Friday, 30 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 403-409 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು © ಡಾ ಲಕ್ಷ್ಮೀ ಜಿ ಪ್ರಸಾದ

ಕೊಡಗಿನಲ್ಲಿ ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರ ದೈವಗಳ ಆರಾಧನೆ ಇದೆ .
ಕೇರಳದಲ್ಲಿ ಆರು ಜನ ಸಹೋದರರು ಮತ್ತು ಒಬ್ಬ ತಂಗಿ ಚಿನ್ನದ ಶಂಖದಲ್ಲಿ ಹುಟ್ಟುತ್ತಾರೆ. ಹಿರಿಯವನು ಕಾಂಞರಾಟಪ್ಪ  ಎರಡನೆಯವನು ತಿರುಚಂಬರಪ್ಪ ,ಮೂರನೆಯವನು ಬೇಂದ್ರು ಕೋಲಪ್ಪ ಎಂದೂ, ನಾಲ್ಕನೆಯವನು ಇಗ್ಗುತಪ್ಪ , ಐದನೆಯವನು ಪಾಲೂರಪ್ಪ  ಆರನೆಯವನು ತಿರುನೆಲ್ಲಿ ಪೆಮ್ಮಯ್ಯ ಎಇವರ ತಂಗಿ ತಂಗಮ್ಮ.ಇವರು ಬೇರೆ ಬೇರೆ ನಾಡಿಗೆ ಹೋಗುತ್ತಾ ಕೊಡಗಿಗೆ ಬರ್ತಾರೆ .ಪ್ರಯಾಣದ ವೇಳೆ ಒಂದು ಮಧ್ಯಾಹ್ನ ಎಲ್ಲರಿಗೂ ಹಸಿವೆಯಾಗುತ್ತದೆ.ಆಗ ತಂಗೆಮ್ಮ " ನಾನು ಬೆಂಕಿ ಇಲ್ಲದೆ ಅಡುಗೆ ಮಾಡುತ್ತೇನೆ.ನೀವೆಲ್ಲರೂ ಉಪ್ಪಿಲ್ಲದ ಅಡುಗೆ ಊಟ ಮಾಡಬೇಕು ಎಂದು ಹೇಳುತ್ತಾಳೆ.ಅಂತೆಯೇ ಅವಳು ತನ್ನ ಶಕ್ತಿಯಿಂದ ಬೆಂಕಿ ಇಲ್ಲದೆ ಅಡುಗೆ ಮಾಡುತ್ತಾಳೆ.ಆದರೆ ಅವಳ ಅಣ್ಣ ಪಾಲೂರಪ್ಪನಿಗೆ ಉಪ್ಪಿಲ್ಲದೆ ಊಟ ಮಾಡಲು ಸಾಧ್ಯವಾಗುವುದಿಲ್ಲ. ಅವನು " ಮಳೆಬರುವಾಗ ಹೀಗೆ ಆಲಿ ಕಲ್ಲು ಬೀಳುತ್ತದೆ" ಎಂದು ಹೇಳಿ ಅನ್ನವನ್ನು ಮೇಲೆ ಎಸೆಯುತ್ತಾನೆ.ಆಗ ಕೋಪಿಸಿಕೊಂಡ ತಂಗೆಮ್ಮ ತಾನು ಹಿಡಿದಿದ್ದ ಸೌಟಿನಲ್ಲಿ   ಪಾಲೂರಪ್ಪನ ಕೆನ್ನೆಗೆ ಹೊಡೆಯುತ್ತಾಳೆ.
ಇದರಿಂದ ಕೋಪಗೊಂಡ ಪಾಲೂರಪ್ಪ ಉಪಾಯವಾಗಿ ಅವಳನ್ನು ಸೋಲಿಸಬೇಕೆಂದು ಆಲೋಚಿಸಿ ಒಂದು ವ್ಯೂಹವನ್ನು ಹೆಣೆಯುತ್ತಾನೆ.
ಊಟದ ನಂತರ ಎಲ್ಲರೂ ಎಲೆ ಅಡಕೆ ಹಾಕುತ್ತಾರೆ. ಆಗ ಪಾಲೂರಪ್ಪ ಯಾರದು ಹೆಚ್ಚು ಕೆಂಪಾಗಿದೆ ನೋಡೋಣ ಎಂದು ಕೈಗೆ ಉಗಿದು ಹಿಂದೆ ಎಸೆದು ಮತ್ತೆ ನುಂಗಿದಂತೆ ಅಭಿನಯ ಮಾಡುತ್ತಾನೆ. ಇವನ ಕುಟಿಲವರಿಯದ ತಂಗೆಮ್ಮ ವೀಳ್ಯದೆಲೆ ಯನ್ನು ಕೈಗೆ ಉಗಿದು ಮತ್ತೆ ಅದನ್ನು ಬಾಯಿಗೆ ಹಾಕಿ ನುಂಗುತ್ತಾಳೆ.ಆಗ ಪಾಲೂರಪ್ಪ " ಇವಳು ಎಂಜೆಲು ತಿಂದಿದ್ದಾಳೆ.ಹಾಗೆ ಜಾತಿ ಭ್ರಷ್ಟಳಾದಳು.ಇವಳು ಮುಂದಕ್ಕೆ ನಮ್ಮ ಜೊತೆ ಬರಬಾರದು ಎಂದು ಹೇಳುತ್ತಾನೆ.ಇದರಿಂದ ನೊಂದ ಇಗ್ಗುತಪ್ಪ ತಂಗಿ ತನಗೆ ಕಾಣುವಂತೆ ಇರಲಿ ಎಂದು ಒಂದು ಬಾಣ ಬಿಡುತ್ತಾನೆ .ಅದು ಪೊನ್ನಂಗಾಲ ನದಿಯ ದಡದ ಕಾಡಿನಲ್ಲಿ ಒಂದು ಮಾವಿನ ಮರದ ಮೇಲೆ ಬೀಳುತ್ತದೆ.ತಂಗೆಮ್ಮ ಒಂದು ಕೊಕ್ಕರೆಯ ರೂಪು ತಳೆದು ಅಲ್ಲಿಗೆ ಸಮೀಪದ ಕರ್ತಂಡ ಕುಟುಂಬಕ್ಕೆ ಸೇರಿದ ಗದ್ದೆಯಲ್ಲಿ ಕುಳಿತುಕೊಳ್ಳುತ್ತಾಳೆ.ಅಲ್ಲಿಗೆ ಬಂದಕರ್ತಂಡ ಕುಟುಂಬದ ಹಿರಿಯರೊಬ್ಬರು ಕೊಕ್ಕರೆ ಯ ಮೇಲೆ ತಮ್ಮ ಕೈಯಲ್ಲಿರುವ ಬುಟ್ಟಿಯನ್ನು ಕವುಚಿ ಹಾಕುತ್ತಾರೆ. ಆಗ ಅದು ಕಲ್ಲಾಗಿ ಬದಲಾಗತ್ತದೆ.ಅತನ ಮೇಲೆ ತಂಗೆಮ್ಮ ದೈವ ಬಂದು ನುಡಿ ಕೊಡುತ್ತದೆ. ಪೊನ್ನಂಗಾಲದಲ್ಲಿ ನೆಲೆಸಿದ ಕಾರಣ ಅವಳು ಪೊನ್ನಂಗಾಲತಮ್ಮೆ ಎಂದು ಹೆಸರು ಪಡೆದು ಆರಾಧನೆ ಪಡೆಯುತ್ತಾಳೆ .ಅವಳ ಸಹೋದರರು ಕೂಡ ದೈವಿಕ ಶಕ್ತಿ ಪಡೆದು ಆರಾಧನೆ ಪಡೆಯುತ್ತಾರೆ.

2 comments:

  1. ಇಗ್ಗುತ್ತಪ್ಪ ದೇವರು ಸುಬ್ರಹ್ಮಣ್ಯನ ಅವತಾರವೆಂದು ಭಾವಿಸಲಾಗುತ್ತದೆ ಪಾಡಿಯಲ್ಲಿ ಇಗ್ಗುತ್ತಪ್ಪ ದೇವರ ಪೂಜೆಯನ್ನು ಮಾಡುತ್ತಾರೆ. ಆದರೆ ಪಾಡಿ ದೇವಸ್ಥಾನದ ಅರ್ಚಕರು ಹಾಗೂ ಅವರ ಕುಟುಂಬದವರು ಪೊನ್ನಗಾಲತಮೆಯ ದೇವಾಲಯಕ್ಕೆ ಹೋಗುವ ಕ್ರಮವಿಲ್ಲ

    ReplyDelete
    Replies
    1. ಮಾಹಿತಿಗಾಗಿ ಧನ್ಯವಾದಗಳು

      Delete