paper.kannadaprabha.in/PUBLICATIONS\KANNADAPRABHABANGALORE\KAN/2014/12/27/ArticleHtmls/27122014006008.shtml?Mode=1
ಅಮ್ಮಾ!ಉರಿ ನೋವು ..!ನೀರು ನೀರು ..!ಎಂದು ಬೊಬ್ಬಿರಿಯುತ್ತಾ ಬೆಂಕಿಯ ಕಿಡಿಯನ್ನು ಉಗುಳುತ್ತಿರುವ ಸ್ತ್ರೀ ರೂಪಿ ಬೆಂಕಿಯ ರಾಶಿಯೊಂದು ಓಡಿ ಬರುತ್ತಿದೆ !ಕೈಕಾಲು ಬೆಂದು ಮಾಂಸದ ಮುದ್ದೆಗಳು ಉದುರುತ್ತಿವೆ !ನೀರು ನೀರು ಎಂದು ಅಂಗಲಾಚುತ್ತಿದ್ದಾಳೆ!ಭಯಾನಕ ದೃಶ್ಯ !ನೋಡಲು ಅಸಾಧ್ಯ ! ಕೂಡಿದ ನೋಡಿದ ಮಂದಿ ಅವಳ ನೋವು ನೋಡಲಾಗದೆ ಕಣ್ಣು ಮುಚ್ಚಿಕೊಂದಿದ್ದಾರೆ !ಚೀತ್ಕಾರ ಕೇಳಲಾಗದೆ ಕಿವಿಗೆ ಕೈ ಹಿಡಿದಿದ್ದಾರೆ !ಆದರೆ ಯಾರೂ ಅವಳಿಗೆ ನೀರುಕೊಡಲು ಮುಂದಾಗುವುದಿಲ್ಲ !ಅವಳ ಹಿಂದಿನಿಂದ ದೊಡ್ಡ ದೊಡ್ಡ ಹಸಿ ಮರದ ಹಾಗೂ ಕಬ್ಬಿಣದ ಬಡಿಗೆಗಳನ್ನು ಹಿಡಿದ ರಾಕ್ಷಸರಂತೆ ಇರುವ ಜನರು ಅವಳನ್ನು ಹಿಡಿಯಲು ಓಡಿ ಬರುತ್ತಿದ್ದಾರೆ..!ನಾನು ನೀರು ಕೊಡಲೆಂದು ನೀರು ತುಂಬಿದ ಕೊಡವನ್ನು ಅವಳ ಮುಂದೆ ಹಿಡಿದಿದ್ದೇನೆ ಅಷ್ಟರಲ್ಲಿ ಅವಳನ್ನು ಕಟ್ಟಿದ ಕಬ್ಬಿಣದ ಸರಪಳಿಯಿಂದ ಕೆಂಡ ತುಂಡೊಂದು ನನ್ನ ಕಣ್ಣಿನ ಒಳಗೆ ಬೀಳುತ್ತದೆ ..!ಅಮ್ಮಾ..!ಉರಿ ..
ಅಬ್ಬ ಇಷ್ಟೆಲ್ಲಾ ಕಂಡದ್ದು ಕನಸಿನಲ್ಲಿ !ನಿಜ ಅಲ್ಲ!ಅಬ್ಬಾ!
ಎಚ್ಚರಾಗುವಾಗ ಕೈಕಾಲು ನಡುಗುತ್ತಿತ್ತು !
ಇದೊಂದು ಕನಸು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ !ಈ ಕನಸು ಬೀಳಲು ಒಂದು ಬಲವಾದ ಕಾರಣವೂ ಇದೆ !
ಮೊನ್ನೆ ಶನಿವಾರ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ದಹ್ವಾದೇವಿ ಎಂಬ ಮಹಿಳೆ ಗಂಡನ ಚಿತೆಗೆ ಹಾರಿ ಸತಿ ಹೋದ ವಿಚಾರವನ್ನು ನಿನ್ನೆ ಮಾಧ್ಯಮಗಳ ಮೂಲಕ ಓದಿ ತಿಳಿದಿದ್ದೆ .ತಟ್ಟನೆ ಸತಿ ಪದ್ಧತಿಯ ಕ್ರೌರ್ಯ, ಆ ಹೆಣ್ಣು ಮಗಳು ಅನುಭವಿಸಿರಬೇಕಾದ ಉರಿ ನೋವು ನೆನಪಾಗಿತ್ತು.
ಬೆಳ್ಳಾರೆಗೆ ಹೋಗುವ ತನಕ ಸತಿ ಪದ್ದತಿಯ ದಾರುಣತೆಯ ಅರಿವು ನನಗಿರಲಿಲ್ಲ . ಐದು-ಐದೂವರೆ ವರ್ಷಗಳ ಮೊದಲು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲೆಂದು ಬೆಳ್ಳಾರೆಗೆ ಬಂದಾಗ ನಾನು ಮೊದಲು ಗಮನಿಸಿದ್ದೇ ಬೆಳ್ಳಾರೆ ಮೇಗಿನ ಪೇಟೆಯಲ್ಲಿ ಹಾಕಿರುವ ಮಾಸ್ತಿ ಕಟ್ಟೆ ಎಂಬ ನಾಮ ಫಲಕ .
ಹಾಗಾಗಿ ಮೊದಲ ದಿನವೇ ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಕೋಟೆ ಹಾಗೂ ಮಾಸ್ತಿ ಕಟ್ಟೆ ಬಗ್ಗೆ ವಿಚಾರಿಸಿದ್ದೆ !
ಇಂದಿನ ಶಿಕ್ಷಣದಲ್ಲಿ ಆನ್ವಯಿಕತೆಯ ಕೊರತೆಯೋ ,ತಿಳುವಳಿಕೆಯ ಕೊರತೆಯೋ ಏನೋ ಅಲ್ಲಿ ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಅನ್ನುವುದು ವಾಸ್ತವ !ಅನಂತರ ಸಾಕಷ್ಟು ಶೋಧನೆ ಮಾಡಿ ಅಲ್ಲಿನ ಬೀಡಿನಲ್ಲಿ ಆನೆಕಟ್ಟುವ ಕಲ್ಲು, ಎರಡು ಮಾಸ್ತಿ ವಿಗ್ರಹಗಳು ಹಾಗೂ ಇತರ ಅವಶೇಷಗಳು ಇತ್ಯಾದಿಗಳು .ಆ ಬಗ್ಗೆ ಒಂದಷ್ಟು ಮಾಹಿತಿಗಳೂ ಲಭ್ಯವಾದವು.
ಬೆಳ್ಳಾರೆ ಮಹಾ ಸತಿ ಕಟ್ಟೆ ಬಗ್ಗೆ ನಾನು ವಿಚಾರಿಸಿದಾಗ ಕೆಲವು ವದಂತಿ /ನಂಬಿಕೆಗಳ ಕುರಿತು ಮಾಹಿತಿ ಸಿಕ್ಕಿತು , ಹಿಂದೆ ಸ್ತ್ರೀಯೊಬ್ಬಳು ಕೊಂಡ ಹಾರಿ /ಗಂಡನ ಚಿತೆಯೊಂದಿಗೆ ಉರಿದು ಸತಿ ಹೋಗಿರುವುದರ ಸ್ಮಾರಕವಾಗಿ ನಿರ್ಮಿಸಿರುವ ಒಂದು ಕಲ್ಲಿನ ಕಟ್ಟೆಗೆ ಮಹಾ ಸತಿ ಕಟ್ಟೆ ಎಂದು ಕರೆಯುತ್ತಾರೆ .
ಸಂಕೋಲೆ ಎಳೆಯುವ ಸದ್ದು
ಬೆಳ್ಳಾರೆಯ ಮಾಸ್ತಿ ಕಟ್ಟೆ ಬಗ್ಗೆ ಈ ರೀತಿಯ ಮಹಾ ಸತಿ ಹೋದ ಕಥಾನಕ ಯಾರಿಗೂ ಅಲ್ಲಿ ಯಾರಿಗೂ ತಿಳಿದಿರಲಿಲ್ಲ !ಆದರೆ ಅಮವಾಸ್ಯೆಯಂದು ರಾತ್ರಿ ಬೆಳ್ಳಾರೆ ಮೇಗಿನ ಪೇಟೆಯಲ್ಲಿರುವ ಮಾಸ್ತಿ ಕಟ್ಟೆ ಕಡೆಯಿಂದ ಬೆಳ್ಳಾರೆ ಕೆಳಗಿನ ಪೇಟೆವರೆಗೆ ಕಬ್ಬಿಣದ ಸರಪಳಿ ಎಳೆದುಕೊಂಡು ಬಂದ ಸದ್ದು ಕೇಳಿಸುತ್ತದೆ ಎಂದು ಅನೇಕರು ಹೇಳಿದರು !ನಾನು ಬೆಳ್ಳಾರೆಯಲ್ಲಿದ್ದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಅಂಥ ಸದ್ದು ನನಗೆ ಕೇಳಲಿಲ್ಲ .ಆದರೆ “ಅವರೆಲ್ಲ ಕೇಳುತ್ತದೆ ಎನ್ನುವ ಆ ಸದ್ದು ಏನು ಇರಬಹುದು ?”ಎಂದು ಮಹಾ ಸತಿ ಕುರಿತಾದ ಅಧ್ಯಯನದಿಂದ ತಿಳಿದು ಬಂತು .
ಮಹಾ ಸತಿಗೂ ಸಂಕೋಲೆ ಎಳೆಯುವ ಸದ್ದಿಗೂ ಏನು ಸಂಬಂಧ ?!ಆರಂಭದಲ್ಲಿ ನನಗೂ ತಿಳಿಯಲಿಲ್ಲ .ಮಹಾ ಸತಿ ಪದ್ದತಿ ಯನ್ನು ಹೇಗೆ ಆಚರಿಸುತ್ತಾರೆ? ಎಂದು ತಿಳಿದಾಗ ಇಲ್ಲಿ ಸಂಕೋಲೆ ಎಳೆಯುವ ಸದ್ದು ಏಕೆ ಕೇಳಿಸುತ್ತಿದೆ?ನನಗೆ ಎಂದು ಅರಿವಾಯಿತು
ದಾರುಣ ದೃಶ್ಯದ ನೆನಪು
ಸತಿ ಹೋಗುವದು ಒಂದು ಭಯಾನಕ ದಾರುಣ ಘಟನೆ.ಅದೊಂದು ಕ್ರೌರ್ಯದ ಪರಮಾವಧಿ !ಅಂಥ ಒಂದು ದಾರುಣ ದೃಶ್ಯವನ್ನು ನೋಡಿದವರಿಗೆ ಮತ್ತೆ ಮತ್ತೆ ನೆನಪಾಗಿ ಆ ಸದ್ದು ಕೇಳಿದಂತೆ ಅನಿಸಿ ಬೆಚ್ಚಿ ಬೀಳುತ್ತಿರಬಹುದು !ನಂತರ ಅಂಥಹ ಒಂದು ನಂಬಿಕೆ ಬೆಳೆದಿರ ಬಹುದು !
ಮಹಾ ಸತಿಯಾಗುವವರು ಎಲ್ಲರೂ ಸ್ವ ಇಚ್ಚೆಯಿಂದ ಚಿತೆಗೆ ಹಾರಿ ಸಾಯುತ್ತಿರಲಿಲ್ಲ !ಅವರನ್ನು ಬಲವಂತವಾಗಿ ಗಂಡನ ಮೃತ ದೇಹಕ್ಕೆ ಸಂಕೋಲೆಯಲ್ಲಿ ಬಂಧಿಸಿ ಚಿತೆಯಲ್ಲಿ ಉರಿಸಲಾಗುತ್ತಿತ್ತು !
ಒಂದೊಮ್ಮೆ ಸ್ವ ಇಚ್ಚೆಯಿಂದ ಸತಿಯಾಗುವ ನಿರ್ಧಾರಕ್ಕೆ ಬಂದಿದ್ದರೂ ಚಿತೆಯ ಬೆಂಕಿ ದೇಹಕ್ಕೆ ಬಿದ್ದಾಗ, ಉರಿ ತಡೆಯಲಾರದೆ ಚಿತೆಯಿಂದ ಎದ್ದು ಓಡಿ ಬರುತ್ತಿದ್ದರು! ಆಗ ಸುತ್ತ ಮುತ್ತ ದೊಡ್ಡ ಬಡಿಗೆಯನ್ನು ಹಿಡಿದು ನಿಂತ ಜನ ಅವಳು ಎದ್ದು ಬರದಂತೆ ಅವಳನ್ನು ಬಡಿಗೆಯಿಂದ ಒಳ ತಳ್ಳುತ್ತಿದ್ದರು !
ಬೆಂಕಿ ಹಿಡಿದು ಸಾಯುವುದು ಎಂದರೆ ಅದು ಅತ್ಯಂತ ದಾರುಣ !ಮೇಲ್ಮೈ ಎಲ್ಲ ಸುಟ್ಟ ನಂತರ ಒಳಭಾಗ ಸುಟ್ಟು ಮರಣ ಸಂಭವಿಸಲು ತುಂಬಾ ಹೊತ್ತು ಬೇಕು !ಅಷ್ಟು ಸಮಯದ ಅವಳ ನೋವು ಉರಿ ಚೀರಾಟ ಹೇಗಿರಬಹುದು !ಅಬ್ಬಾ ! ನೆನೆಸಿದರೆ ದಿಗಿಲಾಗುತ್ತದೆ !
ಇಂಥಹ ಸಂದರ್ಭಗಳಲ್ಲಿ ಉರಿ ನೋವು ತಡೆಯಲಾರದಾಗ ಎಷ್ಟೇ ಒಳ ನೂಕುವವರಿದ್ದರೂ ,ಎಷ್ಟೇ ಗಟ್ಟಿಯಾಗಿ ಸಂಕೋಲೆಯಿಂದ ಬಂಧಿಸಿದ್ದರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿ ಬರುವ ಸಾಧ್ಯತೆಗಳು ಇರುತ್ತವೆ !ಬೆಂಕಿಯ ಕೆಂಡ ಉಗುಳುವ ಸಂಕೋಲೆಯನ್ನೊಳಗೊಂಡಿರುವ ಅವಳನ್ನು ಬೆಂಕಿ ತಗಲುವ ಭಯಕ್ಕೆ ಹಿಡಿಯಲು ಅಸಾಧ್ಯವಾಗಿರುವ ಸಾಧ್ಯತೆಗಳಿವೆ !
ಬಹುಶ ಬೆಳ್ಳಾರೆಯಲ್ಲಿ ಮಹಾ ಸತಿಯಾದ ಆ ಹೆಣ್ಣು ಮಗಳು ಉರಿ ತಾಳಲಾಗದಾಗ ಚಿತೆಯಿಂದ ಹೇಗೋ ಸಂಕೋಲೆ ಸಮೇತ ತಪ್ಪಿಸಿಕೊಂಡು ಓಡಿ ಬಂದಿರಬೇಕು
ಅಂದು ನಡೆದ ಮಹಾ ಸತಿಯನ್ನು ನೋಡಿದ ಮಂದಿಯ ಹೃದಯದಲ್ಲಿ ಅವಳು ಬೆಂಕಿಯುಗುಳಿಕೊಂಡು,ಸಂಕೋಲೆ ಸಮೇತ ಓಡಿ ಬಂದ ದೃಶ್ಯ ಅಚ್ಚೊತ್ತಾಗಿ ಕುಳಿತಿದ್ದು ಅವರಿಗೆ ಮತ್ತೆ ಮತ್ತೆ ಆ ದೃಶ್ಯ ಕಣ್ಣಿಗೆ ಕಂಡಂತೆ ಆಗಿರ ಬಹುದು!! .
ಅದುವೇ ಮುಂದೆ ಬೆಳ್ಳಾರೆಯಲ್ಲಿ ಅಮವಾಸ್ಯೆಯಂದು ಬೆಳ್ಳಾರೆ ಮೇಗಿನ ಪೇಟೆಯ ಬಳಿಯಿರುವ ಮಾಸ್ತಿ ಕಟ್ಟೆಯಿಂದ ಕೆಳಗಿನ ಪೇಟೆ ತನಕ ರಾತ್ರಿ ಸಂಕೋಲೆ ಎಳೆದು ಕೊಂಡು ಹೋಗುವ ಸದ್ದು ಕೇಳುತ್ತದೆ ಎಂಬ ನಂಬಿಕೆ ಹರಡಲು ಕಾರಣವಾಗಿರಬಹುದು.
ಬೆಳ್ಳಾರೆ ಮಾಸ್ತಿ ಕಟ್ಟೆಯ ಸಮೀಪದಲ್ಲಿ ತಡಗಜೆ ಎಂಬ ಪ್ರದೇಶವಿದ್ದು ಅಲ್ಲಿ ಯಾರೋ ಅಡಗಿ ಕುಳಿತುಕೊಂಡಿದ್ದ ಬಗ್ಗೆ ಐತಿಹ್ಯವಿದೆ ,ತಡಗಜೆ ಎಂದರೆ ಅಡಗಿ ಕುಳಿತ ಜಾಗ ಎಂದರ್ಥ.ಬಹುಶ ಈ ದುರ್ದೈವಿ ಹೆಣ್ಣು ಮಗಳೇ ಸತಿ ಹೋಗಲು ಹೆದರಿ ಅಡಗಿ ಕುಳಿತ ಜಾಗ ಇದು ಇರಬಹುದು.
ಈ ಬಗ್ಗೆ ತಿಳಿದ ನನ್ನ ಮನದಲ್ಲಿ “ಆ ಹೆಣ್ಣು ಮಗಳು ಸಾವಿಗೆ ಮೊದಲು ಅವಳು ಅನುಭವಿಸಿದ ನೋವು ,ಉರಿ ,ನೀರಿಗಾಗಿ ಅಂಗಲಾಚಿದ್ದು ,ಸಂಕೋಲೆಯಿಂದಹಾರುತ್ತಿರುವ ಬೆಂಕಿಯ ಕಿಡಿ ,ಬೆಂಕಿ ಹತ್ತಿ ಅವಳೇ ಒಂದು ಬೆಂಕಿಯ ರಾಶಿಯಾಗಿದ್ದಿರಬಹುದಾದ ಬಗ್ಗೆ ಒಂದು ಭಯಾನಕ ದಾರುಣ ಸ್ಥಿತಿಯ ಚಿತ್ರಣ ಮೂಡಿತ್ತು !!
ಅದರ ಫಲವೇ ನನಗೆ ಮತ್ತೆ ಮತ್ತೆ ಈ ಕನಸು ಕಾಡುತ್ತಿರುತ್ತದೆ .ಕಂಡ ಕನಸೇ ಇಷ್ಟು ದಾರುಣವಾದರೆ ನಿಜ ಸಂಗತಿ ಇನ್ನೆಷ್ಟು ದಾರುಣವಿದ್ದಿರಲಾರದು!ಅಲ್ಲವೇ ?
ಮಹಾ ಸತಿಗಳ ಬಗ್ಗೆ ಅತಿ ರಂಜಕವಾದ ಮೈನವಿರೇಳಿಸುವ ಕಥಾನಕಗಳು ಪ್ರಚಲಿತವಿವೆ .,ಆದರೆ ವಾಸ್ತವ ಹಾಗಿಲ್ಲ .ಅದೊಂದು ಅಮಾನುಷ ದಾರುಣ ವಿಚಾರ .ಜೀವಂತ ಹೆಣ್ಣು ಮಗಳೊಬ್ಬಳು ಬೆಂಕಿಯಲ್ಲಿ ಬೆಂದು ಹೋಗುವುದು ಎಂದರೆ ಊಹಿಸಲು ಅಸಾಧ್ಯವಾಗುತ್ತದೆ .ಅಡಿಗೆ ಮಾಡುವಾಗ ಒಗ್ಗರಣೆಯ ಸಾಸಿವೆ ಕಾಳೊಂದುದು ಸಿಡಿದರೆ ಎಷ್ಟು ಉರಿಯಾಗುತ್ತದೆ !ಅದುವೇ ಅಸಹನೀಯ ಎನಿಸುತ್ತದೆ ಹಾಗಿರುವಾಗ ಮೈ ಕೈ ಕಣ್ಣು ಗಳು ಬೆಂದು ಮುದ್ದೆಯಾಗುವ ಪರಿ ಹೇಗಿರಬಹುದು ?ಹೊರಗಿನಿಂದ ಬೆಂದು ಒಳ ಭಾಗಕ್ಕೆ ಬೆಂಕಿ ತಲುಪಿದ ನಂತರ ಸಾವು ಬರುತ್ತದೆ .ಇದಕ್ಕೆ ಏನಿಲ್ಲವೆಂದರೂ ಅರ್ಧ ಘಂಟೆ ಬೇಕು !ಅಷ್ಟರ ತನಕ ಉರಿಯನ್ನು ಆ ಹೆಣ್ಣು ಮಗಳು ಹೇಗೆ ಸಹಿಸಬೇಕು ? ಅತ್ತು ಬೊಬ್ಬೆ ಹೊಡೆದು ಉರಿಯಿಂದ ತಪ್ಪಿಸಿಕೊಳ್ಳಲು ಎಷ್ಟು ಹೆಣಗಾಡಿರ ಬಹುದು?!ಉಹಿಸಲೂ ಅಸಾಧ್ಯ!
ಹೆಣ್ಣನ್ನು ಮೊದಲಿನಿಂದಲೂ ಭೋಗದ ವಸ್ತುವಿನಂತೆ ಕಾಣುವ ಪ್ರವೃತ್ತಿ ಬೆಳೆದು ಬಂದಿತ್ತು .ಆದ್ದರಿಂದಲೇ ಗೆದ್ದ ಅರಸನ ಕಡೆಯವರು ಧನ ಕನಕಗಳನ್ನು ಹೊತ್ತೊಯ್ಯುವಾಗ.ಯುದ್ಧಗಳಲ್ಲಿ ಮಡಿದ ಅರಸ ಅಥವಾ ಸೈನಿಕರ ಪತ್ನಿಯರನ್ನು ಬಲತ್ಕಾರವಾಗಿ ಎತ್ತಿ ಕೊಂಡು ಹೋಗುತ್ತಿದ್ದರು .ಇದರಿಂದ ಪಾರಾಗುವ ಸಲುವಾಗಿ ಸ್ವ ಇಚ್ಚೆಯಿಂದ ಸತಿ ಪದ್ಧತಿ ಆರಂಭವಾಯಿತು .ನಂತರದ ದಿನಗಳಲ್ಲಿ ಅದು ಪದ್ಧತಿಯಾಗಿ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲೆಡೆಗೆ ವ್ಯಾಪಿಸಿತು .
ಜೌಹರ್
.ಅಲ್ಲಾವುದ್ದೀನ್ ಖಿಲ್ಜಿ ಯ ಕೈಯಿಂದ ಪಾರಾಗುವ ಸಲುವಾಗಿ ರಾಣಿ ಪದ್ಮಿನಿ ಹಾಗೂ ನೂರಾರು ರಾಣಿ ವಾಸದ ಸಾವಿರಾರು ಸ್ತ್ರೀಯರು ದೊಡ್ಡ ಬೆಂಕಿಯ ರಾಶಿ ಮಾಡಿ ಅದಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡ ಬಗ್ಗೆ ಇತಿಹಾಸವು ಹೇಳುತ್ತದೆ.ಅದನ್ನು ಜೌಹರ್ (ಜೀವ ಹರ )ಎಂದು ಕರೆದಿದ್ದಾರೆ.ಇದರ ನಂತರವೂ ಕೆಲವು ಭಾರಿ ಈ ರೀತಿ ಸಾಮೂಹಿಕವಾಗಿ ನೂರಾರು ಸ್ತ್ರೀಯರು ಆತ್ಮಾಹುತಿ ಮಾಡಿಕೊಂಡಿದ್ದಾರೆ .
ಮಹಾಸತಿ ವಿಗ್ರಹಗಳು ಮತ್ತು ಉಲ್ಲೇಖಗಳು
“ಗಂಡನನ್ನು ಕಳೆದುಕೊಂಡ ಸ್ತ್ರೀಯರು ಸತಿ ಹೋಗುವ ಪದ್ಧತಿ ದೇಶದಲ್ಲಿ ಮೊದಲಿಗೆ ರಜ ಪೂತರಲ್ಲಿ ಆರಂಭವಾಗಿದ್ದು ನಂತರ ದೇಶದ ಎಲ್ಲೆಡೆ ಹರಡಿತು “ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ . ನೇಪಾಳದಲ್ಲಿಯೂ ಇದು ಪ್ರಚಲಿತವಿತ್ತು .ಮಹಾಸತಿ ಹೆಸರಿನಲ್ಲಿ ಕರ್ನಾಟಕದಲ್ಲಿಯೂ ಅನೇಕ ಸ್ತ್ರೀಯರು ಸುಟ್ಟು ಕರಕಲಾದ ಬಗ್ಗೆ ಅಲ್ಲಲ್ಲಿ ಸಿಗುವ ಮಹಾ ಸತಿ ಕಟ್ಟೆಗಳು,ಸತಿ ವಿಗ್ರಹಗಳು ಸಾರಿ ಹೇಳುತ್ತವೆ.ಬೆಂಕಿಯ ಜ್ವಾಲೆಯ ನಡುವಿನ ಮಾಸ್ತಿ ,ಒಂದು ಕೈ ಎತ್ತಿದ ಮಾಸ್ತಿ ,ಕೈಯಲ್ಲಿ ನಿಂಬೆ ಹಣ್ಣು ಅಥವಾ ಮಾದಳದ ಹಣ್ಣು ಹಿಡಿದಿರುವ ಮಾಸ್ತಿ . ಒಂದು ಎತ್ತಿದ ಕೈ ಮಾತ್ರ ಇರುವ ಮಾಸ್ತಿ ವಿಗ್ರಹ, ಗುಂಡುಕಲ್ಲಿನ ಆಕಾರದ ಮಾಸ್ತಿ ವಿಗ್ರಹಗಳು ಗಳು ನಾಡಿನಾದ್ಯಂತ ಅಲ್ಲಲ್ಲಿ ಸಿಕ್ಕಿವೆ . ದೇಕಬ್ಬೆಯ ಶಾಸನದಲ್ಲಿ ಸತಿ ಹೋದ ದೇಕಬ್ಬೆಯ ಸಾಹಸ, ಪತಿ ಭಕ್ತಿ ಬಗ್ಗೆ ವಿಸ್ತೃತ ವರ್ಣನೆಯಿದೆ .ಆದರೆ ಎಲ್ಲೂ ಅವಳು ಚಿತೆಯೇರಿದಾಗ ಅನುಭವಿಸಿದ ಉರಿ ಯಾತನೆಯ ವರ್ಣನೆಯಿಲ್ಲ!
ಕ್ರಿ ಶ.510ರಲ್ಲಿ ಗೋಪ ರಾಜನೆಂಬ ಸೇನಾಪತಿಯು ಹೂಣರ ವಿರುದ್ಧ ಹೋರಾಡಿ ಸತ್ತಾಗ ಆತನ ಮಡದಿ ಆತನ ದೇಹದಿಂದಿಗೆ ಚಿತೆಯೇರಿ ಸಹಗಮನ ಮಾಡಿದ ಬಗ್ಗೆ ಒಂದು ವೀರಗಲ್ಲು ಶಾಸನದಲ್ಲಿ ದಾಖಲೆ ಇದೆ .ಕರ್ನಾಟಕದಲ್ಲಿ ಕದಂಬ ರಾಜ ರವಿವರ್ಮನ ಮಡದಿ ಸತಿ ಹೋದ ಬಗ್ಗೆ ಸಂಸ್ಕೃತ ಶಾಸನದಲ್ಲಿ ಉಲ್ಲೇಖವಿದೆ.
ಇದಕ್ಕೂ 4೦೦ ವರ್ಷಗಳ ಹಿಂದೆಯೇ ಮಹಾ ಸತಿ ಪದ್ದತಿ ಬಳಕೆಯಲ್ಲಿದ್ದ ಬಗ್ಗೆ ಆಧಾರಗಳು ಸಿಗುತ್ತವೆ . ಈ ಒಂದೂವರೆ ಎರಡು ಸಾವಿರ ವರ್ಷಗಳಲ್ಲಿ ಗಂಡನ ಚಿತೆಯೊಂದಿಗೆ ಬೆಂದು ಹೋದ ಮಹಿಳೆಯರೆಷ್ಟೋ ?ಲೆಕ್ಕವಿಟ್ಟವರಾರು ? ನೂರೆಂಬತ್ತೈದು ವರ್ಷಗಳ ಹಿಂದೆ ಸತಿ ಪದ್ದತಿಗೆ ನಿಷೇಧ ಜಾರಿಯಾದ ಕಾಲದಲ್ಲಿ ವರ್ಷಕ್ಕೆ 500-600 ಸತಿ ಪ್ರಕರಣಗಳು ದಾಖಲಾಗುತ್ತಿದ್ದವು .ದಾಖಲಾಗದವುಗಳು ಇದಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚು ಇದ್ದಿರಬಹುದು .
ಸತಿ ಹೋಗುವುದಕ್ಕೆ ಬೇರೆ ಬೇರೆ ವಿಧಗಳು ಇದ್ದವು.ಗಂಗಾ ಕಣಿವೆಯಲ್ಲಿ ಮೊದಲೇ ಉರಿಯುವ ಚಿತೆಗೆ ಹಾರುತ್ತಿದ್ದರು ಅಥವಾ ಅಲ್ಲಿಗೆ ದೂಡಿ ಹಾಕುತ್ತಿದ್ದರು .ದಕ್ಷಿಣ ಭಾರತದ ಕೆಲವೆಡೆ ಹುಲ್ಲಿನ ಗೂಡಲ್ಲಿ ಅವಳನ್ನು ಕೂರಿಸಿ ಕೈಯಲ್ಲಿ ಒಂದು ಹಣತೆಯನ್ನು ಕೊಡುತ್ತಿದ್ದರು .ಹುಲ್ಲಿಗೆ ಬೆಂಕಿ ಹಿಡಿಸಿಕೊಂಡು ಅವಳು ಸಜೀವ ದಹನವಾಗುತ್ತಿದ್ದಳು .ನೇಪಾಳದಲ್ಲಿ ಶವದ ಜೊತೆ ಅವಳನ್ನು ಕೂಡಿಸಿ ಉರಿಯುವ ವಸ್ತುಗಳನ್ನು ಅವಳ ತಲೆಯ ಬಳಿ ಇಟ್ಟು ಬೆಂಕಿ ಕೊಡುತ್ತಿದ್ದರು.ನಂತರ ಹಸಿ ಮರದ ಕಂಬದಿಂದ ಎರಡೂ ದೇಹಗಳನ್ನು ಸಂಬಂಧಿಕರು ಒಟ್ಟಿ ಹಿಡಿಯುತ್ತಿದ್ದರು .ಎಲ್ಲ ಕಡೆಯೂ ಅವಳು ಬೆಂಕಿಯ ಉರಿ ತಾಳಲಾರದೆ ಓಡಿ ಬರದಂತೆ ಅವಳನ್ನು ಹಸಿ ಮರದ ದಪ್ಪದ ಬಡಿಗೆಗಳಿಂದ ಸುತ್ತ ನಿಂತ ಜನರು ಒಳಗೆ ತಳ್ಳುತ್ತಿದ್ದರು .
ಸತಿ ಪದ್ದತಿ ನಿಷೇಧ 1829
ಅಂತೂ ಅದೃಷ್ಟವಶಾತ್ ರಾಜಾರಾಮ ಮೋಹನ ರಾಯರ ನಿರಂತರ ಹೋರಾಟದಿಂದ ಸತಿ ಸಹಗಮ ಪದ್ಧತಿಗೆ ನಿಷೇಧ ಬಂತು . ಇಂಥ ಕ್ರೌರ್ಯವನ್ನು ಕಾನೂನಿನ ಮೂಲಕ ಕೊನೆ ಗೊಳಿಸಲು ಹೋರಾಡಿದ ರಾಜಾರಾಮ ಮೋಹನ ರಾಯ್ ಅವರು ನಿಜಕ್ಕೂ ಪ್ರಾತಃ ಸ್ಮರಣೀಯರು .ಅವರ ಹೋರಾಟದ ಫಲವಾಗಿ ನೂರ ಎಂಬತ್ತೈದು ವರ್ಷಗಳ ಹಿಂದೆ 1829 ರ ಡಿಸೆಂಬರ್ 4 ರಂದು ಬಂಗಾಳದಲ್ಲಿ ಮೊದಲಿಗೆ ಸತಿ ಪದ್ಧತಿ ನಿಷೇಧ ಜಾರಿಗೆ ಬಂತು. ವಿಲಿಯಂ ಬೆನ್ಟೆಕ್ ಈ ಸಮಯದಲ್ಲಿ ಬಂಗಾಳದ ದ ಬ್ರಿಟೀಷ್ ಗವರ್ನರ್ ಜನರಲ್ ಆಗಿದ್ದರು . 1830ರಲ್ಲಿ ಮದ್ರಾಸ್ ಹಾಗೂ ಬಾಂಬೆ ಪ್ರೆಸಿಡೆನ್ಸಿಗೂ ಈ ನಿಷೇಧ ವಿಸ್ತರಿಸಲಾಯಿತು.
.ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದ ನಂತರವೂ ಕಾನೂನಿನ ಕಣ್ಣು ತಪ್ಪಿಸಿ ಬಲವಂತವಾಗಿ, ಪತಿಯನ್ನು ಕಳೆದು ಕೊಂಡ ಅನೇಕ ದುರ್ದೈವಿಗಳನ್ನು ಸತಿ ಹೆಸರಿನಲ್ಲಿ ಬೆಂಕಿಯಲ್ಲಿ ಸುಟ್ಟು ಕೊಂದಿದ್ದಾರೆ .
ರೂಪ್ ಕನ್ವರ್ ಪ್ರಕರಣ
1987ರ ಸೆಪ್ಟೆಂಬರ್ 4ರಂದು ರೂಪಾ ಕನ್ವರ್ ಎಂಬ 18 ವರ್ಷದ ರಜಪೂತ ಯುವತಿಯನ್ನು ರಾಜಸ್ತಾನದ ಸಿಕರ್ ಜಿಲ್ಲೆಯ ದೇವ್ರಾಲಾ ಗ್ರಾಮದಲ್ಲಿ ಬಲವಂತವಾಗಿ ಸುಟ್ಟು ಸತಿ ಮಾಡಲಾಯಿತು.
ಸತಿ ತಡೆ ಕಾಯ್ದೆ 1988
1988 ರಲ್ಲಿ ನಮ್ಮ ಸರ್ಕಾರ ಸತಿ ತಡೆ ಕಾಯ್ದೆ(Sati prevention Act 1988)ಯನ್ನು ಜಾರಿಗೆ ತಂದಿತು .ಇದಾದ ನಂತರವೂ ಕಾನೂನಿನ ಕಣ್ಣಿಗೆ ಕಾಣದಂತೆ ಅನೇಕ ಸತಿ ಪ್ರಕರಣಗಳು ನಡೆದಿವೆ.2002 ರಲ್ಲಿ ಪಾಟ್ನಾಕ್ಕೆ ಹೋಗಿದ್ದಾಗ ಅಲ್ಲೊಂದು ಸತಿ ದಹನ ನಡೆದ ಬಗ್ಗೆ ಬಿ.ಎಂ ರೋಹಿಣಿ (ತುಳುನಾಡಿನ ಮಾಸ್ತಿಗಲ್ಲು –ವೀರಗಲ್ಲುಗಳು ಕೃತಿಯ ಲೇಖಕಿ )ಅವರು ತಿಳಿಸಿದ್ದಾರೆ .2008 ರಲ್ಲಿಯೂ ಒಂದು ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ಮೊನ್ನೆ 13 ಡಿಸೆಂಬರ್ 2014 ರ ಶನಿವಾರ ಬಿಹಾರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಇನ್ನೂ ಕೂಡ ಸತಿ ಎಂಬ ಕ್ರೂರ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಸತಿಯ ವೈಭವೀಕರಣ ,ವಿಧವಾ ಸ್ತ್ರೀಯರನ್ನು ಅಪಶಕುನವೆಂದು ಕಾಣುವ ಸಮಾಜ ಸ್ವ ಇಚ್ಚೆಯಿಂದ ಸತಿ ಹೋಗಲು ಕಾರಣವಾದರೆ ,ಸಂಸ್ಕೃತಿ –ಸಂಪ್ರದಾಯ,ಮೂಢನಂಬಿಕೆಗಳು ಬಲವಂತದ ಸತಿ ದಹನಕ್ಕೆ ಕಾರಣವಾಗಿದೆ .ಒಂದೆಡೆ ಅತ್ಯಾಚಾರ ,ಲೈಂಗಿಕ ಕಿರುಕುಳ .ಲಿಂಗ ತಾರತಮ್ಯ ,ಇನ್ನೊಂದೆಡೆ ಆಸಿಡ್ ದಾಳಿ ಜೊತೆಗೆ ಸತಿ ಪದ್ಧತಿಯ ಉಳಿಕೆ ,185 ವರ್ಷಗಳ ಹಿಂದೆಯೇ ನಿಷೇಧ ಗೊಂಡ ಸತ್ ಎಂಬ ಅನಿಷ್ಟ ಪದ್ದತಿಯೇ ಇನ್ನೂ ಜೀವಂತವಾಗಿದೆ ಇನ್ನು ಉಳಿದ ವಿಚಾರಗಳ ಬಗ್ಗೆ ಹೇಳಲೇನಿದೆ ?! ಸತಿ ಹೋದ ಸ್ತ್ರೀಗೆ ಮುಕ್ತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ,ಆದರೆ ಸ್ತ್ರೀಯರಿಗಂತೂ ಈ ಅನಿಷ್ಟಗಳಿಂದ ಇನ್ನೂ ಮುಕ್ತಿ ದೊರೆತಿಲ್ಲ. ಒಟ್ಟಿನಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ|ರಮಂತೇ ತತ್ರ ದೇವತಾಃ ||(ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷದಿಂದ ನೆಲೆಸುತ್ತಾರೆ )ಎಂದು ಸಾರುವ ನಮ್ಮ ಸಮಾಜದಲ್ಲಿ ಸ್ತ್ರೀಯರು ನೆಮ್ಮದಿಯಿಂದ ಇಂದೂ ಇರಲು ಸಾಧ್ಯವಾಗಿಲ್ಲ.
ಈ ಅನಿಷ್ಟಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಉಂಟು ಮಾಡ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ .ಸುಳ್ಯ ,ದ .ಕ
ಜಿಲ್ಲೆ
This comment has been removed by the author.
ReplyDeleteA very well written article, revealing the reality of this heinous act. I think this is the most torturous punishment on the earth and no one deserves this. Thanks Dr. Lakshmi for this article.
ReplyDeleteThanks for your expressions
ReplyDelete