Monday, 20 March 2017

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-

. "ವೈದಿಕೇತರ ತುಳುವರ ಪರಿಕಲ್ಪನೆಯಲ್ಲಿ ಸತ್ತ ತರುವಾಯದ ಜಗತ್ತಿನಲ್ಲಿ ಕುಲೆ ಮತ್ತು ಪ್ರೇತಾತ್ಮರು ಒಂದೆ ಅಲ್ಲ. ಅವರ ಪ್ರಕಾರ ಸತ್ತವರು ಸಂಸಾರ ಕರ್ಮಗಳಿಂದ ಸಂಸ್ಕರಿಸಲ್ಪಡದಿದ್ದರೆ ಅವರು ಪ್ರೇತಾತ್ಮರು. ಸಂಸ್ಕರಿಸಲ್ಪಟ್ಟು ಸದ್ಗತಿ ಹೊಂದಿದರೂ ಕೂಡಾ ಅವರು ನಮ್ಮೊಂದಿಗಿದ್ದು ನಮ್ಮ ಸಕಲಕ್ಕೂ ಕಾರಣಕರ್ತರಾಗಿರುವ ಆ ಹಿರಿಯರು ಗುರುಕಾರ್ಣೂರರು ಅಥವಾ ಕುಲೆಗಳಾಗಿರುತ್ತಾರೆ. ಇವರಿಗೆ ವಾರ್ಷಿಕಾವರ್ತನದಲ್ಲಿ ಅಗೆಲು ಕೊಟ್ಟು ಆರಾಧಿಸುವ ಕ್ರಮ, ದೈವಾರಾಧನೆಯ ಉಪಾಂಗವಾಗಿ ಪ್ರತ್ಯೇಕವಿದೆ." ಎಂದು ಡಾ| ಪೂವಪ್ಪ ಕಣಿಯೂರು ಹೇಳಿದ್ದಾರೆ. (ಮೌಖಿಕ ಸಂಕಥನ ೨೦೦೯, ತರಂಗಿಣಿ ಪ್ರಕಾಶನ ಸುಳ್ಯ, ಪುಟ ೫೮, ಡಾ| ಪೂವಪ್ಪ ಕಣಿಯೂರು).
ತುಂಡು ಭೂತಗಳ ಕುರಿತು ಚರ್ಚಿಸುತ್ತಾ "ಉಡುಗೆ ತೊಡುಗೆ ಕ್ರಿಯೆ ಇತ್ಯಾದಿಗಳನು ಲಕ್ಷಿಸಿದರೆ ತುಂಡು ಭೂತಗಳಲ್ಲಿ ಕೆಲವು ಭೂತಗಳೆಂಬ ಸ್ಥಾನಮಾನಕ್ಕೆ ಏರದೆ ಇನ್ನೂ ಕುಲೆ'ಯ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ. ಪ್ರೇತಾರಾಧನೆಗೂ ಭೂತಾರಾಧನೆಗೂ ಸಂಬಂಧವಿದ್ದು ಅನೇಕ ಭೂತಗಳು ಕುಲೆ'ಯ ಸ್ಥಿತಿಯನ್ನು ದಾಟಿದ ಬಳಿಕವೇ ಭೂತತ್ವವನ್ನು ಹೊಂದಿರುವುದಾಗಿದೆ. ಇಂದು ಭೂತಗಳ ವಿಕಾಸಪಥದ ಒಂದು ಅವಸ್ಥೆಯೂ ಅಹುದು. ಕೆಲವು ಕುಲೆಗಳು ಭೂತಸ್ಥಿತಿಗೆ ದಾಟದೆ ಇನ್ನೂ ಕುಲೆಯ ರೂಪದಲ್ಲೆ ಕಾಣಿಸಿಕೊಳ್ಳುತ್ತದೆ. ಕುಲೆಮಾಣಿಗ, ಕುಲೆ ಬಂಟೆತ್ತಿ, ಜತೆಕುಲೆ, ಬ್ರಾಣ ಕುಲೆ, ಗುರು ಕಾರ್ನೂರು ಮೊದಲಾದ ಕುಲೆಗಳು ಪರಿಷ್ಕೃತ ಪ್ರೇತಗಳೇ ಆಗಿವೆ' ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.ಕೆಲೆವಡೆ ಪ್ರೇತ ಕೋಲ ಎಂಬ ಆರಾಧನ ಪದ್ಧತಿ ಪ್ರಚಲಿತವಿದೆ .

 ಗತಿಸಿದ ಹಿರಿಯ ಆತ್ಮಗಳನ್ನು ಕಾರ್ಣವೆರ್, ಕಾರ್ನವೆರ್, ಕಾರ್ನೂರು ಎಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಈ ಹಿರಿಯ ಆತ್ಮಗಳಿಗೆ ಎಡೆ ಹಾಕಿ ಬಡಿಸುವ ಮೂಲಕ ಆರಾಧಿಸುವ ಪದ್ಧತಿ ತುಳುನಾಡಿನಲ್ಲಿದೆ. ಗೌಡ ಜನಾಂಗದವರು ಆರಾಧಿಸಲ್ಪಡುವ ಹಿರಿಯರ ಆತ್ಮವನ್ನು ಗುರು ಕಾರ್ನೂರು' ಎಂದು ಕರೆಯುತ್ತಾರೆ. ಗುರು ಕಾರ್ನೂರರಿಗೆ ಅಗೆಲು ಬಡಿಸುವುದು ಮಾತ್ರವಲ್ಲದೆ ನೇಮ ನೀಡಿ ಆರಾಧಿಸುವ ಪದ್ಧತಿ ಕೂಡ ಪ್ರಚಲಿತವಿದೆ. ಗುರುಕಾರ್ನೂರು ಭೂತದ ವೇಷಭೂಷಣ ಮಾನವ ಸಹಜ ಅಲಂಕಾರವನ್ನು ಹೋಲುತ್ತದೆ. ಮುಖಕ್ಕೆ ಬಿಳಿ ಬಣ್ಣ, ಹಣೆಗೊಂದು ಕುಂಕುಮದ ಬೊಟ್ಟು, ಮೈಗೆ ಕೆಂಪು ಪಟ್ಟೆಯ ಉತ್ತರೀಯ ಹಾಗೂ ಬಿಳಿ ಬಟ್ಟೆಯ ಕಚ್ಚೆ ಇರುತ್ತದೆ. ಕಾಲಿಗೆ ಗಗ್ಗರ ಕಟ್ಟುತ್ತಾರೆ.