Saturday, 24 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -84 ಕುರವ ಭೂತ -ಡಾ.ಲಕ್ಷ್ಮೀ ಜಿ ಪ್ರಸಾದ


                         

ಕುಂಬಳೆ ಸಮೀಪದ ಚೌಕಾರುಗುತ್ತಿನಲ್ಲಿ ಕಂಬಳದ ಕೋರಿಯ ದಿನದಂದು ರಾತ್ರಿ ಒಂಜಿ ಕುಂದು ನಲ್ಪ ಭೂತೊಲು  ನೇಮ (ಒಂದು ಕಡಿಮೆ ನಲುವತ್ತು ದೈವಗಳ ನೇಮ) ಇದೆ.
 ಅಜ್ಜ ಬಳಯ ದೈವ ಮಾಮಿ ಸಮ್ಮಾನ ಮಾಡುವ ಹಾಗೆ ಕುರವ ದೈವ ಕೂಡ ಮಾಮಿ ಸಮ್ಮಾನವನ್ನು ಅಭಿನಯಿಸುತ್ತದೆ. ಮಲೆಯಾಳದಲ್ಲಿ ಕೊರಗನಿಗೆ ಕುರವ ಎಂದು ಹೇಳುತ್ತಾರೆ.

 ಕೊರಗನ ರೂಪಧರಿಸುವ ಶಿವನೇ ಕುರವ ಎಂದು ಹೇಳುತ್ತಾರೆ. ಬಾಕುಡ ಜನಾಂಗದವರು ಮದುವೆಯಂಥಹ ಶುಭಕಾರ್ಯವಿದ್ದಾಗ ಕುರವನಿಗೆ ಕುಡಿ ಕಟ್ಟಿ ಇಟ್ಟು ಆರಾಧಿಸುತ್ತಾರೆ.

 ಉಪದೈವವಾಗಿ ಆರಾಧಿಸಲ್ಪಡುವ ಕುರವನಿಗೆ ವಿಶೇಷ ವೇಷ ಭೂಷಣಗಳು ಇರುವುದಿಲ್ಲ. ಮುಖ್ಯದ ಭೂತದ ಅಣಿಯನ್ನು ತೆಗೆದ ನಂತರ ಅದೇ ವೇಷದಲ್ಲಿ ಕುರವನಿಗೆ ನೇಮ ನೀಡುತ್ತಾರೆ. ಅಜ್ಜ ಬಳಯ ಹಾಗೂ ಕುರವ ಮೂಲತಃ ಒಂದೇ ದೈವವಾಗಿದ್ದು ಪ್ರಾದೇಶಿಕವಾಗಿ ಎರಡು ಹೆಸರಿನಿಂದ ಆರಾಧಿಸಲ್ಪಡುತ್ತಿರು ಸಾಧ್ಯತೆ ಇದೆ

 ಕೋಳ್ಯೂರಿನ ಶಂಕರ ನಾರಾಯಣ ದೇವಾಲಯಕ್ಕೆ ಸಂಬಂಧಿಸಿದ ಸತ್ಯಂಗಳದ ಕೊರತಿ ನೇಮ ಪ್ರಸ್ತುತ ಶ್ರೀ ಆನಂದ ಕಾರಂತರ ಮನೆಯಲಿ ನಡೆಯುತ್ತದೆ .ಆಗ ಮೊದಲಿಗೆ ಅಲ್ಲಿ ಕುರವ ದೈವಕ್ಕೆ ಕೋಲ ಕೊಟ್ಟು ಆರಾಧಿಸುತ್ತಾರೆ .
ಆಗ ಹೇಳುವ ಪಾಡ್ದನದ ಪ್ರಕಾರ ಕುರವ ಮತ್ತು ಬೇಟೆಯಾಡುತ್ತಾ ಬಂದು ಅಲ್ಲಿ ನೆಲೆಯಾದವರು .

ಕುರವ ದೈವ ಬೇಟೆ ನಾಯಿಯ ಪ್ರತೀಕವಾಗಿ ಕೈಯಲ್ಲಿ ಒಂದು ಬಾಳೆಯ ಸಿಂಬಿಯಿಂದ ರಚಿಸಿದ ನಾಯಿಯ ಆಕಾರದ ರಚನೆಯನ್ನು ಹಿಡಿದುಕೊಂದಿರುತ್ತದೆ .



Friday, 9 May 2014

ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ-ಡಾ.ಲಕ್ಷ್ಮಿ ಜಿ ಪ್ರಸಾದ



              

 22-04-2014 ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನನ್ನ  ಲೇಖನ


ಏಳು,ಎದ್ದೇಳು ಜಾಗೃತನಾಗು !ಇದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಸಂದೇಶ .ಈ ಸಂದೇಶವನ್ನು ಅವರು ನೀಡಿದಾಗ ಅವರಿನ್ನೂ  ಎಳೆಯ ಯುವಕ ರಾಗಿದ್ದರು .
ಆದರೆ ನಮ್ಮ ಇಂದಿನ ಯುವ ಜನಾಂಗದ ಮನೋಸ್ ಸ್ಥಿತಿ ಹೇಗಿದೆ ?ಓದ್ಕೋ ಹೋಗು ಅಂತ ಅಮ್ಮ ಬೈದರೆ ಆತ್ಮ ಹತ್ಯೆ ,ಅಪ್ಪ ಬೈಕ್ ತೆಗೆಸಿಕೊತ್ತಿಲ್ಲ ಅಂತ ಆತ್ಮ ಹತ್ಯೆ ಕೇಳಿದ ಶೂಸ್ ಕೊಡಿಸಿಲ್ಲ ಅಂತ ಆತ್ಮ ಹತ್ಯೆ ,ಸಿಗರೆಟ್ ಯಾಕೆ ಸೇದಿದ್ದು ಅಂತ ಮೇಷ್ಟ್ರು  ಕೇಳಿದ್ದಕ್ಕೆ ನೇಣು,,ಪರೀಕ್ಷೆ ಬರೆಯುವ ಮೊದಲು ಓದಿ ಆಗಿಲ್ಲ ಏನು ಮಾಡೋದು ಅಂತ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಅಂತ ಮೊದಲೇ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಸಾಯೋದು ,ಕಡಿಮೆ ಮಾರ್ಕ್ಸ್ ಬಂದ್ರೆ ಸಾಯೋದು ,ಓದಲು ಬೇಕಾದ ಕಾಲೇಜ್ ನಲ್ಲಿ ಸೀಟ್ ಸಿಕ್ಕಿಲ್ಲ ಅಂತ ಸಾಯೋದು ,ಕೆಲಸ ಸಿಗದಿದ್ರೂ ಸಾಯುವುದು ,ಪ್ರಮೋಷನ್ ಸಿಕ್ಕಿಲ್ಲಾಂತಾನೂ ಸಾಯೋದು ,ಕೆಲಸ ಹೋದರೂ ಸಾಯುವುದು ..ಹೀಗೆ ಹನುಮಂತನ ಬಾಲದ ಹಾಗೆ ಪಟ್ಟಿ  ಬೆಳೆಯುತ್ತಾ ಹೋಗುತ್ತದೆ.
ಯಾಕೆ ಹೀಗೆ ?ಇಂದಿನ ಯುವಕರ ಹತಾಶಾ ಮನೋಭಾವ ದೌರ್ಬಲ್ಯಕ್ಕೆ ಕಾರಣವೇನು ?ಇಂದಿನ ವಿಭಕ್ತ ಕುಟುಂಬಗಳಲ್ಲಿ ಯುವಕರಿಗೆ ಸಾಕಷ್ಟು ಆದರ ಸಾಂತ್ವನಗಳು ಸಿಗುತ್ತಿಲ್ಲವೇ ?ಹೆತ್ತವರ ಅತಿಯಾದ ಮಹತ್ವಾಂಕ್ಷೆಗಳಿಗೆ ಹದಿ ಹರೆಯದ ಯುವಕರು ಬಲಿಯಾಗುತ್ತಿದ್ದಾರೆಯೇ ?
ಇಂಜಿನಿಯರಿಂಗ್  ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ ,ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋ ಭಾವನೆ ಮೂಡಲು ಕಾರಣವೇನು ?ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ಮನೋಭಾವವೇಕೆ?
ಇಂಥಹ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳ ಬೇಕಾಗುತ್ತದೆ.
ಎಂಥಹ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟು ಸದಾ ಬದುಕಿನ ಬಗ್ಗೆ ಭರವಸೆಯನ್ನು  ಮೂಡಿಸುವ ಕಾರ್ಯವನ್ನ್ನು ಹೆತ್ತವರೇ ಮಾಡಬೇಕಾಗುತ್ತದೆ .ಆದರೆ ಈ ನಿಟ್ಟಿನಲ್ಲಿ ಹಲವರು ಸೋಲುತ್ತಿದ್ದಾರೆ ಎಂದೆನಿಸುತ್ತದೆ .ದಡವರಿಯದ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು
ಈ ಬಗ್ಗೆ ಎರಡು ಕುಟುಂಬಗಳಲ್ಲಿನ ಇಬ್ಬರು ತಾಯಿ ಮಗಂದಿರ ಸಂಭಾಷಣೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ .
                                              ಸಂಭಾಷಣೆ -1
ತಾಯಿ :ಯಾಕೋ ಉಟಕ್ಕೆ ಬಂದಿಲ್ಲ ?ಏನು ಚಿಂತೆ ಮಾಡುತ್ತಿದ್ದಿ ?
ಮಗ : ನಾಳೆ ರಿಸಲ್ಟ್ ಬರುತ್ತೆ ಅದಕ್ಕೆ ಭಯ
ತಾಯಿ :ಅದಕ್ಯಾಕೆ ಚಿಂತೆ !ನೀನು ಹೇಗೂ ಚೆನ್ನಾಗಿಯೇ ಮಾಡಿದ್ದೀಯಲ್ಲ ?
ಮಗ :ಹೌದು ಆದರೂ ಒಳ್ಳೆ ಮಾರ್ಕ್ಸ್ ಬಾರದೆ ಇದ್ದರೆ ಏನು ಮಾಡುವುದು ?
ತಾಯಿ :ಬಾರದಿದ್ರೆ ಬಿಎಸ್ಸಿ ಗೆ ಸೇರ್ಕೋ ಮುಂದೆ ಎಂ ಎಸ್ಸಿನೋ ಬಿಎಡ್ ಮಾಡಿದ್ರೆ ಆಯ್ತು
ಮಗ ;ಅಕಸ್ಮಾತ್ ಫೈಲ್ ಆದ್ರೆ ?!
ತಾಯಿ:ಫೇಲ್ ಆಗಲಿಕ್ಕಿಲ್ಲ ,ಹಾಗೊಂದು ವೇಳೆ ಆದ್ರೆ ಏನಾಯಿತು ?! ಪುನಃ ಕಟ್ಟಿ ಪಾಸ್ ಮಾಡಿದ್ರೆ ಆಯಿತು
ಮಗ :ಹಾಗೂ ಆಗಿಲ್ಲಾಂತ ಆದ್ರೆ.. ?
ತಾಯಿ :ಯಾಕಷ್ಟು ಚಿಂತೆ ಮಾಡ್ತೀಯ ?ಹಾಗೂ ಓದೋಕೆ ಆಗಿಲ್ಲಾಂತ ಆದರೆ ಏನಾದರೂ ಅಂಗಡಿ-ಗಿನ್ಗಡಿ ಇತ್ಕೊಂದ್ರೆ ಆಯ್ತು !ಈಗ್ಯಾಕೆ ಚಿಂತೆ ?ಊಟಕ್ಕೆ ಬಾ ..
                                                  ಸಂಭಾಷಣೆ -2
ತಾಯಿ :ಊಟಕ್ಕೆ ಬಾರೋ
ಮಗ :ಬೇಡಮ್ಮ ಹಸಿವಿಲ್ಲ
ತಾಯಿ :ನಿನಗೆ ಮೊದಲಿನಿಂದಲೂ ಓದು ಓದು ಅಂತ ಹೇಳಿದ್ದೇನೆ .ಆಗ ಚೆನ್ನಾಗಿ ಓದದೆ ಸಮಯ ವ್ಯರ್ಥ ಮಾಡಿ ಈಗ ಚಿಂತೆ ಮಾಡಿ ಊಟ ಬಿಟ್ರೆ ಏನ್ಬಂತು ?!
ಮಗ :ಅದೇ ಚಿಂತೆ ಅಮ್ಮಾ ..ನಾಳೆ ಒಳ್ಳೆ ಮಾರ್ಕ್ಸ್ ಬಾರದಿದ್ರೆ ಏನು ಮಾಡೋದು ಅಂತ ..ಚಿಂತೆ ?!
ತಾಯಿ :ನನಗೊತ್ತಿಲ್ಲ,ಅಪ್ಪನ ಕೈಯಿಂದ ಮಂಗಳಾರತಿ ಮಾಡಿಸ್ಕೋ !ಚೆನ್ನಾಗಿ ಓದು ಅಂತ ಫೀಸ್ ಜಾಸ್ತಿ ಆದ್ರೂನು ಒಳ್ಳೆ ಕಾಲೇಜ್ ಗೆ ಹಾಕಿದ್ದೇವೆ.ಜೊತೆಗೆ ಕೋಚಿಂಗ್ ಗೆ ಬೇರೆ ಹೋಗಿದ್ದಿ ..ಇನ್ನು ಮಾರ್ಕ್ಸ್ ಕಡಿಮೆ ತೆಗೆದರೆ ಏನು ಮಾಡೋದು ..ಮುಂದೆ ಏನು ಮಾಡ್ತೀಯ ?ನನಗಂತೂ ಗೊತ್ತಾಗುತ್ತಿಲ್ಲ ..!!

ಮೇಲಿನ ಎರಡೂ ಉದಾಹರಣೆಗಳಲ್ಲಿ ಪಿಯು ಓದುತ್ತಿರುವ ಹುಡುಗರು ಬುದ್ದಿವಂತರು !ಆದ್ರೆ ದುರದೃಷ್ಟವಶಾತ್ ಇಬ್ಬರ ರಿಸಲ್ಟ್ ಕೂಡಾ ಫೇಲ್ ಅಂತ ಬಂತು .ಮೊದಲನೆಯಾತ ಅತ್ತುಕೊಂಡು ಮನೆಗೆ ಬರ್ತಾನೆ.ಪುನರ್ ಮೌಲ್ಯಮಾಪನಕ್ಕೆ ಹಾಕಿ ಪಾಸಾಗುತ್ತಾನೆ.ಎರಡನೆಯ್ ಉದಾಹರಣೆಯ ಹುಡುಗನಿಗೆ ಮನೆಗೆ ಬರಲು ಭಯವಾಗುತ್ತದೆ.ಬೀಚ್ ಗೆ ಹೋಗಿ ವಿಷ ಕುಡಿದು ಸಾವಿಗೆ ಶರಣಾಗುತ್ತಾನೆ !
ಫೇಲ್ ಆದಾಗ .ಕೆಲಸ ಸಿಗದೇ ಇದ್ದಾಗ ,ಮನೆಯವರೇ ಆದರಿಸದೆ ಇದ್ದಾಗ ಹದಿಹರೆಯದ ಯುವ ಜನಾಂಗ ಇಂದು ಆತ್ಮ ಹತ್ಯೆಯತ್ತ ಮನ ಮಾಡುತ್ತಿದೆ !ತಾವು ಎಣಿಸಿದಂತೆ ಓದಿದರೆ ,ಕೆಲಸ ಸಿಕ್ಕರೆ ಮಾತ್ರ ಒಳ್ಳೆಯ ಬದುಕು ಇಲ್ಲವಾದರೆ ಬದುಕೇ ಬೇಡ ಎನ್ನುವ ಹತಾಶ ಮನೋಭಾವನೆ ಇದಕ್ಕೆ ಕಾರಣವಾಗಿದೆ.
ಡಾಕ್ಟರ್ ಇಂಜಿನಿಯರ್ ಆದ್ರೆ ಮಾತ್ರ ಬದುಕು ಎನ್ನುವ ತಪ್ಪು ಕಲ್ಪನೆ ಮನೆ ಮಾಡುವಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಹೆಚ್ಚಿನದು .ಶಿಕ್ಷಕರಿಗೆ ತಮ್ಮ ಘನೆತೆಯ ಉಳಿಕೆಗಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬೇಕು .ಹೆತ್ತವರಿಗೆ ತಮ್ಮ ಮಹತ್ವಾಕಾಂಕ್ಷೆ  ಈಡೇರಿಕೆಗಾಗಿ ಮಕ್ಕಳು ಓದಬೇಕು ಅಂಕ ಗಳಿಸಬೇಕು !
ತರಗತಿ ಪರೀಕ್ಷೆಗಳಲ್ಲಿ ,ಪುರ ಸಿದ್ಧತೆ ಪರೀಕ್ಷೆಗಳಲ್ಲಿ ಅಂಕ ಕಡಿಮೆ ತೆಗೆದ ವಿದ್ಯಾರ್ಥಿಗಳನ್ನು ಬರ ಹೇಳಿ ಅವರ ಎದುರೆ ವಿದ್ಯಾರ್ಥಿಗಳಿಗೆ ಬೈದು ಅವಮಾನ ಮಾಡುವುದು ವಿದ್ಯಾರ್ಥಿಗಳಲ್ಲಿ ಹತಾಶ ಪ್ರವೃತ್ತಿಗೆ ಕಾರಣವಾಗುತ್ತದೆ.ಹೆತ್ತವರೂ ತಮ್ಮ ಮಕ್ಕಳ ಮೇಲೆ ಹರಿ ಹಾಯ್ದು ಬೀಳಲು ಇದೂ ಒಂದು ಕಾರಣವಾಗುತ್ತದೆ !
ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರು ಕೇಳಿದ್ದೆಲ್ಲ ಸಿಗಲೇ ಬೇಕು ಎಂಬ ಮನೋಭಾವನೆ ಬೆಳೆಯಲು ಕಾರಣವಾಗುತ್ತಾರೆ .ಆಗ ಒಂದೊಮ್ಮೆ ಕೇಳಿದ್ದು ಕೊಡದೆ ಇದ್ದಾಗ ,ಬಯಸಿದ್ದು ಸಿಗದೇ ಇದ್ದಾಗ ಅವರಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೇ ಇರುವುದಿಲ್ಲ.
ಇನ್ನು ಸಣ್ಣ ಪುಟ್ಟ ತಪ್ಪುಗಳನ್ನು ತುಂಟಾಟಗಳನ್ನು ದೊಡ್ಡದು ಮಾಡಿ ಹೆತ್ತವರನ್ನು ಬರ ಹೇಳಿ ಅವರ ಮುಂದೆ ಮಕ್ಕಳನ್ನು ನಿಂದಿಸುವ ಶಿಕ್ಷಕರ ಪ್ರವೃತ್ತಿ ಅನೇಕ ಅಪಾಯಕಾರಿ ವಿಷಯಗಳನ್ನು ಹುಟ್ಟು ಹಾಕುತ್ತವೆ.ಸಣ್ಣ ಪುಟ್ಟ ತಪ್ಪುಗಳಿಗೆ ಕರೆದು ಒಳ್ಳೆ ಮಾತಿನಲ್ಲಿ ಬುದ್ದಿ ಹೇಳುವುದು ,ಸಣ್ಣ ಪುಟ್ಟ ಶಿಕ್ಷೆ (ಎರಡು  ಪುಟ ಏನನ್ನಾದರೂ ಬರೆಯಲು ಹೇಳುವುದು ಇತ್ಯಾದಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಮಾದರಿಯ )ಇತ್ಯಾದಿಗಳನ್ನು ನಡಿ ಸರಿ ಪಡಿಸ ಬೇಕೇ ಹೊರತು ಸಣ್ಣ ಪುಟ್ಟ ವಿಚಾರಗಳನ್ನು ಶಿಸ್ತಿನ ನೆಪದಿಂದ ದೊಡ್ಡದು ಮಾಡಿದ್ರೆ ,ಹೆತ್ತ ವರನ್ನು ಬರ ಹೇಳಿದರೆ ಮಕ್ಕಳಿಗೆ ಈ ವಿಚಾರವನ್ನು ಹೆತ್ತವರಲ್ಲಿ ಹೇಳಲೇ ಭಯವಾಗುತ್ತದೆ ಅಂತ ಸಂದರ್ಭಗಳಲ್ಲಿ ಭಯ ಹಾಗೂ ಸೇಡು ತೀರಿಸುವ ಮೊನೋಭಾವದಿಂದ ತಮ್ಮ ಅಮೂಲ್ಯವಾದ ಬದುಕನ್ನು ನಾಶ ಮಾಡುವ ,ಕೊಂದು ಕೊಳ್ಳುವ ಅನೇಕ ನಿದರ್ಶನಗಳನ್ನು ನಾವು ಕಣ್ಣ ಮುಂದೆಯೇ ಕಾಣುತ್ತಾ ಇರುತ್ತೇವೆ,ದಿನವಹಿ ಪತ್ರಿಕೆಗಳಲ್ಲಿ ಇಂಥ ಪ್ರಕರಣಗಳು ವರದಿಯಾಗುವುದನ್ನು ಓದುತ್ತಿರುತ್ತೇವೆ.
 ಹತ್ತು ಇಪ್ಪತ್ತು ವರ್ಷಗಳ ಹಿಂದೆ 23-24 ವಯಸ್ಸಿನ ಮೇಲ್ಪಟ್ಟವರು ಮಾತ್ರ ಆತ್ಮ  ಹತ್ಯೆ ಮಾಡಿಕೊಳ್ಳುವುದು  ಇತ್ತು ,.ಆದರೆ ಈಗೀಗ ತೀರ ಚಿಕ್ಕ ವಯಸ್ಸಿನ ಮಕ್ಕಳೇ ದಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಚಾರ !ಈಗ್ಗೆ ಒಂದು ವರ್ಷದ ಹಿಂದೆ ಮೂರನೆ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಹುಡುಗ ನೀರಿನ ಬಾಟಲಿನಲ್ಲಿ ಪೆಟ್ರೋಲ್ ತುಂಬಿ ತಂದು ಶಾಲೆಯಲ್ಲಿ ಮೈಗೆ ಪೆಟ್ರೋಲ್ ಸುರಿದು ಆತ್ಮ ಹತ್ಯೆ ಮಾಡಿಕೊಂಡ ದಾರುಣ ಘಟನೆಯನ್ನು ನಾವೆಲ್ಲಾ ಓದಿದ್ದೇವೆ .ನಾಲ್ಕನೇ ತರಗತಿ ಹುಡುಗನೊಬ್ಬ ತಂದೆ ಚಿಕೆನ್ ಬಿರಿಯಾನಿ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ !ಮೊನ್ನೆ ಮೊನ್ನೆಯಷ್ಟೇ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರು ಹೋಲಿ ಆಟ ವಾಡಿದ್ದಕ್ಕೆ ಹೆತ್ತವರನ್ನು ಕರೆತನ್ನಿ ಎಂದಾಗ ಮನೆಗೆ ಹೋಗದೆ ಸಾವಿಗೆ ಶರಣಾದದ್ದು ಎಲ್ಲರಿಗೆ ತಿಳಿದ ವಿಚಾರ .
ಸಣ್ಣ ಪುಟ್ಟ ಅವಮಾನವನ್ನೂ ಸೋಲನ್ನೂ ಎದುರಿಸಲು ಇಂದು ಅಸಮರ್ಥ ರಾಗುತ್ತಿದ್ದಾರೆ ಇಂದಿನ ಯುವ ಜನತೆ .ಯಾಕೆ ಹೀಗೆ ?ಇದಕ್ಕೇನು ಕಾರಣ ? ಒಂದು ಎರಡು ಮಕ್ಕಳಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಕೇಳಿದ್ದೆಲ್ಲ ಸಿಗುವುದು ಹಾಗೂ ,ಅತಿಯಾದ ಕಾಳಜಿ ಯಿಂದಾಗಿ ಹೀಗಾಗುತ್ತಿದೆಯೇ ?ಮೊದಲು ತುಂಬಾ ಮಕ್ಕಳಿರುವ ಕುಟುಂಬಗಳಲ್ಲಿ ಹೊಂದಾಣಿಕೆ ಬೈಗಳು ಪೆಟ್ಟು ಎಲ್ಲವೂ ಇರುತ್ತಿತ್ತು .ಇದರಿಂದಾಗಿ ಹೊಂದಿ ಕೊಂಡು ಬಾಳಲು ,ಸಣ್ಣ ಪುಟ್ಟ ಬೈಗಳನ್ನು ಅಪಮಾನವನ್ನು ಎದುರಿಸುವ ಮನೋ ಸ್ಥೈರ್ಯ ಮಕ್ಕಳಲ್ಲಿ ತನ್ನಿಂತಾನಾಗಿಯೇ ಬೆಳೆಯುತ್ತಿತ್ತು .ಆದರೆ ಇಂದಿನ ಮಕ್ಕಳಿಗೆ ಅದನ್ನು ಹೇಳಿ ಕೊಡಬೇಕಾಗಿದೆ .
ಕೇಳಿದ್ದೆಲ್ಲವನ್ನು ಕೇಳಿದ ತಕ್ಷಣ ಕೊಡಿಸುವ ಅಭ್ಯಾಸವನ್ನು ಹೆತ್ತವರು ಮೊದಲು ಬಿಡಬೇಕು.ಕೇಳಿದ್ದೆಲ್ಲವೂ ಸಿಗಲು ಸಾಧ್ಯವಿಲ್ಲ ಬಯಸಿದಂತ ಬಾಳು ಸಿಗಲು ಸಾಧ್ಯವಿಲ್ಲ ,ಎಲ್ಲರೂ ಡಾಕ್ಟರ್ಸ್ ಇಂಜಿನಿಯರ್ಸ್ ಆಗಲು ಸಾಧ್ಯವಿಲ್ಲ ,ಬೈಕ್ ,ಕಾರು.ಮೊಬೈಲ್ ಗಳೇ ಬದುಕಲ್ಲ ಎಂಬ ಜೀವನದ ಸತ್ಯವನ್ನು ಇಂದಿನ ಯುಕರಿಗೆ ಮನಗಾಣಿಸಬೇಕು ,ಈ ನಿಟ್ಟಿನಲ್ಲಿ ಶಿಕ್ಷಕರ ಜವಾದ್ಬಾರಿ ತುಂಬಾ ದೊಡ್ಡದು
ಯಾವ ಕ್ಷೆತ್ರವನ್ನೂ ಆಯ್ಕೆ ಮಾಡಿದರೂ ಕೂಡಾ ಪ್ರತಿಭೆ ಪ್ರಾಮಾಣಿಕತೆ ಪರಿಶ್ರಮಗಲಿ ಇರುವ ಕಡೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು ನಾನಾ ಕಾರಣಗಳಿಂದ ಉನ್ನತ ಶಿಕ್ಷಣ ದೊರೆಯದೆ ಇರಬಹುದು.ಕೆಲಸ ಸಿಗದಿರಬಹುದು .ಎಣಿಸಿದ್ದು ಈಡೇರದೆ ಇರಬಹುದು .ಅವಮಾನ ಎದುರಾಗ ಬಹುದು.ಆದರೆ ಇದಕ್ಕೆ ಆತ್ಮ ಹತ್ಯೆ ಪರಿಹಾರವಲ್ಲ ,ಸತತ ಪ್ರಯತ್ನದಿಂದ ಉದ್ಯೋಗವನ್ನು ಶಿಕ್ಷಣವನ್ನು ಗಳಿಸ ಬಹುದು .ಎಂದು ವಿದ್ಯಾರ್ಥಿಗಳ ಮನಸನ್ನು ಗಟ್ಟಿ ಮಾಡ ಬೇಕು .
ಅವಮಾನವನ್ನು ಎದುರಿಸುವ ಮನೋಭಾವವನ್ನು ಬೆಳೆಸಬೇಕು.ಇಂದು ಅವಮಾನ ಮಾಡಿದವರ ಮುಂದೆಯೇ ನಾನು ಒಳ್ಳೆಯ ಸ್ಥಾನ ಮಾನ ಪಡೆದು ತಲೆಯೆತ್ತಿ ನಡೆಯುವ ಹಾಗೆ ಬದುಕುತ್ತೇನೆ ಎಂಬ ದೃಢತೆಯನ್ನು ಮೂಡಿಸಬೇಕು .
ಫೇಲಾಗುವುದು,ಕಡಿಮೆ ಅಂಕ ಬಂದಿರುವುದು ,ಮೊದಲಾದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡುತ್ತಿದ್ದರೂ ಈ ಕುರಿತು ಸಮಾಜ ಎಚ್ಚತ್ತು ಕೊಂಡಿಲ್ಲ.
ತಮ್ಮ ಮಕ್ಕಳು ಮಹಾನ್ ಬುದ್ದಿವಂತ ಎಂದೇ ಹೆತ್ತವರು ಸದಾ ಭಾವಿಸುತ್ತಾರೆ.ಆದರೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಆದ್ದರಿಂದ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ,ಜೀವನ್ಮುಖಿ ಉತ್ಸಾಹವನ್ನು ಚಿಗುರಿಸುವ  ಜವಾಬ್ದಾರಿಯನ್ನೂ ಶಿಕ್ಷಕರು ವಹಿಸಬೇಕಾಗಿದೆ .
ಮೊದಲಿಗೆ ಎಸ್ ಎಸ್ ಎಲ್ ಸಿ ,ಪಿ ಯು ಸಿ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಲದ್ದು ಕೋಪ ಅಸಹನೆ ಕಾಡುವ ವಯಸ್ಸು ಜೊತೆಗೆ ಪರೀಕ್ಷೆಯ ಒತ್ತದೆ ,ಬಯಸಿದ್ದೆಲ್ಲಾ ಸಿಗಬೇಕೆಂಬ ಕೆಚ್ಚು ! ಈ ವಯಸ್ಸಿಗೆ ಸೋಲನ್ನು ಸ್ವೀಕರಿಸುವುದು ಅವರಿಗೆ ಬಹಳ ಕಷ್ಟ ಎನಿಸುತ್ತದೆ .ಆದ್ದರಿಂದ ಈ ಹಂತದಲ್ಲಿ ಯೇ ವಿದ್ಯಾರ್ಥಿಗಳಿಗೆ ನಿರಂತರ ಸಲಹೆ ಆಪ್ತ ಸಮಾಲೋಚನೆಗಳ ಅಗತ್ಯವಿರುತ್ತದೆ .ಎಂಥಹ ಸಮಯ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ಮೂಡಿಸಬೇಕಾಗಿದೆ
ಈ ನಿಟ್ಟಿನಲ್ಲಿ ಪ್ರಾಣಾಯಾಮ ,ಯೋಗ ಧ್ಯಾನಗಳು ಸಹಾರಿ ಜೊತೆಗ್ ನೈತಿಕ ಶಿಕ್ಷ ಣ ಕೂಡ ಸಹಕಾರಿಯಾಗಬಲ್ಲದು !ಎಲ್ಲಕ್ಕಿಂತ ಹೆಚ್ಚು ಗುರು ಶಿಷ್ಯರ ನಡುವಿನ ಆತ್ಮೀಯತೆ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹದ ಸೆಲೆ ಹುಟ್ಟಿಸುವಲ್ಲಿ ಅತ್ಯಂತ ಪ್ರಯೋಜನಕಾರಿ .ಈ ನಿಟ್ಟಿನಲ್ಲಿ ನಾವು ಯತ್ನಿಸಬೇಕಾಗಿದೆ .
ಒಂದು ಸಣ್ಣ ಜ್ಯೋತಿಯನ್ನು ಆರಿ ಹೋಗದಂತೆ ಗಾಳಿಗೆ ಕೈ ಅಡ್ಡ ಹಿಡಿದು ರಕ್ಷಿಸಿದರೆ ಆ ಜ್ಯೋತಿಯಿಂದ ನೂರಾರು ದೀಪಗಳನ್ನು ಬೆಳಗ ಬಹುದು ಅಲ್ಲವೇ ?ಆದ್ದರಿಂದ ಇಂದೇ ಎಚ್ಚತ್ತುಕೊಳ್ಳೋಣ.ದಡವರಿಯದ ಅಲೆಗಲಾಗಿರುವ ಯುವ ಜನಾಂಗಕ್ಕೆ ದಾರಿ ದೀಪವಾಗೋಣ!
  ಡಾ.ಲಕ್ಷ್ಮೀ ಜಿ ಪ್ರಸಾದ

ತುಳು ಭೂತಗಳ ನಡುವೆ ಗೌತಮ ಬುದ್ಧನೂ ಇದ್ದ !-ಡಾ.ಲಕ್ಷ್ಮೀ ಜಿ ಪ್ರಸಾದ




 19-04-2014 ರಂದು ಜಯಕಿರಣ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ

ಇದನ್ನು ಸ್ಕ್ಯಾನ್ ಮಾಡಿ ಅಭಿಮಾನ ವಿಟ್ಟು ಕಳುಹಿಸಿ ಕೊಟ್ಟ ಮನೋಹರ ಪ್ರಸಾದ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು


                                          ಮಾರ್ಚ್ 30 ,2012 ರಂದು ಪ್ರಜಾವಾಣಿಯಲ್ಲಿ ಪ್ರಕಟಿತ ಲೇಖನ
ಫೆಬ್ರುವರಿ ೧ ೬  ,೨೦೧೨  ನೆಯ ದಿನ ನನ್ನ ಪಾಲಿಗೆ   ಒಂದು ಅವಿಸ್ಮರಣೀಯ ದಿನ! ಪೆರುವಾಜೆಯಲ್ಲಿ (ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ) ನೇರವಾಗಿ ಬುದ್ಧನದೆಂದೇ ಸ್ಪಷ್ಟವಾಗಿ ಗುರುತಿಸಬಹುದಾದ ಅಪರೂಪದ ಬುದ್ಧನ ಮೂರ್ತಿಯೊಂದನ್ನು ನಾನು ಪತ್ತೆ ಹಚ್ಚಿದೆ   ! .ಇದರಿಂದ  ಕರ್ನಾಟಕದ  ಇತಿಹಾಸ ಶೋಧನೆಗೆ ಮಹತ್ವದ ದಾಖಲೆಯೊಂದು ಸಿಕ್ಕಿತೆಂದು ನಾನು ಭಾವಿಸಿದ್ದೇನೆ   . ಕರಾವಳಿ ಕರ್ನಾಟಕದಲ್ಲಿ ಬೌದ್ಧಾರಾಧನೆಗೆ ಇದ್ದುದಕ್ಕೆ  ಪ್ರತ್ಯಕ್ಷ ಸಾಕ್ಷಿ ದೊರಕಿತು .
 ೨೦೧೨  ರ ಫೆಬ್ರುವರಿ ತಿಂಗಳ  ಮೊದಲವಾರದಲ್ಲಿ .ಪೆರುವಾಜೆ ಕಾಲೇಜಿನ  ವಿದ್ಯಾರ್ಥಿ    ನನಗೆ ಪರಿಚಿತರಾಗಿದ್ದ ಉತ್ಸಾಹಿ  ತರುಣ  ರಜನೀಶ್ ಫೋನ್ ಮಾಡಿ  "ಇಲ್ಲಿ ಪೆರುವಾಜೆ ದೇವಸ್ಥಾನದ ಹತ್ತಿರ ಗುಡ್ಡದಲ್ಲಿ  ಕೆಲವು ಭೂತದ ವಿಗ್ರಹಗಳಿವೆ ನೋಡ್ತೀರಾ?ಎಂದು ಫೋನ್ ಮಾಡಿ  ಕೇಳಿದರು 

.ಫೆಬ್ರುವರಿ   ೧ ೬ ರಂದು  ಭೂತಾರಾಧನೆಯ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ ಇದ್ದ ನಾನು ಅದನ್ನು ನೋಡಲು ಹೋದೆ . ಅಲ್ಲಿ ಮರದ ಬುಡದಲ್ಲಿ ನಂದಿ ಸೇರಿದಂತೆ ಅನೇಕ ವಿಗ್ರಹಗಳಿದ್ದವು .ಒಂದೆರಡು  ವಿಗ್ರಹಗಳು ಮಣ್ಣಿನ ಅಡಿಯಲ್ಲಿದ್ದು  ತುಸು ಮಾತ್ರ ಕಾಣುತ್ತಿದ್ದವು . ಅವುಗಳನ್ನು  ನಾನು ಮತ್ತು ನನ್ನ ಮಗ ಅರವಿಂದ ಸೇರಿ   ಕಷ್ಟ ಪಟ್ಟು  ಮೇಲಕ್ಕೆ ಎಳೆದು ತಂದೆವು . ಅದರಲ್ಲೊಂದು   ನೇರವಾಗಿ ಯಾರು ಕೂಡಾ ಸ್ಪಷ್ಟವಾಗಿ ಗುರುತಿಸ ಬಹುದಾದ ಅಪರೂಪದ ಬುದ್ಧನ  ವಿಗ್ರಹ  ಇತ್ತು.!    ಶಾಸನ ಹಾಗು  ಇತರ ಅನೇಕ ಆಧಾರಗಳ ಮೇಲೆ  ಡಾ .ಬಿ ಎ  ಸಾಲೆತೂರ್ ,ಡಾ . ಗುರುರಾಜ ಭಟ್ ,ಗೋವಿಂದ ಪೈ ,ಡಾ. ರಮೇಶ್  ಕೆ ವಿ  ,ಡಾ . ವಸಂತಕುಮಾರ್ ತಾಳ್ತಜೆ  ಮೊದಲಾದವರು  ಕರ್ನಾಟಕದಲ್ಲಿ ಬೌದ್ಧಾರಾಧನೆ  ಇತ್ತು ಎನ್ನುವುದನ್ನು ಈ ಹಿಂದೆಯೇ ತೋರಿಸಿ ಕೊಟ್ಟಿದ್ದಾರೆ . ಆದರೆ ನೇರವಾಗಿ ಬುದ್ಧನದೆಂದು ಗುರುತಿಸ ಬಹುದಾದ  ಬುದ್ದನ  ವಿಗ್ರಹ  ಈ ತನಕ   ಕರ್ನಾಟಕದಲ್ಲಿ  ಎಲ್ಲೂ ಪತ್ತೆಯಾಗಿರಲಿಲ್ಲ . ಮಂಗಳೂರಿನ  ಕದ್ರಿಯ ಮಂಜುನಾಥೇಶ್ವರ ದೇವಾಲಯ ದಲ್ಲಿರುವ  ಮೂರು ಮುಖದ ಲೋಕೇಶ್ವರ ಮೂರ್ತಿ(ಇದನ್ನು ಬ್ರಹ್ಮ ಎಂದು  ಭಾವಿಸಿದ್ದರು )ಯನ್ನು   ಅದರ ಕೆಳಗಿನ  ಶಾಸನ  ಹಾಗು ಇತರ ಕೆಲವು ಆಧಾರಗಳಿಂದ  ಬುದ್ಧನ ಇನ್ನೊಂದು ಸ್ವರೂಪ  ಆವಲೋಕಿತೇಶ್ವರ  ಎಂದು ಗುರುತಿಸಿ  ಕದ್ರಿ ಬೌದ್ಧ  ವಿಹಾರವಾಗಿತ್ತು ಎಂದು ವಿದ್ವಾಂಸರು  ಸ್ಪಷ್ಟ ಪಡಿಸಿದ್ದಾರೆ . ಕದ್ರಿ ಬಿಟ್ಟರೆ  ಮಂಗಳೂರು, ಸುಳ್ಯ,ಬಂಟ್ವಾಳ, ಬೆಳ್ತಂಗಡಿ  ,ಪುತ್ತೂರು ,ಕಾಸರಗೋಡು ತಾಲೂಕುಗಳಲ್ಲಿ ಎಲ್ಲಿಯೂ  ಬೌದ್ಧಾರಾಧನೆ  ಇದ್ದುದಕ್ಕೆ  ಯಾವುದೊಂದೂ   ಆಧಾರ  ಈ ತನಕ ಸಿಕ್ಕಿರಲಿಲ್ಲ .
 
    ಈ ಎರಡು  ಕಾರಣಗಳಿಂದ  ಸುಳ್ಯ ತಾಲೂಕಿನ ಬೆಳ್ಳಾರೆ - ಸವಣೂರು  ಮಾರ್ಗದಲ್ಲಿ  ಬೆಳ್ಳಾರೆ ಸಮೀಪದಲ್ಲಿರುವ  ಪೆರುವಾಜೆಯ ದೇವಸ್ಥಾನದ ಸಮೀಪದ ಇಳಿಜಾರಾದ ಗುಡ್ಡದಲ್ಲಿ ಪತ್ತೆಯಾದ ಬುದ್ಧನ ವಿಗ್ರಹ ಬಹಳ ಮುಖ್ಯವಾದ  ದಾಖಲೆಯಾಗಿದೆ.  ಇಲ್ಲಿ  ಒಂದು ಮುಖದ ಭಾಗ ವಿರೂಪ ಗೊಂಡಿದ್ದರೂ ಎಡ ಬಲ ಭಾಗದ ಬುದ್ಧನ ಉದ್ದನೆಯ ವಿಶಿಷ್ಟ  ಕಿವಿಗಳು , ಮೇಲೆ ಎತ್ತಿ ಕಟ್ಟಿದ ಉಶ್ಣೀಶ (ಜಟೆ) ಗಳಿಂದ ಸ್ಪಷ್ಟವಾಗಿ ಬುದ್ದನದೆಂದು ಗುರುತಿಸ ಬಹುದಾದ  ಬುದ್ಧನ ತಲೆ ಸಿಕ್ಕಿದೆ. ಬುದ್ಧನ ಮುಖದ ಭಾಗ ಜಜ್ಜಿ ಹೋದಂತಿದೆ . ಮುಖವನ್ನು   ಉದ್ದೇಶ ಪೂರ್ವಕ ವಿಕೃತ ಗೊಳಿಸಿರುವಂತೆ ಕಾಣಿಸುತ್ತಿದ್ದು ಇಲ್ಲಿ ಸಂಘರ್ಷ ನಡೆದಿರುವ ಸಾಧ್ಯತೆಯನ್ನು ತೋರುತ್ತದೆ.  ಇನ್ನೊಂದು  ಸ್ಪಷ್ಟವಾಗಿ ಕಾಣುವ ಮಾನವ ರೂಪಿನ  ಮುಖ ಸಿಕ್ಕಿದೆ . ಇದನ್ನು ಡಾ. ಮುರುಗೇಶಿ ಅವರು ಅಮಿತಾಬ ಬುದ್ಧ  ,ಬೋಧಿಸತ್ವ ಇಲ್ಲವೇ ಯಕ್ಷ ಇರಬಹುದೆಂದು ತಿಳಿಸಿದ್ದಾರೆ .  ಉಬ್ಬಿದ ಕಣ್ಣುಗಳು ಇರುವ  ನಂದಿಯ ಮುಖ  ಹಾಗೂ ಎರಡು ಮುಖವಿಲ್ಲದ ದೇಹ ಮಾತ್ರ ಇರುವ ನಂದಿಯ  ವಿಗ್ರಹಗಳಿವೆ. ಒಂದು ಪೂರ್ಣ ವಿಗ್ರಹ ಇದ್ದು ಮೇಲ್ನೋಟಕ್ಕೆ ಹುಲಿಯನ್ನು ಹೋಲುತ್ತದೆ . ಒಂದು ಮಾನವನ ಕಾಲು ಮಾತ್ರ ಸಿಕ್ಕಿದೆ  .ಈ ಕಾಲಿನಲ್ಲಿ ಕಾಲುಂಗುರ ಇರುವುದರಿಂದ ಇದು ಸ್ತ್ರೀ ವಿಗ್ರಹದ ಅವಶೇಷ ಎಂದು ಹೇಳಬಹುದು .೧೦ *೧೦  ವಿಸ್ತಾರ ಹಾಗು ಒಂದಡಿ ಎತ್ತರದ ಮುರಕಲ್ಲಿನಲ್ಲಿ ಕಟ್ಟಿದ ಕಟ್ಟಿದ  ಅಡಿಪಾಯ ಕೂಡಾ  ಇತ್ತು .  ಇಲ್ಲಿ  ನಾನು ಪತ್ತೆ ಹಚ್ಚಿದ ಬುದ್ದನ ವಿಗ್ರಹ ಹಾಗು ಇತರ ವಿಗ್ರಹಗಳ  ಮಹತ್ವವನ್ನು ಮನಗಂಡ ನಾನು ಈ ಬಗ್ಗೆ ಲೇಖನ ಸಿದ್ದ ಪಡಿಸಿ ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದೆ.
          ಪೆರುವಾಜೆಯಲ್ಲಿ ಬುದ್ಧನ ಅಪರೂಪದ ಮೂರ್ತಿ ಪತ್ತೆ ಎಂಬ ನನ್ನ ಲೇಖನ  ೨೦೧೨  ರ ಮಾರ್ಚ್ ೩೦ ರಂದು  ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾಯಿತು . ಇಲ್ಲಿ ಹೆಚ್ಚಿನ ಅಧ್ಯಯನ ನಡೆಯ ಬೇಕೆಂಬ ಉದ್ದೀಶದಿಂದ  ಸಂಶೋಧಕರ ಗಮನಕ್ಕೆ  ತರುವುದಕ್ಕಾಗಿಯೇ ಈ ಲೇಖನ ಬರೆದಿದ್ದೆ. ಆ ಉದ್ದೇಶ ಈಡೇರಿತು ! 

ಪ್ರಜಾವಾಣಿಯಲ್ಲಿ ಬಂದ  ನನ್ನ ಲೇಖನ ಓದಿದ ಡಾ॥  ಮುರುಗೇಶಿ  ಅವರು ಅವರ ಪರಿಚಿತರ ಮೂಲಕ ನನ್ನ ಫೋನ್ ನಂಬರ್ ಪಡೆದು ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿ ಏಪ್ರಿಲ್ ೧ ನೆಯ(೦೧ -೦ ೪ -೨೦೧೨ ) ತಾರೀಕಿನಂದು ನಾನು ಬರುತ್ತೇನೆ ಆ ಜಾಗವನ್ನು ತೋರಿಸಿಎಂದು ಕೇಳಿಕೊಂಡರು ಆ ಹೊತ್ತಿಗಾಗುವಾಗ ಆ ವಿಗ್ರಹ ಹಾಗು ಜಾಗಕ್ಕೆ ಸಂಬಂಧಿಸಿದಂತೆ  ಅನುಜ್ಞಾ  ಕಲಶ ಆಗಿದ್ದು ಅದನ್ನು  ಒಂದು ಅಟ್ಟೆ ನಿರ್ಮಿಸಿ ಕಟ್ಟಿ ಮುಚ್ಚಿಟ್ಟು  ಬಿಟ್ಟಿದ್ದರು . ಅದನ್ನು ಮತ್ತೆ  ನೋಡ ಬೇಕಿದ್ದರೆ ಆ ಜಾಗಕ್ಕೆ ಸಂಬಂಧಿಸಿದವರ ಒಪ್ಪಿಗೆ ಬೇಕಿತ್ತು . ಸ್ಥಳೀಯರು ಭೂತಗಳದ್ದೆಂದು  ನಂಬಿದ್ದ ವಿಗ್ರಹವನ್ನು  ನಾನು ಬುದ್ಧನದೆಂದು ಹೇಳಿದ್ದು  ಸ್ಥಳೀಯರಿಗೆ  ಅಸಮಧಾನ ಉಂಟುಮಾಡಿತ್ತು. 

ಆದ್ದರಿಂದ ಡಾ ॥   ಮುರುಗೇಶಿ ಅವರನ್ನು ಏಕಾ ಏಕಿ ಕರೆದುಕೊಂಡು ಹೋದರೆ  ವಿವಾದ  ಉಂಟಾಗುವ ಸಾಧ್ಯತೆ ಇತ್ತು .ನಾನು ಒಮ್ಮೆ ಫೋಟ ತೆಗೆದು ನಂತರ ಪುನಃ ಒಮ್ಮೆ ನೋಡಲು ಇಚ್ಚಿಸಿದ್ದೆ . ಆದರೆ ಸ್ಥಳೀಯರು ಒಪ್ಪಿರಲಿಲ್ಲ . ಆದ್ದರಿಂದ ನಾನ ನನಗೆ ಆತ್ಮೀಯರಾಗಿದ್ದ  ಉಡುಪಿ  ಎಂ ಜಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ  ಸಂಶೋಧಕರೂ ಆಗಿದ್ದ ಕಾನಕುದೇಲು  ಗಣಪತ್ತಿ ಭಟ್ಟರ ಸಹಾಯ ಕೇಳಿದೆ ಅವರು ಅವರ ಆತ್ಮೀಯರಾದ ಆ ಜಾಗದ ಬಗ್ಗೆ ಪ್ರಶ್ನೆ ಇಟ್ಟು  ಧಾರ್ಮಿಕ ವಿಧಿಗಳಿಗೆ ನಿರ್ದೇಶನ ನೀಡಿದ್ದ  ಖ್ಯಾತ ಜ್ಯೋತಿಷಿ ರಾಜೇಂದ್ರ ಪ್ರಸಾದರನ್ನು ಸಂಪರ್ಕಿಸಿ  ಅಲ್ಲಿ ಮುಂದಿನ ಸಂಶೋಧನೆಗೆ ಅನುವು ಮಾಡಿ ಕೊಟ್ಟರು .
     ನನಗು ಸಂಶೋಧನೆ ಆಸಕ್ತಿ ಇದ್ದ ಕಾರಣ ಮುರುಗೇಶಿ   ಅವರು ಬಂದಾಗ ಆ ವಿಗ್ರಹಗಳನ್ನು ತೋರಿಸಿದೆ . ನಾನು ಮೊದಲು ಲೇಖನದಲ್ಲಿ ಬರೆದ ವಿಚಾರಗಳನ್ನು ಧೃಢ  ಪಡಿಸಿದ್ದಲ್ಲದೆ ಅಲ್ಲಿ ಪ್ರಾಗೈತಿಹಾಸಿಕ ಕಾಲದ  ಕುರುಹುಗಳನ್ನು ತೋರಿಸಿದ್ದಾರೆ ಇಲ್ಲಿ ಸಿಕ್ಕಿದ ನಂದಿಯ ವಿಗ್ರಹಗಳು ಶಾತವಾಹನರ ಕಾಲದ್ದೆಂದು ಗುರುತಿಸಿ ಇದರ ಕಾಲ ಸುಮಾರು ಕ್ರಿ ಶ  ಎರಡನೇ ಶತಮಾನ ಎಂದು ತಿಳಿಸಿದ್ದಾರೆ. ಇಲ್ಲಿನ ಜಲ ದುರ್ಗಾ  ದೇವಿ ದೇವಾಲಯ  ಹಿಂದೆ ಬೌದ್ಧ ವಿಹಾರವಾಗಿದ್ದು  ಈಗ ಲಿಂಗ ರೂಪಿ ಮೂರ್ತಿಯ ಬದಲು ಮಾನವ ರೂಪಿನ ವಿಗ್ರಹ ಇದ್ದಿರುವ  ಸಾಧ್ಯತೆಯನ್ನು ಹೇಳಿದ್ದಾರೆ

 ಈ ಬುದ್ಧನ ಮೂರ್ತಿಯ ಫೋಟೋ ಅನ್ನು ನಾನ ಖ್ಯಾತ ಸಂಶೋಧರಾದ ಡಾ||ಸುಂದರ ಅವರಿಗೆ ತೋರಿಸಿದಾಗ ಅವರು "ಈ ವಿಗ್ರಹದ ತಲೆಯ ಮೇಲೆ ಗಂಟಿನ ತರಾ ಉಬ್ಬು ಇದೆ ಇದನ್ನು ಉಷ್ನೀಶ ಎನ್ನುತ್ತೇವೆ . ಇದು ಇರುವುದರಿಂದ ಮತ್ತು ಕಿವಿ ತುಂಬಾ ಅಗಲವಾಗಿ ಇರುವುದರಿಂದ ಇದೊಂದು ವಿಶಿಷ್ಟ  ಮಾನವನ ಮೂರ್ತಿ ಎನ್ನಬಹುದು ಬಹು ಶ್ರುತಃ ಎಂದರೆ ಜ್ಞಾನಿ ಯಾದ ಮನುಷ್ಯನ ವಿಗ್ರಹ ಎನ್ನಬಹುದು .ಯಾರು ಜ್ಞಾನವನ್ನು ಪಡೆದು ಕೊಂಡಿರುತ್ತಾರೆ , ಆತ್ಮ ಸಾಕ್ಷಾತ್ಕಾರವನ್ನು ಪಡೆದು ಕೊಂಡಿರುತ್ತಾರೆ ಅವರಿಗೆ ತಲೆ ಮೇಲೆ ಈ ರೀತಿಯ ಉಬ್ಬು ಇರುತ್ತದೆ ಅದಕ್ಕೆ ನಾವು ಉಷ್ನೀಶ ಎಂದು ಕರೆಯುತ್ತಾರೆ ಇಲ್ಲಿ ಉಷ್ನೀಶ ಇರುವುದರಿಂದ ಇದರ ಆಕಾರವು ಬುದ್ಧನನ್ನು ಹೋಲುತ್ತಿರುವುದರಿಂದ ಇದನ್ನು ಬುದ್ಧನ ಮೂರ್ತಿ ಎನ್ನ ಬಹುದು "ಎಂದು ಅಭಿಪ್ರಾಯ ಪಟ್ಟಿದ್ದಾರೆ ಮಡಿಕೇರಿ ಪರಿಸರದಲ್ಲಿ ಬುದ್ಧಾರಾಧನೆ ಇದ್ದುದಕ್ಕೆ ಅನೇಕ ಆಧಾರಗಳು ಸಿಕ್ಕಿವೆ.  ಪೆರುವಾಜೆ  ಮಡಿಕೇರಿ ನಡುವೆ  ತುಂಬಾ ಅಂತರ ಇಲ್ಲ ಆದ್ದರಿಂದ ಇಲ್ಲಿ ಬುದ್ಧನ ಆರಾಧನೆ ಇದ್ದಿರುವ ಸಾಧ್ಯತೆ ಇದೆ ಎಂದು  ಖ್ಯಾತ ಸಂಶೋಧಕರಾದ ಡಾ||ಎಂ ಜಿ ನಾಗರಾಜ್ ಅವರು ಅಭಿಪ್ರಾಯ ಪಟ್ಟಿದ್ದಾರೆ .ಇಲ್ಲಿ ಇನ್ನು ಕೂಡಾ ಹೆಚ್ಚಿನಾಧ್ಯಯನಕ್ಕೆ ಅವಕಾಶವಿದೆ
ಇಲ್ಲಿ ಈ ವಿಗ್ರಹಗಳನ್ನು ಸ್ಥಳೀಯರು ಹರಿಕೆಯಾಗಿ ಬಂದ ಭೂತ ಸಂಬಂಧಿ ವಿಗ್ರಹಗಳೆಂದು ಭಾವಿಸಿದ್ದು, ಭೂತದ ಗುಡಿಯಲ್ಲಿ ಪ್ರತಿಷ್ಟಾಪನೆ ಮೊದಲಾದ ವೈದಿಕ ವಿಧಿಗಳು ಮುಗಿದ ನಂತರ  ಜಲ ವಿಸರ್ಜನೆ ಮಾಡುತ್ತಾರೆ .ಅನಂತ ಈ ವಿಗ್ರಹಗಳು ಎಲ್ಲೋ ಜಲ ಸಮಾಧಿಯಾಗಿ ಬಿಡುತ್ತವೆ .ಆದ್ದರಿಂದ  ಈ ವಿಗ್ರಹಗಳನ್ನು ಅವರ ಕೈಯಿಂದ ಪಡೆದು ರಕ್ಷಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ .ಇಲ್ಲವಾದರೆ ಈ  ಅಪರೂಪದ ದಾಖಲೆ ನಾಶವಾಗಿ ಬಿಡ ಬಹುದು
                                                   
ಡಾ || ಲಕ್ಷ್ಮಿ ಜಿ ಪ್ರಸಾದ ಕನ್ನಡ ಉಪನ್ಯಾಸಕರು  ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ  ಸುಳ್ಯ ದ.ಕ ಜಿಲ್ಲೆ

ಇದು ಸುಮಾರು ಹಿಂದೆ ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ನನ್ನ ಲೇಖನವಾಗಿದೆ .ಇದೀಗ ತಿಳಿದು ಬಂದ ಸುದ್ದಿಯಂತೆ ನಾನು ಸಂದೇಹ ಪಟ್ಟಿರುವುದು ಸತ್ಯವಾಗಿದೆ ಅದನ್ನು ಉಪ್ಪಿನಂಗಡಿ ಹೊಳೆಗೆ ಜೋರು ಮಳೆ ಬರುವ ಸಮಯದಲ್ಲಿ ಬಿಸಾಡಿದ್ದಾರೆ .ಒಂದೂವರೆ ಸಾವಿರ ವರ್ಷದ ಹಿಂದಿನ ಅಪೂರ್ವ ದಾಖಲೆ ಜಲ ಸಮಾಧಿಯಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ 
 ಲಕ್ಷ್ಮಿ ಜಿ ಪ್ರಸಾದ