Tuesday, 6 June 2017

ಸಾವಿರದೊಂದು ಗುರಿಯೆಡೆಗೆ 394 ಕುಂಞಿ ರಾಮ ಕುರಿಕ್ಕಳ್ © ಡಾ ಲಕ್ಷ್ಮೀ ಜಿ ಪ್ರಸಾದ

ಕುಂಞಿ ರಾಮ ಕುರಿಕ್ಕಳ್ ದೈವವನ್ನು ಕೋಲತ್ತು ನಾಡಿನಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.ಅನೇಕರು ಅರಸು ದೌರ್ಜನ್ಯ ಕ್ಕೆ ಈಡಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಪಡೆದು ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆದಿದ್ದಾರೆ .ಬಿರ್ಮಣ ಬೈದ್ಯ/ ಕರಿಮಲೆ ಜುಮಾದಿ, ಕಲ್ಲುರ್ಟಿ ಕಲ್ಕುಡ ಮೊದಲಾದವರು ಅರಸು ದೌರ್ಜನ್ಯದಿಂದ ದುರಂತವನ್ನಪ್ಪಿ ದೈವತ್ವ ಪಡೆದ ದೈವಗಳು.ಇದೇ ರೀತಿ ಕುಂಞಿ ರಾಮನ್ ಎಂಬ ವ್ಯಕ್ತಿ  ಅರಸು ದೌರ್ಜನ್ಯ ಕ್ಕೆ ಈಡಾಗಿ ದುರಂತವನ್ನಪ್ಪಿ ಕದೈವತ್ವ ಪಡೆದು ಕುರಿಕ್ಕಳ್ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಈ ದೈವದ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಮಾಹಿತಿ ಸಂಗ್ರಹಿಸಿ ಬರೆದಿದ್ದಾರೆ.

ಕೋಲತ್ತು ನಾಡಿನ ಕೂಟಾಳಿಕರ ಎಂಬಲ್ಲಿ ಅನೇಕ ಯೋಗಿ ( ಚೋಯಿ) ಸಮುದಾಯದವರ ಮನೆಗಳಿದ್ದವು.ಅವರಲ್ಲಿ ಒಬ್ಬಾತ ಕುಂಞಿ ರಾಮ ಎಂಬಾತನು ಕಳರಿ,ಆತ್ಮ ವಿದ್ಯೆ,ವಿಷ ನಿವಾರಣ,ಮೊದಲಾದ ಅನೇಕ ವಿದ್ಯೆಗಳನ್ನು ಕಲಿತು ಕುರಿಕ್ಕಳ್ ಎಂಬ ಗೌರವವನ್ನು ಪಡೆದಿದ್ದನು.
ಆ ಸಮಯದಲ್ಲಿ ಕೋಲತ್ತು ನಾಡಿನ ಅರಸನಿಗೆ ದುಷ್ಟ ಶಕ್ತಿ ಗಳ ಉಪದ್ರದಿಂದ ಮನೋರೋಗ ಉಂಟಾಯಿತು .ಅನೇಕ ವೈದ್ಯರು ಮಂತ್ರವಾದಿಗಳು ಯತ್ನಿಸಿದರೂ ಅವನ ರೋಗ ಗುಣವಾಗಲಿಲ್ಲ .ಆಗ ಕುಂಞಿರಾಮನನ್ನು ಅರಮನೆಗೆ ಕರೆಸಿದರು.ರಾಜನನ್ನು ಬಾಧಿಸುತ್ತಾ ಇದ್ದ ದುಷ್ಟ ಶಕ್ತಿಗಳನ್ನು ದೂರ ಮಾಡಿ ಅವನನ್ನು ಕುಂಞಿ ರಾಮ ಕಾಪಾಡಿದನು.ರಾಜನು ಅವನಿಗೆ ಪಟ್ಟೆ ಶಾಲು ಹೊದೆಸಿ ಕೈಗೆ ಬಂಗಾರದ ಬಳೆ ತೊಡಿಸಿ ಗೌರವಿಸಿದನು
ಆದರೆ ನಂತರ ಅವನ ಮನಸಿನಲ್ಲಿ ಕುಂಞಿ ರಾಮ ನ ಬಗ್ಗೆ ಮತ್ಸರ ಉಂಟಾಯಿತು.ಇಂತಹ ಚತುರನನ್ನು ಹೀಗೆ ಬಿಟ್ಟರೆ ಮುಂದೆ ತನನ್ನು ಮೀರಿಸಿಯಾನು ಎಂದು ಭಾವಿಸಿದನು.ರಾಜ‌ಮರ್ಯಾದೆಯಿಂದ ಸಾಗುತ್ತಿದ್ದ ಆತನನ್ನು ರಾಜನ ಆಜ್ಞೆ ಯಂತೆ ರಾಜ ಭಟರು, ಕೂಟಾಳಿಕರ ದೇವಸ್ಥಾನದ ಬಳಿ ಬಂದಾಗ ಇರಿದು ಕೊಂದರು.
ಅರಸು ದೌರ್ಜನ್ಯ ದಿಂದ ದುರಂತವನ್ನಪ್ಪಿದ ಕುಂಞಿ ರಾಮ ನು ದೈವತ್ವ ಪಡೆಯುತ್ತಾನೆ.
ಅರಮನೆಯ ಪರಿವಾರದ ಒಬ್ಬನ ಮೈಯಲ್ಲಿ ದೈವಾವೇಶವು ಬಂದು ರಾಜನು ಕುಂಞಿ ರಾಮ ನನ್ನು ಕೊಂದ ಅನ್ಯಾಯಕ್ಕೆ ,ಆದ ಪರಿಣಾಮಕ್ಕೆ ಪ್ರತಿಯಾಗಿ ಆತನಿಗೆ ಕೋಲ‌ಕೊಟ್ಟು ಆರಾಧನೆ ಮಾಡಬೇಕೆಂದು ನುಡಿಯಾಯಿತು.ಅಂತೆಯೇ ಕುಂಞಿ ರಾಮ ಕುರಿಕ್ಕಳ್ ದೈವವನ್ನು ಕೋಲ ಕಟ್ಟಿ ಆರಾಧಿಸಲು ಆರಂಭಿಸಿದರು.
ಈ ದೈವವನ್ನು ಪುಲಯರು,ಮಾವಿಲರು,ಚಿಂಗತ್ತಾನರು,ವಾಣಾನ್ ರು ಮತ್ತು ಕೆಲವೆಡೆ ವಣ್ಣಾನ್ ಸಮುದಾಯದವರು ಕಟ್ಟುತ್ತಾರೆ ಎಂದು ಕೇಳು‌ ಮಾಸ್ತರ್ ಅಗಲ್ಪಾಡಿ ಹೇಳಿದ್ದಾರೆ.
ಆಧಾರ ಗ್ರಂಥ ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment