ಬಾಲೆ ಪದ್ಮಕ್ಕೆ
ಕನರಾಯ ಬೀಡಿನ ಬಂಗೇರರ ಮಡದಿ ಬಾಲೆ ಪದ್ಮಕ್ಕೆ ಚೊಚ್ಚಲ ಬಸುರಿಯಾಗಿದ್ದಾಗ ಬಂಗೇರರಿಗೆ ಕಾಳಗವೊಮದು ಒದಗಿ ಬರುತ್ತದೆ. ಅವನು ದಂಡಿಗೆ ಹೋಗಲು ಹೊರಟು ನಿಂತಾಗ ತಾನು ಕೂಡ ಬರುತ್ತೇನೆ ಎಂದು ಹಠಮಾಡಿ ಅವನ ಜೊತೆಗೆ ದಂಡಿಗೆ ಮಡದಿ ಬಾಲೆ ಪದ್ಮಕ್ಕೆ ಬರುತ್ತಾಳೆ. ಅವರು ಹೊರಡುವಾಗ ಕನರಾಯ ಬಂಗೇರರ ತಾಯಿ ದೈವಗಳಲ್ಲಿ “ಇಬ್ಬರು ಹೋಗಿ ಮೂವರಾಗಿ ಬರುವಂತೆ ಅನುಗ್ರಹಿಸುವಂತೆ” ಬೇಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಮುಂದೆ ದಾರಿ ಮಧ್ಯದಲ್ಲಿ ಬಾಲೆ ಪದ್ಮಕ್ಕೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ. ಕಾಡಿನ ನಡುವೆ ಇರುವ ಅರಮನೆಯ ಒಡತಿ ಅವಳನ್ನು ಆರೈಕೆ ಮಾಡುತ್ತಾಳೆ. ಬಾಲೆ ಪದ್ಮಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಕನರಾಯ ಬಂಗೇರ ಹೆಂಡತಿ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕಾಳಗಕ್ಕೆ ಹೋಗುತ್ತಾನೆ. ಏಳೆಂಟು ವರ್ಷ ಕಳದು ಯುದ್ಧವನ್ನು ಗೆದ್ದು ಹಿಂದೆ ಬರುವಾಗ ಮಡದಿ ಮಕ್ಕಳನ್ನು ಕರೆತರಲು ಹೋಗುತ್ತಾರೆ. ಅವರ ಮಡದಿ ಮಕ್ಕಳಿಗೆ ಏಳು ವರ್ಷವಾದಾಗ ತೆಂಗಿನ ಗರಿ ತಲೆಗೆ ಬಿದ್ದು ಮರಣವನ್ನಪ್ಪಿರುತ್ತಾರೆ. ಇಬ್ಬರು ಮಕ್ಕಳೊಂದಿಗೆ ಕನರಾಯ ಬಂಗೇರರು ಬೀಡಿಗೆ ಬರುತ್ತಾರೆ.
ಅವರ ತಾಯಿ ದೈವದಲ್ಲಿ ಅರಿಕೆ ಮಾಡಿದ್ದಂತೆ ಇಬ್ಬರು ಹೋಗಿ ಮೂವರಾಗಿ ಬಂದಿರುತ್ತಾರೆ. ಮಡದಿ ಬಾಲೆ ಪದ್ಮಕ್ಕೆ ಅವಳಿ ಮಕ್ಕಳನ್ನು ಹೆತ್ತ ಕಾರಣ ಕನರಾಯ ಬಂಗೇರ ಸೇರಿ ಅವರು ನಾಲ್ವರಾಗುತ್ತಾರೆ. ಆದರೆ ದೈವದ ಎದುರು ಅರಿಕೆ ಮಾಡಿದ್ದು ‘ಇಬ್ಬರು ಹೋಗಿ ಮೂವರು ಬರಲೆಂದು’, ಆದ್ದರಿಂದ ಬಾಲೆ ಪದ್ಮಕ್ಕೆ ಸಾಯುತ್ತಾಳೆ ಎಂಬ ಆಶಯ ಇಲ್ಲಿದೆ.© ಡಾ.ಲಕ್ಷ್ಮೀ
ಬಾಲೆ ಪದ್ಮಕ್ಕೆ
ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾಯೇ
ಕನರಾಯ ಬೀಡಿನಲ್ಲಿ ಇದ್ದಾರೆ ಬಂಗೇರ
ಕನರಾಯ ಕರ್ತುಗಳು ಬಂಗೇರ
ಅವರ ಪ್ರೀತಿಯ ಮೋಹದ ಮಡದಿ
ಬಾಲೆ ಪದ್ಮಕ್ಕ ಇದ್ದಾಳೆ
ಡೆನ್ನಾನಾ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾನಾ ಡೆನ್ನಾಯೇ
ಬೆಳಗಿನ ಜಾವದಲ್ಲಿ ಎದ್ದರು ಬಂಗೇರರು
ಹಾರೆ ಇಡುವ ಕೊಠಡಿಗೆ ಹೋಗಿ
ಹಾರೆ ತೆಗೆದು ಹೆಗಲಿಗೆ ಇಟರ
ಬಟ್ಟೆ ಒಡುವ ಕೋಣೆಗೆ ಹೋದರು
ಬಟ್ಟೆ ತೆಗೆದು ಸೊಂಟಕ್ಕೆ ಸುತ್ತಿಕೊಂಡರು
ಬೆಟ್ಟಿನಲ್ಲಿ ಹೋದ ಬಂಗೇರರು ಇನ್ನು ಬೇಗ
ಸಂಗ್ರಹವಾದ ನೀರನ್ನು ಬಿಡಿಸಿಕೊಂಡು ಕಟ್ಟಿಕೊಂಡು
ಕಂಬಳದ ಕಟ್ಟಹುಣಿಯಲ್ಲಿ ಬರುವಾಗ
ಕಂಬಳದ ಕಟ್ಟಹುಣಿ ದಾಟಿಕೊಂಡು ಬಂದು
ಕೆಂದಾಳಿ ತೆಂಗಿನ ಹದಿಮೂರು ಕಟ್ಟೆಯಲ್ಲಿ
ಕುಳಿತರು ಕನರಾಯ ಕರ್ತುಗಳು ಬಂಗೇರರು
ಯಾರಮ್ಮ ತಾಯಿಯವರೇ ಕೇಳಿರಿ
ಏಳೇಳು ಹದಿನಾಲ್ಕು ವರ್ಷದ ದಂಡು
ಕಂಡು ಬರುತ್ತದೆ ಹೇಳುವರು
ನಾನು ಹೋಗುವೆ ತಾಯಿಯವರೇ ಕೇಳಿರಿ
ದಂಡಿಗೆ ನಾನು ಹೋಗುವೆಂದು ಹೇಳಿದರು
ಸಮಯದಲ್ಲಿ ಅಡಿಗೆ ಕಾಲದಲ್ಲಿ ಆಗಬೇಕು
ಕಾಲದ ಬಿಸಿನೀರು ಸಕಾಲದಲ್ಲಿ ಆಗಬೇಕು
ಹೇಳಿದರು ಕನರಾಯ ಕರ್ತುಗಳು ಬಂಗೇರರು
ಯಾರಯ್ಯ ಕರ್ತುಗಳೆ ಬಂಗೇರ ಕೇಳಿದೆಯ
ನೀನು ಹಾಗೆ ಹೋದರೆ ನಿನ್ನ ಮಡದಿ
ನನ್ನ ಪ್ರೀತಿಯ ಮೋಹದ ಸೊಸೆ
ಬಾಲೆ ಪದ್ಮಕ್ಕೆ ತಿಂಗಳು ಮಾಸಿ
ಏಳೆಂಟು ಒಂಬತ್ತು ತಿಂಗಳು ತಪ್ಪಿದೆ
ಅತ್ತೆಯವರು ಹೆಣ್ಣು ಹೆಂಗಸು ಹೇಳಿದರು
ಅಷ್ಟು ಮಾತು ಕೇಳಿದಳು ಮಗಳು
ನಗಾಡಿಕೊಂಡು ನೋಡುವಳು ಪದ್ಮಕ್ಕ
ಬಂಗೇರರ ಮುಖವನ್ನೆ ನೋಡಿ ಬಂಗೇರರ
ಓ ಅಲ್ಲಿ ಮುಗುಳು ನಗು ನಗುತ್ತಾಳೆ
ಯಾರಮ್ಮ ತಾಯಿಯವರೇ ನಿಮ್ಮ ಸೊಸೆ
ಮುಗುಳು ನಗುವನ್ನು ನಗುವಳು ತಾಯಿಯವರೆ
ಒಳ್ಳೇದಕ್ಕೆ ನಗುವಳೊ ಹಾಳಿಗೆ ನಕ್ಕಾಳೋ
ಕೇಳಿರಿ ತಾಯಿಯವರೆಂದು ಹೇಳಿದರು ಬಂಗೇರರು
ಕನರಾಯ ಕರ್ತುಗಳು ಬಂಗೇರರು
ಅದನ್ನಾದರು ಕೇಳಿರಿ ಕೇಳಿರಿ ತಾಯಿಯವರೆಂದು
ನಾನು ಯಾಕೆ ಕೇಳಬೇಕು ಬಂಗೇರ ಕೇಳು
ನೀನಾದರೂ ಹೇಳು ನೀವು ಮಾತಾಡಿಕೊಳ್ಳಿ
ಎಂದು ಹೇಳಿದರು ತಾಯಿಯವರು
ಅಷ್ಟು ಮಾತು ಕೇಳುವಳು ಮದುಮಗಳು
ಬಾಗಿಲ ಸಂಧಿಯಲ್ಲಿ ನಿಂತು ಮಗಳು
ಕಿವಿಕೊಟ್ಟು ಕೇಳುವಳು ಕಣ್ಣಿನಲ್ಲಿ ಕಡುದುಃಖ
ಬಿಡುವಳು ಮಗಳು ಬಾಲೆ ಪದ್ಮಕ್ಕೆ
ನಾನು ಹೋಗುವ ರಾಜ್ಯಕ್ಕೆ ನೀನಾದರೂ ಬರಲಿಕ್ಕಿಲ್ಲ
ಏಳೇಳು ಹದಿನಾಲ್ಕು ವರ್ಷದ ದಂಡನ್ನು
ಸಾಧಿಸಿ ಬರುವೆಂದು ಹೇಳಿದರು ಬಂಗೇರರು
ಕನರಾಯ ಕರ್ತುಗಳು ಬಂಗೇರರು
ನೀವಾದರೂ ಹೋಗುವ ರಾಜ್ಯಕ್ಕೆ ನಾನು ಕೂಡ
ಬರುವೆಂದು ಹೇಳುವಳು ಬಾಲೆ ಪದ್ಮಕ್ಕೆ
ಏಳೇಳು ಹದಿನಾಲ್ಕು ವರ್ಷದ ದಂಡನ್ನು
ಸಾಧಿಸಿ ಬರುವುದಕ್ಕೆಂದು ಹೋಗುವುದು ಹೇಳಿದರು
ತಿಂಗಳು ತಪ್ಪಿ ಒಂಬತ್ತು ತಿಂಗಳು
ಬಸುರಿ ನೀನಲ್ವ ಎಂದು ಕೇಳಿದರು
ಕನರಾಯ ಕರ್ತುಗಳು ಬಂಗೇರರು
ಯಾರಮ್ಮ ತಾಯಿಯವರೇ ತಾಯಿಯವರೇ
ಯಾರಯ್ಯ ಬಂಗೇರ ಏನೆಂದು ಕೇಳಿದರು
ತಾಯಿಯವರು ಹೆಣ್ಣು ಹೆಂಗಸು ಕೇಳುವಾಗ
ಯಾರಮ್ಮ ಅತ್ತೆಯವರೇ ನೋಡಿದವರು ಅತ್ತೆಯವರು
ಬದುಕು ಭಾಗ್ಯದ ಸೌಖ್ಯದ ಸೀಮೆಯ
ಸೊತ್ತನ್ನು ಸೌಲಭ್ಯವನ್ನು ಮಾತನಾಡುವುದು ಅಲ್ಲ
ಅವರು ಹೋಗುವ ರಾಜ್ಯದ ಸೊತ್ತಿನ ಸೌಲಭ್ಯಗಳನ್ನು
ಕೇಳುವುದು ಎಂದಳು ಬಾಲೆ ಪದ್ಮಕ್ಕೆ
ಅವರು ಹೋಗುವ ರಾಜ್ಯಕ್ಕೆ ನನಗೆ ಹೋಗಬೇಕು
ನಾನಾದರೂ ಹೋಗದೆ ಕುಳಿತುಕೊಳ್ಳಲಿಕ್ಕಿಲ್ಲ ಅತ್ತೆಯವರೇ
ಎಂದು ಹೇಳುವಳು ಮದುಮಗಳು ಬಾಲೆ ಪದ್ಮಕ್ಕ
ಮೈಯ ಕೊಳೆಗೆ ಸ್ನಾನ ಮಾಡಲಿಲ್ಲ ಮದುಮಗಳು
ಹೊಟ್ಟೆಯ ಹಸಿವಿಗೆ ಉಣ್ಣಲಿಲ್ಲ
ಏಳು ಮಗಳೆ ಸ್ನಾನ ಮಾಡೆಂದು ಹೇಳುವಾಗ
ಹೊಟ್ಟೆಯ ಹಸಿವಿಗೆ ಊಟ ಮಾಡೆಂದು ಹೇಳಿದರು
ಗಂಡ ಗಂಸಡು ಹೇಳಿದಾಗ
ಊಟ ಸಮ್ಮಾನ ಆನಂತರ ಮದುಮಗ
ನೀವು ಹೋಗುವ ರಾಜ್ಯಕ್ಕೆ ನಾನು ಬರುವೆ ಎಂದು
ಹೇಳಿದರು ಹೆಣ್ಣ ಹೆಂಗಸು ಬಾಲೆ ಪದ್ಮಕ್ಕೆ
ಬಾ ಮದುಮಗಳೆ ಸ್ನಾನ ಮಾಡು ಮದುಮಗಳೆ
ಎಂದು ಗಂಡ ಬಂಗೇರರು ಹೇಳುವಾಗ
ದಡಕ್ಕನೆ ಎದ್ದು ದಿಡಕ್ಕನೆ ಕುಳಿತು
ತಲೆಯನ್ನು ಕೊಡವಿಕೊಂಡು ಬರುವಳು ಮದುಮಗಳು
ಓಡೋಡಿಕೊಂಡು ಹೋಗುವಳು ಮಗಳು
ಬೆನ್ನಿನ ಕೊಳಕಿಗೆ ಸ್ನಾನ ಮಾಡುವಳು ಮಗಳು
ಹೊಟ್ಟೆಯ ಹಸಿವಿಗೆ ಊಟ ಮಾಡುವಳು
ಅಡಿಗೆ ತಯಾರಿ ಆಗಿದೆ ಎನ್ನುವಳು
ನಾನು ಕೂಡ ಹೊರಡಲಿಯಾ ಎಂದು ಕೇಳಿದಳು ಮಗಳು
ದಂಡಿಗೆ2 ಸಿಂಗಾರ ಮಾಡಿರಿ ಬೋಯಿಗಳೆಂದು
ಬೋಯಿಗಳನ್ನು ಇನ್ನೂ ಬೇಗ ಕರೆಸಿದರು
ಬೆಳ್ಳಿಯಲ್ಲಿ ಅಲಂಕಾರ ಆದಳು ಮಗಳು
ಬಂಗಾರಿನಲ್ಲಿ ಸಿಂಗಾರ ಆದಳು ಮಗಳು
ಡೆನ್ನಾನಾ ಡೆನ್ನಾನ ಡೆನ್ನ ಡೆನ್ನ ಡೆನ್ನಾನಾ
ಯಾರಮ್ಮ ತಾಯಿಯವರೇ ಒಳ್ಳೆಯದಾಗುವಷ್ಟು ಒಳ್ಳೆಯದು
ಹಾಳಿನಷ್ಟು ಹಾಳು ಇರಬಹುದು ದೇವರ ವರವಿದೆ
ದೈವಗಳ ನೆಲೆ ಇದೆ ಹೋಗುವೆ ತಾಯಿಯವರೆ
ಎಂದು ಹೇಳುವರು ಕನರಾಯ ಕರ್ತುಗಳು ಬಂಗೇರರು
ಯಾರು ಮಗ ಬಂಗೇರ ಎರಡು ಜನ ಹೋಗುವಿರಿ
ಮೂರು ಜನ ಸುಖವಾಗಿ ಬನ್ನಿ ಎಂದು ಹೇಳಿ
ಚಾವಡಿ ನಡುವಿನ ಅಂಕಣಕ್ಕೆ ಬರುವರು
ತಾಯಿಯವರು ಹೆಂಗಸು ಬರುವರು
ದೈವದ ಗುಡಿಯ ಬಾಗಿಲು ತೆರೆದರು
ಬತ್ತಿ ಉರಿಸಿ ದೀಪ ಇಟ್ಟರು
ಎರಡು ತಲೆ ಹೋಗುವರು ಮೂರು ತಲೆ
ಬರಲಿ ಎಂದು ಜಮಾದಿ ದೈವಕ್ಕೆ ಕೈಯನ್ನು ಮುಗಿದು
ಅಡ್ಡ ಬಿದ್ದು ನಮಸ್ಕರಿಸುವರು ತಾಯಿಯವರು
ಡೆನ್ನ ಡೆನ್ನಾನಾ ಡೆನ್ನ ಡೆನ್ನ ತಾಯಿಯವರೇ ನಾವು ಹೋಗಿ
ಬರುವೆವು ತಾಯಿಯವರೇ ಎಂದು ಕಾಲು ಹಿಡಿದು
ಹೊರಡುವರು ಬಂಗೇರರು ಕನರಾಯ ಬಂಗೇರರು
ಎರಡು ಜನ ಹೋಗಿ ಮೂರು ಜನ ಬನ್ನಿ ಎಂದು
ಹೇಳಿ ಕಳುಹಿಸುವರು ತಾಯಿಯವರು
ದಂಡಿಗೆಯಲ್ಲಿ ಸಿಂಗಾರ ಆಗಿ ಮದುಮಗಳನ್ನು
ಎತ್ತಿ ಇನ್ನು ಬೇಗ ಕುಳ್ಳಿರಿಸಿದರು ಬಂಗೇರರು
ದಂಡಿಗೆಯನ್ನು ಹೊತ್ತುಕೊಂಡು ಹೋಗುವರು ಬೋಯಿಗಳು
ಒಂದು ಗುಡ್ಡೆಯನ್ನು ಒಂದು ಬಯಲನ್ನು
ದಾಟಿಕೊಂಡು ಹೋಗುವರು ಕನರಾಯ ಬಂಗೇರರು
ದೊಡ್ಡದೊಂದು ಕಾಡಿನ ಒಳಗೆ ಹೋಗುವಾಗ
ಹೊಟ್ಟೆ ನೋವು ಎಂದಳು ಬಾಲೆ ಪದ್ಮಕ್ಕೆ
ಹುಡು ಪುಡಿ ಆಗುತ್ತದೆ ದಂಡಿಗೆ ಹುಡು ಪುಡಿ
ಆಗುವಂತೆ ಆಗುತ್ತದೆ ಏನು ಮದುಮಗಳೆ
ಏನು ಆಗುತ್ತದೆ ಎಂದು ಕೇಳಿದರು
ಹೊಟ್ಟೆ ನೋವು ಮೂಡುವುದು ಮುತ್ತಿನ ಬೆವರು
ಇಳಿದು ಬಂದಾಗ ಹೇಳುವರು ಬಂಗೇರರು
ದಂಡಿಗೆ ಇಳಿಸಿರೆಂದು ಹೇಳಿದರು
ತಾಳೆ ಮರದಷ್ಟು ಎತ್ತರಕ್ಕೆ ಹೊಗೆ ಎಲ್ಲಿ
ಹೋಗುತ್ತದೆ ನೋಡಿ ಎಂದು ಹೇಳಿದರು
ಮರಕ್ಕೆ ಹತ್ತಿ ನೋಡುವರು ಬೋಯಿಗಳು
ಕಾಡಿನ ನಡುವಿನಲ್ಲಿ ವನದೇಶದಲ್ಲಿ ದೊಡ್ಡದೊಂದು
ಅರಮನೆ ಕಾಣುತ್ತದೆ ಅಲ್ಲಿ
ತಾಳೆಯಷ್ಟು ಎತ್ತರಕ್ಕೆ ದೂರದಲ್ಲಿ
ಹೊಗೆ ಕಾಣಿಸುತ್ತದೆ ಎಂದು ಹೇಳಿದರು
ಅಲ್ಲಿಗೆ ಹೋಗುವ ಎಂದು ಹೋಗುವರು ಬಂಗೇರರು
ಯಾರಮ್ಮ ಹೆಣ್ಣು ಮಗಳೆ ಯಾರಮ್ಮ ಇದ್ದೀರಿ
ಒಬ್ಬಳು ಬಸುರಿ ಹೆಣ್ಣಿಗೆ
ರಕ್ಷಣೆ ಕೊಡುವಿರಾ ಎಂದು ಕೇಳುವರು
ಕನರಾಯ ಕರ್ತುಗಳು ಬಂಗೇರರು
ಅಷ್ಟು ಮಾತು ಕೇಳುವರು ಆ ಹೆಣ್ಣು ಮಗಳು
ಪ್ರಸವದ ನೋವಿಗೆ ಹೆರುವಳು ಮದುಮಗಳು
ಅವಳಿ ಮಕ್ಕಳಿಗೆ ಜನ್ಮ ಕೊಡುವಳು
ಬಾಲೆ ಪದ್ಮಕ್ಕೆ ಕೇಳಿದಿರಾ
ಅಲ್ಲಿಂದ ಎದ್ದುಕೊಂಡು ದಂಡು ಸಾಗಿಸಿಕೊಂಡು
ಹೋಗುವರು ಕನರಾಯ ಕರ್ತುಗಳು ಬಂಗೇರರು
ಏಳೇಳು ಹದಿನಾಲ್ಕು ವರ್ಷದ ದಂಡನ್ನು
ಸಾಧಿಸಿ ಹಿಂದೆ ತಿರುಗಿ ಊರಿಗೆ
ಬರುವಾಗ ಬಂಗೇರರು ಹೆಂಡತಿಯನ್ನು ಮಕ್ಕಳನ್ನು
ಕರೆದುಕೊಂಡು ಹೋಗುವೆ ಎಂದು ಬರುವಾಗ
ಬಾಲೆ ಪದ್ಮಕ್ಕ ಹೆರಿಗೆ ಆಗಿ
ಹೆರಿಗೆ ಆಗಿ ಏಳು ವರ್ಷದ ಮಕ್ಕಳು
ಆದಾಗ ತಾಯಿಗೆ ಅಳಿವು
ಬಂತೆಂದು ಹೇಳಿದರು ಹೆಣ್ಣು ಮಗಳು
ಬಾಲೆ ಪದ್ಮಕ್ಕ ಜೀವ ಬಿಟ್ಟು ಕೈಲಸ ಸೇರಿದರು
ಅವರ ಸಂಸ್ಕಾರ ಮಾಡುವ ಹೊತ್ತಿನಲ್ಲಿ
ತಲೆಯ ಮುಡಿ ಮತ್ತು ಮೊಲೆಯಕಟ್ಟು
ಹಾಗೇನೇ ಉಳಿದಿದೆ ಹೇಳಿದರು
ಮೂರು ರಾತ್ರಿ ಮೂರು ಹಗಲು ಸುಟ್ಟರು
ಉರಿದು ಬೂದಿಯಾಗಲಿಲ್ಲ ತಂದಿಟ್ಟಿದ್ದೇವೆಂದು ಹೇಳಿದರು
ದಂಡಿಗೆಯಲ್ಲಿ ತಂದಿಟ್ಟರು ಮಕ್ಕಳನ್ನು ಕರೆದುಕೊಂಡು ಬರುವರು
ಕನರಾಯ ಬೀಡಿಗೆ ಬರುವಾಗ ಅಲ್ಲಿ
ತಾಯಿಯವರು ಹೆಂಗಸರು ತೋರಣ ಕಟ್ಟಿ
ಆರತಿ ಓಕುಳಿ ಹಿಡಿದು ಕಾಯುತ್ತಾರೆ
ನನ್ನ ಮೋಹದ ಪ್ರೀತಿಯ ಸೊಸೆ
ಮಗನು ಬಂದರು ಮಕ್ಕಳು ಬಂದರೆಂದು
ದಂಡಿಗೆ ನೋಡುವಾಗ
ನನ್ನ ಸೊಸೆ ಎಲ್ಲಿಗೆ ಹೋಗಿದ್ದಾಳೆ
ಎಂದು ಕೇಳುವಾಗ ಕನರಾಯ ಬಂಗೇರರು
ಏಳೇಳು ವರ್ಷದ ಮಕ್ಕಳು ಆದಾಗ
ತಾಯಿಗೆ ತೆಂಗಿನ ಮಡಲು ಬಿದ್ದು
ಕೈಬಿಟ್ಟು ಕೈಲಾಸ ಸೇರಿದ್ದಾಳೆ
ಅವಳ ಮೊಲೆಕಟ್ಟು ತಲೆಮುಡಿ
ಉರಿಯದೆ ಉಳಿದಿದೆ ತಾಯಿಯವರೆ
ಎಂದು ತಾಯಿಯ ಕೈಗೆ ಕೊಟ್ಟರು
ಡೆನ್ನಾನ ಡೆನ್ನಾ ಡೆನ್ನ ಡೆನ್ನಾನಾ ಓಯೋಯೋ ಡೆನ್ನಾನಾ
ಕನರಾಯ ಬೀಡಿನಲ್ಲಿ ಕರ್ತುಗಳು ಬಂಗೇರರು
ಆಧಾರ: ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ- ಡಾ.ಲಕ್ಷ್ಮೀ ಜಿ ಪ್ರಸಾದ್
No comments:
Post a Comment