Thursday 12 October 2017

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 413 ಗಿಳಿರಾಮ © ಡಾ.ಲಕ್ಷ್ಮೀ ಜಿ ಪ್ರಸಾದ


                                                    ಚಿತ್ರ ಕೃಪೆ Tuluva Bunter

ತುಳುನಾಡಿನ ಹೆಚ್ಚಿನ ದೈವಗಳು ಈ ಹಿಂದೆ ಇದ್ದವರು.ಇವರಲ್ಲಿ ಅನೇಕರು ಸಾಮಾನ್ಯರಂತೆ ಹುಟ್ಟಿ ಅಸಾಮಾನ್ಯ ಸಾಹಸ‌ಮೆರೆದು ದುರಂತವನ್ನಪ್ಪಿ ದೈವತ್ವ ಪಡೆದಿದ್ದಾರೆ.
ಅಂತೆಯೇ ಗಿಳಿರಾಮ  ಎಂಬ ದೈವ ಕೂಡಾ ಮೂಲತಃ ಗಿಳಿರಾಮ ಸೆಟ್ಟಿ  ಎಂಬ ಹೆಸರಿನ ವ್ಯಕ್ತಿ. ಈತನ ತಂದೆಯ ಹೆಸರು ರಾಮಸೆಟ್ಟಿ,ತಾಯಿಯ ಹೆಸರು ರಾಮಲಕ್ಕ .
ಚಿಕ್ಕಂದಿನಲ್ಲಿ ಗಿಳಿರಾಮ ಸೆಟ್ಟಿಯನ್ನು ತಂದೆ ತಾಯಿ ಬಹಳ ಮುದ್ದಿನಿಂದ ಸಾಕಿದರು.ಎಳೆಯದರಲ್ಲಿಯೇ ಈತ ಪರಾಕ್ರಮಿಯಾಗಿದ್ದ.ಜೊತೆಗೆ ಬುದ್ದಿವಂತನೂ ಆಗಿದ್ದು ಓದು ಬರಹಗಳನ್ನು ಕಲಿತನು.
ಸ್ವಲ್ಪ ದೊಡ್ಡವನಾದಾಗ ತನ್ನ ಓರಗೆಯ ಮಕ್ಕಳೊಂದಿಗೆ ದನ ಮೇಯಿಸಲು ಹೋಗುತ್ತಾನೆ.ಅಲ್ಲಿ ಮಕ್ಕಳ ಜೊತೆ ಚೆಂಡಿನ ಆಟಕ್ಕೆ ಹೊರಟಾಗ ಮಕ್ಕಳು ಇವನನ್ನು ಸೇರಿಕೊಳ್ಳುವುದಿಲ್ಲ.
ಹೀಗೆ ಅವಮಾನಿತನಾದ ಅವನು ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿದನು.ಹಾಗಾಗಿ ಅಲ್ಲಿಂದ ಹೊರಟು ಬಂದು ತಾಳೆ ಮರದಿಂದ ಬಿಲ್ಲು ಬಾಣ ತಯಾರಿಸಿದನು.ಅದನ್ನು ಹಿಡಿದುಕೊಂಡು ದನ ಕಾಯುವ ಹುಡುಗರ ಬಳಿಗೆ ಹೋಗಿ ಅವರನ್ನು ಹೊಡೆದೋಡಿಸುತ್ತಾನೆ.ನಂತರ ಎರಡು ಕಡವೆಗಳನ್ನು ಬೇಟೆಯಾಡುತ್ತಾನೆ.ಅಂದು‌ ಮಹಾನವಮಿ.
 ನಂತರ ಜೋಗ ಬಿಟ್ಟು ಮಾಯಕಕ್ಕೆ ಸಂದು ಗಿಳಿರಾಮ ದೈವವಾಗಿ ನೆಲೆ ನಿಲ್ಲುತ್ತಾನೆ.

ಮಾಯಕ,ಮಾಯವಾದ ಎಂಬಲ್ಲಿ ದುರಂತದ ಸುಚನೆ ಇದೆ.ಬಹುಶಃ ಆತ ಮಕ್ಕಳೊಂದಿಗೆ ಹೊಡೆದಾಡುವಾಗ ದುರಂತವನ್ನಪ್ಪಿರಬೇಕು.ದುರಂತ ಮತ್ತು ದೈವತ್ವ ತುಳು ಸಂಸ್ಕೃತಿ ಯಲ್ಲಿ ಅಲ್ಲಲ್ಲಿ ಕಾಣಬರುತ್ತವೆ ಅಂತೆಯೇ ಗಿಳಿರಾಮ ಕೂಡ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ.
ದನಕಾಯುವ ಹುಡುಗರೊಡನೆ ಹೋರಾಟವಾಗುವ ಕಥಾನಕಗಳು ಅನೇಕ ಪಾಡ್ದನಗಳಲ್ಲಿ ಕಂಡುಬರುತ್ತದೆ.ಇದು ವಾಸ್ತವದಲ್ಲಿ ನಡೆದ ಯುದ್ಧದ ಸಂಕೇತ.ಜನಪದರು ಯುದ್ಧವನ್ನು ಈ ರೀತಿಯಾಗಿ ಕಲ್ಪಿಸಿರಬಹುದು.  ಗಿಳಿರಾಮ ಯುದ್ಧವೀರನಾಗಿರಬೇಕು.ಈತನ ವೇಷಭೂಷಣ ಈತನೊಬ್ಬ ವೀರ ಎಂಬುದನ್ನು ಸೂಚಿಸುತ್ತದೆ.ವೀರಾರಾಧನೆ ಎಲ್ಲೆಡೆ ಪ್ರಚಲಿತವಿರುವ ವಿದ್ಯಮಾನವೇ ಆಗಿದೆ.
ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ : ದೈವಾರಾಧನೆ ಜಿಜ್ಞಾಸೆಗಳು- ಡಾ.ಬನ್ನಂಜೆ ಬಾಬು ಅಮೀನ್
ಚಿತ್ರ ಕೃಪೆ Tuluva Bunter 

No comments:

Post a Comment