Thursday 26 November 2015

ಸಾವಿರದೊಂದು ಗುರಿಯೆಡೆಗೆ :261 ತುಳುನಾಡ ದೈವಗಳು -ಕೋಟೆರಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ





                            ಕೋಟೆರಾಯ ಮೂಲಸ್ಥಾನ: ಚಿತ್ರ ಕೃಪೆ :ವಿಜಯಕರ್ನಾಟಕ

ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.
ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ ಎಂಬ ಅರಸ ಆಳುತ್ತಿದ್ದ ,ಶತ್ರುಗಳ ಹುನ್ನಾರಕ್ಕೆ ಸಿಕ್ಕಿದ ಈತ ದುರಂತವನ್ನಪ್ಪಿ ರುದ್ರನ ಅನುಗ್ರಹದಿಂದ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
 ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .
ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.
.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ.
ಕಲಿಯುಗದ ಆರಂಭದಲ್ಲಿ ಕೋಟೆತುರ ಎಂಬ ಸ್ಥಳದಲ್ಲಿ ಬ್ರಹ್ಮರಾಯನೆಂಬಾತ ಧರ್ಮದಿಂದ ರಾಜ್ಯವಾಳುತಲಿದ್ದನು. ಬ್ರಹ್ಮರಾಯ-ಚಂದ್ರಮುಖಿ ದಂಪತಿಗಳಿಗೆ ಪುತ್ರ ಸಂತಾನವಿರುವುದಿಲ್ಲ. ಈ ಬಗ್ಗೆ ಚಂದ್ರಮುಖಿ ದುಃಖಿಸಲು ಬ್ರಹ್ಮರಾಯ ತಪಸ್ಸನ್ನಾಚರಿಸಿ ಶ್ರೀಹರಿಯನ್ನು ಮೆಚ್ಚಿಸಿ ವರ ಪಡೆಯಲು ನಿರ್ಧರಿಸುತ್ತಾನೆ. ಅನಂತರ ರಾಜ್ಯ ಉಸ್ತುವಾರಿಯನ್ನು ಮಂತ್ರಿಗಳಿಗೆ ವಹಿಸಿ ಘೋರಾರಣ್ಯದಲ್ಲಿ ಮಡದಿಯೊಂದಿಗೆ ನಿಷ್ಠೆಯಿಂದ ತಪವನ್ನಾಚರಿಸುತ್ತಾನೆ. ಅವನ ನಿಷ್ಠೆಗೆ ಒಲಿದ ಪಶುಪತಿ ಪುತ್ರಸಂತಾನದ ವರವನ್ನು ಕೊಡುತ್ತಾನೆ. ಅನಂತರ ಹತ್ತನೆ ತಿಂಗಳಿನಲ್ಲಿ ಬ್ರಹ್ಮರಾಯನ ಮಡದಿ ಚಂದ್ರಮುಖಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಆ ಮಗುವಿಗೆ ಕೋಟೆರಾಯ ಎಂದು ಹೆಸರಿಡುತ್ತಾರೆ. ಸರ್ವವಿದ್ಯೆಗಳಲ್ಲೂ ಪಾರಂಗತನಾಗುತ್ತಾನೆ ಕೋಟೆರಾಯ. ಬ್ರಹ್ಮರಾಯನಿಗೆ ಮುಪ್ಪು ಆವರಿಸಲು ಮಗ ಕೋಟೆರಾಯನಿಗೆ ಕೋಟೆತುರದ ಪಟ್ಟವನ್ನು ಕಟ್ಟುತ್ತಾನೆ. ಬ್ರಹ್ಮರಾಯನ ಮರಣಾನಂತರ ಕೋಟೆರಾಯ ದಿಗ್ವಿಜಯಕ್ಕೆ ಹೊರಡುತ್ತಾನೆ. ಅಗಣಿತ ಸೈನ್ಯವನ್ನು ಸೇರಿಸಿಕೊಂಡು, ಹಾರುಕುದ್ರೆ ಏರಿಕೊಂಡು ಕಾರ್ಕಳಕ್ಕೆ ತೆರಳಿ, ಊರ ಕೋಟೆಯ ಹೊಕ್ಕು ಮುರಿದು ಬೈರ್‍ಸೂಡನ ಕಪ್ಪವನ್ನು ಪಡೆಯುತ್ತಾನೆ. ಬಾರ್ಕೂರಿಗೆ ತೆರಳಲು ಇವನ ಸಾಹಸಕ್ಕೆ ಹೆದರಿ ಬದ್ದಪ್ ಕಪ್ಪಕಾಣಿಕೆ ಕೊಡುತ್ತಾನೆ. ಹೀಗೆ ಕದ್ರಿ, ಕಾಲ್ ತೋಡು, ಭಟ್ಕಳ, ಕೊಲ್ಲೂರು, ಮೊದಲಾದ ಪ್ರದೇಶಗಳನ್ನು ಗೆದ್ದು ಕಪ್ಪಕಾಣಿಕೆಗಳನ್ನು ಪಡೆದುಕೊಳ್ಳುತ್ತಾನೆ. ಅನಂತರ ಅರಮನೆಗೆ ಬಂದು ಭಯವಿಲ್ಲದ ರಾಜ್ಯವಾಳುತ್ತಿದ್ದನು. ಆಗ ಇಜಪುರ (ವಿಜಾಪುರ) ಸೀಮೆಯ ಪಾಚ್ಚವನು ಎಂಬ ರಾಜ ಕೋಟೆರಾಯನ ದಿಗ್ವಿಜಯದ ಸಾಹಸದ ವಾರ್ತೆ ಕೇಳಿ ಅವನನ್ನು ಸದೆಬಡಿಯಬೇಕೆಂದು ಯುದ್ಧಕ್ಕೆ ಬರುತ್ತಾನೆ. ದೂತರ ಮೂಲಕ ಕೋಟೆರಾಯನಿಗೆ ಕಪ್ಪ ಕಾಣಿಕೆ ಸಲ್ಲಿಸುವಂತೆ ಇಲ್ಲವೇ ಯುದ್ಧಕ್ಕೆ ಬರುವೆನೆಂದು ದೂತನಲ್ಲಿ ಹೇಳುತ್ತಾನೆ ಕೋಟೆರಾಯ. ಘೋರ ಯುದ್ಧ ನಡೆಯುತ್ತದೆ. ಕೋಟೆರಾಯನ ಪರಾಕ್ರಮದೆದುರು ನಿಲ್ಲಲು ಸಾಧ್ಯವಾಗದೆ ಪಾಶ್ಚವನು ಓಡಿ ಹೋಗುತ್ತಾನೆ. ಕೋಟೆರಾಯ ಪಾಶ್ಚವನ್ನು ಸೋಲಿಸಿದ ನಂತರ, ತನ್ನ ರಾಜ್ಯವನ್ನು ಧರ್ಮದಿಂದ ಆಳುತ್ತಾ ಇದ್ದ. ಆಗ ಕೋಟೆರಾಯನನ್ನು ಸೋಲಿಸುವುದಕ್ಕಾಗಿ ಅಡ್ಡದಾರಿಯನ್ನು ಹಿಡಿಯುವ ಪಾಶ್ಚವನು ಬೀಸ್ಹಗ್ಗ ಹೊೈನೇಣ ತೆಗೆದುಕೊಂಡು, ಮೋಸದಿಂದ ಕಟ್ಟಿ ಹಿಡಿಯುತ್ತಾನೆ. ಆಗ ಕೋಟೆರಾಯ ಪಾಶ್ಚವನ ವಶನಾಗಲಾರೆನೆಂದು ಮಾಯವಾಗುತ್ತಾನೆ. ಘೋರ ದೈವಿಕತೆಯನ್ನು ಪಡೆದು ರಣಜಟ್ಟಿಗನ ಜೊತೆಗೂಡಿಕೊಂಡು ದಂಡಿನೊಂದಿಗೆ ಮುತ್ತಿಗೆ ಹಾಕುತ್ತಿದ್ದನು. ಆನೆ ಕುದುರೆಗಳನ್ನು ಹೊಡೆಯುತ್ತಿದ್ದನು. ಸೇನೆಯನ್ನು ಆನೆ ಕುದುರೆಗಳನ್ನು ಮಾಯ ಮಾಡುತ್ತಿದ್ದನು. ಇಜಪುರಕ್ಕೆ ತೊಂದರೆ ಕೊಡುತ್ತಿದ್ದನು. ಪ್ರಶ್ನೆ ಇಟ್ಟು ನೋಡುವಾಗ ಇದು ಕೋಟೆರಾಯನ ತಂಟೆಯೆಂದು ಕಂಡು ಬರಲು ಹೊನ್ನಪೀಠ ತಂದು ಕೋಟೆರಾಯನನ್ನು ಸ್ಥಾಪಿಸಿ, ಕಪ್ಪಕಾಣಿಕೆಯಿಟ್ಟು ಪೂಜಿಸುತ್ತಾನೆ ಪಾಶ್ಚವ. ಕೋಟೆತುರದವರ ಪೂಜೆ ಭೋಗ ಸಾಲದೆಂದೂ ಉತ್ತರದಲ್ಲಿ ಅನೇಕ ಸ್ಥಳಮನೆ ಕಟ್ಟಿಸಿಕೊಳ್ಳುತ್ತಾನೆ ಕೋಟೆರಾಯ. ಈ ಕೋಟೆರಾಯ ಮಂಡ್ಲಭೋಗಕ್ಕೆ ಬಂದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಮಂಚಿ ಯಲ್ಲಿ ಕೋಟೆದಾರ್ ಎಂಬ ದೈವತಕ್ಕೆ ಆರಾಧನೆ ಇದೆ .
  ಕೋಟೆರಾಯನ ಕಥಾನಕದಲ್ಲಿ ಇತಿಹಾಸದ ಎಳೆಗಳು ಅಡಗಿವೆ.ಇಲ್ಲಿ ವಿಜಾಪುರದ ಪಾಶ್ಚವ ಅರಸನ ದಾಳಿಯ ಪ್ರಸ್ತಾಪವಿದೆ 
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ 
ಅಧಾರ ಗ್ರಂಥಗಳು 
1 ವೈದ್ಯರ ಹಾಡುಗಳು ಸಂ-ಎ ವಿ ನಾವಡ
2 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ :ಡಾ.ಲಕ್ಷ್ಮೀ ಜಿ ಪ್ರಸಾದ




Wednesday 11 November 2015

ತುಳುನಾಡಿನ ಭೂತಾರಾಧನೆ ಕಂಬಳದ ಉರವ ಮತ್ತು ಎರು ಬಂಟ ದೈವಗಳು (c)ಡಾ.ಲಕ್ಷ್ಮೀ ಜಿ ಪ್ರಸಾದ







http://kendasampige.com/images/trans.gif

http://kendasampige.com/images/trans.gif
ಹೌದು! ಹಬ್ಬದ ಅಮವಾಸ್ಯೆ ಬಂತೆಂದರೆ ತುಳುನಾಡು ರಂಗೇರುತ್ತದೆ.ಗದ್ದೆಗಳಲ್ಲಿ ಕಂಬಳ ಕೋರಿ ಆರಂಭವಾಗುತ್ತದೆ . ಮನೆ-ಮನಗಳಲ್ಲಿ ಭಕ್ತಿ-ಸಂಭ್ರಮಗಳು ತೊನೆದಾಡುತ್ತವೆ. ಪತ್ತನಾಜೆಯಂದು ತಮ್ಮ ತಮ್ಮ ಆವಾಸ ಸ್ಥಾನಕ್ಕೆ ಹೋಗುವ ಭೂತಗಳು ತಮ್ಮ ಗಗ್ಗರವನ್ನು ಬಿಚ್ಚಿ ವಿಶ್ರಮಿಸುತ್ತವೆ. ಮತ್ತೆ ಪುನಃ ಹಬ್ಬದಮವಾಸ್ಯೆಯಂದು ಗಗ್ಗರವನ್ನು ಕಟ್ಟಿ ನರ್ತಿಸುತ್ತವೆ. ಅಬ್ಬರದಿಂದ ಘರ್ಜಿಸಿ ತಪ್ಪು ಮಾಡಿದವನ ಎದೆಯಲ್ಲಿ ಭಯದ ಕಂಪನವನ್ನು ಉಂಟು ಮಾಡಿ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ. ನೊಂದವನಿಗೆ ನಿನ್ನ ಜೊತೆ ನಾನಿದ್ದೇನೆ. ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಭೂತಗಳು ಅಭಯವನ್ನು ಕೊಡುತ್ತವೆ.ದೆ. Copy rights reserved (c)Dr.Lakshmi G Prasad
ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಇದೊಂದು ಧಾರ್ಮಿಕ ರಂಗಭೂಮಿ ಕೂಡ. ತುಳುನಾಡಿನ ಭೂತ ಕನ್ನಡದ ಭೂತವಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಶಕ್ತಿಗಳು. ತುಳುನಾಡಿನ ಜನರ ಆರಾಧ್ಯ ದೇವರುಗಳು ಇವರು. ಸಂಸ್ಕೃತದ `ಪೂತಂ' ಎಂದರೆ ಪವಿತ್ರವಾದದ್ದು ಎಂಬ ಪದವೇ ಮುಂದೆ ಬೂತೊ' ಆಗಿ ಭೂತ ಆಗಿರುವ ಸಾಧ್ಯತೆ ಇದೆ ಅಥವಾ ತುಳುನಾಡಿನ ಭೂತಗಳಲ್ಲಿ ಹೆಚ್ಚಿನವುಗಳು ಮೊದಲು ಮನುಷ್ಯರಾಗಿದ್ದು ನಂತರ ದೈವತ್ವಕ್ಕೇರಿ ಆರಾಧಿಸಲ್ಪಟ್ಟವರೇ ಆಗಿರುವುದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿ ಕೂಡ ಭೂತ ಪದ ಬಳಕೆಗೆ ಬಂದಿರಬಹುದು. ವಿಶಿಷ್ಟ ಆರಾಧನ ಪ್ರಕಾರವಾದ ಭೂತಾರಾಧನೆಯಿಂದಾಗಿ ತುಳುನಾಡು ವಿಶೇಷ ಗಮನ ಸೆಳೆಯುತ್ತದೆ. ಜೊತೆಗೆ ತುಳುನಾಡಿನ  ಕಂಬಳ ಕೂಡ ವಿಶೇಷ ಮಹತ್ವವನ್ನು ಪಡೆದಿದೆ.
ಹೌದು !    ಕಂಬಳ ಕೇವಲ    ಕೋಣಗಳ ಓಟವಲ್ಲ!... ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ. ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ . ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.
 ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ.

ಹಬ್ಬದ ಅಮಾವಾಸ್ಯೆ ಕಳೆಯುತ್ತಲೇ ನನ್ನ ತಂದೆ ಮನೆ ಕೋಳ್ಯೂರು ವಾರಣಾಸಿಯ ಕಂಬಳ ಗದ್ದೆಯಲ್ಲಿ ಪೂಕರೆ ಕಂಬಳ ನೇಮ ಪ್ರತಿವರ್ಷ ನಡೆಯುತ್ತದೆ . ಆಗ .ನಮ್ಮ ಮನೆಯಲ್ಲಿ ನಾಗ ಬ್ರಹ್ಮ ದೈವದೊಂದಿಗೆ ಉರವ ಎಂಬ ದೈವಕ್ಕೂ ಆರಾಧನೆ ಇದೆ ಈ ಉರವ ಎಂಬ ಭೂತದ ಹೆಸರು ಕೂಡ ಈ  ತನಕ ವಿದ್ವಾಂಸರ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ!ದೆ. Copy rights reserved (c)Dr.Lakshmi G Prasad
ಗದ್ದೆಯನ್ನು ಉತ್ತು ಬಿತ್ತನೆಗೆ ಸಿದ್ಧ ಮಾಡುವುದನ್ನು ಕಂಡದ ಕೋರಿ (ಗದ್ದೆಯ ಕೋರಿ) ಎನ್ನುತ್ತಾರೆ. ಗದ್ದೆಯಲ್ಲಿ ಬಿತ್ತನೆ ಮಾಡುವ ಮೊದಲು ಪೂಕರೆ ಕಂಬ ನೆಡುವ ಸಂಪ್ರದಾಯ ಕಂಬಳ ಗದ್ದೆಗಳಲ್ಲಿ ಇರುತ್ತವೆ.ಇದನ್ನು ಗದ್ದೆಯ ಮದುವೆ ಎಂದು ಕರೆಯುತ್ತಾರೆ .ಗದ್ದೆ ಮದುಮಗಳು ಮತ್ತು ಪೂಕರೆ ಕಂಬವನ್ನು ಮದುಮಗ ಎಂದು ಭಾವಿಸುತ್ತಾರೆ . ಈ ಸಂದರ್ಭದಲ್ಲಿ ಉರವ, ಎರುಬಂಟ, ನಾಗಭೂತ ಹಾಗೂ ಬೆರ್ಮರ್ ಭೂತಗಳಿಗೆ ಕೋಲ ಕಟ್ಟಿ ನೇಮ ನಡೆಸುತ್ತಾರೆ. ಕಂಬಳ ಗದ್ದೆಗಳ ಅಧಿದೈವ ಬೆರ್ಮೆರ್. ಈತನ ನಾಗನೊಂದಿಗೆ ಸಮೀಕರಣಗೊಂಡು ನಾಗಬೆರ್ಮೆರ್ ಆಗಿದ್ದಾನೆ. ನಾಗಬೆರ್ಮೆರ್ ಎಂಬುದು ಸಂಸ್ಕೃತೀಕರಣಕ್ಕೆ ಒಳಗಾಗಿ ನಾಗಬ್ರಹ್ಮ ಭೂತವಾಗಿದೆ. ಉರವ ಮತ್ತು ಎರುಬಂಟರು ನಾಗಬೆರ್ಮೆರಿನ ಪರಿವಾರ ಭೂತಗಳಾಗಿವೆ.ಭೂತಕ್ಕೆ ನೇಮ ಕಟ್ಟುವ ಸಂದರ್ಭದಲ್ಲಿ ಭೂತನರ್ತಕರು ಮುಖಕ್ಕೆ ಬಣ್ಣ ಹಾಕಿಕೊಳ್ಳುವಾಗ ಆಯಾಯ ಭೂತಕ್ಕೆ ಸಂಬಂಧಿಸಿದ ಕಥಾನಕವನ್ನು ತೆಂಬರೆಯನ್ನು ಬಡಿಯುತ್ತಾ ಪಾಡ್ದನ ರೂಪದಲ್ಲಿ ಹಾಡುತ್ತಾರೆ. ಎಲ್ಲ ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳು ಈಗ ಲಭ್ಯವಿಲ್ಲ. ಹೆಚ್ಚಿನ ಪ್ರಧಾನ ಭೂತಗಳಿಗೆ ಪಾಡ್ದನಗಳನ್ನು ಹೇಳಿಯೇ ಭೂತ ಕಟ್ಟುತ್ತಾರೆ. ತುಂಡು ಭೂತಗಳು / ಪರಿವಾರ ದೈವಗಳು / ಅಧೀನ ಭೂತಗಳಿಗೆ ಪ್ರಧಾನ ಭೂತದ ವೇಷ ಭೂಷಣಗಳಲ್ಲಿ ತುಸು ವ್ಯತ್ಯಾಸ ಮಾಡಿ, ಹೆಸರು ಮಾತ್ರ ಹೇಳಿ ನೇಮ ಕೊಡುತ್ತಾರೆ. ಇಂದಿನ ವೇಗದ ಯುಗದಲ್ಲಿ ಅಪ್ರಧಾನ ದೈವಗಳ ಕುರಿತು ಮಾಹಿತಿ ಸಂಗ್ರಹಿಸುವುದು ಕಷ್ಟ ಸಾಧ್ಯವಾದ ವಿಚಾರವಾಗಿದೆ.
ಉರವ ಮತ್ತು ಎರುಬಂಟ ಭೂತಗಳ ನೇಮದಲ್ಲಿ ಈ ಭೂತಗಳಿಗೆ ಸಂಬಂಧಿಸಿದ ಪಾಡ್ದನವನ್ನು ಹೇಳುವುದಿಲ್ಲ. ಆದರೆ ಕಂಬಳ ಗದ್ದೆಗೆ ಸಂಬಂಧಿಸಿದ ಈಜೋ ಮಂಜೊಟ್ಟಿಗೋಣ ಎಂಬ ಹೆಸರಿನ ಪಾಡ್ದನವು ಪ್ರಚಲಿತವಿದೆ. ಈ ಪಾಡ್ದನವು ಡಾ| ಅಮೃತ ಸೋಮೇಶ್ವರರ ತುಳು ಪಾಡ್ದನ ಸಂಪುಟ, ಡಾ| ವಿವೇಕ ರೈ ಸಂಪಾದಿಸಿರುವ ಪುಟ್ಟು ಬಳಕೆಯ ಪಾಡ್ದನಗಳು, ಶ್ರೀಮತಿ ರೂಪಕಲಾ ಸಂಪಾದಿಸಿದ ನಾಟಿ ಹಾಗೂ ಡಾ| ಲಕ್ಷ್ಮೀ ಜಿ ಪ್ರಸಾದ್ (ಲೇಖಕಿ ) ಸಂಪಾದಿಸಿದ ಪಾಡ್ದನ ಸಂಪುಟದಲ್ಲಿದೆ.
ಈಜೋ ಮಂಜೊಟ್ಟಿಗೋಣ ಪಾಡ್ದನದ ಪ್ರಕಾರ ರೆಂಜಲಡಿ ಬರಿಕೆಯ ಮಂಜನಾಳ್ವರು ಕೋಣಗಳನ್ನು ಖರೀದಿಸಿ ತರಲು ಸುಬ್ರಹ್ಮಣ್ಯದ ಸಂತೆಗೆ ಹೋಗುತ್ತಾರೆ. ಜೊತೆಗೆ ಮೂಲದ ಕೆಲಸದ ಬಬ್ಬುವನ್ನು ಕರೆದೊಯ್ಯುತ್ತಾರೆ. ಹೋಗುವ ಮೊದಲು ತನ್ನ ಕುಲದೈವ ಬರಿದೈಯ ಧೂಮಾವತಿಯ ಮಂಡ್ಯಕ್ಕೆ ಹೋಗಿ ಒಳ್ಳೆಯ ಕೋಣಗಳು ಸಿಕ್ಕಿದರೆ ಒಂದು ತುತ್ತು ತಿಂದು ಎರಡನೆಯ ತುತ್ತು ತಿನ್ನುವುದರೊಳಗೆ ನೇಮಕ್ಕೆ ಗೊನೆ ಕಡಿದು ಇಡುತ್ತೇನೆ ಎಂದು ಹರಕೆ ಹೇಳುತ್ತಾರೆ. ಧೂಮಾವತಿ ದೈವದ ಅನುಗ್ರಹದಿಂದ ಮಂಜನಾಳ್ವರಿಗೆ ಒಳ್ಳೆಯ ಕೋಣಗಳು ಸಿಗುತ್ತವೆ. ಕೋಣಗಳೊಂದಿಗೆ ಹಿಂತಿರುಗಿ ಬರುವಾಗ ಧೂಮಾವತಿ ಭೂತದ ಮುಂಡ್ಯೆಯ ಬಳಿಗೆ ಬರುತ್ತಾರೆ. ಮುಂಡ್ಯೆಯ ಬಳಿಯಿದ್ದ ಹಲಸಿನ ಮರದ ಕಾಯಿಗಳನ್ನು ಕೀಳಲು ಮೂಲದ ಕೆಲಸದ ಬಬ್ಬುವಿಗೆ ಬಬ್ಬುವಿಗೆ ಮಂಜನಾಳ್ವರು ಹೇಳುತ್ತಾರೆ. ಹಲಸಿನ ಕಾಯಿ ಕೀಳುವಾಗ ಭೂತ ತನ್ನ ಕಾರಣಿಕವನ್ನು ತೊರಿಸುತ್ತದೆ ಎಂದು ಬಬ್ಬು ಹೇಳಿದಾಗ ಹಲಸಿನ ಹಣ್ಣನ್ನು ಕೀಳಲು ಹೇಳುತ್ತಾರೆ ಮಂಜನಾಳ್ವರು. ಅವರ ಅಣತಿಯಂತೆ ಮುಂಡ್ಯದ ಹಲಸಿನ ಮರದ ಹಣ್ಣನ್ನು ಕೀಳುತ್ತಾನೆ. ಬಬ್ಬು, ನಂತರ ಅಲ್ಲಿಯೇ ಹಣ್ಣನ್ನು ಕೊರೆದು ತಿಂದು ರೆಚ್ಚೆ(ಸಿಪ್ಪೆಯನ್ನು)ಯನ್ನು ಕೋಣಗಳಿಗೆ ಹಾಕುತ್ತಾರೆ. ತನಗೆ ಹೇಳಿದ ಹರಕೆಯನ್ನು ತೀರಿಸದೆ ಇರುವ ಮಂಜನಾಳ್ವರ ಮೇಲೆ ಧೂಮಾವತಿ ದೈವ ಮುನಿಯುತ್ತದೆ. ಇದರ ಪರಿಣಾಮವಾಗಿ ಕೋಣಗಳನ್ನು ಹಟ್ಟಿಯಲ್ಲಿ ಕಟ್ಟುವಷ್ಟರಲ್ಲಿ ಕಂಬಳಕ್ಕೆ ಬರಲು ಆಹ್ವಾನ ಬರುತ್ತದೆ ಮಂಜನಾಳ್ವರಿಗೆ. ಕಂಬಳಕ್ಕೆ ಹೋದ ಮಂಜನಾಳ್ವರ ಹಿಡಿತಕ್ಕೆ ಕೋಣಗಳು ಸಿಗುವುದಿಲ್ಲ. ಆಗ ಬಬ್ಬು ಹಠ ಮಾಡಿ ಮೂಲದವರು ಇಳಿಯಬಾರದ ಗದ್ದೆಗೆ ಇಳಿಯುತ್ತಾನೆ. ಆಗ ಮೂಲದ ಬಬ್ಬು ಮತ್ತು ಕೋಣಗಳು ಮಾಯಕವಾಗುತ್ತಾರೆ.ದೆ. Copy rights reserved (c)Dr.Lakshmi G Prasad
ತುಳುನಾಡಿನಲ್ಲಿ ದುರಂತವನ್ನಪ್ಪಿದವರು, ಮಾಯಕವಾದವರು ದೈವತ್ವಕ್ಕೇರಿ ಭೂತವಾಗಿ ಆರಾಧಿಸಲ್ಪಡುವುದು ಸಾಮಾನ್ಯವಾದ ವಿಚಾರವೇ ಆಗಿದೆ. ಅಂತೆಯೇ ಸತ್ಯದ ಕಂಬಳಗದ್ದೆಯಲ್ಲಿ ಮಾಯಕವಾದ ಮೂಲದ ಮಾಣಿ ಬಬ್ಬು ಮತ್ತು ಕೋಣ ದೈವಗಳಾಗಿದ್ದಾರೆಯೇ ? ಭೂತಗಳಾಗಿದ್ದರೆ ಯಾವ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಪೂಕರೆ ಕಂಬಳ ನೇಮದ ಆಚರಣೆಯನ್ನು ವಿಮರ್ಶಿಸಿದಾಗ ಉತ್ತರ ಸಿಗುತ್ತದೆ. ಪೂಕರೆ ಕಂಬಳ ನೇಮದಲ್ಲಿ ಉರವ ಎಂಬ ದೈವವಿರುತ್ತದೆ. ಉರವನ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಅಣಿ, ಮುಡಿಗಳು ಇರುವುದಿಲ್ಲ. ಸೊಂಟಕ್ಕೆ ತೆಂಗಿನ ತಿರಿಯ ಅಲಂಕಾರ ಇರುತ್ತದೆ. ಮುಖಕ್ಕೆ ಕಪ್ಪು ಬಣ್ಣದಲ್ಲಿ ಬಿಳಿ ಚುಕ್ಕೆಗಳನ್ನು ಇಡುತ್ತಾರೆ. ಉರವ ದೈವವು ಯಜಮಾನನ ಕೋಣಗಳ ನೇಗಿಲಿನ ಹಗ್ಗವನ್ನು ಬಿಡಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಬಳ್ಳು ಗಿರುಪ್ಪುನೆ ಎನ್ನುತ್ತಾರೆ. ಇದು ಮೂಲದ ಉಳುಮೆ ಮಾಡುವ ಮಾಣಿಯ ಕೆಲಸವನ್ನು ಸೂಚಿಸುತ್ತದೆ. ಇದರಿಂದ ಮೂಲದ ಕೆಲಸಗಾರ ಬಬ್ಬು ದೈವತ್ವಕ್ಕೇರಿ ಉರವ ಎಂಬ ಹೆಸರಿನಿಂದ ಆರಾಧನೆ ಪಡೆಯುತ್ತಾನೆ ಎಂದು ತಿಳಿದು ಬರುತ್ತದೆ. ಕಂಬಳ ಕೋರಿಯ ದಿನದಂದು ಉರವ ಭೂತದೊಂದಿಗೆ ಎರು ಬಂಟ ಎಂಬ ಭೂತಕ್ಕೆ ಆರಾಧನೆ ಇರುತ್ತದೆ. ಉರವ ಎಂದರೆ ಉಳುಮೆಗಾರ ಎಂಬ ಅರ್ಥವಿದೆ .(ಉರ –plughing,ಉರವೆ-a person who  plouhgs,TULU-EGNLISH dictionary)ಎರು ಎಂದರೆ ಕೋಣ ಎಂದರ್ಥ. ಎರು ಬಂಟ ಭೂತಕ್ಕೆ ಎರಡು ಕೊಂಬುಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಉಳಿದಂತೆ ಉರವ ದೈವದಂತೆ ಈ ಭೂತದ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಕಂಬಳ ಗದ್ದೆಯಲ್ಲಿ ಮಾಯವಾದ ಕೋಣ ಬೊಳ್ಳನೇ ಎರುಬಂಟ ದೈವವಾಗಿ ಆರಾಧನೆ ಪಡೆಯುತ್ತದೆ. ಈಜೋ ಮಂಜೊಟ್ಟಿಗೋಣ ಪಾಡ್ದನದಲ್ಲಿ ಬರುವ ಒಂಜಾಳ ಆತೇನೇ ಬಬ್ಬು, {ಒಂದಾಳು (ದೈವ) ಆದನೇ ಬಬ್ಬು}, ಎರುತ್ತ ಒಸಯೆ ಪಂಡೆನೇ {ಕೋಣನ ಒಸಯ (ಭೂತಾರಾಧನೆಯ ಆರಂಭದಲ್ಲಿ ಹೇಳುವ ಸಂಧಿ) ಹೇಳಿದನು} ಎಂಬ ಸಾಲುಗಳಲ್ಲಿ ಮೂಲದ ಮಾಣಿ ಹಾಗೂ ಕೋಣ ದೈವಗಳಾದ ಬಗ್ಗೆ ಸೂಚನೆ ಸಿಗುತ್ತದೆ.ದೆ. Copy rights reserved (c)Dr.Lakshmi G Prasad
ಕಾಸರಗೋಡು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯದ ಸುತ್ತಮುತ್ತಲಿನ ಪರಿಸರದಲ್ಲಿ ಉರವ ಹಾಗೂ ಎರುಬಂಟ ದೈವಗಳಿಗೆ ಗದ್ದೆಯಲ್ಲಿ ಕೋರಿಯಂದು ಆರಾಧನೆ ನಡೆಯುತ್ತದೆ. ಕಾಸರಗೋಡು ಜಿಲ್ಲೆಯ ಕೋಳ್ಯೂರು ಹಾಗೂ ಬಂಟ್ವಾಳದ ಬೀರೂರು ಕಂಬಳ ಗದ್ದೆಗಳಲ್ಲಿ ಮಾಯವಾದ ಕೋಣ ಹಾಗೂ ಮೂಲದ ಮಾಣಿಗಳ ಪ್ರತೀಕವಾಗಿ ಎರಡು ಕಲ್ಲುಗಳಿವೆ. ಕೋಳ್ಯೂರು ಕಂಬಳ ಗದ್ದೆಯಲ್ಲಿ ಎರಡು ಕೋಣಗಳು ಮಲಗಿರುವಂತೆ ಕಾಣಿಸುವ ಕಲ್ಲುಗಳಿದ್ದು ಇದನ್ನು ಎರು ಮಾಜಿನ ಕಲ್ಲು (ಕೋಣ ಮಾಯವಾದ ಕಲ್ಲು) ಎಂದು ಕರೆಯುತ್ತಾರೆ. ತುಸು ದೂರದಲ್ಲಿ ಒಂದು ಎತ್ತರ ದಿಣ್ಣೆಯ ಮೇಲೆ ಸಣ್ಣ ಕಲ್ಲೊಂದಿದ್ದು ಇದನ್ನು ಮುಟ್ಟಾಳೆ ಕಲ್ಲು ಎನ್ನುತ್ತಾರೆ. ಇದು ಮೂಲದ ಮಾಣಿಯ ಮುಟ್ಟಾಳೆ ಬಿದ್ದ ಕಲ್ಲು ಎನ್ನುತ್ತಾರೆ. ಅಲ್ಲಿಯೇ ಸಮೀಪದ ತೋಡಿನಲ್ಲಿ ಮೂಲದ ಮಾಣಿ ಹಾರಿ ಮಾಯವಾದ ಎಂದು ಭಾವಿಸಲಾದ ನೀರಿನ ಗುಂಡಿ ಇದೆ. ಇದನ್ನು ರೆಂಜೆ ಗುಂಡಿ ಎನ್ನುತ್ತಾರೆ. ರೆಂಜಲಾಡಿ ಬರಿಕೆಯವನು ಹಾರಿ ಮಾಯವಾದ ಗುಂಡಿ ಎಂಬುದೇ ಕಾಲಾಂತರದಲ್ಲಿ ರೆಂಜೆಗುಂಡಿ ಎಂದಾಗಿದೆ ಎಂದು ಅಲ್ಲಿನ ಹಿರಿಯರಾದ ವಾರಣಾಸಿ ನಾರಾಯಣ ಭಟ್ಟರು ಹೇಳುತ್ತಾರೆ.
ಹೀಗೆ ಈಜೋ ಮಂಜೊಟ್ಟಿಗೋಣ ಪಾಡ್ದನ ಕಂಬಳದಲ್ಲಿ ನಡೆಯುವ ಉರವ ಎರು ಬಂಟರ ನೇಮ ಹಾಗೂ ಕಂಬಳಗಳ ಕುರಿತು ಪ್ರಚಲಿತವಿರುವ ಐತಿಹ್ಯಗಳನ್ನುಒಟ್ಟಿಗೆ ಕಲೆ ಹಾಕಿ ವಿಮರ್ಶಿಸಿದಾಗ ಕಂಬಳದಲ್ಲಿ ಮಾಯವಾದ ಮೂಲದ ಮಾಣಿ ಹಾಗೂ ಕೋಣವೇ ಮುಂದೆ ದೈವತ್ವಕ್ಕೇರಿ ಉರವ ಮತ್ತು ಎರುಬಂಟರಾಗಿ ಆರಾಧಿಸಲ್ಪಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ.ದೆ. Copy rights reserved (c)Dr.Lakshmi G Prasad

ವಾಸ್ತವವಾಗಿ ಆಲೋಚಿಸುವುದಾದರೆ ಇದು ಒಂದು ಸಂಘರ್ಷ ದ ಕಥಾನಕ .ಮೂಲದವರು ಇಳಿಯಬಾರದ ಗದ್ದೆಗೆ ಹಠ ಮಾಡಿ ಮೂಲದ ಹುಡುಗ ಬಬ್ಬು ಇಳಿಯುತ್ತಾನೆ .ತಾನು ಸಾಕಿದ ಕೋಣಗಳನ್ನೂ ಓಡಿಸುತ್ತಾನೆ .ಬಹುಶ ಅಲ್ಲಿ ಸಂಘರ್ಷ ನಡೆದು ಮೂಲದ ಉಳುಮೆಯ ಹುಡುಗ ಬಬ್ಬು ಮತ್ತು ಕೋಣಗಳು ದುರಂತಕ್ಕೀಡಾ ಗಿರುವ ಸಾಧ್ಯತೆ ಇದೆ .ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಅಲ್ಲಲ್ಲಿ ಕಂಡು ಬರುವ ವಿಚಾರ ಅಂತೆಯೇ ಇವರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ . ಈ ಘಟನೆ ಕೋಳ್ಯೂರು ಕಂಬಳ ಗದ್ದೆ ಅಥವಾ ಸುತ್ತು ಮುತ್ತಲಿನ 10-15  ಕಿಲೋ ಮೀಟರ್ ವ್ಯಾಪ್ತಿಯ ಒಳಗಡೆ ಎಲ್ಲೋ ನಡೆದಿರಬೇಕು ದೆ. Copy rights reserved (c)Dr.Lakshmi G Prasad
ಕೃಷಿ ಪ್ರಧಾನ ತುಳುನಾಡಿನಲ್ಲಿ ಭೂತಾರಾಧನೆಯು ಹಬ್ಬದಮವಾಸ್ಯೆಯಂದು ಕಂಬಳ ಕೋರಿ ನೇಮದ ಮೂಲಕ ಆರಂಭಗೊಳ್ಳುತ್ತದೆ. ಮೊದಲಿಗೆ ಕಂಬಳ ಗದ್ದೆಯ ಅಧಿದೈವಗಳಾದ ಉರವ, ಎರುಬಂಟ ಹಾಗೂ ಭೂಮಿಯ ಒಡೆಯನೆಂದೇ ಭಾವಿಸಲ್ಪಟ್ಟಿರುವ ನಾಗಬೆರ್ಮೆರ್ ಭೂತಗಳ ಆರಾಧನೆಯನ್ನು ಮಾಡುತ್ತಾರೆ. ಈ ಭೂತಗಳ ಆರಾಧನೆಯ ನಂತರ ಕುಟುಂಬದ ಭೂತಗಳಿಗೆ ಗ್ರಾಮದ ಭೂತಗಳಿಗೆ ಆರಾಧನೆ ಸಲ್ಲಿಸುತ್ತಾರೆ.
ದೆ. Copy rights reserved (c)Dr.Lakshmi G Prasad


ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರೀ ಪದವಿ ಪೂರ್ವ ಕಾಲೇಜು
ಬೆಳ್ಳಾರೆ ,ಸುಳ್ಯ
ಫೋನ್ :೯೪೮೦೫೧೬೬೮೪
E mail :samagramahithi@gmail.com
ಬ್ಲಾಗ್ :http://laxmipras.blogspot.com

Thursday 8 October 2015

ದೊಡ್ಡವರ ಹಾದಿ ..

ದೊಡ್ಡವರ ಹಾದಿ ..

ಮೊನ್ನೆ ಐದನೇ ತಾರೀಕಿನಂದು ನಮಗೆ ಪಿ ಯು ಉಪನ್ಯಾಸಕರಿಗೆ ತರಬೇತಿ ಕಾರ್ಯಗಾರವಿತ್ತು ,ಅದಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಂವಹನ ಕಲೆ ಬಗ್ಗೆ ಮಾತಾಡಲು ಡಾ.ಎಸ್ ಎನ್ ಶ್ರೀಧರ ,ಕೆ ಎಸ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ ನ ಪ್ರಾಂಶುಪಾಲರಾದ ಬಂದಿದ್ದರು .ಸಂವಾದ ನಡುವೆ ನಿಮ್ಮಲ್ಲಿ ಪ್ರಕಟಣೆ ಇದ್ದವರು ಯಾರಿದ್ದೀರಿ? ಎಂದು ಕೇಳಿದರು.

ಸಾಮಾನ್ಯವಾಗಿ ಸಭೆ ಸಮಾರಂಭ ತರಬೇತಿ ಕಾರ್ಯಕ್ರಮ ಎಲ್ಲೆಡೆಗಳಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ಮೌನವಾಗಿ ಸುಮ್ಮನೆ ಕೇಳಿಸಿಕೊಳ್ಳುವ ಪ್ರತಿಕ್ರಿಯೆ ಕೊಡದೆ ಸುಮ್ಮನಿರುವ ಜಯಮಾನದವಳಾದ ನಾನು ಅಂದು ಸ್ನೇಹಿತೆಯರ ಒತ್ತಾಯಕ್ಕೆ ಕಟ್ಟು ಬಿದ್ದು ಮುಂದಿನ ಸಾಲಿನಲ್ಲಿ ಬೇರೆ ಕುಳಿತಿದ್ದೆ ,

ಅವರು ಪ್ರಕಟಣೆ ಮಾಡಿದವರು ಇದ್ದೀರಾ ಎಂದು ಕೇಳಿದಾಗ ಅಪ್ರಯತ್ನವಾಗಿ ನನ್ನ ಕೈ  ಮೇಲೆ ಎತ್ತಿದೆ ಆಗ ಅವರು ಏನು ಪ್ರಕಟ ಮಾಡಿದ್ದೀರಿ ಎಂದು ಕೇಳಿದರು ,20 ಪುಸ್ತಕಗಳನ್ನು ಪ್ರಕಟಿಸಿದ್ದೇನೆ ಸುಮಾರು 200 ಲೇಖನಗಳೂ ಪ್ರಕಟವಾಗಿವೆ ಎಂದು ಹೇಳಿದೆ ,ಆಗ ಅವರು ನನ್ನ ಪರಿಚಯ ಹೇಳಿ ಎಂದು ವೇದಿಕೆಗೆ ಕರೆದರು ,ನಾನು ಇತ್ತೀಚೆಗೆ ಬೆಂಗಳೂರಿಗೆ ವರ್ಗವನೆಯಾಗಿ ಬಂದಿದ್ದ ಕಾರಣ ಯರಿಗೂಉ ನನ್ನ ಪರಿಚಯ ಇರಲಿಲ್ಲ ಕೂಡ ಹಾಗಾಗಿ ನನ್ನ ಪರಿಚಯ ಹೇಳಿ ಎರಡು ಡಾಕ್ಟರೇಟ್ ಪದವಿ ಗಳಿಸಿದ ಬಗ್ಗೆ ಹಾಗೆ ನನ್ನ ಸಂಶೋಧನೆ ಪ್ರಕಟಿತ ಪುಸ್ತಕಗಳು ಬರವನೆಗೆಯ ಹವ್ಯಾಸ ಬಗ್ಗೆ ಹಾಗೂ ಬ್ಲಾಗ್ ಬಗ್ಗೆ ಹೇಳಿದೆ

ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ನನ್ನ ಕೈಯಲ್ಲಿತ್ತು ಅದನ್ನು ಡಾ.ಎಸ್ ಎಸ್ ಶ್ರೀಧರ್ ಅವರಿಗೆ ನೀಡಿದ್ದೆ ,ಇಂಜಿನಿಯರಿಂಗ್ ಕಾಲೇಜ್ ಪ್ರಿನ್ಸಿಪಾಲ್ ಆಗಿರುವ ಅದನ್ನೆಲ್ಲ ಓದಲಾರರು ಎಂದು ಕೊಂಡಿದ್ದೆ ನಾನು ಆದರೆ ದೊಡ್ಡವರು ಅವರ ದೊಡ್ಡ ಗುಣಗಳಿಂದಲೇ ಗುರುತಿಸಲ್ಪಡುತ್ತಾರೆ ಎಂದು ಇಂದು ನಾನು ಬ್ಲಾಗ್ ನೋಡಿದಾಗ ತಿಳಿಯಿತು .ಅವರು ನನ್ನ ಬ್ಲಾಗ್ ಬರಹಗಳನ್ನು ಓದಿ ಹೀಗೆ ಪ್ರತಿಕ್ರಿಯೆ ನೀಡಿದ್ದರು ಡಾ. ಲಕ್ಶ್ಮಿ ಪ್ರಸಾದ್,

ನೀವು ನನಗೆ ಕೊಟ್ಟ ನಿಮ್ಮ ಪುಸ್ತಕ ಓದಿದೆ. ನಿಮ್ಮ ಬರಹಗಳು ಚೆನ್ನಾಗಿ ಮೂಡಿ ಬಂದಿವೆ. ಹಾಗೇ ನಿಮ್ಮ ಈ ಬ್ಲಾಗಿನಲ್ಲಿ ನಿಮ್ಮ ಸಾಧನೆಯನ್ನೂ ಓದಿದೆ. ಸಮಾಜದಲ್ಲಿ ಈ ರೀತಿ ನಿಮಗೆ ಛಾಲೆಂಜ್ ಮಾಡುವರು ಯಾವಗಲೂ ಇರುತ್ತಾರೆ. ತಾವು ಹೀಗಿರುವಂತೆಯೇ ಮುಂದೆಯೂ ಸಹ ಅವನ್ನು ಸ್ವೀಕರಿಸಿ, ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ.

ಇಂತಿ ನಿಮ್ಮ ವಿಶ್ವಾಸಿ,
ಡಾ. ಎಸ್. ಎನ್. ಶ್ರೀಧರ

ಅವರ ಸೌಜನ್ಯಯುತ ನಡವಳಿಕೆಗೆ ನಿಜಕ್ಕೂ ಬೆರಗಾದೆ .ಇದೆ ರೀತಿ ಈ ಹಿಂದೆ ನನ್ನ ಬರಹಗಳನ್ನು ಓದಿ ಡಾ.ಪುರುಷೋತ್ತಮ ಬಿಳಿಮಲೆ ,ಡಾ.ವಿವೇಕ ರೈ ,ಡಾ.ವಾಮನ ನಂದಾವರ .ಡಾ.ತಿಮ್ಮಪ್ಪ ಅವರು ಕೂಡ ಪ್ರತಿಕ್ರಿಯಿಸಿದ ಬಗ್ಗೆ ನೆನಪಾಯಿತು ,ದೊಡ್ಡವರು ಅವರ ದೊಡ್ಡ ಗುಣಗಳನ್ನು ಎಂದೂ ಬಿಡುವುದಿಲ್ಲ ಅಲ್ಲವೇ ?

Friday 2 October 2015

ಬದುಕ ಬಂಡಿಯಲಿ 15 ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ©ಡಾ.ಲಕ್ಷ್ಮೀ ಜಿ ಪ್ರಸಾದ

ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ಹೌದು ಈ ಮಾತನ್ನು ನಾನು ಸಾವಿರಕ್ಕೂ ಬಾರಿ ಮನಸಿನಲ್ಲೇ ಅಂದುಕೊಂಡಿದ್ದೇನೆ ..ಏನು ಇಪ್ಪತ್ತು ಯಾವ ಐವತ್ತು ಎಂದು ಕುತೂಹಲ ಇದೆಯೇ <ಹಾಗಾದರೆ ಮುಂದೆ ಓದಿ..

ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ತುಳು ಸಂಸ್ಕೃತಿ ಜನಪದದ ಕಡೆಗೆ ಆಸಕ್ತಳಾದೆ,ಹಾಗಾಗಿಯೇ ನಾನು ಎಂ ಫಿಲ್ ಪದವಿಯನ್ನು ಈಜೋ ಮಂಜೊಟ್ಟಿಗೋಣ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಪಡೆದೆ .
ಇದು ಗದ್ದೆಯಲ್ಲಿ ಆರಾಧನೆ ಗೊಳ್ಳುವ ಉರವ ಮತ್ತು ಎರು ಬಂಟ ಎಂಬ ದೈವಗಳಿಗೆ ಸಂಬಂಧಿಸಿದ್ದು.

ನನ್ನ ತಂದೆ ಮನೆ ಕೋಳ್ಯೂರು ದೇವರ ಕಂಬಳ ಗದ್ದೆಯಲ್ಲಿ ಪ್ರತಿವರ್ಷ ಪೂಕರೆ ಆಗುತ್ತದೆ.ಅಲ್ಲಿ ಆಗ ಭೂತ ಕೋಲ ಕೂಡ ಆಗುತ್ತಾ ಇತ್ತು.ಅಲ್ಲಿ ಆರಾಧನೆ ಹೊಂದುವ ಎರಡು ಭೂತಗಳು ಯಾರು ಎಂದು ಹೆಸರು ಕೂಡ ನಮಗೆ ಗೊತ್ತಿರಲಿಲ್ಲ .
ನಾನು ನನ್ನ ಎಂ ಫಿಲ್ ಥೀಸಿಸ್ ಗಾಗಿಯೇ ಅಲ್ಲಿ ಮೊದಲಿಗೆ ಭೂತ ಕೊಳವನ್ನು ರೆಕಾರ್ಡ್ ಮಾಡಿ ಮಾಹಿತಿ ಸಂಗ್ರಹಿಸಿದೆ.
ಅಲ್ಲಿ ಭೂತ ಕಟ್ಟುವ ಅಪ್ಪಣ್ಣ ಅವರು ಅದು ಉರವ ಮತ್ತು ಎರು ಬಂಟ ಭೂತಗಳು ಎಂದು ತಿಳಿಸಿದರು.ಆದರೆ ಆ ದೈವಗಳ ಹಿನ್ನೆಲೆಯಾಗಲಿ ಕಥನವಾಗಲಿ ಅವರಿಗೆ ತಿಳಿದಿರಲಿಲ್ಲ.ಹಾಗಾಗಿ ನಾನು ತುಳು ವಿದ್ವಾಂಸರ ಸಂಶೋಧನಾ ಕೃತಿಗಳಲ್ಲಿ ಈ ದೈವಗಳ ಬಗ್ಗೆ ಮಾಹಿತಿಗಾಗಿ ಹುಡುಕಾಡಿದೆ .
ಆಗ ನನಗೆ ಒಂದು ಅಚ್ಚರಿ ಕಾದಿತ್ತು ,ಆ ಎರಡು ದೈವಗಳ ಹೆಸರು ಕೂಡ ವಿದ್ವಾಂಸರ ತುಳುನಾಡಿನ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ !ಆಗ ಮೊದಲ ಬಾರಿಗೆ ನನಗೆ ಇನ್ನು ಕೂಡ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುವ ವಿಚಾರಗಳು ತುಂಬಾ ಇವೆ ,ಈ ದೈವಗಳಂತೆ ಇನ್ನೂ ಕೂಡ ನೆಕ ದೈವಗಳ ಹೆಸರು ಕೂಡ ಸಂಗ್ರಹ ಆಗಿರಲಿಕ್ಕಿಲ್ಲ ಎಂದು ಮನವರಿಕೆಯಾಯಿತು .
ಮುಂದೆ ಎಂ ಫಿಲ್ ಅನಂತರ ಡಾಕ್ಟರೇಟ್ ಗಾಗಿ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರ ಕಾರ್ಯಕ್ಕಾಗಿ ತುಳುನಾಡಿನಾದ್ಯಂತ ಅಲೆದಾಡಿದೆ .ಆಗೆಲ್ಲ ಈ ತನಕ್ ಅಧ್ಯಯನವಾಗದ ಹೆಸರು ಕೂಡ ದಾಖಲಾಗದ ಅನೇಕ ದೈವಗಳ ಹೆಸರು ಸಿಕ್ಕಿದ್ದು ,ಈ ಬಗ್ಗೆ ಎಂದಾದರೂ samagra ಮಾಹಿತಿ ಸಂಗ್ರಹಿಸಬೇಕು ಎಂದು ಕೊಂಡಿದ್ದೆ .ಆಗ ನನ್ನ ಪಿಎಚ್ ಡಿ ಥೀಸಿಸ್ ಕಡೆಗೆ ಹೆಚ್ಚು ಗಮನ ಕೊಡಬೇಕಾದ ಅನಿವಾರ್ಯತೆ ಇದ್ದ ಕಾರಣ ಇಂಥ ದೈವಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ .ಆದರೆ ಎಂದಾದರೂ ಈ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಹಂಬಲವಿತ್ತು .
2009 ರಲ್ಲಿ ನಾನು ಪದವಿ ಪೂರ್ವ ಕಾಲೇಜ್ ಉಪನ್ಯಾಸಕಿಯಾಗಿ ಆಯ್ಕೆಯಾದಾಗ ನನ್ನ ಹಂಬಲ ಮತ್ತೆ ಗರಿಗೆದರಿತು .ಹಾಗಾಗಿಯೇ ನಾನು ಬೆಳ್ಳಾರೆ ಯನ್ನು ಆಯ್ಕೆಮಾಡಿಕೊಂಡು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ ಕನ್ನಡ ಉಪನ್ಯಾಸಕಿಯಾಗಿ ಹೋದೆ .
ಅಲ್ಲಿಗೆ ಹೋದ ತುಸು ಸಮಯದಲ್ಲಿಯೇ ನನಗೆ ನನ್ನ ಮೊದಲ ಡಾಕ್ಟರೆಟ್ ಪದವಿ ಸಿಕ್ಕಿತು .
ಅದೇ ಸಮಯದಲ್ಲಿಯೇ(2010 ಫೆಬ್ರುವರಿ ತಿಂಗಳಲ್ಲಿ ಎಂದು ನೆನಪು )ಕರ್ಣಾಟಕ ತುಳು ಅಕಾಡೆಮಿ ಯು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಬೆಳ್ಳಾರೆ ಕಾಲೇಜ್ ನಲ್ಲಿ ತುಳು ಮಿನದನ ಎಂಬ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮ ಏರ್ಪಡಿಸಿತು .
ಅದಾಗಲೇ ನಾನು ಸ್ಥಳಿಯರಿಗೆ  ಮಾತ್ರವಲ್ಲ ತುಳು ವಿದ್ವಾಂಸರ ಅರಿವಿಗೆ ಬಾರದೆ ಇದ್ದ ಬೆಳ್ಳಾರೆ ಸುತ್ತ ಮುತ್ತಲಿನ ಅಜ್ಜಿ ಭೂತ ,ಮೂವ,ಮಾಲಿಂಗರಾಯ,ದಾಲ್ಸುರಾಯ,ಅಡ್ಯಂತಾಯ ,ಕುಕ್ಕೆತ್ತಿ ಬಳ್ಳು ಮೊದಲಾದ ಅಪರೂಪದ ದೈವಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದೆ .ಅದನ್ನು ಬೆಳ್ಳಾರೆಯ ಜನತೆಗೆ ತಿಳಿಸಲು ಹಾಗೂ ಈ ರೀತಿಯ ಅಲಕ್ಷಿತ ಅಪರೂಪದ ಉಪದೈವಗಳ ಅಧ್ಯಯನ ಮಾಡುವಂತೆ ಪ್ರೇರೇಪಿಸಲು ಇದು ಸರಿಯಾದ ಸರಿಯಾದ ಅವಕಾಶ ಎಂದು ಅರಿತ ನಾನು ಆ ಕಾರ್ಯಕ್ರಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತುಳು ನಾಡಿನ ಬಹುಶ್ರುತ ವಿದ್ವಾಂಸರೂ ನನಗೆ ಸಂಶೋಧನೆಗೆ ಪ್ರೇರಣೆ ಕೊಟ್ಟು ಮಾರ್ಗ ದರ್ಶನ ಮಾಡಿರುವ ನನ್ನ ಆತ್ಮೀಯರೂ ಆಗಿದ್ದ ಡಾ.ಅಮೃತ ಸೋಮೇಶ್ವರ ಅವರಲ್ಲಿ "ನನಗೆ ಒಂದು ಪ್ರಬಂಧ ಮಂಡನೆಗೆ ಅವಕಾಶವನ್ನು ಕೊಡುವಂತೆ ಕೇಳಿದೆ .
ಆಗ ಅವರು ತುಳು ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು .
ಮರುದಿವಸ ನಾನು ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಫೋನ್ ಮಾಡಿದೆ .ಆಗ ಅವರು ನಿಮ್ಮನ್ನು ಕವಿ ಗೋಷ್ಠಿಗೆ ಹಾಕಿದ್ದೇವೆ ಎಂದರು !
ನನಗೆ ಹೃದಯಘಾತ ಆಗಲು ಸ್ವಲ್ಪ  ಮಾತ್ರ ಬಾಕಿ ಇತ್ತು ,ಅಷ್ಟು ಗಾಬರಿಯಾದೆ !ಯಾಕೆಂದರೆ ನನಗೆ ಮಾತೃ ಭಾಷೆ ಕನ್ನಡದಲ್ಲಿಯೇ  ಕವಿತೆ ಬರೆಯಲು ತಿಳಿದಿಲ್ಲ !ಇನ್ನು ತುಳುವಿನಲ್ಲಿ ..!
ಅಂತೂ ಹೇಗೋ ಸುಧಾರಿಸಿಕೊಂಡು ನನಗೆ ಕವಿ ಗೋಷ್ಠಿ ಬೇಡ ,ನನಗೆ ವಿಚಾರ ಗೋಷ್ಠಿಯಲ್ಲಿ ಅವಕಾಶ ಕೊಡಿ ಎಂದು ಕೇಳಿದೆ .
ಆಗ ಅವರು ಕೊಟ್ಟದ್ದನ್ನು ಮಾಡಬೇಕು ಎಂದು ಹೇಳಿದರು !ಅಯ್ಯೋ ದೇವರೇ ಇವರು ತುಳು ಮಿನದನ ಮಾಡುತ್ತಿದ್ದಾರೆಂದು ನಾನು ಇದ್ದಕ್ಕಿದ್ದಂತೆ ಕವಿಯಾಗಲು ಸಾಧ್ಯವೇ !
ಅದಾಗದು ಎಂದು ಹೇಳಿದೆ .ನೀವು ಅವಕಾಶ ಕೊಡುವುದಾದರೆ ವಿಚಾರ ಸಂಕಿರಣದಲ್ಲಿ ಕೊಡಿ ಎಂದು ಹೇಳಿದೆ .
ಆಗ ಅವರು ಅದರಲ್ಲಿ ವಿಚಾರ ಸಂಕಿರಣದಲ್ಲಿ ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಹೇಳಿದರು !

ಹೀಗೂ ಉಂಟೆ ?ತುಳು ಭಾಷೆ ಸಂಸ್ಕೃತಿ ಜಾನಪದ ಗಳ ಅಭಿವೃದ್ಧಿಗೆಂದೇ ಸ್ಥಾಪಿತವಾದ ತುಳು ಅಕಾಡೆಮಿ ಯ ಅಧ್ಯಕ್ಷರು ಸ್ಥಳಿಯರಿಗೆ ಅವಕಾಶ ಇಲ್ಲವೆಂದು ಹೇಳಿದರೆ ಅದಕ್ಕೆ ಅರ್ಥವಿದೆಯೇ ?

ನನಗೂ ಛಲ ಬಂತು !ಆ ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ವಾಂಸರಾದ ಡಾ.ನರೇಂದ್ರ ರೈ ದೇರ್ಲರು ಇದ್ದಿದ್ದು ನನಗೆ ಗೊತ್ತಿತ್ತು .ಹಾಗಾಗಿ ನಾನು ನರೇಂದ್ರ ರೈ ದೆರ್ಲರು ಸ್ಥಳೀಯರಲ್ಲವೇ ?ಎಂದು ಕೇಳಿದೆ .

ಅದಕ್ಕೆ ಪಾಲ್ತಾಡಿಯವರು "ಅವರೆಲ್ಲಿ ನೀವೆಲ್ಲಿ ?ಅವರು ಇಪ್ಪತ್ತು ಪುಸ್ತಕ ಬರೆದಿದ್ದಾರೆ ಗೊತ್ತಿದೆಯ? "ಎಂದು ಕೇಳಿದರು.
ಹೌದು ಅದು ಒಪ್ಪಿಕೊಳ್ಳಬೇಕಾದ ಮಾತು ,ದೇರ್ಲರ ವಿದ್ವತ್ ಮಟ್ಟಿಗೆ ಎರಡು ಮಾತು ನನ್ನಲ್ಲೂ ಇಲ್ಲ .ಆದರೆ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡನೆ ಮಾಡಲು ನನ್ನ ಅರ್ಹತೆ ಧಾರಾಳ ಸಾಕಿತ್ತು ,ಯಾಕೆಂದರೆ ಅದಾಗಲೇ ನಾನು ಮೊದಲ  ಡಾಕ್ಟರೇಟ್ ಪಡೆದಿದ್ದು ಎರಡನೇ ಡಾಕ್ಟರೇಟ್ ಪದವಿಗೆ ಥೀಸಿಸ್ ಸಿದ್ಧ ಪಡಿಸಿದ್ದೆ ಅಲ್ಲದೆ ಸುಮಾರು ಹತ್ತು-ಹನ್ನೆರಡು ಪುಸ್ತಕಗಳೂ ,ಸುಮಾರು 20-30 ಲೇಖನಗಳೂ ಪ್ರಕಟವಾಗಿದ್ದವು .9-1೦ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲೂ ಪ್ರಬಂಧ ಮಂಡಿಸಿದ ಅನುಭವವಿತ್ತು .
ಹಾಗಾಗಿ ನಾನು ಅದನ್ನೇ ಹೇಳಿದೆ ,"ನಾನು ಅವರಷ್ಟು ವಿದ್ವಾಂಸೆ ಅಲ್ಲವಾದರೂ ಈ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸುವಷ್ಟು ಅರ್ಹತೆ ಹಾಗೂ  ಸಾಮರ್ಥ್ಯ ನನ್ನಲ್ಲಿದೆ ಈಗಾಗಲೇ ನಾನು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ ಅನುಭವವಿದೆ" ಎಂದು ಹೇಳಿದೆ .ಆಗ ಅವರು "ನಿಮಗೆ ಹೆಂಗಸರಿಗೆ ರೇಷ್ಮೆ ಸೀರೆ ಉಟ್ಟು ಮೆರೆಯಲು ಸ್ಟೇಜ್ ಬೇಕು ಅಷ್ಟೇ ತಾನೇ !ಬೇಕಾದರೆ ಕವಿಗೋಷ್ಠಿಗೆ ಬನ್ನಿ" ಎಂದು ಹೇಳಿದರು ,ಅದಕ್ಕೆ ನಾನು ಇಲ್ಲ ನಾನು ಕವಿ ಗೋಷ್ಠಿಗೆ ಬರುವುದಿಲ್ಲ ,ನಾನು ಇನ್ನು ಐದು ವರ್ಷಸಮಯ ಕೊಡಿ  , 20 ಪುಸ್ತಕ ಬರೆದು ಪ್ರಕಟಿಸಿ ಬರುತ್ತೇನೆ ,ಆಗ ಬೆಳ್ಳಾರೆ ಯಲ್ಲಿ ಮತ್ತೆ ತುಳು ಮಿನದನ ಮಾಡುತ್ತೀರಾ ?ಅಥವಾ ನೀವು ಆಗಲೂ ಅಧ್ಯಕ್ಷರಾಗಿರುತ್ತೀರಾ? ಮನಸಿಲ್ಲದಿದ್ದರೆ ಕೊಡುವುದಿಲ್ಲ ಎಂದು ಹೇಳಿ ಅದು ಬಿಟ್ಟು ಬೇರೆ ಮಾತು ಬೇಡ "ಎಂದು ಕೇಳಿ ಫೋನ್ ಕಟ್ ಮಾಡಿದ್ದೆ .



ಅದು ಇರಲಿ  ಅಂದು ಪಾಲ್ತಾಡಿಯವರಲ್ಲಿ ನಾನು 20 ಪುಸ್ತಕ ಬರೆದು ಪ್ರಕಟಿಸುತ್ತೇನೆ ಐದು ವರ್ಷದ ಒಳಗೆ ಎಂದಿದ್ದೆ !ಹೌದು ಅಂದು ಹೇಳಿದಂತೆಯೇ ಮಾಡಿದೆ ನಂತರ 3 ವರ್ಷಗಳ ಒಳಗೆ ನನ್ನ 20 ಪುಸ್ತಕಗಳೂ ಪ್ರಕಟವಾದವು !

 2013 ನವೆಂಬರ್ನಲ್ಲಿ ನನ್ನ 20 ನೆಯ ಪುಸ್ತಕ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ ) ಪ್ರಕಟವಾಯಿತು

ಪಾಲ್ತಾಡಿ ಯವರು ಹೇಳಿದ ಗುರಿ 20 ರ ಗುರಿ ಈಡೇರುವ ತನಕ ನಿಲ್ಲಿಸದೆ ಒಂದಿನಿತೂ ವಿರಮಿಸದೆ ಕ್ಷೇತ್ರ ಕಾರ್ಯ ಮಾಡಿದೆ ಬರೆದೆ ಪ್ರಕಟಿಸಿದೆ .
 ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುತ್ತಿರುವ ನನಗೆ ಅವಕಾಶ ನೀಡಿ  ಬೆಂಬಲಿಸುವುದನ್ನು  ತುಳು ಅಕಾಡೆಮಿ ಮಾಡಬೇಕಾಗಿತ್ತು ,ಅದನ್ನು ಮಾಡದೇ ಇದ್ದದ್ದು ಯಾರಿಗೂ ತಪ್ಪು ಎನಿಸಲೇ ಇಲ್ಲ  ,ಆದರೆ  ಈ ಬೆಳ್ಳಾರೆ ಯಲ್ಲಿ ನಾನು ಒಂದು ಅವಕಾಶ ಕೇಳಿದ್ದು ಆಗ ಅವಮಾನಿಸಿ ಮಾತಾಡಿದ್ದಕ್ಕೆ ಪ್ರತಿ ಉತ್ತರ ನೀಡಿದ್ದು ದೊಡ್ಡ ಅಪರಾಧ ಎನಿಸಿತು !
ಅದರ ಪರಿಣಾಮ ನಾನು ಸಂಶೋಧಕಿಯಾಗಿ ಗುರುತಿಸಲ್ಪಡಲಿಲ್ಲ,ಬದಲಿಗೆ ಅಹಂಕಾರಿಯಾಗಿ ಪರಿಗಣಿಸಲ್ಪಟ್ಟು,ತುಳು ಅಕಾಡೆಮಿಯ ಎಲ್ಲ ಕಾರ್ಯಕ್ರಮಗಳಿಂದಲೂ ಹೊರಗೆ ಉಳಿಯಬೇಕಾಯಿತು ಅಥವಾ ಹೊರಗೆ ಇರಿಸಿದರು ಎಂಬುದು ಹೆಚ್ಚ್ಚು ಸರಿ !
ಜೊತೆಗೆ ನನ್ನ ತುಳು ಸಂಶೋಧನಾ ಕಾರ್ಯಕ್ಕೆ ಮನ್ನಣೆ ಸಿಗದ ಕಾರಣ ನಾನು ಕೆಲಸ ಮಾಡುವ ಸಂಸ್ಥೆಯಲ್ಲೂ ಅವಗಣನೆಗೆ ಒಳಗಾದೆ !

ಹಾಗೆ ನೋಡಿದರೆ ಪಾಲ್ತಾಡಿಯವರು ಕೆಟ್ಟ ವ್ಯಕ್ತಿ ಏನೂ ಅಲ್ಲ ಅನೇಕರಿಗೆ ಬೆಂಬಲ ಕೊಟ್ಟ ಸಹೃದಯರೇ ಆಗಿದ್ದರು .ಇದೆಲ್ಲ ಆಗಿ ಐದು ವರ್ಷಗಳ ನಂತರ ಇತ್ತೀಚೆಗೆ ನಾನು ಭಾಗವಹಿಸಿದ್ದ ಮಂಗಳೂರು ತಾಲೂಕು ತುಳು ಮಿನದನ ಕಾರ್ಯಕ್ರಮಕ್ಕೆ ಬಂದಿದ್ದ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಪಾಲ್ತಾಡಿಯವರು ನನಗೆ ಮಾತಿಗೆ ಸಿಕ್ಕರು ,ಆಗ ನಾನು ಹಿಂದೆ ಬೆಳ್ಳಾರೆಯಲ್ಲಿ ನೀವು ಯಾಕೆ ಅವಕಾಶ ಕೊಡಲಿಲ್ಲ ?ತುಳು ಅಧ್ಯಯನ ಆಸಕ್ತರಿಗೆ ಬೆಂಬಲ ಕೊಡಬೇಕಾದ್ದು ಅಕಾಡೆಮಿಯ ಜವಾಬ್ದಾರಿ ಕೂಡ  ತಾನೇ ಎಂದು ಕೇಳಿದೆ .ಆಗ ಅವರು ಆಗ ಆದ ಪ್ರಮಾದವನ್ನು ಒಪ್ಪಿಕೊಂಡು ಹಾಗೆ ಆಗಬಾರದಿತ್ತು ಆದರೆ ಅಲ್ಲಿ ನಿಮಗೆ ಅವಕಾಶ ಕೊಡದೆ ಇರುವುದಕ್ಕೆ  ನಿಮ್ಮ್ಮ ಸಂಸ್ಥೆಯ ಸಹೋದ್ಯೋಗಿಗಳ ಬಲವಾದ ವಿರೋಧವೂ ಕಾರಣವಾಗಿತ್ತು ಎಂದು ಹೇಳಿ ನಂತರ ನಮಗೆ ಬಂಟ್ವಾಳ ದಲ್ಲಿ ಆಗುವಾಗ ಅವಕಾಶ ಕೊತ್ತಿದೆವು ಅಲ್ವ ಎಂದು ಹೇಳಿದರು !
ಆದರೆ ಬಂಟ್ವಾಳದಲ್ಲಿಯೂ ಅವರು ವಿರೋಧ ವ್ಯಕ್ತ ಪಡಿಸಿದ್ದರು ,ಅದರ ಹಿನ್ನೆಲೆ ಹೀಗಿದೆ
ಅದಾಗಿ ಸ್ವಲ್ಪ ಸಮಯದ ನಂತರ ಬಂಟ್ವಾಳ ತಾಲೂಕಿನಲ್ಲಿ ತುಳು ಅಕಾಡೆಮಿ ದ್ರಾವಿಡ ಜಾನಪದ ಮೇಳ ಎಂಬ ಒಂದು ಕಾರ್ಯಕ್ರಮ ಆಯೋಜಿಸಿತು ,ಆಗ ಮತ್ತೆ ಅಲ್ಲ್ಲಿನ ಸಂಘಟಕರನ್ನು ಸಂಪರ್ಕಿಸಿ ನನಗೆ ಒಂದು ಅವಕಾಶ ಕೊಡಿ ಎಂದು ಕೋರಿದೆ .
ಆಗ ಕೂಡ ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿಯವರು ಬಲವಾಗಿ ವಿರೋಧಿಸಿದ ಬಗ್ಗೆ ಆಗ ಅಕಾಡೆಮಿ ಸದಸ್ಯರಾಗಿದ್ದ ಅಶೋಕ ಶೆಟ್ಟಿ ಅವರು ತಿಳಿಸಿದ್ದರು ,ನಂತರ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಕಾರಣಕ್ಕೆ ಮನಸಿಲ್ಲದ ಮನಸಿನಲ್ಲಿ ಅಲ್ಲಿ "ಪಾಡ್ದನೊಡು ಮೂಡಿ ಬತ್ತಿ ಪೊಣ್ಣು" ಎಂಬ ವಿಷಯದಲ್ಲಿ ಪ್ರಬಂಧ ಮಂಡನೆ ಮಾಡಲು ಅವಕಾಶ ಕೊಟ್ಟರು .ಅದನ್ನು ಬಳಸಿಕೊಂಡು ಅತ್ಯುತ್ತಮವಾಗಿ ಪ್ರಬಂಧ ಮಂಡನೆ ಮಾಡಿ ಸೈ ಎನಿಸಿಕೊಂಡೆ ಆದರೂ ಮುಂದೆ ನನಗೆ ಅವಕಾಶ ನೀಡಲಿಲ್ಲ

2013 ರಲ್ಲಿ ಸವಣೂರಿನಲ್ಲಿ ಅಖಿಲ ಭಾರತ ತುಳು ಸಮ್ಮೇಳನ ಆಯಿತು ,ಅದಕ್ಕೆ ಒಂದು ಅಹ್ವಾನ ಪತ್ರ ಕೂಡ ನನಗೆ ಕಳುಹಿಸಿಲ್ಲ. ಅದಕ್ಕೆ ಎಂದಲ್ಲ ಇಂದಿನ ತನಕವೂ ಯಾವುದೇ ಒಂದು ತುಳು ಅಕಾಡೆಮಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ಕಳುಹಿಸುವುದೇ ಇಲ್ಲ ಯಾಕೆಂದರೆ ಇನ್ನೂ ನಾನು ತುಳು ಅಕಾಡೆಮಿ ಪದಾಧಿಕಾರಿಗಳ ದೃಷ್ಟಿಯಲ್ಲಿ ತುಳು ಸಂಶೋಧಕಿಯಲ್ಲ !
ಇದಕ್ಕೆ ಕೇವಲ ಪಾಲ್ತಾಡಿಯವರು ಕಾರಣರಲ್ಲ ಖಂಡಿತ ಎಂಬುದು ನನಗೆ ಈಗ ಮನವರಿಕೆಯಾಗಿದೆ .ಯಾಕೆಂದರೆ ಅವರ ನಂತರ ಬೇರೆ ಅಧ್ಯಕ್ಷರು ಬಂದಾಗಲೂ ನನಗೆ ಯಾವ ಬೆಂಬಲವೂ ಸಿಗಲಿಲ್ಲ.ಅದರಲ್ಲಿಯೇ ಸ್ಪಷ್ಟವಾಗುತ್ತದೆ ಇದರಲ್ಲಿ ಬೇರೆ ಪದಾಧಿಕಾರಿಗಳ ಕೈವಾಡ ಇದೆಯೆಂಬುದು !
ಇದರೊಟ್ಟಿಗೆ ಇನ್ನೊಂದು ವಿಚಾರವೂ ನೆನಪಾಗುತ್ತದೆ !
2012 ಅಥವಾ 2013 ರಲ್ಲಿ ಇರಬೇಕು ,ತುಳು ಅಕಾಡೆಮಿಯು ತುಳು ಭಾಷೆ ಸಂಸ್ಕೃತಿಗೆ ಸಂಬಂಧಿಸಿ ಸಂಶೋಧನೆ ಮಾಡಲು ಇಚ್ಚಿಸುವ ಐವರಿಗೆ ಒಂದು ಲಕ್ಷ ರು ಸಂಶೋಧನಾ ಸಹಾಯ ಧನ ಕೊಡುವ ಬಗ್ಗೆ ತಿಳಿಸಿ ಆಸಕ್ತರು ಅರ್ಜಿ ಸಲ್ಲಿಸಲು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು ,ಆಗ ನಾನು ಅರ್ಜಿ ಸಲ್ಲಿಸಲು ಇಚ್ಚಿಸಿ ಆ ಬಗ್ಗೆ ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಗಳಿಗೆ ಫೋನ್ ಮಾಡಿದೆ ಆಗ ಅವರು ಅವರು ಅಧ್ಯಕ್ಷರಾದ ಪಾಲ್ತಾಡಿ ಯವರಿಗೆ ಫೋನ್ ಕೊಟ್ಟರು .ಆಗ ಅವರು ಸರ್ಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದರು ,ಹಾಗಾಗಿ ನಾನು ಅರ್ಜಿಸಲ್ಲಿಸಲಿಲ್ಲ !
ಒಂದು ಗಮ್ಮತ್ತು ನೋಡಿ ..ಒಂದೆರಡು ತಿಂಗಳು ಕಳೆದು ಪತ್ರಿಕೆಯಲ್ಲಿ ಪೆರುವಾಜೆ ಸರ್ಕಾರಿ ಪದವಿ ಕಾಲೇಜ್ ಉಪನ್ಯಾಸಕ ದ.ನರೇಂದ್ರ ರೈ ದೇರ್ಲ ಸೇರಿದಂತೆ ಐವರಿಗೆ ತಲಾ ಒಂದು ಲಕ್ಷ ಸಂಶೋಧನಾ ಸಹಾಯ ಧನ ಸಿಕ್ಕಿದ ವಿಚಾರ ಬಂತು !
ನಾನು ವಿಚಾರಿಸುವಾಗ ಸರ್ಕಾರಿ ಉದ್ಯೋಗಿಗಳಿಗೆ ಅವಕಾಶವಿಲ್ಲ ಎಂದವರು ನನ್ನಂತೆಯೇ  ಸರ್ಕಾರಿ ಉದ್ಯೋಗಿ ಯಾಗಿರುವ ದೇರ್ಲರಿಗೆ  ಸಂಶೋಧನಾ ಸಹಾಯ ಧನ ನೀಡಿದ್ದರು !

ಈಗ ಇಪ್ಪತ್ತರ ಗುರಿ ತಲುಪಿದ್ದೇನೆ,ಅಕಾಡೆಮಿ ಅಧ್ಯಕ್ಷರು ಬದಲಾದರು, ಮತ್ತೆ ಬೆಳ್ಳಾರೆಯಲ್ಲಿ ತುಳು ಅಕಾಡೆಮಿ ಯ ಕಾರ್ಯಕ್ರಮಗಳು ಆಗಿವೆ ಅದರಿಂದಲೂ ನನ್ನನ್ನು ಹೊರಗೆ ಇರಿಸಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ ?  ಇಂದಿನವರೆಗೂ ತುಳು ಅಕಾಡೆಮಿ ನನಗೆ ನನ್ನ ಸಂಶೋಧನೆಯ ಆಸಕ್ತಿಯ ವಿಚಾರವಾದ ಉಪದೈವಗಳ ಬಗ್ಗೆ ಮಾತನಾಡಲು ಕರೆದಿಲ್ಲ,ತುಳು ವಿದ್ವಾಂಸರ ಪಟ್ಟಿಯಲ್ಲಿ ನಾನಿನ್ನೂ ಸೇರಿಲ್ಲ ,ಯಾಕೆಂದರೆ ನಾನು ಯಾರ ಚೀಲವನ್ನೂ ಹಿಡಿದುಕೊಂಡು ಓಲೈಸಿಕೊಂದು ಹೋಗಲಾರೆ !ಹಾಗಾಗಿ ಅಂದಿನಿಂದ ಇಂದಿನವರೆಗೂ ನಾನು ನನ್ನ ಸಂಶೋಧನೆಗೆ ಯಾರ ಸಹಾಯವನ್ನೂ ಆಶಿಸಲಿಲ್ಲ ,ನಾನು ಸ್ವತಂತ್ರವಾಗಿಯೇ ಅಧ್ಯಯನ ಮಾಡಿದೆ !
 (ಇತ್ತೀಚೆಗೆ ನಾಲ್ಕು ತಿಂಗಳು ಮೊದಲು  ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ ಅವರು ಬಂದಮೇಲೆ ಒಂದು ಮಂಗಳೂರು ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಡಿ ಕೆ ಚೌಟರ ಮಿತ್ತ ಬೈಲು ಯಮುನಕ್ಕೆ ಕಾದಂಬರಿ ಬಗ್ಗೆ ಮಾತನಾಡಲು ಕರೆದಿದ್ದು ನಾನು ಹೋಗಿ ಮಾತನಾಡಿ ಬಂದಿದ್ದೇನೆ )


ಅಂದು ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಅವರು ಹೇಳಲು ಕಾರಣವೇನು ಇಂದು ನನಗೆ ಅರಿವಾಗಿದೆ ,ಅಲ್ಲಿ ನನಗೆ ಅವಕಾಶ ಕೊಡಬಾರದು ಎಂಬ ನಿರ್ಬಂಧ ನನ್ನ  ಸಹೋದ್ಯೋಗಿ ಗಳಿಂದ ಉಂಟಾಗಿತ್ತು ಅಂತೆ !ಹೊಟ್ಟೆ ಕಿಚ್ಚು ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆನೆ !ಅಂದು ಆರಂಭಿಸಿದ ಕಿರುಕುಳ ಮುಂದು ವರಿಯುತ್ತಲೇ ಬಂದಿದೆ,ಇಂದಿನ ವರೆಗೂ ,ಅದನ್ನು ಇನ್ನೊಂದು ದಿನ ಬರೆಯುತ್ತೇನೆ ..

ಅದಿರಲಿ ,ಇಪ್ಪತ್ತರ ಗುರಿ ತಲುಪಿ ನಾಲ್ಕು ವರ್ಷಗಳು ಆಗುತ್ತಾ ಬಂತು ,ಒಂದೇ ಒಂದು ಪುಸ್ತಕ ಬರೆದಿಲ್ಲ ಪ್ರಕಟಿಸಿಲ್ಲ ,ಯಾಕೋ ಏನೋ ಬರೆಯುವ ಪ್ರಕಟಿಸುವ ಮೂಡ್ ಹೊರಟು ಹೋಗಿದೆ ,ಹಾಗಾಗಿ ಈಗ ನನಗೆ ಅವರು ಇಪ್ಪತ್ತರ ಬದಲು ಐವತ್ತರ ಗುರಿ ನೀಡಿರುತ್ತಿದ್ದರೆ ಛೆ !ಎಂದೆನಿಸುತ್ತದೆ ,ಹಾಗೊಂದು ವೇಳೆ ಅವರು ಹೇಳಿರುತ್ತಿದ್ದರೆ ನಾನು ಖಂಡಿತವಾಗಿಯೂ 50 ಪುಸ್ತಕ ಪ್ರಕಟವಾಗುವ ವರೆಗೂ ವಿರಮಿಸುತ್ತ ಇರಲಿಲ್ಲ!ಖಂಡಿತ !

ಹಾಗೆಂದು ನನ್ನ ಕಾರ್ಯವನ್ನು ನಾನು ನಿಲ್ಲಿಸುತ್ತೇನೆ ಎಂದಲ್ಲ ,ಸಂಶೋಧನೆಯನ್ನು ನಾನು ನಂತರವೂ ಮುಂದುವರಿಸಿದ್ದೇನೆ ,ಪುಸ್ತಕ ಬರೆಯುದು ಪ್ರಕಟಿಸುವ ಬದಲು ಬ್ಲಾಗ್ ನಲ್ಲಿ ಬರೆದು ಎಲ್ಲರಿಗೂ ಸಿಗುವ ಹಾಗೆ ಮಾಡಿದ್ದೇನೆ ,ಮುಂದೆ ಸಂದರ್ಭ ಸಿಕ್ಕಾಗ ಪ್ರಕಟಿಸಬೇಕು ಎಂದು ಇದೆ


ನನ್ನ ಸಂಶೋಧನಾ ಸಾಹಿತ್ಯಿಕ ಕೃತಿಗಳುಗಳು ಇನ್ನು ಪ್ರಕಟವಾಗುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಮುಂದೆ ಒಂದಿನ ನನ್ನ ಆತ್ಮ ಚರಿತ್ರೆ ಖಂಡಿತ ಬರೆದು ಪ್ರಕಟಿಸುತ್ತೇನೆ ಯಾಕೆಂದರೆ ನನ್ನ ಕಾಲೇಜ್ ಸಹೋದ್ಯೋಗಿ ಗಳು ,ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ,ತುಳು ಅಕಾಡೆಮಿ ಬೆಳ್ಳಾರೆ ಚೊಕ್ಕಾಡಿ ಪಂಜ ಸೀಮಾ ಹವ್ಯಕ ಪರಿಷತ್ ನ ಅಧ್ಯಕ್ಷರುಗಳು,ನನ್ನ ಸಂಬಂಧಿಕರು ಹೀಗೆ ಹತ್ತು ಹಲವು ಜನರು ಅದರ ಪುಟಗಳನ್ನೂ ತುಂಬಲು ಸಾಕಷ್ಟು ವಸ್ತುಗಳನ್ನು ಕೊಟ್ಟಿದ್ದಾರೆ !!ಅದಕ್ಕಾಗಿಯಾದರೂ ಬರೆಯಬೇಕು ಎಂದುಕೊಂಡಿದ್ದೇನೆ !
© ಡಾ.ಲಕ್ಷ್ಮೀ ಜಿ ಪ್ರಸಾದ