Thursday 26 June 2014

ದಡವರಿಯದ ಮಕ್ಕಳಿಗೆ ಬೇಕು ಮಾರ್ಗದರ್ಶನ-ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ ,22 ಏಪ್ರಿಲ್ 2014 ರಂದು ಪ್ರಕಟಿತ ಬರಹ )

                                 
 http://www.kannadaprabha.com/columns/%E0%B2%A6%E0%B2%A1%E0%B2%B5%E0%B2%B0%E0%B2%BF%E0%B2%AF%E0%B2%A6-%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B3%86-%E0%B2%AC%E0%B3%87%E0%B2%95%E0%B3%81-%E0%B2%AE%E0%B2%BE%E0%B2%B0%E0%B3%8D%E0%B2%97%E0%B2%A6%E0%B2%B0%E0%B3%8D%E0%B2%B6%E0%B2%A8/201889.html
ಇಂಜಿನಿಯರಿಂಗ್, ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ, ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋಭಾವ ಮೂಡಲು ಕಾರಣವೇನು? ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ದುರ್ಬಲ ಮನಸ್ಥಿತಿಯೇಕೆ? ಇಂಥ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳಬೇಕಾಗುತ್ತದೆ."ಏಳು, ಎದ್ದೇಳು, ಜಾಗೃತನಾಗು" ಇದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಸಂದೇಶ. ಈ ಸಂದೇಶವನ್ನು ನೀಡಿದಾಗ ಅವರಿನ್ನೂ ಎಳೆಯ ಯುವಕರಾಗಿದ್ದರು.
ಆದರೆ ನಮ್ಮ ಇಂದಿನ ಯುವ ಜನಾಂಗದ ಮನಸ್ಥಿತಿ ಹೇಗಿದೆ? ಓದ್ಕೋ ಹೋಗು ಅಂತ ಅಮ್ಮ ಬೈದರೆ ಆತ್ಮಹತ್ಯೆ,ಅಪ್ಪ ಬೈಕ್ ತೆಗೆಸಿಕೊಡುತ್ತಿಲ್ಲ ಅಂತ ಆತ್ಮಹತ್ಯೆ, ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿಲ್ಲ ಅಂತ ಸಾಯೋದು,ಪರೀಕ್ಷೆಯಲ್ಲಿ ಫೇಲ್ ಆದರೆ ಅನ್ನುವ ಭಯದಿಂದ ಆತ್ಮಹತ್ಯೆ, ಪ್ರೇಮ ಮುರಿದುಬಿತ್ತು ಅಂತ ಆತ್ಮಹತ್ಯೆ... ಹೀಗೆ ಹನುಮಂತನ ಬಾಲದ ಹಾಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಇಂದಿನ ಯುವಕರ ಈ ದುರ್ಬಲ ಮನಸ್ಥಿತಿಗೆ ಕಾರಣವೇನು? ಇಂದಿನ ವಿಭಕ್ತ ಕುಟುಂಬಗಳಲ್ಲಿ ಯುವಕರಿಗೆ ಸಾಕಷ್ಟು ಆದರ, ಸಾಂತ್ವನ ಸಿಗುತ್ತಿಲ್ಲವೇ? ಹೆತ್ತವರ ಅತಿಯಾದ ಮಹತ್ವಾಂಕ್ಷೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆಯೇ? ಇಂಜಿನಿಯರಿಂಗ್, ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ,  ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋಭಾವ ಮೂಡಲು ಕಾರಣವೇನು?
 ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ದುರ್ಬಲ ಮನಸ್ಥಿತಿಯೇಕೆ? ಇಂಥ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳಬೇಕಾಗುತ್ತದೆ.ಎಂಥ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟು ಸದಾ ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಕಾರ್ಯವನ್ನುಹೆತ್ತವರೇ ಮಾಡಬೇಕಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಹಲವರು ಸೋಲುತ್ತಿದ್ದಾರೆ ಎಂದೆನಿಸುತ್ತದೆ.
ಸಂಭಾಷಣೆ: 1
ತಾಯಿ: ಯಾಕೋ ಊಟಕ್ಕೆ ಬಂದಿಲ್ಲ ಏನು ಚಿಂತೆ ಮಾಡುತ್ತಿದ್ದಿ?
 ಮಗ: ನಾಳೆ ರಿಸಲ್ಟ್ ಬರುತ್ತೆ ಅದಕ್ಕೇ ಭಯ.
ತಾಯಿ: ಅದಕ್ಯಾಕೆ ಚಿಂತೆ? ಹೇಗೂ ಚೆನ್ನಾಗಿಯೇ ಮಾಡಿದ್ದೀಯಲ್ಲ?
 ಮಗ: ಹೌದು ಆದರೂ ಒಳ್ಳೆ ಮಾರ್ಕ್ಸ್ ಬರದೇ ಇದ್ದರೆ, ಫೇಲ್ ಆದ್ರೆ ಏನು ಮಾಡೋದು?
ತಾಯಿ: ಫೇಲ್ ಆದ್ರೆ ಏನಾಯಿತು? ಪುನಃ ಕಟ್ಟಿ ಪಾಸ್ ಮಾಡು.. ಯಾಕಷ್ಟು ಚಿಂತೆ ಮಾಡ್ತೀಯ? ಹಾಗೂ ಓದೋಕೆ ಆಗ್ಲಿಲ್ಲ ಅಂದ್ರೆ ನಿನಗ್ಯಾವ ಕೆಲಸ ಇಷ್ಟಾನೋ ಅದನ್ನ ಮಾಡು. ಈಗ್ಯಾಕೆ ಚಿಂತೆ ಊಟಕ್ಕೆ ಬಾ...
ಸಂಭಾಷಣೆ: 2
ತಾಯಿ: ಊಟಕ್ಕೆ ಬಾರೋಮಗ: ಬೇಡಮ್ಮ ಹಸಿವಿಲ್ಲ
ತಾಯಿ: ನಿನಗೆ ಮೊದ್ಲಿಂದ್ಲೂ ಓದು ಓದು ಅಂತ ಹೇಳಿದೆ. ಆಗ ಸಮಯ ವ್ಯರ್ಥ ಮಾಡಿ ಈಗ ಚಿಂತೆ ಮಾಡಿ ಊಟ ಬಿಟ್ರೆ ಏನ್ಬಂತು? 
ಮಗ: ಅದೇ ಚಿಂತೆ ಅಮ್ಮಾ.. ನಾಳೆ ಒಳ್ಳೆ ಮಾರ್ಕ್ಸ್ ಬರದಿದ್ರೆ ಏನು ಮಾಡೋದು ಅಂತ ಭಯ...
 ತಾಯಿ: ನನಗೊತ್ತಿಲ್ಲ. ಅಪ್ಪನ ಕೈಯಿಂದ ಮಂಗಳಾರತಿ ಮಾಡಿಸ್ಕೋ, ಚೆನ್ನಾಗಿ ಓದು ಅಂತ ಫೀಸ್ ಜಾಸ್ತಿ ಆದ್ರೂನು ಒಳ್ಳೆ ಕಾಲೇಜ್‌ಗೆ ಹಾಕಿದ್ದೇವೆ. ಜೊತೆಗೆ ಕೋಚಿಂಗ್‌ಗೆ ಬೇರೇ ಹೋಗಿದ್ದಿ. ಮುಂದೆ ಏನು ಮಾಡ್ತೀಯೋ ನನಗಂತೂ ಚಿಂತೆ ಆಗಿದೆ.  
 
ಮೇಲಿನ ಎರಡೂ ಉದಾಹರಣೆಗಳಲ್ಲಿ ಪಿಯು ಓದುತ್ತಿರುವ ಹುಡುಗರು ಬುದ್ಧಿವಂತರು ಆದರೆ ದುರದೃಷ್ಟವಶಾತ್ ಇಬ್ಬರ ರಿಸಲ್ಟ್ ಕೂಡಾ ಫೇಲ್ ಅಂತ ಬಂತು. ಮೊದಲನೆಯಾತ ಅತ್ತುಕೊಂಡು ಮನೆಗೆ ಬರ್ತಾನೆ. ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾನೆ. ಎರಡನೆಯ ಹುಡುಗನಿಗೆ ಮನೆಗೆ ಬರಲು ಭಯವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ
.ಡಾಕ್ಟರ್ ಇಂಜಿನಿಯರ್ ಆದ್ರೆ ಮಾತ್ರ ಬದುಕು ಎನ್ನುವ ತಪ್ಪು ಕಲ್ಪನೆ ಮನೆ ಮಾಡುವಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರಿಗೆ ತಮ್ಮ ಘನೆತೆಯ ಉಳಿವಿಗಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬೇಕು , ಹೆತ್ತವರಿಗೆ ತಮ್ಮ ಮಹತ್ವಾಕಾಂಕ್ಷೆಯ ಈಡೇರಿಕೆಗಾಗಿ ಮಕ್ಕಳು ಓದಬೇಕು, ಅಂಕ ಗಳಿಸಬೇಕು... ಇನ್ನೂ ಕೆಲವು ಕುಟುಂಬಗಳಲ್ಲಿ ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರು ಮಕ್ಕಳಲ್ಲಿ ಕೇಳಿದ್ದೆಲ್ಲ ಸಿಗಲೇಬೇಕು ಎಂಬ ಮನೋಭಾವನೆ ಬೆಳೆಯಲು ಕಾರಣರಾಗುತ್ತಾರೆ.
 ಆಗ ಒಂದೊಮ್ಮೆ ಕೇಳಿದ್ದು ಕೊಡದೆ ಇದ್ದಾಗ, ಬಯಸಿದ್ದು ಸಿಗದೇ ಇದ್ದಾಗ ಮಕ್ಕಳಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೇ ಇರುವುದಿಲ್ಲ.ಇನ್ನು ಸಣ್ಣ ಪುಟ್ಟ ತಪ್ಪುಗಳನ್ನು ತುಂಟಾಟಗಳನ್ನು ದೊಡ್ಡದು ಮಾಡಿ ಹೆತ್ತವರನ್ನು ಬರ ಹೇಳಿ ಅವರ ಮುಂದೆ ಮಕ್ಕಳನ್ನು ನಿಂದಿಸುವ ಶಿಕ್ಷಕರ ಪ್ರವೃತ್ತಿಯೂ ಅಪಾಯಕಾರಿಯಾಗಬಲ್ಲದು. ಸಣ್ಣ ಪುಟ್ಟ ತಪ್ಪುಗಳಿಗೆ ಕರೆದು ಒಳ್ಳೆ ಮಾತಿನಲ್ಲಿ ಬುದ್ದಿ ಹೇಳುವುದು, ಸಣ್ಣ ಪುಟ್ಟ ಶಿಕ್ಷೆ (ಎರಡು ಪುಟ ಏನನ್ನಾದರೂ ಬರೆಯಲು ಹೇಳುವುದು ಇತ್ಯಾದಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಮಾದರಿಯ) ನೀಡಿ ಸರಿಪಡಿಸಬೇಕೇ ಹೊರತು ಸಣ್ಣ ಪುಟ್ಟ ವಿಚಾರಗಳನ್ನು ಶಿಸ್ತಿನ ನೆಪದಿಂದ ದೊಡ್ಡದು ಮಾಡಿದರೆ, ಹೆತ್ತವರನ್ನು ಬರ ಹೇಳಿ ಅವರಿಂದಲೂ ಛೀಮಾರಿ ಹಾಕಿಸಿದರೆ ಮಕ್ಕಳಿಗೆ ಮುಂದೆ ಇಂಥ ವಿಚಾರವನ್ನು ಹೆತ್ತವರಲ್ಲಿ ಹೇಳಲೇ ಭಯವಾಗುತ್ತದೆ ಅಂತ ಸಂದರ್ಭಗಳಲ್ಲಿ ಭಯ ಹಾಗೂ ಸೇಡು ತೀರಿಸುವ ಮನೋಭಾವದಿಂದ ತಮ್ಮ ಅಮೂಲ್ಯವಾದ ಬದುಕನ್ನು ನಾಶಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
 ಇಂಥ ಅನೇಕ ನಿದರ್ಶನಗಳನ್ನು ನಾವು ನೋಡುತ್ತಲೇ ಇರುತ್ತೇವೆ.ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಇಂಥ ಪರಿಸ್ಥಿತಿ ಇರಲಿಲ್ಲ. ಆದರೆ ಈಗೀಗ ತೀರ ಚಿಕ್ಕ ವಯಸ್ಸಿನ ಮಕ್ಕಳೇ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಚಾರ. ಈಗ್ಗೆ ಒಂದು ವರ್ಷದ ಹಿಂದೆ ಮೂರನೇ ತರಗತಿಯಲ್ಲಿ ಓದುತ್ತಿದ್ದ, ಎಂಟು ವರ್ಷದ ಹುಡುಗ ನೀರಿನ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ತಂದು ಶಾಲೆಯಲ್ಲಿ ಮೈಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ನಾವೆಲ್ಲಾ ಓದಿದ್ದೇವೆ. ನಾಲ್ಕನೇ ತರಗತಿ ಹುಡುಗನೊಬ್ಬ ತಂದೆ ಚಿಕನ್ ಬಿರಿಯಾನಿ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
ಮೊನ್ನೆ ಮೊನ್ನೆಯಷ್ಟೇ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರು ಹೋಲಿ ಆಟವಾಡಿದ್ದಕ್ಕೆ ಹೆತ್ತವರನ್ನು ಕರೆತನ್ನಿ ಎಂದಾಗ, ಮನೆಗೆ ಹೋಗದೇ ಸಾವಿಗೆ ಶರಣಾದದ್ದು ಎಲ್ಲರಿಗೂ ತಿಳಿದ ವಿಚಾರ.ಸಣ್ಣ ಪುಟ್ಟ ಅವಮಾನವನ್ನೂ, ಸೋಲನ್ನೂ ಎದುರಿಸಲು ಇಂದು ಅಸಮರ್ಥರಾಗುತ್ತಿದ್ದಾರೆ ಇಂದಿನ ಮಕ್ಕಳು ಮತ್ತು ಯುವ ಜನತೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಿರುತ್ತಿದ್ದವು. ತುಂಬಾ ಮಕ್ಕಳಿರುವ ಕುಟುಂಬಗಳಲ್ಲಿ ಹೊಂದಾಣಿಕೆ, ಬೈಗಳು, ಪೆಟ್ಟು ಎಲ್ಲವೂ ಇರುತ್ತಿತ್ತು. ಇದರಿಂದಾಗಿ ಹೊಂದಿ ಕೊಂಡು ಬಾಳಲು, ಸಣ್ಣ ಪುಟ್ಟ ಬೈಗಳನ್ನು ಅಪಮಾನವನ್ನು ಎದುರಿಸುವ ಮನೋಸ್ಥೈರ್ಯ ಮಕ್ಕಳಲ್ಲಿ ತನ್ನಿಂತಾನಾಗಿಯೇ ಬೆಳೆಯುತ್ತಿತ್ತು. ಆಗೆಲ್ಲ ತಮಗೆ ಕೇಳಿದ್ದು ಸಿಗಲಿಲ್ಲ ಎಂದರೆ ಮಕ್ಕಳು ಒಂದೈದು ನಿಮಿಷ ಅತ್ತು ಮರೆತುಬಿಡುತ್ತಿದ್ದವೇ ಹೊರತು, ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.
 ಕೇಳಿದ್ದೆಲ್ಲವನ್ನೂ ತಕ್ಷಣ ಕೊಡಿಸುವ ಅಭ್ಯಾಸವನ್ನು ಹೆತ್ತವರು ಮೊದಲು ಬಿಡಬೇಕು. ಮಕ್ಕಳಷ್ಟೇ ಅಲ್ಲ, ತಾವು ಬಯಸಿದ್ದೆಲ್ಲವೂ ಸಿಗಲು ಸಾಧ್ಯವಿಲ್ಲ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ, ಅದರ ಹೊರತಾಗಿಯೂ ಬದುಕಿದೆ ಎನ್ನುವುದನ್ನು ಪೋಷಕರು, ಬೈಕ್, ಕಾರು, ಮೊಬೈಲ್‌ಗಳಷ್ಟೇ ಬದುಕಲ್ಲ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಯಾವ ಕ್ಷೆತ್ರವೇ ಇರಲಿ. ಪ್ರತಿಭೆ, ಪ್ರಾಮಾಣಿಕತೆ, ಪರಿಶ್ರಮಗಳು ಇರುವ ಕಡೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ಪೋಷಕರು ಅರ್ಥಮಾಡಿಕೊಂಡು ಮಕ್ಕಳಿಗೂ ಮನದಟ್ಟು ಮಾಡಿಕೊಡಬೇಕು. 
ನಾನಾ ಕಾರಣಗಳಿಂದ ಉನ್ನತ ಶಿಕ್ಷಣ ದೊರೆಯದೆ ಇರಬಹುದು. ಕೆಲಸ ಸಿಗದಿರಬಹುದು. ಎಣಿಸಿದ್ದು ಈಡೇರದೆ ಇರಬಹುದು. ಅವಮಾನ ಎದುರಾಗಬಹುದು. ಆದರೆ ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ.ತಮ್ಮ ಮಕ್ಕಳು ಮಹಾನ್ ಬುದ್ಧಿವಂತರು ಎಂದೇ ಹೆತ್ತವರು ಸದಾ ಭಾವಿಸುತ್ತಾರೆ. ಆದರೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ, ಆದ್ದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ, ಜೀವನ್ಮುಖಿ ಉತ್ಸಾಹವನ್ನು ಚಿಗುರಿಸುವ  ಜವಾಬ್ದಾರಿಯನ್ನೂ ಶಿಕ್ಷಕರು ವಹಿಸಿಕೊಳ್ಳಬೇಕಾಗಿದೆ.
ಮೊದಲೇ ಎಸ್‌ಎಸ್‌ಎಲ್‌ಸಿ, ಪಿಯುಸಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹದಿಹರೆಯದವರು. ಕೋಪ ಅಸಹನೆ ಉಕ್ಕಿ ಹರಿಯುವ ವಯಸ್ಸು. ಜೊತೆಗೆ ಪರೀಕ್ಷೆಯ ಒತ್ತಡ, ಬಯಸಿದ್ದೆಲ್ಲಾ ಸಿಗಬೇಕೆಂಬ ಕೆಚ್ಚು, ಈ ವಯಸ್ಸಿಗೆ ಸೋಲನ್ನು ಸ್ವೀಕರಿಸುವುದು ಅವರಿಗೆ ಬಹಳ ಕಷ್ಟ ಎನಿಸುತ್ತದೆ. ಆದ್ದರಿಂದ ಈ ಹಂತದಲ್ಲಿಯೇ ಅವರಿಗೆ ನಿರಂತರ ಸಲಹೆ, ಆಪ್ತ ಸಮಾಲೋಚನೆಗಳ ಅಗತ್ಯವಿರುತ್ತದೆ. ಎಂಥ ಸಮಯ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ಅವರಲ್ಲಿ ಶಿಕ್ಷಕರು ಮತ್ತು ಪೋಷಕರು ಮೂಡಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಪ್ರಾಣಾಯಾಮ, ಯೋಗ ಧ್ಯಾನಗಳು ಸಹಕಾರಿ. ಜೊತೆಗೆ ನೈತಿಕ ಶಿಕ್ಷಣ ಕೂಡ ಸಹಕಾರಿಯಾಗಬಲ್ಲದು. ಎಲ್ಲಕ್ಕಿಂತ ಹೆಚ್ಚು ಗುರು-ಶಿಷ್ಯರ ನಡುವಿನ ಆತ್ಮೀಯತೆ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹದ ಸೆಲೆ ಹುಟ್ಟಿಸುವಲ್ಲಿ ಅತ್ಯಂತ ಪ್ರಯೋಜನಕಾರಿ.ಇನ್ನೇನು ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳು ಬರಲಿವೆ. ಪ್ರತಿ ವರ್ಷ ಫಲಿತಾಂಶದ ಸಮಯದಲ್ಲಿ ಫೇಲ್ ಆದವರು ನಿರೀಕ್ಷಿತ ಅಂಕ ಗಳಿಸದೇ ಇದ್ದವರು ಹತಾಶೆಗೆ ಒಳಗಾಗಿ ಸಾವಿನತ್ತ ಮುಖ ಮಾಡುವುದನ್ನು ನೋಡುತ್ತಾ ಇದ್ದೇವೆ. 

ಈ ಬಗ್ಗೆ ನಾವೆಲ್ಲಾ ಮೊದಲೇ ಎಚ್ಚೆತ್ತುಕೊಳ್ಳೋಣ. ಫಲಿತಾಂಶಕ್ಕೆ ಒಂದೆರಡು ದಿನ ಮೊದಲೇ ಶಿಕ್ಷಕರು ಹೆತ್ತವರು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿ ಒಂದು ಸಮಾಲೋಚನೆ ನಡೆಸಿದರೆ ಒಳ್ಳೆಯದು. ಎಂಥ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ, ಒಂದು ಸಣ್ಣ ಪರೀಕ್ಷೆಯಲ್ಲಿನ ಸೋಲು ದೊಡ್ಡ ವಿಷಯವೇನಲ್ಲ. ಅದನ್ನು ಮುಂದೆ ಗೆಲುವಾಗಿ ಹೇಗೆ ಮಾರ್ಪಡಿಸಲು ಸಾಧ್ಯ ಎಂಬ ಬಗ್ಗೆ ಮಾಹಿತಿ ನೀಡಿದರೆ ಹತಾಶ ಮನಸ್ಸುಗಳಿಗೆ ಸಮಾಧಾನ ನೀಡಲು ಸಾಧ್ಯ. ಒಂದು ಸಣ್ಣ ದೀಪವನ್ನು ಆರಿ ಹೋಗದಂತೆ ಗಾಳಿಗೆ ಕೈ ಅಡ್ಡ ಹಿಡಿದು ರಕ್ಷಿಸಿದರೆ ಆ ದೀಪದಿಂದ ನೂರಾರು ದೀಪಗಳನ್ನು ಬೆಳಗಬಹುದು ಅಲ್ಲವೇ? ಆದ್ದರಿಂದ ಇಂದೇ ಎಚ್ಚತ್ತುಕೊಳ್ಳೋಣ. ದಡವರಿಯದ ಅಲೆಗಳಾಗಿರುವ  ಮಕ್ಕಳಿಗೆ ದಾರಿ ದೀಪವಾಗೋಣ.- ಡಾ .ಲಕ್ಷ್ಮೀ. ಜಿ. ಪ್ರಸಾದ  ಉಪನ್ಯಾಸಕರು
ಕಾಮೆಂಟ್ಸ್ 



Even I vouch the information shared by Dr.Lakshmi.G.Prasad.Present day education is such that all the educational institutions are focusing only on result,rank,prestige at the cost of students future.Apart from academic education,students must also be trained,taught in some other areas like personality development courses,how to face the life boldly,how to concentrate,meditations etc.Children are vulnerable.Correcting and showing them correct path is rest on the shoulders of teachers,parents.Periodic counselling to be arrnaged.Basically parents and teachers are held responsible in moulding the children's future.




very much useful information regarding youth ,we should give protection to them ,Thank you Madam Laxmi prasad for good article

Avatar



ತುಂಬಾ ಉಪಯುಕ್ತ ಮಾಹಿತಿ ಸಕಾಲದಲ್ಲಿ ಸಮಾಜವನ್ನು ಎಚ್ಚರಿಸಿದ್ದಕಾಗಿ ಧನ್ಯವಾದಗಳು ಇನ್ನು ಇಂಥಹ ಚಿಂತನೀಯ ಬರಹಗಳು ಪ್ರಕಟವಾಗಲಿ




ಉತ್ತಮ ಲೇಖನ , ಪೋಷಕರು ತಪ್ಪದೆ ಓದ ಬೇಕಾದ ಲೇಖನ . ಧನ್ಯವಾದಗಳು




An eye opening article ,all parents and teacher should read and follow the guideline given by Dr Lakshmi g prasad





ಲೇಖನ ತುಂಬಾ ಚೆನ್ನಾಗಿದೆ ಇಂದಿನ ಮಕ್ಕಳಿಗೆ ಗೊತ್ತು ಗುರಿಯಿಲ್ಲ ಇವರಿಗೆ ಸೂಕ್ತ ಮಾರ್ಗ ದರ್ಶನದ ಅಗತ್ಯವಿದೆ ಬಹುಶ ಎಲ್ಲ ಶಿಕ್ಷಕರು /ಉಪನ್ಯಾಸಕರು ದ.ಲಕ್ಷ್ಮೀ ಜಿ ಪ್ರಸಾದ ಮೇಡಂ ತರ ಚಿಂತಿಸಿದರೆ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳು ಆತ್ಮ ಹತ್ಯೆಯತ್ತ ಮನಸು ಮಾಡಲಾರರು ಇಷ್ಟು ಒಳ್ಳೆ ಬರಹ ನೀಡಿದ್ದಕ್ಕೆ ಮಾಡಮ್ ಹಾಗು kannada ಪ್ರಭಕ್ಕೆ ಧನ್ಯವಾದಗಳು





ಒಬ್ಬ ಡಾಕ್ಟರ / ಇಂಜಿನಿಯರ್ ನ ಮೊದಲ ತಿಂಗಳ ಸಂಬಳ ಅವರಿಗೆ
ಪಾಠ ಮಾಡಿದ ಮೇಷ್ಟ್ರಿನ ಸರ್ವಿಸ್ ಕೊನೆಯ ಸಂಬಳ ದಷ್ಟಿರುತದೆ. ಅದಕ್ಕೆ ಮಕ್ಕಳ ಪೋಷಕರು ನೀನು ಡಾಕ್ಟರ / ಇಂಜಿನಿಯರ್ ಹಾಗು ಅಂತ ಒತ್ತಡ ಹಾಕುವುದು .
ಮನುಷ್ಯನ ಅಂತಸ್ತು ನೋಡಿ ಬೆಲೆ ಕೊಡುವ ಜನ ಇರುವ ವವರೆಗೂ ಮತ್ತು ದುಡಿಮ ಗೆ ಮತ್ತು ಶ್ರಮಕ್ಕೆ ತಕ್ಕ ಬೆಲೆ, ಅರ್ಥಿಕ ಸಮಾನತೆ ಸಿಗುವವರಿಗೂ ಮದ್ಯಮ ವರ್ಗದ ಈ ತೊಳಲಾಟ ಇದ್ದೆ ಇರುತದೆ.





ಯಾವ ಕಾಲದಲ್ಲಿ ಇದ್ದೀರಾ ಡಾಕ್ಟರ ಇಂಜಿನಿಯರ್ ಆದ ಎಲ್ಲರಿಗೂ ಈ ಒಂದು ಭಾಗ್ಯ ಇರುವುದಿಲ್ಲ. ಕೇವಲ IIT AIIMS ನಂಥ ಪ್ರತಿಸ್ಥಿಥ ವಿದ್ಯಾಸಂಸ್ಥೆಗಳಲ್ಲಿ ಓದಿದರೆ ಮಾತ್ರ ಇಂಥ ಭಾಗ್ಯ. ಇಲ್ಲವಾದಲ್ಲಿ ಶಿಕ್ಷಕರ ಮೊದಲ ಸಂಬಳವೇ ಇಂಜಿನಿಯರ್ಗಳ ಸಂಬಳಕ್ಕಿಂತ ವಾಸಿಯೇನ್ನಬಹುದು.
ಅದು ಅಲ್ಲದೆ ಹಣ ನೋಡಿ ಉದ್ಯೋಗ ಸೇರಿದವರ ಅರೋಗ್ಯ ಮತ್ತು ಜೀವನ ಮಟ್ಟ ಹೇಗಿದೆ ಎಂಬುದು ನಾವೆಲ್ಲಾ ಕಣ್ಣಾರೆ ನೋಡಿದ್ದೇವೆ

Tuesday 24 June 2014

ಲೆಕ್ಕಕ್ಕಿಲ್ಲದ ಯುಜಿಸಿ ನಿಯಮ, ಇಲ್ಲೇಕಿಲ್ಲ ಕ್ರಮ? - ಡಾ.ಲಕ್ಷ್ಮೀ ಜಿ ಪ್ರಸಾದ

                        

ಪ್ರಕಟ:ಕನ್ನಡ ಪ್ರಭ ,ಮಂಗಳವಾರ 24 ಜೂನ್ 2014

http://www.kannadaprabha.com/columns/ಲೆಕ್ಕಕ್ಕಿಲ್ಲದ-ಯುಜಿಸಿ-ನಿಯಮ-ಇಲ್ಲೇಕಿಲ್ಲ-ಕ್ರಮ/223688.html
ಕಳೆದ ಒಂದೆರಡು ವರ್ಷಗಳಿಂದ ವಿಶ್ವವಿದ್ಯಾಲಯಗಳ ಅವ್ಯಹಾರದ ಅಕ್ರಮ ನೇಮಕಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಎಲ್ಲೆಡೆ ನೇಮಕಾತಿ ಪೂರ್ವ ನಿರ್ಧರಿತವಾಗಿದ್ದು ನಾಮ್‌ಕೆವಾಸ್ಥೆ ಸಂದರ್ಶನ ನಾಟಕ ನಡೆಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಕೂಗು ಕೇಳಿ ಬರುತ್ತಾ ಇದೆ.ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ಅರ್ಹತೆಯನ್ನು ಗುರುತಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಂದು ಮಾನದಂಡವನ್ನು, ಮಾರ್ಗದರ್ಶಿ ಸೂತ್ರಗಳನ್ನು 2010 ರಲ್ಲಿ ಜಾರಿಗೆ ತಂದಿದೆ.
 
 ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳನ್ನು ತುಂಬುವಾಗ ಅಭ್ಯರ್ಥಿಯ ಆಯ್ಕೆಗೆ ಇದು ಮಾನದಂಡವಾಗಿರುತ್ತದೆ. ಇದನ್ನು ಶೈಕ್ಷಣಿಕ ನಿರ್ವಹಣಾ ಸೂಚ್ಯಂಕ (ಆ್ಛಛಜಜಟ್ಝ್ಛ ಠಜ್ಠಜ್ಟ್ಠಿಟಜಟ್ಛಿಜ ಐಟಿಜ್ಝ್ಛಛಡ್ಟ್ಠಿ) ಆಕಿಐ ಎಂದು ಕರೆದಿದ್ದಾರೆ. ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳ ಶೇ. 80 ಮತ್ತು ಸಂದರ್ಶನದ ಶೇ. 20 ಅಂಕಗಳನ್ನು ಸೇರಿಸಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಯುಜಿಸಿ ಹೇಳುತ್ತದೆ.
 ಪ್ರಕಟಿತ ಸಂಶೋಧನಾ ಕೃತಿಗಳಿಗೆ ಸಂಶೋಧನಾ ಲೇಖನಗಳಿಗೆ, ಸಂಶೋಧನಾ ಪ್ರಬಂಧ ಮಂಡನೆಗೆ, ಸಂಶೋಧನಾ ಪ್ರಾಜೆಕ್ಟ್‌ಗಳಿಗೆ, ಸಂಶೋಧನಾ ಮಾರ್ಗದರ್ಶನಗಳಿಗೆ, ಆಹ್ವಾನಿತ ಉಪನ್ಯಾಸಗಳಿಗೆ, ಪರೀಕ್ಷಾ ಕಾರ್ಯಗಳಿಗೆ, ಪಾಠ ಪ್ರವಚನಗಳಿಗೆ ಬೇರೆ ಬೇರೆ ಸೂಚ್ಯಂಕಗಳು ಇವೆ. ಕೆಲವಕ್ಕೆ ಅಂಕಗಳ ಮಿತಿ ಎಂದರೆ ಗರಿಷ್ಠ ಅಂಕಗಳು ಇವೆ. ಸಂಶೋಧನಾ ಕೃತಿಗಳು, ಲೇಖನಗಳು, ಸಂಪ್ರಬಂಧ ಮಂಡನೆಗಳು, ಸಂಶೋಧನಾ ಪ್ರಾಜೆಕ್ಟ್‌ಗಳು ಮತ್ತು ಮಾರ್ಗದರ್ಶನಗಳಿಗೆ ಗರಿಷ್ಠ ಮಿತಿ ಇರುವುದಿಲ್ಲ.
 ಆದರೆ ವಿಶ್ವವಿದ್ಯಾಲಯಗಳ ಆಯ್ಕೆ ಸಮಿತಿಗಳಿಗೆ ಈ ಮಾನದಂಡವನ್ನು ದಂಡ(ವ್ಯರ್ಥ) ಮಾಡುವ ಕಲೆ ಕರಗತವಾಗಿರುತ್ತದೆ.ಆದ್ದರಿಂದಲೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ.ಯುಜಿಸಿಯ ನಿಯಮಾವಳಿಗಳು, ಮಾರ್ಗದರ್ಶಕ ಸೂತ್ರಗಳಂತೆ ಮೂರು ಮುಖ್ಯವಾದ ವರ್ಗಗಳು ಇವೆ. ಇವುಗಳಿಗನುಗುಣವಾಗಿ ಯುಜಿಸಿಯು ಅಂಕಗಳನ್ನು ನಿಗದಿ ಪಡಿಸಿದೆ. ಪಾಠ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿದ ದಕ್ಷತೆ- ಈ ವಿಭಾಗಕ್ಕೆ ಗರಿಷ್ಟ ಅಂಕಮಿತಿ 125. 
 ಈ ಅಂಕಗಳನ್ನು ನಾಲ್ಕು  ಉಪ ವಿಭಾಗಗಳಲ್ಲಿ ಹಂಚಿದೆ. ಉಪನ್ಯಾಸ, ಪ್ರಯೋಗ, ಟುಟೋರಿಯಲ್, ಕಾಂಟ್ಯಾಕ್ಟ್ ಕ್ಲಾಸ್‌ಗಳಿಗೆ ಒಟ್ಟಾರೆಯಾಗಿ ಗರಿಷ್ಠ ಅಂಕಗಳು 50. ಯುಜಿಸಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕ್ಲಾಸ್‌ಗಳನ್ನು ತೆಗೆದುಕೊಂಡಿದ್ದಲ್ಲಿ ಗಂಟೆಗೆ 2 ಅಂಕಗಳಂತೆ ಗರಿಷ್ಠ 10 ಅಂಕಗಳು. ಜ್ಞಾನ ಪ್ರಸಾರ/ ಹಂಚುವಿಕೆ ಮತ್ತು ವಿಧಾನಗಳು (ಂಜಝ್ಟಿಜ್ಟಟ್ಟ್ಜಣ)ಗೆ ಗರಿಷ್ಟ ಅಂಕಗಳು 20. ಪಾಠ ಮಾಡುವ  ವಿಧಾನಗಳು, ಹೊಸ ಮಾದರಿಗಳ ಆವಿಷ್ಕಾರ ಮತ್ತು ಬಳಕೆ, ಮೊದಲಾದವುಗಳಿಗೆ ಒಂದು ಕೋರ್ಸ್‌ಗೆ 5 ಅಂಕಗಳಂತೆ ಗರಿಷ್ಠ 20 ಅಂಕಗಳು.ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ, ಸ್ಕ್ವಾಡ್, ಮೌಲ್ಯ ಮಾಪನ ಇತ್ಯಾದಿಗಳಿಗೆ ಗರಿಷ್ಠ 25 ಅಂಕಗಳು.ನಂತರದಲ್ಲಿ ಸಹಪಠ್ಯ- ಪೂರಕ ಪಠ್ಯ ಚಟುವಟಿಕೆಗಳಿಗೆ ಈ ಮೇಲಿನಂತೆಯೇ ಮೂರು ಉಪ ವಿಭಾಗಗಳಲ್ಲಿ ಅಂಕ ನೀಡಲಾಗುತ್ತದೆ. ಕ್ಷೇತ್ರಕಾರ್ಯ, ಸಾಂಸ್ಕೃತಿಕ ಕಾರ್ಯ, ಕಾಲೇಜು ಪತ್ರಿಕೆ ಹಾಗೂ ಸಭೆಗಳ ನಿರ್ವಹಣೆ, ರೇಡಿಯೋ ಟಾಕ್‌ಗಳು ಹೀಗೆ ಬಹಳಷ್ಟು ಸಂಗತಿಗಳನ್ನು ಉಪವಿಭಾಗವು ಒಳಗೊಂಡಿದೆ. ಇವೆಲ್ಲ ಒಟ್ಟುಗೂಡಿಸಿ ಈ ವಿಭಾಗದಲ್ಲಿ ಗರಿಷ್ಠ 50 ಅಂಕಗಳ ಮಿತಿ ಇದೆ
 .ಈ ಎರಡು ಮುಖ್ಯ ವಿಭಾಗಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುವ ಹೆಚ್ಚಿನವರು ಗರಿಷ್ಠ ಅಂಕಗಳನ್ನು ಗಳಿಸಿರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸರಕಾರೀ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇರಿ ಸಾಕಷ್ಟು ಅನುಭವ ಗಳಿಸಿದ ಮೇಲಷ್ಟೇ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ ಹೆಚ್ಚಿನವರು. ಉಪನ್ಯಾಸಕರಾದ ಮೇಲೆ ಪರೀಕ್ಷಾ ಕಾರ್ಯಗಳು, ಪಾಠ ಪ್ರವಚನಗಳು, ಸಹಪಠ್ಯ ಕಾರ್ಯಗಳು, ಃಖಖ ಹೀಗೆಲ್ಲ ತೊಡಗಿಕೊಳ್ಳುವುದು ಅನಿವಾರ್ಯ ಕೂಡಾ. ಹಾಗಾಗಿ ಈ ಅಂಕಗಳು ಹೆಚ್ಚು ಕಡಿಮೆ ಎಲ್ಲರಿಗೂ ಒಂದೇ ತೆರನಾಗಿ ಇರುತ್ತವೆ.ಮೂರನೆಯದಾಗಿ ಸಂಶೋಧನೆ ಹಾಗೂ ಪ್ರಕಟಣೆಗಳು ಮತ್ತು ಶೈಕ್ಷಣಿಕ ಕೊಡುಗೆಗಳನ್ನು ಲೆಕ್ಕ ಹಾಕಲಾಗುತ್ತದೆ. ಐದು ಉಪವಿಭಾಗಗಳಲ್ಲಿ ಲೆಕ್ಕ ಹಾಕುವ ಇಲ್ಲಿನ ಅಂಕಗಳಿಗೆ ಮಿತಿ ಇರುವುದಿಲ್ಲ. ಹೆಚ್ಚು ಸಂಶೋಧನೆ ಮತ್ತು ಪ್ರಕಟಣೆ ಮಾಡಿದವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. 
ಈ ಮೂರನೇ ವರ್ಗದಡಿಯಲ್ಲಿ ಬರುವ ಐದೂ ಉಪವಿಭಾಗಗಳ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಯಾವುದೇ ಗರಿಷ್ಠ ಮಿತಿಯನ್ನು ಯುಜಿಸಿ ನಿಗದಿ ಪಡಿಸಿಲ್ಲ. ಪ್ರಾಧ್ಯಾಪಕ ಸಹಪ್ರಾಧ್ಯಾಪಕ ಹುದ್ದೆಗಳ ಆಯ್ಕೆಗೆ ಈ ಮೂರೂ ವರ್ಗಗಳಲ್ಲಿ ಕನಿಷ್ಠ ಅಂಕಗಳು ಇರಲೇ ಬೇಕು ಎಂದು ಯುಜಿಸಿ ತಾಕೀತು ಮಾಡಿದೆ. ಮೊದಲ ಎರಡು ವರ್ಗಗಳ ಗರಿಷ್ಠ ಅಂಕ 175.ಸಹಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 400 ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳನ್ನು ಪಡೆಯಬೇಕಾಗಿದ್ದು, ಅದನ್ನು 30 ಅಂಕಗಳು ಎಂದು ಪರಿಗಣಿಸಿ ಅನಂತರದ ಹೆಚ್ಚಿನ ಪ್ರತಿ ಹದಿನೈದು ಸೂಚ್ಯಂಕಗಳಿಗೆ ಒಂದು ಅಂಕದಂತೆ ಕನಿಷ್ಠ ಮೂವತ್ತು ಅಂಕಗಳಿಗೆ ಸೇರುತ್ತಾ ಹೋಗುತ್ತದೆ. 
ಈ ಅಂಕಗಳು ಅಲ್ಲದೆ ಶೈಕ್ಷಣಿಕ ಸಾಧನೆಗಳಿಗೆ ಬೇರೆಯೇ ಅಂಕಗಳಿವೆ. ಹಾಗಾದರೆ ಈಗ ಯೂನಿವರ್ಸಿಟಿಗಳಲ್ಲಿ ನಡೆಯುವುದೇನು? 2010ಕ್ಕೂ ಮೊದಲು ನೇಮಕದ ವಿಷಯದಲ್ಲಿ ಯುಜಿಸಿಯಿಂದ ಸ್ಪಷ್ಟ ನಿರ್ದೇಶನಗಳು ಇರಲಿಲ್ಲ. ಆದರೂ 2010ರ ನಂತರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ತುಮುಕೂರು ವಿಶ್ವವಿದ್ಯಾಲಯ, ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ನಡೆದ ನೇಮಕಾತಿಯಲ್ಲಿ ಯುಜಿಸಿ ನಿಗದಿ ಪಡಿಸಿದ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಿಸಿ ಅಕ್ರಮ ನೇಮಕಾತಿ ಮಾಡಿದ್ದಾರೆ.
 
ಉದಾಹರಣೆಗೆ ಮಂಗಳೂರು ವಿವಿಯಲ್ಲಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಸಂದರ್ಶನದಲ್ಲಿ ಪ್ರಕಟಿತ ಸಂಶೋಧನಾ ಕೃತಿಗಳಿಗೆ ಗರಿಷ್ಠ 20 ಅಂಕಗಳನ್ನು ನಿಗದಿಪಡಿಸಿದ್ದರು. ಒಂದು ಸಂಶೋಧನಾ ಕೃತಿಗೆ ಐದು ಅಂಕಗಳಂತೆ ಗರಿಷ್ಠ 20 ಅಂಕಗಳು ದೊರೆಯುತ್ತವೆ. ಕೇವಲ ನಾಲ್ಕು ಕೃತಿ ಬರೆದವರೂ 20 ಅಂಕ ಗಳಿಸುತ್ತಾರೆ. ಇಪ್ಪತ್ತು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದವರಿಗೂ 20 ಅಂಕಗಳು. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈ ಅಂಕಗಳು ಕೇವಲ ಸಂಶೋಧನಾ ಕೃತಿಗಳಿಗೆ ಮಾತ್ರ ಸಿಗುತ್ತವೆ. 
ಆದರೆ ಮಂಗಳೂರು ವಿವಿಯಲ್ಲಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುವ ಸಾಮಾನ್ಯ ಅಭ್ಯರ್ಥಿಯ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಅದರಲ್ಲೊಂದು ಪಿಎಚ್‌ಡಿ ಪ್ರಬಂಧವಾಗಿದೆ ಇದಕ್ಕೆ ಶೈಕ್ಷಣಿಕ ವಿಭಾಗದಲ್ಲಿ ಪಿಎಚ್‌ಡಿಗೆ 10 ಅಂಕಗಳು ಕೊಟ್ಟಿದ್ದು ಮತ್ತೊಮ್ಮೆ ಇಲ್ಲಿ ಅದಕ್ಕೆ ಅಂಕಗಳು ಸಿಗುವುದಿಲ್ಲ. ನಿಯಮಾವಳಿ ಪ್ರಕಾರ ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಐದು ಅಂಕಗಳು ಮಾತ್ರ ಕೊಡಬೇಕಿತ್ತು. ಆದರೆ ಅವರಿಗೆ ಅಂಕಗಳನ್ನು ನೀಡಿ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ. 
ಇದೇ ವಿಭಾಗದಲ್ಲಿ 1 ಸಿ ವರ್ಗದ ಮೀಸಲಿನ ಅಡಿಯಲ್ಲಿ ಆಯ್ಕೆ ಆದ ಅಭ್ಯರ್ಥಿಯ ಒಂದೇ ಒಂದು ಕೃತಿ ಕೂಡಾ ಪ್ರಕಟವಾಗಿಲ್ಲ. ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಸೊನ್ನೆ ಅಂಕ ಬಂದಿರುತ್ತದೆ. ಆದರೂ ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಗರಿಷ್ಠ ಅಂಕಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಗರಿಷ್ಠ ಅಂಕ ನೀಡಿದ್ದರೂ ಸಂಶೋಧನೆಯಲ್ಲಿ ಸೊನ್ನೆ ಅಂಕ ಇರುವ ಕಾರಣ ಇವರಿಗಿಂತ ಹೆಚ್ಚು ಒಟ್ಟು ಅಂಕಗಳು ಬೇರೆ ಅಭ್ಯರ್ಥಿಗಳಿಗೆ ಬಂದಿದೆ. ಆದರೂ ಕಡಿಮೆ ಅಂಕ ಇದ್ದಾಗಲೂ ಅದೇ ಅಭ್ಯರ್ಥಿಯ ಆಯ್ಕೆ ಆಗಿದೆ. ಬೇರೆ ವಿಭಾಗಳಲ್ಲಿಯೂ ಸಂಶೋಧನಾ ವಿಭಾಗದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಪ್ರಕಟಣೆಗಳು ಇಲ್ಲದೆ ಇದ್ದಾಗಲೂ ಅವರಿಗೆ ಗರಿಷ್ಠ ಅಂಕಗಳನ್ನು ನೀಡಲಾಗಿದೆ. ಸಂದರ್ಶನದಲ್ಲಿಯೂ ಹೆಚ್ಚಿನ ಅಂಕಗಳನ್ನು ನೀಡಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. 
ಆ ಬಗ್ಗೆ ಕೇಳಿದರೆ ಅಂಕಗಳನ್ನು ನಿರ್ಧರಿಸುವಲ್ಲಿ ಆಯ್ಕೆ ಕಮಿಟಿಯ ತೀರ್ಮಾನವೇ ಅಂತಿಮ ಎನ್ನುವ ಸಿದ್ಧ ಉತ್ತರ ಸಿಗುತ್ತದೆ. ಆಯ್ಕೆ ಕಮಿಟಿಯ ಬೇಕಾಬಿಟ್ಟಿ ಅಂಕಗಳನ್ನು ಕೊಡುವ ಹಾಗಿದ್ದರೆ ಯುಜಿಸಿ ಮಾರ್ಗ ದರ್ಶಕ ಸೂತ್ರಗಳ ಅಗತ್ಯವೇನಿದೆ? 
ಇದೀಗ 2006-07ರಲ್ಲಿ ಮೈಸೂರು ವಿವಿ ಮಾಡಿದ 135 ಬೋಧಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದು ಪಡಿಸಿದ ಆದೇಶ ನೀಡಿ  ತಡವಾಗಿಯಾದರೂ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. 
ಅದೇ ರೀತಿ ಮಂಗಳೂರು, ಬೆಳಗಾವಿ ಸೇರಿದಂತೆ 2010 ರಲ್ಲಿ ಯುಜಿಸಿ ಸ್ಪಷ್ಟ ನಿಯಮಾವಳಿಯನ್ನು ತಂದ ನಂತರವೂ ಆದ ಅಕ್ರಮ ನೇಮಕವನ್ನು ರದ್ದುಪಡಿಸಿಬೇಕಲ್ಲದೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿದ ಆಯ್ಕೆ ಸಮಿತಿಯ ಸದಸ್ಯರು, ಉಪಕುಲಪತಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ತೆಗೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಮುಂದಿನ ನೇಮಕಗಳು ಪಾರದರ್ಶಕವಾಗಲು ಸಾಧ್ಯ. -ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ

Friday 13 June 2014

ಅಪರೂಪದ ಚಂದಕ್ಕು ನಲಿಕೆ-ಡಾ.ಲಕ್ಷ್ಮೀ ಜಿ ಪ್ರಸಾದ


copy rights reserved
ದುಡಿ ಕುಣಿತಗಳಲ್ಲಿ ಇದು ಕೂಡ ಒಂದು ,ಇಷ್ಟರ ತನಕ ಜನಪದ ಅಧ್ಯಯನಕಾರರ ಗಮನಕ್ಕೆ ಬಾರದೆ ಇರುವ ಒಂದು ಅಪರೂಪದ ತುಳು ಜನ ಪದ ಕುಣಿತವಿದು.ಬಾಳಿಲ ಮಂಜುನಾಥ ಜನಪದ ಕಲಾ ಸಂಘದವರು ಅಭಿವ್ಯಕ್ತಿಸಿದ ಚಂದಕ್ಕು ನಲಿಕೆ ,ಶ್ರೀ ಬಾಬು ಅಜಲರ ಹಾಡು ಮತ್ತು ಜನಪದ ಕಲಾ ಸಂಘದ ಮಹಿಳಾ ಸದಸ್ಯರ ಜನಪದ ನೃತ್ಯ ಬಹಳ ಸೊಗಸಾಗಿದೆ ನೃತ್ಯದ ಹೆಜ್ಜೆಗಳಲ್ಲಿ ತುಸು ಆಧುನಿಕತೆಯ ಪ್ರಭಾವ ಇದೆ. ಆದರೂ ಮೂಲದ ಕುಣಿತದ ಹೆಜ್ಜೆ ,ಸೊಗಸು ಕೂಡ ಉಳಿದುಕೊಂಡಿದೆ

Vocarchanda baari raadhe gopala paddhana by Smt sharada g bangera ,maninalkur Vocaroo Voice Messageoo Voice Message

Vocaroo Voice Message  pls click here to listen paaddana



 ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
copy rights reserved @Dr Laxmi G  Prasad




 ,,ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .

ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,
ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ




Wednesday 4 June 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು-105-106 ಕಾನದ ಕಟದ -ಡಾ.ಲಕ್ಷ್ಮೀ ಜಿ ಪ್ರಸಾದ

                  
               ಕರಂಗೋಲುಕುಣಿತ ಚಿತ್ರ ಕೃಪೆ    :ಕೃಷ್ಣ ಮೋಹನ ಪೆರ್ಲ


                                                  copy rights reserved
ಭತ್ತದ ನೈಸರ್ಗಿಕ ಬೇಸಾಯದ ಒಂದು ಹುಲ್ಲಿನ ಕ್ರಾಂತಿ ಖ್ಯಾತಿಯ ಜಪಾನಿನ ವಿಜ್ಞಾನಿ ಮಸನೋಬ ಪುಕುವೋಕ ಅಜ್ಜನನ್ನು ನೆನಪಿಸುವ ಕಾನದ ಮತ್ತು ಕಟದರು ಘಟ್ಟದ ಮೇಲಿಂದ ಕರಂಗೋಲು/ಭತ್ತದ ಅತಿಕಾರೆ ಬೆಳೆಯನ್ನು ತುಳುನಾಡಿಗೆ ತಂದ ಸಾಂಸ್ಕೃತಿಕ ವೀರರು .ಕರಂಗೋಲು ಕುಣಿತ ಇವರ ನೆನಪಿನಲ್ಲಿ ನಡೆಯುವ ತುಳು ಆರಾಧನಾ ಜನಪದ ಕುಣಿತ .
ಬೊಮ್ಮಿ ಎಂಬ ಒಂದು ಗುತ್ತಿನಲ್ಲಿ ಸುಬ್ಬಿ ಎಂಬ ಹೆಸರಿನ ಹುಡುಗಿ ಇದ್ದಳು.ಅವಳು ಒಂದು ದಿನ ಗುಡ್ಡದಲ್ಲಿ ಸೊಪ್ಪು ಹೆರೆಯುವಾಗ ಅವಳಿಗೆ ಒಂದು ಮಗು ಸಿಗುತ್ತದೆ .ಅದನ್ನು ಮಡಿಲಲ್ಲಿ ಕಟ್ಟಿಕೊಂಡು ಬಂದು ತನ್ನ ಒಡೆಯನಿಗೆ ಅವಳು ತಂದುಕೊಡುತ್ತಾಳೆ.ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದ ಆತ ಆ ಮಗುವನ್ನು ಅವಳೇ ಸಾಕುವಂತೆ ವ್ಯವಸ್ಥೆ ಮಾಡುತ್ತಾನೆ.
ಅವಳು ತನ್ನ ಅಣ್ಣಂದಿರಾದ ಪಾಂಬಲಜ್ಜ ಪೂಂಬಲ ಕರಿಯರ ಸಹಾಯದಿಂದ ಆ ಹೆಣ್ಣು ಮಗುವನ್ನು ಸಾಕುತ್ತಾಳೆ .ಬೆಳ್ಳನೆ ಹೊಳೆಯುತ್ತಾ ಇದ್ದ ಆ ಮಗುವಿಗೆ ಬೊಳ್ಳೆ ಎಂದು ಹೆಸರು ಹಿಡಿದು ಕರೆಯುತ್ತಾರೆ.
ಮುಂದೆ ಅವಳನ್ನು  ಕಂಗು ಹಿತ್ತಿಲು ಕಾಂತಣ ಬೈದ್ಯನ ಹೆಂಡತಿ ದೇಯಿ ಸಾಕುತ್ತಾಳೆ.ತುಸು ದೊಡ್ಡವಳಾದ ಮೇಲೆ ಮದುವೆ ಮಾಡುತ್ತಾರೆ .
ಬೊಳ್ಳೆ ಮತ್ತು ದೇಯಿ ಇಬ್ಬರೂ ಒಂದೇ ದಿನ ಋತುಮತಿಯರಾಗುತ್ತಾರೆ.ಇಬ್ಬರೂ ತೊಟ್ಟಿಲ ಕೆರೆಯಲ್ಲಿ ಸ್ನಾನ ಮಾಡುತ್ತಾರೆ .ಪೆರುವೆಲ್ ಮೀನುಗಳಿಗೆ ಬೆಳ್ತಿಗೆ  ಅಕ್ಕಿ ಹಾಕುತ್ತಾರೆ.ಹರಕೆ ಹೇಳುತ್ತಾರೆ.ಇದರಿಂದಾಗಿ ಗರ್ಭವತಿಯರಾಗುತ್ತಾರೆ. ದೇಯಿ ಹೆಣ್ಣು ಮಗು ಹಡೆಯುತ್ತಾಳೆ .ಅವಳೇ ಕೋಟಿ ಚೆನ್ನಯರ ಅಕ್ಕ ಕಿನ್ನಿದಾರು .
ಬೊಳ್ಳೆ ಅವಳಿ ಮಕ್ಕಳನ್ನು ಪ್ರಸವಿಸುತ್ತಾಳೆ.ಅವರಿಗೆ ಕಾನದ ,ಕಟದ ಎಂದು ಹೆಸರಿಡುತ್ತಾರೆ.ಮುಂಡೆ ಇವರು ಬೆಳೆದು ವಿದ್ಯೆ ಕಲಿತು ಅಸಮಾನ್ಯ ವೀರರಾಗುತ್ತಾರೆ.
ಮುಂದೆ ಮುದ್ದ ಕಳಲರನ್ನು ಭೇಟಿಯಾಗುತ್ತಾರೆ .ಅಲ್ಲಿ ಹೋರಾಡಿ ಕಾರಣಿಕ ತೋರುತ್ತಾರೆ.
ಮುಂಡೆ ಘಟ್ಟದ ಮೇಲಿನಿಂದ ಕರಂಗೋಲು .ಅತಿಕಾರೆ ಭತ್ತದ ತಳಿಯನ್ನು ತಂದು ತುಳುನಾಡಿನಲ್ಲಿ ಬೇಸಾಯ ಮಾಡಲು ಹೊರಡುತ್ತಾರೆ.
ಘಟ್ಟದ ಮೇಲಿನಿಂದ ಅತಿಕಾರೆ ಭತ್ತವನ್ನು ತರುವಾಗ ಚಾಮುಂಡಿ ತಡೆಯುತ್ತಾಳೆ.ಅವಳ ಜೊತೆ ಹೋರಾಡಿ ಗೆಲ್ಲುತ್ತಾರೆ.ಅವರ ಶೌರ್ಯಕ್ಕೆ ಮೆಚ್ಚಿ ಚಾಮುಂಡಿ ಅವರಿಗೆ ಯೋಧ ಕತ್ತಿಗಳನ್ನು ನೀಡುತ್ತಾಳೆ,
ಮುಂದೆ ಅವರು ಎನ್ಮೂರಿಗೆ  ಬಂದು ಕೋಟಿ ಚೆನ್ನಯರಲ್ಲಿ ಹೋರಾಡುತ್ತಾರೆ.ಮುಂದೆ ನಾಲ್ವರೂ ಸಾಹಸಿಗಳು ರಾಜಿ ಮಾಡಿ ಕೊಳ್ಳುತ್ತಾರೆ .ಒಟ್ಟಾಗಿ ಸಂಚರಿಸುವಾಗ ಮುದ್ದ ಕಳಲ ರನ್ನೂ ಭೇಟಿ ಮಾಡುತ್ತಾರೆ .ಕಾನದ ಕಟದ ತಮ್ಮ ಸಾಮರ್ಥ್ಯದಿಂದ ಕಲ್ಲಿನ ಸೆಲೆಯಿಂದ ನೀರು ತೆಗೆದು ಕಾರಣಿಕ ತೋರುತ್ತಾರೆ.
ಒಂದು ದಿನ ಕಾನದ ಕಟದ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಾರೆ.ಮೀನು ಹಿಡಿಯುವ ಉತ್ಸಾಹದಲ್ಲಿ ಅಣ್ಣ ನೀರಿಗೆ ಹಾರುತ್ತಾನೆ .ಅಣ್ಣ ಬಾರದೆ ಇರುವುದನ್ನು ಗಮನಿಸಿದ  ತಮ್ಮನೂ ನೀರಿಗೆ ಹಾರುತ್ತಾನೆ .ಇಬ್ಬರೂ ದುರಂತವನ್ನಪ್ಪುತ್ತಾರೆ .ನೀರಿನಿಂದ ಪಂಜುರ್ಲಿ ಭೂತ ಎದ್ದು ಬರುತ್ತದೆ ಪಂಜುರ್ಲಿಯ ಜೊತೆ ಕಾನದ ಕಟದ ಋ ಮಾಯವಾಗುತ್ತಾರೆ .

ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಒಂದು ವೈಶಿಷ್ಟ್ಯತೆ .ವೀರಾರಾಧನೆ ತುಳು ನಾಡಿನಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಚಲಿತವಿರುವ ವಿದ್ಯಮಾನ .ಸಾಹಸಿಗಳಾದ ಕಾನದ ಕಟದರ ಆಕಸ್ಮಿಕ ಅಥವಾ ಉದ್ದೇಶ ಪೂರ್ವಕವಾದ ಕುತಂತ್ರದಿಂದಾದ ದುರಂತ ವನ್ನಪ್ಪಿ ಮುಂಡೆ ಜನಮಾನಸದಲ್ಲಿ ನೆಲೆಸಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.

ಹಿಂದಿನ ಕಾಲದಲ್ಲಿ ಬೇಸಾಯ ಮಾಡಲು ಎಲ್ಲರಿಗೆ ಅವಕಾಶ ಇರಲಿಲ್ಲ .ಈ ಸಾಹಸಿ ಸಹೋದರರು ಅದಕ್ಕಾಗಿ ಘಟ್ಟದಿಂದ ಭತ್ತದ ಬೀಜವನ್ನು ತಂದು ಕಾಡು ಕಡಿದು ಗದ್ದೆ ಮಾಡಿ ಸಾಹಸದಿಂದ ಬೇಸಾಯ ಮಾಡಿದ್ದಿರಬೇಕು.ಈ ಸಂದರ್ಭದಲ್ಲಿ ಅವರು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿರಬೇಕು .ಚಾಮುಂಡಿ ದೈವ ತಡೆಯಿತು ಎಂಬಲ್ಲಿ ಈ ಬಗ್ಗೆ ಸುಳಿವು ಸಿಗುತ್ತದೆ .
ಹಾಗಾಗಿ ಅವರನ್ನು ಉದ್ದೇಶಪೂರ್ವಕವಾಗಿ ಯಾರಾದರೂ ದುರಂತವನ್ನಪ್ಪುವಂತೆ ಮಾಡಿರಬಹುದು .ಅಥವಾ ಹೊಳೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಮರಣನ್ನಪ್ಪಿರಬಹುದು.
ಇದಕ್ಕೆ ಮುಂದೆ ಪಂಜುರ್ಲಿ ದೈವದ ಕಾರಣಿಕ ಸೇರಿ ಅವರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಮಾಯವಾಗಿ ದೈವತ್ವ ಪಡೆದರು ಎಂಬ ಕಥಾನಕ ಸೇರಿರಬಹುದು.
ಅದು ಏನೇ ಇದ್ದರೂ ಅತಿಕಾರೆ ಭತ್ತದ ಬೆಳೆಯನ್ನು ತುಳುನಾಡಿಗೆ ಪರಿಚಯಿಸಿ ತುಳುನಾಡಿನಲ್ಲಿ ಭತ್ತದ ಬೇಸಾಯದ ಪ್ರವರ್ತಕರಾಗಿರುವ ಕಾನದ ಕಟದರು  ಪ್ರಾತಃ ಸ್ಮರಣೀಯರಾಗಿದ್ದಾರೆ ಎಂಬುದಂತೂ ಎಲ್ಲರೂ ಒಪ್ಪಲೇ ಬೇಕಾದ ವಿಚಾರವಾಗಿದೆ .
ಇವರ ನೆನಪಿನಲ್ಲಿಯೇ ಕರಂಗೋಲು ಕುಣಿತ ತುಳುನಾಡಿನಲ್ಲಿ ಬಳಕೆಗೆ ಬಂದಿದೆ.ಕರಂಗೋಲು ಮತ್ತು ಕಂಗೀಲು ಎರಡು ಕೂಡಾ ಸುಗ್ಗಿಯ ಭತ್ತದ ಬೇಸಾಯಕ್ಕೆ ಸಂಬಂಧಿಸಿದ್ದಾಗಿದೆ




           ಕಂಗೀಲು ಕುಣಿತ   ಚಿತ್ರ ಕೃಪೆ :ಪ್ರಚೇತ ಶೆಟ್ಟಿ
  ಆಧಾರ ಗ್ರಂಥ :ಡಾ.ವಾಮನ ನಂದಾವರ -ಕೋಟಿ ಚೆನ್ನಯ -ಒಂದು ಜಾನಪದೀಯ ಅಧ್ಯಯನ (ಪಿಎಚ್.ಡಿ ಸಂಶೋಧನಾ ಮಹಾ ಪ್ರಬಂಧ ).ಕರಂಗೋಲು ಎರಡೂ ಅತಿಕಾರ ಬೆಳೆಯನ್ನು ತುಳುನಾಡಿಗೆ ತಂದ ಕಾನದ ಕಟದರ ನೆನಪಿನಲ್ಲಿ ಭಿನ್ನ ಭಿನ್ನ ಸಮುದಾಯದವರು ಮಾಡುವ ಕುಣಿತ ,ನೆಕ್ಕಿ ಸೊಪ್ಪನ್ನು ಕೈಯಲ್ಲಿ ಹಿಡಿದು ಮೈಗೆ ಬಿ ಳಿ ಚುಕ್ಕೆ ಹಾಕಿ ,x ಗುರುತು ಅಡ್ಡ ಗೆರೆಗೆರೆ ತಲೆಗೆ ಮುಂಡಾಸು ಕಟ್ಟಿ ಕರಂಗೋಲು ನೃತ್ಯವನ್ನು ಮಾಡುವುದು ಸಂಪ್ರದಾಯ .ಈಗ ವೇಷ ಭೂಷಣ ಕುಣಿತ ಹಾಡುಗಳಲ್ಲಿ ಪ್ರಾದೇಶಿಕವಾಗಿ ಅನೇಕ ಭಿನ್ನತೆಗಳಿವೆ ಕರಂಗೋಲು ಚಿತ್ರ ಹಾಕಿದ್ದಕ್ಕೆ ಧನ್ಯವಾದಗಳು Krishnamohan Perla ಈ ಬಗ್ಗೆ ಹೆಚ್ಚಿನ ಮಾಹಿತಿಗೆ http://suddinews.com/sullia/2012/12/18/25702/