Tuesday 19 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 458-462 ಅಗ್ನಿ ಭೈರವನ್, ಆದಿ ಬೈರವನ್, ಭೈರವನ್, ಶಕ್ತಿ ಭೈರವನ್, ಐಓಗಿ ಭೈರವನ್

ಭೈರವನ್, ಅಗ್ನಿ ಭೈರವನ್,ಯೋಗಿ ಭೈರವನ್, ಶಕ್ತಿ ಭೈರವನ್ ಮತ್ತು ಆದಿ ಭೈರವನ್ ತೆಯ್ಯಂ ಗಳು
ಭೈರವನ್ ತೆಯ್ಯಂ ಹೆಸರು ಕೇಳಿದಾಗ ನಾನು ತುಳುವರು ಆರಾಧಿಸುವ ಕಾಳಭೈರವ ದೈವತವಿರಬಹುದೆಂದು ನಾನು ಭಾವಿಸಿದ್ದೆ‌.ಆದರೆ ಭೈರವನ್ ತೆಯ್ಯಂ ಮತ್ತು ಕಾಳ ಭೈರವ ಬೇರೆ ಬೇರೆ ದೈವಗಳು ‌.
ಬೈರವನ್ ಪಣನ್ಮಾರ್ ಸಮುದಾಯದವರ ಆರಾಧ್ಯ ದೈವತ‌.ಈ ದೈವಕ್ಕೆ ವಿಶಿಷ್ಠವಾದ ಹಿನ್ನೆಲೆ ಇದೆ‌.
ಚೆರುತಂಡನ್ ಮಠ/ ವಿಹಾರಕ್ಕೆ ಸಂಬಂಧಿಸಿದ ಮಹಿಳೆಗೆ ದೀರ್ಘಕಾಲ ಸಂತತಿಯಾಗಿರಲಿಲ್ಲ.ಅವಳು ಶಿವನ ಅನನ್ಯ ಭಕ್ತೆಯಾಗಿದ್ದು,ದಿನ ನಿತ್ಯ ಶಿವನನ್ನು ಧ್ಯಾನಿಸುತ್ತಿದ್ದಳು.ನಲುವತ್ತೊಂದು ದಿನಗಳ ಕಾಲ ಉಪವಾಸವಿದ್ದು ಅರ್ಚನೆ ಮಾಡುತ್ತಿದ್ದಳು.ಆ ಸಮಯದಲ್ಲಿ ಅವಳು ಒಂದು ಸಾವಿರ ಯೋಗಿಗಳಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಳು.ಅವಳ ಭಕ್ತಿಗೆ ಒಲಿದ ಮಹೇಶ್ವರನು ಅನುಗ್ರಹ ಮಾಡುತ್ತಾನೆ‌.ಅವಳಿಗೆ ಓರ್ವ ಮಗ ಹುಟ್ಟುತ್ತಾನೆ‌‌ ಬಹಳ ಸುಸಂಸ್ಕೃತನೂ ಬುದ್ಧಿವಂತನೂ ಆದ ಆ ಮಗು ಚೀರಳನ್ ಏಳನೆಯ ವಯಸ್ಸಿಗೆ ವಿದ್ಯೆಯನ್ನು ಕಲಿತು ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಾನೆ‌.ಉನ್ನತ ಶಿಕ್ಷಣಕ್ಕೆ ಕಳುಹಿಸುವ ಮೊದಲು ಚೆರುತಂಡನ್ ಯೋಗಿಗಳನ್ನು ಆರಾಧಿಸಲು ನಿರ್ಧರಿಸಿ ಮಠಕ್ಕೆ ಯೋಗಿಗಳನ್ನು ಕರೆಯಲು ಹೋಗುತ್ತಾನೆ‌.ಅಲ್ಲಿ ನೋಡಬಾರದ್ದನ್ನು ನೋಡಿ ಅವರಿಗೆ ಶಪಿಸುತ್ತಾನೆ‌
ಆಗ ಯೋಗಿಗಳು ಚೀರಳನ್ ನ ರಕ್ತ ಮಾಂಸಗಳ ಭೋಜನವನ್ನು ಕೇಳುತ್ತಾರೆ ‌.ಬೇರೆ ದಾರಿ ಇಲ್ಲದೆ ಚೀರಳನ್ ನನ್ನು ಕೊಂದು ಅವನ ಮೂಳೆ ಮಾಂಸಗಳಿಂದ ಆಹಾರ ತಯಾರಿಸಿ ಚೆರುತಂಡನ್ ಯೋಗಿಗಳಿಗೆ ಬಡಿಸುತ್ತಾನೆ‌. ಆಗ ಚೀರಳನ್ ನ ಮೂಳೆಗಳು ಅವರ ಊಟದ ಎಲೆಯಲ್ಲಿ ಅಲುಗಾಡುತ್ತವೆ.ಅದನ್ನು ನೋಡಿ ಯೋಗಿಗಳಿಗೆ ಭಯವಾಗಿ ಅವನನ್ನು ನಿಯಂತ್ರಿಸುವ ಸಲುವಾಗಿ ಒಂದು ಹೋಮ ಮಾಡುತ್ತಾರೆ.ಆಗ ಚೀರಳನ್ ಭೈರವನ್ ದೈವವಾಗಿ ಹೋಮದ ಬೆಂಕಿಯಲ್ಲಿ ಕಾಣಿಸುತ್ತಾನೆ‌.ಅವನ ಜೊತೆಯಲ್ಲಿ ಅಗ್ನಿ ಭೈರವನ್, ಯೋಗಿ ಭೈರವನ್, ಆದಿ ಬೈರವನ್ ,ಶಕ್ತಿ ಭೈರವನ್ ತೆಯ್ಯಂ ಗಳು ಉದಿಸುತ್ತವೆ.ಆಗ ಇವರ ಶಕ್ತಿಯನ್ನು ಮನಗಂಡ ಯೋಗಿಗಳು ಇವರಿಗೆ ತೆಯ್ಯಂ ಕಟ್ಟಿಸಿ ಆರಾಧನೆ ಮಾಡುತ್ತಾರೆ. : ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ: Theyyam calendar

Monday 18 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 456-457 ಅಂಗಕ್ಕಾರನ್ ಮತ್ತು ಮರುಟೋಳ ದೈವಗಳು

ಅಂಗಕ್ಕಾರನ್ ಮತ್ತು ಮರುಟೋಳ( Marutola) ತೆಯ್ಯಂ.
ಕಾಸರಗೋಡಿನ ಸುತ್ತಲಿನ ಪ್ರದೇಶಗಳಲ್ಲಿ ಅಂಗಕ್ಕಾರನ್ ಮತ್ತು ಮರುಟೋಳ ಎಂಬ ಎರಡು ದೈವಗಳಿಗೆ ಆರಾಧನೆ ನಡೆಯುತ್ತದೆ.   ದ್ವಂದ್ವ ಯುದ್ಧ  ( ಕಳರಿ ಪಯಟ್ಟು) ಮಾಡಿದ ಇಬ್ಬರು ಶೂರರ ಕಥಾನಕ ಈ ದೈವಗಳ ಹಿನ್ನೆಲೆಯಲ್ಲಿ ಇದೆ‌.

ಅಂಗಕ್ಕಾರನ್ ಎಂಬುದು ಮಲೆಯಾಳ ಭಾಷೆಯ ಪದವಾಗಿದ್ದು ಇದಕ್ಕೆ ಅಂಗ ಸಾಧಕ,ಕುಸ್ತಿಪಟು,ವೀರ,ಹೋರಾಟಗಾರ  ಎಂಬರ್ಥ .
ಈ ಎರಡು ದೈವಗಳು ಕುಸ್ತಿಪಟುಗಳು, ವೀರರು ಆಗಿದ್ದರು‌.

ಅಂಗಕ್ಕಾರನ್ ತನ್ನ ಶತ್ರು ,ಪ್ರತಿಸ್ಪರ್ಧಿ ಯಾಗಿರುವ ಮರುಟೋಳನ( ಆತನ ಮೂಲ ಹೆಸರು ಕೇಳು) ಜೊತೆಯಲ್ಲಿ ದ್ವಂದ್ವ ಯುದ್ಧ  ಮಾಡಿ ಸೋಲಿಸುತ್ತಾನೆ.ಆಗ ಅವನ ಶತ್ರು ಮರುಟೋಳ ಓಡಿ ಹೋಗಿ ಕಣ್ಮರೆಯಾಗುತ್ತಾನೆ‌‌
ತುಸು ಸಮಯದ ನಂತರ ಅಂಗಕ್ಕಾರನ್ ನ ಕಣ್ಣಿಗೆ ಬೀಳುತ್ತಾನೆ ‌.ಆಗ ನಡೆದ ದ್ವಂದ್ವ ಯುದ್ಧದಲ್ಲಿ ಅಂಗಕ್ಕಾರನ್  ಮರುಟೋಳ ನನ್ನು ಕೊಲ್ಲುತ್ತಾನೆ.
ನಂತರ ಇವರಿಬ್ಬರೂ ದೈವತ್ವ ಪಡೆದು ತೆಯ್ಯಂ ಗಳಾಗಿ ಕೇರಳದ ಉತ್ತರ ಭಾಗವಾದ ಕಾಸರಗೋಡಿನ ಸುತ್ತುಮುತ್ತಲಿನ ಪ್ರದೇಶದಲ್ಲಿ ಆರಾಧನೆ ಪಡೆಯುತ್ತಾರೆ.
ಅಂಗಕ್ಕಾರನ್ ದೈವದ ಕೋಲ( ತೆಯ್ಯಂ ಕಟ್ಟ್) ಆಗುವಾಗ ಆತ ಮರುಟೋಳನನ್ನು ಸೋಲಿಸಿ ಕೊಂದದರ ಪ್ರತೀಕವಾಗಿ ಅಂಗಕ್ಕಾರನ್ ದೈವ ಮರುಟೋಳ ದೈವದ ಕತ್ತಿಯನ್ನು ಸೆಳೆದು ತೆಗೆದುಕೊಳ್ಳುತ್ತಾನೆ‌. - ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ Theyyam calendar

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 453-455 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ- ಡಾ.ಲಕ್ಷ್ಮೀ ಜಿ ಪ್ರಸಾದ

ಈ ದೈವಗಳ ಹಿನ್ನೆಲೆ ಬಹಳ ವಿಶಿಷ್ಟವಾಗಿದೆ. ಪಾಲಾರ್ ಬೀಡಿನ ವೀರ ಪಾಟ ನಾಯರ್ ಮತ್ತು ಪಾಲಕುನ್ನತ್ ನ ಕೋಲೇಂದ್ರನಾಯರ್ ಇಬ್ಬರೂ ಬೇಟೆಯಾಡಲು ಬೆಟ್ಟಕ್ಕೆ ಹೋಗುತ್ತಾರೆ‌.
ಮಧ್ಯಾಹ್ನದ ಹೊತ್ತಿಗೆ ಹಸಿವಾಗುತ್ತದೆ‌.ಆಗ ಅವರು ಕರಿಂಕುಲಕ್ಕಲ್ ಮನೆಗೆ ಹೋಗಿ ಅಲ್ಲಿಯ ಮಹಿಳೆಯ ಬಳಿ ಆಹಾರ ಕೇಳುತ್ತಾರೆ‌.ಆಕೆ ಹಾಲು ನೀಡಿ ಅಹಾರ ತಯಾರಿಗೆ ಶುರುಮಾಡುತ್ತಾಳೆ‌.
ಈ ಇಬ್ಬರು ವೀರರು ಸ್ನಾನ ಮಾಡಲು ಸಮೀಪದ ಕೊಳಕ್ಕೆ ಹೋಗುತ್ತಾರೆ‌.ಅಲ್ಲಿ ಒಂದು ವಿಶಿಷ್ಟವಾದ ಮೀನನ್ನು ನೋಡುತ್ತಾರೆ. ಅದನ್ನು ಹಿಡಿಯಲು ಯತ್ನ ಮಾಡುತ್ತಾರೆ‌.ಎಷ್ಟು ಯತ್ನ ಮಾಡಿದರೂ ಇವರ ಕೈಗೆ ಆ ಮೀನು ಸಿಗುವುದಿಲ್ಲ. ಕೊನೆಯಲ್ಲಿ ಸುಸ್ತಾಗಿ ಹಿಂತಿರುಗುತ್ತಾರೆ‌
ಆಗ ಅವರಿಗೊಂದು ಅಚ್ಚರಿ ಕಾದಿರುತ್ತದೆ‌.ಆ ಮಹಿಳೆಯ ಬಳಿ ಆ ಮೀನು ಇರುತ್ತದೆ. ಅದನ್ನು ಮೂರು ತುಂಡು ಮಾಡಿ ಆಕೆ ಬೇಯಿಸುತ್ತಾಳೆ.ಆಗ ಆ ಮೀನಿನ ತುಂಡುಗಳು ಪಾತ್ರೆಯಿಂದ ಹೊರಕ್ಕೆ ನೆಗೆಯುತ್ತವೆ‌.ಆ ಮೀನಿನ ಎರಡು ತುಂಡುಗಳು ತೆಕ್ಕನ್ ಕರಿಯಾತನ್ ಮತ್ತು ಕನ್ನಕ್ಕೋರುಮಗನ್ ತೆಯ್ಯಂ ಗಳಾಗಿ ಬದಲಾದವು‌.
ಆ ಎರಡು ದೈವಗಳು ಒಂದು ನದಿಯ ಸಮೀಪ ಕುಳಿತಿರುತ್ತಾರೆ.ಅಗ ಓರ್ವ ಮಹಿಳೆ ಕಳ್ಳು ಮಾರುತ್ತಿರುತ್ತಾಳೆ‌.ಅವಳಲ್ಲಿ ಕಳ್ಳು ಕೇಳುತ್ತಾರೆ ‌ಮೊದಲಿಗೆ ಅವಳು ಕೊಡುವುದಿಲ್ಲ‌.ನಂತರಿವರ ದೈವಕಿ ಶಕ್ತಿಯನ್ನು ನೋಡಿ  ಸ್ವಲ್ಪ ಭಾಗ ಕಳ್ಳನ್ನು  ಕೊಡುತ್ತಾಳೆ‌.
ಇವೆಲ್ಲವನ್ನೂ ಒಬ್ಬ ಬಾಲಕ ನೋಡುತ್ತಾ ಇರುತ್ತಾನೆ‌.ಅವನು ಇವರ ಜೊತೆಯಲ್ಲಿ ಸೇರಲು ಬಯಸುತ್ತಾನೆ‌.ಆತ ಕೈಕೋಲನ್ ತೆಯ್ಯಂ ಆಗಿ ಇ ಎರಡು ದೈವಗಳೊಂದಿಗೆ ಆರಾಧನೆ ಪಡೆಯುತ್ತಾನೆ‌
ಕೈಕೋಲನ್ ದೈವಕ್ಕೆ ಸರಳವಾದ ವೇಷಭೂಷಣ ಇರುತ್ತದೆ‌‌.ಮೈಗೆ ಬಿಳಿಯ ಬಣ್ಣ ಹಚ್ಚುತ್ತಾರೆ‌.ಕೈಕೋಲನ್ ದೈವ ಈ ಎರಡು ಪ್ರಧಾನ ದೈವಗಳ ಸಹಾಯನಾಗಿ ಇರುತ್ತಾನೆ‌.ಇದು ಈ ದೈವಗಳ ಬಗೆಗಿನ ಪ್ರಚಲಿತ ಕಥಾನಕ.
ಆದರೆ ಇಲ್ಲೊಂದು ಅಪೂರ್ಣತೆ ಇದೆ‌.ಮೊದಲು ಬೇಟೆಗೆ ಹೋದ ಇಬ್ಬರು ವೀರರು ಏನಾದರು ? ಇವರೇನಾದರೂ ದುರಂತವನ್ನಪ್ಪಿ ಅಥವಾ ಇನ್ಯಾವದಾದರೂ ಕಾರಣಕ್ಕಾಗಿ ತೆಕ್ಕನ್ ಕರಿಯಾತನ್ ಮತ್ತು ಕನ್ನಿಕ್ಕೋರುಮಗನ್ ದೈವಗಳಾದರೆ ? ಅವರ ದುರಂತ ಮತ್ತು ದೈವತ್ವಕ್ಕೆ ಅಲೌಕಿಕತೆ ಸೇರಿ ವಿಶಿಷ್ಟವಾದ ಮೀನುಗಳ ಭಾಗಗಳಿಂದ ದೈವಗಳು ಉದಿಸಿದವೆಂಬ ಕಥೆ ಹರಡಿರುವ ಸಾಧ್ಯತೆ ಇದೆ.ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ಸಿಗಬಹುದು - ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ : Theyyam calendar 


ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 450-452 ಆದಿವೇಡನ್,ವೇಡತಿ ಮತ್ತು ಗಳಿಂಚನ್ ತೆಯ್ಯಂ: ಡಾ.ಲಕ್ಷ್ಮೀ ಜಿ ಪ್ರಸಾದ

ಕರ್ಕಾಟಕ ಮಾಸದ ಸಮಯದಲ್ಲಿ ಎಂದರೆ ಮಳೆಗಾಲದ ಆರಂಭದಲ್ಲಿ ಮನೆ ಮನೆಗೆ ಬಂದು ಕುಣಿದು ಆರಾಧನೆ ಪಡೆವ ದೈವಗಳು ಇವರು.ಈ ದೈವಗಳನ್ನು ( ತೆಯ್ಯಂ) ಹತ್ತು ಹನ್ನೆರಡು ವರ್ಷದ ಹುಡುಗರು ಕಟ್ಟುತ್ತಾರೆ‌
ಮೊದಲಿಗೆ ಆದಿ ವೇದನ್ ಮನೆಮನೆಗೆ ಬರುತ್ತಾನೆ ‌ನಂತರ ವೇದತಿ ದೈವ ಬರುತ್ತದೆ ‌ನಂತರ ಗಳಿಂಚನ್ ತೆಯ್ಯಂ ಬರುತ್ತದೆ ‌.
ಈ ಮೂರೂ ದೈವಗಳನ್ನು ಬೇರೆ ಬೇರೆ ಸಮುದಾಯದವರು ಕಟ್ಟುತ್ತಾರೆ‌.ಆದಿ ವೇದನ್ ತೆಯ್ಯಂ ಅನ್ನು ಮಲಯಾರ್ ಸಮುದಾಯದ ಜನರು ಕಟ್ಟುತ್ತಾರೆ‌.ವೇದತಿ ತೆಯ್ಯಂ ಅನ್ನು ವಣ್ಣನ್ ಸಮುದಾಯದ ಜನರು ಕಟ್ಟುತ್ತಾರೆ. ಗಳಿಂಚನ್ ದೈವವನ್ನು ಕೋಪಾಳ ಸಮುದಾಯದ ಜನರು ಕಟ್ಟುತ್ತಾರೆ ‌.
ಮಳೆಗಾಲದ ಆರಂಭದಲ್ಲಿ ಮನೆ ಮನೆಗೆ ಬಂದು ಕುಣಿದು ದುರಿತಗಳನ್ನು ದೂರ ಮಾಡುತ್ತವೆ‌.
ಈ ದೈವಗಳ ಮೂಲ ಪುರಾಣ ಕಥೆಯಲ್ಲಿದೆ‌.ಮಹಾಭಾರತದಲ್ಲಿ ಅರ್ಜುನ ಪಾಶುಪತಾಸ್ತ್ರ ಪಡೆಯುವುದಕ್ಕಾಗಿ ಘೋರವಾದ ತಪಸ್ಸು ಮಾಡುತ್ತಾನೆ‌.ಅವನನ್ನು ಪರೀಕ್ಷಿಸುವ ಸಲುವಾಗಿ ಶಿವ ಪಾರ್ವತಿಯರು ಬೇಡರ ರೂಪದಲ್ಲಿ ಬರುತ್ತಾರೆ‌.ಶಿವನ ಗಣವಾದ ಮೂಕಾಸುರ ಮತ್ತು ಅರ್ಜುನ ಏಕಕಾಲದಲ್ಲಿ ಒಂದು ಹಂದಿಗೆ ಬಾಣ ಪ್ರಯೋಗ ಮಾಡುತ್ತಾರೆ‌.ಇದರಿಂದಾಗಿ ಅರ್ಜುನ ಮತ್ತು ಶಿವನ ನಡುವೆ ಹೋರಾಟವಾಗುತ್ತದೆ‌‌.ಕೊನೆಯಲ್ಲಿ ಕೃಷ್ಣ ಅರ್ಜುನನಿಗೆ ಬಂದಾತ ಶಿವನೆಂದು ತಿಳಿಸುತ್ತಾನೆ‌‌ಆಗ ಅರ್ಜುನ ಬೇಡ ರೂಪಿ ಶಿವನಿಗೆ ಶರಣಾಗುತ್ತಾನೆ‌.ಹೀಗೆ ಬೇಡ,ಬೇಡತಿಯರ  ರೂಪದ ಶಿವ ಪಾರ್ವತಿಯರನ್ನು ಆದಿವೇಡನ್ ಮತ್ತು ವೇಡತಿ ಎಂಬ ಹೆಸರಿನ ದೈವವಾಗಿ ಆರಾಧನೆ ಮಾಡುತ್ತಾರೆ‌.ಅರ್ಜುನನ್ನು ಗಳಿಂಚನ್ ತೆಯ್ಯಂ ಎಂದು ಕಟ್ಟಿ ಆರಾಧನೆ ಮಾಡುತ್ತಾರೆ.


ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 449 ಓಣತಾರ್ ದೈವ

ಓಣಂ ಸಮಯದಲ್ಲಿ ಆರಾಧನೆ ಗೊಳ್ಳುವ ದೈವತವಿದು‌.ಓಣಂ ಸಮಯದಲ್ಲಿ ಆರಾಧನೆ ಆಗುವ ಕಾರಣ ಓಣತಾರ್ ಎಂಬ ಹೆಸರು ಬಂದಿರಬಹುದು.ಓಣಂ ಸಮಯದಲ್ಲಿ ಹತ್ತು ಹನ್ನೆರಡು ವರ್ಷದ ಹುಡುಗನಿಗೆ ಓಣತಾರ್ ತೆಯ್ಯಂ ನ ವೇಷಭೂಷಣ ಹಾಕುತ್ತಾರೆ‌.ಓಣತಾರ್ ಮನೆ ಮನೆಗೆ ಬಂದು ಮಹಾಬಲಿ ಕುರಿತಾದ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ.ಈತನ ಜೊತೆಯಲ್ಲಿ ಚೆಂಡೆ ಬಾರಿಸಿಕೊಂಡು ಆತನ ಹಿರಿಯ ಬರುತ್ತಾನೆ.
ಓಣಂ ನಲ್ಲಿ ಮಹಾಬಲಿ ಯ ಆರಾಧನೆ ಇರುತ್ತದೆ.ಹಾಗೆಯೇ ಓಣತಾರ್ ದೈವ ಕೂಡ ಮಹಾಬಲಿ ಎಂದು ನಂಬಿ ಆರಾಧನೆ ಮಾಡುತ್ತಾರೆ‌.ಕಾಸರಗೋಡು ಸುತ್ತಮುತ್ತಲಿನ ಪರಿಸರದಲ್ಲಿ ಓಣತಾರ್ ಮನೆ ಮನೆಗೆ ಬರುತ್ತಾನೆ‌.ಆಗ ಅವರಿಗೆ ಅಕ್ಕಿ ಬೇಳೆ ಮೊದಲಾದವುಗಳನ್ನು ಮನೆಯವರು ಕೊಡುತ್ತಾರೆ.ರೋಗ ರುಜಿನಗಳನ್ನು ಓಣತಾರ್ ದೈವ  ತೆಗೆದುಕೊಂಡು ಹೋಗುತ್ತದೆ ಎಂದು ಜನರು ನಂಬಿ ಆರಾಧನೆ ಮಾಡುತ್ತಾರೆ.
ಆಧಾರ : http://mywordsnthoughts.com/myworld/all-about-kerala/do-you-know-about-onathar-and-kutti-theyyam/

Sunday 17 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 448 ವೇಟಕ್ಕೊರುಮಗನ್ - ಡಾ.ಲಕ್ಷ್ಮೀ ಜಿ ಪ್ರಸಾದ

ವೇಟಕ್ಕೊರುಮಗನ್ ದೈವಕ್ಕೆ ಪೆರಾಜೆಯಲ್ಲಿ ಆರಾಧನೆ ಇದೆ ‌.ಈ ದೈವ ಎಂಟು ದಿಕ್ಕಿನಲ್ಲಿ ಬಾಣ ಪ್ರಯೋಗ ಮಾಡುವ ಸಂಪ್ರದಾಯವಿದೆ‌.ಕಾಸರಗೋಡು ಹಾಗೂ ಕಾಸರಗೋಡಿನ ಉತ್ತರದ ಪ್ರದೇಶಗಳಲ್ಲಿ ವೇಟಕ್ಕೊರುಮಗನ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ‌.
ಈ ದೈವ ದ ಕಥೆ ಪುರಾಣ ಕಥೆಯೊಂದಿಗೆ ಥಳುಕು ಹಾಕಿಕೊಂಡಿದೆ‌
ಅರ್ಜುನ ಪಾಶುಪತಾಸ್ತ್ರ ಪಡೆಯಲು ಶಿವನ ಕುರಿತು ತಪಸ್ಸು ಮಾಡುತ್ತಾನೆ‌.ಆಗ ಶಿವ ಪಾರ್ವತಿಯರು ಗ  ಬೇಟೆಗಾರರ ವೇಷ ಧರಿಸಿ ಅರ್ಜುನನ್ನು ಪರೀಕ್ಷಿಸಲು ಬರುತ್ತಾರೆ‌.
ಆಗ ಪಾರ್ವತಿ ದೇವಿ ಗರ್ಭ ಧರಿಸಿ ಓರ್ವ ಮಗನನ್ನು ಪ್ರಸವಿಸುತ್ತಾಳೆ.ಆ ಮಗನಿಗೆ ವೇಟಕ್ಕೊರುಮಗನ್ ಎಂದು ಹೆಸರಿಟ್ಟು ಸಾಕುತ್ತಾರೆ. ಆತ ತುಂಬಾ ಸಾಹಸಿ ಯಾಗಿದ್ದನು.ತನ್ನ ಶಕ್ತಿಯಿಂದ ಎಲ್ಲರಿಗೂ ಉಪಟಳ ಕೊಡುತ್ತಿದ್ದನು.ಇವನ ಉಪಟಳದಿಂದ ದೇವತೆಗಳು ಕೂಡ ಕಂಗಾಲಾಗಿದ್ದರು.ಆದ್ದರಿಂದ ಶಿವ ಪಾರ್ವತಿಯರು ಅವನನ್ನು ಭೂಲೋಕಕ್ಕೆ ಕಳಹಿಸುತ್ತಾರೆ.ಅವನು ಬಲುಸ್ಸೆರಿ ಕೋಟೆಗೆ ಬರುತ್ತಾನೆ.ಅಲ್ಲಿನ ಅರಸನಿಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಸಹಾಯ ಮಾಡುತ್ತಾನೆ‌.ವೀರನಾದ ಅವನಿಗೆ ಅರಸ ತನ್ನ ರಾಜ್ಯದ ಕೆಲವು ಪ್ರದೇಶಗಳನ್ನು ನೀಡುತ್ತಾನೆ‌.ಅಲ್ಲಿ ನೆಲೆಸುವ ವೇಟಕ್ಕೊರುಮಗನ್ ಕ್ಷೇತ್ರಪಾಲನೊಡನೆ ಸ್ನೇಹ ಗಳಿಸುತ್ತಾನೆ‌.ಮುಂದೆ ದೈವವಾಗಿ ಆರಾಧನೆ ಪಡೆಯುತ್ತಾನೆ 
ಆಧಾರ :ತೆಯ್ಯಂ ಕ್ಯಾಲೆಂಡರ್

Friday 15 November 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 447 ಕುಟ್ಟಿಚ್ಚಾತನ್ - ಡಾ.ಲಕ್ಷ್ಮೀ ಜಿ ಪ್ರಸಾದ

ಕುಟ್ಟಿಚ್ಚಾತನ್ ಬಹಳ ಪ್ರಸಿದ್ಧ ದೈವ,ದನ ಕರುಗಳು,ಚಿನ್ನಾಭರಣಗಳು ಕಳೆದು ಹೋದರೆ ಕುಟ್ಟಿಚ್ಚಾತನಿಗೆ ಹರಿಕೆ ಹಾಕಿದರೆ ಸಿಗುತ್ತವೆ ಎಂದು ಜನರು ನಂಬಿ ಆರಾಧಿಸುತ್ತಾರೆ.
ಕುಟ್ಟಿಚ್ಚಾತನ್ ದೈವಿಕ ಹುಟ್ಡನ್ನು ಪಡೆದ ಶಿವ ಪಾರ್ವತಿಯರ  ಪುತ್ರ.
ಒಮ್ಮೆ ಶಿವ ಪಾರ್ವತಿಯರು ನಿರ್ಜನವಾದ ಬೆಟ್ಟದಲ್ಲಿ ವಲ್ಲುವರ್ ಜನಾಂಗದವರ ಜೊತೆಯಲ್ಲಿ ವಿಹರಿಸುತ್ತಾ ಇದ್ದರು. ಶಿವ ಪಾರ್ವತಿ ದೇವಿಯತು ಅಲ್ಲಿ ವಲ್ಲುವರ್ ಸಮುದಾಯದ  ಪುರುಷ ಮತ್ತು ಮಹಿಳೆಯಂತೆ ಇದ್ದರು.ಹಾಗಾಗಿ ಪಾರ್ವತಿಯನ್ನು ವಲ್ಲುವತಿ ಎಂದಿದ್ದಾರೆ. ವಲ್ಲುವರ್ ವಲ್ಲುವತಿ ರೂಪದ ಶಿವ ಪಾರ್ವತಿಯರಿಗೆ ಕರುವಲ್ ಮತ್ತು ಕುಟ್ಟಿಚ್ಚಾತನ್ ಎಂಬ ಇಬ್ಬರು ಮಕ್ಕಳು ಹುಟ್ಟುತ್ತಾರೆ‌
ಶಿವ ಅಂಶ ರೂಪದಲ್ಲಿ ಜನಿಸಿದ ಕುಟ್ಟಿಚ್ಚಾತನ್ ಹ ಹುಟ್ಟುವಾಗಲೇ ವಿಲಕ್ಷಣ ಸ್ವರೂಪವನ್ನು ಹೊಂದಿದ್ದನು.ಅತನು ವಿಶಿಷ್ಠವಾದ ಹೂವನ್ನು ಹಣೆಯಲ್ಲಿ ಧರಿಸಿದ್ದನು‌.ಮೂರನೆಯ ಕಣ್ಣನ್ನು ಕೂಡ ಹಣೆಯಲ್ಲಿ ಹೊಂದಿದ್ದನು.ಕಪ್ಪು ಮೈ ಬಣ್ಣದಲ್ಲಿ ಬಿಳಿ‌ಪಟ್ಟೆಯನ್ನು ಹೊಂದಿ ವಿಶಿಷ್ಠವಾದ ಕಳೆಯನ್ನು ಪಡೆದಿದ್ದನು.
ಅಲ್ಲಿಯೇ ಸಮೀಪದಲ್ಲಿ ಶಿವ ಭಕ್ತನಾದ  ಕಲಕಾಡು ನಂಬೂದಿರಿ ಜೀವಿಸುತ್ತಿದ್ದನು.ಶಿವನ ಅನನ್ಯ ಭಕ್ತನಾದ ಅವನಿಗೆ ಮಕ್ಕಳಿರಲಿಲ್ಲ. ಅವನು ಮತ್ತು ಅತನ ಮಡದಿ ಶಿವನನ್ನು ಅನನ್ಯ ಭಕ್ತಿಯಿಂದ ಅರಾಧಿಸಿದರು.ಅವರ ಮೇಲೆ ಅನುಗ್ರಹ ಬೀರಿದ ವಲ್ಲುವರ್,ವಲ್ಲುವತಿ ರೂಪದ ಶಿವ ಪಾರ್ವತಿಯರು ತಮ್ಮ ಎರಡನೇ ಮಗನನ್ನು ಈ ದಂಪತಿಗಳಿಗೆ ನೀಡಿದರು.
ಈ ಸಿವ ಪಾರ್ವತಿಯರ ಮಗನಾದ ಕುಟ್ಟಿಚ್ಚಾತನ್ ಬಹಳ ಬೇಗ ಎಲ್ಲ ವಿದ್ಯೆಗಳನ್ನು ಕಲಿತನು.ಜಾಣನಾತ ಈತ ಸಮಾಜ ವಿರೋಧಿ ನಡವಳಿಕೆಯನ್ನು ತೋರುತ್ತಿದ್ದನು. ಸಾತ್ವಿಕ ಬ್ರಾಹ್ಮಣ ನಂಬೂದಿರಿ ದಂಪತಿಗಳ ಮಗನಾಗ ಈಗ ಮಾಂಸಾಹಾರವನ್ನು ಸೇವಿಸುತ್ತಿದ್ದನು.ಮದ್ಯವನ್ನು ಕುಡಿಯುತ್ತಿದ್ದನು.ಜನರಿಗೆ ಉಪಟಳ ನೀಡುತ್ತಿದ್ದನು‌.
ಒಮ್ಮೆ ಹಸುವನ್ನು ಕೊಂದು ಅದರ ರಕ್ತವನ್ನು ಸೇವಿಸಿದನು.
ಕೊನೆಗೆ ಇವನ ಉಪಟಳ ತಾಳಲಾರದೆ ಇವನನ್ನು ಕೊಲ್ಲುತ್ತಾರೆ‌.
ಆದರೆ ಮರಣಾನಂತರ ಕೂಡ ‌ಮನೆಯಲ್ಲಿ ಅವನ ಧ್ವನಿ ಕೇಳಿಸುತ್ತಾ ಇತ್ತು.ಅದಕ್ಕಾಗಿ ಒಂದು ಹೋಮವನ್ನು ಮಾಡಿದರು.ಆ ಹೋಮದಿಂದ ಕುಟ್ಟಿಚ್ಚಾತನ್ ಎದ್ದು ಬರುತ್ತಾನೆ‌.ಚಲ ಪೆರುಮಲಯನ್ ನಲ್ಲಿ ಗುಡಿ ಕಟ್ಟುತ್ತಾರೆ.ನಂತರ ಅವನ ದೈವಿಕ ಶಕ್ತಿಯ ಅರಿವಾಗಿ ಆತನಿಗೆ ತೆಯ್ಯಂ ಕಟ್ಟಿ ಆರಾಧನೆ ಮಾಡುತ್ತಾರೆ.- ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 446 ಉಪ್ರಝಾಸ್ಸಿ ತೆಯ್ಯಂ

ಉಪ್ರಝಾಸ್ಸಿ ದೈವವನ್ನು ವಿಷ್ಣುವಿನ ಅವತಾರವೆಂದು ಕರೆಯುತ್ತಾರೆ.
ಮೆಲರಿಲಮ್ ಎಂಬ ಕನ್ಯೆ ವಿಷ್ಣುವಿನ ಅನನ್ಯ ಭಕ್ತೆಯಾಗಿದ್ದಳು.ಅವಳು ವಿಷ್ಣು ದೇವರ ಅನುಗ್ರಹದಿಂದ ಅವನ ಅಂಶವನ್ನು ಪಡೆದಿರುವ ಒಬ್ಬ ಮಗನನ್ನು ಪಡೆಯುತ್ತಾಳೆ. ವಿಷ್ಣುವಿನ ದಯೆಯಿಂದ ಹುಟ್ಟಿದ  ಆ ಮಗುವನ್ನು ದಯಾರಪ್ಪನ್ ಎಂದು ಹೆಸರಿಸುತ್ತಾರೆ‌.ದೈವಿಕ ಶಕ್ತಿಯಿರುವ ಆ ಮಗು ಅನೇಕ ಪವಾಡಗಳನ್ನು ಮಾಡುತ್ತದೆ‌.ಅವನು ಬೆಳೆದು ದೊಡ್ಡವನಾಗಿ ಯುವಕನಾದಾಗ ಅನೇಕ ದುಷ್ಟ ಶಕ್ತಿಗಳನ್ನು ಶಿಕ್ಷಿಸಿ ದೂರ ಮಾಡುತ್ತಾನೆ. ಅವನು ದೊಡ್ಡ ವೀರನಾಗುತ್ತಾನೆ
ನಂತರ ಅವನು ವೇಟಕ್ಕೋರು ಮಗನ್ ಎಂಬ ವೀರನನ್ನು ಬಾಲುಸ್ಸೇರಿ ಕೋಟೆಯಲ್ಲಿ ಭೇಟಿಯಾಗುತ್ತಾನೆ‌‌.ನಂತರ ಉಪ್ರಝಾಸ್ಸಿ ಎಂಬ ಪ್ರದೇಶದಲ್ಲಿ ನೆನೆಯಾಗುತ್ತಾನೆ‌.ಕಾಲಾಂತರದಲ್ಲಿ ವೀರನಾದ ಆತ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ‌.ಆತ ಉಪ್ರಝಾಸ್ಸಿಯಲ್ಲಿ ನೆಲೆಸಿದ ಕಾರಣ ಆತನನ್ನು ಉಪ್ರಝಾಸ್ಸಿ  ತೆಯ್ಯ /ದೈವ ಎಂದು ಕರೆದು ಭಕ್ತಿಯಿಂದ ಆರಾಧಿಸುತ್ತಾರೆ.

Saturday 9 November 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 445 ಮೂವಾಲಂಕುಳಿ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ


ಮೂವಲಾಂಕುಳಿ ಚಾಮುಂಡಿ ದೈವದ ಕೋಲ ಎಂದರೆ ತೆಯ್ಯಂ ಆಗುವಾಗ ಜನರನ್ನು ಓಡಿಸಿ ಹೊಡೆಯುವ ಸಂಪ್ರದಾಯವಿದೆ.. ಈ ದೈವದ ಹೊಡೆತ ತಿನ್ನುವ ಹರಿಕೆ ಕೂಡ ಇದೆ.ಈ ದೈವದಿಂದ ಬಂಧಿಸಲ್ಪಟ್ಟರೆ,ಹೊಡೆತ ತಿಂದರೆ ತಾವು ನೆನೆದ ಕೆಲಸ ಈಡೇರುತ್ತದೆ ಎಂಬ ನಂಬಿಕೆ ಇದೆ.
ಈ ದೈವ ಓಡಿಸಿಕೊಂಡು ಹೋಗಿ ಹೊಡೆಯುವುದು ಬಂಧಿಸುವುದೇ ಮೊದಲಾದವುಗಳು ಆ ದೈವದ ಕಥೆಗೆ ಪೂರಕವಾದ ವಿಚಾರಗಳಾಗಿವೆ.
ಮೂವಾಲಾಂಕುಳಿ ಎಂದರೆ ಮೂರು ಜನರಷ್ಟು ದೊಡ್ಡದಾದ ಕುಳಿ ಎಂದರೆ ಹೊಂಡ, ಗುಂಡಿ ಎಂದರ್ಥ.ಅದರಲ್ಲಿ ಉದ್ಭವವಾದ ತ್ರಿಕನ್ಯಾವು ದೈವವನ್ನು ಮೂವಾಲಾಂಕುಳಿ ಚಾಮುಂಡಿ ಎಂದು ಕರೆದಿದ್ದಾರೆ‌.
ಉತ್ತರ ಕೇರಳದಲ್ಲಿ ತ್ರಿಕನ್ಯಾತ್ ದೇವಾಲಯವಿದೆ. ಎಡಮನ ಮತ್ತು  ಎಲ್ಯಾಪುರತ್ ಎಂಬ ಇಬ್ಬರು ಪ್ರಸಿದ್ಧ ತಂತ್ರಿಗಳು ಇರುತ್ತಾರೆ.ಒಬ್ಬರಾಗಿ ಒಬ್ಬರು ಅಲ್ಲಿ ಪ್ರತಿತಿಂಗಳು ಪೂಜಾ ಕೈಂಕರ್ಯವನ್ನು ಮಾಡುತ್ತಾ ಅನ್ಯೋನ್ಯವಾಗಿ ಬದುಕುತ್ತಿದ್ದರು.
ಅವರ ನಡುವೆ ಯಾವುದೋ ಒಂದು ಕಾರಣಕ್ಕೆ ಮನಸ್ತಾಪ ಉಂಟಾಗುತ್ತದೆ. ಆಗ ಅವರುಗಳು ತಮ್ಮ ತಾಂತ್ರಕ ಶಕ್ತಿಯಿಂದ ದುಷ್ಟ ಶಕ್ತಿಗಳನ್ನು  ಸೃಜಿಸಿ ಇನ್ನೊಬ್ಬರಿಗೆ ತೊಂದರೆ ಕೊಡಲು ಕಳುಹಿಸುತ್ತಾ ಇದ್ದರು. ಒಬ್ಬರು ಕಳುಹಿಸಿದ್ದನ್ನು ಇನ್ನೊಬ್ಬರು ವಶೀಕರಣ ಮಾಡಿ ತಾಮ್ರದ ತಂಬಿಗೆಯಲ್ಲಿ ಬಂಧಿಸಿ ಹೂಳುತ್ತಿದ್ದರು. ಇಲ್ಕವೇ ಉರಿಸಿ ಭಸ್ಮ ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ ಎಡಮನ ತಂತ್ರಿ ತ್ರಿಕನ್ಯಾವು ದೇವಿಯನ್ನು ಎಲ್ಯಾಪ್ಪುರತ್ ತಂತ್ರಿ ತನಗೆ ತೊಂದರೆ ಕೊಡಲು ಕಳುಹಿಸಿದ ದುಷ್ಟ ಶಕ್ತಿ ಎಂದು ಭಾವಿಸಿ ಅದನ್ನು ಒಂದು ತಾಮ್ರದ ಕೊಡಪಾನದಲ್ಲಿ ಬಂಧಿಸಿ ತನ್ನ ಸೇವಕರಲ್ಲಿ ತೆಗೆದುಕೊಂಡು ಹೋಗಿ ಮಣ್ಣಿನಡಿಯಲ್ಲಿ ಹುಗಿಯಲು ಹೇಳುತ್ತಾರೆ. ಆದರೆ ಅವನ ಸೇವಕರು ಅದನ್ನು ತೆಗೆದುಕೊಂಡು ಹೋಗುವಾಗ ಭಯಾನಕವಾದ ಸಿಡಿಲು ಎರಗುತ್ತದೆ.ಆ ಸಿಡಿಲಿಗೆ ಬೂಮಿ ಬಿರಿದು ಮೂರು ಜನರಷ್ಟು ದೊಡ್ಡದಾದ ಒಂದು ಹೊಂಡ ಉಂಟಾಗುತ್ತದೆ.ಅದರಿಂದ ಮೂರು ದಿವ್ಯವಾದ ಖಡ್ಗಗಳು ಉದಿಸುತ್ತವೆ‌.ಜೊತೆಗೆ ತ್ರಿಕನ್ಯಾವು ದೇವಿ ಎದ್ದು ಬರುತ್ತಾಳೆ.ತನ್ನನ್ನು ಬಂಧಿಸ ಹೊರಟ ಎಡಮನ ತಂತ್ರಿಯನ್ನು ಓಡಿಸಿ ಹೊಡೆದು ಬಡಿದು ನಾನಾರೀತಿಯ ಉಪಟಳವನ್ನು ಕೊಡುತ್ತಾಳೆ.ಆಗ ಆತ ಅಯ್ಯಪ್ಪ ದೇವರ ಮೊರೆ ಹೋಗುತ್ತಾರೆ.ನಂತರ ತನ್ನ ತ್ರಿಕನ್ಯಾವು ದೈವದ ಶಕ್ತಿಯ ಅರಿವಾಗುತ್ತದೆ. ತನ್ನ   ತಪ್ಪನ್ನು  ಒಪ್ಪಿಕೊಂಡು ಶರಣಾಗುತ್ತಾನೆ‌.ಇಬ್ಬರು ತಂತ್ರಿಗಳು ಕೂಡ ಭಕ್ತಿಯಿಂದ ಆರಾಧನೆ ಮಾಡುತ್ತಾರೆ‌.ತ್ರಿಕನ್ಯಾವು ದೇವತೆಗೆ ಕೋಲ ನೀಡಿ ಆರಾಧನೆ ಮಾಡಿ ಒಲಿಸಿಕೊಳ್ಳುತ್ತಾರೆ‌.ಉತ್ತರ ಮಲಬಾರ್ ಪ್ರದೇಶದಲ್ಲಿ ಈ ದೈವವನ್ನು ಆರಾಧನೆ ಮಾಡುತ್ತಾರೆ‌..ಈ ದೈವವನ್ನು ಕಟ್ಟುವವರು ಬಣ್ಣ ಬಣ್ಣದ ವೇಷ ಧರಿಸಿ ಉಗ್ರವಾಗಿ ನರ್ತಿಸುತ್ತಾರೆ
ಮೂರು ಜನರಷ್ಟು ದೊಡ್ಡದಾದ ಕುಳಿಯಲ್ಲಿ ಉದಿಸಿಬಂದ ಕಾರಣ ಈ ದೈವವನ್ನು ಮೂವಾಲಂ ಕುಳಿ ತೆಯ್ಯಂ ಎಂದು ಕರೆಯುತ್ತಾರೆ.
ಈ ದೈವ ಎಡಮನ್ ತಂತ್ರಿಯನ್ನು ಓಡಿಸಿ ಹೊಡೆದು ಬಡಿದು ಪೀಡಿಸಿದುದರ ಪ್ರತಿಕವಾಗಿ ಈಗ ಕೂಡ ದೈವ ಕಟ್ಟಿದಾಗ ಜನರನ್ನು ಓಡಿಸಿ ಹೊಡೆಯುವ ಅಭಿವ್ಯಕ್ತಿ ಇರುತ್ತದೆ‌.ಇದೇನೂ ಜನರು ಸಾಯುವಂತಹ ಹೊಡೆತವಲ್ಲ..ಸಣ್ಣ ಪುಣ್ಣ ಏಟು ಗಳು ಅಷ್ಟೇ, ಅದರಿಂದ ದೊಡ್ಡ ಅನಾಹುತವಾಗದಂತೆ ಎಚ್ಚರ ವಹಿಸುತ್ತಾರೆ‌.ಈ ದೈವದಿಂದ ಹೊಡೆತ ತಿನ್ನುವುದು ಒಂದು ಹರಿಕೆಯಾಗಿದೆ.ಆದ್ದರಿಂದ ಈ ಹರಿಕೆ ಹೇಳಿಕೊಂಡ ಭಕ್ತರು ಬೊಬ್ಬೆ ಹಾಕಿ ದೈವವನ್ನು ಕೆರಳಿಸಿ ಅದರಿಂದ ಹೊಡೆತ ತಿನ್ನುತ್ತಾರೆ‌.ನಂತರ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಾರೆ‌. © ಡಾ.ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ಬ್ಯಾಟರಾಯನ ಪುರ,ಬೆಂಗಳೂರು
ಆಧಾರ : ತೆಯ್ಯಂ ಕ್ಯಾಲೆಂಡರ್: ಚಂದ್ ಕಡೆಮ್