನನ್ನು ಮನೆ ಬಿಟ್ಟು ಓಡಿಸಬೇಕು ಇಲ್ಲವಾದರೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತದೆ ಎಂದು ತಿಳಿಸಿದರು.
 ಒಂದು ದಿನ ಬೇಟೆ ಯಾಡಿ ಮಾಂಸ ತಿಂದು ಕಳ್ಳು ಕುಡಿದು‌ಮನೆಗೆ ಬಂದಾಗ ತಂದೆ ಜೋರು ಮಾಡುತ್ತಾರೆ.ತಾಯಿ ಅಳುತ್ತಾ ಕುಳಿತಿದ್ದುದನ್ನು ನೋಡಿ ಅವನಿಗೆ ಸಿಟ್ಟು ಬಂದು ತಾನು ಮನೆ ಬಿಟ್ಟು ಹೋಗುತ್ತೇನೆ ಮಲೆನಾಡಿಗೆ ಹೋಗುತ್ತೇನೆ ಎಂದಾಗ ತಂದೆ  ಅಡ್ಡಿ ಮಾಡಲಿಲ್ಲ.  ತಾಯಿ ದುಃಖಿಸುತ್ತಾ ಇರಲು ಅವಳನ್ನು ಮುತ್ತಪ್ಪನ್ ಸಮಾಧಾನ ಮಾಡಿದನು.ಪಾರು ಕುಟ್ಟಿಯು ಅವನಿಗೆ ಕಟ್ಟಿ ಕೊಳ್ಳಲು ಪೊಯ್ ಕಣ್ಣು/ ಬೆಳ್ಳಿ ಕಣ್ಣು ನೀಡಿ ಕುನ್ನತ್ತೂರು ಪಾಡಿ ಮಲೆಯಲ್ಲಿ ಬೇಟೆಯಾಡಿಕೊಂಡಿರು ಎಂದು ಹೇಳುತ್ತಾಳೆ. ಪುತ್ರ ಶೋಕದಿಂದ ಅವಳು ಸಾಯುತ್ತಾಳೆ.ಅವಳ ಆತ್ಮ ಕುನ್ನತ್ತೂರು ಪಾಡಿಗೆ ಬಂದು ಮೂಲ ಶಿವಾಂಶದಲ್ಲಿ ಲೀನವಾಗುತ್ತದ .ಮುಂದೆ ಅವಳು ದೈವತ್ವ ಪಡೆದು ಮುತ್ತಪ್ಪನ್ ಜೊತೆ ಆರಾಧನೆ ಪಡೆಯುತ್ತಾಳೆ.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ದೃಷ್ಟಿಯಿಂದ ಅಲೋಚಿಸಿದಾಗ ತಾಯಿ ಮಗ ಇಬ್ಬರದೂ ದುರಂತ ಮತ್ತು ದೈವತ್ವ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳಿಗೆ ಒಂದು ಅನಾಥ ಮಗು ಸಿಕ್ಕಿ ಅದನ್ನು ದತ್ತು ಸ್ವೀಕರಿಸಿ ಸಾಕಿರಬಹುದು.ಆ ಬಾಲಕ ಸಮಾಜದಲ್ಲಿ ಇದ್ದ ವಿಧಿ ನಿಷೇಧಗಳನ್ನು ಮೀರಿ ಬ್ರಾಹ್ಮಣ ರಿಗೆ ಉಚಿತವಲ್ಲದೆ ಇದ್ದು ಮಾಂಸ ಭಕ್ಷಣೆ ಹಾಗೂ ಕಳ್ಳನ್ನು ಕುಡಿಯುತ್ತಿದ್ದನು.ವಿಧಿ ನಿಷೇಧಗಳು ಅದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.ಇದನ್ನು ‌ಮೀರಿದ ಮುತ್ತಪ್ಪನ್ ಅನ್ನು ಶಿಕ್ಷಿಸಿ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಆತ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಅವನನ್ನು ಸಾಕಿದ ತಾಯಿ ಪುತ್ರ ಶೋಕದಿಂದ ಸಾವನ್ನಪ್ಪಿ ಅವಳೂ ದೈವತ್ವವನ್ನು ಪಡೆದು ಮುತ್ತಪ್ಪನ್ ಜೊತಡ ಆರಾಧನೆ ಪಡೆಯುತ್ತಾಳೆ.
ಇವರಿಬ್ಬರಿಗೆ ನಂಬೂದಿರಿ ಬ್ರಾಹ್ಮಣ ಮನೆಗಳಲ್ಲಿ ನಿತ್ಯ ದೀಪ ಇಟ್ಟು ಆರಾಧನೆ ಇದೆ.ಮಲೆ ಮುತ್ತಪ್ಪನ  ಕಳಿಯಾಟದಲ್ಲಿ ಪಾರು ಕುಟ್ಟಿ ಅಮ್ಮ ನಿಗೆ ಮೂಲಂಪೆತ್ತಮ್ಮ ಎಂಬ ಹೆಸರಿನಲ್ಲಿ ತೆಯ್ಯಂ ಕಟ್ಟಿ ಆರಾಧನೆ ಮಾಡುತ್ತಾರೆ.ಮಕ್ಕಳಿಗೆ ಅನ್ನ ಪ್ರಾಶನವನ್ನು ಮುತ್ತಪ್ಪನ್ ದೈವದ ಕೈಯಲ್ಲಿ ಮಾಡಿಸುತ್ತಾರೆ.ಆಗ ಮಕ್ಕಳನ್ನು ಎತ್ತಿ ಮೊಲೆಯುಣಿಸುವ ಅಭಿನಯವನ್ನು ಮೂಲಂಪೆತ್ತಮ್ಮ ದೈವ ಮಾಡುತ್ತದೆ. ಇದು ಆಕೆ ತನ್ನ ಮಗ ಮುತ್ತಪ್ಪನ್ ಅನ್ನು ಪ್ರೀತಿಯಿಂದ ಸಾಕಿ ಸಲಹಿದ ಸಂಕೇತವಾಗಿದೆ.
ಈ ದೈವಕ್ಕೆ ಬಿದಿರಿನ ಸಲಾಕೆ ಮತ್ರು ನಾರುಗಳಿಂದ ಗೋಪುರಾಕೃತಿ ನಿರ್ಮಿಸಿ ಅದಕ್ಕೆ ಮರಬಾಳೆಯ ಎಲೆಗಳನ್ನು ಸಿಕ್ಕಿಸಿ ತಿರುಮುಡಿಯನ್ನು ತಯಾರಿಸಿ ಕಟ್ಟುತ್ತಾರೆ. ಮೂಲಂಪೆತ್ತಮ್ಮನನ್ನು ಭಗವತಿ ಎಂದು ಕರೆಯುತ್ತಾರೆ. ವಣ್ಣಾನ್ ಸಮುದಾಯದ ಒಂದು ಉಪ ಪಂಗಡದವರು ಮೂಲಂಪೆತ್ತಮ್ಮ ತೆಯ್ಯಂ ಕಟ್ಟುತ್ತಾರೆ.
ಆಧಾರ ಗ್ರಂಥ - ಕೇರಳ ತೆಯ್ಯಂ - ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment