Thursday 31 January 2013

ಸ್ತ್ರೀ ಸಂವೇದನೆ - stree samvedane- 3

  
                               ಯುವತಿಯರ ಸಿಗರೇಟು ಸೇವನೆ 

ಮಂಗಳೂರಿನ ಅತ್ತಾವರದ ಕೆಫೆ  ಒಂದರಲ್ಲಿ ಮೂವರು ಯುವತಿಯರು ಒಬ್ಬ ಯುವಕನೊಂದಿಗೆ ಸಿಗರೇಟು ಸೇದುತ್ತಿರುವುದನ್ನು ನೋಡಿದ ಬಜರಂಗ ದಳ ಹಾಗು ದುರ್ಗವಾಹಿನಿಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ ಬಗ್ಗೆ ಓದಿ ಆಶ್ಚರ್ಯ ಆಯಿತು! ಸಾವಿರಾರು ಗಂಡಸರು ಸಿಗರೇಟು ಸೇದಿ ಜರ್ದ ತಿಂದು ಹಾಳಾಗುತ್ತಿರುವುದು ಇವರ ಕಣ್ಣಿಗೆ ಕಾಣಿಸುವುದಿಲ್ಲವೆ?ಬಸ್ಸು ಗಳಲ್ಲಿ ಯಾವುದೇ ಎಗ್ಗಿಲ್ಲದೆ ಸಿಗರೆಟ್ ಸೇದುವ ಯುವಕರು ಇವರ ಕಣ್ಣಿಗೆ ಕಾಣಿಸುವುದಿಲ್ಲವೇಕೆ?ಸಾರಾಯಿ ಕುಡಿದು ಮೈ ಮರೆತು ಬೀದಿ ಬೀದಿಗಳಲ್ಲಿ ಬಿದ್ದು ಮರ್ಯಾದಸ್ತರು ಓಡಾಡಲು ಅಳುಕುವಂತೆ ಮಾಡುವ ಗಂಡಸರನ್ನೇಕೆ ಹಿಡಿದು ಪೋಲಿಸರಿಗೊಪ್ಪಿಸುವುದಿಲ್ಲ .ಯುವತಿಯರು ಪಾರ್ಟಿ ಮಾಡಿದರೆ ಸಿಗರೆಟ್ ಸೇದಿದರೆ ದಾಳಿ ಮಾಡುವ ಇವರು ಅತ್ಯಾಚಾರಿಗಳ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದವರ ಬಗ್ಗೆ  ಯಾಕೆ ಮೌನವಾಗಿರುತ್ತಾರೆ ?ಯಾಕೆಂದರೆ ಅವರು ಪುರುಷರು ಅಲ್ಲವೇ?ಇವರ ಪೌರುಷ ಏನಿದ್ದರೂ ಸ್ತ್ರೀಯರ ಮೇಲೆ ಮಾತ್ರ!ನೀವೇನಂತೀರಿ ?
                                                                                                                             -     ಲಕ್ಷ್ಮಿ ಪ್ರಸಾದ್ 

Sunday 27 January 2013

Stree samvedane-2

                                           ಸ್ತ್ರೀ ಸಂವೇದನೆ -೨
              
                                                           ಸ್ತ್ರೀಯರು ದೇವರಂತಿರಬೇಕು !
     ನಿಜ !ಸ್ತ್ರೀಯರು ದೇವರಂತೆ ಇರಬೇಕು ಇಲ್ಲದಿದ್ದರೆ ಅವರ ಬದುಕು ಬಹಳ ಕಷ್ಟಕರವಾಗುತ್ತದೆ .ದೇವರಿಗೆ ಅಪಾರ ತಾಳ್ಮೆ ಇದೆ.ದೇವರ ಮೇಲೆ ಅಭಿಷೆಕವೆಂದು ಹಳೆ ಕಮಟು ತುಪ್ಪ  ಹುಳಿ ಮೊಸರು ಇನ್ನೇನೊ ಎರೆದರೂ ಅವನು ತುಟಿಪಿಟಕ್ ಎನ್ನುವುದಿಲ್ಲ !ಗರ್ಭ ಗುಡಿಯೊಳಗೆ ಗಾಳಿ ಬೆಳಕು ಇಲ್ಲದಿದ್ದರೂ ದೇವರು  ಅಲ್ಲಿಂದ ಹೊರಗೆ ಬರುವುದಿಲ್ಲ .ಯಾರು ಏನು ಹೇಳಿದರು ಹೊಗಳಿದರೂ ನಿಂದಿಸಿದರೂ ಅವನದು ದಿವ್ಯ ಮೌನ .ಹಾಗೆ ಮಹಿಳೆಯರೂ ಕೂಡಾ ಎಲ್ಲವನ್ನು ಕೇಳಿದರೂ ಕೇಳದಂತೆ ಇರಬೇಕು .ಹಾಗೆ ಇದ್ದರೆ ಮಾತ್ರ ಅವರು ಮಾನ ಇರುವ ಮಾನಿನಿಯರು .
   ಒಂದುವೇಳೆ  ಹಾಗೆ ಇರಲಿಕ್ಕಾಗದೆ ಪ್ರತಿಕ್ರಿಯೆ ನೀಡಿದರೋ ಅವರು ಲಜ್ಜೆಗೆಟ್ಟ ಬಜಾರಿಗಳು ಎಂಬ ಬಿರುದಿಗೆ ಪಾತ್ರರಾಗಬೇಕಾಗುತ್ತದೆ .  ಯಾವುದಾದರೊಂದು ವಸ್ತುವನ್ನು ಗರಿಷ್ಟ ಬೆಲೆಗಿಂತ ಹೆಚ್ಚು ಮಾರಾಟ ಮಾಡಿದರೆ ಆ ಬಗ್ಗೆ ಪುರುಷನೊಬ್ಬ ಪ್ರಶ್ನಿಸಿದರೆ ಅದು ನ್ಯಾಯವಾದ ಹೋರಾಟ .ಅದಕ್ಕೆ ಬೆಂಬಲ ಕೊಡಲು ಅನೇಕರು ಮುಂದಾಗುತ್ತಾರೆ.ಅದೇ ಕೆಲಸವನ್ನು ಮಹಿಳೆ ಮಾಡಿದರೆ ಅದು ಜಗಳಗಂಟ ತನವಾಗಿ ಬಿಡುತ್ತದೆ.ಗಂಡ ಜುಗಾರಿ ಆಡಿ  ದುಡ್ಡು ಹಾಳು ಮಾಡಿಕೊಂಡು  ಬೀಡಿ ಸಿಗರೇಟು ಸೇದುತ್ತಾ ಸೋಮಾರಿಯಾಗಿ ಬೀದಿ ಅಲೆಯುತ್ತಿದ್ದರೂ ಮಾತನಾಡದೆ ಶೋಷಣೆಯನ್ನು ಪ್ರಶ್ನಿಸದೆ ಸುಮ್ಮನಿರುವ ಹೆಂಡತಿಯರು ಆದರ್ಶ ಮಹಿಳೆಯರೆನಿಸಿ ಬಿಡುತ್ತಾರೆ .ಈ ಬಗ್ಗೆ ಜಗಳವಾಡಿದರೆ ಅವರು ಜಗಳಗಂಟಿಯರು ಆಗಿ ಬಿಡುತ್ತಾರೆ.
  ಹೆಂಗಸರ  ಬಗ್ಗೆ ಟೀಕಿಸುವ  ಹೆಂಗಸರು ಹೇಗಿರಬೇಕು ಎಂದು ಉಪದೇಶಿಸುವ ಹಕ್ಕು ಗಂಡಿಗೆ ಹುಟ್ಟಿನೊಂದಿಗೆ ಸಿಕ್ಕಿರುತ್ತದೆ.   "ಹೆಂಗಸರಿಗೆ ಮಾತನಾಡಲು ಬರುವುದಿಲ್ಲ "ಎಂದು ವಿಶ್ರಾಂತ ಪ್ರೊಫೆಸರ್  ಒಬ್ಬರು ಮಾತಿನ ನಡುವೆ ಹೇಳಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ . ವೈದ್ಯರೊಬ್ಬರು "ಬ್ಯಾಟರಿಗೆ ಒಂದು ನೆಗೆಟಿವ್ ಎಂಡ್ ಒಂದು ಪಾಸಿಟಿವ್ ಎಂಡ್ ಇರುತ್ತೆ ಆದ್ರೆ ಹೆಂಗಸರಿಗೆ ಎರಡು ಕಡೆಯೂ ನೆಗೆಟಿವ್ ಎಂಡ್ ಇರುತ್ತೆ"ಎಂದು ಹೇಳಿದ್ದನ್ನು ಕೇಳಿಸಿ ಕೊಂಡಿದ್ದೇನೆ . ದೆಹಲಿಯ ಹುಡುಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕೂಡಾ ಅನೇಕರು  ನಾನಾ ತರಹ ಹೇಳಿಕೆ ನೀಡಿದ್ದಾರೆ . ಯಾವುದೇ ಒಂದು ಪಕ್ಷ ಸಂಘ ಜಾತಿ ಜನಾಂಗದ ಕುರಿತು ಮಾತನಾಡುವಾಗ ಕೂಡ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ವ್ಯವಹರಿಸುತ್ತಾರೆ  ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತಾರೆ . ಆದರೆ  ಶೇ ೫೦ ರಷ್ಟು ಇರುವ ಮಹಿಳೆಯರ ಬಗ್ಗೆ  ಅವಮಾನಕರ ಹೇಳಿಕೆ ಕೊಡಲು ಯಾವುದೇ ಅಳುಕು  ಇರುವುದಿಲ್ಲ .ಯಾಕೆಂದರೆ ಇವರು ಎಲ್ಲ ಶೋಷಣೆಯನ್ನು ಸಹಿಸಿಕೊಂಡು ದೇವರಂತೆ ಸುಮ್ಮನಿರುತ್ತಾರೆ .ಒಂದು ವೇಳೆ ಯಾರಾದರುಒಬ್ಬಿಬ್ಬರು  ಧ್ವನಿ ಎತ್ತಿದರೆ  ಅವರ ಧ್ವನಿ ಎಷ್ಟು ದೂರದವರೆಗೆ ಕೇಳಿಸುತ್ತದೆ ! ಅಂಥಹವರು ನಗೆ ಪಾಟಲಿಗೆ ಈಡಾಗಬೇಕಾಗುತ್ತದೆ .ಅದ್ದರಿಂದ ಎಲ್ಲ ಸ್ತ್ರೀಯರೂ ದೇವರಂತೆ ಸುಮ್ಮನಿರಬೇಕು!ಆಗ ಎಲ್ಲರಿಗೂ ನೆಮ್ಮದಿ! ಏನಂತೀರಿ?

Friday 25 January 2013

                                                                    ಸ್ತ್ರೀ ಸಂವೇದನೆ  
                                          ಅತ್ಯಾಚಾರ ಆರೋಪಿಗಳ ಮೇಲೆ  ಗೂಂಡಾ  ಕಾಯ್ದೆ  ಜಾರಿಯಾಗಲಿ 

                    ಅತ್ಯಾಚಾರ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಮಾಡುವ ಬಗ್ಗೆ ಕೆಲವರು ವಿರೋಧ ವ್ಯಕ್ತ ಪಡಿಸುತ್ತಿರುವುದು ಕೇಳಿ ಬಹಳ ಖೇದ ಆಯಿತು .ಇದಕ್ಕೆ ಅವರು ನೀಡುವ ಕಾರಣ ಇದರ ದುರ್ಬಳಕೆ ಆದೀತು ಎಂಬುದು .ಇದು ನೆಗಡಿ ಬರಬಹುದು ಅಂತ ಮೂಗನ್ನೇ ಕತ್ತರಿಸಬೇಕು ಎಂದಂತೆ ಆಯಿತು .ಹಾಗೆ ನೋಡಿದರೆ ಗೂಂಡ ಕಾಯ್ದೆ  ಅಡಿ ಬರುವ ಮಾನವ ಸಾಗಣೆ  ಸರ್ಕಾರೀ ಜಾಗದ ಅತಿಕ್ರಮ ಪ್ರವೇಶ  ಮಾದಕ ವಸ್ತುಗಳ  ತಯಾರಿ ಮಾರಾಟ  ತಯಾರಿ  ಮೊದಲಾದವುಗವುಗಳಿಗಿಂತ ಅತ್ಯಾಚಾರ ಇನ್ನೂ ಹೆಚ್ಚು ಕ್ರೂರ ಮತ್ತು ಹೇಯವಾದುದಾಗಿದೆ .ಹೆಚ್ಚಿನ ಅತ್ಯಾಚಾರ  ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ .ಗೂಂಡಾ  ಕಾಯ್ದೆ ಜಾರಿಗೆ ಬಂದರೆ ಅದರ ಭಯದಿಂದಲಾದರೂ ಮುಂದ   ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿ ಮಹಿಳೆಯರು ತುಸು ನಿರಾಳವಾಗಿ ಇರಬಹುದು . ಏನಂತೀರಿ ?     

Thursday 24 January 2013

       
                                                  ೧   ನಮ್ಮ  ನೆಲ-ಜಲ 

ಬೆಂಗಳೂರಿನ   ಮುಖ್ಯ ರಸ್ತೆಯ ಬದಿಯಲ್ಲಿ   ನಮ್ಮ ಮನೆ ಇದೆ.ಹಗಲು ರಾತ್ರಿ ವಾಹನಗಳ ಓಡಾಟ ಸದ್ದು ಸದಾ ಇದ್ದದ್ದೇ .ಈ ಸದ್ದು ಗದ್ದಲಕ್ಕೆ ಹೊಂದಿಕೊಂಡು ಬಿಟ್ಟಿದ್ದೇವೆ . ಆದರೆ ನಿನ್ನೆ ರಾತ್ರಿ ಮಾತ್ರ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ . ನಿನ್ನೆ ಸಂಜೆಯಿಂದ ಪಕ್ಕದ ಸೈಟಿನಲ್ಲಿ ಕೊಳವೆ ಬಾವಿ ತೋಡುತ್ತಾ  ಇದ್ದರು .ಅದ್ರ  ಸದ್ದಿಗಿಂ ತ  ಹೆಚ್ಚು ಅವರು ೪೦೦ ಅಡಿ ಆಳ ಕೊರೆಯಲು ನಿರ್ಧರಿಸಿದ್ದಾರೆ ಎನ್ನುವ ವಿಚಾರವೇ ನನಗೆ ಆತಂಕ ಮಾಡಿದೆ ಯಾಕಂದ್ರೆ  ನಮ್ಮನೆಯ ಕೊಳವೆ ಬಾವಿ ೧೨೫ ಅಡಿಯಷ್ಟು  ಮಾತ್ರ ಅಳ ಇದೆ ಸಾಕಷ್ಟು ನೀರು ಕೂಡಾ ಇದೆ .ಈ ನಮ್ಮ ಕೊಳವೆ ಬಾವಿಗೆ  ನಮ್ಮನೆಯ ತಾರಸಿ ನೀರು ಇಂಗುವ ಹಾಗೆ ವ್ಯವಸ್ತೆ ಮಾಡಿಕೊಂಡಿದ್ದೇವೆ .ಕುಡಿಯುವ ನೀರಿಗಾಗಿ ಬೇರೆಯವರ ಹತ್ತಿರ ಕೇಳಲು ನಮಗೆ ಮನಸ್ಸಿಲ್ಲ .ಆದ್ದರಿಂದ ಬಾವಿ ಕೊರೆದ ತುಸು ಸಮಯದಲ್ಲಿಯೇ ನೀರು ಇಂಗಿಸಲು ಸುರು ಮಾಡಿದ್ದೇವೆ .ನೀರು ಇಂಗಿಸುವ ವಿಧಾನದ ಬಗ್ಗೆ ಶ್ರೀ ಪಡ್ರೆ ಮತ್ತು ಗ್ರೀನ್ ಅರ್ತ್ ರವಿಕುಮಾರ್  ಸಲಹೆ ತೆಗೆದುಕೊಂಡು ಬಾವಿ ಸುತ್ತ ಆರಡಿ ಆಗಲ ಎಂಟು ಅಡಿ ಆಳ ಅಗೆದು ಮಣ್ಣು ತೆಗೆದು ಜಲ್ಲಿ ಕಲ್ಲು ಹಾಗು ಮರಳು ತುಂಬಿ ಒಂದಡಿ ಆಳ ಗುಂಡಿಯನ್ನು ನೀರುತುಂಬಲೆಂದು ಹಾಗೇ ಬಿಟ್ಟಿದ್ದೇವೆ . ಮಳೆಗಾಲದಲ್ಲಿ ಮನೆ ತಾರಸಿಯ ಮೇಲೆ ಬೀಳುವ ಮಳೆ ನೀರು ಇಲ್ಲಿಗೆ ಬಂದು ಬೀಳುತ್ತದೆ .ನೀರು ಇಂಗಿಸುವ ಕಾರಣವೋ  ಅಥವಾ ಅದೃಷ್ಟವೋ  ಏನೋ ತಿಳಿಯದು .ಇಷ್ಟರ ತನಕ ನಮಗೆ ನೀರಿಗೇನೂ  ಕೊರತೆಯಾಗಿಲ್ಲ .
       ಕಳೆದ ವಾರ ನಮ್ಮನೆ ಹಿಂಭಾಗ ತುಸು ದೂರದಲ್ಲಿ  ಕೆಲ ವರ್ಷಗಳ  ಹಿಂದೆ ಕೊರೆದಿದ್ದ 6oo ಅಡಿ ಆಳದ ಬಾವಿಯಲ್ಲಿ ನೀರು ಖಾಲಿಯಾಗಿ ಬೇರೆ ಒಂದು 900 ಅಡಿ ಆಳದ  ಬಾವಿ ತೋಡಿದ್ದರೆ ಈಗ ಪಕ್ಕದಲ್ಲಿಯೇ ಬಾವಿ ತೋಡುತ್ತಿದ್ದಾರೆ . ಎಲ್ಲೆಡೆ ಬಾವಿ ಕೊರೆಯುತ್ತಾರೆಯೇ ಹೊರತು ಯಾರೂ ನೀರು ಇಂಗಿಸುವ ಬಗ್ಗೆ ಆಲೋಚಿಸುತ್ತಿಲ್ಲ ಎಂಬುದೇ ನನ್ನ ಆತಂಕಕ್ಕೆ ಕಾರಣವಾಗಿದೆ .ಎಲ್ಲೆಡೆ ಜನರು ನೀರಿಗಾಗಿ ಪರದಾಡುವುದು ಕಂಡು ಬರುತ್ತಿದೆ .ಈ ಪರಿಸ್ಥಿತಿ ನಮಗೂ ಬರಬಹುದೇನೋ ಎಂಬ ಆತಂಕ ಕಾಡುತ್ತಿದೆ . ಸುತ್ತ ಮುತ್ತಲೆಲ್ಲ 8೦೦-9೦೦ ಅಡಿ ಆಳದ ಬಾವಿ ಕೊರೆದು ನೀರು ಮರುಪೂರಣೆ  ಮಾಡದಿದ್ದರೆ ೧೨೫ ಅಡಿ ಆಳದ ನಮ್ಮ ಬಾವಿಯಲ್ಲಿ  ನೀರು  ನಿಂತೀತೆ ?
    ಇಂದು ನಗರಗಳಲ್ಲಿ ಮಳೆ ಬೀಳುವುದೇ ಕಡಿಮೆಯಾಗಿದೆ ಬಿದ್ದರು ನೀರು ಭೂಮಿಗೆ ಮುಟ್ಟುವುದೇ ಇಲ್ಲ . ಒಂದು  ಇಂಚು ಜಾಗ ಬಿಡದೆ  ಕಟ್ಟಿದ  ಕಟ್ಟಡಗಳು  ರಸ್ತೆಗಳು , ಅಂಗೈ ಅಗಲ ಜಾಗ ಬಿಟ್ಟರೂ ಕೂಡಾ ಸಿಮೆಂಟ್ ಹಾಕುವ ಸ್ವಚ್ಚತೆಯ ಭ್ರಮೆ  ಇದರ ನಡುವೆ ನೀರು ಇಂಗುವುದು ಹೇಗೆ ?ಕಾವೇರಿ ನೀರನ್ನು ಎಷ್ಟು ಜನರಿಗೆ ನೀಡಲು ಸಾಧ್ಯ ? ನಾವ್ಯಾವಾಗ ಸ್ವಾವಲಂಭಿಗಳು ಆಗುವುದು?ಹೇಳ್ತೀರಾ ?
    ವಿಶ್ವ  ಜಲ ದಿನದಂದಾದರು ಈ ಬಗ್ಗೆ ಚಿಂತಿಸೋಣ

    

About me

                                                                ಸ್ವವಿವರ                                                                                                 
                               ಹೆಸರು : ಡಾ । ಲಕ್ಷ್ಮೀ  ಜಿ ಪ್ರಸಾದ್   ಎಂ.ಎ (ಕನ್ನಡ ) ಎಂ.ಎ (ಸಂಸ್ಕೃತ )
                                                                            ಎಂ.ಎ (ಹಿಂದಿ ) ಎಂ.ಫಿಲ್(ವಿಷಯ :ಈಜೋ ಮಂಜೋ ಟ್ಟಿ ಗೋಣ ಪಾಡ್ದನ -ಒಂದು ವಿಶ್ಲೇಷಣಾತ್ಮಕ ಅಧ್ಯಯನ )  ಪಿ.ಎಚ್ ಡಿ(ವಿಷಯ:ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ,ಹಂಪಿ ಕನ್ನಡ ವಿಶ್ವ ವಿದ್ಯಾಲಯ )

                              ವೃತ್ತಿ :ಕನ್ನಡ ಉಪನ್ಯಾಸಕರು
                                      ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ  ಸುಳ್ಯ ತಾ  ದ. ಕ ಜಿಲ್ಲೆ
                                     
                             ಪ್ರಕಟಿತ ಕೃತಿಗಳು :
                                                ೧.ಅರಿವಿನಂಗಳದ ಸುತ್ತ (ಶೈಕ್ಷಣಿಕ ಲೇಖನಗಳು)
                                                ೨.ಮನೆಯಂಗಳದಿ ಹೂ (ಕಥಾ ಸಂಕಲನ )  
                                                ೩. ತುಂಡು ಭೂತಗಳು -ಒಂದು ಅಧ್ಯಯನ
                                                ೪.ಬೆಳಕಿನೆಡೆಗೆ (ಸಂಶೋಧನಾ ಲೇಖನಗಳು)
                                               .೫.ತುಳುವ ಸಂಸ್ಕಾರಗಳು 
                                                ೬.ಕನ್ನಡ -ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು  
                                                 ೭ .ತುಳು ಪಾಡ್ದನಗಳಲ್ಲಿ ಸ್ತ್ರೀ
                                                 ೮.ಪಾಡ್ದನ  ಸಂಪುಟ  
                                                 ೯ಕಂಬಳ ಕೋರಿ ನೇಮ
                                                ೧೦.ತುಳು ನಾಡಿನ ಅಪೂರ್ವ ಭೂತಗಳು                                                                                                             ೧೧.ತುಳು ಜನಪದ ಕವಿತೆಗಳು
                                                ೧೨ದೈವಿಕ ಕಂಬಳ ಕೋಣ
                                                ೧೩.ಚಂದ ಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು            
                             ಪ್ರಕಟಿತ ಲೇಖನಗಳು :೬೫                                                                                                                             e mail  samagramahithi @gmail.com

                            my blog  http://laxmipras.blogspot.com