ಈಜೋ ..ಮಂಜೊಟ್ಟಿ ಗೋಣ ಇದು ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಎಂಬ ನಾಟಕ ಸಂಕಲನದಲ್ಲಿ ಪ್ರಕಟವಾಗಿರುವ ನಾಟಕ
ಈಜೋ ಮಂಜೊಟ್ಟಿ
ಗೋಣ..ತುಳುನಾಡಿನಲ್ಲಿ ಪ್ರಚಲಿತವಿರುವ ಇದೇ ಹೆಸರಿನ ಪ್ರಸಿದ್ಧ ಪಾಡ್ದನದ ಕಥೆಯನ್ನು ಆಧರಿಸಿ
ರಚಿಸಿದ ನಾಟಕವಿದು .ನಾನು ಅನಂತಾಡಿಯ ಶ್ರೀ ಕುಂಡ ಮುಗೇರ ಇವರಿಂದ 2005 ರಲ್ಲಿ ಸಂಗ್ರಹಿಸಿದ ಈ ಪಾಡ್ದನದಲ್ಲಿ ಧೂಮಾವತಿ ದೈವಕ್ಕೆ
ಹೇಳಿಕೊಂಡ ಹರಕೆಯನ್ನು ಮರೆತು ಅದೇ ಮುಂಡ್ಯೆಯ ಹಲಸಿನ ಹಣ್ಣನ್ನು ಕೊಯ್ದು ತಿಂದು ಕೋಣಗಳಿಗೆ
ಹಾಕಿರುವ ಕಥಾನಕ ಇದೆ.ಹರಿಕೆಯನ್ನು ಮರೆತವರಿಗೆ ತಕ್ಕ ಶಿಕ್ಷೆ ಯನ್ನು ಭೂತಗಳು ವಿಧಿಸುವುದು ತುಳು
ಸಂಸ್ಕೃತಿಯಲ್ಲಿ ಸಾಮಾನ್ಯ ವಿಚಾರ .ಅಂತೆಯೇ ಈ
ದೈವದ ಆಗ್ರಹಕ್ಕೆ ತುತ್ತಾಗಿ ಕೋಣ ಮತ್ತು ಮೂಲದ ಬಬ್ಬು ಮಾಯವಾಗಿದ್ದಾನೆ ಎಂಬ ಸೂಚನೆ ಈ
ಪಾಡ್ದನದಲ್ಲಿದೆ ,ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಇದು ವರ್ಗ ಸಂಘರ್ಷದ ಕಥಾನಕ.ಮೂಲದವರು
ಇಳಿಯಬಾರದ ಸತ್ಯದ ಗದ್ದೆಗೆ ಇಳಿದು ಬಬ್ಬು ಮತ್ತು ಕೋಣ ಮಾಯವಾಗುತ್ತಾರೆ ಎಂದು ಪಾಡ್ದನದ
ಕಥೆಯಲ್ಲಿ ಹೇಳುತ್ತಾರೆ ,ಅಲೌಕಿಕತೆ ಮತ್ತು
ವಾಸ್ತವಿಕತೆ ಎರಡನ್ನು ಸಮನ್ವಯ ಮಾಡಿ ,ಒಂದಷ್ಟು ಕಲ್ಪನೆ ಸೇರಿಸಿ ಈ ನಾಟಕವನ್ನು ರಚಿಸಲಾಗಿದೆ -copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ಪಾತ್ರ ಪರಿಚಯ ;
ಮಂಜನಾಳ್ವ :ರೆಂಜಾಳಡಿ ಬರಿಕೆ ಬೀಡಿನ ಒಡೆಯ
ದಾರಾಮು: ಮಂಜನಾಳ್ವರ ಮಡದಿ
ಬಬ್ಬು: ಮೂಲದ ಕೆಲಸಗಾರ
ಬೊಳ್ಳ :ಕೋಣ
ಜೋಗಿ ಪುರುಷ :ಜೋಗಿ ಸಮುದಾಯಕ್ಕೆ ಸೇರಿದ ವ್ಯಕ್ತಿ
ಗೌಡ :ಕೋಣಗಳ ವ್ಯಾಪಾರಿ
ಪಾಡ್ದನಗಾರ್ತಿ ಅಜ್ಜಿ :ಸೂತ್ರಧಾರನ
ಕೆಲಸವನ್ನು ನಿರ್ವಹಿಸುವ ಪಾತ್ರ
ಮೊಮ್ಮಗಳು :ಕತೆಗಾಗಿ ಅಜ್ಜಿಯನ್ನು ಕಾಡುವ ಮಗು
ಈಜೋ.. ಮಂಜೊಟ್ಟಿ ಗೋಣ
ದೃಶ್ಯ -1
(ಪಾಡ್ದನಗಾರ್ತಿ ಹಿರಿಯಜ್ಜಿಯ
ಮನೆ )
ಮೊಮ್ಮಗಳು :ಅಜ್ಜಿ ಅಜ್ಜಿ
ನನಗೊಂದು ಕಥೆ ಹೇಳಜ್ಜಿ ..
ಅಜ್ಜಿ :ಅಯ್ಯೋ ಕಂದ ಕಥೆ
ಹೇಳಬೇಕೇ ನಿನಗೆ ? ರಾಜ ರಾಣಿಯರ ಕಥೆ ಹೇಳಲೇ ?ಅಥವಾ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲೇ ಚಿನ್ನು ..
ಮೊಮ್ಮಗಳು :ಊ ಹ್ಹು,ಅದೆಲ್ಲ
ಕಥೆ ನೀನು ಮೊದಲೇ ಹೇಳಿದ್ದೀಯ ,ಆ ಕಥೆ ಬೇಡ ..
ಅಜ್ಜಿ :ಹಾಗಾದ್ರೆ ರಾಕ್ಷಸಿ
ಅಜ್ಜಿ ಕಥೆ ಆಗಬಹುದಾ?
ಮೊಮ್ಮಗಳು :ಎಂಥ ಅಜ್ಜಿ
..ಅದೊಂದೇ ಕಥೆ ಗೊತ್ತಿರೋದ ಅಜ್ಜಿ ನಿಂಗೆ ಅದು ಬೇಡ ನನಗೆ ಭಯ ಆಗುತ್ತೆ ಅಜ್ಜೀ..ಅಬ್ಬ !
ಅಜ್ಜಿ
:ಮತ್ತೇನು ಕಥೆ ಹೇಳಲಿ ಕಂದ ನಿನಗೆ ?
ಮೊಮ್ಮಗಳು :ಅಜ್ಜಿ ಚಂದಮಾಮ
,ಬಾಲಮಿತ್ರದ ಕಥೆ ಹೇಳು ಅಜ್ಜೀ ..
ಅಜ್ಜಿ :ಅಯ್ಯೋ ಕಂದ ನನಗೆ ಅದನ್ನು ಓದಲು ಬರುವುದಿಲ್ಲವಲ್ಲ !ಏನು
ಮಾಡಲಿ ?
ಮೊಮ್ಮಗಳು :ಹಾಗಾದ್ರೆ ನೀನು
ಇಷ್ಟು ದಿನ ಹೇಳಿದ ಕಥೆ ಹೇಗೆ ಓದಿದ್ದು ?ಓದಕ್ಕೆ ಬರಲ್ಲ ಅಂತ ಆದ್ರೆ ನಿಂಗೆ ಈ ಕಥೆಗಳು ಎಲ್ಲಿಂದ ಹೇಗೆ ತಿಳಿಯಿತು ?
ಅಜ್ಜಿ :ನಮ್ ಕಾಲದಲ್ಲಿ ಓದು
ಬರಹ ಇರಲಿಲ್ಲ ಮಗ ,ನಾವು ಗದ್ದೆಯಲ್ಲಿ ನಾಟಿ ಮಾಡುವಾಗ ,ನೇಜಿ ನೆಡುವಾಗ ಕೀಳುವಾಗ ನಮ್ಮ ಹಿರಿಯರು
ಪಾಡ್ದನ ,ಪದಗಳನ್ನು ಹೇಳುತಿದ್ದರು ..
ಮೊಮ್ಮಗಳು :ಏನು ಏನು
?ಪಾದ್ದನವೇ ?ನಮ್ಮ ಶಾಲೆಯಲ್ಲಿ ನಮಗೆ ಇಂದು ಪಾಡ್ದನಗಳಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿ ಇತಿಹಾಸ ಅಡಗಿದೆ ಎಂದು ಹೇಳಿದ್ದಾರೆ ಅಜ್ಜಿ
..ನನಗೆ ಅದನ್ನೇ ಹೇಳು ಅಜ್ಜಿ..ಪಾಡ್ದನ ಹೇಗಿರುತ್ತೆ ಅಜ್ಜಿ ..?
ಅಜ್ಜಿ :ಹೌದ ಮಗ ?ಹಾಗಾದ್ರೆ ಇಂದು ಈಜೋ ಮಂಜೊಟ್ಟಿ ಗೋಣ
ಎಂಬ ಪಾಡ್ದನದ ಕಥೆಯನ್ನು ಹೇಳುತ್ತೇನೆ ಕೇಳು ..
ಮೊಮ್ಮಗಳು :ಕೋಣನ ಕಥೆಯ ?ನಮ್ಮ
ಹಟ್ಟಿಯಲ್ಲಿ ಉಂಟಲ್ಲ ಕೋಣ ಬೊಳ್ಳ !ಅದರ ಕಥೆಯ ?!ಆಗಬಹುದು ಅಜ್ಜಿ ಅದೇ ಹೇಳು ..
ಅಜ್ಜಿ :ಹೌದು ಮಗ ,ನಮ್ಮ
ಬೊಳ್ಳನಂತೆ ಕಂಬಳ ಓಟದಲ್ಲಿ ಗೆದ್ದು ಮಂಜೊಟ್ಟಿ ಏರಿ ಬಂದ ಬೊಳ್ಳ ಎಂಬ ಕೋಣ,ಅದನ್ನು ಸಾಕಿ ಸಲಹಿದ
ಮೂಲದ ಹುಡುಗ ಬಬ್ಬು ಮತ್ತು ಒಡೆಯ ಮಂಜಣ್ಣ ಆಳ್ವರ ಕಥೆಯಮ್ಮಾ ಅದು ..
ಮೊಮ್ಮಗಳು :ಮಂಜೊಟ್ಟಿ ಅಂದರೆ
ಏನಜ್ಜಿ ..
ಅಜ್ಜಿ: “ಓ ಅದಾ ಕೋಣಗಳು
ವೇಗವಾಗಿ ಓಡಿ ಬಂದಾಗ ಅವರ ವೇಗ ಕಡಿಮೆ ಮಾಡಲು
,ಹತ್ತಿ ಬರಲು ಸ್ವಲ್ಪ ಎತ್ತರಕ್ಕೆ ಮಣ್ಣು ಹಾಕಿ ಚಿಟ್ಟೆ ಮಾಡಿರುತ್ತಾರೆ ಅದನ್ನೇ ಮಂಜೊತ್ತಿ ಅಂತ
ಹೇಳೋದು ..
ಮೊಮ್ಮಗಳು :ಹೌದಾ ಅಜ್ಜಿ
..ಹಾಗಾದ್ರೆ ಅದೇ ಪಾಡ್ದನದ ಕಥೆ ಹೇಳು ಅಜ್ಜೀ ..ನನ್ನ ಅಜ್ಜಿ ಪಾಡ್ದನಗಾರ್ತಿ ಅಂತ ನಾನು ನಾನು
ಶಾಲೆಗೆ ಹೋಗಿ ಜಂಬದಿಂದ ಹೇಳ್ತೀನಿ ಅಜ್ಜೀ ,,ನೋಡ್ತಿರು ..
ಅಜ್ಜಿ: ನನ್ನ ಬಂಗಾರ ನೀನು ಹೇಳೋದೇನು ಬೇಡ ಆದರೆ
ಪಾಡ್ದನ ಅಂದ್ರೆ ಅಷ್ಟು ಹೆಮ್ಮೆ ಪ್ರೀತಿ ಇದೆಯಲ್ಲ ನಿನಗೆ ಅದೇ ಸಾಕು ನನಗೆ ಕೇಳು ಈಗ ..
ಪಾಡ್ದನಗಾರ್ತಿ ಅಜ್ಜಿ : ಈಜೋ.. ಮಂಜೊಟ್ಟಿ ಗೋಣ..
ಈಜೋ.. ಮಂಜೊಟ್ಟಿ ಗೋಣ..
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
ಕೆಳಗಿನ ರೆಂಜಳಡಿ ಮೇಲಿನ
ರೆಂಜಳಡಿ
ರೆಂಜಾಲ ಬೀಡಿನಲ್ಲಿ ದೊಡ್ಡವರು
ಬಲ್ಲಾಳರು
ಬೀಡಿನಲ್ಲಿ ಇದ್ದಾರೆ
ಮಂಜನಾಳ್ವರು
ಹಿರಿ ಹಿರಿಯರ ಕಾಲದ ಬೀಡು
ಆನೆಯನ್ನೇ ಕಟ್ಟಿ ಆಳಿದ ಬೀಡು
ಕುದುರೆಯನ್ನೇ ಮೆರೆದ ಬೀಡು
ಸಿರಿ ವೈಭವದ ತವರು ..
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
ಮೂರು ಬೆಟ್ಟಿನ ಆರು ಕಂಬಳ ಗದ್ದೆ
ಸಾವಿರದೊಂದು ಮುಡಿಯ ಗದ್ದೆ ..
ನೂರು ಸಾವಿರ ವೀರರ ನೆಲೆಯು
ಅಂದಿಗೆ ರೆಂಜಾಲ ಬೀಡಿಗೆ ..
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
ಬೆಳಗ್ಗೆ ಬೇಗನೆ ಎದ್ದರು ಮಂಜನಾಳ್ವರು ..
ತನ್ನೊಂದು ಸಿರಿ ಮೋರೆ ತೊಳೆದರು
ಹಾರೆ ಇಡುವ ಕೊಟಡಿಗೆ ಹೋದರು
ಹಾರೆ ತೆಗೆದು ಹೆಗಲಿಗೆ ಇಡುವರು
ಬೈಲಿನ ಗದ್ದೆಗೆ ಬರುವರು
ಆಳ್ವರು ..
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
(ಮಂಜನಾಳ್ವ ಪಾದ್ದನಕ್ಕೆ ಅಭಿನಯ ಮಾಡುತ್ತಾನೆ )
(ಅಜ್ಜಿ ಮತ್ತು ಮೊಮ್ಮಗಳ ನಿರ್ಗಮನ )-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
(ಗದ್ದೆಯಲ್ಲಿ ಮೂಲದ ಕೆಲಸಗಾರ
ನಂಬಿಕೆಯ ಹುಡುಗ ಗದ್ದೆಯ ಕೆಲಸ ಮಾಡಿಕೊಂಡು ಇದ್ದಾನೆ )
ಮಂಜನಾಳ್ವ: ಓ ಏನು ಬಬ್ಬು
ಈವತ್ತು ಬೆಳಗ್ಗಿನ ಜಾವದ ಈ ಚಳಿಗೆ ಗದ್ದೆಗೆ ಬಂದು ಬಿಟ್ಟಿದ್ದಿ ?ನಿನ್ನೆಯಷ್ಟೇ ಜ್ವರ ಬಂದು
ಬಿಟ್ಟಿತ್ತು ನಿನಗೆ ,ಈವತ್ತು ಯಾಕೆ ಕೆಲಸಕ್ಕೆ ಬಂದೆ ?
ಬಬ್ಬು : ಅಡ್ಡ ಬಿದ್ದೆ ಒಡೆಯ
..ಅದೇನು ಮಹಾ ಜ್ವರ ಬಿಡಿ ಬುದ್ದಿ ..ಡೆಂಜಿ ಒಕ್ಕಿ ಮಾಟೆ ಮಾಡಿತ್ತು ಒಡೆಯ ..ನೀರು ಹೋಗುತ್ತಾ
ಇತ್ತು ಅದನ್ನು ಸರಿಮಾಡಿ ಹೋಗೋಣ ಅಂತ ಬಂದೆ ಒಡೆಯ ..ಅದು ಸರಿ ಒಡೆಯ ನೀವ್ಯಾಕೆ ಗದ್ದೆ ಕೆಲಸಕ್ಕೆ
ಬಂದ್ರಿ ,ನಾನಿದ್ದೀನಲ್ಲ ಒಡೆಯ ಏನು ಮಾಡಬೇಕು ಹೇಳಿ ಒಡೆಯ ..ನಾನಿರುವಷ್ಟು ದಿನ ನೀವು ಕೊಟ್ಟು
ಪಿಕ್ಕಾಸು ಮುತ್ತ ಬಾರದು ಒಡೆಯ ..ಕೊಡಿ ಅದನ್ನು ಇಲ್ಲಿ ..(ಹಾರೆಯನ್ನು ತೆಗೆದುಕೊಳ್ಳುವನು )
ಮಂಜನಾಳ್ವ : ನಿನ್ನ ಪ್ರೀತಿ
ವಿಶ್ವಾಸಕ್ಕೆ ನಾನೇನು ಕೊಡಲಿ ಬಬ್ಬು ..ನಮ್ಮ ಬೀಡು ಅಂದಿನ ವೈಭವ ಕಳೆದು ಕೊಂಡಿದೆ ..
ಬಬ್ಬು :ನಮ್ಮ ಹೊಟ್ಟೆಗೆ
ಬಟ್ಟೆಗೆ ಕೊರತೆಯಾಗದಂತೆ ನೀವೇ ನೋಡಿ ಕೊಳ್ತಿದ್ದೀರಿ ಒಡೆಯ ..ಇನ್ನು ನನಗೆ ಬೇರೇನು ಬೇಕು ಹೇಳಿ
..ನಮ್ಮಂಥ ಒಡೆಯ ಇರುವಾಗ ನಮಗೇನು ಕೊರತೆ ?ಹೇಳಿ ಒಡೆಯ
ಮಂಜನಾಳ್ವ :ಹಾಗೆ ಹೇಳಬೇಡ ಬಬ್ಬು ..ನೀನು ನಮ್ಮ ಮನೆ
ಮಗನಂತೆ ವಿಶ್ವಾಸತೋರಿ ದುಡಿಯುತ್ತಿರುವೆ
..ನಿನಗೆ ಏನಾರು ಆಸೆ ಇದ್ದರೆ ಹೇಳು ..ನಾನು ಕೊಡುತ್ತೇನೆ
ಬಬ್ಬು :ಹಾಗಾದರೆ ಒಂದು ವಿಷಯ
ಕೇಳಲೇ ಒಡೆಯ
ಮಂಜನಾಳ್ವ : ಹ್ಹೂ ಕೇಳು ಮತ್ತೆ
ಬಬ್ಬು :ನಮ್ಮ ಈ ಬೀಡು ಹಿರಿಯರ
ಕಾಲದಿಂದ ಆನೆ ಕುದುರೆಗಳನ್ನು ಕಟ್ಟಿ ಮೆರೆದ ಬೀಡು ಅಲ್ಲವೆ ಒಡೆಯ ..
ಮಂಜನಾಳ್ವ :ಹೌದಪ್ಪಾ ಬಬ್ಬು
ಹೌದು ..ಆದರೆ ಈಗ ಏನಿದೆ ..ಎಲ್ಲ ಬರಿದಾಗಿದೆ
ಬಬ್ಬು :ಅದಕ್ಕೆ ಒಡೆಯ ನಾವು
ಎರಡು ಗೋಣ ಕಂಜಿಗಳನ್ನಾದರು ಸಾಕುವ ಒಡೆಯ
ಮಂಜನಾಳ್ವ :ಹೌದು ಬಬ್ಬು ನೀನು
ಹೇಳುವುದು ಸರಿಯೇ ಇದೆ ,ಹೇಗೂ ಒಂದು ಕೋಣ ಕಾಳ ಮನೆಯಲ್ಲಿದೆ ,ಇದಕ್ಕೆ ಒಂದು ಜೊತೆ ಕೋಣವನ್ನು
ಇಂದೇ ಸುಬ್ರಹ್ಮಣ್ಯಕ್ಕೆ ಹೋಗಿ ತರೋಣವಂತೆ ..ನೀನು
ಹೊರಟು ಬಾ ,ಹೋಗೋಣ
ಬಬ್ಬು :ಆಗಲಿ ಒಡೆಯ
(ಮಂಜನಾಳ್ವರು ಮನೆಗೆ
ಬರುವರು,ಮಡದಿ ದಾರಾಮು ವನ್ನು ಕರೆಯುವರು )
ಮಂಜನಾಳ್ವ:ಓ ದಾರಾಮು ,ಓ
ದಾರಾಮು ಎಲ್ಲಿರುವೆ ,ನಮಗಿಂದು ಸುಬ್ರಹ್ಮಣ್ಯಕ್ಕೆ ಹೋಗಲಿದೆ ,ಬೇಗನೆ ಅಡಿಗೆ ಆಗ ಬೇಕು .-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ದಾರಾಮು : (ಹೊರ ಬಂದು ) ಆಯಿತು
ಸ್ವಾಮಿ ಬೇಗನೆ ಬಿಸಿ ನೀರು ಕಾಯಿಸಿ ಅಡಿಗೆ ಆಡುತ್ತೇನೆ
(ಅಜ್ಜಿಯ ಪ್ರವೇಶ )
ಪಾಡ್ದನ :
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
ಬೆಳಗ್ಗೆ ಬೇಗನೆ ಎದ್ದಳು
ದಾರಾಮು
ಕೆದರಿದ ತಲೆಗೆ ಎಣ್ಣೆಯ
ಹಾಕುವಳು ದಾರಾಮು
ಮಲಗಿದ ಚಾಪೆ ಮದಿಚಿದಳು ದಾರಾಮು
ಹಿಡಿಸೂಡಿ ಹಿಡಿದಳು ದಾರಾಮು
ಒಳ ಹೊರಗೆ ಗುಡಿಸಿದಳು ದಾರಾಮು
ಹುಲ್ಲಿನ ಉರುವಲು ಹಿಡಿದಳು
ದಾರಾಮು
ಒಲೆಯ ಬೂದಿ ಗೋರಿದಳು ದಾರಾಮು
ಹಟ್ಟಿಗೆ ಹೋದಳು ದಾರಾಮು
ಕಪಿಲೆ ಹಸುವ ಕರೆದಳು ದಾರಾಮು
ಹಾಲು ಹಿಂಡಿ ಬಂದಳು ದಾರಾಮು
ಒಳಗಿನ ಸೂತ್ರದ ಸಿಕ್ಕಕ್ಕೆ
ಸಿಕ್ಕಿಸಿದಳು ದಾರಾಮು
ನೀರು ತಂದಳು ದಾರಾಮು
ಕೆಂಡದ ಒಲೆಗೆ ಇಟ್ಟಳು ದಾರಾಮು
ಅಟ್ಟದಿಂದ ಮುಡಿ ಅಕ್ಕಿ ತಂದಳು ದಾರಾಮು
ಪಾತ್ರೆಯಲ್ಲಿ ಬೇಯಿಸಲು ಇಟ್ಟಳು
ದಾರಾಮು
ಈಜೋ ..ಮಂಜೊಟ್ಟಿ ಗೋಣ ..
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
ಬೆಳ್ಳಿಯ ಬುಟ್ಟಿಯ ತೆಕ್ಕೊಂಡಳು ದಾರಾಮು
ಕಂಚಿನ ಪಾತ್ರೆ ಕತ್ತಿ ತಂದಳು
ದಾರಾಮು
ತೋಟಕ್ಕೆ ಹೋದಳು ದಾರಾಮು
ದೊಡ್ಡ ಬದನೆ, ಉದ್ದನೆ ಅಲಸಂಡೆ
ಮುಗ್ಗಿಲಿನ ಸೋರೆಕಾಯಿ ,ಬೆಂಡೆ
ಬೆಟ್ಟಿನ ಕೆಂಬುಡೆ
,ಕೆಮ್ಮಣ್ಣಿನ ಕುಂಬಳ
ಧಾರೆ ಇರುವ ಹೀರೆ ,ಬಣ್ಣದ
ಪಡುವಲ
ಬಳ್ಳಿಯ ಎಳೆ ತೊಂಡೆಕಾಯಿ
ಬಗೆ ಬಗೆಯ ತರಕಾರಿ ಕೊಯ್ದಳು
ದಾರಾಮು
ತೊಂಡೆ ಗುದ್ದಿ ಎಣ್ಣೆಗೆ
ಹಾಕುವಳು ದಾರಾಮು
ಹಾಗಲ ತುಂಡರಿಸಿ ಉಪ್ಪಿಗೆ
ಹಾಕುವಳು ದಾರಾಮು
ಮೆಣಸು ಸೇರಿಸಿ ಮುನ್ನೂರು ಬಗೆ
ಅಡಿಗೆ
ಸರ ಸರನೆ ಮಾಡಿದಳು ದಾರಾಮು
ಓ ಡೆನ್ನಾನ ಡೆನ್ನಾನ ಡೆನ್ನ ಡೆನ್ನ ಡೆನ್ನಾನ ಏ ..
( ದಾರಾಮು ಪಾದ್ದನಕ್ಕೆ
ಅಭಿನಯಿಸುತ್ತಾಳೆ )-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ದಾರಾಮು : (ಸುತ್ತ ಮುತ್ತ ನೋಡಿ ಗಂಡನನ್ನು ಕರೆದು
ಹೇಳುತ್ತಾಳೆ ) ಓ ಇಕೊಳ್ಳಿ ಅಡಿಗೆ ಆಗಿದೆ,ಸ್ನಾನಕ್ಕೆ ನೀರು ಬಿಸಿ ಇದೆ.ಸ್ನಾನ
ಮಾಡಿ ಬಂದರೆ ಊಟ ಬಡಿಸುತ್ತೇನೆ
ಮಂಜನಾಳ್ವ :ಸರಿ ಹಾಗಾದರೆ ಈಗಲೇ
ಬಂದೆ, ಮೈಗೆ ಹಚ್ಚಲು ಮೈ ಎಣ್ಣೆ
,ಉಗುರಿಗೆ ಉಗುರೆಣ್ಣೆ,ಸೊಂಟಕ್ಕೆ ಸೋಲೆಣ್ಣೆ,ಪಾದಕ್ಕೆ ಕರಿಯೆಣ್ಣೆ ಬೆನ್ನಿಗೆ ಬೆನ್ನಿನ ಎಣ್ಣೆ ನೆತ್ತಿಗೆ ನೈ ಎಣ್ಣೆ ತಂದು
ಕೊಡು ಹಚ್ಚಿ ಸ್ನಾನ ಮಾಡಿ ತುಳಸಿಗೆ ನೀರು ಹೊಯ್ದು ಬರುವೆ
ದಾರಾಮು :ತಂದಿದ್ದೇನೆ
ತೆಗೆದುಕೊಳ್ಳಿ ,ನಾನು ಹಚ್ಚಲೇ ?
ಮಂಜನಾಳ್ವ :ನೀನು ಇಷ್ಟು
ನಲ್ಮೆಯಿಂದ ಕೇಳುವಾಗ ನಾನು ಹೇಗೆ ಬೇಡ ಎನ್ನಲಿ ಹಚ್ಚು ಬಾ ದಾರಾಮು
(ದಾರಾಮು
ಎಣ್ಣೆ ಹಚ್ಚುವಳು )
ಮಂಜನಾಳ್ವ :ಸರಿ
ನೀನು ಎಲೆ ಇಡು ಅಷ್ಟರಲ್ಲಿ ಸ್ನಾನ ಮಾಡಿ ಬರುವೆ
ದಾರಾಮು : ಸರಿ
(ಅವಳು ಮಣೆ
ಇಟ್ಟು ಎಲೆ ತೊಳೆದು ಇಟ್ಟು ಪಲ್ಯ ಬಡಿಸುತ್ತಾಳೆ ,ತುಳಸಿಗೆ ನೀರೆರೆದು ಬಂದ ಆಳ್ವ ಊಟ
ಮಾಡುತ್ತಾನೆ )
ಮಂಜನಾಳ್ವ :ಇನ್ನು ನಾವು ಸುಬ್ರಹ್ಮಣ್ಯದ ಜಾತ್ರೆಗೆ ಹೋಗಿ ಒಂದು ಗೋಣ ಕಂಜಿಯನ್ನು
ತರುತ್ತೇವೆ ,ನಾನು ಬರುವ ತನಕ ಜಾಗ್ರತೆಯಿಂದ ಇರು
ದಾರಾಮು
:ಆಯ್ತು ಸ್ವಾಮಿ ,ನೀವು ಹೋಗುವ ಮುಂಚೆ ನಮ್ಮ ಮನೆ ದೈವ ಒರಿ ದೆಯ್ಯ ಧೂಮಾವತಿಗೆ ಒಂದು ತುಪ್ಪದ
ದೀಪ ಅರಿಕೆ ಮಾಡಿ ಹೋಗುವುದು ಒಳ್ಳೆಯದಲ್ಲವೇ ?
ಮಂಜನಾಳ್ವ :
ಹೌದು ದಾರಾಮು ,ನೀನು ಸರಿಯಾದ ಸಮಯಕ್ಕೆ ನೆನಪಿಸಿದೆ ನೋಡು ,ಬಾ ದೈವಕ್ಕೆ ದೀಪ ಇಡು ,ಅರಿಕೆ
ಮಾಡುವ ,
(ದಾರಾಮು ದೀಪ
ಬೆಳಗುತ್ತಾಳೆ ಇಬ್ಬರು ನಮಸ್ಕರಿಸುತ್ತಾರೆ )
ಮಂಜನಾಳ್ವ :
(ಕೈ ಮುಗಿದು ) ಅಮ್ಮ ತಾಯಿ ಜುಮಾದಿ .ನಮ್ಮ ಹಿರಿಯರ ಕಾಲದಿಂದಲೂ ನಾವು ನಿನ್ನನ್ನು ನಂಬಿಕೊಂಡು
ಬಂದಿದ್ದೇವೆ ,ನೀನು ಕಣ್ಣಿನ ರೆಪ್ಪೆಯಂತೆ ಪ್ರತಿ ಹೆಜ್ಜೆಗೂ ನಮಗೆ ರಕ್ಷಣೆ ನೀಡಿ ಕಾಪಾಡಿಕೊಂಡು
ಬಂದು ಸಲಹಿದ್ದಿ ,ಹಿರಿಯರ ಕಾಲದಲ್ಲಿ ಅನೆ ಕುದುರೆಗಳನ್ನು ಕಟ್ಟಿ ಮೆರೆದ ಬೀಡು ನಮ್ಮದು ಅಲ್ಲವೇ
ತಾಯಿ ?ಈಗ ಒಂದು ಜೊತೆ ಕೋಣಗಳನ್ನು ಆದರೂ ಕಟ್ಟಬೇಕು ಎಂಬ ಆಸೆ ನಮ್ಮದು ..ನಮಗೆ ಜಾತ್ರೆಯಲ್ಲಿ
ಒಳ್ಳೆ ಕೋಣ ಸಿಕ್ಕಿದರೆ ಹಿಂದೆ ಬಂದು ಒಂದು ತುತ್ತು ತಿಂದು ಎರಡನೇ ತುತ್ತು ಬಾಯಿಗೆ ಇಡುವ ಮೊದಲು
ನಿನಗೆ ನೇಮಕ್ಕೆ ಬಾಳೆ ಗೊನೆ ಕಡಿಸುತ್ತೇವೆ ತಾಯೇ..ನಮ್ಮನ್ನು ಅನುಗ್ರಹಿಸು
(ಮಂಜನಾಳ್ವ
ಮಾತು ಬಬ್ಬು ಹೊರಡುತ್ತಾರೆ )
ಮಂಜನಾಳ್ವ :ಓ ಬೇಕಾದಷ್ಟು ದನಕರು ಕೋಣಗಳು ಬಂದಿವೆ ,ನಮಗೆ ಯಾವುದು
ಆದೀತು ನೋಡು ಬಬ್ಬು .
(ಕೋಣಗಳ
ಪರೀಕ್ಷೆ ಅಭಿನಯ )
ಬಬ್ಬು :ಒಡೆಯ
ಒಂದು ಕೋಣ ಕೂಡಾ ಸರಿಯಾದುದು ಸಿಗುತ್ತಿಲ್ಲ ,ಒಂದರ ಕಾಲು ಕುಂಟು ,ಒಂದರ ಕಣ್ಣು ಕುರುಡು
,ಮತ್ತೊಂದರ ಕೈ ಓರೆ,ಇನ್ನೊಂದು ಎಡಕ್ಕೆ ಎಳೆದರೆ ಬಲಕ್ಕೆ ಬಳಕೆ ಎಳೆದರೆ ಎಡಕ್ಕೆ ಹೋಗುತ್ತಿದೆ
..ಮತ್ತೊಂದಕ್ಕೆ ಹಲ್ಲು ಉದುರಿದೆ ..ಏನು ಮಾಡುವುದು
ಮಂಜನಾಳ್ವ
:ಅಮ್ಮಾ ಒರಿ ದೆಯ್ಯ ಧೂಮಾವತಿ ನೀನೇ ದಾರಿ ತೋರ ಬೇಕು
(ಅಷ್ಟರಲ್ಲಿ
ಅಲ್ಲಿ ಒಬ್ಬ ಜೋಗಿ ಪುರುಷ ಬರುತ್ತಾನೆ )
ಜೋಗಿ ಪುರುಷ :ಕೋಣ
ಕೊಳ್ಳಲು ಸಂತೆಗೆ ಬಂದಿರಲ್ಲವೇ ?ಕೋಣಗಳು ಸಿಗಲಿಲ್ಲವೇ ಬಲ್ಲಾಳರೆ?
ಮಂಜನಾಳ್ವ
:ನೀನು ನಾಲ್ಕು ಮನೆ ಬೇಡಿ ತಿನ್ನುವ ಜೋಗಿ ,ನಿನಗೇಕೆ ಅಲ್ಲ ಸಲ್ಲದ ವಿಚಾರ ?
ಜೋಗಿ ಪುರುಷ :
ನಾನು ನಾಲ್ಕು ಮನೆ ಬೇಡಿದರೆ ಏನಂತೆ ಬಲ್ಲಾಳರೆ ?ಕುರ್ನಾಡಿನ ದೈವವೇ ಬೇಡಿದೆಯಂತೆ ! ಬನ್ನಿ ನನ್ನ
ಜೊತೆ ನಿಮಗೆ ಬೇಕಾದ ಕೋಣಗಳು ಇರುವ ಜಾಗ ತೋರುತ್ತೇನೆ ದೈವ ಜುಮಾದಿಯ ಪ್ರೇರಣೆ ಆಗಿದೆ .
ಮಂಜನಾಳ್ವ:
ಸರಿ ಹಾಗಾದರೆ ನಡೆ
ಗೌಡ : ಬನ್ನಿ
ಬನ್ನಿ ನೋಡಿ ಇದೊಂದು ಶುಭ ಲಕ್ಷಣದ ಗೋಣ ಕಂಜಿ ,ಬಲಿಷ್ಟವಾಗಿದೆ ಜೊತೆಗೆ ಹೇಳಿದಂತೆ ಕೇಳುತ್ತದೆ
ಕೂಡಾ.
ಬಬ್ಬು :ಒಡೆಯ
ಒಡೆಯ ಇದೊಂದು ಕೋಣ ಬಹಳ ಚೆನ್ನಾಗಿದೆ ಶಕ್ತಿ ಶಾಲಿ ಕೈಕಾಲುಗಳು ಜೊತೆಗೆ ಹೇಳಿದಂತೆ ಕೇಳುವ ಗುಣ
ಕೂಡ ಇದಕ್ಕಿದೆ ನಮಗೆ ಇದೇ ಆಗ ಬಹುದು ಒಡೆಯ .
ಮಂಜನಾಳ್ವ
:ಸರಿ ಹಾಗಾದರೆ ಇದರ ಬೆಲೆ ಕೇಳುವ (ವ್ಯಾಪಾರಿ ಗೌಡನ ಕಡೆ ತಿರುಗಿ )ಏನಪ್ಪಾ ಗೌಡ ಎಷ್ಟು ಬೆಲೆ
ಹೇಳುತ್ತಿ ಈ ಕೋಣಕ್ಕೆ ?
ಗೌಡ
:ಹೇಳಲಿಕ್ಕೆ ಏನಿದೆ ಬಲ್ಲಾಳರೆ ? ಕೋಣದ ತಲೆಯಿಂದ ಹಿಡಿದು
ಬಾಲದ ತನಕ ಎರಡೆರಡು ವರಹಗಳನ್ನು ಎಣಿಸಬೇಕು
ಮಂಜನಾಳ್ವ :
ಸರಿ ಹಾಗಾದರೆ ತಟ್ಟೆ ಹಿಡಿ ಹಾಕುತ್ತೇನೆ (ಹಾಕುವ ಅಭಿನಯ )ಕೋಣವನ್ನು ಇಷ್ಟರ ತನಕ ಸಾಕಿದ್ದಕ್ಕೆ
ಋಣ ಸಂದಾಯ ಮಾಡಲು ಕೊನೆಯ ಹುಲ್ಲು ಕೊಡು ಗೌಡ ನಾವು ಹೊರಡುತ್ತೇವೆ
ಗೌಡ :ಸರಿ
ಬಲ್ಲಾಳರೆ ನೀವು ಹೊರಡಿ ಕೋಣಕ್ಕೆ ಹಗ್ಗ ಹಾಕಿ ,ನಾನು ಹಗ್ಗವನ್ನು ಕೊಡಲಾರೆ .
ಮಂಜನಾಳ್ವ :
ಸರಿಯಪ್ಪ ,ಬಬ್ಬು ನಾವು ತಂದ ಬಳ್ಳಿಯಿಂದ ಕೋಣವನ್ನು ಕಟ್ಟು ಅವರು ಕಟ್ಟಿದ ಬಳ್ಳಿ ಬಿಡಿಸಿ
ಅವರಿಗೆ ಕೊಡು
ಬಬ್ಬು : ಸರಿ
ಒಡೆಯ (ಹಾಗೇ ಅಭಿನಯಿಸುವನು )
ಮಂಜನಾಳ್ವ
:ಸರಿ ಹೊರಡೋಣ ಇನ್ನು
(ಮಂಜನಾಳ್ವ,
ಬಬ್ಬು ಮತ್ತು ಕೋಣಗಳ ನಿರ್ಗಮನ )
(ಅಜ್ಜಿಯ
ಪ್ರವೇಶ )
ಅಜ್ಜಿ : ಉರಲ್
(ಹಾಡು )
ಓ ಬೊಳ್ಳ..
ಹುಟ್ಟಿದನೇ ಬೆಟ್ಟದ ಮೇಲೆ ..
ಓ ಪುದಾ
..ಹುಟ್ಟಿತೋ ಪುತ್ತೂರು ಬೀಡಿನಲಿ
ಪುತ್ತೋ..ಓ
ಕುಣಿಯಲು ಕಂಚಿನ ಗಗ್ಗರ ಹಾಕಿದರು
ಕುಣಿಯಲು ಬೊಳ್ಳನಿಗೆ ಆಭರಣ ಹಾಕಿದರು
ಪುತ್ತೋ ..ಓ
ಗಾಳಿಗಪ್ಪಾ ಹೋಗುತ್ತದೆ ಗಾಳಿಯ ಮನೇ ..
ಓ ..ಅಂಗಳದವನು
ಕುಣಿಯಿರಿ ಅಂಗಳದ ದಿಕ್ಕ ..
(ಅಜ್ಜಿಯ
ನಿರ್ಗಮನ )
(ಮಂಜನಾಳ್ವ
ಬಬ್ಬು ಮತ್ತು ಕೋಣಗಳ ಪ್ರವೇಶ )
-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
ಮಂಜನಾಳ್ವ :ಓ
ಮನೆ ಹತ್ತಿರ ಬಂದೆವು ,ಓ ಬಬ್ಬು ಇಲ್ಲಿಯೇ ಧೂಮಾವತಿ ಕೊಟ್ಯದ ಹಲಸಿನ ಮರ ತುಂಬಾ ಕಾಯಿ ಬಿಟ್ಟಿದೆ
,ಅಲ್ಲಿಂದ ಒಂದು ಕಾಯಿ ಕೀಳು ಕೋಣಕ್ಕೆ ತಿನ್ನಲು ಹಾಕುವ
ಬಬ್ಬು :ಸರಿ
ಒಡೆಯ (ಮರ ಹತ್ತಿ )ಒಡೆಯಾ ..ಕೈಕಾಲು ನಡುಗುತ್ತಿದೆ ಒಡೆಯ ..ದೈವದ ಕಾಟಿಣ್ಯ ಕಾಣುತ್ತಿದೆ ..!
ಮಂಜನಾಳ್ವ :
ಹೌದೆ ಹಾಗಾದರೆ ಕೆಳಗೆ ಇರುವ ಬಿದ್ದ ಹಣ್ಣು ಮಾತ್ರ ತಿನ್ನುವ ಬಾ ..
ಬಬ್ಬು :ಸರಿ
ಒಡೆಯ ಬಂದೆ (ಹಣ್ಣನ್ನು ತಿಂದು ಸಿಪ್ಪೆಯನ್ನು ಕೋಣಕ್ಕೆ ಹಾಕುವರು )ಆಯಿತು ಒಡೆಯ ಮನೆಗೆ ಹೋಗೋಣ
ಇನ್ನು ..(ಹೋಗುವರು )
(ಅಜ್ಜಿಯ
ಪ್ರವೇಶ )
ಪಾಡ್ದನ :
ಒಂದೇ ನೆಗೆತ
ನೆಗೆದನು ಬೊಳ್ಳ
ಹಾಕಿದ ನೇವಳ
ಕಡಿದನು ಬೊಳ್ಳ
ರೆಂಜಾಳ
ಬೀಡಿಗೆ ಎಳೆಕೋಣ ಬಂತು
ಹಟ್ಟಿಯ ಒಳಗೆ
ಕಟ್ಟಿದನು ಬಬ್ಬು
ಕಂಬಳದ ಓಲೆ
ಬಂದಿತು ಆಳ್ವರಿಗೆ
ದೇವರ
ಗದ್ದೆಯಲ್ಲಿ ಕೋಣಗಳ ಓಟ
ಹೋದರು ಆಳ್ವರು
ನಾರ್ಯದ ಬಬ್ಬುವು
ಆಳ್ವರಿಗೆ
ಹೇಳಿದಂತೆ ಕೇಳಲಿಲ್ಲ ಬೊಳ್ಳ
ನಾನೊಮ್ಮೆ
ಓಡಿಸುತೇನೆ ಹೇಳಿದ ಬಬ್ಬು
ಹಿಡಿಯದ
ಛಲವನ್ನೇ ಹಿಡಿದ ಬಬ್ಬು
ಬಬ್ಬು :ಬಿಡಿ
ಒಡೆಯ ನಾನು ಕೋಣಗಳನ್ನು ಓಡಿಸುತ್ತೇನೆ ,ನಾನು ಸಾಕಿದ ಕಂಜಿಗಳು ಇವು ನಾನು ಹೇಳಿದಂತೆ ಕೇಳುತ್ತವೆ
ಬೊಳ್ಳ ನೀರು ಚಿಮ್ಮಿಸಿ ಪದಕ ತರುತ್ತಾನೆ ,ನಾನೊಮ್ಮೆ ಓಡಿಸುತ್ತೇನೆ
(ಕೋಣಗಳನ್ನು
ಓಡಿಸುವ ಅಭಿನಯ )
ದೇವಳದ ಮಂದಿ
:ಯಾರದು ಮೂಲದವರು ಇಳಿಯ ಬಾರದ ಸತ್ಯದ ಗದ್ದೆಗೆ ಇಳಿದದ್ದು ?ಮೂಲದ ಹುಡುಗ ಬಬ್ಬು ವಾ ..!!ಎಳೆದು
ಹಾಕಿ ಅವನನ್ನ !
-copy rights reserved(c) ಡಾ.ಲಕ್ಷ್ಮೀ ಜಿ ಪ್ರಸಾದ
(ಅನೇಕ ಜನರು
ಓಡಿ ಹೋಗಿ ಕೋಣ ಮತ್ತು ಬಬ್ಬುವನ್ನು ಹೊಡೆಯಲು
ಹೋಗುತ್ತಾರೆ)
ಬಬ್ಬು :ಅಯ್ಯೋ
ದೇವರೇ ಇವರೆಲ್ಲ ಕತ್ತಿ ದೊಣ್ಣೆ ಹಿಡಿದು ಬರುತ್ತಿದ್ದಾರಲ್ಲ ?ಅಯ್ಯೋ ಏನು ಮಾಡಲಿ !ನೋಡೋಣ ಇಲ್ಲೆ
ಪಕ್ಕದ ತೊರೆಯ ನೀರಿಗೆ ಹಾರಿ ಇವರಿಂದ ಪಾರಾಗುತ್ತೇನೆ ,ಬೆರ್ಮೆರ್ ದೈವದ ಸೇರಿಗೆಗೆ ಸೇರುತ್ತೇನೆ ಅಮ್ಮಾ
ಜುಮಾದಿ ನಮ್ಮ ಕೈ ಬಿಡ ಬೇಡ ತಾಯಿ ...ಓ ದೇವೆರೇ ನಾಗ ಬೆರ್ಮೆರೆ ನನ್ನನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳಿ ..(ನೀರ ಗುಂಡಿಗೆ ಹಾರಿ
ಮಾಯವಾಗುತ್ತಾನೆ )
ಓಡಿಸಿಕೊಂಡು
ಬಂದ ಜನರು : ಎಲ್ಲಿ ಹೋದ ಅವನು ?ಆರೇ !ಅವನ ಮುಟ್ಟಾಳೆ ಇಲ್ಲಿ ಬಿದ್ದಿದೆ ಅವನೆಲ್ಲಿ ಹೋದ
?!ಕಾಣಿಸುತ್ತಾ ಇಲ್ಲವಲ್ಲ ..ಅವನು ಓಡಿಸಿದ ಕೋಣಗಳು ಎಲ್ಲಿ ?ಅವೂ ಕಾಣಿಸುತ್ತಾ ಇಲ್ಲಲ್ಲ ?ಅಯ್ಯೋ
ಏನು ಸೋಜಿಗವಪ್ಪ ದೇವರೇ !
ಮಂಜನಾಲ್ವ:
(ಹುಡುಕಾಡುತ್ತಾ )ಬಬ್ಬು ..ಬಬ್ಬು ..ಎಲ್ಲಿರುವೆ ...ಅಯ್ಯೋ ಬಬ್ಬು ಎಲ್ಲಿರುವೆ ..ನಾನು ಮಗನಂತೆ
ಸಾಕಿದ ಪ್ರೀತಿಯ ಮಗುವೇ ಎಲ್ಲಿರುವೆ ..ಮಗ
..ಬಬ್ಬು ಎಲ್ಲಿರುವೆ ..
ಬಬ್ಬು
(ಅದೃಶ್ಯವಾಗಿ ):ಒಡೆಯ ಅಳಬೇಡಿ ಒಡೆಯ ..ನನ್ನನ್ನು ಹುಡುಕ ಬೇಡಿ ಒಡೆಯ .ನಾನು ಜಯ ವುಳ್ಳ ಬೆರ್ಮೆರ ಪಾದಕ್ಕೆ ಸಂದಿದ್ದೇನೆ ಒಡೆಯ
..ಕೋಣ ಬೊಳ್ಳನೂ ಇಲ್ಲಿ ಸೇರಿಗೆಗೆ ಸೇರಿದ್ದಾನೆ ಒಡೆಯ .ದೈವ ಜುಮಾದಿಗೆ ಹೇಳಿದ ಹರಿಕೆಯನ್ನು
ಮರೆತದ್ದು ಮಾತ್ರವಲ್ಲದೆ ದೈವದ ಮುಂಡ್ಯೆಗೆ ಸೇರಿದ ಹಲಸಿನ ಮರದಿಂದ ಹಣ್ಣು ಕೂಡಾ ತಿಂದು ರೆಚ್ಚೆಯನ್ನು ಕೋಣ ಬೊಳ್ಳನಿಗೆ ತಿನಿಸಿದ್ದು
ತಾಯಿ ಜುಮಾದಿಗೆ ಕೋಪ ಬಂದಿದೆ ಒಡೆಯ ,ತಾಯಿ ಜುಮಾದಿಯ ಅಪ್ಪಣೆಯಂತೆ ನಾವು ಬೆರ್ಮರ ಪಾದಕ್ಕೆ
ಸಂದಾಯವಾಗಿದ್ದೇವೆ ಒಡೆಯ ...ಇನ್ನು ಮುಂದೆ ನಾವು ಜೋಗದಲ್ಲಿ ಬರಲಾರೆವು ,ನಮ್ಮನ್ನು ನಂಬಿ
“ಸ್ವಾಮಿ ಉರವ ,ಎರು ಬಂಟ ದೈವಗಳೇ ಕಾಪಾಡಿ ,
ಸಹಾಯ ಮಾಡಿ “ಎಂದು ನೀರು ಇಟ್ಟು ಕೈಮುಗಿದು ಕರೆದರೆ ,ಕರೆದಲ್ಲಿಗೆ ಬಂದು ನಿಮ್ಮ ಮನೆ ಮಠ ಮಡದಿ
ಮಕ್ಕಳು ಹಸು ಕರುಗಳಿಗೆ ರಕ್ಷಣೆ ಕೊಡುತ್ತೇವೆ
,ನಂಬಿದವರಿಗೆ ಇಂಬು ಕೊಟ್ಟು ಸತ್ಯವನ್ನು ತೋರಿಸಿ ಕೊಡುತ್ತೇವೆ ನಮ್ಮನ್ನು ನಂಬಿ .
ಮಂಜನಾಳ್ವ :ಓ
ಕಾರಣಿಕದ ದೈವಗಳೇ ನಿಮಗೆ ನಾನು ಶರಣು ಬಂದಿದ್ದೇನೆ
ಎಲ್ಲರೂ
:ನಮ್ಮದು ತಪ್ಪಾಯಿತು ದೈವಗಳೇ ನಾವು ಮಾಡಿದ ತಪ್ಪಿಗೆ ನಿಮಗೆ ಆ ಸೂರ್ಯ ಚಂದ್ರರು ಇರುವ ತನಕ ಕೋಲ
ಬಲಿ ಕೊಟ್ಟು ಸೇವೆ ಮಾಡುತ್ತೇವೆ ನಮ್ಮ ರಕ್ಷಣೆ
ಮಾಡಿ ದೈವಗಳೇ ..
ಉರವ ದೈವ
(ಬಬ್ಬು ):ತಾಯಿ ತನ್ನ ಮಕ್ಕಳ ತಪ್ಪನ್ನು ಮಡಿಲಿಗೆ ಹಾಕಿಕೊಳ್ಳುವಂತೆ ನಾವು ನಿಮ್ಮನ್ನು
ಕ್ಷಮಿಸಿದ್ದೇವೆ ..ಕಾಲ ಕಾಲಕ್ಕೆ ಕೋಲ ಕೊಟ್ಟು ನಂಬಿ..ಮೂರೂ ಕಾಲಕ್ಕೂ ಸತ್ಯವನ್ನು ಎದ್ದು ನಿಲ್ಲಿಸುತ್ತೇವೆ ..
ಎಲ್ಲರು
:ಧನ್ಯರಾದೆವು ದೈವಗಳೇ ಧನ್ಯರಾದೆವು (ಎಲ್ಲರೂ ಕೈ ಮುಗಿಯುತ್ತಾರೆ)
ಶುಭಂ
-copy rights reserved
(c) ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್ ನೆಲಮಂಗಲ
ಬೆಂಗಳೂರು ಗ್ರಾಮಂತರ ಜಿಲ್ಲೆ
samagramahithi@gmail.com