Wednesday 16 April 2014

ನನ್ನ ಮೊದಲ ಕೃತಿ –ಅರಿವಿನಂಗಳದ ಸುತ್ತ



 ನನ್ನ 20 ಕೃತಿಗಳಲ್ಲಿ ಮೊದಲಿನದ್ದು ಅರಿವಿನಂಗಳದ ಸುತ್ತ ಎಂಬ ಶೈಕ್ಷಣಿಕ ಬರಹಗಳ ಸಂಕಲನ .ಇದು 2006 ರಲ್ಲಿ ಪ್ರಕಟವಾಗಿದೆ.ವಿಜಯ ಕರ್ನಾಟಕ ,ಹೊಸ ದಿಗಂತ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಶಿಕ್ಷಣ ಸಂಬಂಧಿ ಲೇಖನಗಳಲ್ಲಿ ಹದಿನೈದನ್ನು ಆಯ್ದು ಒಟ್ಟು ಮಾಡಿ “ಅರಿವಿನಂಗಳದ ಸುತ್ತ”ಕೃತಿಯಲ್ಲಿ ಪ್ರಕಟಿಸಲಾಗಿದೆ.

ಬರೆಯುವ ಓದುವ ಅಭಿನಯಿಸುವ ಉತ್ಸಾಹ ನನಗೆ ಚಿಕ್ಕಂದಿನಿಂದಲೂ ಇತ್ತು ,ನನ್ನ ನೇರ ನಡೆ, ನುಡಿ ,ವೇಗ ,ಅತ್ಯುತ್ಸಾಹ ಅನೇಕರಿಗೆ  ಅಹಂಕಾರ ಎನಿಸಿದ್ದೂ ಇದೆ!

ಯಾಕೆ ಹೀಗೆ ಅಂತ ನನಗೆ ಗೊತ್ತಾಗುತ್ತಿರಲಿಲ್ಲ !ಇತ್ತೀಚಿಗೆ ಒಂದೊಂದೇ ಬದುಕಿನ ಸತ್ಯಗಳು ಅರಿವಾಗ ತೊಡಗಿವೆ !!ಬೇರೆಯವರ ಗೆಲುವನ್ನು ತಮ್ಮ ಸೋಲು ಎಂದು ಭಾವಿಸುವ ಅನೇಕ ಮಂದಿ ಇದ್ದಾರೆ.ಇಂಥವರಿಂದ ಮುಂದೆ ಸಾಗುವ ಉತ್ಸಾಹ ಇರುವ ನನ್ನಂಥವರಿಗೆ ಸಮಸ್ಯೆಗಳು ಎದುರಾಗುತ್ತವೆ .ಆದರೆ ಬರೆಯದೆ ಇರಲು ನನಗೆ ಸಾಧ್ಯವಾಗುತ್ತಿಲ್ಲ! .

ಸುತ್ತುಮುತ್ತಲಿನ ಆನೇಕ  ವಿಚಾರಗಳು ಮನಸ್ಸಿಗೆ ತೀರಾ ತಟ್ಟಿದಾಗ ನನಗೆ ಬರೆಯುವ ಹುರುಪು ಹುಟ್ಟುತ್ತದೆ .ನಾನು ವರ್ಷದಿಂದ ಸುಮಾರು 18 ವರ್ಷಗಳಿಂದ (1996 ನೇ ಇಸವಿಯಿಂದ ) ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ .

ಪ್ರಾಥಮಿಕ ಶಾಲೆಯಿಂದ ಆರಂಭಿಸಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜ್ ,ಪದವಿ ಕಾಲೇಜ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ .ಸ್ವಲ್ಪ ಸಮಯ ಪ್ರಾಂಶುಪಾಲೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ .
ಈ ಎಲ್ಲ ಸಂದರ್ಭಗಳಲ್ಲಿ ನಾನು ನೋಡಿದ ,ಮನಸಿಗೆ ತಾಗಿದ ವಿಚಾರಗಳನ್ನು ಪತ್ರಿಕೆಗಳಿಗೆ ಬರೆಯ ತೊಡಗಿದೆ.

ನನ್ನ ಮೊದಲ ಪ್ರಕಟಿತ ಲೇಖನ “ನಿಮಗೆಂಥ ಶಿಕ್ಷಕರು ಬೇಕು ?” ಇದು 05 ಸೆಪ್ಟೆಂಬರ್ 2001 ರಂದು ಶಿಕ್ಷಕ ದಿನಾಚರಣೆಯಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಲೇಖನ ಬರೆಯಲು ,ಪತ್ರಿಕೆಗಳಿಗೆ ಕಳುಹಿಸಲು ಪ್ರೋತ್ಸಾಹ ನೀಡಿದವರು ನಾನು ಆಗ ಕೆಲಸ ಮಾಡುತ್ತಿದ್ದ ಚಿನ್ಮಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಸಾಂತ್ರಾಯ ಹಾಗೂ ಹಿರಿಯ ಸಹೋದ್ಯೋಗಿಗಳಾಗಿದ್ದ ಶ್ರೀಮತಿ ಅರುಣಾ ,ಶ್ರೀಮತಿ ಶೈಲಜಾ ,ಶ್ರೀಮತಿ ಲೇನೆಟ್ ಮೊದಲಾದವರು.
ನಾವೆಲ್ಲಾ ಒಂದೇ ದೋಣಿಯ ಪಯಣಿಗರಾಗಿದ್ದೆವು!ತಲೆಗೆಳೆದರೆ ಕಾಲಿಗೆ ಬರುವುದಿಲ್ಲ ,ಕಾಲಿಗೆಳೆದರೆ ತಲೆಗೆ ಬರುವುದಿಲ್ಲ ಎಂಬ ಪರಿಸ್ಥಿತಿ ಎಲ್ಲರದ್ದು !ಆದರೆ ನಾವಿಲ್ಲಿ ಅತ್ಯಂತ ಸಂತಸದಿಂದ ಇದ್ದೆವು ಹೇಳುದು ಕೂಡಾ ನನಗೆ ಸ್ಮರಣೀಯ ವಿಚಾರ

ಇದೊಂದು ಅನೇಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರು ನೀಡಿದ ಉತ್ತರಗಳನ್ನು ಪ್ರಸಕ್ತ ಸಂದರ್ಭದ ಎದುರು ಇಟ್ಟುಕೊಂಡು ವಿವೇಚಿಸಿದ ಲೇಖನ .ಅನೇಕ ವಿದ್ಯಾರ್ಥಿಗಳು “ನಮಗೆ ನಗು ನಗುತ್ತ ಹಸನ್ಮುಖಿಗಳಾಗಿರುವ ಶಿಕ್ಷಕರು ಬೇಕು ಎಂದು ಹೇಳಿದ್ದರು .
ಶಿಕ್ಷಕರಿಂದ ತಾಳ್ಮೆ ,ನಗುಮುಖ ,ಸ್ನೇಹ ,ಪ್ರೀತಿ ,ನಿಸ್ಪಕ್ಷಪಾತ ದೃಷ್ಟಿ ಗಳೇ ಮೊದಲಾದ ಗುಣಗಳನ್ನು ವಿದ್ಯಾರ್ಥಿಗಳು ನಿ ರೀಕ್ಷಿಸುತ್ತಾರೆ.

ಹೌದು ವಿದ್ಯಾರ್ಥಿಗಳು ಹಾಗೆ ಬಯಸುವುದರಲ್ಲಿ ತಪ್ಪಿಲ್ಲ ,ಶಿಕ್ಷಕ ಹಾಗೆ ಇರಬೇಕಾದ್ದು ಕೂಡಾ .
ಒಳ್ಳೆಯ ಮತ್ತು ಕೆಟ್ಟ ಶಿಕ್ಷಕರ ಗುಣಾವಗುಣಗಳನ್ನು ಚರ್ಚಿಸುತ್ತಾ “ಸರಿಯಾಗಿ ವೇತನ ಸೌಲಭ್ಯಗಳು ಇಲ್ಲದೆ ಇದ್ದಾಗ ಅತ್ಯಧಿಕ ಕೆಲಸದ ಒತ್ತಡ ಹಾಕಿದಾಗ ಇಂಥ ಒಳ್ಳೆಯ ಗುಣಗಳು ಶಿಕ್ಷಕರಲ್ಲಿ ಇರಲು ಸಾಧ್ಯವೇ’ ಎಂಬ ಪ್ರಶ್ನೆಯನ್ನು ಈ ಲೇಖನದಲ್ಲಿ ಎತ್ತಿದೆ.ಈ ಪ್ರಶ್ನೆಗೆ ಅಂದು ಮಾತ್ರವಲ್ಲ ಇಂದಿಗೂ ಉತ್ತರ ಸಿಕ್ಕಿಲ್ಲ

ಇಲ್ಲಿ ನಾನು ಹೇಳ ಹೊರಟಿದ್ದು ಆನುದಾನ ರಹಿತ ಶಾಲೆಯ ಶಿಕ್ಷಕರ ಬಗ್ಗೆ .ಅನುದಾನ ರಹಿತ ಶಾಲೆಗಳು ಲಕ್ಷಗಟ್ಟಲೆ ಡೊನೇಷನ್ ಶುಲ್ಕ ವನ್ನು ವಿದ್ಯಾರ್ಥಿಗಳ ಹೆತ್ತವರಿಂದ ಪಡೆಯುತ್ತವೆ.ಆದರೆ ಶಿಕ್ಷಕರಿಗೆ ಮಾತ್ರ ಒಳ್ಳೆಯ ವೇತನ ಹಾಗೂ ಇತರ ಸೌಲಭ್ಯಗಳನ್ನು ಕೊಡುವುದಿಲ್ಲ .ಅನುದಾನ ರಹಿತ ಶಿಕ್ಷಣ ಸಂಸ್ಥೆ ತೆರೆಯುವ ಮುನ ಅನುಮತಿ ಪಡೆಯುವಾಗ 

ಸರಕಾರೀ ನಿಯಮದಂತೆ ಶಿಕ್ಷಕರಿಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿರುತ್ತವೆ.ಆದರೆ ಅದು ಕಾರ್ಯ ರೂಪಕ್ಕೆ ಬರುವುದೇ ಇಲ್ಲ ! ಈ ಬಗ್ಗೆ ಅನುಮತಿ ಕೊಟ್ಟ ಸರಕಾರ ಯೋಚಿಸುವುದಿಲ್ಲ .ಶಿಕ್ಷಕರಿಗೆ ಪ್ರಶ್ನಿಸಲು ಧೈರ್ಯ ಇರುವುದಿಲ್ಲ !ಉಸಿರೆತ್ತಿದರೆ ಕೆಲಸದಿಂದ ತೆಗೆದು ಹಾಕಿದರೂ ಹಾಕಬಹುದು!ಹೇಳಲಾಗುವುದಿಲ್ಲ!
ಇನ್ನು  ಡೊನೇಷನ್ ಕೊಡುವ ಹೆತ್ತವರು ಇದು ನಮ್ಮ ಸಮಸ್ಯೆ ಅಲ್ಲ ಎಂಬಂತೆ ಸುಮ್ಮನಿರುತ್ತಾರೆ.ಇದರಿಂದಾಗಿ ಇಂದು ಶಿಕ್ಷಕರಾಗಲು ಪ್ರತಿಭಾವಂತರು ಮುಂದೆ ಬರುತ್ತಿಲ್ಲ .ಸರಕಾರೀ ಕೆಲಸ ಸಿಕ್ಕರೆ ಆಯಿತು !ಸಿಗದಿದ್ದರೆ ಇವರು ಜೀವನ ಇಡೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ !ಪ್ರತಿಭಾವಂತರು ಶಿಕ್ಷಣ ಕ್ಷೇತ್ರಕ್ಕೆ ಬಾರದೆ ಇದ್ದಾಗ ಶಿಕ್ಷಣದ ಗುಣ ಮತ್ತ ತೀವ್ರವಾಗಿ ಕುಸಿಯುತ್ತದೆ.ಇದರಿಂದಾಗಿ ಪೋರ್ಶನ್ ಕವರ್ ಮಾಡುವ ಶಿಕ್ಷಕರು ಎಲ್ಲೆಡೆ ಸೃಷ್ಟಿಯಾಗುತ್ತಿದ್ದಾರೆ.

ಪ್ರೌಢ ಶಾಲಾ ಶಿಕ್ಷಕರಿಗೆ  ವಾರಕ್ಕೆ 26-27 ಅವಧಿಗಳನ್ನು ಸರಕಾರ ನಿಗಧಿ ಪಡಿಸಿದೆ.ಆದರೆ ಖಾಸಗಿ ಶಾಲೆಗಳಲ್ಲಿ ವಾರಕ್ಕೆ 36-38 ಅವಧಿ ಪಾಠ ಮಾಡಬೇಕಾಗುತ್ತದೆ !ಅನಂತರ ಮೌಲ್ಯ ಮಾಪನ ಸೇರಿದಂತೆ ಇತರ ಕಾರ್ಯಗಳನ್ನು ಮನೆಗೆ ತಂದು ಮಾಡಬೇಕಾಗುತ್ತದೆ.ಈ ರೀತಿಯ ಅತಿಯಾದ ದುಡಿತದಿಂದಾಗಿ ಶಿಕ್ಷಕರು ಧ್ವನಿ ಸಂಬಂಧಿತ ಹಾಗೂ ಇತ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ !
ಇಂಥ ವಿಚಾರಗಳನ್ನು ನಿಮಗೆಂಥ ಶಿಕ್ಷಕರು ಬೇಕು ?ಲೇಖನದಲ್ಲಿ ಚರ್ಚಿಸಲಾಗಿದೆ .

“ದಡವರಿಯದ ಅಲೆಗಳು “ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದೆ ಸಾವಿನತ್ತ ಮುಖ ಮಾಡುತ್ತಿರುವ ಯಾವ ಜನಾಂಗದ ಬಗ್ಗೆ ,ಅವರಿಗೆ ದೊರೆಯಬೇಕಾದ ಸೂಕ್ತ ಸಾಂತ್ವನ ಮಾರ್ಗ ದರ್ಶನದ ಬಗ್ಗೆ ಚರ್ಚಿಸಿದ ಬರಹ .

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಬಹು ಚರ್ಚಿತ ಬರಹ ,ಅಕ್ಕ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ ,ತಮಿಳ್ ನಾಡು ,ಕೇರಳಗಳಲ್ಲಿ ಅವರವರ ರಾಜ್ಯ ಭಾಷೆಗಳಲ್ಲಿ ಪದವಿ ಪೂರ್ವ ಶಿಕ್ಷಣ ದೊರೆಯುತ್ತದೆ .ಇಲ್ಲಿ ವಿಜ್ಞಾನ ಶಿಕ್ಷಣ ಕೂಡಾ ಅವರ ಭಾಷೆಯಲ್ಲಿಯೇ ಇರುತ್ತದೆ.ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ವಿಜ್ಞಾನ ಶಿಕ್ಷಣ ಕನ್ನಡದಲ್ಲಿ ಸಿಗುತ್ತಿಲ್ಲ ಇದರಿಂದಾಗಿ ಗ್ರಾಮೀಣ ಕನ್ನಡ ಮಾಧ್ಯಮದ ಮಕ್ಕಳು ಉನ್ನತ ವಿಜ್ಞಾನ ಶಿಕ್ಷಣದಿಂದ  ವಂಚಿತರಾಗುವ ಬಗ್ಗೆ ಚರ್ಚಿಸಿದೆ .ಹತ್ತನೇ ತರಗತಿಯಲ್ಲಿ ವಿಜ್ಞಾದಲ್ಲಿ ಅತ್ಯುತ್ತಮ ಅಂಕ ಗಳಿಸುವ ಕನ್ನಡ ಮಾಧ್ಯಮದ ಅನೇಕ ಮಕ್ಕಳು ಪಿಯು ನಲ್ಲಿ ವಿಜ್ಞಾನದಲ್ಲಿ ಅನುತ್ತೀರ್ಣರಾಗುವುದು ಎಲ್ಲೆಡೆ ಕಾಣಿಸುತ್ತಿದೆ.ಇದಕ್ಕೆ ಇಂಗ್ಲಿಷ್ ಭಾಷೆಯ ತೊಡಕು ಕಾರಣವಾಗಿದೆ .ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಈ ಲೇಖನದ ನಂತರ ಹಂಪಿ ವಿಶ್ವ ವಿದ್ಯಾಲಯವು ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನದ ಪಾಠ ಪುಸ್ತಕವನ್ನು ಹೊರ ತಂದಿತಾದರೂ ಇದನ್ನು ಇಂಗ್ಲಿಷ್ ಭ್ರಮೆಯ ಖಾಸಗಿ ಕಾಲೇಜ್ ಗಳು ಬಿಡಿ !ಸರ್ಕಾರಿ ಕಾಲೇಜ್ ಗಳ ಅಧ್ಯಾಪಕರುಗಳಲ್ಲಿ  ನೋಡಿದವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಅಷ್ಟೇ !

ಇದರಲ್ಲಿನ ಒಂದು ಮಹತ್ವದ ಲೇಖನ “ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ “ ಇಂದಿಗೂ ಅತ್ಯಂತ ಪ್ರಸ್ತುತವಾಗಿಯೇ ಇದೆ.ಹೆಚ್ಚಿನ ಮೆಡಿಕಲ್ ಕಾಲೇಜ್ ಗಳು ಖಾಸಗಿ ಹಿಡಿತದಲ್ಲಿವೆ.ಇವು ಸರಕಾರಕ್ಕೆ ಕೊಡುವ ಸೀಟ್ಗಳು ತೀರ ಕಡಿಮೆ ,ಸಾಮಾನ್ಯ ವರ್ಗದ ಖಾಸಗಿ ಕಾಲೇಜ್ಗಳು 30 % ಅಲ್ಪ ಸಂಖ್ಯಾತರ ಕಾಲೇಜ್ 20% ಸೀಟ್ ಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎನ್ನುವ ನಿಯma ಇದೆ .ಆದರೆ ಅದನ್ನೂ ಸರಿಯಾಗಿ ಕೊಡುತ್ತಿಲ್ಲ .ಯಾವುದಾದರೂ ಬೇಡಿಕೆ ಇಲ್ಲದ ಪಾರಾ ಮೆಡಿಕಲ್ ಸೀಟ್ ಅನ್ನು ಕೊಟ್ಟು ಕಣ್ಣೋರಸುವ ನಾಟಕ ಮಾಡುತ್ತಿವೆ .ಬಹಳ ಬೇಡಿಕೆಯ ಜೆನರಲ್ ಮೆಡಿಸಿನ್ ,ಒಪ್ತೊಮಾಲಜಿ ,ಹಾರ್ಟ್ ಸರ್ಜರಿ ಮೊದಲಾದ ಬೇಡಿಕೆ ಇರುವ ಮಹತ್ವದ ವಿಭಾಗಗಳಲ್ಲಿ ಪ್ರತಿಭಾವಂತರಿಗೆ ಅವಕಾಶವೇ ಸಿಗುವುದಿಲ್ಲ !

ಎಲ್ಲ ಸೀಟ್ ಗಳು ಉಳ್ಳವರ ಪಾಲಾಗುತ್ತದೆ.ಮತ್ತು ಇದನ್ನು ಪಡೆಯುದಕ್ಕಾಗಿ ಕೋಟಿಗಟ್ಟಲೆ ದುಡ್ಡು ಕೊಡಬೇಕಾಗುತ್ತದೆ .ಕೋಟಿಗಟ್ಟಲೆ ಖರ್ಚು ಮಾಡಿದ ನಂತರ ಅದನ್ನು ಹಿಂದೆ ಪಡೆಯಲು ವೈದ್ಯರುಗಳು ಅಡ್ಡದಾರಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನಿಲ್ಲಿ ಚರ್ಚಿಸಿದೆ.

ಪರೀಕ್ಷೆಗಳು ಬರುತ್ತಿವೆ ,ಆರಂಭಿಕ ಹಂತದಲ್ಲಿ ಇಂಗ್ಲಿಷ್ ಶಿಕ್ಷಣ,ಶಿಕ್ಷಕ ಈಗ ಲಾಟರಿ ಮಾರಾಟಗಾರ ,ಮಕ್ಕಳ ಗಣತಿ ಶಿಕ್ಷಕರಿಗೆ ತಿಥಿ ಇತ್ಯಾದಿ ಹದಿನೈದು  ಸಕಾಲಿಕ ಬರಹಗಳು ಈ ಕೃತಿಯಲ್ಲಿವೆ.ಇದರಲ್ಲಿನ ಎಲ್ಲ ಶೈಕ್ಷಣಿಕ ಲೇಖನಗಳೂ ವಿಜಯ ಕರ್ನಾಟಕ ,ಹೊಸದಿಗಂತ ಮತ್ತು ಮಂಗಳ ಪತ್ರಿಕೆಗಳಲ್ಲಿ ಪ್ರಕಟವಾದವುಗಳೇ ಆಗಿವೆ .ಈ ಚಿಂತನೆಗಳು ಇಂದಿಗೂ ಪ್ರಸ್ತುತವೇ ಆಗಿವೆ ಕೂಡಾ 

ಮೊದಲ ಕೃತಿ ಪ್ರಕಟಣೆಯ ಸಂಭ್ರಮದ ಜೊತೆಗೆ ಪ್ರಕಟಣೆಯ ಒಳ ಹೊರಗಿನ ತುಸು ಪರಿಚಯ ಇಲ್ಲಿ ಆಯಿತು!ಪುಸ್ತಕ ಪ್ರಕಟಣೆ ಸೇರಿದಂತೆ ನಮ್ಮ ಯಾವುದೇ ಕಾರ್ಯಕ್ಕೂ ಎಲ್ಲಿಂದಲೂ ಬೆಂಬಲ ಸಿಗುವುದಿಲ್ಲ .ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡ ಬೇಕು,"ನಮ್ಮ ತಲೆಗೆ ನಮ್ಮ ಕೈ  ಎನ್ನುವ ಜೀವನದ ಮೊದಲ ಪಾಠ ಕೂಡಾ ನನಗೆ ಜೊತೆಯಲ್ಲಿಯೇ ದೊರೆಯಿತು !.

Monday 7 April 2014

ಬೆಟ್ಟವಾಗುವ ಪುಟ್ಟ ವಿಚಾರಗಳು -ಡಾ.ಲಕ್ಷ್ಮೀ ಜಿ ಪ್ರಸಾದ









                                           


                          


 ಅದೊಂದು ಪುಟ್ಟ ಊರು ,ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಪ್ರದೇಶ , ಅಲ್ಲಿ ಗಂಡಸರು ಅನ್ಯಾಯವನ್ನು ಪ್ರಶ್ನಿಸಿದರೆ ಅದು ನ್ಯಾಯಯುತವಾದ ಹೋರಾಟ ,ಹೆಣ್ಣು ಪ್ರಶ್ನಿಸಿದರೆ ಅದು ಜಗಳಗಂಟಿತನ !ಇದು ಆ ಒಂದು ಊರಿನ ಕಥೆ ಅಲ್ಲ .ಎಲ್ಲೆಡೆ ಕಂಡು ಬರುವ ವಿಚಾರ!
ಅಲ್ಲಿಂದ ಅನೇಕ ಮಹಿಳೆಯರು ಸ್ವಲ್ಪ ದೂರದ ಪೇಟೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ .ಒಂದು ದಿನ ದೂರದಿಂದ ಓಡಿ  ಬಂದ ಮಹಿಳೆ  ಏದುಸಿರು ಬಿಟ್ಟು ಕೊಂಡು ಬಸ್ಸು ಹತ್ತಿದರು ,ಸುತ್ತ ಮುತ್ತ ನೋಡಿದರೆಎಲ್ಲ ಸೀಟ್ ಗಳೂ ಭರ್ತಿಯಾಗಿದ್ದವು.ಓಡಿ  ಬಂದು ಸುಸ್ತಾಗಿದ್ದ ಮಹಿಳೆಗೆ ಗಂದಸೊಬ್ಬರು ಮಹಿಳೆಗಾಗಿ ಮೀಸಲಿರಿಸಿದ್ದ ಸೀಟಿನಲ್ಲಿ ಕುಳಿತುಕೊಂಡದ್ದು ಕಾಣಿಸಿತು ,ನಿರ್ವಾಹಕರಲ್ಲಿ ಅವರನ್ನು ಎಬ್ಬಿಸಿ ಕೊಡುವಂತೆ ಕೇಳಿದರು .ನೀವೇ ಕೇಳಿ ಎಂದಾತ ನುಣುಚಿಕೊಂಡು ಮುಂದೆ ಹೋಗಿ ನಿಂತ .ಈ ಮಹಿಳೆ  ಕುಳಿತಿದ್ದ ಆ ಗಂಡಸಲ್ಲಿ ಎದ್ದು ಸೀಟು ಕೊಡುವಂತೆ ಹೇಳಿದರು.ಅವರ ಎದುರೆ ನಿರ್ವಾಹಕ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಎದ್ದು ಹೋದದ್ದು ಅವರಿಗೆ ಕುಮ್ಮಕ್ಕು ಕೊಟ್ಟಿತು.”ನಾನು ಪ್ರಾರಂಭದಿಂದಲೇ ಕುಳಿತಿದ್ದೇನೆ ಏಳಲ್ಲ” ಎಂದರು ,ಅವರಿಗೆ ತುಸು ವಯಸ್ಸೂ ಆಗಿತ್ತು .ವಯಸ್ಸಾದವರನ್ನು ಏಳು ಅಂತ ಹೇಳೋಕೆ ನಾಚಿಕೆ ಆಗಲ್ವ?ಅಂತ ಯಾರೋ ಗಂಡಸರು ಹಿಂದಿನಿಂದ ಹೇಳಿದರು .ಈ ಮಹಿಳೆಗೂ ಆಗ ಸಿಟ್ಟು ಬಂತು .ವಯಸ್ಸಾಗಿದ್ರೆ ಹಿರಿಯ ನಾಗರಿಕರ ಸೀಟು ಇದೆ ಅಲ್ಲಿ ಕುಳಿತುಕೊಳ್ಳಿ ಎಂದರು .ಆ ಸೀಟಿನಲ್ಲಿ ಇಬ್ಬರು ಯುವಕರು  ಕುಳಿತಿದ್ದರು.ಆ ಮಹಿಳೆ ಮತ್ತು  ಆ ಗಂಡಸಿನ ನಡುವೆ ಚಕ ಮುಕಿ ನಡೆಯಿತು .ಬಸ್ಸಿನಲ್ಲಿದ್ದ ಕೆಲವು ಗಂಡಸರು ಆ ಗಂಡಸಿನ ಪರ ಸೇರಿ ಮಾತಾಡಿದರು.ಆಗ ಮಹಿಳೆ ನಿರ್ವಾಹಕನಲ್ಲಿ ಆತನನ್ನು ಎಬ್ಬಿಸಿಕೊಡುವಂತೆ ಹೇಳಿದರು .ಮಾತಿಗೆ ಮಾತು ಬೆಳೆಯಿತು .ನಿರ್ವಾಹಕನೊಂದಿಗೆ ಚಾಲಕನೂ ಸೇರಿಕೊಂಡು ಆ ಮಹಿಳೆಗೆ ಹೊಡೆಯಲು ಬಂದರು. ಆ ಬಸ್ಸಿನಲ್ಲಿ ಅನೇಕ ಸ್ತ್ರೀಯರೂ ಇದ್ದರು .ಅಷ್ಟೆಲ್ಲ ಆದರೂ ಆ ಬಸ್ಸಿನಲ್ಲಿದ್ದ  ಒಂದೇ ಒಂದು ಸ್ತ್ರೀ ಕೂಡ ತುಸುವಾದರೂ ಆ ಮಹಿಳೆ ಪರ ಧ್ವನಿ ಎತ್ತಲಿಲ್ಲ .ಅಷ್ಟು ಹೊತ್ತಿಗಾಗುವಾಗ ಇನ್ನೋರ್ವ ಮಹಿಳೆ ಬಸ್ಸನ್ನು ಏರಿದರು .ಅಲ್ಲಿನ ಗಲಾಟೆ ತಿಳಿದು ಆ ಮಹಿಳೆಯನ್ನು ಎಲ್ಲರು ಸೇರಿ ಹೊಡೆದು ಹಾಕಿಯಾರೆಂದು ಕೂಡಲೇ ತಮ್ಮ ಮೊಬೈಲ್ ಮೂಲಕ  ಹತ್ತಿರದ ಪೋಲಿಸ್ ಸ್ಟೇಷನ್ ಗೆ ಮಾಹಿತಿ ನೀಡಿದರು ,ಮುಂದಿನದು ಎಲ್ಲರಿಗೂ ಗೊತ್ತಿರುವದ್ದೆ !ಬಸ್ಸನ್ನು ಸ್ಟೇಷನ್ ಗೆ ಕೊಂಡೊಯ್ದರು .ಆಗ ಅಲ್ಲಿದ್ದ ಮಹಿಳೆಯರಿಗೆ ಗಂಟಲಲ್ಲಿ ಸ್ವರ ಬಂತು .ಅಯ್ಯೋ ಇವಳಿಂದಾಗಿ ನಮಗೆ ಆಫೀಸ್ಗೆ ತಡ ಆಗುತ್ತದೆ ಅಂತ ಅವರನ್ನೇ ಬಯ್ಯಲು ಆರಂಭ ಆಯಿತು .ಮುಂದೆ ಆ ನಿರ್ವಾಹಕ , ಚಾಲಕ ಮತ್ತು ಕುಳಿತಿದ್ದ ಗಂಡಸು ಮೇಲೆ ದೂರು ದಾಖಲಾಯಿತು .ಇಷ್ಟಕ್ಕೂ ಆದದ್ದೇನು ?ಆ ಮಹಿಳೆ ನ್ಯಾಯವಾದದ್ದನ್ನೇ ಕೇಳಿದ್ದರು ! ಆಗ ನಿರ್ವಾಹಕ ಹಿರಿಯ ನಾಗರೀಕರ ಸೀಟಿನಲ್ಲಿ ಕುಳಿತಿದ್ದ ಯುವಕರನ್ನು ಎಬ್ಬಿಸಿ ,ಮಹಿಳೆಯರ ಸೀಟಿನಲ್ಲಿ ಕುಳಿತಿದ್ದವರಿಗೆ ಕೊಡಿಸಿ ಆ ಸೀಟನ್ನು ಆ ಮಹಿಳೆಗೆ ಕೊಡಿಸುತ್ತಿದ್ದರೆ ಯಾವ ಸಮಸ್ಯೆಯೇ ಆಗುತ್ತಿರಲಿಲ್ಲ.
ಅಲ್ಲೊಂದು ಪುಟ್ಟ  ಸಂಸ್ಥೆ  ,ಇಪ್ಪತ್ತೈದು ಮೂವತ್ತು ಮಂದಿ ಕೆಲಸ ಮಾಡುತ್ತಾರೆ.ಹತ್ತು ಹನ್ನೆರಡು ಮಂದಿ ಅದರಲ್ಲಿ ಮಹಿಳೆಯರೂ ಇದ್ದಾರೆ .ಎರಡು ಶೌಚಾಲಯಗಳೂ ಇವೆ .ನಮಗೆ ಬೇರೆ ಟಾಯ್ಲೆಟ್ ಬೇಕು ಎಂಬ ಅಹವಾಲು ಮಹಿಳೆಯರದ್ದು.ಬಾಹ್ಯವಾಗಿ ಹೇಳಲು ಯಾರೂ ತಯಾರಿಲ್ಲ  .ಅಂತು ಇಂತೂ ಒಂದು ಮೀಟಿಂಗ್ ನಲ್ಲಿ  ಓರ್ವ ಮಹಿಳೆ ಈ ಬಗ್ಗೆ ಪ್ರಸ್ತಾಪ ಮಾಡಿದರು .ಕೂಡಲೇ ಬೇರೆ ಒಂದು  ವ್ಯವಸ್ಥೆ ಮಾಡಲು ಫಂಡ್ ಇಲ್ಲ ಅನ್ನುವ ಸಿದ್ಧ ಉತ್ತರ ಎದುರಾಯಿತು .ಐವತ್ತು ವರ್ಷದಿಂದ ಈ ಸಂಸ್ಥೆ ನಡೆಯುತ್ತಾ ಬಂದಿದೆ ,ಇಷ್ಟರ ತನಕ ಯಾರಿಗೂ ಏನೂ ತೊಂದರೆ ಆದ ಬಗ್ಗೆ ಯಾರೂ ಹೇಳಿಲ್ಲ ,ಈಗೇನು ತಕರಾರು ?ಇಷ್ಟು ಇಲ್ಲದ ಸಂಸ್ಥೆಗಳು ಎಷ್ಟಿಲ್ಲ ಇತ್ಯಾದಿಯಾಗಿ ತಲೆಗೊಂದರಂತೆ ಮಾತಾಡಿದರು ಅಲ್ಲಿನ ಪುರುಷ ಸಹೋದ್ಯೋಗಿಗಳು .ನಿತ್ಯ ಕಿರಿ ಕಿರಿ ಅನುಭವಿಸುವ ಮಹಿಳೆಯರು ತುಟಿ ಪಿಟಕ್ಕೆನ್ನಲಿಲ್ಲ!.ಮತ್ತೆ ಎಂದಿನಂತೆ ದಿನಗಳು ಉರುಳಿದವು !ಅಲ್ಲಿ ಬಹಳ ಸುಲಭದ ಪರಿಹಾರೋಪಾಯ ಇತ್ತು .ಎರಡರಲ್ಲಿ ಒಂದನ್ನು ಮಹಿಳೆಯರು ,ಇನ್ನೊಂದನ್ನು ಪುರುಷರು ಬಳಸಿದರಾಯಿತು .ಆದರೆ ಅಷ್ಟರ ಮಟ್ಟಿನ ಉದಾರತೆಯೂ ಅಲ್ಲಿರಲಿಲ್ಲ . ಆ ವಿಷಯ ಪ್ರಸ್ತಾಪಿಸಿದ ಮಹಿಳೆ ಎಲ್ಲರ ಕೆಂಗಣ್ಣಿಗೆ ಪಾತ್ರರಾಗ ಬೇಕಾಯಿತು . ಮಾತು ಮಾತಿಗೆ ಅವರನ್ನು ಹಂಗಿಸುವುದು ಭಂಗಿಸುವುದು ಶುರು ಆಯ್ತು .ಅವರ ಬದುಕು ಅಲ್ಲಿ ನರಕ ಸದೃಶವಾಯಿತು.

ಇಂತಹಾದ್ದೆ ಇನ್ನೊಂದು ಊರು.ಅಲ್ಲೊಂದು ಶಾಲೆ.ಮುಖ್ಯೋಪಾಧ್ಯಾಯರು ಬಹಳ ಶಿಸ್ತಿನ ಸಿಪಾಯಿ .ಶಾಲೆಯಲ್ಲಿ ಒಳ್ಳೆ ಫಲಿತಾಂಶ ಇತ್ತು  ಶಾಲೆಗೆ  ಒಳ್ಳೆ ಹೆಸರಿತ್ತು .ಹತ್ತು ಹನ್ನೆರಡು ಮಂದಿ ಶಿಕ್ಷಕರಿದ್ದರು .ಅದರಲ್ಲಿ ಒಬ್ಬರು ಶಿಕ್ಷಕಿಯೂ ಇದ್ದರು !ಹೆಚ್ಚಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿಯೇ ಬರುತ್ತಿದ್ದರು.ಆದರೆ ಶಿಕ್ಷಕರು ನಡುವೆ ಫ್ರೀ ಇದ್ದಾಗ ಕಾಫಿಗೆ ಉಟಕ್ಕೆ ತಿಂಡಿಗೆ ಅಂತ ಹೊರ ಹೋಗಿ ತಿರುಗಾಡಿ ಬರುತ್ತಿದ್ದರು. ಮನೆ ದೂರ ಇರುವ ಶಿಕ್ಷಕರು ಕೋಣೆ ಅವಧಿ ತರಗತಿ ಇಲ್ಲದಿದ್ದರೆ ಬೇಗ ಮನೆಗೆ ಹೋಗುತ್ತಿದ್ದರು .ಅಲ್ಲಿದ್ದ  ಶಿಕ್ಷಕಿಯ ಮನೆ ಶಾಲೆಗೆ ಹತ್ತಿರದಲ್ಲೇ ಇತ್ತು .ಮನೆಯಿಂದಲೇ ಬುತ್ತಿ ತರುವ ಕಾರಣ ಇವರು ಶಾಲೆಗೆ ಬಂದ ಮೇಲೆ ಮುಗಿಯುವ ತನಕ ಹೊರ ಹೋಗುತ್ತಿರಲಿಲ್ಲ .ಒಂದಿನ ಏನೋ ಕಾರಣಕ್ಕೆ ಆ  ಶಿಕ್ಷಕಿ ಒಂದಿನ ಶಾಲೆಗೆ ಬರುವಾಗ ಅರ್ಧ ಗಂಟೆ ತಡ ಆಯಿತು!ಮುಖ್ಯೋಪಾಧ್ಯಾಯರು ಜೋರು ಮಾಡಿ ಸಿ ಎಲ್ ಬರೆದು ಕೊಡಿ ಎಂದರು !ದುರದೃಷ್ಟವಶಾತ್ ಅವರ ಖಾತೆಯಲ್ಲಿ ಸಿ ಎಲ್ ,ಇ ಎಲ್ ಗಳು ಖಾಲಿಯಾಗಿದ್ದವು !
ಆಗ ಅವರು “ಬೇರೆ ಶಿಕ್ಷಕರು ನಡು ನಡುವೆ ಹೊರಗೆ ಹೋಗಿ ಬರುವುದಿಲ್ಲವೇ ?ಅನೇಕರು ಸಂಜೆ ಬೇಗ ಮನೆಗೆ ಹೊಗುವುದಿಲ್ಲವೇ ? ಎಂದು ಪ್ರಶ್ನಿಸಿದರು.ಆಗ ಬೇರೆಯವರ ವಿಷಯ ನಿಮಗೆ ಬೇಡ ಎಂದು ದಬಾಯಿಸಿದರು !ಅವರ ಒಂದು ದಿನದ ವೇತನವನ್ನು ತಡೆ ಹಿಡಿಯಲಾಯಿತು !ಒಂದು ದಿನ ತಪ್ಪದಂತೆ ಬಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಬಹಳ ನೋವಾಯಿತು. ಈ ನಡುವೆ ಅವರು ಇತರ ಶಿಕ್ಷಕರು ಮನೆಗೆ ಬೇಗ ಹೋಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದು ಇತರ ಶಿಕ್ಷಕರ ಕಣ್ಣು ಕೆಂಪಗಾಗಲು ಕಾರಣವಾಯಿತು .ಅದರ  ಪರಿಣಾಮ  ಉತ್ತಮ  ಶಿಕ್ಷಕಿಯಾಗಿದ್ದ ಅವರು ಬೇರೆಡೆಗೆ ವರ್ಗಾವಣೆ ಪಡೆದು ಹೋದರು !ಆ ಶಾಲೆಯಲ್ಲಿ  ಆ ಹುದ್ದೆ ಖಾಲಿಯಾಗಿಯೇ ಉಳಿಯಿತು !ಗಣಿತಕ್ಕೆ ಶಿಕ್ಷಕರಿಲ್ಲದೆ ಆ ಶಾಲೆಯ ಮಕ್ಕಳು ಒದ್ದಾಡಿದರು ಪಾಪ ! ಇಷ್ಟಕ್ಕೂ ಇಲ್ಲಿ ಆದದ್ದೇನು ?ಮಹಿಳೆಗೊಂದು ,ಪುರುಷನಿಗೊಂದು ನೀತಿ ಅನುಸರಿಸಿದ್ದು ಅಷ್ಟೇ !
ಹೀಗೆ ಇನ್ನೊಂದು ಶಾಲೆ ,ಅಲ್ಲೋರ್ವ ಬಡ ವಿದ್ಯಾರ್ಥಿನಿ ಓದುತ್ತಿರುತ್ತಾಳೆ. ಅಲ್ಲಿಯ ಶಿಕ್ಷಕನೊಬ್ಬ ಆಕೆಗೆ ಮೈ ಕೈ ಮುಟ್ಟಿ ಕಿರುಕುಳ ಕೊಡ್ತಾನೆ .ಬೇರೆ ದಾರಿ ಇಲ್ಲದಾದಾಗ ಅವಳು ತನ್ನ ತಂದೆ ತಾಯಿಯಲ್ಲಿ ಹೇಳುತ್ತಾಳೆ .ಅವರು  ಆತನ ವಿರುದ್ಧ ದೂರು ನೀಡುತ್ತಾರೆ .ಆತ ಅವಳು ಓದಿ ಬರೆದು ಮಾಡದ್ದಕ್ಕೆ ಜೋರು ಮಾಡಿದ್ದಕ್ಕೆ ಹಾಗೆ ಹೇಳುತ್ತಿದ್ದಾಳೆ ಅಂತ ಹೇಳುತ್ತಾನೆ .ಮುಗಿಯಿತು ಅಲ್ಲಿಗೆ ಆತ ಹೇಳಿದ್ದೇ ಸರಿ !ಪರಿಣಾಮ ಆ ಬಡ ಹುಡುಗಿಯ ವಿದ್ಯಾಭ್ಯಾಸ ಅಲ್ಲಿಗೇ ನಿಂತು ಹೋಯಿತು ,ಅವಳದ್ದು ಮಾತ್ರ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿದ್ದ ಅವಳ ತಮ್ಮ ತಂಗಿಯರದು ಕೂಡಾ .ಯಾರೊಬ್ಬರೂ ಅವಳು ಹೇಳಿದ್ದೇಕೆ ಸತ್ಯ ಇರಬಾರದೆಂದು ಒಂದು ಕ್ಷಣವೂ ಯೋಚಿಸಲಿಲ್ಲ !ಯಾಕೆಂದರೆ ಅವಳು ಹೆಣ್ಣು ,ಆ ಶಿಕ್ಷಕ ಗಂಡು !
ಇನ್ನೊಂದು  ಸರ್ಕಾರಿ ಸಂಸ್ಥೆಯ ಇಬ್ಬರಿಗೆ ಒಂದೇ ವರ್ಷದಲ್ಲಿ   ಅವರವರ ಸಾಧನೆಗಳಿಗಾಗಿ ಪ್ರಶಸ್ತಿ ಬಂದಿರುತ್ತದೆ .ಅವರಲ್ಲಿ ಒಬ್ಬರು ಮಹಿಳೆ ,ಇನ್ನೊಬ್ಬರು ಪುರುಷ .ಮಹಿಳೆಗೆ ಪ್ರಶಸ್ತಿ ಬಂದು ಒಂದೆರಡು ತಿಂಗಳ ನಂತರ ಅದೇ ರೀತಿಯ ಪ್ರಶಸ್ತಿ ಪುರುಷನಿಗೆ ಬಂತು .ಮಹಿಳೆಗೆ ಬಂದಾಗ ಬಾಯಲ್ಲಿ ಕೂಡ ಅಭಿನಂದನೆ ಹೇಳಲಿಲ್ಲ ,ಪುರುಷನಿಗೆ ಬಂದಾಗ ಭಾರೀ ಸನ್ಮಾನ ಸತ್ಕಾರಗಳು ನಡೆದವು ! ಈ ಬಗ್ಗೆ ಆ ಮಹಿಳೆ ಪ್ರಶ್ನಿಸಿದರೆ “ಗೌರವವನ್ನು ಕೇಳಿ ಪಡೆಯಲು ಆಗುವುದಿಲ್ಲ  ಅದು ನಮ್ಮಿಷ್ಟ ನೀವು ಯಾರು ನಮ್ಮನ್ನು ಕೇಳಲು ?ಹೇಳುವ ಅಹಂಕಾರದ ಉತ್ತರ ಕಾದಿರುತ್ತದೆ , ಸರಕಾರೀ ಸಂಸ್ಥೆಯಲ್ಲಿಯೇ ಕೆಲಸ ಮಾಡುವಲ್ಲಿ ಇಷ್ಟು ಲಿಂಗ ತಾರ ತಮ್ಯ ಇರುವಾಗ ಇನ್ನು ಖಾಸಗಿ ಸಂಸ್ಥೆಗಳ ಬಗ್ಗೆ ಹೇಳಲಿಕ್ಕೆ ಏನಿದೆ ?

ಇದೇ ತರ ಇನ್ನೊಂದು ಊರು ಅಲ್ಲೊಂದು ಹೊಸ ಖಾಸಗಿ  ಕಾಲೇಜು ಪ್ರಾರಂಭ ಆಯಿತು ,ಆರಂಭದ ದಿನಗಳಲ್ಲಿ ಉಪನ್ಯಾಸಕ /ಉಪನ್ಯಾಸಕಿಯರು ಬೇರೆ ಬೇರೆ ಶಾಲೆಗಳಿಗೆ ಹೋಗಿ ತಮ್ಮ ಕಾಲೇಜ್ ಬಗ್ಗೆ ತಿಳಿಸಿ ,ಬಹಳ ಪರಿಶ್ರಮ ಪಟ್ಟು ಒಳ್ಳೆಯ ಫಲಿತಾಂಶ ತಂದು ಕೊಟ್ಟರು ,ಕಾಲ ಕ್ರಮೇಣ ಆ ಕಾಲೇಜ್ ಗೆ ವಿದ್ಯಾರ್ಥಿಗಳ ಸಂಖ್ಯೆ ಏರಿತು .ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ,ಆದ್ದರಿಂದ ಎಲ್ಲರಿಗೂ ಕಡಿಮೆ ವೇತನ ಇತ್ತು .ವಿದ್ಯಾರ್ಥಿಗಳ ಸಂಖ್ಯೆ ಏರಿದಂತೆ ಪುರುಷ ಉಪನ್ಯಾಸಕರ ವೇತನ ಏರುತ್ತಾ ಸಾಗಿತು .ಉಪನ್ಯಾಸಕಿಯರ ವೇತನ ಇದ್ದಲ್ಲೇ ಇತ್ತು ! ಈ ತಾರತಮ್ಯದ ಬಗ್ಗೆ ನೊಂದ ಉಪನ್ಯಾಸಕಿಯೊಬ್ಬರು ಒಂದಿನ ಎಲ್ಲ ಬರೆದಿಟ್ಟು ಆತ್ಮ ಹತ್ಯೆಗೆ ಯತ್ನಿಸಿದರು !

ಇನ್ನೊಂದೆಡೆ ಓರ್ವ ಮಹಿಳೆ , ಗಂಡ,  ಒಂದು ಮಗು ಇರುವ ಪುಟ್ಟ ಸಂಸಾರಅವರದು  .ಅವರಿಗೊಂದು  ಮನೆ ಮತ್ತು ಸ್ವಲ್ಪ ಜಾಗ ಇತ್ತು .ಬದುಕುವುದಕ್ಕೊಂದು ಉದ್ಯೋಗವೂ ಇತ್ತು .ಇವರ ಮನೆ ರಸ್ತೆಗೆ ಹೊಂದಿಕೊಂಡಂತಿತ್ತು, ಈ ಜಾಗದ ಮೇಲೆ ಒಬ್ಬ ಮರಿ ಪುಡಾರಿಯ ಕಣ್ಣು ಬಿತ್ತು .ಅದರ ಪಕ್ಕದ ಜಾಗವನ್ನಾತ ಖರೀದಿಸಿದ್ದ .ಇವರ ಮನೆ ಜಾಗವನ್ನು ನಂಗೆ ಕೊಡಿ ಖರೀದಿಸುತ್ತೇನೆ ಎಂದು ಹೇಳಿದ ,ಇವರು ಮಾರಲು ಒಪ್ಪಲಿಲ್ಲ !ಆಗ ಆತ ಇವರ ಮನೆ ಇರುವ ಜಾಗ ತನ್ನದು ಅಂತ ಸುಮ್ಮನೇ ಇವರ ಮೇಲೆ ಕೇಸು ಹಾಕಿ ಸತಾಯಿಸಲು ಆರಂಭಿಸಿದ .ಅದಕ್ಕೂ ಇವರು ಕ್ಯಾರೆ ಅನ್ನಲಿಲ್ಲ ಒಳ್ಳೆಯ ವಕೀಲರನ್ನು ಗೊತ್ತು ಮಾಡಿ ಹೋರಾಟ ಮಾಡಿದರು !ಇವರು ಸುಲಭಕ್ಕೆ ಬಗ್ಗುವವರಲ್ಲ ಅಂತ ಬೇರೆ ರೀತಿಯ ಕಿತಾಪತಿ ಶುರು ಮಾಡ ಹತ್ತಿದ , ಆ ಮಹಿಳೆ  ಮನೆಯಿಂದ ಹೊರ ಕಾಲಿಟ್ಟ ತಕ್ಷಣ ಕಾಡು ಕುಳಿತು ಮೈ ಕೈ ಸವರಿಕೊಂಡು ಹೋಗುವುದು ,ಅವಳಿಗೂ ತನಗೂ ಸಂಬಂಧ ಇದೆ ಎಂದು ಹೇಳುವುದು ಮಾಡ ತೊಡಗಿದ . ಈ ಬಗ್ಗೆ ಮಹಿಳೆ  ದೂರು ನೀಡಿದರು ,ಆದರೆ ಆತ ಹೇಳಿದ ಜಾಗದ ವಿಷಯದಲ್ಲಿ ಅವರ ಮೇಲೆ ಕೇಸ್ ಹಾಕಿದ್ದೇನೆ ,ಅದಕ್ಕೆ ಹಾಗೆ ದೂರು ನೀಡಿದ್ದಾರೆ ಎಂದ .ಜನ ಆತನನ್ನೇ ನಂಬಿದರು ,ಬೆಂಬಲಿಸಿದರು !ಕೆಲವರು ಸತ್ಯ ಗೊತ್ತಿರುವವರೂ ನಮಗೇಕೆ ಅಂತ ಸುಮ್ಮನಾದರು ,ಪರಿಣಾಮ ಘೋರವಾದುದು ! ಆ ಸಾತ್ವಿಕ ದಂಪತಿಗಳು ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿ ಕೊಂಡರು!ಅವರ ಮಗು ಅನಾಥವಾಯಿತು !ಒಂದು ಕ್ಷಣ ಆ ಮಹಿಳೆ ಹೇಳುವುದೂ ಸತ್ಯವಿರ ಬಹುದೆಂದು ಯೋಚಿಸಿದ್ದರೆ ,ಆತ ಕೇಸ್ ಹಾಕಿರುವುದೂ ಸತಾಯಿಸುವ ಸಲುವಾಗಿಯೇ  ಎಂದು  ಗೊತ್ತಾಗುತ್ತಿತ್ತು !ಒಂದಿನಿತು ಬೆಂಬಲ ಸಿಕ್ಕಿದ್ದರೆ ಅವರು ಚೆನ್ನಾಗಿ ಬದುಕಿ ಬಾಳುತ್ತಿದ್ದರು ಅವರು !
ಇಂತಹ ಅನೇಕ ಸುದ್ಧಿಗಳನ್ನು ನಾವು ದಿನ ನಿತ್ಯ ಕೇಳುತ್ತೇವೆ.ನೋಡುತ್ತೇವೆ ,ನೋಡಿಯೂ ಸುಮ್ಮನಾಗುತ್ತೇವೆ !ಇವೆಲ್ಲ ಬೇರೆಯವರಿಗೆ ಸಣ್ಣ ಪುಟ್ಟ ವಿಷಯಗಳು. ಆದರೆ ಲಿಂಗ ತಾರತಮ್ಯ ಎದುರಿಸಿ ಅವಹೆಳನಕ್ಕೆ ಒಳಗಾದವರ ಪಾಲಿಗೆ ಇವು ಬದುಕನ್ನೇ ನುಂಗುವಷ್ಟು ಬಲವಾಗಿರುತ್ತವೆ. ಅನೇಕ ಸಂದರ್ಭಗಳಲ್ಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ ಅದಕ್ಕೂ ಮೊದಲು ಬೇರೆವರ ಅತ್ಯಾಚಾರಕ್ಕೆ ಯತ್ನಿಸಿರುವುದು ,ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬರುತ್ತದೆ .ಅಲ್ಲೇ ಅವರಿಗೆ ಸರಿಯಾದ ಶಿಕ್ಷೆ ಆಗುತ್ತಿದ್ದರೆ ಅವರು ಅಷ್ಟು ಮುಂದುವರಿಯುತ್ತಿರಲಿಲ್ಲ ಎಂಬುದು ಗಮನಾರ್ಹವಾದದ್ದು  . ಹಾಡು  ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಕುವ ವರೆಗೂ  ಯಾರೂ ಆ ಬಗ್ಗೆ ಸುದ್ಧಿ ಚಕಾರ ಎತ್ತುವುದಿಲ್ಲ. ಆ ಬಗ್ಗೆ ಮಹಿಳೆ ದೂರು ಏನಾದರೂ ಕೊಟ್ಟರೆ ಅವಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ!ಒಂದಿನಿತಾದರೂ ಅನುಕಂಪ ಒಳ್ಳೆಯ ಮಾತುಗಳು ಬರಬೇಕಾದರೆ ಅವಳು ಸಾಯಲೇ ಬೇಕು !ಎನ್ನುವುದು ನಮ್ಮ ಸಮಾಜದ ದುರಂತ.
“.ಎಷ್ಟೋ ಜನರಿಗೆ ಹೆಂಗಸರಿಗೆ ಆ ಬಗ್ಗೆ ಮಾತನಾಡುವುದೇ ತಮ್ಮ ಘನತೆಗೆ ಕುಂದು ಬರುವ ವಿಚಾರ” ಎಂಬುದನ್ನು ನಾವು  ಅನೇಕ ಬಾರಿ ಗಮನಿಸುತ್ತೇವೆ . ಅದಕ್ಕೆ ಹೆಣ್ಣು ಮಕ್ಕಳ ವೇಷ ಭೂಷಣ ,ಹೊರಗೆ ಓಡಾಡುವುದೇ ಕಾರಣಗಳನ್ನು ಹೇಳಿ ಅದಕ್ಕೆ ಹೆಣ್ಣು ಮಕ್ಕಳೇ ಕಾರಣ ಎಂಬಂತೆ ಮಾತಾಡುತ್ತಾರೆ. ಹಾಗಿರುವಾಗ  ಅನುಭವಿಸುವ ಹೆಣ್ಣು ಮಕ್ಕಳ ಪಾಲಿಗೆ ಬೆಟ್ಟವಾಗಿ  ಕಾಡುವ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸುವರು ಯಾರಿದ್ದಾರೆ ?ಆದರೆ ಯಾರೂ ಇಂಥ ವಿಚಾರಗಳ ಬಗ್ಗೆ ಅನ್ಯಾಯಗಳ ಬಗ್ಗೆ ಪ್ರಶ್ನಿಸದೇ ಇರುವುದರಿಂದ ಇಂಥವೇ ಸಣ್ಣ ಪುಟ್ಟ ವಿಷಯಗಳು ಬೆಟ್ಟದಂತೆ ಬೆಳೆದು ಅನೇಕ ಹೆಣ್ಣು ಮಕ್ಕಳ  ಬದುಕನ್ನು ನುಂಗಿ ಹಾಕುತ್ತವೆ ,ಅವು ನಮ್ಮ ಮನೆಯ ಮಗಳು ,ತಾಯಿ ಹೆಂಡತಿ ಅಕ್ಕ ತಂಗಿಯರನ್ನೂ ಕೂಡಾ ನುಂಗ ಬಹುದು ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟು ಕೊಳ್ಳ ಬೇಕಾಗಿದೆ

Wednesday 2 April 2014

ಸಾವಿರದೊಂದು ಗುರಿಯೆಡೆಗೆ :34 ಉಳ್ಳಾಯ -ಡಾ.ಲಕ್ಷ್ಮೀ ಜಿ ಪ್ರಸಾದ

ಉಳ್ಳಾಯ ಎಂದರೆ ಒಡೆಯ ಎಂದರ್ಥ ,ಸಾಮಾನ್ಯವಾಗಿ ಅರಸು ಬಲ್ಲಾಳರನ್ನು ಯಜಮಾನನನ್ನು ಉಳ್ಳಾಯ ಎಂದೇ ಕರೆಯುತ್ತಿದ್ದರು .
ಉಳ್ಳಾಯ /ಉಲ್ಲಾಕುಳು ತುಳುನಾಡಿನ ಪ್ರಸಿದ್ಧ ದೈವತ .ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಅನೇಕ ದೈವತಗಳಿಗೆ ಆರಾಧನೆ ಇರುವಂತೆ ಉಳ್ಳಾಯ /ಉಲ್ಲಾಕುಳು ಎಂಬ ಒಂದೇ ಹೆಸರಿನಲ್ಲಿ ಅನೇಕ ಶಕ್ತಿಗಳ ಆರಾಧನೆ ಇರುವ ಸಾಧ್ಯತೆ ಇದೆ .ಉಳ್ಳಾಲ್ತಿ ಬಗ್ಗೆ ಡಾ.ಕಿಶೋರ್ ರೈ ಶೇಣಿಯವರು ಸಂಶೋಧನಾ ಅಧ್ಯಯನ ಮಾಡಿರುವುದರಿಂದ ಉಳ್ಳಾಲ್ತಿ ಕುರಿತಾದ ಅಂಕ ವಿಚಾರಗಳು ತಿಳಿದು ಬಂದಿವೆcopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಉಲ್ಲಾಕುಳು ಬಗ್ಗೆ ಡಾ.ಪೂವಪ್ಪ ಕಣಿಯೂರು ಅಧ್ಯಯನ ಮಾಡಿದ್ದಾರಾದರೂ ಆ ಕೃತಿ ಇನ್ನು ಪ್ರಕಟವಾಗಿಲ್ಲ .ಹಾಗಾಗಿ ಉಲ್ಲಕುಳು ಸಂಬಂಧಿ ಭಿನ್ನ ಭಿನ್ನ ಐತಿಹ್ಯ ಪಾದ್ದನಗಳ ಕಥೆಗಳು ಇನ್ನೂ ಲಭ್ಯವಾಗಿಲ್ಲ
ಸಾಮಾನ್ಯವಾಗಿ ಕಿನ್ನಿ ಮಾಣಿ ಪೂಮಾಣಿಯರನ್ನೇ ಉಲ್ಲಾಕುಳು ಎಂದು ಕರೆಯುತ್ತಾರೆ .

ಇವರು ಅವಳಿದೈವಗಳೆಂದು ಭಾವಿಸಲಾಗಿದೆ. ಪೂಮಾಣಿ ಎಂದರೆ ರಾಮನ ಅಂಶವೆಂದೂ ಕಿನ್ನಿಮಾಣಿ ಲಕ್ಷ್ಮಣನ ಅಂಶವೆಂದೂ ಪರಿಭಾವಿಸುತ್ತಾರೆ. ಈ ಎರಡು ದೈವಗಳನ್ನು ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರೆಂಬ ನಾಗರಾಜರುಗಳೆಂದೂ ಹೇಳುತ್ತಾರೆ. ಇನ್ನು ಕೆಲವರು ಧೂಮಾವತಿ ಮತ್ತು ದುರ್ಗೆಯರೆಂದೂ ಭಾವಿಸುತ್ತಾರೆ. ಈ ಅರಸು ದೈವಗಳ ವಾಹನ ಕುದುರೆ ಮತ್ತು ಕಾಡುಹಂದಿ. ಇವರ ಆಯುಧ ಬಿಲ್ಲುಬಾಣಗಳು.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕಿನ್ನಿಮಾಣಿ ಪೂಮಾಣಿಯರನ್ನು ಉಲ್ಲಾಕುಳು ಎಂದೂ, ಉಲ್ಲಾಯ ಎಂದು ಕರೆಯುತ್ತಾರೆ.  ಸಾಮಾನ್ಯವಾಗಿ ಬ್ರಹ್ಮಗುಡಿಯ ಬಲಭಾಗದಲ್ಲಿ ಉಲ್ಲಾಯನ ಮಾಡ ಇರುತ್ತದೆ. ಕಂಡೇವು ಬೀಡಿನ ಉಲ್ಲಾಯ ಬಿಲ್ಲು ಬಾಣವನ್ನು ಹಿಡಿದ ದೈವ. ಇಲ್ಲಿ ಈತನ ಲಿಂಗರೂಪವು ಸಮುದ್ರದಲ್ಲಿ ಬಿಲ್ಲು ಬಾಣಗಳೊಂದಿಗೆ ತೇಲಿಬಂದು ಉದ್ಭವವಾಯಿತು ಎಂಬ ಐತಿಹ್ಯವಿದೆ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರನ ಬಲಬದಿಯಲ್ಲಿ ಉಲ್ಲಾಯನ ಉದ್ಭವ ಕಂಬವಿದೆ. ಪುರಾತನ ಬ್ರಹ್ಮಸ್ಥಾನಗಳೊಂದಿಗೆ ಉಲ್ಲಾಕುಳುಗಳಿಗೆ ಮಾಡ ಇದ್ದುದು ತಿಳಿದುಬರುತ್ತದೆ. ಕೆಮ್ಮಲೆಯ ಆದಿಬ್ರಹ್ಮರ ಮಾಡದ ಸಮೀಪದಲ್ಲಿಯೇ ಉಲ್ಲಾಕುಳು ಮಾಡ ಇದೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಉಲ್ಲಾಕುಳು ದೈವಗಳ ಬಗ್ಗೆ ಅಲೌಕಿಕ ಕಥೆಯೊಂದು ಹೀಗಿದೆ: ವಿಷ್ಣು ಸಂಕಲ್ಪದಂತೆ ಕಮಲದ ಹೂವಿನ ಎಸಳಿನಲ್ಲಿ ಸೃಷ್ಟಿಯಾಗಿ ತಲಕಾವೇರಿ ಅರ್ಚಕರಿಗೆ ಸಿಗುತ್ತಾರೆ ಎರಡು ಗಂಡು, ಒಂದು ಹೆಣ್ಣು ಮಗು, ಪೂಮಾಣಿ, ಕಿನ್ನಿಮಾಣಿ, ದೈಯಾರು. ಈ ಮೂವರು ಘಟ್ಟದಿಂದ ಇಳಿದುತುಳುನಾಡಿಗೆ ಬರುತ್ತಾರೆ. copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಕುಮಾರ ಪರ್ವತದ ಪಶ್ಚಿಮ ದಿಕ್ಕಿನಲ್ಲಿ ಸುಬ್ರಹ್ಮಣ್ಯಕ್ಷೇತ್ರದ ಧ್ವಜ ಅವರಿಗೆ ಕಾಣಿಸುತ್ತದೆ. ಬಿಲ್ಲು ಬಾಣಧಾರಿಗಳೆನಿಸಿದ ಉಲ್ಲಾಕುಳು ಬಾಣ ಬಿಟ್ಟು ಸುಬ್ರಹ್ಮಣ್ಯ ಧ್ವಜವನ್ನು ತುಂಡರಿಸುತ್ತಾರೆ. ಆಗ ಸುಬ್ರಹ್ಮಣ್ಯ ಕೋಪಗೊಂಡು ಯುದ್ಧಕ್ಕೆ ಬರುತ್ತಾನೆ. ಘೋರಯುದ್ಧದಲ್ಲಿ ಸುಬ್ರಹ್ಮಣ್ಯ ಸೋಲುತ್ತಾನೆ. ಸುಬ್ರಹ್ಮಣ್ಯನ ಮೇಲೆ ಪ್ರಯೋಗಿಸಲೆಂದು ಒಂದು ಕಲ್ಲನ್ನು ಉಲ್ಲಾಕುಳು ಎತ್ತಿ ಹಿಡಿಯುತ್ತಾರೆ. ಆಗ ಶಿವಪಾರ್ವತಿಯರು ಬಂದು ಅವರನ್ನು ಸಮಾಧಾನಪಡಿಸುತ್ತಾರೆ. ಧ್ವಜವನ್ನು ತುಂಡರಿಸಿರುವುದು ಉಲ್ಲಾಕುಳುಗಳ ತಪ್ಪು. ಆದ್ದರಿಂದ ಅವರು ಮಾಡಿದ ತಪ್ಪಿಗೆ ಹದಿನಾರು ಕೈಯ ಕೊಪ್ಪರಿಗೆಯನ್ನು ಅನ್ನದಾನಕ್ಕೋಸ್ಕರ ಒಪ್ಪಿಸುತ್ತಾರೆ. ಅವರ ತಂಗಿ ದೈಯಾರು (ಹೊಸಳಿಗಮ್ಮನಾಗಿ) ಸುಬ್ರಹ್ಮಣ್ಯದಲ್ಲಿ ನೆಲೆ ನಿಲ್ಲುತ್ತಾಳೆ. ಕತ್ತರಿಸಲ್ಪಟ್ಟ ಧ್ವಜ ಕುಕ್ಕಂದೂರು ಎಂಬಲ್ಲಿ ಬೀಳುತ್ತದೆ. ಮುಂದೆ ಯಬರಡದಲ್ಲಿ ಮೆಟ್ಟುಗಲ್ಲು ಏರಿದ ವೀರರು ದೀವಟಿಗೆ ಎಂಬಲ್ಲಿ ನೆಲೆಯಾಗುತ್ತಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕುಮಾರ ಪರ್ವತದಲ್ಲಿ ಸುಬ್ರಹ್ಮಣ್ಯನಿಗೆ ಹೊಡೆಯಲು ಎತ್ತಿದ ಕಲ್ಲು ಕಿನ್ನಿಮಾಣಿಯ ಕಂಕುಳದಲ್ಲಿ ಉಳಿದಿತ್ತು. ಉಲ್ಲಾಕುಳುಗಳು ಸುಬ್ರಹ್ಮಣ್ಯದಿಂದ ಎಣ್ಮೂರಿಗೆ ಬಂದಾಗ ಈಗಿನ ‘ನಿಂತಿಗಲ್ಲು’ ಪ್ರದೇಶ ಪ್ರಶಾಂತವಾಗಿ ಕಂಡು ಆ ಕಲ್ಲನ್ನು ಗೋಳಿಮರದ ಬುಡದಲ್ಲಿ ಇಟ್ಟು ಸುತ್ತ ಕಣ್ಣು ಹಾಯಿಸಿದರು. ಇಲ್ಲಿ ಉಲ್ಲಾಕುಳು ನಿಂತು ಕಲ್ಲನ್ನು ಇಟ್ಟ ಕಾರಣದಿಂದ ಈ ಪ್ರದೇಶಕ್ಕೆ ನಿಂತಿಕಲ್ಲು ಎಂಬ ಹೆಸರು ಬಂತು. ಈ ಪ್ರದೇಶದ ಸಮೀಪದಲ್ಲಿ ಬಸಲೆತಡ್ಕದಲ್ಲಿ ಸತ್ಯಧರ್ಮದಲ್ಲಿ ಬಾಳುತ್ತಿದ್ದ ಒಂದು ಗೌಡರ ಮನೆ ಇತ್ತು. ಉಲ್ಲಾಕುಳು ಇಲ್ಲಿಗೆ ಬ್ರಾಹ್ಮಣ ಕುಮಾರರಂತೆ ಬರುತ್ತಾರೆ. ಗೌಡರು ಬ್ರಾಹ್ಮಣ ಕುಮಾರರನ್ನು ಆದರದಿಂದ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಬರಮಾಡಿಕೊಂಡು, ಅವರ ಕೇಳಿಕೆಯಂತೆ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಆಸರೆ ನೀಡಿದರು. ಗೌಡರು ತನ್ನ ಮನೆಯ ಮಾಳಿಗೆಯನ್ನು ನೀಡಿ, ಎಳನೀರು, ಬಾಳೆಹಣ್ಣು, ಹಾಲು ಕೊಟ್ಟು ಸತ್ಕರಿಸಿದರು. ಹಾಲು ಹಣ್ಣು ಸೇವಿಸಿ, ವಿಶ್ರಮಿಸಿದ ಬ್ರಾಹ್ಮಣಕುಮಾರರು ಮರುದಿನ ನೋಡುವಾಗ ಕಾಣುವುದಿಲ್ಲ. ಅವರು ವಿಶ್ರಮಿಸಿದಲ್ಲಿ ಮೂರ್ಲೆಗಳು (ಮಣ್ಣಿನ ಮಡಿಕೆಗಳು) ಕಂಡುಬಂದವು. ಗೌಡರು ಆಶ್ಚರ್ಯಗೊಂಡು ಎಣ್ಮೂರು ಬಲ್ಲಾಳರ ಬೀಡಿನ ಅರಸರಿಗೆ ಈ ವಿಷಯ ತಿಳಿಸುತ್ತಾರೆ. ಕೊನೆಗೆ ಪ್ರಶ್ನೆಯಲ್ಲಿ ಅಲ್ಲಿ ಉಲ್ಲಾಕುಲು ನೆಲೆಯಾದುದು ತಿಳಿದುಬರುತ್ತದೆ. ಬಸಲೆತಡ್ಕದ ಗೌಡರ ಮನೆಯಲ್ಲಿ ಮೊದಲಿಗೆ ಉಲ್ಲಾಕುಳು ನೆಲೆಯಾದ ಕಾರಣ ಆ ಮನೆಯನ್ನು ಆರಂಭದ ಮನೆ ಎಂದೂ, ಆರೆಂಬಿ ಎಂದೂ ಕರೆಯುತ್ತಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಡಿ.ಜಿ. ನಡ್ಯ ಅವರು ಉಲ್ಲಾಕುಳು ದೈವಗಳ ಮೂಲವನ್ನು ಗಂಗರ ವಂಶಕ್ಕೆ ಅನ್ವಯಿಸಿ ಹೇಳುತ್ತಾರೆ. ಗಂಗವಂಶದಲ್ಲಿ ಕಂಪ ಮಹೀಪತಿ ಎಂಬುವನ ಮಗ ಪದ್ಮನಾಭ. ಅವನಿಗೆ ದೀರ್ಘಕಾಲ ಮಕ್ಕಳಲಿಲ್ಲದಿರಲು, ಪದ್ಮಪ್ರಭಾ ಎಂಬ ಶಾಸನ ದೇವತೆಯನ್ನು ಪೂಜಿಸಲು, ಅವಳ ಕೃಪೆಯಿಂದ ರಾಮ-ಲಕ್ಷ್ಮಣರೆಂಬ ಇಬ್ಬರು ಅವಳಿಮಕ್ಕಳು ಹುಟ್ಟುತ್ತಾರೆ. ಪದ್ಮನಾಭನ ರಾಜ್ಯದ ಮೇಲೆ ಉಜ್ಜಯನಿಯ ಅರಸ ಮಹೀಪಾಲ ದಂಡೆತ್ತಿ ಬಂದಾಗ, ಪದ್ಮನಾಭನು ತನ್ನ ಆಪ್ತರಲ್ಲಿ ಸಮಾಲೋಚನೆ ನಡೆಸಿ, ತನ್ನ ಮಕ್ಕಳ ಹೆಸರನ್ನು ದಡಿಗ, ಮಾಧವರೆಂದು ಬದಲಾಯಿಸಿ ದಕ್ಷಿಣಕ್ಕೆ ಕಳುಹಿಸಿಕೊಡುತ್ತಾನೆ. ಸೋದರಿ ಆಲಬ್ಬೆ ಹಾಗೂ 48 ಮಂದಿ ಬ್ರಾಹ್ಮಣರೊಂದಿಗೆ ರಾಜಕುಮಾರರುಪ್ರಯಾಣ ಮಾಡುತ್ತಾರೆ. ಈ ದಡಿಗ, ಮಾಧವರೇ ತಲಕಾಡಿನ ಪಶ್ಚಿಮ ಗಂಗ ರಾಜ್ಯ ಸ್ಥಾಪಕರು. ಜೈನ ಆಚಾರ್ಯ ಗುಣನಂದಿ ಹಾಗೂ ಪದ್ಮಾವತೀ ದೇವಿಯ ದಯೆಯಿಂದ ದಡಿಗ ಮಾಧವರು ಗಂಗವಾಡಿ ತೊಂಬತ್ತು ಸಾಸಿರಂ ಎಂಬ ರಾಜ್ಯವನ್ನು ಕಟ್ಟುತ್ತಾರೆ. ದಡಿಗ ಮಾಧವರನ್ನು ಇಕ್ಷ್ವಾಕು ವಂಶದ ರಾಜಕುಮಾರರೆಂದೂ, ಕ್ರಿ.ಶ.ನಾಲ್ಕನೆಯ ಶತಮಾನಕ್ಕೆ ಸೇರಿದವರೆಂದೂ ಮುಂದೆ ಇವರೇ ಉಲ್ಲಾಕುಳು ದೈವಗಳಾಗಿ ನೆಲೆಗೊಂಡಿದ್ದಾರೆ ಎಂದು ಡಿ.ಜಿ. ನಡ್ಕ ಹೇಳಿದ್ದಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕಿನ್ನಿಮಾಣಿ ಪೂಮಾಣಿಯರನ್ನು ಆದಿಶೇಷ, ವಿಷ್ಣುವೆಂದು ನಾಗ-ಬೆರ್ಮೆರ್ ಎಂದೂ ಪರಿಗಣಿಸುತ್ತಾರೆ. ಬೆರ್ಮೆರ್ ಹಾಗೂ ಉಳ್ಳಾಯ-ಉಲ್ಲಾಕುಳುಗಳಿಗೆ ಅನೇಕ ವಿಷಯಗಳಲ್ಲಿ ತಾದಾತ್ಮ್ಯವಿದೆ. ಬೆರ್ಮೆರಂತೆ ಉಳ್ಳಾಯ ಕೂಡ ಕುದುರೆಯ ಮೇಲೆ ಕುಳಿತ ದೈವ ಬೆರ್ಮೆರಂತೆ ಉಲ್ಲಾಕುಳುಗಳ ಆಯುಧ ಕೂಡ ಬಿಲ್ಲುಬಾಣಗಳೇ ಆಗಿವೆ. ಪೂಕರೆಯ ಸಂದರ್ಭದಲ್ಲಿ ಕಟ್ಟುವ ನಾಗಮುಡಿಗಳು ಉಲ್ಲಾಕುಳುಗಳಿಗೆ ಸಂದಾಯವಾಗುತ್ತವೆ ಎಂದು ನಲಿಕೆಯವರು ಹೇಳುತ್ತಾರೆ.
ಪೂಮಾಣಿ-ಕಿನ್ನಿಮಾಣಿಗಳನ್ನು ಉಳ್ಳಾಕುಲು ಎಂದೂ ಅರಸು ದೈವಗಳೆಂದೂ ಹೇಳುತ್ತಾರೆ. ಈ ಅವಳಿದೈವಗಳನ್ನು ‘ಉಳ್ಳಾಯ’ ಎಂದೂ ಕರೆಯುತ್ತಾರೆ. ಬ್ರಹ್ಮ ಬಲವಂಡಿ ದೈವಸ್ಥಾನ, ಕವತ್ತಾರು ಆಲಡೆ, ಕಂಡೇವು ಬೀಡು ಮೊದಲಾದೆಡೆಗಳಲ್ಲಿ ಉಲ್ಲಾಕುಲುಗಳಿಗೆ ಆರಾಧನೆ ಇದೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ


ಆದ್ರೆ ಇವರ ಆರಾಧನೆ ಇರುವಲ್ಲಿಯೇ ಉಳ್ಳಾಯ ನಿಗೆ ಬೇರೆಯೇ ನೇಮ ಇರುವುದುಂಟು .ಗುತ್ತಿಗಾರಿನಲ್ಲಿ ಉಲ್ಲಾಕುಳು ಅಲ್ಲದೆ ಕೋಡಂಚದ ಉಲ್ಲಾಕುಳು ಎಂಬ ಭೂತಕ್ಕೆ ಆರಾಧನೆ ಇದೆ .

ಬೆರ್ಮೆರ್ ಅನ್ನೂ ಉಲ್ಲಾಕುಳು ಎಂದು ಕರೆಯುತ್ತಾರೆ .(ಈ ಬಗ್ಗೆ ಮುಂದೆ ಬೆರ್ಮೆರ್ ಬಗ್ಗೆ ಬರೆಯುವಾಗ ಮಾಹಿತಿ ನೀಡಲಾಗುವುದು )

ಆಧಾರ :ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ




Tuesday 18 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 27 ಮಂಗಳೂರಿನ ಅರಬ್ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

                                   
                          ವಿಜಯ ಕರ್ನಾಟಕದಲ್ಲಿ ಇಂದು (18-03 -201 4 ) ರಂದು ಪ್ರಕಟವಾದ ನನ್ನ  ಲೇಖನ
ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ  ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ  ದೇಶ ,ಜಾತಿ ಧರ್ಮದ ಮಿತಿ ಇಲ್ಲ.
 ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,



ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ .ಮಲರಾಯಿ ದೈವದ ಕೋಪಕ್ಕೆ ತುತ್ತಾಗಿ ದೈವತ್ವ ಹೊಂದಿದ ಭೂತ ಅರಬ್ಬಿ ಭೂತ .

 ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಪ್ರಧಾನ ದೈವ ಮಲರಾಯಿಯ ಸೇರಿಗೆಯ ದೈವವಾಗಿ ಅರಬ್ಬಿ ಭೂತ ಆರಾಧನೆ ಪಡೆಯುತ್ತಿದೆ . ಹೆಸರೇ ಸೂಚಿಸುವಂತೆ ಈ ದೈವತದ ಮೂಲ ಒಬ್ಬ ಅರಬ್ ವ್ಯಕ್ತಿ. ಈತನೊಬ್ಬ ಖರ್ಜೂರ ವ್ಯಾಪಾರಿ. ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ. ಅಲ್ಲಿ ಒಂದು ನೀರಿನ ಕಟ್ಟ ಇರುತ್ತದೆ. ಅಳಕೆ ಮೇಲ್ಮನೆಗೆ ಸೇರಿದ ಅವಿವಾಹಿತ ಹೆಣ್ಣು ಮಗಳು ತಿಂಗಳ ಸೂತಕ ಸ್ನಾನಕ್ಕೆ ಬಂದವಳು ಕಟ್ಟದ ನೀರಿಗಿಳಿದು ಸ್ನಾನ ಮಾಡುತ್ತಿರುತ್ತಾಳೆ. ಅವಳನ್ನು ನೋಡಿದ ಆ ಅರಬ್ ದೇಶದ ಖರ್ಜೂರ ವ್ಯಾಪಾರಿಯು ಅವಳಲ್ಲಿ ವ್ಯಾಮೋಹಗೊಂಡು ಅವಳ ಮೇಲೆ ಅತ್ಯಾಚಾರಕ್ಕೆ ಮಾಡಲು ಹೋಗುತ್ತಾನೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಅವಳು ತನ್ನ ಕುಲದೈವ ಮಲರಾಯಿ ಧೂಮಾವತಿಯಲ್ಲಿ ಮಾನರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಮಲಾರಾಯಿ ಧೂಮಾವತಿ ದೈವ ಅವಳನ್ನು ಮಾಯ ಮಾಡಿ ಅವಳ ಮಾನರಕ್ಷಣೆ ಮಾಡಿದ್ದಲ್ಲದೆ ತನ್ನ ಸೇರಿಗೆ ದೈವವಾಗಿಸಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅವಳು ಬ್ರಾಂದಿ (ಬ್ರಾಹ್ಮಣತಿ)ಭೂತವಾಗಿ ಅಲ್ಲಿ ಆರಾಧನೆ ಪಡೆಯುತ್ತಾಳೆ 
  .ಆ ಆರಬ್ ವ್ಯಾಪಾರಿಯನ್ನು ಶಿಕ್ಷಿಸುವ ಸಲುವಾಗಿ ಆತನನ್ನು ಮಾಯ ಮಾಡುತ್ತದೆ ಮಲರಾಯಿ ದೈವ . ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾದರೂ ದೈವದ ಸೇರಿಗೆಗೆ ಸೇರಿ ದೈವತ್ತ್ವ ಪಡೆಯುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವಾಗಿದೆ. ಅಂತೆಯೇ ಈ ಅರಬ್ ವ್ಯಾಪಾರಿ ಕೂಡ ದೈವತ್ತ್ವವನ್ನು ಪಡೆದು ಅರಬ್ಬಿ ಭೂತ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ಭೂತದ ಕಲ್ಲು ಇದೆ. ಆ ಬ್ರಾಹ್ಮಣ ಹುಡುಗಿ ಸ್ನಾನ ಮಾಡಿದ ನೀರಿನ ಕಟ್ಟ ಈಗ ಕೂಡ ಅಲ್ಲ್ಲಿದೆ ಅವಳ ನೇವಳಡ ಗುರುತು ಎಂಬ ಒಂದು ಗೆರೆ ಅಲ್ಲಿನ ಪಾದೆಕಲ್ಲಿನ ಮೇಲೆ ಇದೆ .ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಮ್ದಲಾಗುವ ಸಣ್ಣ ಸಣ್ಣ ಗುರುತುಗಳನ್ನ್ನು ಅಲ್ಲಿನ ಸ್ಥಳಿಯರು ತೋರುತ್ತಾರೆ
.              ಬ್ರಾಹ್ಮಣತಿ ಬೂತೋ ಚಿತ್ರ ಕೃಪೆ :ನಮ್ಮ ಸತ್ಯೊಲು
ಅರಬ್ಬಿ ಭೂತಕ್ಕೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ .ಬ್ರಾಹ್ಮಣತಿ (ಬ್ರಾಂದಿ )ಭೂತಕ್ಕೆ ಒಂದು ಕಟ್ಟೆ  ಇದೆ.ಆ ಕಟ್ಟೆ ಯ ಹತ್ತಿರ  ಈ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ .ಮಲರಾಯಿ ಧೂಮಾವತಿ ದೈವದ ನೇಮಕ್ಕೆ ಮೊದಲು ಬ್ರಾಹ್ಮಣ ಕನ್ಯೆ(ಬ್ರಾಂದಿ ಭೂತ) ಮತ್ತು ಅರಬ್ಬಿ ಭೂತಕ್ಕೆ ನೇಮ ನೀಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಅರಬ್ಬಿ ಭೂತವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚಕವಾಗಿ ಆತನಿಗೊಂದು ಬೆಳ್ಳಿಯ ಸರಿಗೆಯಬಂಧನ ಇರುತ್ತದೆ. ಅರಬ್ಬಿ ಭೂತಕ್ಕೆ ಒಂದು ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆಯ(ಮುಂಡಾಸು ) ಅಲಂಕಾರ ಇರುತ್ತದೆ
.ವಾಸ್ತವಿಕ ನೆಲೆಯಿಂದ ಆಲೋಚಿಸುವುದಾದರೆ ಆ ಅರಬ್ ವ್ಯಾಪಾರಿಯಿಂದ ತಪ್ಪಿಸಿ ಕೊಳ್ಳುವುದಕ್ಕಾಗಿ ನೀರಿನಲ್ಲಿ ಮುಂದೆ ಮುಂದೆ ಸಾಗಿದ ಆ ಕನ್ಯೆ ದುರಂತವನ್ನಪ್ಪಿರಬಹುದು .ಅವಳನ್ನು ಹಿಂಬಾಲಿಸಿದ ಆ ಅರಬ್ ಖರ್ಜೂರ ವ್ಯಾಪಾರಿ ಕೂಡ ದುರಂತವನ್ನಪ್ಪ್ಪಿರಬಹುದು ಅಥವಾ ಆ ಹುಡುಗಿಯ ದುರಂತಕ್ಕೆ ಕಾರಣನಾದ ಅರಬ್ ವ್ಯಾಪಾರಿಯನ್ನು ಊರ ಜನರು ಸೇರಿ ಶಿಕ್ಷಿಸಿರಬಹುದು  .ಆಗ ಆತ ದುರಂತವನ್ನಪ್ಪಿರಬಹುದು .ಕಾಲಾಂತರದಲ್ಲಿ ಅವರಿಬ್ಬರೂ ದೈವತ್ವವನ್ನು ಪಡೆದು ಆರಾಧಿಸಲ್ಪಟ್ಟಿರಬೇಕು copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ

                                                   ಅರಬ್ಬಿ ಭೂತ (ಹಳೆಯ ಫೋಟೋ )

Monday 10 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -18 ಅರಮನೆ ಜಟ್ಟಿಗ © ಡಾ.ಲಕ್ಷ್ಮೀ ಜಿ ಪ್ರಸಾದ

                         
© copy rights reserved

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿ ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜಟ್ಟಿ ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .

ಇಲ್ಲಿ ಇನ್ನೊಂದು ಸಾಧ್ಯತೆ ಕೂಡ ಇದೆ .ಯಾರೋ ಒಬ್ಬ ಜಟ್ಟಿ ತನ್ನನ್ನು ಪೊರೆದ ರಾಣಿ ಅಥವಾ ರಾಜನಿಗೆ ದ್ರೋಹ ಮಾಡಿದ್ದು ಇದು ಗೊತ್ತಾಗಿ ಆತನನ್ನು ಪರಿವಾರದವರು  ದುರಂತಕ್ಕೀದು ಮಾಡಿರಬಹುದು .ಕಾಲಾಂತರದಲ್ಲಿ ದೈವತ್ವ ಪ್ರಾಪ್ತಿಯಾದಾಗ ಆತ ಚಾಮುಂಡಿ ದೈವಕ್ಕ್ಕೆ ದ್ರೋಹ ಮಾಡಿದ್ದು ಎಂಬ ಪರಿಕಲ್ಪನೆ ಸೇರಿರ ಬಹುದು .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು 

ಜಟ್ಟಿ /ಜಟ್ಟಿಗ /ಅರಮನೆ ಜಟ್ಟಿಗ /ಕೋಟೆ ಜಟ್ಟಿಗ ದೈವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರು ತಿಳಿಸಬೇಕಾಗಿ ವಿನಂತಿ 

ಅರಮನೆ ಜಟ್ಟಿಗನ ಅಪರೂಪದ ಸುಂದರ ಫೋಟೋ ಒದಗಿಸಿದ ಧರ್ಮ ದೈವ ಅಂತರ್ಜಾಲ ಪುಟದ 

ಶ್ರೀ ನಾಗ ರಾಜ ಭಟ್ ಬಂಟ್ವಾಳ ಇವರಿಗೆ ಕೃತಜ್ಞತೆಗಳು.
Please note: copying of this blog article is strictly prohibited .If you like the article then please share it at Facebook
 (  Dont copy my articles and photos)