Friday 26 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ


ಕಳೆದ ಒಂದು ವಾರದಿಂದ ಒಂದು ಮುಸ್ಲಿಂ ಸ್ವರೂಪದ ದೈವ ಇಬ್ಬರು ಮುಸ್ಲಿಂ ರೀತಿಯ ವೇಷ ಧರಿಸಿದ ಪಾತ್ರಿಗಳ ಜೊತೆ ಕೋಲಾಟವಾಡುವ ವೀಡಿಯೋ ಹರಿದಾಡುತ್ತಾ ಇತ್ತು.ಅನೇಕರು ಅದನ್ನು ಕಳಹಿಸಿ ಈ ದೈವ ಯಾವುದೆಂದು ಕೇಳಿದ್ದರು. ಆಲಿ ಭೂತ ,ಯೋಗ್ಯೆರ್ ನಂಬೆಡಿ ,ಮುಕ್ರಿ ಪೋಕ್ಕರ್,ಬಪ್ಪುರಿಯನ್  ಸೇರಿದಂತೆ ಅನೇಕ ಮುಸ್ಲಿಂ ತೆಯ್ಯಂ ಗಳಿಗೆ ಆರಾಧನೆ ಇರುವುದು ನನಗೆ ತಿಳಿದಿತ್ತಾದರೂ ಈ ತೆಯ್ಯಂ ಯಾರೆಂದು ಗುರುತಿಸಲು ಆಗಿರಲಿಲ್ಲ.ಕೆಲವರು ಅದನ್ನು ಆಲಿ ಭೂತ ಎಂದು ತಪ್ಪಾಗಿ ಗುರುತಿಸಿದ್ದು ತಿಳಿದು ಅದು ಆಲಿ ಭೂತವಲ್ಲ ಎಂದು ತಿಳಿಸಿದ್ದೆ.ಅದು ಮುಕ್ರಿ ಪೋಕ್ಕೆರ್ ದೈವ ಇರಬಹುದು ಎಂದು ಹೇಳಿದ್ದೆ.ವಾಟ್ಸಪ್ ಗ್ರೂಪೊಂದರಲ್ಲಿ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಳ್ಳೆ ದೈವ ಎಂದು ಗುರುತಿಸಿದ್ದರು‌.ಹಾಗಾಗಿ ನಾನು ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕುಂಞಿರಾಮನ್ ಸೇರಿದಂತೆ ಅನೇಕ ಹಿರಿಯರನ್ನು ಸಂಪರ್ಕಿಸಿದೆ‌.ಅದರ ಮಾಹಿತಿ ನೀಡಿದ ಕುಂಞಿರಾಮನ್ ಅವರು ಕಲಂದನ್ ಮುಕ್ರಿ ಎಂಬ ಹೆಸರಿನ ಮುಸ್ಲಿಂ ಮೂಲದ ದೈವಕ್ಕೆ ಆರಾಧನೆ ಇರುವ ಬಗ್ಗೆ ತಿಳಿಸಿದರು.
ಮಾಪ್ಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಹುಡುಕುತ್ತಿರುವುದನ್ನು ತಿಳಿದ ಸ್ನೇಹಿತರಾದ ಶ್ಯಾಮ್ ಅವರು ಒಂದು ಮಲೆಯಾಳ ಬರಹವನ್ನು ಕಳಹಿಸಿ ಅದರಲ್ಲಿ ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಇದೆ ಎಂದು ಅವರ ಸ್ನೇಹಿತರು ಹೇಳಿದ್ದನ್ನು ತಿಳಿಸಿದರು.ನನಗೆ ಮಲೆಯಾಳ ಭಾಷೆ ಅರ್ಥವಾಗುವುದಾದರೂ ಓದಲು ತಿಳಿದಿಲ್ಲ. ಹಾಗಾಗಿ ನಾನು ಅದನ್ನು ಗೂಗಲ್ ಟ್ರಾನ್ಸಲೇಶನ್ ಮೂಲಜ ಇಂಗ್ಲಿಷ್ ಗೆ ಅನುವಾದಿತ ರೂಪ ಪಡೆದೆ.ಆಗ ಅದು ಕಲಂದನ್ ಮುಕ್ರಿ ತೆಯ್ಯಂ ಬಗೆಗಿನ  ಮಲೆಯಾಳ ವಿಕಿಪೀಡಿಯ ಮಾಹಿತಿ ಎಂದು ತಿಳಿಯಿತಾದರೂ ಗೂಗಲ್ ಅನುವಾದದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಪ್ಪುಗಳು ಇದ್ದ ಕಾರಣ ಕಥಾನಕ ಪೂರ್ತಿಯಾಗಿ ಅರ್ಥ ಆಗಲಿಲ್ಲ.
ಆಗ ಅದನ್ನು  ಮಲೆಯಾಳ ಬಲ್ಲ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರಿಗೆ ಕಳಹಿಸಿ ಅನುವಾದ ಮಾಡಿ ಕೊಡಲು ಕೇಳಿದೆ.ಅವರು ಅದರ ಸಂಗ್ರಹ ಅನುವಾದ ಮಾಡಿ ನೀಡಿದರು.
ಈ ದೈವದ/ ತೆಯ್ಯಂ ನ ಸಂಕ್ಷಿಪ್ತ ಕಥಾನಕ ಹೀಗಿದೆ.
ಕಾಸರಗೋಡು ಜಿಲ್ಲೆಯ ಕಂಪಲ್ಲೂರು ಗ್ರಾಮದಲ್ಲಿ ಕಂಪಲ್ಲೂರು ಕೋಟ್ಟಯಿಲ್ ಎಂಬ ಪ್ರಾಚೀನ ತರವಾಡು ಮನೆ ಇದೆ.ಇದು ನಾಯರ್ ಸಮುದಾಯದವರ ತರವಾಡು ಆಗಿದ್ದು ಅವರಿಗೆ ಕೊಡಗಿನಿಂದ ಕಾಸರಗೋಡು ತನಕ ಹದಿನೈದು ಸಾವರ ಎಕರೆಗಳಷ್ಟು ಭೂಮಿ ಇತ್ತು.ಇಲ್ಲಿ ಬೆಳೆ ಬೆಳೆಯುತ್ತಾ ಇದ್ದರು.ಈ ತರವಾಡಿನ ರಕ್ಷಣೆಯನ್ನು ಕರಿಚಾಮುಂಡಿ ದೈವ ಮಾಡುತ್ತಾ ಇತ್ತು.
ಸೈನುದ್ದೀನ್ ಮತ್ತು ಅವರ ಕುಟುಂಬದ ಸದಸ್ಯರು ಈ  ಈ ಪ್ರದೇಶಕ್ಕೆ ಬರುತ್ತಾರೆ.ಆಗ ಈ ಕೋಟ್ಟಯಿಲ್ ತರವಾಡಿನ ನಾಯರ್‌ಗಳು ಅವರಿಗೆ ಸಹಾಯ ಮಾಡುತ್ತಾರೆ. ಅವರ ಧರ್ಮದ ಪಾಲನೆಗಾಗಿ ಒಂದು ಶೆಡ್ ಹಾಕಿ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತಾರೆ.
ಸೈನುದ್ದೀನ್ ಮತ್ತು ಅವರ ಕುಟುಂಬದವರು ಮತ್ಸ್ಯ ಬೇಟೆಗಾಗಿ ಮತ್ತು ವ್ಯಾಪಾರಕ್ಕಾಗಿ ಪುಲಿಂಗಾಟ್ ನದಿಯನ್ನು ಗೇಣಿಗೆ ಪಡೆಯುತ್ತಾರೆ.ಅವರಿಗೆ ಒಂದು ಮಸೀದಿಯನ್ನು ತರವಾಡಿನ ನಾಯರ್‌ಗಳು ಕಟ್ಟಿಸಿಕೊಡುತ್ತಾರೆ.
ಆ ಮಸೀದಿಯಲ್ಲಿ ಉರೂಸ್ ಗೆ ದಿನ ನಿಶ್ಚಯ ಮಾಡುವ ಮೊದಲೇ ಮಸೀದಿಯ ಮುಖ್ಯಸ್ಥರು ತರವಾಡು ಮನೆಗೆ ಬಂದು ದೈವದಲ್ಲಿ ಉರೂಸ್ ಹಬ್ಬದ ನೇತೃತ್ವ ( ಅಧ್ಯಕ್ಷತೆ)ವಹಿಸುವಂತೆ ಪ್ರಾರ್ಥನೆ ಮಾಡಿ ಅರಶಿನ ಗಂಧ ಪ್ರಸಾದ ಕೊಂಡೊಯ್ಯುತ್ತಾ ಇದ್ದರು.ಈಗಲೂ ಅಲ್ಲಿ ಈ ಪದ್ಧತಿ ಇದೆ.ಅವರು ತರವಾಡಿನ ರಕ್ಷಕ ದೈವ ಕರಿಚಾಮುಂಡಿ ದೈವಕ್ಕೆ ನಿಷ್ಠರಾಗಿ ಗೌರವ ತೋರುತ್ತಿದ್ದರು.ಹಾಗಾಗಿ ಅಲ್ಲಿನ ಮಸೀದಿಯ ಮುಖ್ಯಸ್ಥ ಕಲಂದನ್ ಮುಕ್ರಿಗೆ  ಕರಿ ಚಾಮುಂಡಿ ದೈವ   ಮರಣಾನಂತರ ದೈವತ್ವ ನೀಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.
ಕಲಂದನ್ ಮುಕ್ರಿ ದೈವವನ್ನು ಹಿಂದು ಪಾತ್ರಿಗಳು ಕಟ್ಟುತ್ತಾರೆ. ಒಂದು  ಬಿಳಿ‌ಲುಂಗಿಯ ಮೇಲೆ ,ಸೊಂಟಕ್ಕೆ ಕಟ್ಟಿದ ಕೆಂಪು ಶಾಲು ,ತಲೆಗೆ ಕೆಂಪು ಬಟ್ಟೆಯ ರುಮಾಲು ಹಾಗೂ ಬಿಳಿಯ ಗಡ್ಡದ  ಮಾನವ ಸಹಜವಾ ಅಲಂಕಾರ ,ವೇಷಭೂಷಣ ಈ ದೈವಕ್ಕೆ ಮಾಡುತ್ತಾರೆ.
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ಯಾಮ್, ಅನುವಾದ ಮಾಡಿದ ಶಂಕರ್ ಕುಂಜತ್ತೂರು,ಮಾಹಿತಿ ನೀಡಿದ ಕುಂಞಿರಾಮನ್ ಮಾಸ್ತರ್ ಅವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
- ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment