Sunday, 25 February 2018

ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು 425-426 ನೇತ್ರಾಣಿ ಜಟಗ/ ಜಟ್ಟಿಗ ಮತ್ತು ಹೊಗೆವಡ್ಡಿ ಜಟಗ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

 


ಚಿತ್ರ ಕೃಪೆ - ಶ್ರೀ ಅನಂತ ನಾಯಕ್ ,ನೇತ್ರಾಣಿ ಗುಡ್ಡ ಮತ್ತು ಕುದುರೆ ಜಟ್ಟಿಗ, ನೇತ್ರಾಣಿ ಜಟ್ಟಿಗ ,ಕ್ಷೇತ್ರ ಪಾಲ ಮತ್ತು ಇತರ ಆರಾಧ್ಯ ಶಕ್ತಿಗಳು
ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು
ನೇತ್ರಾಣಿ ಜಟಗ ಮತ್ತು ಹೊಗೆವಡ್ಡಿ ಜಟಗ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ
ರಾಣಿ ಚೆನ್ನ ಭೈರಾದೇವಿ ಉತ್ತರ ಭಾರತದಿಂದ ಗೊಂಡರ ಪಡೆಯನ್ನು ತನ್ನ ಕೋಟೆ ಹಾಗೂ ಅರಮನೆಯ ಕಾವಲಿಗಾಗಿ ಕರೆಸಿಕೊಂಡು ಬಂದು ಸಲಹಿದ್ದ ಬಗ್ಗೆ ಇತಿಹಾಸವು ತಿಳಿಸುತ್ತದೆ.ಗೊಂಡರು ಜಟಗರನ್ನು ಆರಾಧನೆ ಮಾಡುತ್ತಾರೆ.ಇವರು ಬಲಿಷ್ಠ ರಾದ ಜಟ್ಟಿಗಳೂ ಆಗಿದ್ದರು.
ಹೊಗೆವಡ್ಡಿ ಮತ್ತು ನೇತ್ರಾಣಿ ಗುಡ್ಡದಲ್ಲಿ  ಜಟ್ಟಿಗ/ಜಟಗರ ಆರಾಧನೆ ಇದೆ. ಇವರಿಬ್ಬರು ಅಣ್ಣ ತಮ್ಮಂದಿರಾಗಿದ್ದು
ಹೊಗೆವಡ್ಡಿಯ ಜಟಗರಾಯ ಅಣ್ಣನೆಂದೂ ,ನೇತ್ರಾಣಿಯ ಜಟಗರಾಯ ತಮ್ಮನೆಂಬ ಐತಿಹ್ಯವಿದೆ.
ಹೊಗೆವಡ್ಡಿಯ ಜಟಗನಿಗೆ ಮಾಣಿ ಭದ್ರ ಎಂಬ ಹೆಸರು‌.ನೇತ್ರಾಣಿ ಜಟಗನಿಗೆ ವೀರ ಭದ್ರನೆಂದು ಹೆಸರು.
ಇವರಿಬ್ಬರೂ ಯುದ್ದ ವೀರರಾಗಿದ್ದರು.
ಕಾಸರ
ಸ್ಥಳೀಯ ಐತಿಹ್ಯದ ಪ್ರಕಾರ ಹೊಗೆವಡ್ಡಿ ಯ ಜಟಗ ನಿಜಾಮರ ಜೊತೆಗಿನ ಹೋರಾಟದಲ್ಲಿ ಮರಣವನ್ನಪ್ಪುತ್ತಾನೆ‌.ನೇತ್ರಾಣಿ ಜಟಗ ಮರಾಠರ ಜೊತೆಯ ಹೋರಾಟದಲ್ಲಿ ಮರಣವನ್ನಪ್ಪುತ್ತಾರೆ .
ಹೊಗೆವಡ್ಡಿ ಕೋಟೆಯಲ್ಲಿ ಕಾಸರಗೋಡು ತಿಮ್ಮಣ್ಣ ನಾಯಕನಿದ್ದಾಗ ಒಂದೆಡೆಯಿಂದ ನಿಜಾಮರು ಮತ್ತು ಮತ್ತೊಂದೆಡೆಯಿಂದ ಮರಾಠರು ಆಕ್ರಮಣ ಮಾಡುತ್ತಾರೆ. ಆಗ ಇವರಿಬ್ಬರು ಯುದ್ಧದಲ್ಲಿ ಸಾಯುತ್ತಾರೆ.
‌ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಇತಿಹಾಸದಲ್ಲಿ ಪೋರ್ಚುಗೀಸರು ಮತ್ತು ರಾಣಿಯ ನಡುವೆ ಯುದ್ಧವಾಗಿದ್ದು ಸ್ವತಃ ರಾಣಿಯೇ ಕತ್ತಿ ಹಿಡಿದು ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸುತ್ತಾಳೆ.ಆಗ ಗಾಯಗೊಂಡ ಅವಳು ಪೋರ್ಚುಗೀಸರ ನಡುವೆ ಸಿಕ್ಕು ಹಾಕಿಕೊಳ್ಳುತ್ತಾಳೆ.ಆಗ ಗೊಂಡರ ನಾಯಕ ವೀರಾವೇಶದಿಂದ ಹೋರಾಡಿ ರಾಣಿಯನ್ನು ರಕ್ಷಣೆ ಮಾಡಿ ಗಾಯ ಗೊಂಡ ಅವಳನ್ನು ಹೊತ್ತುಕೊಂಡು ನೇತ್ರಾಣಿ ಗುಡ್ಡಕ್ಕೆ ಬರುತ್ತಾನೆ.ಯುದ್ಧದಲ್ಲಿ ಗಾಯಗೊಂಡ ಅವಳು ಸಾಯುತ್ತಾಳೆ.ಆಗ ಅವಳ ರಾಜ್ಯದ ಒಡೆತನ ಅವಳ ತಂಗಿ ಚನ್ನ ಭೈರಾದೇವಿಗೆ ಸಿಗುತ್ತದೆ. ಅವಳು ಸುಮಾರು ಐವತ್ತನಾಲ್ಕುವರ್ಷಗಳ ಕಾಲ ಬಸದಿ ಕೇರಿ ಗೇರು ಸೊಪ್ಪೆ ಭಟ್ಕಳದಲ್ಲಿ ಆಳ್ವಿಕೆ ನಡೆಸುತ್ತಾಳೆ.ಕಾಳು ಮೆಣಸನ್ನು ಬೆಳೆದು ಮಾರಾಟ ಮಾಡಿ ಅಪಾರ ಸಂಪತ್ತನ್ನು ಗಳಿಸಿದ ಅವಳು ರಾಜ್ಯ ವಿಸ್ತರಣೆಯನ್ನು ಮಾಡುತ್ತಾಳೆ.ವಿಜಯ ನಗರ ಸಾಮ್ರಾಜ್ಯಕ್ಕೆ ಸಂವಾದಿಯಾದ ಸಾಮ್ರಾಜ್ಯವನ್ನು ಕಟ್ಟುತ್ತಾಳೆ.ಈ ಬಗ್ಗೆ ದೆಲ್ಲಾವೆಲ್ಲಾ ಬರೆದ ಪ್ರವಾಸಿ ಕಂಡ ಭಾರತದಲ್ಲಿ ಉಲ್ಲೇಖವಿದೆ.
‌ಅಕ್ಕನ  ವಯಸ್ಸಾದ ಗಂಡನನ್ನು ಮದುವೆಯಾದ ತಂಗಿ ಸಣ್ಣ ವಯಸ್ಸಿಗೆ ವಿಧವೆಯಾಗುತ್ತಾಳೆ.ನಂತರ ಗೊಂಡರ ನಾಯಕನನ್ನು ಸಂಪೂರ್ಣವಾಗಿ ನಂಬುತ್ತಾಳೆ.ಆದರೆ ಆತ ರಾಣಿಗೆ ಮೋಸ ಮಾಡಿ ಕೆಳದಿಯ ವೆಂಕಟಪ್ಪ ನಾಯಕನ ಜೊತೆ ಸೇರಿ ರಾಜ್ಯದ ಸಂಪತ್ತು ಎಲ್ಲಿದೆ ಎಂಬ ರಹಸ್ಯವನ್ನು ಹೇಳುತ್ತಾನೆ.ವೆಂಕಟಪ್ಪ ನಾಯಕ ಯುದ್ಧಕ್ಕೆ ಬಂದಾಗ ತನ್ನಲ್ಲಿರುವ ಸಮಪತ್ತನ್ನು ನೀಡುತ್ತೇನೆ ಎಂದು ತಿಳಿಸಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿ ಯುದ್ದಕ್ಕೆ ಸಹಾಯ ಯಾಚಿಸುತ್ತಾಳೆ.ಆದರೆ ರಾಜ್ಯದಲ್ಲಿ ನೂರಾರು ಬಾವಿಗಳಲ್ಲಿ ಅಡಗಿಸಿ ಇಟ್ಟ ಸಂಪತ್ತನ್ನು ನೋಡಿದ ಪೋರ್ಚುಗೀಸರು ಅದನ್ನು ಬೇರೆಡೆಗೆ ಸಾಗಿಸುವಲ್ಲಿ ಗಮನ ಹರಿಸುತ್ತಾರೆ ಯುದ್ಧದಲ್ಲಿ ಸರಿಯಾದ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಪರಿಣಾಮವಾಗಿ ವೆಂಕಟಪ್ಪ ನಾಯಕ ಭಟ್ಕಳವನ್ನು ವಶಪಡಿಸಿಕೊಳ್ಳುತ್ತಾನೆ.ಆದರೆ ಅದಕ್ಕಿಂತ ಮೊದಲೇ ಸಂಪತ್ತನ್ನು ಬೇರೆಡೆ ಸಾಗಿಸಿದ್ದು ಅದು ಪೋರ್ಚುಗೀಸರ ವಶವಾಗಿತ್ತು.ಗೊಂಡರ ನಾಯಕ ಜಟ್ಟಿಗ ತೋರಿಸಿದ ಬಾವಿಗಳು ಖಾಲಿಯಾಗಿದ್ದವು.ಇದರಿಂದ ಕೋಪಗೊಂಡ ವೆಂಕಟಪ್ಪ ನಾಯಕ ಗೊಂಡರ ನಾಯಕನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲುತ್ತಾನೆ.
‌ಗೊಂಡರು ಚೌಂಡಿ( ಚಾಮುಂಡಿ ?) ಮತ್ತು ಜಟಗರನ್ನು ಆರಾಧನೆ ಮಾಡುತ್ತಾರೆ.
‌ತುಳುನಾಡಿನ ಚಾಮುಂಡಿ ದೈವದ ವೃತ್ತಾಂತದಲ್ಲಿ ಚಾಮುಂಡಿಗೆ ದ್ರೋಹ ಮಾಡಿದಾತ ಜತ್ತಿಂಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ.
‌ಚಾಮುಂಡಿ ಯಾರೆಂಬ ಬಗ್ಗೆ ಇದಮಿತ್ತಂ ಎಂಬ ಮಾಹಿತಿ ಇಲ್ಲ.ಭೀಮುರಾಯರ ಕೆರೆಯಲ್ಲಿ ತಾವರೆ ಹೂವಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಚಾಮುಂಡಿ ಎಂಬ ಹೆಸರು ಪಡೆದ ಬಗ್ಗೆ ಶಾರದಾ ಜಿ ಬಂಗೇರ ಅವರು ಹಾಡಿದ ಪಾಡ್ದನದಲ್ಲಿದೆ.
‌ಇಲ್ಲಿ ರಾಣಿ ಚೆನ್ನ ಭೈರಾದೇವಿ ಮತ್ತು ಚೌಂಡಿ(ಚಾಮುಂಡಿ?) ಯನ್ನು ಸಮೀಕರಿಸಿ ಅಕೆಗೆ ದ್ರೋಹ ಮಾಡಿದ ಗೊಂಡರ ನಾಯಕ ಜಟಗನೆ ಜತ್ತಿಂಗ,ಜಟ್ಟಿಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ ಎಂದು ಡಾ.ಕೆ ಎನ್ ಗಣೇಶಯ್ಯ ಅಭಿಪ್ರಾಯ ಪಟ್ಟಿದ್ದಾರೆ.
‌ರಾಣಿ ಚೆನ್ನ ಭೈರಾದೇವಿಯ ನಂತರದ ಕಾಲದಲ್ಲಿ ಎಂದರೆ ಕೆಳದಿಯ ವೆಂಕಪ್ಪ ನಾಯಕನ ವಂಶದಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಅಳ್ವಿಕೆ ನಡೆಸುತ್ತಾಳೆ.ಆಗ ಚೆನ್ನಮ್ಮಳ ಮಹಾ ಪ್ರಧಾನಿ ವೀರ ತಿಮ್ಮಣ್ಣ ನಾಯಕ ಹೊಗೆವಡ್ಡಿ ಕೋಟೆಯನ್ನು ಕಟ್ಟಿಸಿ ಅ ಪರಿಸರದಲ್ಲಿ ರಕ್ಷಣೆ ಮಾಡುತ್ತಾನೆ.ಆ ಸಮಯದಲ್ಲಿ ಕೂಡ ರಾಣಿ ಚೆನ್ನಭೈರಾದೇವಿ ಕರೆಸಿದ ಗೊಂಡರ ವಂಶದವರು ಕೆಳದಿಯ ಜೊತೆಯಲ್ಲಿ ಇರುತ್ತಾರೆ.ಆಗ ಯುದ್ಧದಲ್ಲಿ ಇಬ್ಬರು ಅಥವಾ ಒಬ್ಬ ಗೊಂಡರ ನಾಯಕ ಮರಣವನ್ನಪ್ಪಿ ದೈವತ್ವ ಪಡೆದು ಹೊಗೆವಡ್ಡಿ ಜಟ್ಟಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಆತನ ಹೆಸರು ಮಾಣಿ ಜಟ್ಟಿಗ ಎಂದಿರುವ ಕಾರಣ ಆತ ನೇತ್ರಾಣಿ ಜಟ್ಟಿಗನಿಗಿಂತ ಕಿರಿಯವನಾಗಿರಬಹುದು.ನೇತ್ರಾಣಿಯಲ್ಲಿ ಆರಾಧನೆ ಪಡೆಯುವ ಕುದುರೆ ಜಟ್ಟಿಗ ರಾಣಿ ಚೆನ್ನ ಭೈರಾದೇವಿಗೆ ದ್ರೋಹ ಮಾಡಿ ದುರಂತವನಗನಪ್ಪಿದ ವೀರನೇ ಇರಬೇಕು. ದುರಂತ ಮತ್ತು ದೈವತ್ವ ತುಳುವ ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಾಣಬರುವ ವಿದ್ಯಮಾನವಾಗಿದೆ.ಅಂತೆಯೇ ಅತ ಕೂಡ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
‌ಹೊಗೆವಡ್ಡಿ  ಕೋಟೆಯ ತಿಮ್ಮಣ್ಣ ನಾಯಕ ದೈವವಾಗಿ ಆರಾಧನೆ ಪಡೆಯುತ್ತಾನೆ. ಅವನ ಕಾಲದಲ್ಲಿಯೇ ಯುದ್ದದಲ್ಲಿ ದುರಂತವನ್ನಪ್ಪಿದ ಗೊಂಡರ ನಾಯಕ ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
‌ನೇತ್ರಾಣಿ ಗುಡ್ಡದಲ್ಲಿ ನೇತ್ರಾಣಿ ಜಟ್ಟಿಗನಲ್ಲದೆ ಕಿದುರೆ ಜಟ್ಟಿಗ ಎಂಬ ಹೆಸರಿನ ದೈವಕ್ಕೂ ಆರಾಧನೆ ಇದೆ. ಬಹುಶಃ ಆತ ಮರಾಠರ ಜೊತೆಯಲ್ಲಿ ಹೋರಾಡಿದ ಗೊಂಡರ ನಾಯಕನಿರಬಹುದು.
‌ಈ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ
‌ಆಧಾರ ಗ್ರಂಥಗಳು
‌ಬಳ್ಳಿಕಾಳ ಬೆಳ್ಳಿ -  ಐತಿಹಾಸಿಕ ಕಾದಂಬರಿ© ಡಾ.ಕೆ ಎನ್ ಗಣೇಶಯ್ಯ
‌ಭೂತಗಳ ಅದ್ಭುತ ಜಗತ್ತು - © ಡಾ ಲಕ್ಷ್ಮೀ ಜಿ ಪ್ರಸಾದ
‌ತುಳುನಾಡಿನ ಅಪೂರ್ವ ಭೂತಗಳು © ಡಾ.ಲಕ್ಷ್ಮೀ ಜಿ ಪ್ರಸಾದ
‌ಹೊಗೆವಡ್ಡಿ ಕ್ಷೇತ್ರ ಮಹಾತ್ಮೆ © ಶ್ರೀ ಅನಂತ ನಾಯಕ
‌ಮತ್ತು ಕಾಸರಗೋಡು ತಿಮ್ಮಣ್ಣ ನಾಯಕನ ವಂಶಜರಾದ ಅನಂತ ನಾಯಕ ಅವರು ಮೌಖಿಕವಾಗಿ ತಿಳಿಸಿದ ಐತಿಹ್ಯಗಳು ಮತ್ತು ಮಾಹಿತಿಗಳು 

No comments:

Post a Comment