Sunday 18 February 2018

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 424 ಬ್ರಾಣ ಭೂತ© ಡಾ.ಲಕ್ಷ್ಮೀ ಜಿ ಪ್ರಸಾದ


ಬ್ರಾಹ್ಮಣರು ತುಳುನಾಡಿನ ಮೂಲ ನಿವಾಸಿಗಳಲ್ಲ.ಇವರು ಹೊರಗಿನಿಂದ ಬಂದವರು.ಆದರೂ ತುಳುವ ಮಣ್ಣಿನಲ್ಲಿ ನೆಲೆಸಿದಾಗ ಇಲ್ಲಿ ಆರಾಧನೆ ಪಡೆಯುವ ಮಣ್ಣಿನ ಸತ್ಯಗಳು ಎಂದು ಕರೆಸಿಕೊಳ್ಳುವ ಭೂತಗಳನ್ನು ತಮ್ಮ ಆರಾಧ್ಯ ದೇವತೆಗಳಾದ ರಾಮ ಕೃಷ್ಣ, ಶಿವ, ವಿಷ್ಣು ,ದುರ್ಗೆಯರ ಜೊತೆಗೆ ಆರಾಧನೆ ಮಾಡುತ್ತಾ ಬಂದಿದ್ದಾರೆ. ತುಳುನಾಡ ದೈವಗಳ ಕಥಾನಕ ತಿಳಿಯದ ಕಾಲದಲ್ಲಿ ಇವರನ್ನು ಶಿವಗಣಗಳು ,ವಿಷ್ಣು ಗಣಗಳು,ದೇವಿಯ ಅವತಾರ ಎಂದು ತಪ್ಪಾಗಿ ಅರ್ಥೈಸಿರುವುದೂ ಇದೆ.
ತುಳುನಾಡ ದೈವಗಳಲ್ಲಿ ಹೆಚ್ಚಿನವವರು ಮಾನವ ಮೂಲದವರು‌.ಪ್ರಧಾನ ದೈವಗಳ ಆಗ್ರಹಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ಆಯಾಯ ದೈವಗಳ ಸೇರಿಗೆಗೆ ಸಂದು ದೈವತ್ವ ಪಡೆದು ಸೇರಿಗೆ ದೈವವಾಗಿ  ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವು ಕಡೆ ಕಾಣಿಸಿಕೊಂಡಿದೆ.
ಹೀಗೆಯೇ ತುಳುನಾಡಿನಲ್ಲಿ ನೆಲೆ ನಿಂತ ಅನೇಕ ಬ್ರಾಹ್ಮಣರು ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾರೆ. ಹಿರಿಯಡ್ಕದಲ್ಲಿ ವೀರಭದ್ರನನ್ನು ಪ್ರತಿಷ್ಟಾಪಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅದೇ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ. ಸೂರಂಬೈಲು ಸಮೀಪ ಕಾರಿಂಜೇಶ್ವರ ದೇವಾಲಯ ನಿರ್ಮಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕೂಡ ಅದೇ ಹೆಸರಿನ ದೈವವಾಗಿ ನೆಲೆಸಿದ್ದಾನೆ.ಹಾಗೆಯೇ ಭಟ್ಟಿ ಭೂತ,ಬ್ರಾಣ ಬೂತ ಮತ್ತು ಮಾಣಿ ಭೂತ,ಮರ್ಲು ಮಾಣಿ,ಓಪೆತ್ತಿ ಮದಿಮಾಳ್,ಮುಂಡೆ ಬ್ರಾಂದಿ,ಬ್ರಾಹ್ಮಣತಿ ಭೂತ/ ಬಾಲಜ್ಜಿ,ಇಲ್ಲತ್ತಮ್ಮ,ಮುಕಾಂಬಿ ಗುಳಿಗ ಕಚ್ಚೆ ಭಟ್ಟ,ಬ್ರಾಣ ಕುಲೆ,ಬ್ರಾಣ ಭೂತ ,ಚೆಂಬೆರ್ಪುನ್ನಾಯೆ ಮೊದಲಾದವರು ಕಾರಣಾಂತರಗಳಿಂದ ದೈವತ್ವ ಪಡೆದು ತುಳುನಾಡಿನ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಣಿಕ್ಕಳ,ಬಜತ್ತೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬ್ರಾಣ ಭೂತ ಎಂಬ ಇನ್ನೊಂದು ಬ್ರಾಹ್ಮಣ ಮೂಲದ ದೈವಕ್ಕೆ ಆರಾಧನೆ ಇದೆ. ಈತ ಮೂಲತಃ ಓರ್ವ ಅರ್ಚಕ.ಬಹಳ ದೈವ ಭಕ್ತಿ ಇದ್ದವರು‌ಇವರ ಭಕ್ತಿಗೆ ಒಲಿದು ಅಲ್ಲಿನ  ಪ್ದೈರಧಾನ ದೈವಗಳು ಆತನನ್ನು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸುತ್ತಾರೆ.ಆತ ದೈವತ್ವ ಪಡೆದು ಬ್ರಾಣ ಭೂತವಾಗಿ ಆರಾಧನೆ ಪಡೆಯುತ್ತಾನೆ.
ಪಾಡ್ಯಂತಾಯ, ಪಂಬೆತ್ತಾಯ,ನಾಗಬೆರ್ಮೆರ್ ಗಳಿಗೆ ಈ ಪರಿಸರದಲ್ಲಿ ಆರಾಧನೆ ಇದೆ. ಇವರ ಆರಾಧನೆ ನಡೆಯುವಾಗ ಬ್ರಾಣ ಭೂತಕ್ಕೂ ಕೋಲ ಕೊಟ್ಟು ಆರಾಧನೆ ಸಲ್ಲಿಸುತ್ತಾರೆ.
ಬಿಳಿ ಕಚ್ಚೆ ಹಾಕಿ ಜನಿವಾರ ಧರಿಸಿ ಕೈಯಲ್ಲಿ ಒಂದು ಬೀಸಣಿಗೆ ಹಿಡಿದ ಸಹಜ ಅಲಂಕಾರ ಈ ದೈವಕ್ಕೆ ಇರುತ್ತದೆ.ಈ ದೈವ ತುಳು ಬ್ರಾಹ್ಮಣರ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತದೆ.ಸ್ವಲ್ಪ ಹಾಸ್ಯದ ಅಭಿವ್ಯಕ್ತಿ ಕೂಡ ಇರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಮಣಿಕ್ಕಳ ಮುರಳೀಧರ ರಾವ್ ಅವರಿಗೆ ಧನ್ಯವಾದಗಳು

No comments:

Post a Comment