Thursday, 27 July 2017

ತುಳುನಾಡಿನ ಮುಸ್ಲಿಂ ಭೂತಗಳು ©ಡಾ ಲಕ್ಷ್ಮೀ ಜಿ ಪ್ರಸಾದ

 ಅರಬ್ಬಿ  , ಚೀನೀ ಮತ್ತು ಮುಸ್ಲಿಂ  ಭೂತಗಳು© ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಅಣಿ ಅರದಲ ಸಿರಿ ಸಿಂಗಾರ ಗ್ರಂಥ ದಲ್ಲಿ ಪ್ರಕಟಿತ ಬರಹ


ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ

 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು   .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ. ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ಆಲಿ ಭೂತ ,ಬ್ಯಾರ್ದಿ  ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಇದೇ ರೀತಿ ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ದೈವತ್ವವನ್ನು ಪಡೆದ ವ್ಯಕ್ತಿಗಳು ಹಿಂದುಗಳೇ ಆಗಬೇಕಿಲ್ಲ. ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ

 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,

೧ ಅರಬ್ಬಿ ಭೂತ

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ .ಮಲರಾಯಿ ದೈವದ ಕೋಪಕ್ಕೆ ತುತ್ತಾಗಿ ದೈವತ್ವ ಹೊಂದಿದ ಭೂತ ಅರಬ್ಬಿ ಭೂತ .

ಕಾದಂಬರೀ ರಸಜ್ಞಾಂ ಆಹಾರೋಪಿ ನ ರೋಚತೇ (ಬಾಣ ಭಟ್ಟನ ಕಾದಂಬರಿ <ಮದ್ಯ >ಯಾ ರುಚಿಯನ್ನು ಸವಿದವನಿಗೆ ಆಹಾರ ಕೂಡಾ ರುಚಿಸುವುದಿಲ್ಲ ಎಂಬ ಮಾತಿದೆ .ಅಂತೆಯೇ ತುಳು ಜಾನಪದ ಸಾಹಿತ್ಯ ,ಭೂತಾರಾಧನೆಗಳು ಅದರ ಒಳ ಹೊಕ್ಕವನನ್ನು ಸೆಳೆದು ಬಿಡುತ್ತದೆ .ನಾನು ಇಂತಹ ಸೆಳೆತಕ್ಕೆ ಒಳಗಾಗಿದ್ದೇನೆ !ನನ್ನ ವಿದ್ಯಾರ್ಥಿಗಳಿಗೂ ಸಮಯ ಸಿಕ್ಕಾಗೆಲ್ಲ ಹೇಳುತ್ತಾ ಇರುತ್ತೇನೆ .ಇದರಿಂದ ಆಸಕ್ತರಾದ ವಿದ್ಯಾರ್ಥಿಗಳು ನನ್ನಲ್ಲಿರುವ ತುಳು ಜನಪದ ,ಭೂತಾರಾದನೆಗಳ  ಕುರಿತು ಇರುವ ಪುಸ್ತಕಗಳನ್ನು ಕೊಂಡು ಹೋಗಿ ಓದಿ ತಂದು ಕೊಡುತ್ತಿದ್ದರು .ಒಂದು ದಿನ ಅಮೃತ ಸೋಮೆಶ್ವರರು ಅವರ ಕೃತಿಯಲ್ಲಿ ಅರಬ್ ಮತ್ತು ಚೀನಿ ಭೂತಗಳ ಬಗ್ಗೆ ಉಲ್ಲೇಖಿಸಿದ್ದನ್ನು ಓದಿದ ನನ್ನ ವಿದ್ಯಾರ್ಥಿನಿ ಕೃಪಾ ಬಂದು ಅರಬ್ ಭೂತಕ್ಕೆ ಎಲ್ಲಿ ಕೋಲ ಉಂಟು ?ಅರಬ್ ಭೂತ   ಮತ್ತು ಚೀನಿ ಭೂತಗಳ ಕಥೆ  ನಮಗೆ ಹೇಳಿ ಮೇಡಂ ಎಂದು ಕೇಳಿದಳು . ಆ ಪುಸ್ತಕದಲ್ಲಿ ಅರಬ್ ಮತ್ತು ಚೀನಿ ಭೂತ ಗಳನ್ನು  ಉಲ್ಲೇಖಿಸಿದ್ದನ್ನು ನಾನು ಕೂಡ  ಓದಿದ್ದೆ .ಅದರಲ್ಲಿ ಆ ಭೂತಗಳ ಬಗ್ಗೆ ಮಾಹಿತಿ  ಇರಲಿಲ್ಲ .

ನನಗೂ ಆ ಬಗ್ಗೆ ತಿಳಿಯಲು ಕುತೂಹಲ ಇತ್ತು ! ತುಳು ಜಾನಪದ ವಿದ್ವಾಂಸರಾದ ಡಾ . ಅಮೃತ ಸೋಮೆಶ್ವರರು ಬಹಳ ಸಹೃದಯಿಗಳು .ನಾವು ಫೋನ್ ಮಾಡಿ ಕೇಳಿದರೂ ಕೂಡ ಯಾವುದೇ ಬೇಸರವಿಲ್ಲದೆ ನಮಗೆ ಗೊತ್ತಿಲ್ಲದ ವಿಚಾರವನ್ನು ತಿಳಿಸುತ್ತಿದ್ದರು .ನಾನು ಈ ಹಿಂದೆ ಕೂಡಾ ಅವರಿಗೆ ಅನೇಕ ಬಾರಿ ಫೋನ್ ಮಾಡಿದ್ದೆ ಕೂಡಾ .ಆದ್ದರಿಂದ ಅರಬ್ ಮತ್ತು ಚೀನಿ ಭೂತಗಳ  ಮಾಹಿತಿ ಪಡೆವ ಸಲುವಾಗಿ  ಅದೇ ದಿನ ರಾತ್ರಿ ಡಾ . ಅಮೃತ ಸೋಮೆಶ್ವರರಿಗೆ ಫೋನ್ ಮಾಡಿ ಕೇಳಿದೆ . ಮಂಗಳೂರಿನ ಚಿಲಿಮ್ಬಿಯಲ್ಲಿ ಅರಬ್ ಮೂಲದ ಭೂತಕ್ಕೆ ಆರಾಧನೆ ಇರುವ ಬಗ್ಗೆ ಯಾರೋ ಒಬ್ಬರು ಅವರಿಗೆ ತಿಳಿಸಿದ್ದನ್ನು ಅವರು ನನಗೆ ಹೇಳಿದರು .ಅವರು “ಆ ಅರಬ್ ಭೂತಕ್ಕೆ ಆರಾಧನೆ ಚಿಲಿಮ್ಬಿಯಲ್ಲಿ ಎಲ್ಲಿ ನಡೆಯುತ್ತಿದೆ ಎಂದು ತಿಳಿಯಲು ಸಾಕಷ್ಟು ಪ್ರಯತ್ನಿಸಿದ್ದರೂ ಆ ಬಗ್ಗೆ ಗೊತ್ತಾಗಲಿಲ್ಲ” ಎಂದು ಹೇಳಿದರು .ಚೀನಿ ಭೂತಗಳ ಬಗ್ಗೆ ಮಾಹಿತಿಗೆ ಕನರಾಡಿ ವಾದಿ ರಾಜ ಭಟ್ಟರನ್ನು ಸಂಪರ್ಕಿಸಲು ತಿಳಿಸಿದರು .ಅಲ್ಲಿಂದ ಅರಬ್ ಭೂತಕ್ಕೆ ಆರಾಧನೆ ಇರುವ ಚಿಲಿಂಬಿ ಎಲ್ಲಿದೆ ? ಆ ಭೂತ ಸ್ಥಾನ ಯಾವುದೆಂದು ಮಂಗಳೂರಿನಲ್ಲಿರುವ ಎಲ್ಲ ಸ್ನೇಹಿತರಲ್ಲಿ ಕೇಳುತ್ತಾ ಇದ್ದೆ .ಚಿಲಿಂಬಿ ಊರ್ವ ಸ್ಟೋರ್ ಹತ್ತಿರ ಇದೆ ಅಂತ ಗೊತ್ತಾಯಿತು .ಆದರೆ ಅರಬ್ ಭೂತದ ನೆಲೆ ಗೊತ್ತಾಗಲಿಲ್ಲ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

೨೦೧೦ ನೆ ಇಸವಿ ಏಪ್ರಿಲ್ ತಿಂಗಳಿನಲ್ಲಿ ನನಗೆ ಮಲೇರಿಯ ಜ್ವರ ಬಂದು ಮಂಗಳೂರಿನ ಮಂಗಳ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿದ್ದೆ .ನಾನಿದ್ದ ಪಕ್ಕದ ಕೋಣೆಯಲ್ಲಿ ಅಡ್ಮಿಟ್ ಆಗಿದ್ದ ರೋಗಿಯನ್ನು ನೋಡಿಕೊಳ್ಳಲು ಅಜ್ಜಿ ಒಬ್ಬರು  ಇದ್ದರು .ಆಗಾಗ ನನ್ನಲ್ಲಿಗು ಬಂದು ವಿಚಾರಿಸಿ ಹೋಗುತ್ತಾ ಇದ್ದರು .ಹೀಗೆ ಮಾತನಾಡುವಾಗ ಅವರ ಮನೆ ಚಿಲಿಮ್ಬಿಯಲ್ಲಿದೆ ಎಂದು ಹೇಳಿದರು . ಆಗ ನಾನು ಕೂಡಲೇ ಅವರಲ್ಲಿ ಅರಬ್ ಭೂತಕ್ಕೆ ಅಲ್ಲಿ ಕೋಲ ಆಗುತ್ತದೆ ಎಂದು ಕೇಳಿದೆ .ಭೂತ ಕಟ್ಟುವ ಕಲಾವಿದರ ಕುಟುಂಬದ ಆ ಮಹಿಳೆ ತಮ್ಮ ಮಕ್ಕಳಲ್ಲಿ ವಿಚಾರಿಸಿ ಚಿಲಿಮ್ಬಿಯ ಮಲರಾಯಿ ಧೂಮಾವತಿ ಭೂತ ಸ್ಥಾನದಲ್ಲಿ ಅರಬ್  ಭೂತಕ್ಕೆ ಆರಾಧನೆ ಇರುವುದನ್ನು ತಿಳಿಸಿ ಅಲ್ಲಿಗೆ ಹೋಗುವ ದಾರಿಯನ್ನು ತಿಳಿಸಿದರು

ನಾನು ಆಸ್ಪತ್ರೆಯಿಂದ ಹೊರ ಬಂದ ನಂತರ  ಆ ಮಲರಾಯಿ ಧೂಮಾವತಿ ಸ್ಥಾನಕ್ಕೆ ಹೋಗಿ ಅರಬ್ ಭೂತದ ಬಗ್ಗೆ ಮಾಹಿತಿ ಸಂಗ್ರಹಿಸಿದೆ

 ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮವತಿ ದೈವಸ್ಥಾನದಲ್ಲಿ ಪ್ರಧಾನ ದೈವ ಮಲರಾಯಿಯ ಸೇರಿಗೆಯ ದೈವವಾಗಿ ‘ಅರಬ್ಬಿ ಭೂತ’ ಆರಾಧನೆ ಪಡೆಯುತ್ತಿದೆ . ಹೆಸರೇ ಸೂಚಿಸುವಂತೆ ಈ ದೈವತದ ಮೂಲ ಒಬ್ಬ ಅರಬ್ ವ್ಯಕ್ತಿ. ಈತನೊಬ್ಬ ಖರ್ಜೂರ ವ್ಯಾಪಾರಿ. ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ. ಅಲ್ಲಿ ಒಂದು ನೀರಿನ ಕಟ್ಟ ಇರುತ್ತದೆ. ಅಳಕೆ ಮೇಲ್ಮನೆಗೆ ಸೇರಿದ ಅವಿವಾಹಿತ ಹೆಣ್ಣು ಮಗಳು ತಿಂಗಳ ಸೂತಕ ಸ್ನಾನಕ್ಕೆ ಬಂದವಳು ಕಟ್ಟದ ನೀರಿಗಿಳಿದು ಸ್ನಾನ ಮಾಡುತ್ತಿರುತ್ತಾಳೆ. ಅವಳನ್ನು ನೋಡಿದ ಆ ಅರಬ್ ದೇಶದ ಖರ್ಜೂರ ವ್ಯಾಪಾರಿಯು ಅವಳಲ್ಲಿ ವ್ಯಾಮೋಹಗೊಂಡು ಅವಳ ಮೇಲೆ ಅತ್ಯಾಚಾರಕ್ಕೆ ಮಾಡಲು ಹೋಗುತ್ತಾನೆ. ಆಗ ಅವಳು ತನ್ನ ಕುಲದೈವ ಮಲರಾಯಿ ಧೂಮಾವತಿಯಲ್ಲಿ ಮಾನರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಮಲಾರಾಯಿ ಧೂಮಾವತಿ ದೈವ ಅವಳನ್ನು ಮಾಯ ಮಾಡಿ ಅವಳ ಮಾನರಕ್ಷಣೆ ಮಾಡಿದ್ದಲ್ಲದೆ ತನ್ನ ಸೇರಿಗೆ ದೈವವಾಗಿಸಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅವಳು ಬ್ರಾಂದಿ (ಬ್ರಾಹ್ಮಣತಿ)ಭೂತವಾಗಿ ಅಲ್ಲಿ ಆರಾಧನೆ ಪಡೆಯುತ್ತಾಳೆ .ಆ ಆರಬ್ ವ್ಯಾಪಾರಿಯನ್ನು ಶಿಕ್ಷಿಸುವ ಸಲುವಾಗಿ ಆತನನ್ನು ಮಾಯ ಮಾಡುತ್ತದೆ ಮಲರಾಯಿ ದೈವ . ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾದರೂ ದೈವದ ಸೇರಿಗೆಗೆ ಸೇರಿ ದೈವತ್ತ್ವ ಪಡೆಯುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವಾಗಿದೆ. ಅಂತೆಯೇ ಈ ಅರಬ್ ವ್ಯಾಪಾರಿ ಕೂಡ ದೈವತ್ತ್ವವನ್ನು ಪಡೆದು ಅರಬ್ಬಿ ಭೂತ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ಭೂತದ ಕಲ್ಲು ಇದೆ. ಆ ಬ್ರಾಹ್ಮಣ ಹುಡುಗಿ ಸ್ನಾನ ಮಾಡಿದ ನೀರಿನ ಕಟ್ಟ ಈಗ ಕೂಡ ಅಲ್ಲ್ಲಿದೆ ಅವಳ ನೇವಳಡ ಗುರುತು ಎಂಬ ಒಂದು ಗೆರೆ ಅಲ್ಲಿನ ಪಾದೆಕಲ್ಲಿನ ಮೇಲೆ ಇದೆ .ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಮ್ದಲಾಗುವ ಸಣ್ಣ ಸಣ್ಣ ಗುರುತುಗಳನ್ನ್ನು ಅಲ್ಲಿನ ಸ್ಥಳಿಯರು ತೋರುತ್ತಾರೆ .ವಾಸ್ತವಿಕ ನೆಲೆಯಿಂದ ಆಲೋಚಿಸುವುದಾದರೆ ಆ ಅರಬ್ ವ್ಯಾಪಾರಿಯಿಂದ ತಪ್ಪಿಸಿ ಕೊಳ್ಳುವುದಕ್ಕಾಗಿ ನೀರಿನಲ್ಲಿ ಮುಂದೆ ಮುಂದೆ ಸಾಗಿದ ಆ ಕನ್ಯೆ ದುರಂತವನ್ನಪ್ಪಿರಬಹುದು .ಅವಳನ್ನು ಹಿಂಬಾಲಿಸಿದ ಆ ಅರಬ್ ಖರ್ಜೂರ ವ್ಯಾಪಾರಿ ಕೂಡ ದುರಂತವನ್ನಪ್ಪ್ಪಿರಬಹುದು ಅಥವಾ ಆ ಹುಡುಗಿಯ ದುರಂತಕ್ಕೆ ಕಾರಣನಾದ ಅರಬ್ ವ್ಯಾಪಾರಿಯನ್ನು ಊರ ಜನರು ಸೇರಿ ಶಿಕ್ಷಿಸಿರಬಹುದು  .ಆಗ ಆತ ದುರಂತವನ್ನಪ್ಪಿರಬಹುದು .ಕಾಲಾಂತರದಲ್ಲಿ ಅವರಿಬ್ಬರೂ ದೈವತ್ವವನ್ನು ಪಡೆದು ಆರಾಧಿಸಲ್ಪಟ್ಟಿರಬೇಕು

ಅರಬ್ಬಿ ಭೂತಕ್ಕೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ .ಬ್ರಾಹ್ಮಣತಿ (ಬ್ರಾಂದಿ )ಭೂತಕ್ಕೆ ಒಂದು ಕಟ್ಟೆ  ಇದೆ.ಆ ಕಟ್ಟೆ ಯ ಹತ್ತಿರ  ಈ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ .

ಮಲರಾಯಿ ಧೂಮಾವತಿ ದೈವದ ನೇಮಕ್ಕೆ ಮೊದಲು ಬ್ರಾಹ್ಮಣ ಕನ್ಯೆ(ಬ್ರಾಂದಿ ಭೂತ) ಮತ್ತು ಅರಬ್ಬಿ ಭೂತಕ್ಕೆ ನೇಮ ನೀಡುತ್ತಾರೆ. ಅರಬ್ಬಿ ಭೂತವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚಕವಾಗಿ ಆತನಿಗೊಂದು ಬೆಳ್ಳಿಯ ಸರಿಗೆಯ

ಬಂಧನ ಇರುತ್ತದೆ. ಅರಬ್ಬಿ ಭೂತಕ್ಕೆ ಒಂದು ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆಯ(ಮುಂಡಾಸು ) ಅಲಂಕಾರ ಇರುತ್ತದೆ.


೨  ಚೀನೀ ಭೂತಗಳು :

ಚೀನಿ ಭೂತಗಳ ಬಗ್ಗೆ ಪ್ರೊ |ಕನರಾಡಿ ವಾದಿರಾಜ  ಭಟ್ಟರು ಮಾಹಿತಿ ನೀಡಿದ್ದಾರೆ  ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿರುವ ಗರೊಡಿಯಲ್ಲಿ ಐದು ಚೀನೀ ಭೂತಗಳಿಗೆ ಆರಾಧನೆ ಇದೆ. ಇವರ ಮರದ ಉರುಗಳು ಕೂಡ ಇಲ್ಲಿ ಇವೆ. ಆಷಾಡ ತಿಂಗಳಿನಲ್ಲಿ ಒಂದು ದಿನ ಒಂದು ಚೀನೀ ಹಡಗು ಬರುತ್ತದೆ. ಅದರಲ್ಲಿದ್ದ ಐದು ಜನ ಚೀನೀ ವ್ಯಕ್ತಿಗಳು ಗರೊಡಿಯಲ್ಲಿ ಆರಾಧಿಸಲ್ಪಡುವ ಪಂಜುರ್ಲಿ ದೈವವನ್ನು ಅಪಹಾಸ್ಯ ಮಾಡಿ ನಗಾಡುತ್ತಾರೆ. ಆಗ ಕೋಪಗೊಂಡ ದೈವ ಪಂಜುರ್ಲಿ ಅವರನ್ನು ಮಾಯಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡುತ್ತದೆ ಎಂಬ ಐತಿಹ್ಯ ಇಲ್ಲಿ ಪ್ರಚಲಿತ ಇದೆ. ಚೀನೀ ವ್ಯಕ್ತಿಗಳ ಹಾಗೂ ಸ್ಥಳೀಯರ ನಡುವೆ ಸಂಘರ್ಷ ನಡೆದು ಚೀನೀ ವ್ಯಕ್ತಿಗಳು ದುರಂತಕ್ಕೊಳಗಾಗಿ ಕಾಲಾಂತರದಲ್ಲಿ ದೈವತ್ವಕ್ಕೇರಿ ಆರಾಧನೆಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಅಧ್ಯಯನವಾಗ ಬೇಕಾಗಿದೆ.
೩ ಮುಸ್ಲಿಂ  ಭೂತಗಳು

 ತುಳುನಾಡಿನಲ್ಲಿ ಅನೇಕ ಮುಸ್ಲಿ ಭೂತ ಗಳಿಗೆ  ಆರಾಧನೆ ಇದೆ .ತುಳುನಾಡಿನ ಅತ್ಯಂತ ಪ್ರಸಿದ್ಧ ಕಾರಣಿಕದ ದೈವ ಬಬ್ಬರ್ಯ ಮುಸ್ಲಿಂ ಮೂಲದ ದೈವ .ಬ್ಯಾರ್ದಿ  ಭೂತ ,ಬ್ಯಾರಿ ಭೂತ ,ಮಾಪುಳ್ತಿ ಧೂಮಾವತಿ ,ಮಾಪುಲೇ ಮಾಪುಳ್ತಿ ಭೂತೊಳು, ಅಲಿ ಭೂತ ,ಮುಸ್ಲಿಮರ ಮಕ್ಕಳು ಮೊದಲಾದ ಅನೇಕ ಮುಸ್ಲಿಂ ಭೂತ ಗಳಿಗೆ ತುಳುನಾಡಿನಲ್ಲಿ ಆರಾಧನೆ ಇದೆ

೧ . ಬ್ಯಾರ್ದಿ ಭೂತ : ಕಾಸರಗೋಡು ಪರಿಸರದ ಮುಸ್ಲಿಂ ಮಹಿಳೆಯರನ್ನು ಬ್ಯಾರ್ದಿ ಎಂದು ಹೇಳುತ್ತಾರೆ. ಮುಸ್ಲಿಂ ಮಹಿಳೆಯೊಬ್ಬಳು ದೈವತ್ವಕ್ಕೇರಿ ಆರಾಧಿಸಲ್ಪಡುವ ದೈವವೇ ಬ್ಯಾರ್ದಿ ಭೂತ. ಬಬ್ಬರ್ಯ ಭೂತದ ನೇಮವನ್ನು ಸ್ತ್ರೀಯರು ನೋಡಬಾರದೆಂಬ ನಿಷೇಧ ಇತ್ತು. ಓರ್ವ ಮುಸ್ಲಿಂ ಮಹಿಳೆ ಇದನ್ನು ಕದ್ದು ನೋಡುತ್ತಾಳೆ. ಆಗ ಬಬ್ಬರ್ಯ ಕೋಪಿಸಿಕೊಂಡು ಮಾಯ ಮಾಡುತ್ತಾನೆ. ಮಾಯವಾದ ಮುಸ್ಲಿಂ ಮಹಿಳೆ ಬ್ಯಾರ್ದಿ ಭೂತ ಎಂಬ ಹೆಸರನ್ನು ಪಡೆದು ಬೊಬ್ಬರ್ಯನ ಸೇರಿಗೆಗೆ ಸಂದು ಹೋಗಿ ಆರಾಧಿಸಲ್ಪಡುತ್ತಾಳೆ. ಬ್ಯಾರ್ದಿ ಭೂತವು ಬಬ್ಬರ್ಯನ ಆದೇಶದಂತೆ ಪಾಟು ಹೇಳುತ್ತಾಳೆ. ಇಲ್ಲಿ ಕೂಡ ಹಾಸ್ಯದ ಅಭಿವ್ಯಕ್ತಿ ಇದೆ. ಬ್ಯಾರ್ದಿ ಭೂತಕ್ಕೆ ವಿಶೇಷವಾದ ವೇಷ ಭೂಷಣಗಳೇನೂ ಇಲ್ಲ. ಪಂಚೆ ಉಟ್ಟಿರುವ ಓರ್ವ ವ್ಯಕ್ತಿ ತಲೆಗೊಂದು ಶಾಲು ಹೊದೆದುಕೊಂಡು ಬ್ಯಾರ್ದಿ ಭೂತವಾಗಿ ಅಭಿನಯಿಸುತ್ತಾನೆ. ಬ್ಯಾರ್ದಿ ಭೂತವು ಮಲೆಯಾಳದಲ್ಲಿ ಸಂಭಾಷಣೆ ನಡೆಸುತ್ತದೆ.ಕಾಸರಗೋಡಿಗೆ ಸೇರಿದ ಇಚಲಂಗೋದು ,ನಡಿಬೈಲು ಮೊದಲಾದೆಡೆಗಳಲ್ಲಿ ಈ ಭೂತಕ್ಕೆ ಆರಾಧನೆ ಇದೆ .ನಡಿ  ಬೈಲಿನಲ್ಲಿ ಒಂಜಿ ಕಮ್ಮಿ ನಲ್ಪ ಭೂತಗಳ ನೇಮ ಎಂಬ ಸಮೂಹ ಭೂತಾರಾಧನೆಯಲ್ಲಿ ಬ್ಯಾರ್ದಿ ಭೂತಕ್ಕೆ ಆರಾಧನೆ ಇರುವುದು ಗೊತ್ತಾದರೂ ಈ ಭೂತದ ಕುರಿತು ಮಾಹಿತಿ ದೊರೆತಿರಲಿಲ್ಲ .ಮುಂದೆ ಇಚಲನ್ಗೊಡಿನಲ್ಲಿ ಈ ಬಗ್ಗೆ ತುಸು  ಮಾಹಿತಿ ದೊರೆಯಿತು
೨ . ಆಲಿಚಾಮುಂಡಿ : ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವ ಆಲಿಚಾಮುಂಡಿ ಬಹಳ ಪ್ರಸಿದ್ಧವಾದ ದೈವ. ಮುಸ್ಲಿಂ ಮೂಲವನ್ನು ಹೊಂದಿರುವ ದೈವತವಿದು. ಇಬ್ಬರು ಮಹಿಳೆಯರಿಗೆ ಆಲಿ ಎಂಬಾತ ಕಿರುಕುಳ ನೀಡಿದಾಗ ಮುನಿದ ದೈವ ಚಾಮುಂಡಿಯು ಆತನನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಆತನೇ ಮುಂದೆ ಆಲಿಚಾಮುಂಡಿ ಎಂಬ ಹೆಸರಿನಿಂದ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾನೆ.ಕುಂಬಳೆ ಸಮೀಪದ ಒಂದು ಗುಡ್ಡದಲ್ಲಿ ಪಾದೆ ಸ್ಥಾನ ಎಂಬ ಕ್ಷೆತ್ರ ಇದೆ.  ಇದು  ಆಲಿ ಭೂತದ  ಮೂಲ ಸ್ಥಾನ .ಇಲ್ಲಿನ ಪ್ರಧಾನ ದೇವತೆ ಪಾಡಾಂಗರೆ  ಪೋದಿ(ಪಾಟಾರ್ ಕುಳಂಗದ ಭಗವತಿ ).ಆದರೆ ಇದು ಆಲಿ ಚಾಮುಂಡಿ ಭುತದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ.
 copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
 ಆಲಿ ಮೂಲತಃ ಮುಸ್ಲಿಂ ಮಂತ್ರವಾದಿ .ಚೆಲುವನೂ ಸೊಗಸುಗಾರನೂ,ಹೆಣ್ಣಿನ ಚಪಲ ಉಳ್ಳವನೂ  ಆದ ಆಲಿಬ್ಯಾರಿ  ಮಂತ್ರವಾದಿಯಾಗಿದ್ದನು.ತನ್ನ ಮಂತ್ರ ಶಕ್ತಿಯಿಂದ ಜನರಿಗೆ ತೊಂದರೆ ಕೊಡುತ್ತಿದ್ದನು . ತನ್ನ್ನ ಮಂತ್ರ ಶಕ್ತಿಯಿಂದ ಹೆಣ್ಣು ಮಕ್ಕಳನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಿದ್ದನು .ಹೆಣ್ಣು ಮರುಳನಾದ ಆತನನ್ನು ಪ್ರತಿಭಟಿಸಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ .ತನ್ನ ಮಂತ್ರ ಶಕ್ತಿಯಿಂದಾಗಿ ಆತ ಅಷ್ಟು ಬಲವಂತನಾಗಿದ್ದನು. ಅದಕ್ಕೆ ಅವನ ಮಂತ್ರ ಶಕ್ತಿಯೇ ಕಾರಣವಾಗಿತ್ತು .ಅವನು ಮಂತ್ರ ಶಕ್ತಿಯಿರುವ ಒಂದು ತಾಯಿತವನ್ನು ಕೊರಳಿಗೆ ಕಟ್ಟಿಕೊಂಡಿದ್ದನು .ಅದು ಅವನ ಮೈ ಮೇಲೆ ಇರುವ ತನಕ ಅವನನ್ನು ಸೋಲಿಸಲು ಯಾರಿಂದಲೂ ಅಸಾಧ್ಯವಾಗಿತ್ತು .ಆದ್ದರಿಂದ ಜನರು ಮಂತ್ರ ದೇವತೆಗೆ ಶರಣಾಗಿ ಆಲಿ ಬ್ಯಾರಿಯಿಂದ ನಮ್ಮನ್ನು ಕಾಪಾಡುವಂತೆ ಪ್ರಾರ್ಥಿಸಿದರು .ಆಗ ಮಂತ್ರ ದೇವತೆ ಒಂದು ಸುಂದರ ಹೆಣ್ಣಾಗಿ ಆವಿರ್ಭವಿಸಿ ,ತನ್ನ ಒಡನಾಡಿ ಹೆಣ್ಣು ಮಕ್ಕಳೊಂದಿಗೆ ಒಂದು ಕೆರೆಯಲ್ಲಿ ಜಲ ಕ್ರೀಡೆಯಾಡುತ್ತದೆ. ಆ ಹೆಣ್ಣಿನ ರೂಪು ಬೆಡಗು ಬಿನ್ನಾಣ ನೋಡಿ ಮರುಳಾದ ಆಲಿ ಬ್ಯಾರಿ ಅವಳಲ್ಲಿ ಮೋಹಗೊಂಡು ಕೆರೆಯ ಬಳಿಗೆ ಬರುತ್ತಾನೆ . ಆಗ ಆ ಹೆಣ್ಣಿನ ಮಾಯಾ ರೂಪು ಅವನಲ್ಲಿ ನೀನು ಬಟ್ಟೆಯನ್ನು ಕಳಚಿ ಕೆರೆಗೆ ಬರಬೇಕು ಎಂದು ಹೇಳುತ್ತದೆ .ಅಂತೆಯೇ ಅವನು ತನ್ನ ಬಟ್ಟೆಯನ್ನು ಬಿಚ್ಚಿ ಕೆರೆಗೆ ಇಳಿಯುತ್ತಾನೆ .ಆಗ ಆ ಹೆಣ್ಣು ರೂಪದ ಮಂತ್ರ ದೇವತೆ ಅದು ನಿನ್ನ ಕೊರಳಲ್ಲಿ ಇರುವುದು ಏನು ?ಅದನ್ನು ಅಲ್ಲಿಟ್ಟು ಬಾ “ಎಂದು ಹೇಳಿ ಅವನ ಮಂತ್ರ ಶಕ್ತಿಯಿರುವ ತಾಯಿತವನ್ನು ತೆಗೆಯುವಂತೆ ಹೇಳುತ್ತದೆ . ಹೆಣ್ಣಿ ಮೋಹಕ್ಕೆ ಒಳಗಾದ ಆತ ಹಿಂದೆ ಮುಂದೆ ವಿವೇಚಿಸದೆ ತನ್ನ ಮಂತ್ರ ಶಕ್ತಿಯ ತಾಯಿತವನ್ನು ತೆಗೆದಿಟ್ಟು ಕೆರೆಗೆ ಇಳಿಯುತ್ತಾನೆ .ತಾಯಿತದ ಬಲವಿಲ್ಲದ ಆತನನ್ನು ಸ್ತ್ರೀ ರೂಪಿನ ಮಂತ್ರ ದೇವತೆ ಸಂಹರಿಸುತ್ತದೆ ಎಂಬ ಐತಿಹ್ಯವು ಪ್ರಚಲಿತವಿದೆ . ಆತನನ್ನು ಮಂತ್ರ ದೇವತೆ ತನ್ನ ಸೇರಿಗೆ ದೈವವನ್ನಾಗಿ ಮಾಡುತ್ತದೆ .ಆತ ಮುಂದೆ ಆಲಿ ಭೂತ ,ಆಲಿ ಚಾಮುಂಡಿ ಭೂತವಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ

ವಾಸ್ತವಿಕ ನೆಲೆಯಲ್ಲಿ ಆಲೋಚಿಸುವುದಾದರೆ ಅಕಸ್ಮಾತ್ ಆಗಿ ಕೆರೆಯಲ್ಲಿ ಮುಳಗಿ ದುರಂತವನ್ನಪ್ಪಿರುವ ಆಲಿ ಬ್ಯಾರಿಯ ಜೊತೆಗೆ ದೈವ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .ಅಥವಾ ಹೆಣ್ಣಿನ ಮರುಳನಾದ ಆತ ಕೆರೆ /ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ಸ್ತ್ರೀ ಸಮೀಪಕ್ಕೆ ಹೋಗಲೆತ್ನಿಸಿ ದುರಂತವನ್ನಪ್ಪಿರಬಹುದು ,ಈ ಬಗ್ಗೆ “ಅತಿರೇಕದ ವರ್ತನೆಯ ಮಂತ್ರವಾದಿಯೋಬ್ಬನನ್ನು ಜನರೇ ಸಿಟ್ಟಿಗೆದ್ದು ಗುಪ್ತವಾಗಿ ಮುಗಿಸಿದ ವೃತ್ತಾನ್ತಕ್ಕೆ ಬೇರೊಂದು ಬಣ್ಣ ಬಂದಿರಲೂ ಬಹುದು .ಭೂತ ಮಹಿಮೆಗಳನ್ನು ಪ್ರಚುರ ಗೊಳಿಸಲು ಇಂತ ಕಥೆಗಳು ಅನುಕೂಲ “ಎಂದು ಡಾ. ಅಮೃತ ಸೋಮೆಶ್ವರರು ಅಬಿಪ್ರಾಯ ಪಟ್ಟಿದ್ದಾರೆ .ಇತರ ಭೂತಗಳಂತೆ ಆಲಿ ಭೂತಕ್ಕೆ ಅಣಿ ಜಕ್ಕೆಳಣಿ ಗಳು ಇರುವುದಿಲ್ಲ ಈತನಿಗೆ ಬಣ್ಣ ಬಣ್ಣದ ಲುಂಗಿ ,ಸೊಂಟದ ಪಟ್ಟಿ ,ತಲೆಗೆ ಬಂಗಾರದ /ಬೆಳ್ಳಿಯ ಟೊಪ್ಪಿ ಇರುತ್ತದೆ.ಮೈಗೆ ಗಂಧ ಪೂಸಿ ಮುಖಕ್ಕೆ ಕಪ್ಪು ಬಣ್ಣ ಹಾಕಿದ ಸರಳ  ಅಲಂಕಾರ ಇರುತ್ತದೆ.

ಈ ಭೂತಕ್ಕೆ ತುಂಬಾ ಜನರು ಹರಿಕೆ ಹಾಕುತ್ತಾರೆ.ಅನೇಕ ಮುಸ್ಲಿಂ ಸ್ತ್ರೀ ,ಪುರುಷರೂ ಆಲಿ ಭೂತಕ್ಕೆ ಹರಿಕೆ ಒಪ್ಪಿಸಿತ್ತಾರೆ .”ವೇಶ್ಯಾ ವೃತ್ತಿಯ ಹೆಂಗಳೆಯರೂ ಈತನಿಗೆ ನಡೆದುಕೊಳ್ಳುತ್ತಾರೆ,ಈ ವರ್ಷದ ಬೆಳೆ ಹೇಗಿದೆ ? ಎಂಬ ಸರಸ ಪ್ರಶ್ನೆಯನ್ನು ಈ ರಸಿಕ ದೈವ ಕೇಳುವುದುಂಟು “ಎಂದು ಅಮೃತ ಸೋಮೆಶ್ವರರು ಹೇಳಿದ್ದಾರೆ ,”ಮುಸ್ಲಿಂ ಮೂಲದ ವ್ಯಕ್ತಿಯೊಬ್ಬ ದೈವೀಕರಣಗೊಂಡು ಸಾವಿರಾರು ಜನರ ಆರಾಧ್ಯ ಶಕ್ತಿಯಾಗಿರುವುದು ವಿಶೇಷ  ಮಾತ್ರವಲ್ಲ,ಈ ಆರಾಧನಾ ವಿದ್ಯಮಾನವು ಆರಾಧನಾ ಮಟ್ಟದ ಕೋಮು ಸೌಹಾರ್ದಕ್ಕೆ ಒಂದು ಕೊಡುಗೆಯೂ ಆಗಿದೆ “ಎಂದು ಅಮೃತ ಸೋಮೆಶ್ವರರು ಅಭಿಪ್ರಾಯ ಪಟ್ಟಿದ್ದಾರೆ .    

೩ . ಮಾಪುಳ್ತಿ ಧೂಮಾವತಿ : ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಹುಟ್ಟಿನಿಂದ ಮನುಷ್ಯರಾಗಿದ್ದು ಅಸಾಮಾನ್ಯ ಸಾಹಸ ಮೆರೆದು ಅಸಹಜ ಮರಣಕ್ಕೆ ತುತ್ತಾಗಿ ದೈವತ್ವವನ್ನು ಪಡೆದವರಾಗಿದ್ದಾರೆ. ಕೋಟೆದ ಬಬ್ಬು, ಬಬ್ಬರ್ಯ, ಕೊರಗ-ತನಿಯ ಮೊದಲಾದವರು ಈ ರೀತಿ ದೈವತ್ವವನ್ನು ಪಡೆದವರು. ಇನ್ನು ಕೆಲವರು ಪ್ರಧಾನ ದೈವಗಳಾದ ರಕ್ತೇಶ್ವರಿ, ಚಾಮುಂಡಿ ಮೊದಲಾದವರ ಅನುಗ್ರಹಕ್ಕೆ ಪಾತ್ರರಾಗಿ ದೈವತ್ವವನ್ನು ಪಡೆದಿದ್ದಾರೆ. ಅಕ್ಕಚ್ಚು, ಅಚ್ಚುಬಂಗೇತಿ ಮೊದಲಾದ ದೈವಗಳು ಈ ವರ್ಗದಲ್ಲಿ ಸೇರುತ್ತಾರೆ. ದೈವದ ಆಗ್ರಹಕ್ಕೆ ತುತ್ತಾಗಿಯೂ ದೈವತ್ವವನ್ನು ಪಡೆದವರಿದ್ದಾರೆ. ಭಟ್ಟಿಭೂತ, ಅರಬ್ಬಿ ಭೂತ, ಮರ್ಲುಮಾಣಿ ಮೊದಲಾದ ದೈವಗಳು ಈ ರೀತಿ ದೈವತ್ವವನ್ನು ಪಡೆದ ಭೂತಗಳಾಗಿವೆ. ಕಾರಣವೇ ಇಲ್ಲದೆ ದೈವಗಳ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದವರಿದ್ದಾರೆ. ಕುಂಞÂಭೂತ, ದಾರು-ಕುಂದಯ, ಸಬ್ಬೆಡ್ತೆರ್ ಮೊದಲಾದ ದೈವಗಳು ವಿನಾಕಾರಣ ದೈವಗಳ ದೃಷ್ಟಿಗೆ ಸಿಲುಕಿ ದೈವತ್ವವನ್ನು ಪಡೆದ ಭೂತಗಳಾಗಿವೆ.ಮಾಪುಳ್ತಿ ಭೂತ ಕೂಡ ಧೂ ಮಾವತಿ ದೈವದ ಸಿಲುಕಿ ದೈವತ್ವವನ್ನು ಪಡೆದ ದೈವತ.

ನಾನು ಅರೆಕಲ್ಲಿನಲ್ಲಿರುವ ನೈದಾಲ ಪಾಂಡಿ ಭೂತದ ಮ್ಕುರಿತು ಮಾಹಿತಿ ಸಂಗ್ರಹಿಸಿ ರೆಕಾರ್ಡ್ ಮಾಡಲೆಂದು ಸಂಪಾಜೆಯಿಂದ ಜೀಪ್ ಮೂಲಕ ಅರೆಕಲ್ಲಿಗೆ ಹೋಗುವಾಗ ಬಾಬು ಪಾಟಾಳಿ ಎಂಬವರ ಪರಿಚಯವಾಯಿತು . ಮಾತಿನ ನಡುವೆ ಅವರು ಅಜ್ಜಾವರ  ಸಮೀಪ ಮಾಪುಳ್ತಿ ಧೂಮಾವತಿ ಎಂಬ ಭೂತ ಇರುವುದನ್ನು ತಿಳಿಸಿದರು.ಅಲ್ಲಿಂದ ಈ ಭೂತದ ಸ್ಥಾನ ಎಲ್ಲಿದೆ ಎಂದು ತಿಳಿಯಲು ಯತ್ನಿಸುತ್ತಾ ಇದ್ದೆ .ನನ್ನ ಸಹೋದ್ಯೋಗಿ ಮಿತ್ರರಾದ ಸತ್ಯವತಿ ಅವರು ಅಜ್ಜಾವರ  ಪದ್ದಮ್ಬೈಲಿನ ಪರಿಚಯ ಇರುವ ಶಾರದಾ ಕಾಲೇಜ್ ನ ಸುಮಲತಾ ಮೇಡಂ ಅವರನ್ನು ಸಂಪರ್ಕಿಸಲು ತಿಳಿಸಿದರು .ಅವರು ಅವರ ಸಹೋದರ ಅರುಣ್ ಕುಮಾರರನ್ನು ಸಂಪರ್ಕಿಸಲು ತಿಳಿಸಿದರು . ಅರುಣ್ ಕುಮಾರ ಸುಳ್ಯದ ಗಾಂಧಿ ನಗರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದ್ದಾರೆ .ಅವರು ಅವರ ಮನೆಯಲ್ಲಿ ಆರಾಧನೆಗೊಳ್ಳುವ ಮಾಪುಳ್ತಿ ಭೂತದ ಕುರಿತು ಮಾಹಿತಿ ನೀಡಿದ್ದಾರೆ .

 ಸುಳ್ಯ ತಾಲ್ಲೂಕಿನ ಅಜ್ಜಾವರ ಸಮೀಪದ ಪಡ್ಡಂಬೈಲಿನಲ್ಲಿ ಪ್ರಧಾನ ದೈವ ಧೂಮಾವತಿ. ಧೂಮಾವತಿ ದೈವವು ಭಾಗಮಂಡಲದಿಂದ ಪಡ್ದಂಬೈಲಿಗೆ ಬರುವಾಗ,ಪಡ್ಡಂಬೈಲಿಗೆ ಸಮೀಪದ ಪೇರಡ್ಕದಲ್ಲಿ ಭತ್ತದ ಕೃಷಿ ಕಾರ್ಯ ನಡೆಯುತ್ತಾ ಇತ್ತು. ಭೂತ ಎದ್ದು ನಿಲ್ಲುವ ಸಮಯದಲ್ಲಿ ಪೇರಡ್ಕದಲ್ಲಿ ಓರ್ವ ಮುಸ್ಸಿಂ ಮಹಿಳೆ ಭತ್ತ ಬಡಿಯುತ್ತಾ ಇರುತ್ತಾಳೆ. ಅವಳನ್ನು ಮಾಯ ಮಾಡಿದ ಧೂಮಾವತಿ ದೈವವು ಅವಳನ್ನು ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಧೂಮಾವತಿ ಸೇರಿಗೆಗೆ ಸಂದ ಆ ಮುಸ್ಲಿಂ ಮಹಿಳೆ ಮಾಪುಳ್ತಿ ದೈವವಾಗಿ ಆರಾಧನೆಯನ್ನು ಪಡೆಯುತ್ತಾಳೆ.ನಂತರ  ಪಡ್ಡಂಬೈಲಿಗೆ ಬಂದು ನೆಲೆಯಾಗುತ್ತದೆ. ಧೂಮಾವತಿಗೆ ನೇಮ ಕೊಡುವ ಮೊದಲು ಮಾಪುಳ್ತಿ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ.ಈ ದೈವ ಮಾಪುಳ್ತಿ ಧೂಮಾವತಿ ಎಂದೇ ಪ್ರಸಿದ್ಧಿಯನ್ನು ಪಡೆದಿದೆ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

೪ . ಮಾಪುಳೆ-ಮಾಪುಳ್ತಿ ಭೂತಗಳು : ೨೦೧೦ ರಲ್ಲ್ಲಿ ನಮ್ಮ ಕಾಲೇಜ್ ನ  ಎನ್ ಎಸ್ ಎಸ್ ಕ್ಯಾಂಪ್ ಅನ್ನು ನಾವು ಇವರನಾಡಿನ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದೆವು .ಸಹ ಘಟಕಾಧಿಕಾರಿಯಾಗಿದ್ದ ನನಗೆ ಅಲ್ಲಿನ ಎಸ್ ಡಿ ಎಂ ಸಿ ಸದಸ್ಯರ ಪರಿಚಯವಾಯಿತು .ನನಗೆ ಅಲ್ಲಿ ಕೃಷ್ಣಪ್ಪ ಗೌಡ ಎಂಬ ಸಹೃದಯಿ ಹಿರಿಯರು ಮಾತಿಗೆ ಸಿಕ್ಕಿದರು .ಮಾತನಾಡುತ್ತಾ ಭೂತಾರಾಧನೆಯ ಕುರಿತಾದ ನನ್ನ ಆಸಕ್ತಿಯನ್ನು ತಿಳಿದು ಅಲ್ಲಿ ಸುತ್ತ ಮುತ್ತಲಿನ ಭೂತಗಳ ಕುರಿತು ಅವರಿಗೆ ತಿಳಿದ ವಿಚಾರ ತಿಳಿಸಿದರು .ಅದೇ ರೀತಿ  ಕುಂಬಳ ಚ್ಚೇರಿಯಲ್ಲಿ ಆರಾಧನೆಗೊಳ್ಳುವ ಎರಡು ವಿಶಿಷ್ಟ ಭೂತಗಳಿವೆ .ಮಾಪುಳೆ ಮಾಪುಳ್ತಿ ಅಂತ ಎರಡು ಮುಸ್ಲಿಂ ಭೂತಗಳಿಗೆ ಅಲ್ಲಿ ಆರಾಧನೆ ಇದೆ ಎಂದು ತಿಳಿಸಿದರು ಅಲ್ಲಿ ಈ ಭೂತಗಳಿಗೆ ಆರಾಧನೆ ನಡೆಯುವ ಸಮಯವನ್ನು ತಿಳಿಸಿ ,ಆ ಪರಿಸರದ ಕೆಲವರ ವಿಲಾಸ ಮತ್ತು ಫೋನ್ ನಂಬರ್ ನೀಡಿದರು .ನಂತರ ನಾನು ಈ ಬಗ್ಗೆ ವಿಚಾರಿಸಿ ಏಪ್ರಿಲ್ ತಿಂಗಳ ೨೩ ನೆ ತಾರೀಕಿನಂದು ಅಲ್ಲಿ ರೆಕಾರ್ಡಿಂಗ್ ಗೆ ಹೋದೆ .ಆದರೆ ನನ್ನ ದುರದೃಷ್ಟಕ್ಕೆ ಆ ವರ್ಷ ಮಾಪುಲೇ ಮಾಪುಳ್ತಿ ಭೂತಗಳಿಗೆ ನೇಮ ಇರಲಿಲ್ಲ .ಅಲ್ಲಿ ಎರಡು ವರ್ಷಗಳಿಗೊಮ್ಮೆ ಈ ಭೂತಗಳಿಗೆ ಆರಾಧನೆ ಎಂದು ತಿಳಿಯಿತು .ಭೂತದ ಕೋಲ ರೆಕಾರ್ಡ್ ಮಾಡಲು ಸಿಗದಿದ್ದರೂ ಈ ಭೂತಗಳ ಕುರಿತು ಮಾಹಿತಿ ದೊರೆಯಿತು

 ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾಗುವ ಸಾಮಾನ್ಯ ಜನರು ಆ ದೈವದ ಸೇರಿಗೆಯಲ್ಲಿ ಸರಿದು ಹೋಗಿ ದೈವತ್ವಕ್ಕೇರಿ ಆರಾಧನೆ ಹೊಂದುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವೇ ಆಗಿದೆ. ಉತ್ತರ ಕೊಡಗು ತಾಲೂಕಿನ ಕುಂಬಳ ಚ್ಚೇರಿಯಲ್ಲಿ ಶಿರಾಡಿ ದೈವಕ್ಕೆ ಆರಾಧನೆ ಇದೆ. ಶಿರಾಡಿ ದೈವದ ವಾಲಸರಿ ಆಗುವಾಗ ದೈವದ ಎದುರಿಗೆ ಯಾರೂ ಬರಬಾರದು ಎಂಬ ನಿಯಮವಿದೆ. ಸುಮಾರು ವರ್ಷಗಳ ಹಿಂದೆ ಶಿರಾಡಿ ದೈವ ಬರುವಾಗ ಗದ್ದೆಯ ಬದುವಿನಲ್ಲಿ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಮುಸ್ಲಿಂ ದಂಪತಿಗಳು ಹೋಗುತ್ತಾರೆ. ಆಗ ಕೋಪಗೊಂಡ ದೈವ ತೊಟ್ಟಿಲ ಮಗುವನ್ನು ಮಾಯ ಮಾಡುತ್ತದೆ. ಆಗ ಆ ಮುಸ್ಲಿಂ ದಂಪತಿಗಳು ದೈವದ ಹತ್ತಿರ ಕ್ಷಮೆ ಕೇಳುತ್ತಾರೆ. ಆಗ ದಯೆ ತೋರಿದ ಶಿರಾಡಿ ದೈವ ಆ ಮುಸ್ಲಿಂ ದಂಪತಿಗಳನ್ನು ತನ್ನ ಸೇರಿಗೆಯಲ್ಲಿ ಸೇರಿಸಿಕೊಳ್ಳುತ್ತದೆ. ಕುಂಬಳ ಚ್ಚೇರಿಯಲ್ಲಿ ಶಿರಾಡಿ ದೈವಕ್ಕೆ ನೇಮಕೊಡುವಾಗ ಈ ದೈವತ್ವಕ್ಕೇರಿದ ಮುಸ್ಲಿಂ ದಂಪತಿಗಳನ್ನು ಮಾಪುಳೆ-ಮಾಪುಳ್ತಿ ಭೂತೊಳು ಎಂಬ ಹೆಸರಿನಲ್ಲಿ ನೇಮ ಕೊಟ್ಟು ಆರಾಧಿಸುತ್ತಾರೆ. ಇಲ್ಲಿ ಮಾಪುಳೆ-ಮಾಪುಳ್ತಿ ದೈವಗಳ ವೇಷ ಭೂಷಣಗಳು ಸರಳವಾಗಿದ್ದು ಮುಸ್ಲಿಂ ಪುರುಷ ಹಾಗೂ ಮಹಿಳೆಯನ್ನು ಹೋಲುತ್ತದೆ. ಮಾಪುಳೆ ದೈವದ ಬಳಿ ಪಂಚೆ ಹಾಗೂ ತಲೆಗೆ ಟೊಪ್ಪಿ ಅಥವಾ ಮುಂಡಾಸು ಹಾಕಿರುತ್ತಾನೆ. ಮಾಪುಳ್ತಿ ಭೂತ ತಲೆಗೆ ಸೆರಗನ್ನು ಹೊದ್ದಿರುತ್ತಾಳೆ.

೫ .ಬ್ಯಾರಿ ಭೂತ : ಪುತ್ತೂರು ಉಪ್ಪಿನಂಗಡಿ ಬಳಿಯ ಆಲಂಗಾರಿನಲ್ಲಿ ಬ್ಯಾರಿ ಭೂತಕ್ಕೆ ಆರಾಧನೆ ಇರುವ ಬಗ್ಗೆ ಭೂತ ಅಕ್ತ್ತುವ ಕಲಾವಿದರೊಬ್ಬರು ತಿಳಿಸಿದ್ದಾರೆ .ಅಲ್ಲಿ ಉಲ್ಲಾಕುಳು ಪ್ರಧಾನ ದೈವ .ಉಲ್ಲಾಕುಳು ಎದ್ದು ನಿಲ್ಲುವಾಗ ಯಾರು ಎದುರು ಬರಬಾರದೆಂಬ ನಿಯಮ ಇದೆ .ಒಂದು ವರ್ಷ ಉಲ್ಲಾಕುಳು ನೇಮದ ಸಂದರ್ಭದಲ್ಲ್ಲಿ ಮೀನು ಮಾರಾಟ ಮಾಡುವ ಮುಸ್ಲಿಂ ವ್ಯಾಪಾರಿ ಭೂತ ನೇಮ ಆಗುತ್ತಿದ್ದುದು ಗೊತ್ತಾಗದೆ ಅಲ್ಲಿಗೆ ಬರುತ್ತಾರೆ ಆಗ ದೈವ ಆತನನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯಮಾದಿಕೊಳ್ಳುತ್ತದೆ .ಮುಂದೆ ಆತ ಬ್ಯಾರಿ ಭೂತವಾಗಿ ಆರಾಧನೆ ಪಡೆಯುತ್ತಾನೆ

೬.ಮುಸ್ಲಿಮರ  ಮಕ್ಕಳು :ಕೆಲವು ಗರೋಡಿಗಳಲ್ಲಿ ಮುಸ್ಲಿಮರ ಮಕ್ಕಳು ಎಂಬ ಎರಡು ದೈಗಳಿಗೆ ಆರಾಧನೆ ಇದೆ .ಕೆಲವು ಗರೋಡಿಗಳಲ್ಲಿ ಮುಸ್ಲಿಮರ ಮಕ್ಕಳ ಎರಡು ಮರದ ಉರುಗಳು (ಮರದ ವಿಗ್ರಹಗಳು ) ಇವೆ . ಈ ಎರಡು ಶಕ್ತಿಗಳ ಕುರಿತು ಎರಡು ರೀತಿಯ ಐತಿಹ್ಯಗಳು ಪ್ರಚಲಿತವಿವೆ . ಕೋಟಿಚೆನ್ನಯರು ಎನ್ಮೂರಿಗೆ ಬರುವ ದಾರಿಯಲ್ಲಿ ಎರಡು ಮುಸ್ಲಿಂ ಮಕ್ಕಳು ಆಟವಾಡಿ ಕೊಂಡು ಇರುತ್ತಾರೆ .ಅವರಲ್ಲಿ ಕ್ತಿ ಚೆನ್ನಯರು ಕಿನ್ನಿದಾರುವಿನ ಮನೆಯ ದಾರಿಯನ್ನು ಕೇಳುತ್ತಾರೆ . ಆಗ ಆ ಮಕ್ಕಳು ಬೇಕೆಂದೇ ತಪ್ಪು ದಾರಿ ಹೇಳಿ ಇವರನ್ನು ಅಲೆದಾಡಿಸಿದರಂತೆ .ಆಗ ಕೋಪ ಗೊಂಡ ಕೋಟಿ ಚೆನ್ನಯರು ಇವರನ್ನು ಮಾಯಾ ಮಾಡಿದರು .ಮುಂದೆ ಗರೋದಿಯಲ್ಲಿ ತಮ್ಮ ಸೇರಿಗೆ ದೈವಾಗಿ ಸೇರಿಸಿ ಕೊಂಡು ತಾವು ಮಾಯಕ ಮಾಡಿದ ಎರಡು ಮಕ್ಕಳಿಗೆ ದೈವತ್ವ ನೀಡಿ ನೆಲೆ ನೀಡಿದರು ಎಂಬ ಐತಿಹ್ಯ ಎಡ ಮಂಗಲದ ಸುತ್ತಮುತ್ತ ಹರಡಿದೆ .ಇನ್ನೊಂದು ಐತಿಹ್ಯ ಪ್ರಕಾರ ಎರಡು ಮುಸ್ಲಿಂ ಮಕ್ಕಳು ಕೋಟಿ ಚೆನ್ನಯರ ನೇಮವನ್ನು ನೋಡುತ್ತಾರೆ .ಅದರಲ್ಲಿ ದರ್ಶನ ಪಾತ್ರಿಗಳು ಹೊಟ್ಟೆಗೆ ಸುರಿಯ ಹಾಕಿಕೊಳ್ಳುವುದನ್ನು ನೋಡುತ್ತಾರೆ , ಮನೆಗೆ ಹೋಗಿ ಅದೇ ರೀತಿ ಸುರಿಯ ಹಾಕಿಕೊಂಡು ದುರಂತವನ್ನಪ್ಪುತ್ತಾರೆ . ಹೀಗೆ ದುರಂತವನ್ನಪ್ಪಿದ ಮುಸ್ಲಿಂ ಮಕ್ಕಳು ಕೋಟಿ ಚೆನ್ನಯರ ಸೇರಿಗೆಗೆ ಸಂದು ಹೋಗಿ ಮುಸ್ಲಿಮರ ಮಕ್ಕಳು ಎಂಬ ಹೆಸ ನಲ್ಲಿ ಆರಾಧಿಸಲ್ಪಡುತ್ತಾರೆ ಎಂಬ ಐತಿಹ್ಯವೂ ಪ್ರಚಲಿತವಿದೆ. ಇವರಿಗೆ ಸಮೂಹ ಭೂತಾರಾಧನೆಯಲ್ಲಿ ಕೇವಲ ಹೆಸರು ಹೇಳಿ ಮುಖ್ಯ ಭೂತದ ವೇಷ ಭೂಷಣದಲ್ಲಿಯೇ ಸಾಂಕೇತಿಕವಾಗಿ ಕೋಲ ನೀಡಿ ಆರಾಧಿಸುತ್ತಾರೆ

೭  . ಬಬ್ಬರ್ಯ   .ಈತ ತುಳುನಾಡಿನ ಅತ್ಯಂತ ಕಾರಣಿಕದ ಪ್ರಸಿದ್ಧ ಭೂತ. ಈ ಬಗ್ಗೆ ಪ್ರತ್ಯೇಕ ಲೇಖನ ಇದೆ

 

ಭೂತಗಳ ಅದ್ಭುತ ಜಗತ್ತು


ಜೈನ ಮುಸ್ಲಿಂ ಬಾಂಧವ್ಯ ಬೆಸೆದ ಬಬ್ಬರ್ಯ ಭೂತ-ಡಾ.ಲಕ್ಷ್ಮೀ ಜಿ ಪ್ರಸಾದ                       

ತುಳು ನಾಡಿನ ಪ್ರಸಿದ್ಧ ಭೂತ ಬಬ್ಬರ್ಯ ಮೂಲತ ಮುಸ್ಲಿಂ ಮೂಲದ ದೈವತ .ಈತನ ತಂದೆ  ಮಾದವ ಸುಲಿಕಲ್ಲ ಬ್ಯಾರಿ ಸಮುದ್ರ ತೀರದಲ್ಲಿ ಉಪ್ಪು ಮೆಣಸಿನ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದ ಈತನ ತಾಯಿ ಜೈನರ ಹುಡುಗಿ

 ಮುಹಮ್ಮದ್ >ಮೊಮ್ಮದ್ >ಮಾದವ ಆಗಿರಬೇಕೆಂದು ಡಾ.ಅಮೃತ ಸೋಮೇಶ್ವರರು ಅಭಿಪ್ರಾಯ ಪಟ್ಟಿದ್ದಾರೆ


  .ಒಂದು ದಿನ ಕಡಲು ಉಕ್ಕ್ಕಿ ಮಾದವ ಸುಲಿಕಾಲ ಬ್ಯಾರಿಯ   ಅಂಗಡಿ ಮುಗ್ಗಟ್ಟು ಎಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತದೆ .ಆಗ ಅವನು ತಲೆಯಲ್ಲಿ ಮೆಣಸು ಬೆಲ್ಲ ಕಟ್ಟು ಹೊತ್ತುಕೊಂಡು ಊರೂರು ತಿರುಗುತ್ತ ವ್ಯಾಪಾರ ಮಾಡುತ್ತಾ ಇದ್ದ .

ಹೀಗೆ ವ್ಯಾಪಾರ ಮಾಡುತ್ತಾ ಮಲಯ ದೇಶಕ್ಕೆ ಬರುತ್ತ್ತಾನೆ ಅಲ್ಲಿ ಮುತ್ತು ಸೆಟ್ಟಿ ,ರತನ್ ಸೆಟ್ಟಿ ಮೊದಲಾದ ಏಳು ಜನ ಜೈನ ಸಹೋದರರು ಇದ್ದರು .ಆ  ಜೈನ ಮಡಸ್ತಾನದ ಏಳು ಜನ ಅಣ್ಣಂದಿರಿಗೆ ಒಬ್ಬಳು ತಂಗಿ. ಅವಳನ್ನು ಮದುವೆಯಾದವರೆಲ್ಲ ಅದೇ ರಾತ್ರಿ ಸಾಯುತ್ತಾರೆ. ಇರುವ ಒಬ್ಬ ತಂಗಿಯ ಬದುಕು ಹೀಗಾಯ್ತಲ್ಲ? ಎಂಬ ಚಿಂತೆಯಲ್ಲಿರುವಾಗ ವ್ಯಾಪಾರಕ್ಕೆಂದು ಬಂದ  ಈ ಮುಸ್ಲಿಂ ಹುಡುಗ ಸುಲಿಕಲ್ಲ ಮಾಧವ ಬ್ಯಾರಿ ಇವರ ದುಃಖದ ಕಾರಣವನ್ನು ಕೇಳುತ್ತಾನೆ. “ನಮ್ಮ ತಂಗಿಯನ್ನು ಮದುವೆಯಾದವರಿಗೆ ಅರ್ಧರಾಜ್ಯ ಕೊಡುತ್ತೇವೆ” ಎಂದು ಅಣ್ಣಂದಿರು ಹೇಳುತ್ತಾರೆ.


ಮಾಧವ ಬ್ಯಾರಿ ನಾನು ಪ್ರಯತ್ನ ಮಾಡುತ್ತೇನೆ ಎಂದ. ಒಂದು ದೊಡ್ಡ ಮನುಷ್ಯರೂಪವನ್ನು ಅಕ್ಕಿಯಲ್ಲಿ ಕಡೆದು ಮಾಡುತ್ತಾರೆ. ಆ ಅಕ್ಕಿಯ ಮನುಷ್ಯ ರೂಪವನ್ನು ರಾತ್ರಿ ಮಲಗುವಾಗ ಅವಳ ಜೊತೆಯಲ್ಲಿ ಮಲಗಿಸಿದರು. ಮಧ್ಯರಾತ್ರಿಯ ಹೊತ್ತು ಅವಳ ಮೂಗಿನಿಂದ ಎರಡು ಸರ್ಪಗಳು ಹೊರಬಂದು ಮಲಗಿದ್ದ ಬೊಂಬೆಯನ್ನು ಕಚ್ಚುತ್ತವೆ. ಆಗ ಬದಿಯಲ್ಲೇ ಅಡಗಿ ನಿಂತಿದ್ದ ಬ್ಯಾರಿ ತನ್ನ ಕತ್ತಿಯಿಂದ ಸರ್ಪಗಳನ್ನು ತುಂಡರಿಸುತ್ತಾನೆ. ಮೊದಲು ಕೊಟ್ಟ ಮಾತಿನಂತೆ ಅವನಿಗೆ ಅರ್ಧ ರಾಜ್ಯ ಹಾಗೂ ತಂಗಿಯನ್ನು ಕೊಡುತ್ತಾರೆ. (C).ಡಾ.ಲಕ್ಷ್ಮೀ ಜಿ ಪ್ರಸಾದ


ಆದರೆ ಆತ ಮದುವೆಗೆ ಒಪ್ಪುವುದಿಲ್ಲ. ಅವಳು ಚಂದ್ರನಾಥ ದೇವರ ಕೆರೆಗೆ ಸ್ನಾನಕ್ಕೆ ಹೋಗುತ್ತಾಳೆ. ಕೆರೆಯಿಂದ ಮೇಲೆ ಬರುವಾಗ ಮಾಯದ ಬಸಿರನ್ನು ಪಡೆಯುತ್ತಾಳೆ. ಬಬ್ಬರ್ಯನನ್ನು ಹೆರುತ್ತಾಳೆ. ಅವನಿಗೆ ಮಸೀದಿಯಲ್ಲಿ ಬಪ್ಪ ಎಂದು ಹೆಸರಿಡುತ್ತಾರೆ  ಆಗ ಜೈನರಿಗೂ ಮುಸ್ಲಿಮರಿಗೂ ವಿವಾದ ಉಂಟಾಗಿ ಅವರು ಊರು ಬಿಟ್ಟು ಹೋಗುವ ಕಾಲ ಬರುತ್ತದೆ. “ಅಮಾವಾಸ್ಯೆಯ ದಿನ ಚಂದ್ರನನ್ನು ಕಂಡರೆ ಊರು ಬಿಟ್ಟು ಹೋಗುತ್ತೇವೆ ಎಂದು ಜೈನರು ಹೇಳುತ್ತಾರೆ. ನಾವು ಚಂದ್ರನನ್ನು ಕಂಡರೆ ಚಂದ್ರನನ್ನು ನಂಬುತ್ತೇವೆ ಎನ್ನುತ್ತಾರೆ ಮುಸ್ಲಿಮರು. ಚಂದ್ರ ಕಾಣಿಸಿದ್ದರಿಂದ ಜೈನರು ಚಂದ್ರನನ್ನು ತುಳಿದು ಊರುಬಿಟ್ಟು ಹೋಗುತ್ತಾರೆ. ಮುಸ್ಲಿಮರು ಚಂದ್ರನನ್ನು ನಂಬಿದರು.


 “ಬಬ್ಬರ್ಯ ನೀನು ಏನು ಮಾಡುತ್ತಿ? ಎಂದು ಕೇಳಿದಾಗ ಬಬ್ಬರ್ಯ ‘ನೀವು ಮುಂದಿನಿಂದ ಹೋಗಿ, ನಾನು ಹಿಂದಿನಿಂದ ಬರುತ್ತೇನೆ ಎಂದು ಹೇಳುತ್ತಾನೆ. ದೇವರ ವರ ಪಡೆದು ಬರುತ್ತೇನೆ ಎಂದು ಹೇಳುತ್ತಾನೆ. ಮುಂದೆ ಹಡಗು ಕಟ್ಟಿಸಿ ಸಮುದ್ರಕ್ಕೆ ಇಳಿಸಿ ದುರಂತವನ್ನಪ್ಪುತ್ತಾನೆ

 ಬಬ್ಬರ್ಯ ಭೂತದ ಪಾಡ್ದನದ ಇನ್ನೊಂದು ಪಾಠದ ಪ್ರಕಾರ ಆ ಹುಡುಗಿಯನ್ನು ಮದುವೆಯಾಗಿ ಮಸೀದಿಗೆ ಕರೆ ತಂದು ಬೊಲ್ಯ ಬೀಬಿ ಫಾತಿಮಾ ಎಂದು ಹೆಸರಿಸುತ್ತಾನೆ .ನಂತರ ಅವಳು ಗರ್ಭ ಧರಿಸುತ್ತಾಳೆ .ಒಂಬತ್ತು ತಿಂಗಳಾಗುವಾಗ  ಆ ಮಗು ಬಂಗಾರದ ದುಂಬಿಯಾಗಿ ತಾಯಿಯ ಬಲದ ಮೊಲೆಯನ್ನು ಒಡೆದು ಹೊರ ಬರುತ್ತಾನೆ .


ಅಂತು ಅವಳು ಹೇಗೋ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ  ಮುಂದೆ.ಸಾಹಸಿಯಾದ ಆ ಹುಡುಗ ಬಪ್ಪ ತನ್ನ ಓರಗೆ ಹುಡುಗರನ್ನು ಆಟದಲ್ಲಿ ಸೋಲಿಸುತ್ತಾನೆ .ಆಗ ಸೋತ ಹುಡುಗರು ಹಾದರಕ್ಕೆ “ಹುಟ್ಟಿದ ಮಗು ಒಳ್ಳೆಯದು ತುಳುವ ಹಲಸಿನ ಹಣ್ಣಿನ ಬೀಜ ಒಳ್ಳೆಯದು “ಎಂದು ಇವನನ್ನು ಗೇಲಿ ಮಾಡಿ ನಗುತ್ತಾರೆ

ಆಗ ಅಲ್ಲಿಂದ ಬಂದು ಅವನು ಒಂದು ಕೋಟೆ ಕಟ್ಟಿ ಅದನ್ನು ಮಾಯ ಮಾಡುತ್ತಾನೆ. . ಬಬ್ಬರ್ಯ  ವ್ಯಾಪಾರ ಮಾಡುವ ಮತ್ತು ಹಡಗು ಕಟ್ಟಿಸುವ ವಿಚಾರ ಪಾಡ್ದನದಲ್ಲಿದೆ.

                “ನನ ಇಂಚ ಕುಲ್ಲುಂಡ ಜೈತ್ ಬರಾಂದ್

                ಅಂಗಾಡಿ ದಿಡೋಡು ಯಾಪಾರ ಮಲ್ಪೊಡುಂದೆ

                ಕಡಲ ಬರಿಟ್ ಮಡಲ್‍ದ ಅಂಗಾಡಿ ಕಟ್ಯೆ

                ಯಾಪಾರ ಮಲ್ತೊಂಡೆ

                ಪಣವು ಎಚ್ಚೊಂಡು ಬತ್ತ್‍ಂಡ್‍ಯೆ

                ಅಪಗಾಂಡ ಪಣ್ಪೆ ಬಬ್ಬರಿಯೆ

                ಎಂಕ್ ಪಡಾವುದ ಬೇಲೆ ಪತ್ತೊಡು

                ಪಡಾವುದ ಯಾಪಾರ ಮಲ್ಪೊಡು”

ಕನ್ನಡ ರೂಪ :

                ಇನ್ನು ಹೀಗೆ ಕುಳಿತರ ಏನೂ ಬರದು

                ಅಂಗಡಿ ಇಡಬೇಕು ವ್ಯಾಪಾರ ಮಾಡಬೇಕೆಂದ

                ಕಡಲಿನ ಬದಿಯಲ್ಲಿ ತೆಂಗಿನ ಗರಿಯಿಂದ ಅಂಗಡಿ ಕಟ್ಟಿದ

         ವ್ಯಾಪಾರ ಮಾಡಿದ

       ದುಡ್ಡು ತುಂಬಿಕೊಂಡು ಬಂದಿತು

       ನನಗೆ ಹಡಗಿನ ಕೆಲಸ ಹಿಡಿಯಬೇಕು

        ಹಡಗಿನ ವ್ಯಾಪಾರ ಮಾಡಬೇಕುಅಲ್ಲಿಂದ ಮಲಯ ದೇಶಕ್ಕೆ ಬರುತ್ತಾನೆ ಅಲ್ಲಿ ಒಂದು ಬಿಳಿಯ ಬಣ್ಣದ ಶಾಂತಿ ಮರ ಕಾಣಿಸುತ್ತದೆ ಅದನ್ನು ನೋಡಿ ಇದರಿಂದ ಹಡಗು ಕಟ್ಟಿಸಬೇಕೆಂದು ಕೊಳ್ಳು ತ್ತಾನೆ  ಅದಕಾಗಿ ಆಚಾರಿಗಳನ್ನು ಕರೆಸುತ್ತಾನೆ

     “ಆ ವೊಂಜಿ ಮರನು ಕಡ್ಪೊಡಾಂಡೆ

                ಮರೊನು ಕಡ್ಪೆರೆ ಮಲೆನಾಡ್ ತಚ್ಚವೆ

                ತುಳುನಾಡ ಆಚಾರ್ಲೆನು ಲೆಪ್ಪುಡಾಯೆರ್

                ಮರತ್ತಡೆ ಪೋದು ತೂಪೆರ್ ಆಚಾರಿಳ್

                ನೆಲಪೂಜಿಯೆರ್ ದೇಬೆರೆಗ್ ದಿಡ್ಯೆರ್

                ಆನೆ ಬಾರಸದ ಗಡಿ ಪಾಡ್ಯೆರ್”79

                ಆ ಒಂದು ಮರವನ್ನು ಕಡಿಯಬೇಕೆಂದ

                ಮರವನ್ನು ಕಡಿಯಲು ಮಲೆನಾಡ ತಚ್ಚವೆ

                ತುಳುನಾಡ ಆಚಾರಿಗಳನ್ನು ಕರೆಸಿದರು

                ಮರದ ಹತ್ತಿರಕ್ಕೆ ಹೋಗಿ ನೋಡುತ್ತಾರೆ ಬಡಗಿಗಳು

                ಆನೆ ಗಾತ್ರದ ಗಾಯ ಮಾಡುತ್ತಾರೆ

ನಂತರ ಬಡಗಿಗಳು ಹಡಗನ್ನು ನಿರ್ಮಿಸಿದರು ಎಂದು ಪಾಡ್ದನದಲ್ಲಿ ಹೇಳಿದೆ. ಕೆಲವೆಡೆ ಹಡಗು ತಯಾರಿಯ ಮರ ಕಡಿಯಲು ಮರಕಾಲರನ್ನು ಬರಹೇಳಿದರೆಂದು ಹೇಳಿದೆ. ಮುಗೇರರು, ಮರಕಾಲರು ಹಾಗೂ ಮೊಗವೀರರು ಒಂದೇ ವರ್ಗದವರು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ


     ಇನ್ನೊಂದು ಪಾದ್ದನದಲ್ಲಿ      ‘ತ್ರೇತಾಯುಗದ ರಾಮದೇವರ ಕಿರೀಟ, ಕೃಷ್ಣನ ಚಕ್ರ, ಜಗದೀಶ್ವರನ ತ್ರಿಶೂಲ, ದೇವೇಂದ್ರನ ವಜ್ರಾಯುಧ ಹಿಡಿದುಕೊಂಡು ಮಾಯಕದ ಹಡಗನ್ನು ಬ್ರಹ್ಮರು ನಿರ್ಮಾಣ ಮಾಡಿದರು ಎಂದು ಹೇಳಿದೆ

  ಆ ಹಡಗು ನೀರಿಗಿಳಿಯುವ ಮುನ್ನ  ಬಪ್ಪ ತನ್ನ ತಂದೆತಾಯಿರನ್ನು ಕಂಡು “ಇಂದಿನ ತನಕ ನಾನು ಜೋಗದಲ್ಲಿ ನಿಮ್ಮ ಮಗನಾಗಿದ್ದೆ .ಇಂದು ಜೋಗ ಬಿಟ್ಟು ಮಾಯಕಕ್ಕೆ ಸಂದು  ಬಿಡುತ್ತೇನೆ ಎಂದು ಹೇಳುತ್ತಾನೆ. ಆ ಹಡಗಿನಲ್ಲಿ ಕುಳಿತು ಮೂಳೂರ ಕರಿಯಕ್ಕೆ ಬರುವಾಗ ಬಿರುಗಾಳಿ ಏಳುತ್ತದೆ. ಹಡಗಿನಲ್ಲಿದ್ದ ಹಾಯಿ ಹರಿಯುತ್ತದೆ. ಕೊಂಬು ತುಂಡಾಗುತ್ತದೆ. ಹಡಗು ಬದಿಗೆ ಬರುವಾಗ ಮುಳೂರಿನ ಮುನ್ನೂರು ಜನ, ಕಾಪುವಿನ ಸಾವಿರ ಜನ ಕೂಡಿ ಹತ್ತಿರ ಹೋಗುವಾಗ, ಕಣ್ಣಿಗೆ ಕಂಡರೂ ಕೈಗೆ ಸಿಗುವುದಿಲ್ಲ. ಬಬ್ಬರ್ಯ ಹಡಗನ್ನು ಪಡುಗಂಗೆಗೆ ಕಳುಹಿಸುತ್ತಾನೆ. ಮಾಯದಲ್ಲಿ ಬಂದು ಮೂಳೂರು ಉಳ್ಳಂಗಾಯ ಕಟ್ಟೆಯಲ್ಲಿ ಜೋಗದಲ್ಲಿ ಆಗುತ್ತಾನೆ. ಸೊಲ್ಮೆ ಸಂದಾಯ ಮಾಡುತ್ತಾನೆ. ನೀನು ಯಾರಿಗೆ ಸೊಲ್ಮೆ ಸಂದಾಯ ಮಾಡುವುದು ಎಂದು ಕೇಳಲು ನನ್ನನ್ನು ಬಿಟ್ಟು ಉಳ್ಳಾಯ ರಾಯಭಾರಿ ಇದ್ದಾನೆ. ಅವನಿಗೆ ನಾನು ರಾಜ್ಯಭಾರಿ ನಾನು ನಿಮ್ಮನ್ನು ಅನುಗ್ರಹ ಮಾಡಲು ಬಂದ ಶಕ್ತಿ ಎನ್ನುತ್ತಾನೆ. ಪೊಂಗ ಬೈದ್ಯನಿಗೆ ಅಭಯ ಕೊಟ್ಟು ಒಂದು ತೊಟ್ಟು ಕಳ್ಳು ಬೀಳುವಲ್ಲಿ ಸಾವಿರ ತೊಟ್ಟು ಬೀಳುವ ಹಾಗೆ ಮಾಡುತ್ತಾನೆ.


 ಈ ಗುಟ್ಟನ್ನು ಅವನು ಅವನ ಹೆಂಡತಿಗೆ ಹೇಳಿದ ನಂತರ ಒಂದು ತೊಟ್ಟು ಕೂಡ ಬೀಳುವುದಿಲ್ಲ. ಕೊನೆಗೆ ಪೊಂಗ ಬೈದ್ಯನನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಅವನ ಹೆಂಡತಿ ಮೂಳೂರಿನ ಮುನ್ನೂರು ಒಕ್ಕಲು, ಕಾಪುವಿನ ಸಾವಿರ ಒಕ್ಕಲು ಕೂಡಿಸಿ ದೇವರಾದರೆ ದೇವಸ್ಥಾನ, ಬ್ರಹ್ಮರಾದರೆ ಬ್ರಹ್ಮಸ್ಥಾನ, ಭೂತಗಳಾದರೆ, ಭೂತಸ್ಥಾನ ಕಟ್ಟಿಸುತ್ತೇನೆ. ನನ್ನ ಗಂಡನನ್ನು ಉಳಿಸಿಕೊಡಬೇಕು ಎಂದು ಪ್ರಾರ್ಥನೆ ಮಾಡುತ್ತಾಳೆ. ಆಗ ಪೊಂಗ ಬೈದ್ಯ ನೀರಿನಿಂದ ಎದ್ದು ಬರುತ್ತಾನೆ. ಪ್ರಾರ್ಥನೆ ಪ್ರಕಾರ ಬ್ರಹ್ಮಗುಂಡ ಮತ್ತು ಕೊಂಬಿನ ಮರ ಸ್ಥಾಪನೆ ಮಾಡುತ್ತಾರೆ.


ಊರಿನ ಜನ ಸೇರಿ ಧ್ವಜಸ್ತಂಭ ಮಾಡಿಸುತ್ತಾರೆ. ಆಗ ಬಬ್ಬರ್ಯ ಜೋಗ ಬರುತ್ತಾನೆ. ನಾನು ದೇವರಾಗಿ ನಿಮಗೆ ಅನುಗ್ರಹ ಮಾಡುತ್ತೇನೆ ಎನ್ನುತ್ತಾನೆ. ನಾಗಬ್ರಹ್ಮ ಉಳ್ಳಾಯ ಬಬ್ಬರ್ಯ ನಾನು. ಅಂಕೋಲಕ್ಕೆ ಹೋಗಿ ಲಿಂಗರೂಪದಿಂದ ಮೂಡಿ ಬರುತ್ತೇನೆ. ಅಲ್ಲಿ ಆದಿನಾಥ ಎಂದು ಕರೆಸಿಕೊಂಡು ನೀಲೇಶ್ವರಕ್ಕೆ ಹೋಗಿ ನೀಲಕಂಠನೆಂದು ಕರೆಸಿಕೊಂಡಿದ್ದೇನೆ” ಎಂದು ಹೇಳುತ್ತಾನೆ.

ಜೈನರಿಗೆ ಬಬ್ಬರ್ಯ ಮನೆದೈವ. ಕರಾವಳಿಯಲ್ಲಿ ಬಬ್ಬರ್ಯ ಕುಲದೈವ. ಬಬ್ಬರ್ಯ ಬೆರ್ಮರಂತೆ ಸಸ್ಯಾಹಾರಿ. ಮಾಂಸಾಹಾರ ಇಲ್ಲ. ಹಾಲು ಮತ್ತು ಸೀಯಾಳ ಆತನ ಆಹಾರ. ದೇವಸ್ಥಾನದಲ್ಲಿ ಬಬ್ಬರ್ಯ ಕ್ಷೇತ್ರಪಾಲನೆಂದು ಪಾಡ್ದನ ತಿಳಿಸುತ್ತದೆ. ಇಲ್ಲಿ ಬಬ್ಬರ್ಯ ಮತ್ತು ಬೆರ್ಮರ್ ಒಬ್ಬನೇ ಎಂಬಂತೆ ವರ್ಣಿಸಲಾಗಿದೆ.

ವಾಸ್ತವದಲ್ಲಿ ಆತ  ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಹಡಗು ಮುರಿದು ದುರಂತಕ್ಕೀದಾಗಿರ ಬಹುದು ಅಥವಾ ಕಡಲು ಗಳ್ಳರ ದಾಳಿಗೆ ಸಿಲುಕಿ ದುರಂತವನ್ನಪ್ಪಿರಬಹುದು .ದುರನತವನ್ನಪ್ಪಿದ ಅಸಾಮಾನ್ಯ ಶೂರರು ಭೂತಗಳಾಗಿ ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾದ ವಿಚಾರವಾಗಿದೆ .ಅಂತೆಯೇ ಬಪ್ಪ ಬ್ಯಾರಿ  ಬಬ್ಬರಿ ಭೂತ ವಾಗಿ ಆರಾಧಿಸಲ್ಪಟ್ಟಿರ ಬಹುದು (C).ಡಾ.ಲಕ್ಷ್ಮೀ ಜಿ ಪ್ರಸಾದಈತನನ್ನು ಎಲ್ಯ ಬಬ್ಬರ್ಯ, ಮಲ್ಲ ಬಬ್ಬರ್ಯ ,ಬಾಕಿಲು ಬಬ್ಬರ್ಯ ಇತ್ಯಾದಿ ಹೆಸರಿನಿಂದ ಕೋಲ ನೀಡಿ ಆರಾಧಿಸುತ್ತಾರೆ ಬಬ್ಬರ್ಯ ಮುಸ್ಲಿಂ ಮೂಲವನ್ನು ಹೊಂದಿದ್ದರೂ ಆತನ ಆರಾಧನೆಯಲ್ಲಿ ಮಾಂಸಾಹಾರ ನಿಷಿದ್ಧ . ಬಬ್ಬರ್ಯನಿಗೆ ಸಪ್ಪೆ ಹಾಗು ಬೆಲ್ಲದ ಕಡುಬನ್ನು ಆಹಾರವಾಗಿ ನೀಡುತ್ತಾರೆ .ಬಹುಶ ಆತನ ತಾಯಿ ಜೈನ ಸ್ತ್ರೀಯಾಗಿದ್ದರಿಂದ ಬಪ್ಪ ಕೂಡ ಜೈನರಂತೆ ಸಸ್ಯಾಹಾರಿಯಾಗಿದ್ದಿರ ಬಹುದು. ಅಥವಾ ಈತನ ಆರಾಧನೆಯನ್ನು ಆತನ ತಾಯಿಯ ಕಡೆಯವರು ಆರಂಭಿಸಿರಬಹುದು .ತುಳುನಾಡಿನಲ್ಲಿ ಭೂತಾರಾಧನೆಯ ಬೆಳವಣಿಗೆಯಲ್ಲಿ ಜೈನರ ಪ್ರೋತ್ಸಾಹ ಗಣನೀಯವಾದದ್ದು ಎಂಬುದನ್ನು ಗಮನಿಸಿದರೆ ಈ ಊಹೆಗೆ ಬಲ ಸಿಗುತ್ತದೆ . ಏನೇ ಆದರು ಬಬ್ಬರ್ಯನ ಆರಾಧನೆ ಜೈನರನ್ನು ಮತ್ತು ಮುಸ್ಲಿಮರನ್ನು ಬೆಸೆದು ಸಾಮರಸ್ಯಕ್ಕೆ ಭದ್ರ ಬುನಾದಿ ಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ

ಆಧಾರ ಗ್ರಂಥಗಳು

1 ಡಾ.ಅಮೃತ ಸೋಮೇಶ್ವರ –ತುಳು ಪಾಡ್ದನ ಸಂಪುಟ

2 ಡಾ.ಚಿನ್ನಪ್ಪ ಗೌಡ –ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ

3 ಡಾ.ಬಿ ಎ ವಿವೇಕ ರೈ-ತುಳು ಜನಪದ ಸಾಹಿತ್ಯ

4 ಡಾ.ಲಕ್ಷ್ಮೀ ಜಿ ಪ್ರಸಾದ –ಭೂತಗಳ ಅದ್ಭುತ ಜಗತ್ತು
 ಡಾ.ಲಕ್ಷ್ಮೀ ಜಿ ಪ್ರಸಾದ

ಕನ್ನಡ ಉಪನ್ಯಾಸಕರು

laxmi prasad at 09:39ABOUT ME ಡಾ.ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ,ನೆಲಮಂಗಲ